37. ಮುಳ್ಳು ಮುತ್ತುಗ (Erythrina indica Lam.)
ಗ್ರೀಕ್ ಭಾಷೆಯಲ್ಲಿ ಎರಿಥ್ರಿನ್ ಎಂದರೆ ಕೆಂಪು ಎಂದರ್ಥ. ಕೆಂಪು ಬಣ್ಣದ ಹೂವುಗಳನ್ನು ಇದು ಸೂಚಿಸುತ್ತದೆ. ಇಂಡಿಕ ಭಾರತದ ಮೂಲವನ್ನು ಸೂಚಿಸುತ್ತದೆ.
ಇಂಗ್ಲೀಷ್ ಹೆಸರುಗಳು : ಇಂಡಿಯನ್ ಕಾರಲ್ ಟ್ರೀ, ಮೋಚಿವುಡ್
ಕನ್ನಡದ ಇತರ ಹೆಸರುಗಳು : ಹಾಲಿವಾಳ, ಹಾಲುವಾಣ, ಹಾರಿವಾಣ, ಪಾಲಿವಾಣ, ಕಾಡು ಪಾರಿವಾಳ, ಮುಳ್ಳುಮುರಿಗೆ.
ಭಾರತೀಯ ಹೆಸರುಗಳು :
ಹಿಂದಿ : ಪಂಗ್ರಿ, ಫರದ ತಮಿಳು : ಮುಲುಮುರುಂಗು
ತೆಲುಗು : ಮುಲ್ಲು ಮೊಡಗು ಮರಾಠಿ : ಪಂಗರ, ಮಂದಾರ
ಮಲಯಾಳಂ : ಮಂದಾರಂ ಸಂಸ್ಕೃತ : ಪಲಾಶ್, ರಕ್ತಕೇಶರ್, ರಕ್ತಕುಸುಮ
ಕುಟುಂಬ : ಫ್ಯಾಬೇಸಿ
ಉಪಕುಟುಂಬ : ಪೆಪಿಲಿಯೋನೇಸಿ
ಲಭ್ಯತೆ : ಬಂಗಾಳ, ಬಿಹಾರ ಹಾಗೂ ತೀರ ಪ್ರದೇಶಗಳಲ್ಲಿ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 18 ಮೀ.ಗಳ ವರೆಗೆ ಎತ್ತರ ಬೆಳೆಯಬಲ್ಲ ಶುಷ್ಕಪರ್ಣಿ
ಕಾಂಡ : ನಯವಾದ ತೊಗಟೆಯ ಮೇಲೆ ಕಪ್ಪು ಬಣ್ಣದ ಚಿಕ್ಕ ಮುಳ್ಳುಗಳಿವೆ.
ಎಲೆ : ಪರ್ಯಾಯ ಜೋಡಣೆಯ ತ್ರಿಪರ್ಣಿ. ತುದಿಯಲ್ಲಿರುವ ಕಿರುಎಲೆ ದೊಡ್ಡದು. ಎಲೆಯ ಬುಡ ಉಬ್ಬಿಕೊಂಡಿದೆ. ಜಾಲಬಂಧ ನಾಳವಿನ್ಯಾಸ. ಎಲೆಗಳ ಉದ್ದ 15 – 30 ಸೆಮೀ. ಕಿರುಎಲೆಗಳ ಉದ್ದ 10 – 15 ಸೆಮೀ. ಹಾಗೂ ಅಗಲ 9 – 12.5 ಸೆಮೀ.
ಪುಷ್ಪಮಂಜರಿ : ಮಧ್ಯಾಬಿಸರ ಪುಷ್ಪಮಂಜರಿ. 10 – 23 ಸೆಮೀ ಉದ್ದ.
ಹೂವು : ಹವಳದ ಕೆಂಪು ಬಣ್ಣದ ಹೂವುಗಳು. ಪತಂಗರೂಪಿ ದಳಗಳು. ಕೆಂಪು ಕೇಸರಗಳು ವಾಸನೆ ಇರುವುದಿಲ್ಲ.
ಹೂವು ಬಿಡುವ ಕಾಲ : ಫೆಬ್ರುವರಿ – ಏಪ್ರಿಲ್
ಫಲ : ಲೊಮೆಂಟಮ್. 12.5 – 30 ಸೆಮೀ. ಉದ್ದವಾದ, ವಕ್ರವಾಗಿರುವ ಹಾಗೂ ಚೂಪಾದ ತುದಿಯುಳ್ಳ, ಮಾಗಿದ ಮೇಲೆ ಕಪ್ಪಾಗುವ ಫಲ. ಮೂತ್ರಪಿಂಡದಾಕಾರದ 4–  8 ಬೀಜಗಳು. ಇವುಗಳ ಉದ್ದ 2 ಸೆಮೀ. ಹಾಗೂ ಅಗಲ 1 ಸೆಮೀ. ಕಂದು ಬಣ್ಣದವು.
ವಂಶಾಭಿವೃದ್ದಿ : ಬೀಜಗಳಿಂದ ಹಾಗೂ ರೆಂಬೆಗಳ ತುಂಡುಗಳಿಂದ.
ಉಪಯೋಗಗಳು :
ಅಲಂಕಾರಿಕ : ಮರದ ಹೂಗಳು ಬಹಳ ರಮ್ಯವಾಗಿರುವುದರಿಂದ ಉದ್ಯಾನವನಗಳಲ್ಲಿ ಹಾಗೂ ಸಾಲುಮರಗಳಾಗಿ ಬೆಳೆಸುತ್ತಾರೆ.
ಆರ್ಥಿಕ : ಚಿಗುರೆಲೆಗಳನ್ನು ಸಾರು ತಯಾರಿಸಲು ಬಳಸುತ್ತಾರೆ. ಮರದಿಂದ ಕೆತ್ತನೆ ಸಾಮಾನುಗಳನ್ನು ತಯಾರಿಸುತ್ತಾರೆ. ಮೆಣಸು ಮತ್ತು ದ್ರಾಕ್ಷಿ ಬೆಳೆಗೆ ಆಶ್ರಯ ಸಸ್ಯವಾಗಿ ಬೆಳೆಸುತ್ತಾರೆ.
ಔಷಧೀಯ : ತೊಗಟೆಯನ್ನು ಬೇಧಿ ಗುಣಪಡಿಸಲು ಹಾಗೂ ಕಫ ಮತ್ತು ವಾತಕ್ಕೆ ಬಳಸುತ್ತಾರೆ. ಎಲೆ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಹೋಗಲಾಡಿಸುತ್ತದೆ. ಎಲೆಯ ರಸವನ್ನು ಕಿವಿನೋವಿಗೆ ಬಳಸುತ್ತಾರೆ.
ಲೇಖಕರು : ಸಿ. ಡಿ. ಪಾಟೀಲ