30. ಬಿಲ್ವ (Aegle marmelos Corr.)
ಲ್ಯಾಟಿನ್ ಭಾಷೆಯಲ್ಲಿ `ಏಗ್ಲೆ‘ ಎಂದರೆ ಒಂದು ಸಂಧ್ಯಾ ನಕ್ಷತ್ರದ ಹೆಸರು. ಮೂರು ಜನ ಸಹೋದರಿಯರು `ಹೇರಾ‘ ದೇವತೆಯ ಬಂಗಾರದ ಆಪಲ್ಲನ್ನು ಕಾಯುವ ಸಲುವಾಗಿ `ಡ್ರಾಗನ್‘ಗೆ ಸಹಾಯಮಾಡಿದರು. ಮೆರ್ಮೆಲಾಸ್ ಎಂಬುದು ಪೋರ್ಚುಗೀಜದ ಮೆರ್ಮಲಾಸ್‌ಡೆ ಎಂಬುದರಿಂದ ಬಂದಿದೆ. ಅಂದರೆ ಸಂಗಮವರಿಯಂತಿರುವ ಎಂದರ್ಥ. ಸಂಸ್ಕೃತದ ಶ್ರೀಫಲ ಎಂದರೆ ಪೂಜ್ಯನೀಯ ಹಣ್ಣು ಎಂದರ್ಥ.
ಇಂಗ್ಲೀಷ್ ಹೆಸರುಗಳು : ವುಡ್ ಆಪರ್, ಬೆಂಗಾಲ್ ಕ್ವಿನ್ಸ್, ಗೋಲ್ಜನ್ ಆಪಲ್, ಬೆಲ್ ಟ್ರಿ
ಕನ್ನಡದ ಇತರ ಹೆಸರುಗಳು : ಬೇಲ, ಬಿಲ್ವಪತ್ರಿ
ಭಾರತೀಯ ಹೆಸರುಗಳು :
ಹಿಂದಿ : ಶ್ರೀಫಲ್ ತಮಿಳು : ವಿಲ್‌ವಮ್ ಬಿಲ್ವ
ತೆಲುಗು : ಮರೆಡು, ಬಿಲ್ವಮು ಮರಾಠಿ : ಬೇಲ್
ಮಲಯಾಳಂ : ಕೂವಲಂ, ವಿಲ್ವಂ ಸಂಸ್ಕೃತ : ಬಿಲ್ವ, ಶ್ರೀಫಲ
ಕುಟುಂಬ : ರುಟೇಸಿ
ಲಭ್ಯತೆ : ನಮ್ಮ ದೇಶದ ಶುಷ್ಕ ಪ್ರದೇಶದಲ್ಲಿ ಬೆಳೆಯುವ ಶುಷ್ಕಪರ್ಣಿ ವೃಕ್ಷ.
ಸಸ್ಯ ವಿವರಣೆ :
ಎತ್ತರ : 10 – 11 ಮೀ. ಎತ್ತರ ಬೆಳೆಯುತ್ತದೆ.
ಕಾಂಡ : ಬಿರುಸಾದ ಬೂದು ಬಣ್ಣದ ತೊಗಟೆ. ರೆಂಬೆಗಳ ಮೇಲೆ 3 ಸೆಮೀ ಉದ್ದದ ಮುಳ್ಳುಗಳಿವೆ.
ಎಲೆ : ಪರ್ಯಾಯ ಜೋಡಣೆಯ ತ್ರಿಪರ್ಣಿಕೆ. ಕಿರುಎಲೆಗಳ ಮೇಲೆ ಪಾರದರ್ಶಕ ಚುಕ್ಕೆಗಳಿವೆ. ಕೆಲವೊಮ್ಮೆ 5 ಕಿರುಎಲೆಗಳಿವೆ. ಅಂಡಾಕಾರದ ಕಿರುಎಲೆಗಳು. ಕಿರು ಎಲೆಗಳ ವಿಸ್ತಾರ 5 – 10 ಸೆಮೀ x 2.5 x 6.3 ಸೆಮೀ.
ಪುಷ್ಪಮಂಜರಿ : ಒಂದೇ ಹೂವುಳ್ಳ ಪುಷ್ಪಮಂಜರಿ.
ಹೂವು : ಬಿಳಿ ಮಿಶ್ರಿತ ಹಸಿರು ಹೂವುಗಳು. ಹೂವುಗಳು ಸುವಾಸನೆಭರಿತ. 2.5 ಸೆಮೀ. ವ್ಯಾಸ.
ಹೂವು ಬಿಡುವ ಕಾಲ : ಮೇ – ಜುಲೈ
ಫಲ : ಚಂಡಿನಂತಹ ಹಳದಿ ಕಾಯಿಯ ವ್ಯಾಸ 5 – 18 ಸೆಮೀ.ಗಳು. ತಿಳಿಹಳದಿ ಬಣ್ಣದ ತಿರುಳು. ಬೀಜಗಳ ಸುತ್ತ ಅಂಟುದ್ರವ ಇದೆ. ಅನೇಕ ಬೀಜಗಳು.
ವಂಶಾಭಿವೃದ್ದಿ : ಬೀಜದಿಂದ ಹಾಗೂ ಬೇರಿನ ತುಂಡುಗಳಿಂದ.
ಉಪಯೋಗಗಳು :
ಔಷಧೀಯ : ಬೇರಿನ ಹಾಗೂ ಹಣ್ಣಿನ ತಿರುಳನ್ನು ಭೇದಿ ನಿಯಂತ್ರಣಕ್ಕೆ ಉಪಯೋಗಿಸುತ್ತಾರೆ. ಎಲೆಯನ್ನು ಕಣ್ಣಿನ ಕಾಯಿಲೆಗೆ ಹಾಗೂ ಬೇರನ್ನು ಜ್ವರ ನಿಯಂತ್ರಿಸಲು ಉಪಯೋಗಿಸುತ್ತಾರೆ. ಎಳೆಯ ಕಾಯಿಗಳನ್ನು ಹೊಟ್ಟೆನೋವಿನ ಪರಿಹಾರಕ್ಕೆ ಉಪಯೋಗಿಸುತ್ತಾರೆ. ಎಲೆಯನ್ನು ಕಫ ಕರಗಿಸಲು ಬಳಸುತ್ತಾರೆ ಹಾಗೂ ಕಾಮಾಲೆ ಕಾಯಿಲೆಗೆ ಉಪಯೋಗಿಸುತ್ತಾರೆ. ಎಲೆ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಹಣ್ಣಿನ ತಿರುಳು ಮೂಲವ್ಯಾಧಿಯನ್ನು ನಿಯಂತ್ರಿಸುತ್ತದೆ.
ಆರ್ಥಿಕ : ಹಣ್ಣಿನ ತಿರುಳಿಗೆ ಸಕ್ಕರೆ ಸೇರಿಸಿ ಶರಬತ್ ತಯಾರಿಸುತ್ತಾರೆ. ತಿರುಳನ್ನು ಸುಣ್ಣದ ಜೊತೆ ಕೂಡಿಸಿ ಸಿಮೆಂಟ್‌ನಂತಹ ವಸ್ತುವನ್ನು ತಯಾರಿಸಿ ಹೊಳೆಯುವ ಪಾಲಿಶ್ ತಯಾರಿಸುತ್ತಾರೆ. ಮರವನ್ನು ಮನೆಸಾಮಾನುಗಳು, ಗಾಡಿ ಹಾಗೂ ಹಿಡಿಕೆಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕಾಯಿಯಲ್ಲಿಯ ತಿರುಳಿನಿಂದ ತೆಗೆದ ಹಳದಿ ಬಣ್ಣವನ್ನು ಕ್ಯಾಲಿಕೊ ಮುದ್ರಣದಲ್ಲಿ ಉಪಯೋಗಿಸುತ್ತಾರೆ. ಬಿಲ್ವಪತ್ರೆಗಳನ್ನು ಶಿವನಿಗೆ ಅರ್ಪಿಸುತ್ತಾರೆ. ತಿರುಳು ಹಾಗೂ ಬೀಜ ಪಕ್ಷಿಗಳಿಗೆ ಬಲು ಪ್ರೀತಿ.

ಲೇಖಕರು : ಸಿ. ಡಿ. ಪಾಟೀಲ