32. ಬೇವು (Azadirachta indica A.Juss.)
ಅಸಾಡಿರಕ್ಟ ಎಂಬುದು ಮಿಲಿಯಾ ಅಸೆಡರಖ್‌ನಿಂದ ಬಂದಿದೆ. ಇಂಡಿಕ ಎಂದರೆ ಭಾರತದ್ದು ಎಂದರ್ಥ.
ಇಂಗ್ಲೀಷ್ ಹೆಸರುಗಳು : ಮಾರ್ಗೋಸ, ನೀಮ್
ಕನ್ನಡದ ಇತರ ಹೆಸರುಗಳು : ಬೇವಿನ ಮರ, ವಿಷ ಬೇವು, ಒಳ್ಳೇ ಬೇವು.
ಭಾರತೀಯ ಹೆಸರುಗಳು :
ಹಿಂದಿ : ನೀಮ್ ತಮಿಳು : ವೆಪ್ಡೆಂಪ
ತೆಲುಗು : ಪೆಂಪು ಮರಾಠಿ : ಲಿಂಬ
ಮಲಯಾಳಂ : ವೆಪ್ಡೆಂ ಸಂಸ್ಕೃತ : ಅರಿಷ್ಠ, ನಿಂಬ
ಕುಟುಂಬ : ಮೇಲಿಯೇಸಿ
ಲಭ್ಯತೆ : ನಮ್ಮ ದೇಶದ ಎಲ್ಲ ಒಣಹವೆ ಇರುವ ಕಡೆ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 10 – 15 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ನಿತ್ಯಹರಿದ್ವರ್ಣಿ.
ಕಾಂಡ : ತೊಗಡೆ ಕಪ್ಪು ಮಿಶ್ರಿತ ಬೂದು ಬಣ್ಣ. ಒಳದೊಗಟೆ ಕೆಂಪು – ಕಂದು ಕಹಿ ತೊಗಟೆ.
ಎಲೆ : ಪರ್ಯಾಯ ಜೋಡಣೆಯ ಏಕ ಗರಿರೂಪಿ ಸಂಯುಕ್ತ ಎಲೆ. ದೊಡ್ಡ ಎಲೆಯಲ್ಲಿ ಅಭಿಮುಖವಾಗಿ ಕಿರು ಎಲೆಗಳು ಬೆಳೆದಿವೆ. ಕಿರು ಎಲೆಗಳ ಅಂಚು ಗರಗಸದಂತಿದೆ. ಕಿರು ಎಲೆಗಳ ತುದಿ ಚೂಪು. ಎಳೆ ಎಲೆಗಳು ಬೂದು ಬಣ್ಣದವು. ಜಾಲರೂಪಿ ನಾಳವಿನ್ಯಾಸ. ಎಲೆಯ ಉದ್ದ 22 – 38 ಸೆಮಿ. ಕಿರುಎಲೆಗಳು 9 – 15, ಕುಡುಗೋಲಾಕೃತಿ.
ಪುಷ್ಪಮಂಜರಿ : ಮಧ್ಯಾಭಿಸರ ಪುಷ್ಪಮಂಜರಿ.
ಹೂವು : ಜೇನಿನ ವಾಸನೆಯ ಚಿಕ್ಕ ಬಿಳಿ ಹೂವುಗಳು. 5 ಮಿಮೀ ಉದ್ದ.
ಹೂವು ಬಿಡುವ ಕಾಲ : ಮಾರ್ಚಿ – ಮೇ
ಫಲ : ಹಳದಿ ಬಣ್ಣದ ಮೊಟ್ಟೆಯಾಕಾರದ ಒಂದು ಬೀಜವುಳ್ಳ ಅಷ್ಟಿಫಲ (ಡ್ರೂಪ್). 1.3 – 1.9 ಸೆಮಿ ವ್ಯಾಸ. ಕಹಿ.
ವಂಶಾಭಿವೃದ್ದಿ : ಬೀಜದಿಂದ
ಉಪಯೋಗಗಳು :
ಅಲಂಕಾರಿಕ : ಮರ ತಂಪು ನೀಡುವುದರಿಂದ ಮಾರ್ಗದ ಬದಿಗೆ ನೆಡುತ್ತಾರೆ.
ಔಷಧೀಯ : ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ತ್ವಚೆ ರೋಗಗಳು ಬರುವುದಿಲ್ಲ. ಕುಷ್ಟರೋಗ ಗುಣಪಡಿಸಲು ಎಲೆಗಳನ್ನು ಉಪಯೋಗಿಸುತ್ತಾರೆ. ಗಾಯಗಳನ್ನು ಗುಣಪಡಿಸುವುದಕ್ಕೆ ಎಲೆಗಳನ್ನು ಬಳಸುತ್ತಾರೆ. ಸುಟ್ಟ ಗಾಯಗಳಿಗೆ, ಹಲ್ಲಿನಿಂದ ರಕ್ತ ಬರುವುದನ್ನು ತಪ್ಪಿಸಲು ಹಾಗೂ ಹೊಟ್ಟೆ ನೋವಿಗೆ ಎಲೆಯ ರಸವನ್ನು ಉಪಯೋಗಿಸುತ್ತಾರೆ.
ಆರ್ಥಿಕ : ಮರದಿಂದ ಬೇಸಾಯಕ್ಕೆ ಉಪಯೋಗವಾಗುವ ಸಾಮಾನುಗಳು, ಮನೆಕಟ್ಟಲು ಬಾಗಿಲು, ಕಿಟಕಿಗಳನ್ನು ತಯಾರಿಸುತ್ತಾರೆ. ಬೀಜದಿಂದ ತೆಗೆದ ಎಣ್ಣೆಯನ್ನು (ಮಾರ್ಗೋಸಾ) ಸೋಪು ತಯಾರಿಕೆಯಲ್ಲಿ, ದೀಪ ಉರಿಸಲು ಹಾಗೂ ಪೂತಿನಾಶಕದಂತೆ ಉಪಯೋಗಿಸುತ್ತಾರೆ. ಕಡ್ಡಿಗಳಿಂದ ಹಲ್ಲು ತಿಕ್ಕುತ್ತಾರೆ. ಇದರ ಗೋಂದನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ. ಬೀಜದ ಹಿಂಡಿಯನ್ನು ಗೊಬ್ಬರವಾಗಿ ಬಳಸುತ್ತಾರೆ. ಬೇವಿನ ಹಿಂಡಿ ಶಿಲೀಂಧ್ರಗಳಿಂದ ಬರವ ರೋಗವನ್ನು ತಡೆಯುತ್ತದೆ. ಒಣಗಿದ ಎಲೆಗಳನ್ನು ಬಟ್ಟೆ, ಪುಸ್ತಕಗಳ ಮಧ್ಯೆ ಇಟ್ಟರೆ ಕೀಟ ತಗುಲುವುದಿಲ್ಲ. ಜೇನು ಹುಳುಗಳಿಗೆ ಬೇವಿನ ಹೂಗಳೆಂದರೆ ಪಂಚಪ್ರಾಣ. ವಾಯು ಶುದ್ದೀಕರಣಕ್ಕೆ ವೃಕ್ಷ ಒಳ್ಳೆಯದು.

ಲೇಖಕರು : ಸಿ. ಡಿ. ಪಾಟೀಲ