ನಮ್ಮೂರು ಶಿವಾಪುರದ ಅಂಚಿನಲ್ಲಿ, ಮರಡಿ ಸುರುವಾಗುವಲ್ಲಿ ವಿಚಿತ್ರವಾದ ಒಬ್ಬ ಮುದುಕ ಕೂತಿರುತ್ತಾನೆ. ಅವನು ಯಾವಾಗಲೂ ತಲೆಯ ಮ್ಯಾಲೆ ಕೈಹೊತ್ತುಕೊಂಡು ಇನ್ನೇನು ಆಕಾಶ ತನ್ನ ತಲೆಮೇಲೇ ಹರಿದು ಬೀಳುತ್ತದೆ ಎಂಬಂತೆ ಭೀತನಾಗಿ ಕೂತಿರುವುದೇ ಅವನ ವಿಶೇಷ. ನಾವು ಯಾರಾದರೂ ಆ ಕಡೆ ಸುಳಿದರೆ “ಎಷ್ಟು ನಿರಾತಂಕವಾಗಿ ಅಲೆದಾಡುತ್ತೀರೋ! ಆಕಾಶ ಹರಿದು ಬೀಳುವ ವಿಚಾರ ನಿಮಗೆ ತಿಳಿಯದೆ?” ಎಂಬಂತೆ ಕ್ರೂರವಾಗಿ ನೋಡುತ್ತಾನೆ. ನಾವು ಅವನನ್ನು ನಿರ್ಲಕ್ಷಿಸಿ ನಡೆದರೆ ತಲೆಯ ಮೇಲಿನ ಕೈ ತೆಗೆದು ಹಣೆ ಹಣೆ ಗಿಟ್ಟಿಸಿಕೊಂಡು ಮತ್ತೆ ಅದೇ ಜಾಗದಲ್ಲಿ ಅಂದರೆ ತಲೆಯ ಮ್ಯಾಲೇ ಇಟ್ಟುಕೊಳ್ಳುತ್ತಾನೆ. ಈಗೀಗ ಕೋಪದಲ್ಲಿ ಜುಪ್ಪರಿ ಕಿತ್ತಿಕೊಳ್ಳೋದೂ ಸುರುವಾಗಿದೆ. ಒಂದು ದಿನ ನಿಮ್ಮಂಥವನೊಬ್ಬ “ಯಾಕೆ ಹೀಗೆ ಮಾಡುತ್ತಿ?” ಅಂತ ಸಹಾನುಭೂತಿಯಿಂದ ಕೇಳಿದಾಗ ಆತ ಹೇಳಿದ ಕತೆ ಇದು:

ಇದು ಒಂದಾನೊಂದು ಕಾಲದಲ್ಲಿ ನಡೆದ ಕತೆಯಲ್ಲಪ್ಪ. ನಿನ್ನೆ ಮೊನ್ನೆ ನಡೆದ ಕತೆ. ಕತೆ ಅಂದ ಮೇಲೆ ಅದು ಒಂದಾನೊಂದು ಕಾಲದಲ್ಲಿ ನಡೆಯಬೇಕಲ್ಲ? ಏನೊ ನಿನ್ನ ಒಂದಾನೊಂದು ಕಾಲದಲ್ಲಿ ನಿನ್ನಂತವನೇ ಒಬ್ಬಾನೊಬ್ಬ ಬಡವ ಇದ್ದ, ಹೆಸರು ತಿಮ್ಮರಾಯ. ಬಡವನಾದ್ದರಿಂದ ಹಳ್ಳಿಯಲ್ಲಿ ಮಳೆ ಇಲ್ಲದೆ ಪಟ್ಟಣಕ್ಕೆ ಹೋಗಿ ದುಡಿಯೋಣವೆಂದು ಕೊಂಡು ಪಯಣವಾದ. ಕೆಟ್ಟು ಪಟ್ಟಣ ಸೇರು ಅಂತಾರಲ್ಲ, ಹಾಗೆ ಇವನೂ ಅಷ್ಟೋ ಇಷ್ಟೋ ಕೆಟ್ಟೇ ಪಟ್ಟಣಕ್ಕೆ ಹೊರಟ.

ಮಳೆ ಇರಲಿಲ್ಲವಾದ್ದರಿಂದ ರಣ ರಣ ಬಿಸಿಲು, ರೊಟ್ಟಿ ಹಂಚಿನಂತೆ ಸುಡುವ ನೆಲ, ಬಿಸಿಯುಸಿರಿನಂಥ ಗಾಳಿ. ಸತ್ತೆನೋ ಕೆಟ್ಟೆನೋ ಅಂತ ನಡೆದು ದಣಿದು ಹೈರಾಣಾಗಿ ಬರುತ್ತಿದ್ದ. ದಾರಿಯಲ್ಲಿ ಒಂದು ದೊಡ್ಡ ಮರ ಸಿಕ್ಕದ್ದೇ ತಡ ನೆರಳಲ್ಲಿ ತಂಗಿದ. ಕರುಳನ್ನೇ ಹರಿದು ತಿನ್ನುವ ಹಸಿವು, ಬಾಯಾರಿಕೆ. ಬಾಯಿ ಬಾಯಿ ಬಿಡುತ್ತ ಆ ಕಡೆ ನೋಡಿದ. ಮರದ ಇನ್ನೊಂದು ಬದಿಯಲ್ಲಿ ಒಬ್ಬಳು ಹಣ್ಣು ಹಣ್ಣು ಮುದುಕಿ ತನ್ನ ನಾಯಿಯೊಂದಿಗೆ ಕೂತಿದ್ದಳು.

ತಿಮ್ಮರಾಯ : ಗುಟುಕು ಅಂಬಲಿ ಇದೆಯಾ ಅಜ್ಜಿ?

ಎಂದು ಅಂಗಲಾಚಿದ.

ಮುದುಕಿ ನಾತಿ ದೂರ ನಾತಿ ಸಮೀಪದ ಒಂದು ಮರ ತೋರಿಸಿ,

ಮುದುಕಿ : ಆ ಮರದಲ್ಲಿ ಹಣ್ಣಿದೆ. ಹಸಿವು ತೀರುವಷ್ಟು ಹರಿದು ತಿನ್ನು.

ತಿಮ್ಮ ಈ ಮಾತು ಕೇಳಿದ್ದೇ ಎದ್ದ. ಆ ಮರದ ತುಂಬ ಹಣ್ಣಿದ್ದವು. ಅವಸರವಸರವಾಗಿ ಹೋಗಿ ತೃಪ್ತಿಯಾಗುವತನಕ ಹಣ್ಣು ತಿಂದು ಬಂದು –

ತಿಮ್ಮರಾಯ : ತೊಟ್ಟು ನೀರಿದೆಯಾ ಅಜ್ಜಿ?

ಎಂದ. ಆ ಮುದುಕಿ ಹಣ್ಣಿನ ಮರದಾಚೆ ನಾತಿ ದೂರ ನಾತಿ ಸಮೀಪದ ಇನ್ನೊಂದು ಮರ ತೋರಿಸಿ

ಮುದುಕಿ : ಆ ಮರಕ್ಕೆ ಕೊಡಲಿಯಿಂದ ಒಂದೇಟು ಹಾಕು; ನೀರು ಸುರಿಸುತ್ತದೆ.

ಹಾಗೇ ಮಾಡಿ ತೃಪ್ತಿಯಾಗುವಷ್ಟು ನೀರು ಕುಡಿದು, ಅಜ್ಜಿಗೆ ಕೃತಜ್ಞತೆ ಹೇಳಿ, ಮರದ ನೆರಳಲ್ಲಿ ಒರಗಿದ.

ಸಂಜೆ ಪಟ್ಟಣಕ್ಕೆ ಹೋಗದೇ ತನ್ನ ಮನೆಗೇ ವಾಪಸಾಗುವಾಗ ಅಜ್ಜಿಗೆ ಹೇಳಿದ:

ತಿಮ್ಮರಾಯ : ಅಜ್ಜೀ ಕುಟುಂಬ ರಕ್ಷಣೆಗಾಗಿ ಪಟ್ಟಣಕ್ಕೆ ಹೋಗೋಣ ಅಂತಿದ್ದೆ. ಆದರೆ ಅಲ್ಲಿಗಿಂತ ಇಲ್ಲಿಯೇ ಹೆಚ್ಚು ನೆಮ್ಮದಿಯಿದೆ. ಕುಟುಂಬ ಸಮೇತ ನಾನಿಲ್ಲಿ ಇರಬಹುದ?

ಮುದುಕಿ : ಇರಪ್ಪ ಅದಕ್ಕೇನಂತೆ.

ತಿಮ್ಮರಾಯ ಹಳ್ಳಿಗೆ ಹೋಗಿ ಮಕ್ಕಳು ಮರಿ ಸಮೇತ ಅದೇ ಮರಕ್ಕೆ ಬಂದು ಹಾಜರಾದ.

ಮುದುಕಿ ಈಗಲೇ ಅದೇ ಮರದಡಿ ಕೂತಿದ್ದಳು. ತಿಮ್ಮರಾಯನ ಹೆಂಡತಿ, ಮಕ್ಕಳನ್ನು ನೋಡಿ ಸಂತೋಷಪಟ್ಟಳು. ಅವನನ್ನು ಕರೆದು ಹೇಳಿದಳು.

ಮುದುಕಿ : ನೋಡಪ್ಪ, ಈ ಕಾಡಿನಲ್ಲಿರಬೇಕಾದರೆ ನೀನು ತಿಳಿದಿರಲೇಬೇಕಾದ ಸೀಮೆಗಳಿವೆ. ಸೀಮೆ ಮೀರಿ ನೀನು ಬಂದರೆ ನಿನಗೂ ಒಳ್ಳೆಯದಲ್ಲ. ನನಗೂ ಒಳ್ಳೆಯದಲ್ಲ. ಅದಕ್ಕೇ ಹೇಳ್ತೇನೆ ಕೇಳು; ಅಕಾ ಆ ನೀರು ಕೊಡುವ ಮರ ಇದೆಯಲ್ಲ, ಒಂದೇಟು ಹಾಕಿದರಾಯ್ತು, ನೀರು ಕೊಡುತ್ತದೆ. ಬೇಕಾದಷ್ಟು ನೀರು ಕುಡಿಯಬಹುದು. ಅದು ನೀರಿನ ಮರ.

ಅದರಾಚೆ ನಾತಿ ದೂರ ನಾತಿ ಸಮೀಪದ ಹಣ್ಣಿನ ಮರ ಇದೆ. ನೀನು ಮಕ್ಕಳೊಂದಿಗೆ, ನಿಮಗೆ ಸಾಕಾಗುವಷ್ಟು ಹಣ್ಣು ಕೊಡುತ್ತದೆ. ಹಣ್ಣಿನ ಮರದಾಚೆ ನಾತಿ ದೂರ ನಾತಿ ಸಮೀಪ ಇನ್ನೊಂದು ಮರ ಇದೆಯಲ್ಲ. ಆ ಮರಕ್ಕೆ ನೀನು ಒಂದೇಟು ಹಾಕಿದರೆ ನಿನ್ನ ಕುಟುಂಬಕ್ಕೆ ಸಾಲುವಷ್ಟು ಹಾಲು ಸುರಿಸುತ್ತದೆ. ಅದು ಹಾಲಿನ ಮರ. ಇಲ್ಲಿಗೆ ನಿನ್ನ ಸೀಮೆ ಮುಗಿಯಿತಪ್ಪ. ನೆನಪಿನಲ್ಲಿಡು ಹಣ್ಣಿನ ಮರ ಕಡಿಯಲೇ ಬೇಡ. ನೀರಿನ ಮರಕ್ಕೆ ಒಂದಕ್ಕಿಂತ ಹೆಚ್ಚಿಗೆ ಏಟು ಹಾಕಲೇಬೇಡ. ಆದರೆ ನೆನಪಿರಲಣ್ಣ – ಮೂರನೇ ಹಾಲಿನ ಮರಕ್ಕೆ ಒಂದಕ್ಕಿಂತ ಹೆಚ್ಚು ಏಟು ಹಾಕಿದರೆ ನನ್ನ ನಾಯಿ ಬೊಗಳುತ್ತದೆ. ಆಗ ನನಗೆ ಕೋಪ ಬರುತ್ತದೆ. ಇದಿಷ್ಟು ನಿನ್ನ ಸೀಮೆ, ತಿಳಿಯಿತೇನಪ್ಪ?”

ತಿಮ್ಮರಾಯ : ನೆನಪಿನಲ್ಲಿದೆ ತಾಯಿ, ತಪ್ಪಿ ಕೂಡ ನೀನು ತೋರಿಸಿದ ಗೆರೆಗಳನ್ನು ದಾಟಲಾರೆ.

ಎಂದು ಮಾತು ಕೊಟ್ಟು ಮರದಡಿ ಸಂಸಾರ ಮಾಡಿಕೊಂಡಿದ್ದ.

ಇಂತೀ ರೀತಿಯಲ್ಲಿ ತಿಮ್ಮರಾಯ ಅನೇಕ ದಿವಸ ಮುದುಕಿ ಹೇಳಿದಂತೆ ಸುಖವಾಗಿದ್ದ. ಆದರೆ ಆಮೇಲಾಮೇಲೆ ಮಕ್ಕಳು ಹೆಚ್ಚಾಗಿ, ಆಸೆ ಮಿತಿಮೀರಿ ನಾಯಿ ಬೊಗಳಿದರೂ ಕ್ಯಾರೇ ಮಾಡದ ಸ್ಥಿತಿಗೆ ಬಂದ. ಹಾಲಿನ ಮರಕ್ಕೆ ಮತ್ತೆ ಮತ್ತೆ ಎರಡನೇ, ಹಲವೇಟು ಹಾಕಿ ಪಟ್ಟಣಕ್ಕೊಯ್ದು ಹಾಲು ಹಣ್ಣು ಮಾರತೊಡಗಿದ. ಮುದುಕಿ ಕೋಪ ಮಾಡಿಕೊಂಡರೆ ಮತ್ತೆ ಏಟು ಹಾಕುತ್ತಿದ್ದ. ಒಂದು ದಿನ ಹಾಲು ಸಾಲದೆ ಮುದುಕಿಯ ಎದುರಿನಲ್ಲೇ ಹಾಲಿನ ಮರಕ್ಕೆ ನೂರೇಟು ಹಾಕಿದ. ಮರ ಕೆಳಗುರುಳಿ ಬಿದ್ದು ಅದರೊಳಗಿಂದ ಹಾಲಿನ ಬದಲು ರಕ್ತ ಚಿಮ್ಮತೊಡಗಿತು! ರಕ್ತ ಮಡುಗಟ್ಟಿ ಕೆರೆಯಾಗಿ ಹಳ್ಳ ಕೊಳ್ಳ ತೊರೆ ನದಿಯಾಗಿ ಕೊನೆಗೆ ಸಮುದ್ರವೂ ಆಗಿ ಭೂಮಿಯೆಲ್ಲ ರಕ್ತದ ಕಡಲಿನಲ್ಲಿ ಮುಳುಗಿ ಹೋಯಿತು. ಅದರಲ್ಲಿ ತಿಮ್ಮನೂ ಮುಳುಗಿ ಸತ್ತುಹೋದನೆಂದು ಹೇಳಲೇಬೇಕಿಲ್ಲವಲ್ಲ!

ಕತೆ ಮುಗಿದ ಮೇಲೆ ಮುದುಕ ಹೇಳಿದ:

ನೋಡ್ರೆಪಾ ಕತೆಯಲ್ಲಿಯ ‘ರಕ್ತದ ಮಡುವಿನಲ್ಲಿ ಭೂಮಿ ಮತ್ತು ತಿಮ್ಮನ ಸಂಸಾರ ಮುಳುಗಿ ಹೋದರು’ ಅಂತಲ್ಲವ ಕತೆಯ ಕೊನೆಯಲ್ಲಿ ಹೇಳಿದ್ದು? ಕತೆಗೊಂದು ಕೊನೆ ಕೊಡಬೇಕೆಂದು ಹಾಗೆ ಹೇಳಿದ್ದು. ನಿಜ ಸಂಗತಿ ಏನೆಂದರೆ; ಆ ತಿಮ್ಮ ಇನ್ನೂ ಜೀವಂತವಾಗಿದ್ದಾನೆ ನಿಮ್ಮ ಮಧ್ಯದಲ್ಲಿ! ನೀವೀಗಲೂ ದೊಡ್ಡ ಮನಸ್ಸು ಮಾಡಿ ಭೂಮಿಯನ್ನ ಮತ್ತು ನಿಮ್ಮನ್ನ ಉಳಿಸಿಕೊಳ್ಳಬಹುದು – ಹಾಲಿನ ಮರಕ್ಕೆ ಏಟು ಹಾಕುವುದನ್ನ ನಿಲ್ಲಿಸಿ! ಏನು ಮಾಡುತ್ತೀರೋ ನೋಡಿಕೊಳ್ರಿ!

* * *