36. ಮಾವು (Mangifera indica Linn.)
ಮ್ಯಾಂಗೊ ಎಂಬ ಪದ ತಮಿಳಿನ ಮುಂಗಾಸ್ ಎಂಬ ಪದದಿಂದ ಬಂದಿದೆ ಎಂದು ನಂಬಲಾಗಿದೆ ಅಥವಾ ಅದು ಮಲಯನ್ ದ ಮಂಗ್ಗಾ ಅಥವಾ ಪೊರ್ಚುಗೀಜದ ಮಂಗಾ ಪದದಿಂದ ಬಂದಿರಬಹುದು. ಮ್ಯಾಂಜಿಫೆರಾ ಇಂಡಿಕಾ ಅಂದರೆ ಭಾರದಲ್ಲಿಯ ಫಲ ಬಿಡುವ ಮಾವಿನ ಮರ ಎಂದರ್ಥ.
ಇಂಗ್ಲೀಷ್ ಹೆಸರುಗಳು : ಮ್ಯಾಂಗೊ, ಕುಕೂಸ್ ಜಾಯ್, ಕುಪಿಡ್ಸ ಫೆವರೈಟ್, ಸ್ಪ್ರಿಂಗ್ ಟ್ರೀ.
ಕನ್ನಡದ ಇತರ ಹೆಸರುಗಳು : ಮಾವಿನ ಮರ, ಅಂಬಾ, ಜೀರಿಗೆ ಮಾವು, ಚಂದ್ರಮಾವು, ಸಿಹಿಮಾವು.
ಭಾರತೀಯ ಹೆಸರುಗಳು :
ಹಿಂದಿ : ಆಮ್ ತಮಿಳು : ಮಂಗಾಸ್
ತೆಲುಗು : ಮಮದಾ ಮರಾಠಿ : ಅಮ್ಹಾ
ಮಲಯಾಳಂ : ಅಮ್‌ರಮ್ ಸಂಸ್ಕೃತ : ಅಮ್ರಾ, ಮಧುಕರ, ಪ್ರಿಯಂಬು, ಶ್ರೀಪ್ರೀಯ
ಕುಟುಂಬ : ಅನಾಕಾರ್ಡಿಯೇಸಿ
ಲಭ್ಯತೆ : ಸಾಮಾನ್ಯವಾಗಿ ಎಲ್ಲ ಕಡೆ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : ಅರಣ್ಯದಲ್ಲಿ ಸುಮಾರು 15 ಮೀ.ಗಳವರೆಗೂ ಬೆಳೆಯಬಲ್ಲದು.
ಕಾಂಡ : ಅಂಟು ಪದಾರ್ಥದಿಂದ ಕೂಡಿದ ದೊಗರು ಕಾಂಡ. ದಪ್ಪ ತೊಗಟೆಯ ಬಣ್ಣ ಕಪ್ಪು – ಬೂದು.
ಎಲೆ : ಪರ್ಯಾಯ ಜೋಡಣೆಯ, 12.6  – 25 ಸೆಮೀ. ಉದ್ದ ಹಾಗೂ 3.8 – 7.5 ಸೆಮೀ. ಅಗಲ, ತುದಿ ಚೂಪಾಗಿರುವ, ಎಲೆಯ ಬುಡ ಉಬ್ಬಿರುವ, ಹೊಳೆಯುವ, ಜಾಲಬಂಧ ನಾಳವಿನ್ಯಾಸವುಳ್ಳ ಎಲೆ. ಎಳೆ ಎಲೆಗಳ ಬಣ್ಣ ತಾಮ್ರದ ಕೆಂಪು.
ಪುಷ್ಪಮಂಜರಿ : ಮಧ್ಯಾರಂಭಿ ಪುಷ್ಪಮಂಜರಿ.
ಹೂವು : ಚಿಕ್ಕ ತಿಳಿಹಳದಿ ಹಸಿರು ಮಿಶ್ರಿತ ಹೂವು. ಹೂವಿನ ಬುಡಕ್ಕೆ ಕೆಂಪು ಛಾಯೆ ಇದೆ. ಹೂವಿನಲ್ಲಿ ಒಂದೇ ಒಂದು ಕೇಸರವಿದೆ. 5 ಮಿಮೀ. ಉದ್ದದ ಹೂವುಗಳು.
ಹೂವು ಬಿಡುವ ಕಾಲ : ಮಾರ್ಚಿ – ಏಪ್ರಿಲ್
ಫಲ : ಡ್ರೂಪ್, ಹೃದಯಾಕಾರ. 7.5 ­– 20 ಸೆಮಿ ಉದ್ದ. ಬೀಜ ಒಂದು.
ವಂಶಾಭಿವೃದ್ದಿ : ಬೀಜದಿಂದ, ಕಸಿಯಿಂದ ಬೆಳೆಸುತ್ತಾರೆ.
ಉಪಯೋಗಗಳು :
ಅಲಂಕಾರಿಕ : ರಸ್ತೆಗಳ ಬದಿಗೂ ಇತ್ತಿತ್ತಲಾಗಿ ಬೆಳೆಸುತ್ತಿದಾರೆ.
ಔಷಧೀಯ : ಇದರ ಬೀಜಗಳನ್ನು ಶತಾವರಿ ಕಷಾಯದೊಂದಿಗೆ ಸೇರಿಸಿ ಆಯುರ್ವೇದದಲ್ಲಿ ಅಸ್ತಮಾ ಕಾಯಿಲೆಗೆ ಕೊಡುತ್ತಾರೆ. ಬೀಜದ ಪುಡಿಯನ್ನು ನಶ್ಯದಂತೆ ಸೇವಿಸಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ. ಅಂಟು ಮತ್ತು ಚಕ್ಕೆಯ ರಸ ಔಷಧಿ.
ಆರ್ಥಿಕ : ಮಾವಿನ ಕಾಯಿಗಳನ್ನು ಚಟ್ನಿ, ಉಪ್ಪಿನಕಾಯಿ ಮಾಡುತ್ತಾರಲ್ಲದೆ ಹಾಗೆಯೇ ತಿನ್ನಲೂಬಹುದು. ಮಾಗಿದ ಕಾಯಿಯಿಂದ ರಸ ತೆಗೆದು `ಮ್ಯಾಂಗೋ ಫೂಲ್‘ ಎಂಬ ಪಾನೀಯವನ್ನು ತಯಾರಿಸಿ ಬೇಸಿಗೆಯಲ್ಲಿ ಕುಡಿಯುತ್ತಾರೆ. ಮಾವಿನ ಹಣ್ಣಿನಿಂದ ಷರಬತ್ತು, ಮುರಬ್ಬ, ಹಲ್ವ, ಬರಿೇ, ಮಿಠಾಯಿ ಮತ್ತು ರುಚಿಕಾರಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅಂಟನ್ನು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಮಾವಿನ ಎಲೆಗಳನ್ನು ಹಬ್ಬ ಹಾಗೂ ಸಂತೋಷಕೂಟಗಳಲ್ಲಿ ಅಲಂಕಾರಿಕವಾಗಿ ಶೃಂಗಾರಕ್ಕೆ ಉಪಯೋಗಿಸುತ್ತಾರೆ. ಮರದಿಂದ ಪ್ಯಾಕಿಂಗ್ ಡಬ್ಬ ಪದರ ಹಲಿಗೆ, ಚಹಾ ಪೆಟ್ಟಿಗೆ, ಆಟದ ಸಾಮಾನು ಮತ್ತು ಅಗ್ಗದ ಪೀಠೋಪಕರಣಗಳನ್ನು ತಯಾರಿಸುವುದುಂಟು. ಬೀಜದಿಂದ ಎಣ್ಣೆ ತೆಗೆಯುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ