ಮರದ ಕೊಂಬೆಯನಿಂತು ಕೊಕ್ಕಿನಿಂ ಕುಕ್ಕುತಲಿ
ಗುರಿಯನಾವುದನಿಂತು ಹುಡುಕುತಿರುವೆ ?
ಅಲ್ಲಿಯೇ ಪಕ್ಕದಲಿ ತನಿವಣ್ಣು ತೂಗುತಿರೆ
ಮರದ ಕೊಂಬೆಯನೇಕೆ ಕುಕ್ಕುತಿರುವೆ !

ನಿನ್ನ ತಲೆಯಲ್ಲೊಂದು ಗರಿಮಕುಟ ರಾಜಿಸಿದೆ
ನಿನ್ನ ಕುಲ ಗೌರವದ ಕಲಶದಂತೆ !
ಬಜ್ಜರವ ಕೊರೆವಂಥ ಕೊಕ್ಕು ಮೊನಚಾಗಿಹುದು
ಎಲ್ಲವನು ಬಗೆ ಬಗೆದು ನೋಡುವಂತೆ.

ಎನಿತೆನಿತು ಮರಗಳನು ಕುಕ್ಕಿನೋಡಿದೆ ಹೇಳು
ಎಲ್ಲಿಯಾದರು ‘ಅರಿವು’ ಗೋಚರಿಸಿತೇನು ?
ಎನಿತೆನಿತು ಕಾಡುಗಳ ಸಂಚರಿಸಿ ಬಂದಿರುವೆ
ನೀನು ಹುಡುಕುವುದೆಲ್ಲು ಸಿಗಲಿಲ್ಲವೇನು ?

ನೀನು ಹುಡುಕುವ ‘ತತ್ವ’ ನಿನ್ನಲೇ ಹುದುಗಿಹುದು :
ನಿನ್ನೆದೆಯನೊಂದಿನಿತು ಕುಕ್ಕಿ ನೋಡು.
ಮರವ ಕುಕ್ಕುವ ಬದಲು, ಅಲ್ಲಿ ತೂಗುತಲಿರುವ
ತನಿವಣ್ಣನೊಂದಿನಿತು ತಿಂದು ನೋಡು.