ಅದಾಗಲೇ ಧಾರವಾಡದಲ್ಲಿ ಗೆಳೆಯರ ಗುಂಪಿನಿಂದ ‘ಜಯಕರ್ನಾಟಕ’ ಮಾಸಪತ್ರಿಕೆ ಹೊರಡುತ್ತಿದ್ದು ,ಶ್ರೇಷ್ಠ ದರ್ಜೆಯ ಸಾಹಿತ್ಮಿಕ ಪತ್ರಿಕೆ ಎಂದು ಹೆಸರು ಗಳಿಸಿತ್ತು. ಆನಂದಕಂದರು ಬೆಂಗಳೂರಿನಿಂದ ಮರಳಿ ಧಾರವಾಡಕ್ಕೆ ಬಂದು ‘ಜಯಕರ್ನಾಟಕ’ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಸೇರಿಕೊಂಡರು. ಈಗಾಗಲೇ ಲಗ್ನವಾಗಿದ್ದು ಧಾರವಾಡದಲ್ಲಿ ಮನೆಮಾಡಿದರು.

[1]

ಆಗ ‘ಜಯಕರ್ನಾಟಕ’ ಪತ್ರಿಕೆಯ ಸಂಪಾದಕೀಯ ಹೊಣೆಯನ್ನು ಆನಂದಕಂದ, ಜಿ.ಬಿ. ಜೋಶಿಕ ಹಾಗೂ ಗೋವಿಂದರಾವ್‌ ಚುಳಕಿ ಈ ಮೂವರು ಹೊತ್ತಿದ್ದರು. ಪತ್ರಿಕೆ ಸಾಕಷ್ಟು ಹೆಸರುಗಳಿಸಿತ್ತು. ಪತ್ರಿಕೆಯ  ಜತೆ ಇತರ ಸಾಹಿತ್ಯಿಕ ಚಟುವಟಿಕೆಯೆಂದು ಈ ತ್ರಿಮೂರ್ತಿಗಳು ಸೇರಿ ೧೯೩೩ ರಲ್ಲಿ ಮನೋಹರ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ಆನಂದಕಂದರ ಮೊದಲ ಸಾಮಾಜಿಕ ಕಾದಂಬರಿ ‘ಸುದರ್ಶನ’ ಇದೇ ಗ್ರಂಥಮಾಲೆಯಿಂದ ಪ್ರಕಟವಾಯಿತು. ಗೆಳೆಯರಲ್ಲಿ ಒಂದಿಷ್ಟು ಭಿನ್ನಾಭಿಪ್ರಾಯ ತಲೆದೋರಿದಾಗ ಆನಂದಕಂದರು ಗ್ರಂಥಮಾಲೆಯಿಂದ ಹೊರಬಂದು, ಈಗಾಗಲೇ ಜಯಕರ್ನಾಟಕವನ್ನು ಬಿಟ್ಟಿದ್ದು, ಮತ್ತೆ ಬೆಳಗಾಂವಕರ ರಾಮಚಂದ್ರರಾಯರಿಗೆ ಸಹಾಯಕರಾಗಿ ‘ಜಯಕರ್ನಾಟಕ’ವನ್ನು ಸೇರಿದರು. ಈ ಕಾಲದಲ್ಲಿ ಆನಂದಕಂದರು ಧಾರವಾಡದಲ್ಲಿಯೇ ಖಾಯಂ ಆಗಿ ನೆಲೆ ಕಾಣಬೇಕಿತ್ತು.

ಇದೇ ಅವಧಿಯಲ್ಲಿ ವಿಜಯನಗರದ ೬೦೦ ವರ್ಷಗಳ ವಿಶೇಷ ಮಹೋತ್ಸವ ಜರುಗಲಿದ್ದು, ‘ಜಯಕರ್ನಾಟಕ’ದ ವಿಶೇಷ ಸಂಚಿಕೆಯನ್ನು ಪ್ರಕಟಿಸುವ ಸಿದ್ಧತೆ ನಡೆಯಿತು. ಸ.ಸ. ಮಾಳವಾಡರು ಸಂಪಾದನೆಯ ಹೊಣೆಯನ್ನು ಹೊತ್ತಿದ್ದು, ಆನಂದಕಂದರ ನೆರವು ಅವರಿಗೆ ತುಂಬ ಸಹಕಾರಿಯಾಗಿ ಸಂಚಿಕೆ ಅರ್ಥಪೂರ್ಣವಾಗಿ ಹೊರಬಂತು. ಈ ಸಂಚಿಕೆಯ ಮೊದಲ ಪುಟದಲ್ಲಿ ಆನಂದಕಂದರ ‘ನಮಗೆಯು ಹೆಸರೊಂದನು ತರಲಿ’ ಎಂಬ ಕವಿತೆ ನಾಡಿಗರನ್ನು ಬಡಿದೆಬ್ಬಿಸುವಂತಿತ್ತು.

“ಹಾಳು ಪಟ್ಟಣದ ಬಂಡೆಯ ಬಳಗದ
ಕೊರಗಿನ ಮೌನದ ಕೂಗನು ಕೇಳಿ!”

-ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತ ವಿಜಯನಗರದ ಬಂಡೆಗಲ್ಲುಗಳು,

“ಬರುವರೆ ಬರಲಿರುವರೆ ಯಾರಾದರು?
ಮರಳಿ ರಾಜ್ಯ ಕಟ್ಟುವರೇ?

ಅರಮನೆ-ಗುಡಿಗಳಿಗಿಂದೆ ಹೋಗಲಿ
ಸೆರೆಮನೆಗಾದರೂ ನಮ್ಮನು ಬಳಸಲಿ

ಬರಲಿರುವರು ಬೇಗನೆ ಬರಲಿ!
ನಮಗೆಯು ಹೆಸರೊಂದನು ತರಲಿ!”

-ಎಂದು ಕನ್ನಡನಾಡಿನ ಸುವರ್ಣಯುಗ ಮತ್ತೆ ಮರಳಿ ಬರಲಿ ಎಂದು ಕೊರಗಿನಿಂದಲೇ ಹಾರೈಸುವ ಬಂಡೆಗಲ್ಲುಗಳ ಈ ಬಯಕೆ ಹೃದಯಸ್ಪರ್ಶಿಯಾಗಿದೆ. ಆನಂದಕಂದರ ಕನ್ನಡಾಭಿಮಾನ ಅವರ ರಕ್ತದ ಕಣಕಣದಲ್ಲಿಯೂ ತುಂಬಿಕೊಂಡಿರುವುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಇದೇ ಕಾಲದಲ್ಲಿ ಆನಂದಕಂದರು ‘ಜಯಕರ್ನಾಟಕ’ ಗ್ರಂಥಮಾಲೆಯ ಸಂಪಾದಕರಾಗಿಯೂ ಉತ್ತಮ ದರ್ಜೆಯ ಗ್ರಂಥಗಳನ್ನು  ಪ್ರಕಟಿಸಿದರು. ಮಂಗನ ಮೆರವಣಿಗೆ, ತಿರುಕರ ಪಿಡುಗು, ಗರತಿಯ ಹಾಡು, ಬಿಸಿಲುಗುದರೆ, ಮೊದಲಾದವು ಪ್ರಸಿದ್ಧವಾದವು. ಜಯಕರ್ನಾಟಕವನ್ನು ಬಿಟ್ಟು ಕೆಲವು ದಿನ ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ದಲ್ಲಿಯೂ ಕೆಲಸ ಮಾಡಿದರು.

ಇತರ ಪತ್ರಿಕೆಗಳಿಂದ ನಿವೃತ್ತರಾಗಿ ಆನಂದಕಂದರು ೧೯೩೮ ರಲ್ಲಿ ಸ್ವಂತ ಪತ್ರಿಕೆಯಾದ ‘ಜಯಂತಿ’ಯನ್ನು  ಪ್ರಾರಂಭಿಸಿ, ಅದನ್ನು ಸ್ವಂತ ಮಗುವಿನಕ್ಕಿಂತಲೂ ಹೆಚ್ಚಾಗಿ ಆರೈಕೆ ಮಾಡಿ ೨೨ ವರ್ಷಗಳವರೆಗೆ ಬೆಳೆಸಿಕೊಂಡು ಬಂದರು. ಈ ಎಲ್ಲ ಚಟುವಟಿಕೆಗಳ ಜತೆ ಜತೆಯಲ್ಲಿಯೇ ಅಖಂಡವಾಗಿ ಸೃಜನಸಾಹಿತ್ಯ-ಸಂಶೋಧನಾ ಸಾಹಿತ್ಯವನ್ನು ನಿರ್ಮಿಸತೊಡಗಿದರು. ಸುಮಾರು ೧೩ ಕವನಸಂಕಲನಗಳು, ೭ ಕಥಾಸಂಕಲನಗಳು, ೬ ಕಾದಂಬರಿಗಳು, ೪ ನಾಟಕ ಸಂಗ್ರಹಗಳಲು, ೧ ಚರಿತ್ರೆ, ೪ ವಿಮರ್ಶೆ-ಸಂಶೋಧನೆ ಕೃತಿಗಳು, ೩ ಜನಪದ ಸಂಗ್ರಹ, ೧ ಅನುವಾದ, ೧೧ ಸಂಪಾದನೆಗಳು, ೪ ಮಕ್ಕಳ ಸಾಹಿತ್ಯ ಹೀಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿ ೫೪ ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೆ ನೂರಾರು ಬಿಡಿ ಲೇಖನಗಳು, ಜಯಂತಿಗಾಗಿ ಬರೆದ ಸಂಪಾದಕೀಯ, ವಿವಿಧ ಅಂಕಣಗಳು ಸೇರಿ ಸಾವಿರ ಸಂಖ್ಯೆ ಸಮೀಪಿಸಬಹುದು.

ತಮ್ಮ ಪತ್ರಿಕಾ ಸಂಪಾದನೆ, ಸಾಹಿತ್ಯ ಕೃಷಿಯ ಜತೆ ಧಾರವಾಡದ ಗೌರೀಶವಾಚನಮಾಲೆಗಾಗಿ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳನ್ನು ರಚಿಸಿಕೊಟ್ಟಿದ್ದು ವಿಶೇಷ. ಆನಂದಕಂದರು ರಚಿಸಿದ ಪಠ್ಯಗಳನ್ನು ಮುಂಬಯಿ ಪ್ರಾಂತದ ವಿದ್ಯಾ ಇಲಾಖೆಯು ತುಂಬಾ ಮೆಚ್ಚಿಕೊಂಡಿತ್ತು.

ಈ ನಡುವೆ ಅನೇಕ ಆಘಾತಕರ ಪ್ರಸಂಗಗಲು ಒದಗಿಬಂದವು. ೧೯೩೮ ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಹೋದರ ವಿಜಯೇಂದ್ರನ ಮರಣ, ೧೯೫೬ ರಲ್ಲಿ ೧೨ ವರ್ಷದ ಮಗಳು ಶಶಿಕಲಾ ಮರಣ, ೧೯೫೭ ರಲ್ಲಿ ಕ್ಷಯದಿಂದ ಬಳಲುತ್ತಿದ್ದ ಪತ್ನಿಯ ಮರಣ, ಇದಕ್ಕೂ ಮೊದಲು ಅನೇಕ ವರ್ಷಗಳಿಂದ ಪತ್ನಿಯ ಆರೈಕೆ, ಜಯಂತಿ ಪತ್ರಿಕೆಗಾದ ಸಾಲ ಸೋಲ-ಈ ಎಲ್ಲ ಮಾನಸಿಕ ನೆಮ್ಮದಿಯನ್ನು ಕಲಕುವ ಪ್ರಸಂಗಗಳಲ್ಲಿಯೂ ಆನಂದಕಂದರು ಸ್ಥಿತಪ್ರಜ್ಞನಾಗಿ, ನೀಲಕಂಠನಾಗಿ ಎಲ್ಲವುಗಳಿಗೆ ತಲೆಕೊಟ್ಟರು.

ಕೊನೆಗೆ ಇಳಿವಯಸ್ಸಿನಲ್ಲಿ ಆನಂದಕಂದರಿಗೆ ಪಾರ್ಶ್ವವಾಯು ತಗುಲಿ ಹಾಸಿಗೆ ಹಿಡಿದರೂ, ಬರವಣಿಗೆ ನಿಲ್ಲಿಸದಂತೆ ಹೇಳಿ ಬರೆಯಿಸುತ್ತಿದ್ದರು. ಬಾಯಿ ನಿಂತಾಗ ಮಾತ್ರ ಸಾಹಿತ್ಯ ಕೃಷಿ ಕಾರ್ಯವು ನಿಂತು ಹೋಯಿತು. ಸತತವಾಗಿ ಐದು ವರ್ಷ ಹಾಸಿಗೆ ಹಿಡಿದರೂ, ಅಂಗಾಂಗಳಲ್ಲಿ, ಚೈತನ್ಯವಿರುವವರೆಗೆ ಕನ್ನಡ, ನಾಡು, ಸಾಹಿತ್ಯದ ಉಸಿರೇ ಇವರದಾಗಿತ್ತು. ಅರ್ಧಶತಮಾನಕ್ಕೂ ಹೆಚ್ಚಾಗಿ ಆನಂದಕದಂರು ಧಾರವಾಡದಲ್ಲಿ ವಾಸ್ತವ್ಯ ಮಾಡಿದ್ದು ವಿವಿಧ ಬಾಡಿಗೆ ಮನೆಗಳಲ್ಲಿಯೇ ಸ್ವಂತ ಮನೆ ಮಾಡಿಕೊಳ್ಳಲಾಗದುದಕ್ಕೆ ಅವರ ಬಡತನವೇ ಕಾರಣ. ಆನಂದಕಂದರ ಕೊನೆಗಾಲದಲ್ಲಿ ಅವರ ಮಗ ಸುರೇಶ ತನ್ನ ನೌಕರಿ ಸಂಬಳದ ನೆರವಿನಿಂದ ಒಂದು ಮನೆಯನ್ನು ಕಟ್ಟಿಸಿದ್ದು, ಆ ನೂತನ ಕಟ್ಟಡದಲ್ಲಿ ಗೃಹ ಪ್ರವೇಶ ಮಾಡಿದ ಮರುದಿನವೇ ದಿ. ೩೦-೧೦-೧೯೮೨ ರಂದು ಆನಂದಕಂದರು ಎಲ್ಲರನ್ನಗಲಿ ಹೋದರು. ಐದು ವರ್ಷ ಹಾಸುಗೆ ಹಿಡಿದು, ಕೊನೆಕೊನೆಗೆ ಕೇವಲ ಎದೆಯಲ್ಲಿ ಟುಕುಟುಕು ಪ್ರಾಣವಿರಿಸಿಕೊಂಡು ನಿಶ್ಚೇಷ್ಟಿತರಾದ ಆನಂದಕಂದರ ಪ್ರಾಣ, ಹೊಸ ಸ್ವಂತ ಮನೆಯನ್ನು ಪ್ರವೇಶಿಸದ ತಕ್ಷಣ ಹೊರಟು ಹೋಗಿದ್ದು ಎಂಥ ಆಕಸ್ಮಿಕವೋ![1]  ೧೯೨೮ ರಲ್ಲಿ ಆನಂದಕಂದ ವಿವಾಹವಾಗಿದ್ದು ಪತ್ನಿ ತುಳಸಾಬಾಯಿ (ರುಕ್ಮಿಣಿಬಾಯಿ)ಯ ತವರುಮನೆ ಬೆಳಗಾವಿ ಜಿಲ್ಲೆಯ ಮಣಗುತ್ತಿ ಎಂಬ ಗ್ರಾಮ.