24. ಪುತ್ರಜೀವಿ (Polyalthia longifolia Benth and Hook f.)
ಪಾಲಿಯಲ್ಥಿಯ ಪದ ಎರಡು ಗ್ರೀಕ್ ಪದಗಳಿಂದ ಬಂದಿದೆ. ಪಾಲಿ ಎಂದರೆ ಬಹು ಅಥವಾ ಅನೇಕ ಮತ್ತು ಆಲ್ಥಿಯ ಎಂದರೆ ಗುಣಪಡಿಸು ಎಂದರ್ಥ. ಬರುವ ಆಲ್ಥಿಯೋದಿಂದ ಬಂದಿದೆ. ಲಾಂಜಿಫೋಲಿಯ ಎಂಬುದು ಲ್ಯಾಟಿನ್‌ನಲ್ಲಿ ಉದ್ದನೆಯ ಎಲೆಗಳನ್ನು ಸೂಚಿಸುತ್ತದೆ.
ಇಂಗ್ಲೀಷ್ ಹೆಸರುಗಳು : ಇಂಡಿಯನ್ ಮಾಸ್ಟ್ ಟ್ರೀ, ಸಿಮೆಟ್ರಿ ಟ್ರೀ, ಇಂಡಿಯನ್ ಫಿರ್, ಮಾಸ್ಟ ಟ್ರೀ.
ಕನ್ನಡದ ಇತರ ಹೆಸರುಗಳು : ಮದ್ರಾಸ್ ಅಶೋಕ, ಅಶೋಕ, ಅಶುಪಾಲ, ಕಂಬದ ಮರ, ಹೆಸ್ಸರೆ.
ಭಾರತೀಯ ಹೆಸರುಗಳು :
ಹಿಂದಿ : ದೇವ್‌ದಾರ ತಮಿಳು : ಅಸೋಗಮ್
ತೆಲುಗು : ಅಸ್ವತ್ತಮು ಮರಾಠಿ :
ಮಲಯಾಳಂ: ಚೋರಣಿ ಸಂಸ್ಕೃತ: ದೇವದಾರು, ಪುತ್ರಜೀವ
ಕುಟುಂಬ : ಅನೋನೇಸಿ
ಲಭ್ಯತೆ : ದಕ್ಷಿಣ ಭಾರತದ ಕಾಡುಗಳು, ಬಂಗಾಳ, ಪೂರ್ವಭಾರತ
ಸಸ್ಯ ವಿವರಣೆ :
ಎತ್ತರ : ಸುಮಾರು 25 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ಸದಾಪರ್ಣಿ ವೃಕ್ಷ.
ಕಾಂಡ : ನೇರವಾದ ಕಾಂಡ. ಕಾಂಡದಿಂದ ಸಮಕೋನ ರೀತಿಯಲ್ಲಿ ಹರಡಿಕೊಳ್ಳುವ ರೆಂಬೆಗಳು. ಅಗ್ರಭಾಗ ಪಿರಮಿಡ್‌ನಂತೆ ಕಾಣುತ್ತದೆ.
ಎಲೆ : ಪರ್ಯಾಯ ಜೋಡಣೆಯ ಸರಳ, ಸುಂದರ, ಭಲ್ಲೆಯಾಕಾರದ, ತರಂಗಿತ ಅಲೆಯಾಕಾರದ ಅಂಚುಗಳಿರುವ ಹೊಳಪುಳ್ಳ ಎಲೆಗಳು. ಎಳೆ ಎಲೆಗಳು ಸ್ವಲ್ಪ ಪಾರದರ್ಶಕವಾಗಿರುತ್ತವೆ. ನಾಳಗಳು ಬಲೆಯ ರೂಪದಲ್ಲಿ ವಿನ್ಯಾಸಗೊಂಡಿವೆ. ಎಲೆಗಳ ಉದ್ದ ಸುಮಾರು 7.5 – 23 ಉದ್ದ, 1.8 – 3.8 ಸೆಮೀ. ಅಗಲ.
ಪುಷ್ಪಮಂಜರಿ : ಉದ್ದನೆಯ ತೊಟ್ಟುಗಳಿದ್ದ ಹೂಗಳ ಗೊಂಚಲು.
ಹೂವು : ಉದ್ದನೆಯ ತೆಳು ತೊಟ್ಟುಗಳ ಮೇಲೆ ಹಳದಿ ಮಿಶ್ರಿತ ಹಸಿರು ಚುಕ್ಕೆಗಳಂತಿವೆ. 2.5 – 3.8 ಸೆಮೀ. ವ್ಯಾಸ.
ಹೂವು ಬಿಡುವ ಕಾಲ : ಫೆಬ್ರುವರಿ – ಏಪ್ರಿಲ್.
ಫಲ : ಬೆರ್ರಿ ಪುಂಜಫಲ. ಕಾಯಿಗಳು ಅಂಡಾಕಾರದಂತಿವೆ. ಹಳದಿ ಮಿಶ್ರಿತ ಹಸಿರು, ರಸಭರಿತ ಫಲ.
ವಂಶಾಭಿವೃದ್ದಿ : ಬೀಜದಿಂದ.
ಉಪಯೋಗಗಳು :
ಅಲಂಕಾರಿಕ : ಕೆಳಮುಖವಾಗಿ ಇಳಿಬೀಳುವ ರೆಂಬೆ ಕೊಂಬೆಗಳಿಂದೊಡಗೂಡಿದ ಸುಂದರ ಎಲೆಗಳಿದ್ದುದರಿಂದ ಸಾಲುಮರಗಳಾಗಿ ಇದನ್ನು ಬೆಳೆಸುತ್ತಾರೆ. ಎಲೆಗಳನ್ನು ತೋರಣಗಳಾಗಿ ಉಪಯೋಗಿಸುತ್ತಾರೆ.
ಔಷಧೀಯ : ಒಣಗಿದ ಹಣ್ಣುಗಳನ್ನು ಅತಿಸಾರ, ಆಮಶಂಕೆ ತಡೆಯಲು ಉಪಯೋಗಿಸುತ್ತಾರೆ. ರಕ್ತಹೀನತೆ, ಕಾಮಾಲೆ, ಕೆಮ್ಮು ನಿವಾರಣೆಯಲ್ಲಿ ಹಾಗೂ ಸ್ಕರ್ವಿ ರೋಗ ನಿರೋಧಕವಾಗಿಯೂ ಹಣ್ಣನ್ನು ಬಳಸುತ್ತಾರೆ. ಬೀಜಗಳನ್ನು ಅಸ್ತಮಾ, ಗಂಟಲು ಹಾಗೂ ಶ್ವಾಸನಾಳ ರೋಗಗಳ ಶಮನಕ್ಕೆ ಉಪಯೋಗಿಸುತ್ತಾರೆ. ಈ ಸಸ್ಯವನ್ನು ಕಣ್ಣಿನ ರೋಗ, ಕುಷ್ಟರೋಗ, ತ್ವಚೆ ರೋಗ, ತಲೆನೋವಿಗೆ, ಹೊಟ್ಟೆ ನೋವಿಗೆ, ಮಧುಮೇಹ ರೋಗಕ್ಕೆ, ಮೂತ್ರ ಜನಕಾಂಗ ರೋಗಗಳನ್ನು ಗುಣಪಡಿಸಲು ಉಪಯೋಗಿಸುತ್ತಾರೆ.
ಆರ್ಥಿಕ : ಕಾಯಿಗಳನ್ನು ಉಪ್ಪಿನಕಾಯಿಗೆ ಹಾಗೂ ತಿನ್ನಲು ಬಳಸುತ್ತಾರೆ. ಕಾಯಿ, ಎಲೆ ಹಾಗೂ ತೊಗಟೆಯಿಂದ ಬಣ್ಣ ತೆಗೆಯುತ್ತಾರೆ. ತೊಗಟೆಯಿಂದ ನಾರು ಪಡೆಯುತ್ತಾರೆ. ತೊಗಟೆ ಹಾಗೂ ಎಲೆಗಳನ್ನು ಚರ್ಮ ಹದ ಮಾಡಲು ಬಳಸುತ್ತಾರೆ. ಮರ ಹಗುರ ಹಾಗೂ ಮೆದು ಇರುವುದರಿಂದ ಸೀಸದ ಕಡ್ಡಿ ಹಾಗೂ ಪೆಟ್ಟಿಗೆಗಳನ್ನು ತಯಾರಿಸುತ್ತಾರೆ. ಬಾವಲಿಗಳಿಗೆ ಹಣ್ಣಗಳು ಆಹಾರ.
ಲೇಖಕರು : ಸಿ. ಡಿ. ಪಾಟೀಲ