38. ತಾರೆ (Terminalia bellarica Roxb.)
ಲ್ಯಾಟಿನ್ ಭಾಷೆಯಲ್ಲಿ ಟರ್ಮಿನೇಲಿಯಾ ಎಂದರೆ ಎಲೆಗಳು ಒಂದು ಕಡೆ ಇವೆ ಎಂದು ಅರ್ಥಕೊಡುತ್ತದೆ. ಬೆಲ್ಲೇರಿಕಾ ಎಂದರೆ ಕಾಯಿ ಎಂದು ಇಲ್ಲಿ ಅರ್ಥ.
ಇಂಗ್ಲೀಷ್ ಹೆಸರುಗಳು : ದಿ ಬೆಲೆರಿಕ್ ಮಿರ್ಯಾಬೋಲನ್, ಬಸ್ಟರ್ಡ್ ಮಿರ್ಯಾಬೋಲನ್, ಬೆಡ್ಡಾ ನಟ್ಸ
ಕನ್ನಡದ ಇತರ ಹೆಸರುಗಳು : ಗೋಟಿಂಗ, ತರಿ, ಸಂಟಿ, ವಿಭಿತ, ವಿಭಿತಕ.
ಭಾರತೀಯ ಹೆಸರುಗಳು :
ಹಿಂದಿ : ಬಹೆರಾ, ಬುಲ್ಲಾ, ಸಂಗೋನಾ ತಮಿಳು : ಅಂಬಬಲಟ್ಟಿ, ಸಡಗಂ, ವಿಬಿದಗಂ
ತೆಲುಗು : ತಡಿ, ತಂಡ್ರಾ ಮರಾಠಿ : ಬೆಹೆಡಾ, ವೆಲಾ, ಎಲಾ
ಮಲಯಾಳಂ : ತನ್ನಿ, ತುಶಮ್ ಸಂಸ್ಕೃತ : ಅಕ್ಷ, ಅನಿಲಗ್ನಿಕಾ, ಕಲಿಂದ, ತುಷಾ
ಕುಟುಂಬ : ಕಾಂಬ್ರೆಟೇಸಿ
ಲಭ್ಯತೆ : ಭಾರತದ ಎಲ್ಲ ಮಿಶ್ರ ಆರ್ದ್ರ ಅರಣ್ಯಗಳಲ್ಲಿ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : 10 – 20 ಮೀ.ಗಳ ಎತ್ತರದ ವರೆಗೂ ಬೆಳೆಯಬಲ್ಲದು. ಶುಷ್ಕಪರ್ಣಿ
ಕಾಂಡ : ನೀಲಿ ಬೂದು ಬಣ್ಣದ ತೊಗಟೆ ಉದ್ದುದ್ದ ಸೀಳುತ್ತದೆ.
ಎಲೆ : ಪರ್ಯಾಯ ಜೋಡಣೆಯ, ಹೊಳೆಯುವ ಸರಳ ಎಲೆಗಳು. ರೆಂಬೆಯ ತುದಿಗೆ ಗುಂಪಾಗಿ ಬೆಳೆಯುತ್ತದೆ. 10 – 20 x 7 – 15 ಸೆಮೀ ಎಲೆ. ಎಲೆಯ ತುದಿ ಮೊಂಡ. ಜಾಲಬಂಧ ನಾಳವಿನ್ಯಾಸ. ಚರ್ಮ ಸದೃಶ, ದೀರ್ಘವೃತ್ತಾಕಾರದ, ಬೂದು ಹಸಿರು ಬಣ್ಣದ ಎಲೆಗಳು. ತೊಟ್ಟಿನ ತುದಿಯಲ್ಲಿ ಎಲೆಗಳ ಬುಡಕ್ಕೆ ಎರಡು ಗ್ರಂಥಿಗಳಿವೆ.
ಪುಷ್ಪಮಂಜರಿ : ಕದಿರು ಮಂಜರಿ
ಹೂವು : ಜೇನಿನ ವಾಸನೆಯ ಸುಂದರ ಮಾಸಿದ ಬಿಳಿ, ಹಸಿರು ಹಳದಿ 1.3 ಸೆಮಿ ಅಗಲ ಹೂವುಗಳು.
ಹೂವು ಬಿಡುವ ಕಾಲ : ಫೆಬ್ರುವರಿ – ಮೇ
ಫಲ : ನುಣುಪಾದ ಬೂದು ಬಣ್ಣದ, 2.5 – 3.3 ಸೆಮಿ ಉದ್ದ ಹಾಗೂ 1.3 – 1.9 ಸೆಮಿ ವ್ಯಾಸದ ದುಂಡಗಿನ ಕಾಯಿ. ಮಸಕಾಗಿ 5 ಏಣುಗಳಿವೆ. ಒಂದು ಬೀಜ.
ವಂಶಾಭಿವೃದ್ದಿ : ಬೀಜದಿಂದ
ಉಪಯೋಗಗಳು :
ಅಲಂಕಾರಿಕ : ಇದು ಒಂದು ಸುಂದರವಾದ ವೃಕ್ಷ
ಔಷಧೀಯ : ಕಾಯಿಯನ್ನು ಅಸ್ತಮಾ, ಗಂಟಲು ಬೇನೆಗೆ ಉಪಯೋಗಿಸುತ್ತಾರೆ. ತೊಗಟೆಯನ್ನು ತೊನ್ನುರೋಗಕ್ಕೆ ಉಪಯೋಗಿಸುತ್ತಾರೆ. ಫಲವನ್ನು ಕಣ್ಣು, ಮೂಗು ಹಾಗೂ ಹೃದಯ ಬೇನೆಗೆ ಬಳಸುತ್ತಾರೆ. ಬೀಜಗಳನ್ನು ವಾಂತಿ ತಡೆಯಲು ಬಳಸುತ್ತಾರೆ.
ಆರ್ಥಿಕ : ಕಾಯಿಯನ್ನು ಬಣ್ಣ ಹಾಕಲು ಹಾಗೂ ಟ್ಯಾನ್ ಮಾಡಲು ಬಳಸುತ್ತಾರೆ. ಕಾಯಿಯಿಂದ ಶಾಯಿಯನ್ನು ತಯಾರಿಸುತ್ತಾರೆ. ಬೀಜದ ಮೇಲೆ ಬೆಳೆದ ಭಾಗವನ್ನು ತಿನ್ನಬಹುದು ಅಥವಾ ಅದರಿಂದ ತೆಗೆದ ಎಣ್ಣೆಯನ್ನು ಕೂದಲಿಗೆ ಬಳಸಬಹುದು. ಕೋತಿ, ಜಿಂಕೆ, ಅಳಿಲು, ಹಂದಿ, ಮೇಕೆಗಳು ಹಣ್ಣನ್ನು ತಿನ್ನುತ್ತವೆ. ಮರದಿಂದ ರೇಲ್ವೆ ಸ್ಲಾಪರ್ ತಯಾರಿಸಿ `ಕ್ರಿಯೋಸೋಟ‘ದಿಂದ ಉಪಚರಿಸಿ ಉಪಯೋಗಿಸುವುದುಂಟು. ಮರದಿಂದ ತೋಡು ದೋಣಿ, ಚಹಪೆಟ್ಟಿಗೆ, ಪದರು ಹಲಿಗೆ, ಪ್ಯಾಕಿಂಗ್ ಡಬ್ಬಗಳನ್ನು ತಯಾರಿಸಬಹುದು. ಕಾಯಿಯನ್ನು ಚರ್ಮಹದ ಮಾಡಲು ಬಳಸುತ್ತಾರೆ. ಮರದ ಮೇಲೆ `ಟಸ್ಸಾರ್‘ ರೇಷ್ಮೆ ಹುಳುಗಳನ್ನು ಬೆಳೆಸುವುದುಂಟು.
ಲೇಖಕರು : ಸಿ. ಡಿ. ಪಾಟೀಲ