22. ನುಗ್ಗೆ ಮರ (Moringa pterygosperma Lam-Gaertn.) (Moringa oleifera Lam.)

ಮೋರಿಂಗ ಎಂಬುದು ಈ ಮರದ ತಮಿಳು ಹೆಸರಿನಿಂದ ಬಂದಿದೆ ಮತ್ತು ಓಲಿಫೆರ ಎಂದರೆ ಲ್ಯಾಟಿನ್‌ನಲ್ಲಿ ಎಣ್ಣೆ ಇರುವುದು ಎಂದರ್ಥ. ಟೆರಿಗೋಸ್ಪರ್ಮ ಎಂಬುದು ರೆಕ್ಕೆಗಳಿರುವ ಬೀಜಗಳು ಎಂದರ್ಥ.

ಇಂಗ್ಲೀಷ್ ಹೆಸರುಗಳು : ಡ್ರಮ್‌ಸ್ಟಿಕ್ ಟ್ರೀ, ಹಾರ್ಸ್ ರ್ಯಾಡಿಷ್ ಟ್ರೀ

ಕನ್ನಡದ ಇತರ ಹೆಸರುಗಳು : ಮೋಚಕ ಮರ, ನುಗ್ಗೆಗಿಡ

ಭಾರತೀಯ ಹೆಸರುಗಳು :

ಹಿಂದಿ   :         ಸೋಂಜನ                             ತಮಿಳು :         ಮೋರುಂಗ

ತೆಲುಗು :         ಮುಂಗ                                 ಮರಾಠಿ :         ಶೇವಗಿ

ಮಲಯಾಳಂ :   ಶಕ್ತ, ಮುರಿಂಗ, ಶೋಭಾಂಜಿನ      ಸಂಸ್ಕೃತ :       ಅಕ್ಷಿಬ, ಬಹುಮೂಲ, ಗಂಧಕ,
ರೋಚನ, ಉಗ್ರ, ವನಪಲ್ಲವ.

ಕುಟುಂಬ : ಮೋರಿಂಗೇಸಿ

ಲಭ್ಯತೆ : ಸಾಮಾನ್ಯವಾಗಿ ಭಾರತದ ಎಲ್ಲೆಡೆ ಬೆಳೆಯುತ್ತದೆ.

ಸಸ್ಯ ವಿವರಣೆ :

ಎತ್ತರ : 5 – 9 ಮೀ.ಗಳ ವರೆಗೆ ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿ

ಕಾಂಡ : ಕಾಂಡ ಬಹಳ ಮೆದು.

ಎಲೆ : 10 – 75 ಸೆಮೀ.ಗಳಷ್ಟು ದೊಡ್ಡ, ಪರ್ಯಾಯ ಜೋಡಣೆಯ ತ್ರಿಗರಿ ರೂಪಿ ಸಂಯುಕ್ತ ಎಲೆಗಳುಂಟು. ಕಿರು ಎಲೆಗಳು ಅಂಡಾಕಾರದಂತಿವೆ. ಜಾಲದಂತಹ ನಾಳವಿನ್ಯಾಸವಿದೆ. ಕಿರು ಎಲೆಗಳು. 12 – 20 ಮೀ. ಉದ್ದ ಹಾಗೂ 6 – 10 ಮೀ. ಅಗಲ ಇವೆ.

ಪುಷ್ಪಮಂಜರಿ : ರೆಂಬೆಯ ತುದಿಗೆ ಹೂಗೊಂಚಲು.

ಹೂವು : ಜೇನು ವಾಸನೆಯ ಕೆನೆಯಂತಹ ಬಿಳಿ ಹೂವುಗಳು.

ಹೂವು ಬಿಡುವ ಕಾಲ : ಫೆಬ್ರವರಿ – ಏಪ್ರಿಲ್

ಫಲ : 45 ಸೆಮೀ. ಉದ್ದವಾದ ಮೂರು ಭುಜಗಳುಳ್ಳ ಸಂಪುಟ ಫಲ. ರೆಕ್ಕೆ ಇದ್ದ ಅನೇಕ ಬೀಜಗಳಿವೆ.

ವಂಶಾಭಿವೃದ್ದಿ : ಬೀಜ ಹಾಗೂ ರೆಂಬೆಗಳಿಂದ.

ಉಪಯೋಗಗಳು :

ಔಷಧೀಯ : ಬೀಜದಿಂದ ತೆಗೆದ ಎಣ್ಣೆಯನ್ನು ಕೀಲು ರೋಗಗಳಿಗೆ ಲೇಪಿಸುತ್ತಾರೆ. ಇದರ ಬೇರು ಹಾಗೂ ಎಲೆಯನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬೇರನ್ನು ಶ್ವಾಸಕೋಶಕ್ಕೆ ಟನಿಕ್‌ನಂತೆ ಬಳಸುತ್ತಾರೆ. ಇದು ರಕ್ತವನ್ನು ಹೆಚ್ಚಿಸುತ್ತದೆ. ಹೂವನ್ನು ಪಿತ್ತ ಶಮನ ಹಾಗೂ ಧಾತುವೃದ್ದಿಗಾಗಿ ಬಳಸುತ್ತಾರೆ. ಎಲೆಯ ರಸವು ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ತೊಗಟೆಯನ್ನು ಕೆಮ್ಮು ನಿವಾರಣೆಗೆ ಬಳಸುತ್ತಾರೆ. ಬೇರಿನ ಕಷಾಯವನ್ನು ನವೆ ಕಡಿಮೆ ಮಾಡಲು ಲೇಪಿಸುತ್ತಾರೆ. ಎಲೆಯ ಕಷಾಯವು ಕಣ್ಣಿನ ಕಾಯಿಲೆಗಳನ್ನು ವಾಸಿಮಾಡುತ್ತದೆ. ಬೀಜದ ಚೂರ್ಣವು ಜಂತುಹುಳು ಬೀಳುವಂತೆ ಮಾಡುತ್ತದೆ.

ಆರ್ಥಿಕ : ಎಲೆ, ಚಿಗುರು, ಹೂವು, ಕಾಯಿಗಳನ್ನು ಕಾಯಿಪಲ್ಯೆಯಾಗಿ ತಿನ್ನುತ್ತಾರೆ. ಕಾಯಿಗಳನ್ನು ಉಪ್ಪಿನಕಾಯಿ ಹಾಕುತ್ತಾರೆ. ಇದರ ಚಿಗುರು ಮತ್ತು ಎಲೆಗಳು ದನಗಳಿಗೆ ಯೋಗ್ಯ ಮೇವು. ತೊಗಟೆಯಿಂದ ನಾರು ತೆಗೆದು ಹಗ್ಗ ಮಾಡುತ್ತಾರೆ. ಬೀಜದಿಂದ ತೆಗೆದ `ಬೆನ್‘ ಎಣ್ಣೆಯನ್ನು ಕೈಗಡಿಯಾರ ರಿಪೇರಿ ಮಾಡಲು ಉಪಯೋಗಿಸುತ್ತಾರೆ. ಅಲ್ಲದೆ ಸುಗಂಧ ತೈಲಗಳ ತಯಾರಿಕೆಯಲ್ಲೂ ಬಳಸುತ್ತಾರೆ.