35. ಮದ್ದಾಲೆ (Alstonia scholaris Linn.)
ಪ್ರೊ. ಸಿ. ಅಲ್‌ಸ್ಟೋನ್ ಅವರ ನೆನಪಿಗಾಗಿ ಅಲ್‌ಸ್ಟೋನಿಯಾ ಎಂಬ ಹೆಸರು ಕೊಡಲಾಗಿದೆ. ಈ ಮರದ ಕಾಂಡದಿಂದ ಪಾಟಿಗಳನ್ನು (ಸ್ಲೇಟ್ಸ್) ತಯಾರಿಸುತ್ತಿದ್ದರಿಂದ ಸ್ಕಾಲರಿಸ್ ಎಂಬ ಪದ ಬಂದಿದೆ. ಸಪ್ತಪರ್ಣ ಹಾಗೂ ಸತ್ವಿನ್ ಎಂದರೆ ಏಳು ಎಲೆಗಳಿದ್ದದ್ದು ಎಂದರ್ಥ. ಸೈತಾನ್ ಮತ್ತು ಡೆವಿಲ್ಸಿ ಟ್ರೀ ಅಂದರೆ `ದುಷ್ಟಶಕ್ತಿ‘ಗಳಿವೆ ಎಂಬರ್ಥ.
ಇಂಗ್ಲೀಷ್ ಹೆಸರುಗಳು : ಡೆವಿಲ್ಸ್ ಟ್ರೀ, ಸ್ಕಾಲರ್ಸ್‌ಟ್ರೀ
ಕನ್ನಡದ ಇತರ ಹೆಸರುಗಳು : ಜಂತಾಲ ಮರ, ಕೋಡಾಲೆ, ಜಂತಳ, ಸಪ್ತಪರ್ಣಿ, ಸಾತ್ವಿನ್
ಭಾರತೀಯ ಹೆಸರುಗಳು :
ಹಿಂದಿ : ಚಟಿಯನ್ ತಮಿಳು : ಪಾಲಾ
ತೆಲುಗು : ಪಲಗರುಡ ಮರಾಠಿ : ಸೈತಾನ್, ಸಲ್ವೆನ್
ಮಲಯಾಳಂ : ಪಾಲಾ ಸಂಸ್ಕೃತ : ಸಪ್ತಪರ್ಣಿ, ಶಾರದಾ, ವಿನಯಕ, ಚತ್ರಪರ್ಣ
ಕುಟುಂಬ : ಅಪೊಸೈನೇಸಿ
ಲಭ್ಯತೆ : ಸಾಮಾನ್ಯವಾಗಿ ಎಲ್ಲ ಕಡೆ ಬೆಳೆಯುತ್ತದೆ. ಹೆಚ್ಚಾಗಿ ಪಶ್ಚಿಮ ಘಟ್ಟಗಳು
ಸಸ್ಯ ವಿವರಣೆ :
ಎತ್ತರ : 12 – 18 ಮೀ.ಗಳಿಗಿಂತಲೂ ಹೆಚ್ಚು ಎತ್ತರ ಬೆಳೆಯಬಲ್ಲ ಸದಾಪರ್ಣಿ.
ಕಾಂಡ : ಬೂದಿಬಣ್ಣದ ಒರಟು ಕಾಂಡ. ರೆಂಬೆಗಳು ಛತ್ರಿಕಡ್ಡಿಯಂತೆ ಹರಡಿವೆ. ಕಾಂಡಕ್ಕೆ ಕಟ್ಟು ಹಾಕಿದರೆ ಕಹಿ ಹಾಲು ಸೋರುತ್ತದೆ.
ಎಲೆ : 5 – 7 ಎಲೆಗಳು ವರ್ತುಲಕ್ರಮದಲ್ಲಿ ಬೆಳೆದಿವೆ. ಸರಳ ಎಲೆಗಳು. 10 – 20 ಸೆಮೀ. ಉದ್ದದ 3 – 8 ಸೆಮೀ  ಅಗಲದ ಎಲೆಗಳಿಗೆ ಜಾಲಬಂಧ ನಾಳವಿನ್ಯಾಸವಿದೆ. ತೊಗಲಿನಂತಹ ಎಲೆಗಳು.
ಪುಷ್ಪಮಂಜರಿ : ಮಿಶ್ರ ಪುಷ್ಪಮಂಜರಿ.
ಹೂವು : ಸುವಾಸನಾಭರಿತ ತೊಟ್ಟುರಹಿತ ಹಸಿರು ಮಿಶ್ರಿತ ಬಿಳಿ ಹೂವುಗಳು. 1.3 ಸೆಮಿ ಉದ್ದ.
ಹೂವು ಬಿಡುವ ಕಾಲ : ಸೆಪ್ಟೆಂಬರ್ – ನವೆಂಬರ್
ಫಲ : 30 – 60 ಸೆಮೀ. ಉದ್ದ, 3 – 4 ಮಿಮೀ ದಪ್ಪದ ಕಪ್ಪು ಅಥವಾ ಗಾಢ ಕಂದು ಬಣ್ಣದ ಫಾಲಿಕಲ್‌ಗಳು. ಬೀಜಗಳು 6 ಮಿಮೀ. ಉದ್ದ. ಎರಡೂ ಕಡೆ ಕೂದಲುಗಳಿವೆ.
ವಂಶಾಭಿವೃದ್ದಿ : ಬೀಜದಿಂದ.
ಉಪಯೋಗಗಳು :
ಔಷಧೀಯ : ಇದರ ತೊಗಟೆಯನ್ನು ಆಮಶಂಕೆ ಮತ್ತು ಜ್ವರ ನಿವಾರಣೆಗಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಹುಣ್ಣು ಬಸಿಯುವುದಕ್ಕಾಗಿ ಕಟ್ಟುವುದುಂಟು.
ಆರ್ಥಿಕ : ಮರ ಮೆದುವಾಗಿರುವುದರಿಂದ ದೀಪದ ಕಡ್ಡಿ, ಪೆನ್ಸಿಲ್, ಖಡ್ಗದ ಒರೆ, ಶವ ಹಾಗೂ ಚಹ ಪೆಟ್ಟಿಗೆಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ