31. ಬೆಟ್ಟನೆಲ್ಲಿ ಮರ (Phyllanthus emblica Linn.)
ಫಿಲ್ಲಾಂಥಸ್ ಎರಡು ಗ್ರೀಕ್ ಪದಗಳಿಂದ ವ್ಯತ್ಪತ್ತಿ ಪಡಿದೆದೆ. ಫುಲ್ಲಾನ್ ಎಂದರೆ ಎಲೆ ಹಾಗೂ ಆಂಥಾಸ್ ಎಂದರೆ ಪುಷ್ಪ ಎಂದರ್ಥ. ಅಂದರೆ ಎಲೆಗಳ ಮೇಲೆ ಬಿಟ್ಟಂತೆ ಕಾಣುವ ಹೂವುಗಳನ್ನು ಸೂಚಿಸುತ್ತದೆ. ಎಂಬ್ಲಿಕ ಅದರ ಕಾಯಿಯಿಂದ ವ್ಯತ್ಪತ್ತಿ ಪಡೆದಿದೆ.
ಇಂಗ್ಲೀಷ್ ಹೆಸರುಗಳು : ದಿ ಎಂಬ್ಲಿಕ್ ಮಿರೋಬಲಾನ್, ಇಂಡಿಯನ್ ಗೂಸ್‌ಬೆರ್ರಿ, ಮಲಕ್ಕಾ ಟ್ರೀ
ಕನ್ನಡದ ಇತರ ಹೆಸರುಗಳು : ನೆಲ್ಲಿ, ನೆಲ್ಲಿಕಾಯಿ ಮರ.
ಭಾರತೀಯ ಹೆಸರುಗಳು :
ಹಿಂದಿ : ಆಮ್ಲ ತಮಿಳು : ಅಮಲಗಮ್
ತೆಲುಗು : ಅಮಲ ಶಮು, ಉಸಿರಿಕಾಯ ಮರಾಠಿ : ಅರೋಳ
ಮಲಯಾಳಂ : ಆದಿಫಲ, ಅಮಲಕಾ ಸಂಸ್ಕೃತ : ಆಧಿಫಲ, ಶಾಂತ, ಶಿವ, ಶ್ರೀಫಲ
ಕುಟುಂಬ : ಯುಫೋರ್‌ಬಿಯೇಸಿ
ಲಭ್ಯತೆ : ಭಾರತದ ಎಲ್ಲ ಶುಷ್ಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 9 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿ.
ಕಾಂಡ : ಚುಕ್ಕೆಗಳಿರುವ ಕಾಂಡದ ತೊಗಟೆ ನಯವಾಗಿದೆ ಹಾಗೂ ತಿಳಿ ಬೂದು, ಒಳ ತೊಗಟೆ ಕೆಂಪು.
ಎಲೆ : ಚಿಕ್ಕ ಪುಕ್ಕದಂತಹ ಹಾಗೂ ಕೋಮಲವಾದ ಸರಳ ಎಲೆಗಳಿವೆ. 1.3 ಸೆಮಿ. ಉದ್ದ. 0.5 ಸೆಮೀ. ಅಗಲ.
ಪುಷ್ಪಮಂಜರಿ : ಎಲೆಯ ಕಂಕುಳದಲ್ಲಿ ಚಿಕ್ಕ ಗಂಡು ಹೆಣ್ಣು ಹೂವುಗಳಿವೆ.
ಹೂವು : ಚಿಕ್ಕ ಏಕಲಿಂಗ ಹಳದಿ ಮಿಶ್ರಿತ ಹಸಿರು ಹೂವುಗಳು, ಗುಂಪು ಗುಂಪಾಗಿ ಎಲೆಗಳ ಕೆಳಗೆ ಹಾಗೂ ಟೊಂಗೆಗಳ ಮೇಲೆ ಬೆಳೆಯುತ್ತವೆ. ಗಂಡು ಹೂವುಗಳು ವಿಫುಲ. ಹೆಣ್ಣು ಹೂವುಗಳು ಸ್ವಲ್ಪ.
ಹೂವು ಬಿಡುವ ಕಾಲ : ಮಾರ್ಚಿ – ಮೇ.
ಫಲ : ಸಾಮೂಹಿಕ ಅಷ್ಟಿ ಫಲ (ಡ್ರೂಪ್), 1.3 – 1.6 ಸೆಮೀ ವ್ಯಾಸ. ಹಳದಿ ಬಣ್ಣ. ಆರು ಬೀಜಗಳು ಹಣ್ಣಿನಲ್ಲಿವೆ.
ವಂಶಾಭಿವೃದ್ದಿ : ಬೀಜದಿಂದ, ಕಸಿವಿಧಾನದಿಂದ.
ಉಪಯೋಗಗಳು :
ಅಲಂಕಾರಿಕ : ಮಾರ್ಗಬದಿಗೆ ಹಾಗೂ ಉಪವನಗಳಲ್ಲಿ ಬೆಳೆಸುತ್ತಾರೆ.
ಔಷಧೀಯ : ಕಾಯಿಯಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ ಅದನ್ನು ಚೂರ್ಣಮಾಡಲು ಬಳಸುತ್ತಾರೆ.
ಆರ್ಥಿಕ : ಮರದಿಂದ ಪೆನ್ಸಿಲ್, ಡಬ್ಬಗಳು ಹಾಗೂ ಡ್ರಮ್‌ಗಳನ್ನು ತಯಾರಿಸುತ್ತಾರೆ. ಪಕ್ವವಾದ ಹಣ್ಣುಗಳಲ್ಲಿ `ಸಿ‘ ಜೀವಸತ್ವ ಹೆಚ್ಚಾಗಿದೆ. ಆದ್ದರಿಂದ ಕಾಯಿಗಳನ್ನು ಉಪ್ಪಿನಕಾಯಿ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೆ ಹಾಗೆಯೇ ತಿನ್ನಬಹುದು. ಕಾಯಿ, ತೊಗಟೆ, ಎಲೆಗಳನ್ನು ಚರ್ಮ ಹದ ಮಾಡುವುದಕ್ಕೆ ಹಾಗೂ ಬಣ್ಣ ಹಾಕುವುದಕ್ಕೆ ಉಪಯೋಗಿಸುತ್ತಾರೆ. ಮರದಿಂದ ಒಳ್ಳೆಯ ಇದ್ದಲು ತಯಾರಿಸುತ್ತಾರೆ. ಶಾಹಿ ತಯಾರಿಸಲು ಹಾಗೂ ಕೂದಲುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ