29. ಬಾರೆ (Zizyphus jujuba Lam.)
ಝಿಝಿಫಸ್ ಎಂಬುದು ಅರೇಬಿಕ್‌ದ ಝಿಝೋಫ್ ದಿಂದ ಬಂದಿದೆ. ಝಿಝೋಫ್ ಎಂದರೆ ಕಾಯಿ ತಳೆಯುವ ಕಮಲ ಎಂದರ್ಥ. ಝಿಝಿಫೋನ್ ಎಂಬ ಗ್ರೀಕ್ ಪದದಿಂದ ಜುಜುಬ ಎಂಬುದು ಬಂದಿದೆ. ಅಂದರೆ ತಿನ್ನುವ ಪ್ಲಮ್‌ನಂತಹ ಹಣ್ಣು ಎಂದರ್ಥ.
ಇಂಗ್ಲೀಷ್ ಹೆಸರುಗಳು : ಚೈನೀಸ್ ಡೇಟ್, ಚೈನೀಸ್ ಫಿಗ್, ಜುಜುಬೆ ಟ್ರೀ, ಇಂಡಿಯನ್ ಚೆರಿ, ಇಂಡಿಯನ್ ಪ್ಲಮ್.
ಕನ್ನಡದ ಇತರ ಹೆಸರುಗಳು : ಬೋರೆಹಣ್ಣಿನ ಮರ, ಎಲಚಿ, ಬದರಿ, ಇಲಂಜಿ.
ಭಾರತೀಯ ಹೆಸರುಗಳು :
ಹಿಂದಿ : ಬೆರ್ ತಮಿಳು : ಇಲಾಂಡೈ
ತೆಲುಗು : ರೀಗು ಮರಾಠಿ : ಬೊರ್
ಮಲಯಾಳಂ : ಇಲಂತೈ ಸಂಸ್ಕೃತ : ಬದರಿ, ಅಜಪ್ರಿಯ, ದ್ವಿಪರ್ಣಿ, ಮಧುರಫಲ
ರಾಜವಲ್ಲಭ, ಸುಫಲ.
ಕುಟುಂಬ : ರಾಮ್ನೇಸಿ
ಲಭ್ಯತೆ : ನಮ್ಮ ದೇಶದ ಎಲ್ಲ ಒಣ ಪ್ರದೇಶದಲ್ಲಿ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 6 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ಶುಷ್ಕವರ್ಣಿ
ಕಾಂಡ : ಕಾಂಡದ ಮೇಲೆ ದಪ್ಪವಾದ ಕಡುಬೂದುಬಣ್ಣದ ಸೀಳಿದ ತೊಗಟೆ ಇದೆ. ಕಾಂಡ, ರೆಂಬೆ-ಕೊಂಬೆಗಳ ಮೇಲೆ ಮುಳ್ಳುಗಳಿವೆ.
ಎಲೆ : ಪರ್ಯಾಯ ಜೋಡಣೆಯ ಸರಳ ಎಲೆಗಳು. ಎಲೆಗಳ ಬಪುಡದಲ್ಲಿ ಎರಡು ಮುಳ್ಳುಗಳಿವೆ. ಅನುಪರ್ಣಗಳು ಮುಳ್ಳಾಗಿ ಮಾರ್ಪಟ್ಟಿವೆ. ಹಸ್ತರೂಪಿ ಜಾಲಬಂಧ ನಾಳವಿನ್ಯಾಸ ಇದೆ. ಮೊಟ್ಟೆಯಾಕಾರದ ಎಲೆಗಳು. 3 – 6.3 ಸೆಮೀ. ಉದ್ದ. 2.5 – 5 ಸೆಮೀ. ಅಗಲ ಇವೆ.
ಪುಷ್ಪಮಂಜರಿ : ಮಿಶ್ರ ಪುಷ್ಪಮಂಜರಿ.
ಹೂವು : ತಿಳಿ ಹಸಿರುಳ್ಳ ಹಳದಿ ಬಣ್ಣದ ನಕ್ಷತ್ರದಂತಹ ಚಿಕ್ಕ ಹೂವುಗಳು. ಪುಷ್ಪಪಾತ್ರೆಯ ಕಂಠಭಾಗಕ್ಕೆ ಪುಷ್ಪದಳಗಳಿವೆ. 3.8 – 5 ಮಿಮೀ. ವ್ಯಾಸದ ಹೂವುಗಳು.
ಹೂವು ಬಿಡುವ ಕಾಲ : ಸೆಪ್ಟೆಂಬರ್ – ನವ್ಹೆಂಬರ್
ಫಲ : ಡ್ರೂಪ್, ದುಂಡಗೆ ಅಥವಾ ಅಂಡಾಕಾರ. 1.2 – 2.5 ಸೆಮೀ. ವ್ಯಾಸ.
ವಂಶಾಭಿವೃದ್ದಿ : ಬೀಜದಿಂದ ಮತ್ತು ಕಸಿಯಿಂದ
ಉಪಯೋಗಗಳು :
ಅಲಂಕಾರಿಕ :
ಔಷಧೀಯ : ಇದರ ತೊಗಟೆಯನ್ನು ಪುಡಿಮಾಡಿ ಅಥವಾ ಕಷಾಯದ ರೂಪದಲ್ಲಿ ಸೇರಿಸಿದರೆ ತಲೆನೋವು, ಗಂಟಲು, ಗ್ರಂಥಿ ಉರಿಯೂತಗಳು ಪರಿಹಾರವಾಗುತ್ತವೆ. ಬೇರು ಕಫವನ್ನು ನಿವಾರಿಸುತ್ತದೆ. ಬೀಜಗಳನ್ನು ಕಣ್ಣಿನ ಕಾಯಿಲೆಗೆ, ಕೆಮ್ಮು, ಅಸ್ಥಮಾ, ವಾಂತಿ ನಿವಾರಣೆಗೆ ಬಳಸುತ್ತಾರೆ.
ಆರ್ಥಿಕ : ಸಂಕ್ರಾಂತಿ, ವಿನಾಯಕ ಚತುರ್ಥಿ, ಗೋಕಲಾಷ್ಟಮಿ ದಿನಗಳಂದು ಪೂಜೆಯಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ. ಮಾಗದ ಹಣ್ಣುಗಳನ್ನು ಉಪ್ಪಿನಕಾಯಿ ಮತ್ತು ಚಟ್ನಿ ತಯಾರಿಸಲು ಉಪಯೋಗಿಸುತ್ತಾರೆ. ಮಾಗಿದ ಹಣ್ಣುಗಳನ್ನು ಜೆಲ್ಲಿ, ಕ್ಯಾಂಡಿ, ಫ್ರುಟ್‌ಸಲಡ್ ಮುಂತಾದ ತಿನ್ನುವ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ಎಲೆ ದನಕರುಗಳಿಗೆ ಮೇವು ಮತು ರೇಷ್ಮೆ ಹುಳುಗಳಿಗೆ ಆಹಾರವಾಗುತ್ತದೆ. ಇದರ ಗಟ್ಟಿಯಾದ ಮರದ ಭಾಗದಿಂದ ಪೀಠೋಪಕರಣಗಳನ್ನು, ವ್ಯವಸಾಯದ ಉಪಕರಣಗಳನ್ನು ಮತ್ತು ಆಟದ ಸಾಮಾನುಗಳನ್ನು ತಯಾರಿಸುತ್ತಾರೆ. ಹಣ್ಣಿನಿಂದ ತಂಪಾದ ಪಾನೀಯಗಳನ್ನು ತಯಾರಿಸುತ್ತಾರೆ.