21. ನೀರಲ ಮರ (Eugenia jambolana Lam.)

ಸವಾಯ್‌ನ ರಾಜ ಕುಮಾರ ಹಾಗೂ ಸಸ್ಯಶಾಸ್ತ್ರ ಪೋಷಕನಾಗಿದ್ದ ಯೂಜಿನ್‌ನ ಹೆಸರಿನಿಂದ ಯೂಜಿನಿಯದ ಹೆಸರು ಬಂದಿದೆ. ಜಾಂಬೋಲಾನಾ ಎಂಬುದು ಮರದ ಪೊರ್ಚುಗೀಸ್ ಹೆಸರಿನಿಂದ ಬಂದಿದೆ. ಶೈಸಿಜಿಯಂ ಗ್ರೀಕ್ ಪದದ ಜೊತೆಗೂಡಿದ ಎಂಬರ್ಥ ಬರುವ ಶುಸುಗೋಸ್ ಎಂಬ ಪದದಿಂದ ಬಂದಿದೆ.
ಇಂಗ್ಲೀಷ್ ಹೆಸರುಗಳು : ದಿ ಜಾಮೂನ್, ಜಮಾನ್, ಜಾವಾ ಪ್ಲಂ, ಇಂಡಿಯನ್ ಆಲ್‌ಸ್ಪೈಸ್, ರೋಸ್ ಯಾಪಲ್ ಟ್ರೀ, ಬ್ಲ್ಯಾಕ್ ಪ್ಲಮ್, ಜಾಂಬೋಲ್, ಜಾಂಬುಲ್, ಜಾವಾಪ್ಲಮ್.
ಕನ್ನಡದ ಇತರ ಹೆಸರುಗಳು : ನೇರಳೆ, ನೇರಳ
ಭಾರತೀಯ ಹೆಸರುಗಳು :
ಹಿಂದಿ : ಜಾಮುನ್, ಫಲಿಂದಾ ತಮಿಳು : ನಾವಲ್ ನಾಗೈ, ಸಾಂಭವಿ
ತೆಲುಗು : ನೇರುಡು, ಅಳ್ಳಿ ನೇರುಡು ಮರಾಠಿ : ಜಾಂಭೂಲ್, ರಾಜಲೆ
ಮಲಯಾಳಂ: ನವಲ್, ನಾಗ ಸಂಸ್ಕೃತ: ಜಂಬೂಲ್, ಫಲೇಂದ್ರ, ಬ್ರಹಸ್ಪತಿ
ಕುಟುಂಬ : ಮಿರ್‌ಟೇಸಿ
ಲಭ್ಯತೆ : ಭಾರತದ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಸಾಮಾನ್ಯ.
ಸಸ್ಯ ವಿವರಣೆ :
ಎತ್ತರ : 30 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ಸದಾಪರ್ಣಿ.
ಕಾಂಡ : ತಿಳಿ ಅಥವಾ ಗಾಢ ಬೂದು ಬಣ್ಣದಿಂದ ಕಂದು ಬಣ್ಣಕ್ಕಿರುವ ತೊಗಟೆ ನಯವಾಗಿರುತ್ತದೆ.
ಎಲೆ : ಅಭಿಮುಖ ಜೋಡಣೆಯ ಚರ್ಮದಂತ ಅಂಡಾಕಾರದ ಎಲೆಗಳು. ಎಲೆಯ ತುದಿ ಚೂಪು. ಜಾಲಬಂಧ ನಾಳ ವಿನ್ಯಾಸ. ತೈಲಗ್ರಂಥಿಗಳಿವೆ. ಎಲೆಗಳ ಉದ್ದ 7.5 – 15 ಸೆಮಿ ಹಾಗೂ ಅಗಲ 3.5 – 6 ಸೆಮಿ.
ಪುಷ್ಪಮಂಜರಿ : ಮಧ್ಯಾಭಿಸರ ಪುಷ್ಪಮಂಜರಿ.
ಹೂವು : ಸುವಾಸನೆ ಭರಿತ ಮಸುಕಾದ ಚಿಕ್ಕ ಬಿಳಿ ಹೂವುಗಳು. 1.8 ಸೆಮಿ ಅಗಲ. ಕೇಸರಗಳು ಬಹಳ ಇವೆ.
ಹೂವು ಬಿಡುವ ಕಾಲ : ಮಾರ್ಚಿ – ಮೇ.
ಫಲ : ಒಂದು ಬೀಜವುಳ್ಳ ನೇರಳೆ ಬಣ್ಣದ ಮಾಂಸಲ ಗುಲೀಫಲ (ಡ್ರೂಪ್) 1.3 – 2.5 ಸೆಮಿ ಉದ್ದ. ಹಣ್ಣು ನೀಚಸ್ಥಾನ ಅಂಡಾಶಯದಿಂದ ಬೆಳೆಯುತ್ತದೆ.
ವಂಶಾಭಿವೃದ್ದಿ : ಬೀಜದಿಂದ
ಉಪಯೋಗಗಳು :
ಅಲಂಕಾರಿಕ : ನೆರಳಿಗಾಗಿ ದಾರಿಗುಂಟ ಬೆಳೆಸುತ್ತಾರೆ. ದೇವಾಲಯಗಳ ಹತ್ತಿರ.
ಔಷಧೀಯ : ತೊಗಟೆಯ ರಸವನ್ನು ಬಾಯಿ ತೊಳೆಯಲು ಉಪಯೋಗಿಸುತ್ತಾರೆ. ಬೀಜ, ತೊಗಟೆ ಹಾಗೂ ಹಣ್ಣಿನ ಕಷಾಯವನ್ನು ಸಿಹಿಮೂತ್ರ ರೋಗಕ್ಕೆ ಉಪಯೋಗಿಸುತ್ತಾರೆ. ಎಲೆ ಹಾಗೂ ಹಣ್ಣಿನಿಂದ ಶರಬತ್ ತಯಾರಿಸಿ ಭೇದಿಗೆ ಔಷಧಿಯಾಗಿ ಬಳಸುತ್ತಾರೆ. ತೊಗಟೆ ಮಲಬದ್ಧಕಾರಿ ಮಕ್ಕಳಲ್ಲಿ ಡಯೋರಿಯಾ ಗುಣಪಡಿಸಲು ತೊಗಟೆಯ ರಸವನ್ನು ಆಡಿನ ಹಾಲಿನೊಂದಿಗೆ ಉಪಯೋಗಿಸುತ್ತಾರೆ.
ಆರ್ಥಿಕ : ಹಣ್ಣುಗಳು ಬಹಳ ರುಚಿ. ಮಾನವ, ಮಂಗ, ಬಾವಲಿ ಹಾಗೂ ಇತರ ಪಕ್ಷಿಗಳು ಹಣ್ಣುಗಳನ್ನು ಸವಿಯುತ್ತವೆ. ಮರವನ್ನು ಉರುವಲಿಗಾಗಿ ಹಾಗೂ ಬೇಸಾಯದ ಉಪಕರಣಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣುಗಳಿಂದ ಸರಾಯಿ ಹಾಗೂ ಮಾದಕ ಪೇಯಗಳನ್ನು ತಯಾರಿಸುತ್ತಾರೆ. ಟಿಸಾರ್ ರೇಷ್ಮೆ ಹುಳುಗಳು ಎಲೆಗಳನ್ನು ತಿನ್ನುತ್ತವೆ. ತೊಗಟೆಯನ್ನು ಚರ್ಮ ಹದ ಮಾಡಲು ಹಾಗೂ ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ. ಎಲೆಗಳನ್ನು ಮೇವಾಗಿ ಬಳಸುತ್ತಾರೆ. ಬಟ್ಟೀ ಇಳಿಸಿದ ಎಲೆಗಳಿಂದ ಹಸಿರಾದ ಹೊಳಪುಳ್ಳ ಎಣ್ಣೆಯನ್ನು ತೆಗೆಯುತ್ತಾರೆ. ಹಣ್ಣನ್ನು “ವೈನ್‘’ ಮತ್ತು ವಿನೆಗಾರ್ ತಯಾರಿಸಲು ಉಪಯೋಗಿಸುತ್ತಾರೆ.

ಲೇಖಕರು : ಸಿ. ಡಿ. ಪಾಟೀಲ