ಸಾವೆ ಹೊಲದಲ್ಲಿ ರೈತ

‘ನೀವು ಸಾವೆ ಅನ್ನ ಊಟ ಮಡಿದ್ದೀರಾ?’ ಎಂದು ಯಾರನ್ನಾದರೂ ಕೇಳಿದರೆ ಖಂಡಿತ ಕಕ್ಕಾಬಿಕ್ಕಿಯಾಗುತ್ತಾರೆ. ಜೊತೆಗೆ ಅದ್ಯಾವ ಅಕ್ಕಿ? ಎಂದು ಮರುಪ್ರಶ್ನೆ ಹಾಕುವುದಂತೂ ಗ್ಯಾರಂಟಿ.

ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಅಕ್ಕಿಗೂ ಸರಿಸಾಟಿಯಾಗದಂತಹ ಸಾವೆ ಎಂಬ ತೃಣ ಧಾನ್ಯ ಬೆಳೆ ಬಹು ಪ್ರಚಲಿತವಿತ್ತು. ಒಂದು ಹೊತ್ತು ಸಾವೆ ಅನ್ನ ಉಂಡರೆ ಎರಡನೇ ಹೊತ್ತಿಗೆ ಬೇಗ ಹಸಿವೆ ಆಗದಷ್ಟು ಗಟ್ಟಿ ಹಾಗೂ ಪೋಷಕಾಂಶಗಳನ್ನು ಹೊಂದಿದ ಆಹಾರ ಬೆಳೆ ಇದಾಗಿತ್ತು. ‘ಬಿಸಿ ಸಾವಿ ಅನ್ನಕ್ಕ ತುಪ್ಪ ಹಾಕ್ಕೊಂಡು ನುಂಗಿದರ, ಆಹಾ… ಅದೆಂತಹ ರುಚಿರ್ರೀ! ಅದು ಅನ್ನಲ್ಲ ಪರನ್ನವೇ ಸರಿ’ ಎಂದು ಬಾಲ್ಯದಿಂದಲೇ ನಿತ್ಯ ಸಾವೆ ಅನ್ನ ಸವಿಯುತ್ತಿರವ ಕೊಪ್ಪಳ ಜಿಲ್ಲೆ ನೆರೆಬೆಂಚಿ ಗ್ರಾಮದ ವೃದ್ಧ ಗ್ಯಾನಪ್ಪ ಕುರುಬರ ಕೇಳಿದವರ ಬಾಯಿಯಲ್ಲಿ ನೀರೂರುವ ಹಾಗೆ ಹೇಳುತ್ತಾರೆ. ಒಂದಿಷ್ಟು ತುಪ್ಪ, ಮಜ್ಜಿಗೆ, ಇಲ್ವೆ ಗೊಜ್ಜು ಹಾಕಿಕೊಂಡು ಸವಿದರೆ ಆಹಾಃ ಅದೆಂತಹ ಮಧುರ, ಜತೆಗೆ ಅದಕ್ಕೊಂದಿಷ್ಟು ಬೆಲ್ಲ ಸೇರಿಸಿದರಂತೂ ಶಿರಾದಂತೆ ರುಚಿಕಟ್ಟಾಗಿ ಸಿಹಿ ಖಾದ್ಯ ರೆಡಿಯಾಗುತ್ತದೆ. ಇನ್ನು ಬಾಣಂತಿಯರಿಗೆ ಹಾಗೂ ಶೀತದಿಂದ ಬಳಲುವವರಿಗಂತೂ ಈ ಸಾವೆ ಅನ್ನ ಹೇಳಿ ಮಾಡಿಸಿದ್ದು.

ಸಂಸ್ಕರಿಸುವುದು ಹೇಗೆ?

ನೆಲ್ಲಕ್ಕಿ, ನವಣೆಯಂತೆ ಈ ಸಾವೆ ಅಕ್ಕಿಯನ್ನು ಸಂಸ್ಕರಿಸಬೇಕು. ಹಿಟ್ಟಿನ ಗಿರಣಿಯಲ್ಲಿಯೇ ರವೆಯ ಹಾಗೆ ಬೀಸಿದರೆ ಅಕ್ಕಿ ಬರುತ್ತದೆ. ನಂತರ ಒರಳಿನಲ್ಲಿ ಒಂದಿಷ್ಟು ಒನಕೆ ಪೆಟ್ಟು ಹಾಕಿದರೆ ಮುಗೀತು ಬೆಳ್ಳನೆ ಅಕ್ಕಿ ಸಿದ್ಧ. ಹಿಂದೆ ಗಿರಣಿ ಇದ್ದಿಲ್ಲ, ಪ್ರತಿಯೊಬ್ಬರ ಮನೆಯಲ್ಲಿ ಸಾವೆ ಬೀಸುವ ಕಲ್ಲು ಇರುತಿದ್ದವು. ಅದರಲ್ಲಿಯೇ ಬೀಸಿ ಅಕ್ಕಿ ಬೇರ್ಪಡಿಸಿ ಬಾನ ತರಿಸುತ್ತಿದ್ದರು. ಅನ್ನ ಬೇಯುವಾಗಲೇ ಮನೆ ತುಂಬ ಘಮ-ಘಮ ಪರಿಮಳ ತುಂಬುತ್ತದೆ. ನಂತರ ಉಂಡವರ ಒಡಲೂ ತಣಿಯುತ್ತದೆ.

ಅವಸಾನದತ್ತ:

ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಬೆಳೆಯಾಗಿದ್ದ ಈ ಸಾವೆ ಬೆಳೆ ಇಷ್ಟೆಲ್ಲ ಗುಣಗಳನ್ನು ಹೊಂದಿದ್ದು ಒಣ ಬೇಸಾಯ; ಅದೂ ಬಂಜರು ನೆಲದಲ್ಲೂ ಬೆಳೆಯಲು ಸೈ ಎನಿಸಿಕೊಂಡಿದೆ. ಆದರೆ, ಇತ್ತೀಚೆಗೆ ಹಲವಾರು ಹೈಬ್ರಿಡ್ ತಳಿಗಳ ಬೀಜಗಳು ಬಂದಿರುವುದರಿಂದ, ಹಳ್ಳಿಗರು ನೆಲ್ಲಕ್ಕಿಯ(ಭತ್ತ) ಅನ್ನಕ್ಕೆ ಜೋತು ಬಿದ್ದಿರುವುದರಿಂದ, ಗೃಹಣಿಯರು ಸಾವೆ ಅಕ್ಕಿ ಬೀಸಲು ಬೇಸರಿಸಿಕೊಂಡಿರುವುದರಿಂದ, ಸ್ಥಳೀಯ ಮಟ್ಟದ ಈ ದೇಶಿಯ ಬೀಜವೊಂದು ಈಗ ಮರೆತು ಹೋಗುತ್ತಿದೆ. ಅಲ್ಲದೇ ಸಾವೆಯ ಗುಣವನ್ನೇ ಹೋಲುವ ಹಾರಕ, ಬರಗದಂತಹ ಅಕ್ಕಿಯ ಬೀಜಗಳು ಈಗ ಮಾಯವಾಗಿವೆ. ಈಗ ಅವುಗಳ ಹೆಸರಂತೂ ಹೆಚ್ಚು ಕಡಿಮೆ ರೈತರಿಗೆ ಜ್ಞಾಪಕವೇ ಇಲ್ಲ ಎನ್ನಿ. ಅದರ ಸಾಲಿಗೆ ಈ ಸಾವೆ ಸೇರುತ್ತದೆ. ಅಷ್ಟಿಷ್ಟು ಜಾಲ್ತಿಯಲ್ಲಿರುವ ನವಣೆ, ರಾಗಿ ಬಿಟ್ಟರೆ ತೃಣಧಾನ್ಯಗಳಲ್ಲಿ ಒಂದಾದ ‘ಸಾವೆ’ ಬೆಳೆ ಈಗಿನ ಪೀಳಿಗೆಯವರಿಗೆ ಅಷ್ಟೊಂದಾಗಿ ಪರಿಚಯವೇ ಇಲ್ಲ.

ಪೌಷ್ಟಿಕ ಧಾನ್ಯ:

ಸಾವೆ ತೆನೆ

ಹೆಚ್ಚಿನ ಆರೈಕೆ, ಖರ್ಚು- ವೆಚ್ಚಗಳಿಲ್ಲದೇ ಮಳೆಯಾಶ್ರಯದಲ್ಲಿಯೇ ಬೆಳೆಯುವ ಸಾವೆ ಕೀಟ ನಿರೋಧಕ ಶಕ್ತಿ ಹೊಂದಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕದ ಸೋಂಕಿಲ್ಲದೆಯೂ ಉತ್ತಮ ಬೆಳೆ ಬರುತ್ತದೆ. ಈಗಿನ ಕೃತಕ ಪೌಷ್ಟಿಕಾಂಶಗಳನ್ನು ಮೀರಿಸುವ ಶಕ್ತಿಯನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ನಿಧಾನವಾಗಿ ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಒಗ್ಗಿಕೊಳ್ಳುತ್ತಿರುವ ಕೃಷಿಯಲ್ಲಿ ನಮ್ಮದಲ್ಲದ ಬೀಜ ಸಂಸ್ಕೃತಿಯ ಹೇರಿಕೆಯಿಂದ ಸಾಂಪ್ರದಾಯಿಕ ಬೀಜ ಸಂಸ್ಕೃತಿಯ ಕೊಂಡಿ ಕಳಚುತ್ತಿದೆ.

ಇಂಥ ಸಂದರ್ಭದಲ್ಲೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ರೈತ ಶರಣಪ್ಪ ಕುರಿ ಪ್ರತಿ ವರ್ಷ ರಾಸಾಯನಿಕ ಸೋಂಕಿಲ್ಲದೇ ತನ್ನ ಮನೆ ಬಳಕೆಗೆ ಬೇಕಾಗುವಷ್ಟು ಸಾವೆ ಬೆಳೆಯುತ್ತಾ ಬೀಜಗಳನ್ನು ಇನ್ನೂ ಜೋಪಾನವಾಗಿ ಭದ್ರವಾಗಿಟ್ಟುಕೊಂಡಿದ್ದಾರೆ.

ಐದಾರು ತಿಂಗಳಲ್ಲಿಯೇ ಕೈಗೆ ಬರುವ ಈ ಬೆಳೆ ಮುಂಗಾರು ಹಂಗಾಮಿನಲ್ಲಿ ಮೂರು ಸಾಲು ಸಾವೆ ಒಂದು ಸಾಲು ತೊಗರಿ ಬೆಳೆಯಬಹುದು. ಬಿತ್ತನೆಗೆ ಎಕರೆಗೆ ಒಂದು ಕಿ.ಗ್ರಾಂ. ಬೀಜ ಸಾಕು, ಅಂತರ ಬೇಸಾಯ ಬಿಟ್ಟರೆ ಬೇರೇನೂ ಈ ಬೆಳೆ ನಿಮ್ಮಿಂದ ನಿರೀಕ್ಷಿಸದು. ಉತ್ತಮ ಬೆಳೆ ಬಂದರೆ ಎಳೆಂಟು ಚೀಲ ಗ್ಯಾರಂಟಿ. ಇನ್ನು ದನಕರುಗಳಿಗೆ ಉತ್ತಮ ಮೇವು ಆಗುತ್ತದೆ.

ಈಗ ಶರಣಪ್ಪ ಅವರ ಹೊಲದಲ್ಲಿ ಸಾವೆ ಬೆಳೆ ಕೊಯ್ಲಿಗೆ ಸಜ್ಜಾಗಿ ನಿಂತಿದೆ. ನಿಮ್ಮ ಹೊಲದಲ್ಲೂ ಮುಂದಿನ ವರ್ಷ ಈ ಸಾವೆ ಬಿತ್ತೊ ಯೋಚನೆ ಮಾಡಿದ್ರೆ ಉಚಿತ ಸ್ಯಾಂಪಲ್ ಬೀಜಕ್ಕಾಗಿ, ಶರಣಪ್ಪ ಕುರಿ, ನೆರೆಬೆಂಚಿ ಅಂಚೆ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು.