ಆಲದ ಮರ (Ficus benghalensis Linn)
ಬನಿಯಾ ಹಾಗೂ ಹಿಂದೂ ವ್ಯಾಪಾರಸ್ಥರು ಈ ಮರದ ಬುಡದಲ್ಲಿ ಕುಳಿತು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಹಾಗೂ ಪೂಜೆ ಮಾಡುತ್ತಿದ್ದರಿಂದ ಬ್ರಿಟೀಷರು ಬನಿಯನ್ ಎಂಬ ಹೆಸರು ಕೊಟ್ಟಿದ್ದಾರಂತೆ. ಫೈಕಸ್ ಅಂದರೆ ಅಂಜೂರ. ಬೆಂಗಾಲೆನ್ಸಿಸ್ ಎಂದರೆ ಬಂಗಾಲಕ್ಕೆ ಸಂಬಂಧಿಸಿದ್ದು ಎಂದರ್ಥ. ಸಂಸ್ಕೃತದಲ್ಲಿ ಏತ ಎಂದರೆ ಸುತ್ತುವರಿ ಎಂದರ್ಥ.
ಇಂಗ್ಲೀಷ್ ಹೆಸರುಗಳು : ಬನಿಯನ್ ಟ್ರೀ
ಕನ್ನಡದ ಇತರ ಹೆಸರುಗಳು : ಆಲ
ಭಾರತೀಯ ಹೆಸರುಗಳು :
ಹಿಂದಿ : ಬಾರ್, ಬಾರ್‌ಗತ್ ತಮಿಳು : ಆಲ
ತೆಲುಗು : ಪೆದ್ದಮರಿ ಮರಾಠಿ : ವಡ್, ವರ್
ಮಲಯಾಳಂ: ಪೆರಲ್ ಸಂಸ್ಕೃತ : ವಾತ
ಕುಟುಂಬ : ಮೋರೇಸಿ
ಲಭ್ಯತೆ : ಭಾರತದ ಎಲ್ಲ ಸ್ಥಳಗಳಲ್ಲೂ ಬೆಳೆಯುತ್ತದೆ.
ಸಸ್ಯ ವಿವರಣೆ :
ಎತ್ತರ : ನೂರು ಅಡಿಗಳವರೆಗೆ ಬೆಳೆಯಬಲ್ಲ ನಿತ್ಯಹರಿದ್ವರ್ಣಿ.
ಕಾಂಡ : ಸಸ್ಯದ ಯಾವುದೇ ಭಾಗವನ್ನು ಗಾಯಗೊಳಿಸಿದರೆ ಬಿಳಿ ರಸ ಬರುತ್ತದೆ. ರೆಂಬೆಗಳಿಂದ ಕೆಳ ಮುಖವಾಗಿ ಬೇರುಗಳು ಬೆಳೆಯುತ್ತವೆ. ಕಾಂಡದ ದಪ್ಪವೂ ಬಹಳ.
ಎಲೆ : ಮೊಟ್ಟೆಯಾಕಾರದ ಪರ್ಯಾಯ ಜೋಡಣೆಯ ಸರಳ ಎಲೆಗಳು. ಚಿಗುರೆಲೆಗಳು ಮೆದು ಹಾಗೂ ಹೊಳೆಯುತ್ತವೆ. ಆಗ ಅವುಗಳ ಬಣ್ಣ ಕಂದು. ಎಲೆಗಳು ಬೆಳೆದಂತೆ ಹಸಿರು ಬಣ್ಣಕ್ಕೆ ತಿರುಗಿ ತೊಗಲಿನಂತೆ ಬಿರುಸಾಗುತ್ತದೆ. ಜಾಲದಂತ ನಾಳ ವ್ಯವಸ್ಥೆ ಇದೆ. ಎಲೆಯ ತುದಿ ಮೊಂಡು. ಎಲೆಗೆ ಗಾಯವಾದರೆ ಬಿಳಿ ರಸ ಸ್ರವಿಸುತ್ತದೆ.
ಪುಷ್ಪಮಂಜರಿ : ಹೈಪಂಥೋಡಿಯಂ
ಹೂವು : ತೊಟ್ಟುರಹಿತ ಗಂಡು, ಹೆಣ್ಣು ಹಾಗೂ ನಪುಂಸಕ ಹೂವುಗಳು ಬಟ್ಟಲದಂತಹ ಹೈಪಂಥೋಡಿಯಂನಲ್ಲಿವೆ.
ಹೂವು ಬಿಡುವ ಕಾಲ : ಏಪ್ರಿಲ್ – ಜೂನ್
ಫಲ : ಸೈಕೋನಸ್, ಬೆಳೆದಂತೆ ಹಸುರು ಬಣ್ಣದಿಂದ ಕೆಂಪಾಗುತ್ತದೆ.
ವಂಶಾಭಿವೃದ್ದಿ : ಬೀಜದಿಂದ ಮತ್ತು ರೆಂಬೆಕೊಂಬೆಯಿಂದ.
ಉಪಯೋಗಗಳು :
ಅಲಂಕಾರಿಕ : ಇದು ನಿತ್ಯ ಹರಿದ್ವರ್ಣಿಯಾಗಿರುವುದರಿಂದ ಸಾಲು ಮರಗಳಲ್ಲಿ ಬೆಳೆಸುತ್ತಾರೆ.
ಔಷಧೀಯ : ಮರದ ರಸವನ್ನು ಹುಣ್ಣುಗಳಿಗೆ ಲೇಪಿಸುತ್ತಾರೆ.
ಆರ್ಥಿಕ : ಇದರ ಹಣ್ಣುಗಳನ್ನು ಸಾಮಾನ್ಯವಾಗಿ ಎಲ್ಲ ಪಕ್ಷಿಗಳು ತಿನ್ನುತ್ತವೆ. ಇದರ ಬೀಳಲು ಬೇರುಗಳು ಗಟ್ಟಿಯಾಗಿರುವುದರಿಂದ ಟೆಂಟುಗಳ ಕಂಬ, ಹಾಗೂ ಗಾಡಿಗಳ ನೊಗ ಮಾಡಲು ಉಪಯೋಗಿಸುತ್ತಾರೆ. ತೊಗಟೆ ಹಾಗೂ ಎಳೆಯ ಬೀಳಲು ಬೇರುಗಳಿಂದ ನಾರನ್ನು ತೆಗೆದು ಹಗ್ಗ ಮಾಡುತ್ತಾರೆ. ಎಲೆಗಳನ್ನು ಊಟದ ಎಲೆ ಮಾಡಲು ಉಪಯೋಗಿಸುತ್ತಾರೆ. ಇದರ ಬಿಳಿ ರಸದಿಂದ ಪಕ್ಷಿ ಅಂಟನ್ನು ತಯಾರಿಸಿ ಅದನ್ನು ರೆಂಬೆಗಳಿಗೆ ಲೇಪಿಸಿ ಪಕ್ಷಿಗಳನ್ನು ಹಿಡಿಯುತ್ತಾರೆ. ಮರದಿಂದ ಹಲಗೆಗಳನ್ನೂ ತಯಾರಿಸುತ್ತಾರೆ. ಎಲೆಗಳು ಒಳ್ಳೆಯ ಗೊಬ್ಬರವಾಗುತ್ತವೆ.
ಲೇಖಕರು : ಸಿ. ಡಿ. ಪಾಟೀಲ