ಎತ್ತ ಹೋಗುತ್ತೀಯ ತಂಗಿ ಇತ್ತ ನೋಡಮ್ಮ
ಸತ್ಯ ಲೋಕಕ್ಕೋಗುವ ಮಾರ್ಗವ
ನಿತ್ಯ ನೋಡಮ್ಮ || ಪ ||

ಹಾದಿ ಬೀದಿ ಕಾಡು ಸುದ್ಧಿ ದಾಟಿ ಬಾರಮ್ಮ
ವೈರಾಗ್ಯವೆಂಬೋ ಮಾರ್ಗವನ್ನೆ
ಸಾಧಿಸಿ ನೋಡಮ್ಮ || ಎತ್ತ ||

ಮಮತೆಯೆಂಬ ಮುಸುರೆಯನ್ನು ವರಿಸು ಬೀಡಮ್ಮ
ಈ ಸಾಧು ಸೇವೆಗೆ ಇನ್ನೂ ಮನಸು ಮಾಡಬೇಕಮ್ಮ || ಎತ್ತ ||

ನಾನಾ ಜನ್ಮವ ತಿರುಗಿ ತಿರುಗಿ ಹೀನಳಾದಲಮ್ಮ
ಈ ಮಾನವ ಜನ್ಮಕೆ ಬಂದು ನೀನು
ದೀನಳಾದಲಮ್ಮ || ಎತ್ತ ||

ಆರುಲಿಂಗದ ನೆಲೆಯನರಿತು ಪೂಜೆ ಮಾಡಮ್ಮ
ಆರು ಉಂಟು ಆರು ಇಲ್ಲಿ ಎಂಬುದನ್ನು ನೀನೆ ನೋಡಮ್ಮ || ಎತ್ತ ||

ಇಂದ್ರ ದಿಕ್ಕಿನಲ್ಲಿ ನೀ ಬೆಳಕನ್ನೆ ನೋಡವ್ವ
ಸಾಟೆಮನೆ ತ್ರಿಕೂಟದಲ್ಲೊಂದು ಪೇಟೆ
ನೋಡಮ್ಮ | ಸಾಟಿ ಇಲ್ಲದ
ಬ್ರಹ್ಮಾನಂದವ ಬೆಲೆ ಮಾಡಮ್ಮ || ಎತ್ತ ||

ಎಂಟು ಎಸಳಿನ ಕಮಲದೊಳಗೊಂದು
ಶಿವನ ನೋಡಮ್ಮ ಆಶಿಶುವ ಎತ್ತಿ
ಮುದ್ದಾಡಿ ನೀನೊಂದು ಮಾತು ಕೇಳಮ್ಮ
ಹುಟ್ಟು ಸಾವು ಇಲ್ಲದಂಥ ಒಂದು ರತ್ನ
ಕೇಳಮ್ಮ ಸತ್ಯವು ತನಗಾದ ಮೇಲೆ
ನಿತ್ಯದಲ್ಲಿ ನಿಂತು ಹೋಗಮ್ಮ
ಎತ್ತ ಹೋಗುತ್ತೀಯ ತಂಗಿ ಇತ್ತ ನೋಡಮ್ಮ
ಸತ್ಯಲೋಕಕ್ಕೋಗುವ ಮಾರ್ಗವ
ನಿತ್ಯ ನೋಡಮ್ಮ || ಪ ||