26. ಬಗನೀ ಮರ (Caryota urens Linn.)

ಗ್ರೀಕ್ ಪದ ಕ್ಯಾರಿಯೋಟಾಸ್‌ದಿಂದ ಕ್ಯಾರಿಯೋಟಾ ಎಂಬ ಪದ ಬಂದಿದೆ. ಅಂದರೆ ನಟ್‌ನಂತಹ ಹಣ್ಣುಗಳನ್ನು ಸೂಚಿಸುತ್ತದೆ. ಯುರೆನ್ಸ ಅಂದರೆ ಸುಡುವುದು ಅಥವಾ ಕಚ್ಚುವುದು ಎಂದರ್ಥ. ಅಂದರೆ ಹಿಡಿದಾಗ ಕಾಯಿಯ ಮೇಲಿನ ಚಿಕ್ಕ ರೋಮಗಳು ತಿಂಡಿಯನ್ನುಂಟುಮಾಡುತ್ತವೆ ಎಂದು.
ಇಂಗ್ಲೀಷ್ ಹೆಸರುಗಳು : ಫಿಶ್-ಟೇಲ್ ಪಾಮ್, ಟಾಡಿ ಪಾಮ್, ಇಂಡಿಯನ್ ಬಾಸ್ಟರ್ಡ್‌ಸಾಗೋ, ಸ್ಯಾಗೋ ಪಾಮ್, ಎಲಿಫಟ್ಸ್ ಪಾಮ್, ಹಿಲ್ ಪಾಮ್, ಜಾಗರಿ ಪಾಮ್, ಮಲಬಾರ್ ಸಾಗೋ ಪಾಮ್.
ಕನ್ನಡದ ಇತರ ಹೆಸರುಗಳು : ಬೈನಿ ಮರ, ಪಾಸಿ ಮರ, ಬೈರಿಮರ, ಪೈನ್ ಮರ.

ಭಾರತೀಯ ಹೆಸರುಗಳು :

ಹಿಂದಿ : ಮಾರಿ, ಈಂದ್, ಮಾರಿಕಾಜಾಡ್ ತಮಿಳು : ಕೊಂಡಾ ಪನ್ನಾ
ತೆಲುಗು : ವಣರಿ ಮರಾಠಿ : ಬೆರ್ಲಿ, ಛೇರವಾ, ಅರ್ಧಿಸುಪಾರಿ
ಮಲಯಾಳಂ : ಕಾಲಾಪನಾ, ವೈನಾವು ಸಂಸ್ಕೃತ : ಮದದ್ರುಮ, ರಜ್ಜು, ಧೋಜವೃಕ್ಷ
ಕುಟುಂಬ : ಅರೆಕೇಸಿ
ಲಭ್ಯತೆ : ಭಾರತದ ಎಲ್ಲ ಕಡೆ ಹಾಗೂ ಸಹ್ಯಾದ್ರಿ ಪರ್ವತಗಳಲ್ಲಿ ಬೆಳೆಯುತ್ತದೆ.

ಸಸ್ಯ ವಿವರಣೆ :

ಎತ್ತರ : 45 – 60 ಅಡಿಗಳ ಎತ್ತರದವರೆಗೆ ಬೆಳೆಯುತ್ತದೆ.
ಕಾಂಡ : ರೆಂಬೆ ಕೊಂಬೆಗಳಿಲ್ಲದ ಕಾಂಡ. ದುಂಡು. 30 – 45 ಸೆಮೀ. ವ್ಯಾಸ.
ಎಲೆ : ದೊಡ್ಡ ದ್ವಿಗರೀರೂಪಿ ಸಂಯುಕ್ತ ಎಲೆ. ಸಮಾನಾಂತರ ಜಾಲಬಂಧ ನಾಳವಿನ್ಯಾಸ. ಕಾಂಡದ ತುದಿಯಲ್ಲಿ ಮಾತ್ರ 6 – 10 ಎಲೆಗಳು ಬೆಳೆಯುತ್ತವೆ. 6 ಮೀ. ಉದ್ದ 4 – 5 ಮೀ. ಅಗಲ. 36 ಜೊತೆ ಕಿರು ಎಲೆಗಳು, 10 – 20 ಸೆಮೀ. ಉದ್ದ.
ಪುಷ್ಪಮಂಜರಿ : ಲಾಳಗುಚ್ಚ. ಒಂದು ಮೀಟರ್‌ಗಿಂತಲೂ ಉದ್ದ.
ಹೂವು : ಚಿಕ್ಕ ಗಾತ್ರದ, ತೊಟ್ಟುರಹಿತ ಏಕಲಿಂಗ ಹೂವುಗಳು. ಗಂಡು ಹೂವು 13 ಮಿಮೀ. ಉದ್ದ.
ಹೂವು ಬಿಡುವ ಕಾಲ :
ಫಲ : ಡ್ರೂಪ್, 1.7 – 2 ಸೆಮೀ ವ್ಯಾಸದ ಕಾಯಿಗಳು. 1 – 2 ಬೀಜಗಳು. ಬೀಜದ ಮೇಲೆ ಚಿಕ್ಕ ರೋಮಗಳು, ಕೆಂಪು ಕಾಯಿಗಳು.
ವಂಶಾಭಿವೃದ್ದಿ : ಬೀಜದಿಂದ
ಉಪಯೋಗಗಳು :
ಅಲಂಕಾರಿಕ : ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.

ಔಷಧೀಯ :

ಆರ್ಥಿಕ : ಕಾಯಿಯ ತಿರುಳು ಗಟ್ಟಿ. ಮುಸಲ್ಮಾನ್ ಬಾಂಧವರು ಜಪಮಣಿಗಳನ್ನು ತಯಾರಿಸುತ್ತಾರೆ. ಕಿಟ್ಟೂಲ್ ಎಂಬ ನಾರನ್ನು ತೆಗೆಯುತ್ತಾರೆ. ನಾರಿನಿಂದ ಕೂದಲುಗಳನ್ನು ಸರಿಪಡಿಸುವ ಹೇರ್ ಬ್ರಶ್, ಅರಿವೆಗಳನ್ನು ಸರಿಪಡಿಸುವ ಕ್ಲಾಥ್ ಬ್ರಶ್ ಇತ್ಯಾದಿಗಳನ್ನು ತಯಾರಿಸುತ್ತಾರೆ. ಆನೆಕಟ್ಟುವ ಹಗ್ಗವನ್ನು ತಯಾರಿಸುತ್ತಾರೆ. ಎಳೆ ಎಲೆಗಳ ನಾರುಗಳಿಂದ ಹಾಸಿಗೆ ಲೋಡು, ಆಸನ ಮುಂತಾದವುಗಳನ್ನು ತಯಾರಿಸುತ್ತಾರೆ. ಎಳೆಯ ಗರಿಗಳು ಆನೆಗಳಿಗೆ ಆಹಾರ. ಕಾಂಡವನ್ನು ನೀರನ್ನು ಹರಿಸುವ ನಳಿಕೆಗಳಂತೆ ಉಪಯೋಗಿಸಬಹುದು. ಕಾಂಡದಿಂದ ಗುಡಿಸಲುಗಳ ಜಂತಿ, ಪಿಕಾಸೆ, ಹಾಗೂ ಕೈಗೋಲುಗಳನ್ನು ತಯಾರಿಸುತ್ತಾರೆ. ಕಾಂಡದಲ್ಲಿಯ ಪಿಷ್ಟದಿಂದ ಬಡಜನರು ರೊಟ್ಟಿ, ಗಂಜಿ ಮಾಡಿಕೊಳ್ಳುತ್ತಾರೆ. ಅಲ್ಲದೆ ಗಂಜಿ ಹಾಕುವ ಕೈಗಾರಿಕೆಗಳಲ್ಲೂ ಉಪಯೋಗಿಸುತ್ತಾರೆ. ಸಸ್ಯದ ತುದಿಯ ಕಾಂಡದಲ್ಲಿ ರಂದ್ರ ಕೊರೆದು ರಸ ತೆಗೆಯುತ್ತಾರೆ. ಇದಕ್ಕೆ `ನೀರಾ‘ ಎಂದು ಕರೆಯುತ್ತಾರೆ. ಇದರಲ್ಲಿ 13.6% ಸಕ್ಕರೆ ಅಂಶವಿದೆ. ನೀರಾದಿಂದ ಬೆಲ್ಲ, ಸಕ್ಕರೆ, ಕಲ್ಲು ಸಕ್ಕರೆ ತಯಾರಿಸಬಹುದು. ಹೆಂಡದಿಂದ ವಿಧವಿಧವಾದ ಮಾದಕ ಪೇಯಗಳನ್ನು ತಯಾರಿಸುತ್ತಾರೆ.

ಲೇಖಕರು : ಸಿ. ಡಿ. ಪಾಟೀಲ