ಒಂದಾನೊಂದು ಕಾಲದಲ್ಲಿ ಶಿವಾಪುರ ಅಂತ ಪಟ್ಟಣ. ಅಲ್ಲಿ ಬಲ್ಲಿದರಾಯ, ಬಡತಿಮ್ಮ ಅಂತ ಇಬ್ಬರು ಅಣ್ಣ ತಮ್ಮ ಇದ್ದರು. ಬಲ್ಲಿದರಾಯ ಅಣ್ಣ. ಶ್ರೀಮಂತ. ತಮ್ಮ ಬಡವನಾದ್ದರಿಂದ ಅವನಿಗೆ ಬಡತಿಮ್ಮನೆಂದೇ ಎಲ್ಲರೂ ಕರೆಯುತ್ತಿದ್ದರು. ಅದು ಪಟ್ಟಣವಾದ್ದರಿಂದ ಜನ ಸಂತೋಷದಿಂದ ಇರಲಿಲ್ಲ. ಅವರಿಗೆ ಬುದ್ಧಿ ಹೇಳಿ ಮಾರ್ಗದರ್ಶನ ಮಾಡುವಂಥ ನೆನಪುಗಳೂ ಇರಲಿಲ್ಲ. ಗಾದೆಗಳೂ ಇರಲಿಲ್ಲ. ನೆನಪು ಗಾದೆಗಳೇ ಇಲ್ಲವೆಂದ ಮೇಲೆ ಒಂದಾನೊಂದು ಕಾಲದ ಕಥೆಗಳಿಗೆ ಅವಕಾಶವೆಲ್ಲಿ?

ಹೀಗಿರುತ್ತ ಬಡತಿಮ್ಮ ತನ್ನ ಹೊಲದಲ್ಲಿ ಬೆಳೆದ ಸೌತೇಕಾಯಿ ಮಾರಲು ಸಂತೇದಿವಸ ಶಿವಾಪುರಕ್ಕೆ ಬಂದ. ಬಂದು ಸಂತೆಯ ಅಂಚಿನಲ್ಲಿ ನಿಂತು ತನ್ನ ಸೌತೇಕಾಯಿ ಚೀಲ ಬಿಚ್ಚಿದ್ದೇ ತಡ ತಾಜಾ ಸೌತೇಕಾಯಿ ನೋಡಿ ಗಿರಾಕಿಗಳು ಮುಗಿಬಿದ್ದರು. ನನಗೆ ತನಗೆ ಎಂದು ಸೌಕೇಕಾಯಿ ಕೊಳ್ಳುತ್ತಿರುವಾಗ ಅಲ್ಲೇ ಅಂಗಡಿ ಇಟ್ಟುಕೊಂಡಿದ್ದ ಬಲ್ಲಿದರಾಯ ಬಂದು ಗಿರಾಕಿಗಳಿಗೆ ಹೇಳಿದ.

ಬಲ್ಲಿದರಾಯ : ತಡೆಯಿರಿ, ತಡೆಯಿರಪ್ಪಾ, ನೀವು ತಗೊಂಡ ಸೌತೇಕಾಯಿಗಳಲ್ಲಿ ಕಹಿ ಯಾವುದು? ಸಿಹಿ ಯಾವುದು ಅಂತ ಗೊತ್ತೊ?

ಗಿರಾಕಿ : ಇಲ್ಲ. ಅದನ್ನು ಯಾರು ಹೇಳಲಾದೀತು?

ಬಲ್ಲಿದ : ಯಾಕೆ ನಾನಿಲ್ಲವ? ಇರಿ. ಈ ಸೌತೇಕಾಯಿ ಎಂಥ ಮಣ್ಣಲ್ಲಿ ಎಂಥ ನೀರುಂಡು ಬೆಳೀತು ಅಂತ ನಿಮಗ್ಗೊತ್ತೊ?

ಗಿರಾಕಿ : ಗೊತ್ತಿಲ್ಲ, ಅದು ಈ ರೈತನಿಗೆ ಗೊತ್ತು.

ಬಲ್ಲಿದ : ಆದರೆ ನಿಮಗೆ ಗೊತ್ತಿಲ್ಲವಲ್ಲ! ಅವನು ಸುಳ್ಳು ಹೇಳಬಹುದು.

ಗಿರಾಕಿ : ಸರಿ, ಮುಂದೆ?

ಬಲ್ಲಿದ : ಈ ಸೌತೇಕಾಯಿ ಆರೋಗ್ಯಕ್ಕೆ ಒಳ್ಳೆಯದೆ? ಅಪಾಯಕಾರಿಯೆ? ನಿಮಗೇನಾದರೂ ಗೊತ್ತೊ?

ಗಿರಾಕಿ : ಗೊತ್ತಿಲ್ಲ.

ಬಲ್ಲಿದ : ಗೊತ್ತು ಮಾಡಿಕೋಬೇಕಾದ್ದು ಅಗತ್ಯ ತಾನೇ? ಯಾಕಂತೀನಿ, ಈ ಸೌತೇಕಾಯಿ ನೀವು ತಿಂತೀರಿ. ಎಳೇಮಕ್ಕಳು ತಿಂತಾವೆ. ನಿಮ್ಮ ಮಡದಿ ತಿಂತಾಳೆ. ನೀವೇನು ತಿಂತೀರಿ ಅಂತ ಗೊತ್ತಿರಬೇಕು ತಾನೆ? ಯಾಕಂತೀನಿ, ಹೆಸರು ಗೊತ್ತಿಲ್ಲದ ಥರಾವರಿ ರೋಗಗಳು ಬರ‍್ತಾ ಇವೆ ದಿನ ನಿತ್ಯ. ಆ ಬಗ್ಗೆ ಕಾಳಜಿ ಬೇಡವೆ?

ಗಿರಾಕಿಗೆ ಇವನ ಮಾತಿನಿಂದ ಬೇಜಾರಾಗಿ “ಸ್ವಾಮಿ, ಒಟ್ಟಿನಲ್ಲಿ ನೀವೂ ಹೇಳೋದೇನು?” ಅಂದ.

“ಯಾವ ಸೌತೇಕಾಯಿ ಒಳ್ಳೇದು, ಯಾವುದು ಕೆಟ್ಟದ್ದು, ಯಾವುದನ್ನ ಕೊಳ್ಳಬೇಕು ಅಂತ ನಾನು ಹೇಳ್ತೀನಿ ಬನ್ನಿರಪ್ಪ” ಎಂದು ಹೇಳುತ್ತ ತನ್ನೊಂದಿಗೆ ಆ ಗಿರಾಕಿಗಳನ್ನು ಕರೆದುಕೊಂಡು ತನ್ನ ಅಂಗಡಿಗೆ ಹೋಗೇ ಬಿಟ್ಟ. ಹಾಗೆಯೇ ಸೌತೇಕಾಯಿ ಕೊಳ್ಳಬಂದ ಬೇರೊಬ್ಬ ಗಿರಾಕಿಯನ್ನೂ ತನ್ನೊಂದಿಗೆ ಕರೆದೊಯ್ದ. ಬಡತಿಮ್ಮ ನಿಬ್ಬೆರಗಾಗಿ “ಇಂಥಾ ಸೌತೇಕಾಯಿಗೆ ಹೆಸರಿಟ್ಟನಲ್ಲಾ ನಮ್ಮಣ್ಣ; ಆಯ್ತು ಇವನಲ್ಲ ಇನ್ನೊಬ್ಬ ಬಂದಾನು” ಎಂದು ಕಾಯುತ್ತಾ ಕೂತ. ಬಂದ ಇನ್ನೊಬ್ಬನೂ ಅಣ್ಣನ ಬಳಿಗೇ ಹೋದ. ಇವನು ಮತ್ತೊಬ್ಬನಿಗಾಗಿ ಮಗದೊಬ್ಬನಿಗಾಗಿ ಕಾಯುತ್ತ ಕೂತೇ ಕೂತ.

ಬಡತಿಮ್ಮ ಸಂಜೆಯವರೆಗೆ ಕೂತರೂ  ಯಾರೂ ಬರಲಿಲ್ಲ. ಸಂಜೆ ಮುಗಿಯಿತು. ಆಸು ಪಾಸು ಕೂತಿದ್ದ ತರಕಾರಿ ಮಾರಲು ಬಂದ ರೈತರು ತಂತಮ್ಮ ಹಳ್ಳಿಗಳಿಗೆ ಹೊರಟರು. ನಿರಾಸೆಯಿಂದ ಇವನೂ ಸೌತೇಕಾಯಿ ಮೂಟೆ ಹೊರಬೇಕೆನ್ನುವಷ್ಟರಲ್ಲಿ ಬಲ್ಲಿದರಾಯ ಇವನನ್ನ ತನ್ನ ಅಂಗಡಿಗೆ ಕರೆದ.

“ಸೌತೇಕಾಯಿ ಮಾರಾಟವಾಗಲಿಲ್ಲ ಅಂತ ಬೇಜಾರು ಮಾಡಿಕೋಬೇಡ ತಮ್ಮಾ, ಹೇಳು ನಿನ್ನ ಸೌತೇಕಾಯಿಗೆ ಎಷ್ಟು ಹೇಳ್ತೀಯಾ?”

ತಿಮ್ಮ : ಇದೊಳ್ಳೇದಾಯ್ತು! ನನ್ನ ಹತ್ತಿರ ಬಂದ ಗಿರಾಕಿಗಳನ್ನ ಕಹಿಕಾಯಂತ ಹೇಳಿ ಕರಕೊಂಡ್ಹೋದೆ!

ಬಲ್ಲಿದ : ಹೌದು, ಇದರಲ್ಲಿ ಕಹಿ ಕಾಯಿ ಕೂಡ ಇರಬಹುದಲ್ಲವೆ?

ತಿಮ್ಮ : ಹಾಗಂತ ಸೌತೇಕಾಯಿ ತಿನ್ನೋದನ್ನ ಬಿಡಬಹುದ?

ಬಲ್ಲಿದ : ಬಿಡಬಾರದು. ಅದಕ್ಕೆ ನಿನ್ನನ್ನು ಬಳಿಗೆ ಕರೆದೆ. ಹೇಳು, ನೀನು ನನಗೆ ಮೂಟೆಯನ್ನೇ ಕೊಟ್ಟರೆ ಹೊತ್ತುಕೊಂಡು ಹೋಗೋದೂ ತಪ್ಪುತ್ತದೆ. ನಾಳೆ ತರಬೇಕಿಲ್ಲ. ಮಾಲು ಕೊಡು, ಹಣ ತಗೊ. ಹೇಳು ಮೂಟೆಗಷ್ಟು?

ತಿಮ್ಮ : ಹತ್ತು ಹಣ.

ಬಲ್ಲಿದ : ಹತ್ತು ಹೆಚ್ಚಾಯಿತಲ್ಲ ತಮ್ಮ. ಎರಡು ಹಣ ತಗೊ. ಮೂಟೆ ತಿರುಗಾ ಮನೆಗೊಯ್ದು ಇನ್ನೊಂದು ವಾರದ ತನಕ ಕಾಯಬೇಕು, ಅಷ್ಟರಲ್ಲಿ ಅವೆಲ್ಲ ಕೊಳೀತಾವೆ, ತಿಪ್ಪೆಗೆಸೆಯಬೇಕು. ಅದರ ಬದಲು ಹೊಸ ಹಣ ಕೊಡ್ತೀನಿ. ತಗೊಂಡು ರಾಜನ ಹಾಗೆ ಸಿಳ್ಳೆ ಹಾಕ್ಕೊಂಡು ಮನೆಗೆ ಹೋಗು.

ತಿಮ್ಮ : ಇಡೀ ಆರು ತಿಂಗಳು ಬೆಳೆದ ಸೌತೇಕಾಯಿಗೆ ಎರಡೇ ಹಣ!

ಬಲ್ಲಿದ : ಸರಿಯಪ್ಪ, ಗೊಣಗಬೇಡ, ನೀನು ನನ್ನ ತಮ್ಮನಾದ್ದರಿಂದ ನಾನೇ ಉದಾರನಾಗ್ತೀನಿ.  ಮೂರು ಹಣ ತಗೊ. ಲೇ ಮೂಟೆ ಇಳಿಸಿಕೊಳ್ರಯ್ಯ.

ಅಂತ ಆಳುಗಳಿಗೆ ಹೇಳಿದ. ಆಳು ಬಂದು ಸೌತೇಕಾಯಿ ಮೂಟೆ ತಗೊಂಡು ಇಟ್ಟ. ತಿಮ್ಮನಿಗೆ ಬೆಳ್ಳಿಗೆಯಿಂದ ಬಿಸಿಲಿನಲ್ಲಿ ಕೂತ ಆಯಾಸ, ಹಸಿವಾಗಿತ್ತು. ಒಂದು ಲೋಟ ನೀರು ತರಿಸಿ ಕುಡಿದು ಇನ್ನೇನು ಹೊರಡುವಷ್ಟರಲ್ಲಿ ಒಬ್ಬ ಗಿರಾಕಿ ಕುದುರೆಗಾಡಿಯಲ್ಲಿ ಬಂದು ಅಂಗಡಿ ಮುಂದೆ ನಿಲ್ಲಿಸಿ ಇಳಿದ.

ಗಿರಾಕಿ : ಏನು ಸಾವ್ಕಾರ‍್ರೇ, ಅರಮನೆಗೆ ಒಂದು ಮೂಟೆ ಸೌತೇಕಾಯಿ ಬೇಕಲ್ಲ; ಇದೆಯೊ?

ಬಲ್ಲಿದ : ಇಕಾ ರಾಜರಿಗೋಸ್ಕರವೇ ಕೊಂಡೆ ಸ್ವಾಮಿ, ಇಲ್ಲೇ ಇದೆ. ಈಗಷ್ಟೆ ತೋಟದಿಂದ ಬಂದದ್ದು.

ಗಿರಾಕಿ : ಎಷ್ಟು ಹಣ?

ಬಲ್ಲಿದ : ನೂರೈವತ್ತು ಹಣ.

ಗಿರಾಕಿ : ನೂರೈವತ್ತು ಹೆಚ್ಚಾಯಿತಲ್ಲ; ಅಲ್ಲದೆ ಇರದಲ್ಲಿ ನಮಗೂ ಅಷ್ಟಿಷ್ಟು ಮಿಗಬೇಕಲ್ಲವೆ? ನೂರಿಪ್ಪತ್ತು ತಗೊಳ್ಳಿ.

ಎಂದು ಹಣ ಕೊಟ್ಟು ಸೌತೇಕಾಯಿ ತಗೊಂಡು ಹೋಗೇ ಬಿಟ್ಟ! ತಿಮ್ಮನಿಗೆ ಬಹಳ ಅಸಮಾಧಾನವಾಯ್ತು.

“ಇದು ನ್ಯಾಯವೇ ಅಣ್ಣ? ಆರು ತಿಂಗಳು ಮನೇ ಮಂದಿ ಕಷ್ಟಪಟ್ಟು ಬೆಳೆದ ಬೆಳೆಗೆ ಮೂರೇ ಹಣ! ನೀನು ಈಗಲೇ ಕೊಂಡು ಇಲ್ಲೇ ಕೂತು ಈಗಷ್ಟೇ ಮಾರಿದ್ದಕ್ಕೆ ನೂರಿಪ್ಪತ್ತು ಹಣ!”

ಬಲ್ಲಿದರಾಯ : ನಿಮ್ಮ ಆರು ತಿಂಗಳ ಶ್ರಮಕ್ಕೆ ನನ್ನ ಮೂರು ಮಾತು ಸಮ.

ತಿಮ್ಮ : ಇದು ನ್ಯಾಯವೇ?

ಬಲ್ಲಿದ : ಈಗಿನ ಕಾಲದಲ್ಲಿ ನ್ಯಾಯ ಎಲ್ಲಿದೆಯಪ್ಪಾ? ಎಲ್ಲೆಲ್ಲೂ ಇರೋದು ಅನ್ಯಾಯ ಮಾತ್ರ. ಅನ್ಯಾಯದಲ್ಲಿ ಬದುಕೋದೇ ಲೇಸು.

ತಿಮ್ಮ : ಉಂಟೆ ಉಂಟೆ? ಅನ್ಯಾಯಕ್ಕೆ ತಾತ್ಕಾಲಿಕ ಸುಖ ಸಿಕ್ಕಬಹುದು. ಆದರೆ ಕೊನೇತನಕ ಬದುಕೋದು ನ್ಯಾಯ ಮಾತ್ರ!

ಬಲ್ಲಿದ : ಆಯಿತಯ್ಯ, ನಿನಗೆ ಆ ರೀತಿ ನಂಬಿಕೆ ಇದ್ದರೆ ನನ್ನ ತಕರಾರಿಲ್ಲ. ನನ್ನ ನಂಬಿಕೆಯಂತೆ ನಾನು ಬದುಕಿದರೆ ನಿಂದೇನೂ ತಕರಾರಿಲ್ಲ ತಾನೆ?

ತಿಮ್ಮ : ಹಾಗಿದ್ದರೆ ನೀನು ನನಗೆ ಅನ್ಯಾಯ ಮಾಡಿದ್ದೀ ಅಂತ ಒಪ್ಪಿಕೊಂಡ ಹಾಗಾಯ್ತಲ್ಲ?

ಬಲ್ಲಿದ : ಇರಬಹುದು, ಮೋಸಗಾರನ ಮುಖದ ಮುಂದೇ ಮೋಸಗಾರ ಅಂತ ಹೇಳಿ ಅವಮಾನ ಮಾಡೋದು ಅಪಾಯ ಕಣಪ್ಪ.

ತಿಮ್ಮ : ಅದೇನೋ ನನಗೆ ಗೊತ್ತಿಲ್ಲ. ಆ ನೂರಿಪ್ಪತ್ತು ಹಣದಲ್ಲಿ ನನಗಿನ್ನೂ ಪಾಲಿದೆ, ಕೊಡು. ಅದು ನ್ಯಾಯ.

ಬಲ್ಲಿದ : ನನ್ನದು ಅನ್ಯಾಯ ಅಂತ ಹೇಳಿದ ಮೇಲೆ ನ್ಯಾಯದ ಮಾತ್ಯಾಕೆ ಆಡಬೇಕು? ಇನ್ನೊಮ್ಮೆ ಹೇಳುತ್ತೇನೆ ಕೇಳು. ಈ ಪ್ರಪಂಚದಲ್ಲಿರೋದು ಅನ್ಯಾಯ ಮಾತ್ರ. ಆದ್ದರಿಂದ ಬದುಕುತ್ತೇನೆ. ನ್ಯಾಯವಂತನಾದ ನೀನು ನನ್ನಿಂದ ಇನ್ನಷ್ಟು ಹಣ ಬಯಸಬಾರದು.

ಬಲ್ಲಿದರಾಯನ ವಾದವನ್ನು ಒಪ್ಪುವುದು ತಿಮ್ಮನಿಗೆ ಸಾಧ್ಯವಾಗಲೇ ಇಲ್ಲ. ಕಣ್ಣೆದುರಿನಲ್ಲೇ ನಡೆದ ಈ ವ್ಯವಹಾರ ಅವ್ಯವಹಾರ ಅಂದ. ಅನ್ಯಾಯ ಅಂದ. ಜಗಳವಾಡಿದ. ಆಗಲೂ ಅಣ್ಣ ದಾರಿಗೆ ಬರಲಿಲ್ಲ. ಕೊನೆಗೆ ಬಲ್ಲಿದರಾಯ ಉಪಾಯ ಮಾಡಿ ಹೇಳಿದ :

“ಒಂದು ಕೆಲಸ ಮಾಡೋಣವ? ಪ್ರಪಂಚದಲ್ಲಿರೋದು ನ್ಯಾಯವೋ? ಅನ್ಯಾಯವೋ? ಅಂತ ಪಣ ಕಟ್ಟೋಣ. ನೀನೇ ಒಪ್ಪಿದ ಮೂರು ಜನರನ್ನ ಕೇಳೋಣ. ಅವರು ನಿನ್ನ ಪರವಾಗಿ ಹೇಳಿದರೆ ಇಗೋ ಈ ನೂರಿಪ್ಪತ್ತು ಹಣವೆಲ್ಲಾ ನಿನ್ನದು ಆದೀತೊ?”

ತಮ್ಮನಿಗೆ ಏನು ಹೇಳಬೇಕೆಂದು ತಿಳಿಯದೆ “ಆಗಬಹುದು” ಎಂದು.

“ಆ ಮೂರೂ ಜನ ನನ್ನ ಪರವಾಗಿ ಮಾತಾಡಿದರೆ?”

ಎಂದು ಮೆಲ್ಲಗೆ ಬಲ್ಲಿದ ಹೇಳಿ ವ್ಯಂಗ್ಯ ನಕ್ಕ. ತಿಮ್ಮನಿಗೆ ಅವಮಾನವಾದಂತಾಗಿ ಹೇಳಿದ: “ಮೂವರಲ್ಲಿ ಒಬ್ಬನೂ ನ್ಯಾಯದ ಪರವಾಗಿ ಮಾತಾಡದಿದ್ದರೆ ನನ್ನ ಆಸ್ತಿಯನ್ನೆಲ್ಲಾ ನಿನಗೇ ಬಿಟ್ಟುಕೊಡುತ್ತೇನೆ” ಅಂದ! ಪರೀಕ್ಷೆಗೆ ಇಬ್ಬರೂ ಹೊರಟರು.

ಇಂತೆಂಬ ಪಂಥವ ಕಟ್ಟಿ ಇಬ್ಬರೂ ಬರುತ್ತಿರಲಾಗಿ ಎದುರಿಗೊಬ್ಬ ಕಡುಬಡವ ಬಂದ. “ಈ ಬಡವ ಇಷ್ಟು ನೊಂದವನಾದರೂ ಬೆವರು ಸುರಿಸಿ ದುಡಿಯುತ್ತಾನಲ್ಲ, ಇವನೂ ನನ್ನಂಥವನೇ ಇರಬೇಕೆಂದು ತಮ್ಮ ಕೇಳಿದ:

“ಅಯ್ಯಾ ಈ ಪ್ರಪಂಚದಲ್ಲಿ ನ್ಯಾಯ ಇದೆಯಾ? ಅನ್ಯಾಯ ತುಂಬಿದೆಯಾ? ನಾವು ಬಾಳಬೇಕಾದ್ದು ನ್ಯಾಯದಿಂದಲೊ? ಅನ್ಯಾಯದಿಂದಲೋ?

ಪ್ರಶ್ನೆ ಕೇಳಿದ್ದೇ ಬಡವನಿಗೆ ತಿಮ್ಮನನ್ನು ನೋಡಿ ಕರುಣೆ ಬಂತು.

“ಅಯ್ಯೋ ಪುಣ್ಯಾತ್ಮ! ಈಗಿನ ಕಾಲದಲ್ಲಿ ನ್ಯಾಯ ಎಲ್ಲಿ ಸಿಗುತ್ತದೆ ನಿನಗೆ? ನನ್ನನ್ನೇ ನೋಡು, ಇಪ್ಪತ್ತು ವರ್ಷಗಳಿಂದ ದುಡಿಯುತ್ತಿದ್ದೇನೆ. ದುಡಿದದ್ದು ಹೊಟ್ಟೆಗೂ ಸಾಲದು. ಬಟ್ಟೆಗೂ ಸಾಲದು. ಸಿಗೋ ಅಲ್ಪದರಲ್ಲಿ ಯಜಮಾನ ಒಂದಿಷ್ಟು ಕದೀತಾನೆ. ದೇವರ ದಯದಿಂದ ಹೆಂಡತಿ, ಮಕ್ಕಳಿಲ್ಲ. ಅವರೂ ಇದ್ದಿದ್ದರೆ ಉತ್ತರ ಹೇಳೋದಕ್ಕೆ ನಿನ್ನ ಮುಂದೆ ನಾನೂ ಇರ‍್ತಿರಲಿಲ್ಲ! ಇಂಥಾ ಕಾಲದಲ್ಲಿ ಅನ್ಯಾಯದಿಂದ ಬದುಕೋದೆ ಮೇಲು;”

ಎಂದು ಹೇಳಿ ಪ್ರತಿಕ್ರಿಯೆಗೂ ಕಾಯದೆ ಹೋಗಿಬಿಟ್ಟ. ಒಳ್ಳೆಯ ವಾಕ್ಯ ಹೇಳುವನೆಂದು ನಂಬಿಕೆ ಮೂಡಿಸಿದ್ದ ಕಡುಬಡವ ಮುಖಕ್ಕೆ ಮಸಿ ಹಚ್ಚಿದ ಹಾಗೆ ಮಾತಾಡಿ ಮಾಯವಾದ. ತಿಮ್ಮ ಬೆಕ್ಕಸ ಬೆರಗಾಗಿ ನಿಂತಿದ್ದಾಗ “ನನ್ನ ಮಾತು ನಿಜ ಅನ್ನೋದಕ್ಕೆ ಒಂದನೇ ಪುರಾವೆ ಸಿಕ್ಕಿತಲ್ಲ ತಮ್ಮಾ!” ಎಂದು ಹೇಳಿ ಬಲ್ಲಿದರಾಯ ಕೊಂಕು ನಗೆ ನಕ್ಕ.

ಮತ್ತೆ ಮುಂದೆ ಬಂ‌ದರು. ಗಳಿಗೆ ಸಮಯದಲ್ಲಿ ದೊಡ್ಡಂಗಡಿ ಸಾವ್ಕಾರ ಬಂದ. ಆತ ಆ ತಗ್ಗಿನಲ್ಲಿ ಪ್ರಾಮಾಣಿಕತೆಗೆ ಪ್ರಮಾಣವಾದಾತ. ನಿಜಕ್ಕೆ ನಿಜಗುಣಿಯೆಂದು ಹೆಸರು ಮಾಡಿಕೊಂಡಾತ.ತಿಮ್ಮ ಬಂದು ನಮಸ್ಕಾರ ಮಾಡಿ “ಸ್ವಾಮೀ ನೀವು ದೊಡ್ಡವರು. ನಮ್ಮ ಪ್ರಶ್ನೆಗೆ ಬೆಲೆಯುಳ್ಳ ಉತ್ತರ ಕೊಡಿರಿ” ಎಂದು ನ್ಯಾಯನ್ಯಾಯಗಳ ಬಗ್ಗೆ ಕೇಳಿದ. ಆತ ಕಡ್ಡಿ ಮುರಿದು ಎರಡು ತುಂಡು ಮಾಡಿ ಒಂದನ್ನು ತಾನಿಟ್ಟುಕೊಂಡು ಇನ್ನೊಂದನ್ನು ತಿಮ್ಮನ ಕೈಗಿಟ್ಟು ಹೇಳಿದ:

“ತಿಮ್ಮ, ನಾನು ವ್ಯಾಪಾರಕ್ಕಿಳಿದಾಗಿನಿಂದ ನಿಜ ಹೇಳ್ತಿರೋದು ಇದೇ ಮೊದಲ ಸಲ. ನನ್ನ ಮಾತು ಕೇಳು: ಈ ಪ್ರಪಂಚದಲ್ಲಿ ನ್ಯಾಯ ಅಂಬೋದು ಇಲ್ಲ. ಮೈತುಂಬಿದ ದೇವರೇ ಸುಳ್ಳು ಹೇಳ್ತಾವೆ. ವ್ಯಾಪಾರ ಮಾಡಬೇಕಾದರೆ ನಿಜವಾಗಿ ನಿಜ ಹೇಳ್ತಿದ್ದೇನೆ ಅಂತಲೇ ಸಾವಿರ ಸುಳ್ಳು ಹೇಳಬೇಕಾಗುತ್ತದೆ. ಸಾವಿರ ವಂಚನೆ ಸಾವಿರ ದ್ರೋಹ ಮಾಡಬೇಕಾಗುತ್ತದೆ. ಇಲ್ಲಾ ಅಂದರೆ ಜೀವನ ಸಾಗೋದಿಲ್ಲ. ಆದ್ದರಿಂದ ಅನ್ಯಾಯದಿಂದ  ಬದುಕೋದು ಮೇಲು ಕಣಪ್ಪ.”

ಬಲ್ಲಿದರಾಯನಿಗೆ ಇದನ್ನು ಕೇಳಿ ಸಂತೋಷವಾಯಿತು. “ಭಲೇ ಸಾವ್ಕಾರ‍್ರೇ” ಅಂದ. “ತಮ್ಮಾ ನನ್ನ ಮಾತಿಗೆ ಎರಡನೇ ಪುರಾವೆ ಸಿಕ್ಕಿತು ಎಂದು ವಿಜಯದ ನಗೆ ನಕ್ಕ. “ಇನ್ನೂ ಒಂದು ಬಾಕಿ ಇದೆ ಇರಪ್ಪಾ” – ಅಂದ ತಿಮ್ಮ.

ಈ ಸಲ ಬಹಳ ಕಾಳಜಿಯಿಂದ ಮೂರನೆಯ ವ್ಯಕ್ತಿಯನ್ನು ಆರಿಸಬೇಕಾಯಿತು. ಅಂಥಿಂಥವರು ಎದರುಗೆ ಬಂದರೂ ತಿಮ್ಮ ನಿವಾರಿಸಿದ. ಬಹಳ ಹೊತ್ತು ಕಳೆದ ಮೇಲೊಬ್ಬ ಸನ್ಯಾಸಿ ಎದುರಾದ. ತಿಮ್ಮನಿಗೆ ಸಂತೋಷವಾಯಿತು. ಆತ ದೊಡ್ಡ ಮಠವೊಂದರಲ್ಲಿ ನ್ಯಾಯನೀತಿಗಳ ಬಗ್ಗೆ ಪ್ರವಚನ ಭಾಷಣ ಮಾಡುವುದನ್ನ ಕೇಳಿದ್ದ. ತಿಮ್ಮ ಓಡಿಹೋಗಿ ಅವನ ಕಾಲು ಮುಟ್ಟಿ ನಮಸ್ಕರಿಸಿ ನೀವಾದರೂ ಸರಿಯಾದ ಉತ್ತರ ಹೇಳಿರೆಂದು ಅಂಗಲಾಚಿ ಪ್ರಶ್ನೆ ಕೇಳಿದ. ಸನ್ಯಾಸಿ ವಿಚಾರ ಮಾಡಿ ಕೇಳಿದ:

“ನಿಜ ಹೇಳಬೇಕೋ? ಸುಳ್ಳು ಹೇಳಬೇಕೋ?”

“ದಯಮಾಡಿ ನಿಜ ಹೇಳಿ ಗುರೂಜಿ”

“ಹಾಗಿದ್ದರೆ ಕೇಳು. ಈ ಪ್ರಪಂಚದಲ್ಲಿ ನ್ಯಾಯ ನೀತಿ ಇಲ್ಲ. ನೀನು ಅಂಗಲಾಚಿದ್ದರಿಂದ ನಿಜ ಹೇಳಿದೆ! ನಿಮ್ಮ ಪ್ರವಚನದಲ್ಲಿ ‘ನ್ಯಾಯನೀತಿ’ ಇದೆ ಅಂತೀರಲ್ಲ? ಅಂತ ಮಾತ್ರ ಕೇಳಬೇಡ.”

ಎಂದು ಹೇಳಿ ಸರ ಸರ ಮುಂದೆ ಹೋದ. ತಿಮ್ಮ ಆಘಾತ ಹೊಂದಿ, ತಲೆ ಮೇಲೆ ಕೈಹೊತ್ತು ಕೂತ.

ಬಲ್ಲಿದರಾಯ ಉತ್ಸಾಹದಿಂದ ಹಾರಾಡಿದ, ಆದರೂ ಸಹಾನುಭೂತಿಯ ಅಭಿನಯ ಮಾಡುತ್ತ ಹೇಳಿದ:

“ನೋಡು ತಿಮ್ಮಾ,  ನಿನ್ನ ಹೊಲ ಮನೆ ಮಾರಿದರೂ ನೂರು ಹಣ ಸಿಗೋದಿಲ್ಲಂತ ನನಗ್ಗೊತ್ತು. ಆದರೂ ಅಷ್ಟಾಯ್ತು ಅಂತ ನಾನು ದಯಮಾಡಿ ತಿಳಿದುಕೊಳ್ತೇನೆ. ಅದು ಬಿಟ್ಟು ನಿನ್ನ ಹತ್ತಿರ ಏನಿಲ್ಲ ಅಂತಲೂ ನನಗ್ಗೊತ್ತು. ನಾನಾಗಲೇ ಕೊಟ್ಟ ಮೂರು ಹಣವನ್ನಾದರೂ ಕೊಡು. ಪಣ ಗೆದ್ದುದಕ್ಕೆ ಅಷ್ಟಾದರೂ ಬರಲಿ. ಮನೆ ನೀನೇ ಇಟ್ಟುಕೊ. ಮುಂದೆ ಅನುಕೂಲವಾದಾಗ ಬೇರೆ ಕಡೆ ಹೋಗೀಯಂತೆ. ಸದ್ಯಕ್ಕೆ ನನಗದು ಬೇಡ. ಮನೆ ಬಿಟ್ಟದ್ದಕ್ಕೆ ವಂದನೆ ಹೇಳಪ್ಪಾ. ಅದಿರಲಿ ನಿನ್ನ ಹೊಲ ಮಾತ್ರ ಇಂದಿನಿಂದ ನನ್ನದೇ. ಆಯ್ತು ನಾಳೆಯಿಂದ ಹೊಲದ ಕಡೆಗೆ ಸುಳಿಯಬೇಡ”

ಎಂದು ಹೇಳಿ ತಿಮ್ಮನ ಜೇಬಿಗೆ ಕೈಯಿಳಿಸಿ ತಾನು ಕೊಟ್ಟಿದ್ದ ಮೂರೂ ಹಣಗಳನ್ನು ತಕ್ಕೊಂಡು ನಗುತ್ತ ತನ್ನಂಗಡಿಗೆ ಹೋದ. ತಿಮ್ಮ ತಲೆ ತಗ್ಗಿಸಿಕೊಂಡು ಮನೆಯ ಕಡೆಗೆ ಹೊರಟ.

ಮನೆಯಲ್ಲಿದ್ದ ತಿಮ್ಮನ ಹೆಂಡತಿಗೆ ವಿಷಯ ತಿಳಿದು ಕೆಂಡವಾದಳು. “ನೂರು ಹಣದ ಸೌತೇಕಾಯಿಗಳನ್ನು ಮೂರು ಹಣಕ್ಕೆ ಕೊಂಡು ಆ ಮೂರನ್ನೂ ಪಣ ಕಟ್ಟಿ ಕಸಿದುಕೊಂಡದ್ದು ಸಾಲದೆ? ಪಣ ಕಟ್ಟಿ ಸೋಲಿಸಿ ಮನೆ ಹೊಲಗಳನ್ನು ಕಸಿಯೋದ! ದೇವರೇ ದೇವರೇ, ನಿನಗೆ ಕಣ್ಣಿಲ್ಲವೆ? ಇದಕ್ಕಿಂತ ಅನ್ಯಾಯ ಬೇಕೆ? ಈಗ ಮಕ್ಕಳು ಹಸಿದಿವೆ. ಅವಕ್ಕೇನು ಹಾಕೋಣ?” – ಎಂದು ತನ್ನಲ್ಲಿದ್ದ ಎಲ್ಲಾ ಕಣ್ಣೀರನತ್ತಳು. ನಿಮ್ಮಣ್ಣನ ಭಾಗ್ಯ ಬೂದಿಯಾಗಲೆಂದು ನೆಲ ಬಡಿದು ಶಾಪಹಾಕಿದಳು. ಅಷ್ಟರಲ್ಲಿ ತಮ್ಮನೇ ಮುಂದಾಗಿ ಬಂದು “ನಮ್ಮ ದುರ್ದೈವಕ್ಕೆ ಅವನಿಗ್ಯಾಕೆ ಶಾಪ ಹಾಕುತ್ತೀ?” ಎಂದು ಸಮಾಧಾನ ಹೇಳಿದ. ಅವಳಿಗೂ ನಿಜವೆನಿಸಿ “ಆಯ್ತಲ್ಲ, ಹೋಗಿ ಅದೇ ನಿಮ್ಮ ಅಣ್ಣನ ಹತ್ತಿರ ಒಂದು ಬೊಗಸೆ ಹಿಟ್ಟನ್ನಾದರೂ ಕಡ ತನ್ನಿರಿ. ಮಕ್ಕಳಿಗೆ ಗಂಜಿ ಅಂಬಲಿಯನ್ನಾದರೂ ಕುದಿಸಿ ಹಾಕೋಣ” ಎಂದಳು. ತಮ್ಮ ವಾದ ಮಾಡದೆ ಬುಟ್ಟಿ ತಗೊಂಡು ಅಣ್ಣನ ಮನೆಗೆ ನಡೆದ.

ಬಡತಿಮ್ಮ ಸಂಕೋಚದಿಂದಲೇ ನಾಲ್ಕು ಮೆಟ್ಟಲೇರಿ ಮರದ ಕುದುರೆ ಬಾಗಿಲು ದಾಟಿದ. ಬಣ್ಣದ ಚಾವಡಿಯಲ್ಲಿ ನಾಲ್ಕು ಕಾಲಿನ ಗದ್ದಿಗೆಯ ಮೇಲೆ ತನ್ನ ಪ್ರೀತಿಯ ಮಗಳೊಡನೆ  ಚದುರಂಗದ ಕಾಯಿ ನಡೆಸುತ್ತ ಅವಳಿಗೆ ಕಲಿಸುತ್ತ ಬಲ್ಲಿದರಾಯ ಕೂತಿದ್ದ. ಬಡತಿಮ್ಮ ಎದುರು ಬಂದು ವಂದೆನ ಸಲ್ಲಿಸಿದ. ಬಲ್ಲಿದರಾಯ ದಯಮಾಡಿ “ಏನಯ್ಯಾ ತಮ್ಮಾ ಇಲ್ಲೀತನಕ ಬಂದೆ?” ಅಂದ. ತಮ್ಮ ಹೇಳಿದ:

“ಅಣ್ಣಾ ಇದ್ದ ಹೊಲ ತಗೊಂಡೆ. ಕೈಲಿರೋ ಮೂರೂ ಹಣ ಕಿತ್ತುಕೊಂಡೆ. ಮಕ್ಕಳು ಹಸಿದಿವೆ. ಮನೆಯಲ್ಲಿ ಒಂದು ಬೊಗಸೆ ಹಿಟ್ಟಿಲ್ಲ. ಒಂದು ಪಾವು ಹಿಟ್ಟು ಕಡ ಕೊಟ್ಟಿರುತ್ತೀಯ?”

ಬಲ್ಲಿದ : ಅಯ್ಯೋ ಪಾಪ ಹೀಗಾಯ್ತೇನಯ್ಯಾ? ಇಂಥ ಸಂದರ್ಭದಲ್ಲಿ ಸಹಾಯ ಮಾಡದಿದ್ದರೆ ಹ್ಯಾಗಪ್ಪಾ? ನೀನಲ್ಲದಿದ್ದರೂ ನಿನ್ನ ಮಕ್ಕಳಿಗಾಗಿಯಾದರೂ ಮರುಗಲೇಬೇಕಲ್ಲ. ಹೋಗಲಿ ಆಡ ಇಡೋದಕ್ಕೆ ಏನಾದರೂ ತಂದಿದ್ದೀಯಾ?

ತಿಮ್ಮ : ನನ್ನ ಹತ್ತಿರ ಏನಿದೆ ಅಣ್ಣಾ? ಇದ್ದೊಂದು ಹೊಲ ನೀನೇ ತಗೊಂಡೆ. ಮನೆ ನೀನೇ ಕೊಟ್ಟಿದ್ದರಿಂದ ಅದೊಂದು ಸೂರಿನ ನೆರಳು ಇನ್ನೂ ಇದೆ. ಅಡ ಏನು ತರಲಿ?

ಬಲ್ಲಿದರಾಯ ಈಗ ಮಗಳನ್ನು ಒಳಗೆ ಕಳಿಸಿ ಹೇಳಿದ:

ಬಲ್ಲಿದ : ನೋಡಯ್ಯಾ, ನ್ಯಾಯದಿಂದ ಬದುಕೋನು ನೀನು. ನಾನಾದರೋ ಅನ್ಯಾಯದಿಂದ ಬದುಕೋನು. ನಿನಗೆ ಸಹಾಯ ಮಾಡಬೇಕಂತ ದೊಡ್ಡ ಮನಸ್ಸು ಮಾಡಿಬಿಟ್ಟಿದ್ದೀನಿ. ಆದರೆ ಅಡಿಲ್ಲದೆನಾ ನೇನೂ ಕೊಡಲಾರೆನಯ್ಯಾ.

ತಿಮ್ಮ : ದಮ್ಮಯ್ಯಾ ಅಂತೀನಿ ಇಲ್ಲ ಅನ್ನಬೇಡಣ್ಣಾ.

ಬಲ್ಲಿದ : ಮಕ್ಕಳು ಹಸಿದು ಸಾಯುವ ದೃಶ್ಯ ಕಲ್ಪಿಸಿದರೇ ಹೃದಯ ನಡುಗುತ್ತಯ್ಯಾ. ಅಂಥಾದ್ದರಲ್ಲಿ ನೀನು ನಿನ್ನ ಮಕ್ಕಳು ಹಸಿದು ಹಲುಬುವ ದೃಶ್ಯವನ್ನು ಕಣ್ಣಾರೆ ಕಂಡವನು. ನಿನ್ನ ವೇದನೆ ನನಗೆ ಅರ್ಥವಾಗುತ್ತದೆ. ನಿನಗೇನಾದರೂ ಸಹಾಯ ಮಾಡೇಬಿಡೋಣ ಅನ್ನಿಸ್ತಿದೆ. ಒಂದು ಕೆಲಸ ಮಾಡ್ತೀಯಾ?

ತಿಮ್ಮ : ಅಗತ್ಯವಾಗಿ ಹೇಳಣ್ಣಾ.

ಬಲ್ಲಿದ : ನಿನ್ನ ಕಣ್ಣುಗಳನ್ನು ಕಿತ್ತುಕೊಡು. ಅವನ್ನಿಟ್ಟುಕೊಂಡು ಹಿಟ್ಟು ಕೊಡ್ತೀನಿ.

ತಿಮ್ಮಾ : ಅಣ್ಣ!

ಬಲ್ಲಿದರಾಯನಿಗೀಗ ಬಲ ಬಂತು. ಅವಮಾನದ ಸೇಡು ಕೆರಳಿ, ಕೊನೆಗಣ್ಣು ಸಂಕುಚಿತಗೊಳಿಸಿ ಹೇಳಿದ :

ಬಲ್ಲಿದ : ಇಲ್ಲಂದರೆ ನಿನ್ನಿಷ್ಟ ಕಣಯ್ಯ. ನೀನೂ ಸ್ವಾಭಿಮಾನಿ. ನ್ಯಾಯದಿಂದ ಬದುಕಿದವ. ಪುಕ್ಕಟೆ ಹಿಟ್ಟನ್ನು ನೀನೂ ಇಷ್ಟಪಡಲಾರೆ. ನಾನೂ ವ್ಯವಹಾರಸ್ಥ: ಪುಕ್ಕಟೆ ಕೊಡೋದಕ್ಕೆ ನನ್ನ ವ್ಯವಹಾರ ಧರ್ಮವೂ ಬಿಡೋದಿಲ್ಲ. ಇಬ್ಬರಿಗೂ ಉಪಾಯ ಹೇಳಿಕೊಟ್ಟೆ ಅಷ್ಟೆ. ಹಿಟ್ಟು ಬೇಕಾ? ಅಷ್ಟು ಮಾಡು. ಇಲ್ಲವೋ ಹೊರಡು. ಯಾರಪ್ಪಾ ಅಲ್ಲಿ?

ಅಂದ, ಸೇವಕ ಬಂದೊಡನೆ “ಇವನಿಗೆ ಹೋಗೋ ದಾರಿ ತೋರಿಸು” ಎಂದು ಹೇಳಿ ಹೊರಟು ನಿಂತ. ತಿಮ್ಮ ಬೇರೇನೂ ದಾರಿಗಾಣದೆ “ಆಯ್ತಣ್ಣಾ ಕಣ್ಣು ತಗೊಂಡು ಹಿಟ್ಟು ಕೊಡು” ಅಂದ. ಬಲ್ಲಿದರಾಯ “ನ್ಯಾಯವಂತ” ಎಂದು ವ್ಯಂಗ್ಯವಾಡುತ್ತ ಒಳಕ್ಕೆ ಹೋದ.

ಆಮೇಲೆ ಹೆಚ್ಚಿಗೇನೂ ನಡೆಯಲಿಲ್ಲ. ಬಲ್ಲಿದರಾಯನಿಗೆ ಕರುಣೆ ಬರಲಿಲ್ಲ. ತಮ್ಮ ಕೇಳಲಿಲ್ಲ. ಕಣ್ಣು ಕಳೆದುಕೊಂಡು ಪಾವು ಹಿಟ್ಟು ಹಿಡಿದುಕೊಂಡು ಬರುತ್ತಿದ್ದ. ಎಲ್ಲರೂ ಬಲ್ಲಿದರಾಯನ ಹಾಗಿರುವುದಿಲ್ಲವಲ್ಲ. ಬಲ್ಲಿದರಾಯನ ಮನೆಯಲ್ಲೇ ಚಾಕರಿಗಿದ್ದ ಒಬ್ಬ ಆಳು ಕಣ್ಣಿಲ್ಲದ ತಮ್ಮನನ್ನು ನಡೆಸಿಕೊಂಡು ಬಂದ. ತಮ್ಮ ಅವನನ್ನೇ ಕೇಳಿದ –

ತಿಮ್ಮ : ಅಯ್ಯಾ, ನೀನು ಬಲ್ಲಿದರಾಯನಲ್ಲಿ ಚಾಕರಿ ಮಾಡುವಾತ. ನನ್ನ ಹಾಗೇ ಬಡವನಲ್ಲವೆ?

ಆಳು : ಹೌದು.

ತಿಮ್ಮ : ಹಾಗಾದರೆ ಈ ಕುರುಡನ ಒಂದು ಮಾತು ನಡೆಸಿ ಕೊಡ್ತಿಯೇನಪ್ಪಾ?

ಆಳು : ಆದೀತು.

ತಿಮ್ಮ : ನಾನು ಹೀಗೆ ಕಣ್ಣು ಕಳೆದುಕೊಂಡು ಮನೆಗೆ ಹೋದರೆ ಮನೆಯವರ ದುಃಖ ಹೆಚ್ಚಾದೀತು. ಆದ್ದರಿಂದ ನೀನು ನಮ್ಮ ಮನೆಗೆ ಹೋಗಿ ನಿಮ್ಮ ಸಾವ್ಕಾರರು ದಯಮಾಡಿ ಕೊಟ್ಟ ಈ ಹಿಟ್ಟನ್ನು ನನ್ನ ಹೆಂಡತಿ ಮಕ್ಕಳಿಗೆ ತಲುಪಿಸು. ನಾನು ಅಲ್ಲಿ ಇಲ್ಲವಾದರೆ ಒಬ್ಬನ ಹಿಟ್ಟಾದರೂ ಉಳಿದರೆ ಅದನ್ನವರು ಇನ್ನೊಂದು ಹೊತ್ತು ಉಂಡಾರು. ನಾನು ಹ್ಯಗೋ ಅಡವಿ ಸೇರುತ್ತೇನೆ. ಕಣ್ಣು ಕಳೆದುಕೊಂಡ ನನ್ನಿಂದ ನನ್ನ ಕುಟುಂಬಕ್ಕೆ ದುಃಖವೇ ಹೊರತು ಸಹಾಯವಾಗಲಾರದು. ದಯಮಾಡಿ ದೇವರ ಹೆಸರಿನಲ್ಲಿ ಇಷ್ಟು ಮಾಡುತ್ತೀಯಾ ಅಣ್ಣಾ?

ಆಳು : ನೀನು ಹೇಳಿದ್ದೂ ನಿಜವೇ. ನಾನು ಹಿಟ್ಟು ಕೊಟ್ಟಾಗ  ನಮ್ಮಪ್ಪ ಎಲ್ಲಿ? ಅಂತ ನಿನ್ನ ಮಕ್ಕಳು ಕೇಳಿದರೆ ಏನು ಹೇಳಲಿ?

ತಿಮ್ಮ : ಪಕ್ಕದ ಹಳ್ಳಿಗೆ ಕೆಲಸಕ್ಕಾಗಿ ಹೋಗಿದ್ದಾನೆ ಅನ್ನು. ಕಣ್ಣು ಕಳೆದುಕೊಂಡ ವಿಚಾರವನ್ನು ಮಾತ್ರ ಹೇಳಲೇಬೇಡ. ಸರಿಯ ಅಣ್ಣಾ?

ಆಳು : ಆಯ್ತು. ದೇವರು ನಿನಗೆ ಒಳ್ಳೇದು ಮಾಡಲಿ.

ಎಂದು ತಿಮ್ಮನನ್ನು ಬೀಳ್ಕೊಂಡ.

ತಿಮ್ಮ ಕೋಲೂರಿಕೊಂಡು ಊರಾಚೆ ಬಂದ. ಕಣ್ಣಿರಲಿಲ್ಲವಾದ್ದರಿಂದ ಕತ್ತಲಾದದ್ದು ತಿಳಿಯಲಿಲ್ಲ. ತಾನೊಂದು ಅಡವಿಗೆ ಬಂದ ವಿಚಾರವೂ ಗೊತ್ತಾಗಲಿಲ್ಲ. ಈಗ ಪ್ರಾಣಿಗಳ ದನಿ ಕೂಡ ಕೇಳಿಸುತ್ತಿರುಲಿಲ್ಲವಾದ್ದರಿಂದ ಜನರಿಲ್ಲದ ಸ್ಥಳಕ್ಕೆ ಬಂದದ್ದು ಗೊತ್ತಾಯಿತು. ಹಾಗೆ ಮುಂದೆ ಬಂದಾಗ ಒಂದು ಮರ ಸಿಕ್ಕಿತು. ಮರದ ಮೇಲೆ ಕೈಯಾಡಿಸಿ “ಯಾರಾದರೂ ಪುಣ್ಯಾತ್ಮರು ಬರೋತನಕ ಇಲ್ಲೇ ಮರದಲ್ಲಿರ್ತೀನಿ ಎಂದು ಹತ್ತಿ ಹೆಂಡತಿ ಮಕ್ಕಳ ಚಿಂತೆಯಲ್ಲಿ ಬೇಯುತ್ತ ಕೂತ.

ಸರಿರಾತ್ರಿ ಸಮಯಕ್ಕೆ ಅದೇ ಮರಕ್ಕೆ ಮೂರು ದಿಕ್ಕುಗಳಿಂದ ಮೂವರು ಸೇಡುಮಾರಿಯರು ತಮ್ಮ ನಾಯಕನೊಂದಿಗೆ ಬಂದು ಮರದಡಿ ಕೂತವು. ಮೂವರೂ ಮಾಡಿದ ‘ಸತ್ಕಾರ್ಯಗಳ’ ಬಗ್ಗೆ ನಾಯಕನಿಗೆ ವರದಿ ಒಪ್ಪಿಸತೊಡಗಿದರು.

ಸೇಡುಮಾರಿ ನಾಯಕ : ನೀನೇನೇ ಮಾಡಿದೆ ಇವತ್ತು?

ಸೇಡುಮಾರಿ – ೧ : ಒಬ್ಬ ಶ್ರೀಮಂತ, ಹೆಸರು ಬಲ್ಲಿದರಾಯ ಅಂತ, ಹಣದ ಆಸೆಯಿಂದ ಪಾವು ಹಿಟ್ಟು ಕೊಟ್ಟು ಬಡರೈತನ ಕಣ್ಣು ಕೀಳೋ ಹಾಗೆ ಮಾಡಿದೆ.

ನಾಯಕ : ಅದೇನಂಥ ದೊಡ್ಡ ಕೆಲಸ ಅಲ್ಲ ಬಿಡು. ಕಣ್ಣು ಕಳೆದುಕೊಂಡ ರೈತ ತನ್ನ ಕಣ್ಣುಗಳಿಗೆ ಈ ಮರದ ಕೆಳಗಿನ ಹುಲ್ಲಿನ ಮ್ಯಾಲೆ ಬಿದ್ದಿರುವ ಇಬ್ಬನಿ ಹಚ್ಚಿಕೊಂಡರೆ ಅವನಿಗೆ ಮತ್ತೆ ಕಣ್ಣು ಬರುತ್ತವೆ. ನೀನೇನು ಮಾಡಿದೆ?

ಎಂದು ಎರಡನೆಯ ಸೇಡುಮಾರಿಯನ್ನು ಕೇಳಿದ ನಾಯಕ.

ಸೇಡುಮಾರಿ – ೨ : ನಾನು ಈ ಊರಿನೊಳಗಿನ ನೀರನ್ನೆಲ್ಲ ಒಣಗಿಸಿ ಬಿಟ್ಟೆ. ಒಂದು ಹನಿ ನೀರೂ ಕೂಡ ಬಿಡಲಿಲ್ಲ. ಅಲ್ಲಿ ಜನ ಈಗ ನೀರು ತರಬೇಕಾದರೆ ಬಲು ದೂರದಿಂದ ತರಬೇಕು. ಇಲ್ಲಾಂದರೆ ಅದೇ ಬಲ್ಲಿದರಾಯ ಇದ್ದಾನಲ್ಲ. ಅವನು ಮಾರುವ ಉಪ್ಪಿನ ನೀರು ಕುಡಿದುಕೊಂಡಿರಬೇಕು.

ನಾಯಕ : ಇದೂ ಹೇಳಿಕೊಳ್ಳುವಂಥ ಕೆಟ್ಟ ಕೆಲಸ ಅಲ್ಲ ಬಿಡೆ.

ಸೇಡುಮಾರಿ – ೨ : ಯಾಕಂದೆ?

ನಾಯಕ : ಈ ಊರಿನ ಪಡುಬೆಟ್ಟದ ಕೆಳಗೆ ಒಂದು ಕೆಂಪು ಬಂಡೆ ಇದೆಯಲ್ಲ, ಅದನ್ನ ಯಾರಾದರೂ ಪಕ್ಕಕ್ಕೆ ಸರಿಸಿದರಾಯ್ತು ನೀರು ನುಗ್ಗಿ ಬರ‍್ತದೆ. ನೀನೇನು ಮಾಡಿದೆ? ಎಂದು ಮೂರನೆಯ ಸೇಡುಮಾರಿಯನ್ನು ಕೇಳಿದ.

ಸೇಡುಮಾರಿ – ೩ : ಅದೇ ಶ್ರೀಮಂತ ಬಲ್ಲಿದರಾಯ ಅದಾನಲ್ಲ? ಅವನಿಗೆ ಹುಚ್ಚು ಹತ್ತೋ ಹಾಗೆ ಮಾಡಿದ್ದೀನಿ. ಅದನ್ನ ಗುಣ ಪಡಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ನಾಯಕ : ಅದೆಂಗೆ ಮಾಡಿದೆ ? ಈ ಸೇಡುಮಾರಿ ನಿನ್ನಕ್ಕ ಅವನ ಮನಸ್ಸನ್ನ ಹಾಳುಮಾಡಿ ರೈತನ ಕಣ್ಣು ಕಿತ್ತುಕೊಳ್ಳೋ ಹಾಗೆ ಮಾಡಿದಳು. ನೀನ್ಯವಾಗ ಅವನಿಗೆ ಹುಚ್ಚು ಹತ್ತಿಸಿದೆ?

ಸೇಡುಮಾರಿ ೩ : ಕಣ್ಣು ಕಿತ್ತುಕೊಂಡು ಕಳಿಸಿದಳಲ್ಲ? ಇವನು ನಗ್ತಾ ಹೋದ.  ಆಮ್ಯಾಕೆ ನಾನ್ಹೋದೆ ನೋಡು – ಅವನಿನ್ನೂ ಕಣ್ಣು ಕಿತ್ತುಕೊಂಡ ಖುಷಿಯಲ್ಲೇ ಇದ್ದ. ಕೈಯಲ್ಲಿ ಹಣ ಹಿಡಿದುಕೊಂಡಿದ್ದ. ಒಬ್ಬ ಸಜ್ಜನನ ವೇಷ ಹಾಕಿಕೊಂಡು ಹೋದೆ. ಗಹಗಹಿಸಿ ಆಕಾಶ ಪಾತಾಳ ಒಂದಾಗೋ ಹಾಗೆ ಬಿದ್ದು ಬಿದ್ದು ನಗುತ್ತಿದ್ದ. ‘ಏನು ಸಾವ್ಕಾರರೇ ಈ ಪರಿ ನಗ್ತಿದ್ದೀರಲ್ಲ?’ – ಅಮದೆ.

“ಮಾತಿಗೊಂದು ಹೊಲ! ಹಿಟ್ಟಿಗೆರಡು ಕಣ್ಣು! ಏನು ಹೇಳು ನೋಡೋಣ?” ಅಂದ.

“ಆ ಏನು ಸಾವ್ಕಾರರೇ, ಅದೊಂದು ನೂರು ಹಣ, ಒಂದು ಬೀಳು ಹೊಲ ಸಿಕ್ಕಿತಂತ ಇಷ್ಟು ಸಂತೋಷ ಪಡ್ತೀರಲ್ಲ? ನಾನೊಂದು ನಿಧಿ ತೋರಿಸಿದರೆ ಏನಂತೀರೋ!” ಅಂತ ಪಕ್ಕದಲ್ಲಿದ್ದ, ಅವನ ಸವಳು ನೀರಿನ ಬಾವಿಗೆ ಕರೆದೊಯ್ದು ಇಣಿಕಿ ಹಾಕಲು ಹೇಳಿದೆ. ನೋಡಿದನೋ ಇಲ್ಲವೊ…. ಫಳ್ಳನೆ ಕಣ್ಣೊಳಗೆ ಮಿಂಚು ಹೊಡೆಯಿತಣ್ಣ!  ಅವಸರದಿಂದ ಬಾವಿಯಲ್ಲಿ ಜಿಗಿಯಲ್ಲಿದ್ದ. “ಅದಾಗೋದಿಲ್ಲ ಸ್ವಾಮಿ” – “ನಿಧಿ ಇವತ್ತಷ್ಟೇ ಕಾಣಿಸಿಕೊಂಡಿದೆ. ಅದರ ಮೇಲೆ ಅಧಿಕಾರ ಬರಬೇಕಾದರೆ ಬಲಿ ಕೊಡಬೇಕು” ಅಂದೆ.

“ಕೊಡ್ತೀನಿ”

“ನಿಮ್ಮಿಂದಾಗೋದಿಲ್ಲ ತಗೀರಿ ಸ್ವಾಮಿ” ಅಂದೆ.

“ಹೇಳೇ ಏನು ಬಲಿ ಕೊಡಬೇಕು?”

“ನಿಜವಾಗಿ ಕೊಡ್ತೀರಾ?”

“ನಿಜವಾಗಿ! ನೀನೇನು ಹೇಳಿದರೂ, ಬೇಕಾದರೆ ಪ್ರಾಣಾನೂ ಕೊಡ್ತೀನಿ?” – ಅಂದನೆ!

ನಾನಂದೆ:

“ನಿಮ್ಮ ಪ್ರಾಣ ಬೇಡ. ನಿಮ್ಮ ಮಗಳ ಬಲಿ ಕೊಟ್ಟರೆ ನೋಡಿ. ಆ ನಿಧಿ ಇವತ್ತೇ ನಿಮ್ಮ ಕೈವಶವಾಗ್ತದೆ!”

“ಕೊಟ್ಟೆ ಬಿಡು ಇವತ್ತೇ!”

ಅಂತಂದು ಮನೆ ಕಡೆ ನಡೆದ. ಆಮೇಲೆ ಒಂದು ಗಂಟೆ ಹೊತ್ತು ನಾನು ಆ ಕಡೆ ಹೋಗಲಿಲ್ಲ. ಆಮೇಲೆ ಪೇಟೆಯಲ್ಲಿ ನೋಡುತ್ತೇನೆ. ಬಲ್ಲಿದರಾಯ ಹಣ ಹಣ ಅಂತ ಕುಣಿಯುತ್ತಿದ್ದಾನೆ! ಯಾಕಪ್ಪ ಹೀಗೆ ಅಂತ ವಿಚಾರಿಸಿದಾಗ ತಿಳಿಯಿತು : ಮಗಳನ್ನು ಬಲಿಕೊಡುವ ವಿಚಾರ ಗೊತ್ತಾಗಿ ಅವನ ಹೆಂಡತಿ ಮಗಳನ್ನು ಕರೆದುಕೊಂಡು ತೌರಿಗೆ ಓಡಿಹೋದಳಂತೆ. ಈತ ಹುಚ್ಚನಗಿ ಹೀಗೆ ಕುಣಿಯುತ್ತಿದ್ದಾನೆ” ಅಂತ. ಸಾಕೇನಣ್ಣಾ? ಇದಕ್ಕಿಂತ ಕೇಡಿನ ಕೆಲಸ ಬೇಕೆ?”

ಆವಾಗ ನಾಯಕ ಹೇಳಿದ : “ಇದೂ ಅಂಥ ದೊಡ್ಡ ಶಿಕ್ಷೆಯಲ್ಲ ಬಿಡೆ. ಯಾಕಂತೀಯೊ? ಯಾವನಾದರೊಬ್ಬ ಪುಣ್ಯಾತ್ಮ ಆನೆಮುಖದವನ ತಂದೆಯ ಹೆಸರು ಹೇಳಿ ಈ ಮರದ ಬುಡದಲ್ಲಿ ಬಳ್ಳಿಯಿದೆಯಲ್ಲ – ಅದರ ಸೊಪ್ಪನ್ನ ಆತನ ನೆತ್ತಿಗೆ ತಿಕ್ಕಿದರೆ ಹುಚ್ಚು ಇಳಿದು ಸಾಚಾ ಮನುಷ್ಯನಾಗ್ತಾನೆ; ಅಷ್ಟೆ. ಅಲ್ಲೀತನಕ ಅವನಾಟ ನೋಡಬಹುದಲ್ಲ, ಬನ್ನಿ” ಎಂದು ಸೇಡುಮಾರಿಯರನ್ನ ಕರೆದುಕೊಂಡು ಹೊರಟ.

ಬಡತಿಮ್ಮ ಅಂದರೆ ನಮ್ಮ ರೈತನಾಯಕ ಸೇಡುಮಾರಿಯರು ಮತ್ತು ಅವರ ನಾಯಕನ ಮಾತುಗಳನ್ನು ಕದ್ದು ಕೇಳಿಸಿಕೊಂಡ. ಅವರು ಮಾಯವಾಗುವತನಕ ಅಲ್ಲೇ ಕೂತಿದದ. ಆಮೇಲೆ ಬೆಳ್ಳಿ ಮೂಡಿ ಬೆಳಗಾದದ್ದನ್ನ ಹಕ್ಕಿಗಳು ಸಾರಿದವು. ಸೂರ್ಯೋದಯವಾಗುತ್ತಲೂ ಮೆಲ್ಲಗೆ ಮರದಿಂದ ಕೆಳಗಿಳಿದು ಕೈಯಾಡಿಸುತ್ತ ಹುಲ್ಲಿನ ತನಕ ಬಂದು ಅದರ ಮೇಲಿನ ಇಬ್ಬನಿಯನ್ನ ಕಣ್ಣಿಗೆ ಲೇಪಿಸಿಕೊಂಡ. ಕಳೆದುಕೊಂಡಿದ್ದ ದೃಷ್ಟಿ ಬಂತು! “ದೇವರೇ!” ಎಂದು ಸಂತೋಷದಿಂದ ಕೂಗಿ ಸುತ್ತೂ ದೇವರಿಗೆ ಕಯ ಮುಗಿದ. “ಕೊನೆಗೂ ನ್ಯಾಯವೇ ಗೆಲ್ಲುವ ಹಾಗೆ ಮಾಡಿದಿರಿ ತಂದೇ” ಎಂದು ಹೇಳುತ್ತ ಆಕಾಶಕ್ಕೆ ಕಾಡಿಗೆ ಮರಕ್ಕೆ ಸೂರ್ಯನಿಗೆ ನಮಸ್ಕಾರ ಮಾಡಿದ. ಮರದ ಬುಡದ ಬಳ್ಳಿಯ ಸೊಪ್ಪನ್ನು ಮರೆಯದೆ ಕಿತ್ತುಕೊಂಡು ಬಂದ.

ಬಂದಮೇಲೆ ಊರಿಗೆ ನೀರು ಬರುವಂತೆ ಮಾಡಿದ. ಬಲ್ಲಿದರಾಯನ ನೆತ್ತಿಗೆ ತಂದ ಸೊಪ್ಪನ್ನುಜ್ಜಿ ಅವನ ಹುಚ್ಚು ಬಿಡಿಸಿದ. ಆಗ ಮಾತ್ರ ಬಲ್ಲಿದರಾಯ ನಿಜವಾದ ಪಶ್ಚಾತ್ತಾಪದಿಂದ ಬಡತಮ್ಮನ ಕಾಲುಮುಟ್ಟಿ ನಮಸ್ಕರಿಸಿ ಕ್ಷಮೆ ಕೇಳಿದ.

ಈ ಕಥೆಯನ್ನು ಹೇಳುವ ಅನೇಕರ ಪ್ರಕಾರ ಅವನು ಕ್ಷಮೆ ಕೇಳಲಿಲ್ಲವಂತೆ. ಆದರೂ ಕಥೆ ಮುಗಿಸುವುದಕ್ಕಾದರೂ ಹಾಗೆ ಹೇಳುವುದು ಒಳ್ಳೆಯದಲ್ಲವೆ?

* * *