33. ಬೇಲದ ಮರ (Feronia elephantum Corr.)
ಫೆರೋನಿಯ ಎಂಬ ಹೆಸರು ರೋಮ್‌ನ ಅರಣ್ಯದೇವತೆ `ಫೆರೋ‘ಗಳಿಂದ ಬಂದಿದೆ.
ಇಂಗ್ಲೀಷ್ ಹೆಸರುಗಳು : ವುಡ್ ಆಪಲ್, ಎಲಿಫಂಟ್ ಆಪಲ್, ಬೇಲ್ ಟ್ರೀ
ಕನ್ನಡದ ಇತರ ಹೆಸರುಗಳು : ಬಳೂಲಕಾಯಿಮರ, ಕಪಿತ್ಥ, ಬೇಲದ ಹಣ್ಣಿನ ಮರ, ಕಾವೀಟ, ದಂತ ಶಠ
ಭಾರತೀಯ ಹೆಸರುಗಳು :
ಹಿಂದಿ : ಬಿಲಿನ್, ಕವಿತಾ ತಮಿಳು : ಪಿಟವಿಲಾ, ಸುವರಸಂ
ತೆಲುಗು : ಕಪಿತ್ಥಮು ಮರಾಠಿ : ಕೋವಿತ್, ಕವಥಾ
ಮಲಯಾಳಂ : ದಾಧಿಫಲ, ವಿಲನ್ನು ಸಂಸ್ಕೃತ : ಮಹಾಕಪಿತ್ಥ, ನೀಲಮಲ್ಲಿಕಾ, ಬಿಲ್ವ,
ದಂತಫಲ, ಕಪಿಪ್ರೀಯ, ಮಾಂಗಲ್ಯ.
ಕುಟುಂಬ : ರೂಟೇಸಿ
ಲಭ್ಯತೆ : ಕರ್ನಾಟಕದ ಎಲ್ಲ ಭಾಗಗಳಲ್ಲಿ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 10 – 12 ಮೀ. ಎತ್ತರ ಬೆಳೆಯಬಲ್ಲದು.
ಕಾಂಡ : ಕಾಂಡದ ಮೇಲೆ ಮುಳ್ಳುಗಳಿವೆ. 1.2 – 3.7 ಸೆಮೀ. ಉದ್ದ.
ಎಲೆ : ಸಂಯುಕ್ತ ಎಲೆಗಳು. ತೈಲ ಗ್ರಂಥಿಗಳಿವೆ. ಕಿರು ಎಲೆಗಳು 3 – 9 ಅಂಡಾಕೃತಿ ಹಾಗೂ 2.5 – 5 x 1.2 – 2.5 ಸೆಮೀ. ಗಾತ್ರದವು.
ಪುಷ್ಪಮಂಜರಿ : ಮಧ್ಯಾರಂಭಿ
ಹೂವು : ಮಾಸಲು ಕೆಂಪು ಬಣ್ಣದ ಚಿಕ್ಕ ಹೂವುಗಳು. 10 – 12 ಕೇಸರಗಳಿವೆ. ಹೂವಿನ ವ್ಯಾಸ 2.5 – 7 ಸೆಮೀಗಳು.
ಹೂವು ಬಿಡುವ ಕಾಲ : ಬೇಸಿಗೆ
ಫಲ : ಡ್ರೂಪ್. 10 – 25 ಸೆಮೀ ಸುತ್ತಳತೆಯ ದುಂಡನೆಯ ಹಣ್ಣು. ಬೂದು ಮಿಶ್ರಿತ ಹಸಿರು ಹೊರಮೈ. ತಿರುಳಿನಲ್ಲಿ ಅನೇಕ ಬೀಜಗಳು.
ವಂಶಾಭಿವೃದ್ದಿ : ಬೀಜದಿಂದ
ಉಪಯೋಗಗಳು :
ಅಲಂಕಾರಿಕ :
ಔಷಧೀಯ : ಹಣ್ಣಿನ ತಿರುಳಿಗೆ ಬೇಧಿ, ಆಮಶಂಕೆ, ಮತ್ತಿತರ ಕುಕ್ಷಿ ಸಂಬಂಧ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ. ಹಲ್ಲುಗಳ ಒಸಡಿನ ಗಟ್ಟಿಗಾಗಿ ಮತ್ತು ಗಂಟಲು ಹುಣ್ಣಿನ ಉಪಶಮನಕ್ಕೆ ಉಪಯೋಗಿಸುತ್ತಾರೆ. ಹಣ್ಣು ತಿಂದರೆ ಮಲಶೋಧನವಾಗುವುದು. ಬೇರಿನ ಸಿಪ್ಪೆಯ ಕಷಾಯ ಜ್ವರಕ್ಕೂ ಎಲೆಯ ಕಷಾಯವನ್ನು ಶ್ವಾಸಕೋಶದ ತೊಂದರೆ ನಿವಾರಣೆಗೆ ಕೊಡುತ್ತಾರೆ. ಎಲೆಗಳ ಒತ್ತಡ ಕಣ್ಣು ರೋಗದಲ್ಲಿ ಉಪಯೋಗ. ಹೂವುಗಳ ದ್ರಾವಕ ವಿಷಕರ.
ಆರ್ಥಿಕ : ಹಣ್ಣಿನ ತಿರುಳು ಸ್ವಲ್ಪ ಹುಳಿ ಮಿಶ್ರಿತ ಸಿಹಿಯಾಗಿದ್ದು ತಿನ್ನಲು ಹಾಗೂ ಪಾನಕ ಮಾಡಿಕೊಂಡು ಕುಡಿಯಲು ಯೋಗ್ಯವಾಗಿದೆ. ಬಿಸಿಲಿನ ತಾಪಕ್ಕೆ ಇದು ತಂಪನ್ನೀಯುತ್ತದೆ. ಈ ಮರದ ಗೊಂದನ್ನು ಜಲವರ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಮರವು ಸೌದೆ, ಮನೆ ಕಟ್ಟಲು ಹಾಗೂ ವ್ಯವಸಾಯದ ಉಪಕರಣಗಳನ್ನು ತಯಾರಿಸಲು ಯೋಗ್ಯವಾಗಿದೆ. ಫಲಿತ ಹಣ್ಣಿನಿಂದ ಚಟ್ನಿ ತಯಾರಿಸುತ್ತಾರೆ. ಬೀಜದ ಎಣ್ಣೆಯನ್ನು ಕೈಗಾರಿಕೆಗಳಿಗೆ ಯೋಗ್ಯ.

ಲೇಖಕರು : ಸಿ. ಡಿ. ಪಾಟೀಲ