‘ಮೀನು’ ಎಂದಾಕ್ಷಣ ನೆನಪಿಗೆ ಬರುವುದು ನದಿ, ಸರೋವರ, ಕೊಳ ಅಥವಾ ಸಮುದ್ರಗಳು. ಏಕೆಂದರೆ ನೀರು ಅವುಗಳ ವಾಸಸ್ಥಾನ. ನೀರನ್ನು ಬಿಟ್ಟು ಅರ್ಧ ನಿಮಿಷವೂ ಅವು ಬದುಕಿರಲಾರವು. ಆದರೆ ನೀರನ್ನು ಬಿಟ್ಟು ನೆಲದ ಮೇಲೆ ನಡೆದು, ಆದರಲ್ಲೂ ಮರವೇರಿ ಹಾಯಾಗಿ ಕುಳಿತುಕೊಳ್ಳುವ ಮೀನುಗಳಿವೆ ಎಂದರೆ? ನಂಬುವುದು ತುಸು ಕಷ್ಟವೇ ಆದರೂ ಇದು ನಿಸರ್ಗ ಸತ್ಯ.

ಸಾಮಾನ್ಯವಾಗಿ ಪೆರಿಯೊಪ್‌ಥಲ್ಮಸ್ (Periophthalmus) ಪ್ರಭೇದಕ್ಕೆ ಸೇರಿದ ಈ ಮೀನುಗಳನ್ನು ಮಡ್ ಸ್ಕಿಪರ್ (Mud skipper) ಎಂದು ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ‘Mud’ ಎಂದರೆ ರಾಡಿ ಹಾಗೂ ‘Skip’ ಎಂದರೆ ಜಿಗಿಯುತ್ತ ಸಾಗು ಎಂದರ್ಥ. ಹೆಸರಿಗೆ ತಕ್ಕಂತೆ ಈ ಮೀನು ಸಮುದ್ರ ಹಾಗೂ ನದಿಗಳು ಸೇರುವ ಅಳಿವೆ ಪ್ರದೇಶದಲ್ಲಿ, ಉಬ್ಬರ ಇಳಿತವಿರುವ ವಲಯಗಳಲ್ಲಿ ಮೆದು ಮಣ್ಣಿನಲ್ಲಿ ಕುಂಟುತ್ತ, ತೆವಳುತ್ತ ಸಾಗುವುದಲ್ಲದೇ, ಸಮೀಪದಲ್ಲಿರುವ ಗಿಡವನ್ನೇರಿ, ಕುಳಿತುಕೊಳ್ಳುತ್ತವೆ. ಕೆಲವೊಮ್ಮೆ ಶತ್ರುಗಳಿಂದ ತಪ್ಪಿಸಿಕೊಳ್ಳಲು ಜಿಗಿಯುವ ಸಾಮರ್ಥ್ಯವೂ ಇವುಗಳಿಗಿದೆ.

ಇವು ನೀರು ಮತ್ತು ನೆಲ ಎರಡರಲ್ಲೂ ಬದುಕಬಲ್ಲವಾದರೂ, ಕಪ್ಪೆಗಳಂತೆ ಉಭಯವಾಸಿಗಳಲ್ಲ. ಬದಲಿಗೆ ಮೀನುಗಳ ಗುಂಪಿಗೆ ಸೇರಿದವುಗಳು. ನೀರಿನಲ್ಲಿ ಉಳಿದ ಮೀನುಗಳಂತೆ ಬದುಕುವ ಇವು ನೆಲದ ಮೇಲೆ ತಮ್ಮ ಈಜುರೆಕ್ಕೆಗಳನ್ನೇ ಕಾಲುಗಳಾಗಿ ಬಳಸಿಕೊಳ್ಳುತ್ತವೆ. ನೀರಿನಿಂದ ಹೊರಗಿರುವಾಗ ಇವುಗಳ ಚರ್ಮದ ಕೆಳಗಿರುವ ರಕ್ತನಾಳಗಳಲ್ಲಿ ನೇರವಾಗಿ ವಾತಾವರಣದ ಆಕ್ಸಿಜನ್ ಪ್ರವೇಶಿಸುತ್ತದೆೆ ಹಾಗೂ ಕಾರ್ಬನ್ ಡೈಆಕ್ಸೈಡ್ ಹೊರದೂಡಲ್ಪಡುತ್ತವೆ.

 

ಈ ಮೀನುಗಳಿಗೆ ಚೂಪಾದ ಹಲ್ಲುಗಳಿವೆ. ಹುಳುಹುಪ್ಪಟೆಗಳನ್ನು ತಿಂದು ಬದುಕುತ್ತವೆ. ಇವುಗಳಲ್ಲಿ ಕೆಲವು ನೀರಿನಲ್ಲಿಯ ಶೈವಲಗಳನ್ನು (algae), ಕೊಳೆತ ಎಲೆಗಳನ್ನು ಸಹ ತಿನ್ನುತ್ತವೆ.

ತೇವಯುಕ್ತ ಮೆದು ಮಣ್ಣಿನಲ್ಲಿ ಬಿಲಗಳನ್ನು ನಿರ್ಮಿಸಿ ಅವುಗಳಲ್ಲಿ ಮೊಟ್ಟೆಯನ್ನಿಡುವ ಈ ಮೀನುಗಳು ವಾಯುಮಾಧ್ಯಮದ ಮೂಲಕ ಶಬ್ದವನ್ನು ಗ್ರಹಿಸಬಲ್ಲವು. ಇವುಗಳ ಇನ್ನೊಂದು ವಿಶೇಷತೆಯೆಂದರೆ ಸುತ್ತಲೂ ದೃಷ್ಟಿ ಹಾಯಿಸಲು ಅನುಕೂಲವಾಗುವಂತೆ ಇವುಗಳ ತಲೆಯ ಮೇಲಿರುವ ಕಣ್ಣುಗಳು. ವಿಚಿತ್ರವೆಂದರೆ ತನ್ನ ಕಣ್ಣುಗಳನ್ನು ಮಿಟುಕಿಸಬಲ್ಲ ಏಕೈಕ ಮೀನು, ಈ ಪೆರಿಯೋಪ್‌ಥಲ್ಮಸ್!