23. ಪಾರಿಜಾತ (Nyctanthes arbor tristis Linn.)

ನಿಕ್ಟ್ಸಾಂಥಸ್ ಅಂದರೆ ರಾತ್ರಿ ಹೂವು ಎಂದರ್ಥ. ಆರ್‌ಬೊರ್ ಟ್ರಸ್ಟಿಸ್ ಅಂದರೆ ದುಃಖದ ಸಸ್ಯ ಎಂದರ್ಥ. ಪಾರಿಜಾತ ಎಂದರೆ ಸಮುದ್ರದಿಂದ ಉದಯಿಸಿದ್ದು. ಹರಿಶ್ರಿಂಗಾರ ಎಂದರೆ ಶಿವನ ಮಾಲೆ ಎಂದರ್ಥ.

ಇಂಗ್ಲೀಷ್ ಹೆಸರುಗಳು : ಕ್ವೀನ್ ಆಫ್ ದಿ ನೈಟ್, ಕೊರಲ್ ಜಸ್ಮಿನ್ ಟ್ರೀ, ನೈಟ್ ಜಾಸ್ಮಿನ್, ಇಂಡಿಯನ್ ಮರ್ನರ್, ಸಾರೋಫುಲ್ ಟ್ರೀ.

ಕನ್ನಡದ ಇತರ ಹೆಸರುಗಳು : ಹರಸಿಂಗಾರ, ಗೋಳಿ, ಹರಿಸ್ರಿಂಗಿ, ಪಾರಿಜಾತಕ

ಭಾರತೀಯ ಹೆಸರುಗಳು :

ಹಿಂದಿ   :         ಹರಶ್ರಿಂಗಾರ್, ಬಿನಾರಿ    ತಮಿಳು :         ಪವಲಮಲ್ಲಿಗೈ

ತೆಲುಗು :         ಕರುಚಿಯಾ                 ಮರಾಠಿ :         ಖಾರಸತಿ

ಮಲಯಾಳಂ:    ಪಾರಿಜಾತಕಂ                ಸಂಸ್ಕೃತ:        ಪಾರಿಜಾತ, ಹರಸಿಂಗಾರಪುಷ್ಪಕ, ಸೆಫಾಲಿಕ

ಕುಟುಂಬ : ಓಲಿಯೇಸಿ

ಲಭ್ಯತೆ : ಸಾಮಾನ್ಯವಾಗಿ ಉದ್ಯಾನವನ ಹಾಗೂ ಮನೆಯ ಕಂಪೌಂಡುಗಳಲ್ಲಿ ಬೆಳೆಸುತ್ತಾರೆ.

ಸಸ್ಯ ವಿವರಣೆ :

ಎತ್ತರ : 3 ಮೀ.ಗಳವರೆಗೆ ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿ ವೃಕ್ಷ.

ಕಾಂಡ : ತಿಳಿ ಬೂದು ಬಣ್ಣದ ತೊಗಟೆ.

ಎಲೆ : ಅಭಿಮುಖ ಜೋಡಣೆಯ, ಮೊಟ್ಟೆಯಾಕಾರದ, ಮೇಲ್ಮೈದಟ್ಟ ಹಸಿರುಳ್ಳ ಕೆಳಮೈ ಮೇಲೆ ಸೂಕ್ಷ್ಮ ಕೂದಲುಳ್ಳ, ಜಾಲಬಂಧ ನಾಳವಿನ್ಯಾಸವುಳ್ಳ ಸರಳ ಎಲೆ. ಒರಟು ಎಲೆಗಳು. 5 – 10 x 2.5 – 6.3 ಸೆಮೀ.

ಪುಷ್ಪಮಂಜರಿ : ಮಧ್ಯಾರಂಭಿ ಪುಷ್ಪಮಂಜರಿ.

ಹೂವು : ಬಿಳಿ ಹೂವುಗಳಿಗೆ ಅಚ್ಚ ಕೆಂಪು ಬಣ್ಣದ ಕಾವು. ರಾತ್ರಿ ಅರಳುತ್ತವೆ. ಪುಷ್ಪದಳಗಳ ಸಂಖ್ಯೆ 7

ಹೂವು ಬಿಡುವ ಕಾಲ : ಸೆಪ್ಟೆಂಬರ್ – ಅಕ್ಟೋಬರ್

ಫಲ : ದುಂಡಗೆ ಹಾಗೂ ಚಪ್ಪಟೆಯ ಕೋಶಫಲ. ಎಳೆಯದಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಕಪ್ಪಾಗುತ್ತದೆ. ಎರಡು ಬೀಜಗಳಿವೆ. 2 ಸೆಮೀ. ಉದ್ದ.

ವಂಶಾಭಿವೃದ್ದಿ : ಬೀಜದಿಂದ ಹಾಗೂ ರೆಂಬೆಗಳ ಕುಣಿಕೆಯಿಂದ.

ಉಪಯೋಗಗಳು :

ಅಲಂಕಾರಿಕ : ಹೂವುಗಳಿಗಾಗಿ ಮನೆ ಹಾಗೂ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ದೇವರಿಗೆ ಏರಿಸುತ್ತಾರೆ.

ಔಷಧೀಯ : ಎಲೆಗಳನ್ನು ಜ್ವರಕ್ಕೆ ಮದ್ದಾಗಿ ಉಪಯೋಗಿಸುತ್ತಾರೆ. ಅದಲ್ಲದೇ ಮಕ್ಕಳಿಗೆ ಜಂತು ನಿವಾರಣೆಗಾಗಿ ಎಲೆಗಳ ರಸವನ್ನು ಕುಡಿಸುತ್ತಾರೆ. ಹೂವುಗಳಿಂದ ಕೂದಲುಗಳನ್ನು ತೊಳೆಯುತ್ತಾರೆ. ಎಲೆಯ ರಸವನ್ನು ಹಾವು ಕಡಿದವರಿಗೆ, ಅಜೀರ್ಣಕ್ಕೆ, ಪಿತ್ತಕೋಶದ ವಿಕಾರಗಳ ನಿವಾರಣೆಗೆ, ಮೂಲವ್ಯಾಧಿಗೆ, ಮೂತ್ರ ತಡೆಗೆ ಕೊಡುತ್ತಾರೆ. ಬೀಜಗಳ ಪುಡಿಯನ್ನು ತಲೆಗೆ ಹಚ್ಚುವುದರಿಂದ ತಲೆ ಸ್ವಚ್ಛವಾಗಿ ಉಳಿಯುತ್ತದೆ ಹಾಗೂ ಕೂದಲುಗಳು ಉದುರುವುದು ನಿಲ್ಲುತ್ತದೆ.

ಆರ್ಥಿಕ : ಎಲೆಗಳು ಒರಟಾಗಿರುವುದರಿಂದ ಮರದ ಪಾಲಿಶ್ ಮಾಡಲು ಬಳಸುತ್ತಾರೆ. ತೊಗಟೆಯಿಂದ ಚರ್ಮ ಹದಮಾಡುತ್ತಾರೆ. ಹೂವುಗಳಿಂದ ಸುವಾಸನಾ ತೈಲವನ್ನು ತೆಗೆಯುತ್ತಾರೆ. ಹೂಗಳಿಂದ ತೆಗೆದ ಬಣ್ಣವನ್ನು ರೇಷ್ಮೆ ಬಟ್ಟೆಗಳಿಗೆ ಹಾಕುತ್ತಿದ್ದರು.

ಲೇಖಕರು : ಸಿ. ಡಿ. ಪಾಟೀಲ