34. ಮರಲಿಂಗ (Crataeva religiosa Hook.f & Thoms.) (Crataeva nurvala Ham.)
ಕ್ರಟಿವ್ ಎಂಬುದು ಗ್ರೀಕ್ ಸಸ್ಯಶಾಸ್ತ್ರಜ್ಞ ಕ್ರಟೀವಸ್‌ರವರ ಹೆಸರಿನಿಂದಲೂ ರಿಲಿಜಿಯೋಸ ಎಂಬುದು ಮತಕ್ಕೆ ಸಂಬಂಧಿಸಿದ್ದು ಎಂದೂ ಆಗುತ್ತದೆ. ನುರ್ವಲ ದಕ್ಷಿಣ ಭಾರತದ ದೇಶೀಯ ಭಾಷಾ ಹೆಸರಿನಿಂದ ಬಂದಿದೆ.
ಇಂಗ್ಲೀಷ್ ಹೆಸರುಗಳು : ದಿ ಬಾರ್ನ, ದಿ ಸೆಕ್ರೆಡ್ ಬಾರ್ನ
ಕನ್ನಡದ ಇತರ ಹೆಸರುಗಳು : ಹೊಳೆತುಂಬೆ, ನಿರಂಜನಿ, ನಿರವೆ ಮರ, ಬಿಲಪತ್ರಿ
ಭಾರತೀಯ ಹೆಸರುಗಳು :
ಹಿಂದಿ : ಬಿಲಾಸಿ ತಮಿಳು : ಮರಲಿಂಗಂ
ತೆಲುಗು : ಉಳಿಮಾರಿ ಮರಾಠಿ : ಹಾರವರ್ನ, ರಾಮಲಾ
ಮಲಯಾಳಂ : ಕಿಲಿ ಸಂಸ್ಕೃತ : ಕುಮಾರ, ಸಾಧು ವೃಕ್ಷ, ಸೇತುಕ, ತಮಾಲ
ವರುಣ.
ಕುಟುಂಬ : ಕಪ್ಪಾರಿಡೇಸಿ
ಲಭ್ಯತೆ : ಸಾಮಾನ್ಯವಾಗಿ ದೇವಸ್ಥಾನ ಹಾಗೂ ಗೋರಿಗಳ ಹತ್ತಿರ ಬೆಳೆಸುತ್ತಾರೆ.
ಸಸ್ಯ ವಿವರಣೆ :
ಎತ್ತರ : 10 – 12 ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿ.
ಕಾಂಡ : ಕಾಂಡದ ಮೇಲೆ ನಯವಾದ ಮಾಸಿದ ಬೂದು ಬಣ್ಣದ ತೊಗಟೆ.
ಎಲೆ : ಪರ್ಯಾಯ ಜೋಡಣೆಯ ಏಕಗರಿ ರೂಪಿ ಸಂಯುಕ್ತ ಎಲೆ. ಒಂದು ಎಲೆಯಲ್ಲಿ ಮೂರು ಕಿರುಎಲೆಗಳಿವೆ. ಕಿರುಎಲೆಗಳು 5 – 15 ಸೆಮೀ. ಉದ್ದ ಹಾಗೂ 3.8 — 6.3 ಸೆಮೀ. ಅಗಲ. ಮೊಟ್ಟೆಯಾಕಾರ. ಕಿರುಎಲೆಯ ಅಂಚು ಸಾಪಾಗಿದೆ. ಕಿರು ಎಲೆಯ ತುದಿ ಚೂಪು ಹಾಗೂ ಜಾಲದಂತ ನಾಳವಿನ್ಯಾಸ ಇದೆ.
ಪುಷ್ಪಮಂಜರಿ : ಒಂದೇ ಹೂವು.
ಹೂವು : ಉದ್ದ ತೊಟ್ಟಿನ ದೊಡ್ಡ ಹೂವುಗಳ ಬಣ್ಣ ಹಸಿರು ಮಿಶ್ರಿತ ಬಿಳಿ, ಮಾಸಿದ ಹಳದಿ ಅಥವಾ ಕೆಂಪು ಹಳದಿ. ನೇರಳೆ ಬಣ್ಣದ ಅನೇಕ ಕೇಸರಗಳಿವೆ.
ಹೂವು ಬಿಡುವ ಕಾಲ : ಏಪ್ರಿಲ್ – ಮೇ.
ಫಲ : ದುಂಡಗಿನ ತಿರುಳುಳ್ಳ ಬೆರ್ರಿ. ಮಾಗಿದ ನಂತರ ಕೇಸರಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ತಿರುಳು ಹಳದಿ.
ವಂಶಾಭಿವೃದ್ದಿ : ಬೀಜದಿಂದ ಹಾಗೂ ಬೇರಿನ ಕಂದುಗಳಿಂದ.
ಉಪಯೋಗಗಳು :
ಅಲಂಕಾರಿಕ : ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.
ಔಷಧೀಯ : ತೊಗಟೆಯಲ್ಲಿ ಟ್ಯಾನಿನ್ ಮತ್ತು ಸಪೋನಿನ್‌ಗಳೆಂಬ ರಾಸಾಯನಿಕಗಳಿವೆ. ತೊಗಟೆಯ ಕಷಾಯವನ್ನು ವಿರೇಚಕವಾಗಿ ಮತ್ತು ಹಸಿವು ಹೆಚ್ಚಿಸಲು ಕೊಡಲಾಗುತ್ತದೆ. ಇದನ್ನು ಮೂತ್ರ ಜನಕಾಂಗಗಳ ವ್ಯಾಧಿಯಲ್ಲಿ ಉಪಯೋಗಿಸುತ್ತಾರೆ.
ಆರ್ಥಿಕ : ಎಲೆಗಳನ್ನು ದನಕರುಗಳು ತಿನ್ನುತ್ತವೆ. ಮರದಿಂದ ಬಾಚಣಿಕೆ, ಬೆಂಕಿ ಪೆಟ್ಟಿಗೆ ಹಾಗೂ ತಮಟೆಗಳನ್ನು ತಯಾರಿಸುತ್ತಾರೆ. ಹಣ್ಣಿನ ತಿರುಳನ್ನು ಬಣ್ಣ ಹಾಕಲು ಬಳಸುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ