೧
ಒಂದಾನೊಂದು ಕಾಲದಲ್ಲಿ ಶಿವಾಪುರ ಅಂತ ಊರಿನಲ್ಲಿ ತಿಮ್ಮ, ತಿಮ್ಮಿ ಎಂಬ ವೃದ್ಧ ದಂಪತಿಗಳಿದ್ದರು. ಇದ್ದಿಲು ಮಾರಿ ಜೀವನ ಸಾಗಿಸುತ್ತಿದ್ದರು. ಅವರಿಗೆ ಮೂರು ಜನ ಗಂಡುಮಕ್ಕಳು, ಹಿರಿಯ ಹುಡುಗರಿಬ್ಬರೂ ಜಾಣರು. ತಂದೆ ತಾಯಿ ಹೇಳಿದ ಹಾಗೆ ಕೇಳಿಕೊಂಡು ದುಡಿಯುತ್ತಿದ್ದರು. ಕೊನೆಯುವ ಸೋಂಬೇರಿ. ಅವನ ಸೋಂಬೇರಿತನದಿಂದಾಗಿ ಆತನ ಹೆಸರನ್ನು ಮನೆಯವರು ಕೂಡ ಮರೆತು ‘ಸೋಂಬೇರಿ’ ಎಂದೇ ಕರೆಯುತ್ತಿದ್ದರು. ಅವರು ಹಾಗೆ ಕರೆದಾಗೆಲ್ಲಾ ಇವನೂ ಬೇಸರ ಮಾಡಿಕೊಳ್ಳದೆ ಓಗೊಡುತ್ತಿದ್ದ. ಯಾಕಂತೀರೋ? ಅವನಿಗೂ ತನ್ನ ಹೆಸರು ಮರೆವಾಗಿತ್ತು! ಆದರೆ ಮನೆಯವರೆಲ್ಲ ತನ್ನನ್ನ ‘ದಡ್ಡ’ ಎಂದು ಬಯ್ಯುತ್ತಿದ್ದುದು ನೆನಪಿತ್ತು. ‘ಇರಬಹುದೋ ಏನೋ! ಇಲ್ಲದಿದ್ದರೆ ಇವರ್ಯಾಕೆ ಹೀಗೆ ಹೇಳುತ್ತಿದ್ದರು?’ ಅಂದುಕೊಂಡು ಸೋಂಬೇರಿ ಸುಮ್ಮನಿರುತ್ತಿದ್ದ. ಆದರೆ ಹೀಗೆ ಬೈಸಿಕೊಂಡರೂ ಅವನೆಂದೂ ಕಾಡಿಗೆ ಹೋದವನಲ್ಲ. ಇದ್ದಿಲು ತಂದವನಲ್ಲ. ತಾನಾಯಿತು, ತನ್ನ ಆಟವಾಯಿತು; ಜಾಲಿಯಾಗಿ ಆಡಿಕೊಂಡು ಹಾಡಿಕೊಂಡಿದ್ದ.
ಇಂತಿರುವಲ್ಲಿ ಆ ವರ್ಷ ಶಿವಾಪುರದಲ್ಲಿ ಇದ್ದಿಲ ಬೇಡಿಕೆ ಹೆಚ್ಚಾಯಿತು. ಕಮ್ಮಾರನ ಕುಲುಮೆಗೂ, ಕುಂಬಾರನ ಒಲೆಗೂ, ಅಗಸನ ಇಸ್ತ್ರೀ ಕಲ್ಲಿಗೂ ಇದ್ದಿಲು ಬೇಕಾಯಿತು. ಅಷ್ಟೇ ಅಲ್ಲ ಸರಕಾರೀ ನೌಕರರ ಅಡಿಗೆ ಬೇಯಿಸಲಿಕ್ಕು ಬೇಕಾಯಿತು. ಗಾಳಿ ಬಿಟ್ಟಾಗಲೇ ತೂರಿಕೊಳ್ಳಬೇಕಲ್ಲವೇ? ಜಾಣ ಮುದುಕ ಮಕ್ಕಳನ್ನು ಕರೆದು ಹೇಳಿದ –
ತಂದೆ : ಮಕ್ಕಳೇ ದೇವರ ದಯೆಯಿಂದ ಇದ್ದಿಲು ಬೇಡಿಕೆ ಹೆಚ್ಚಾಗಿದೆ. ಈಗಲೇ ಕೈಯಲ್ಲಿ ನಾಲ್ಕು ಕಾಸು ಮಾಡಿಕೊಳ್ಳೋದು ಬುದ್ಧಿವಂತರ ಲಕ್ಷಣ. ಕೊಡಲಿ, ಚೀಲ ತಗೊಂಡು ಕಾಡಿಗೆ ಹೊರಡಿರಿ. ಆಗಲೇ ಹೊತ್ತೇರಿದೆ.
ಅಣ್ಣಂದಿರಿಬ್ಬರೂ ತಂದೆಯ ಮಾತು ಕೇಳಿ, ಕೊಡಲಿ ಚೀಲಗಣ್ನು ತಗೊಂಡು “ಸೋಂಬೇರಿಗೂ ಈ ಮಾತು ಹೇಳಪ್ಪಾ, ನಾವಿಬ್ಬರೇ ದುಡಿಯೋದು, ಅವನು ಮಾತ್ರ ಗೋಲಿ ಗುಂಡು ಆಡೋದು ಚನ್ನವ?” ಅಂದರು. ಇಷ್ಟಾದರೂ ಸೋಂಬೇರಿ ತನ್ನ ಪಾಡಿಗೆ ತಾನಿದ್ದ. ಕೊನೆಗೆ ಅವನನ್ನೇ ಕೇಳಿದರು :
ಅಣ್ಣಂದಿರು : ನೀನ್ಯಾಕಯ್ಯ ನಮ್ಮ ಜೊತೆ ಕಾಡಿಗೆ ಬರಬಾರದು?
ಸೋಂಬೇರಿ : ನಾನ್ಯಾಕೆ ಕಾಡಿಗೆ ಬರಬೇಕು?
ಅಣ್ಣ ೧ : ಇದ್ದಿಲು ಮಾಡೋದಿಕ್ಕೆ ಮರ ಕಡಿದು ತರಬೇಕಪ್ಪಾ…
ಸೋಂಬೇರಿ : ಇದ್ದಿಲು ಬೇಕಾದರೆ ಮರ ಯಾಕೆ ಕಡಿಯಬೇಕು?
ಅಣ್ಣ ೨ : ಇನ್ನೇನು ಇದ್ದಿಲು ಕಲ್ಲಿನಿಂದಾಗುತ್ತದೆಯೇ?
ಸೋಂಬೇರಿ : ಹ್ಯಾಗಾಗುತ್ತದೊ ನನಗೇನು ಗೊತ್ತು? ನನಗೆ ಇದ್ದಿಲು ಬೇಡ ಅಷ್ಟೇಯ.
ಈಗ ಮುದುಕ ತಿಮ್ಮನಿಗೂ ಸುಮ್ಮನಿರಲಾಗಲಿಲ್ಲ…
ತಿಮ್ಮ : ಅಯ್ಯಾ ಸೋಂಬೇರಿ, ದೊಡ್ಡವನಾಗಿದ್ದೀಯಾ, ನೀನೂ ದುಡಿಯೋದು ಬೇಡವಾ? ದುಡೀದಿದ್ದರೆ ಉಪಜೀವನಕ್ಕೇನು ಮಾಡ್ತೀಯ?
ಸೋಂಬೇರಿ : ಯಾಕೆ ನೀನಿಲ್ಲವ? ಅವರಿಬ್ಬರೂ ಇಲ್ಲವ?
ತಿಮ್ಮ : ನಿನ್ನ ಅನ್ನ ನೀನೇ ದುಡೀಬೇಕಯ್ಯಾ, ಇನ್ನೊಬ್ಬರಲ್ಲ. ಊಟ ಬೇಕೆಂದರೆ ನೀನೂ ಅವರ ಜೊತೆ ಕಾಡಿಗೆ ಹೋಗಿ, ಒಣ ಮರ ಕಡಿದುಕೊಂಡು ಬರಬೇಕು.
ಸೋಂಬೇರಿ : ಅವರ ಜೊತೆ ಹೋಗೊದಿಲ್ಲ. ನನ್ನ ಪಾಡಿಗೆ ನಾನು ಹೋಗುತ್ತೇನೆ.
ಎಂದು ಹೊರಟೇಬಿಟ್ಟ. ಮುದುಕ ಕೊಡಲಿ ಕೊಟ್ಟು ಹೆಗಲ ಮೇಲೆ ಚೀಲ ಇಟ್ಟ.
ಸೋಂಬೇರಿ : ಕೊಡಲಿ ಯಾತಕ್ಕೆ?
ಮುದುಕ : ಒಣ ಮರ ಕಡೀಲಿಕ್ಕೆ.
ಸೋಂಬೇರಿ : ಚೀಲ ಯಾತಕ್ಕೆ?
ಮುದುಕ : ಅಕಸ್ಮಾತ್ ಕಾಡಿನಲ್ಲಿ ಇದ್ದಿಲು ಸಿಕ್ಕರೆ, ತುಂಡು ಮರ ಸಿಕ್ಕರೆ ತರಲಿಕ್ಕೆ.
ಸೋಂಬೇರಿ : ಊಟ ಯಾವಾಗ?
ಮುದುಕ : ಕಾಡಿನಿಂದ ಇದ್ದಿಲು ತಂದರೇನೇ ಊಟ.
ಅಂತೂ ಸೋಂಬೇರಿ ಕೊಡಲಿ, ಚೀಲ ತಗೊಂಡು ಕಾಡಿಗೆ ಹೊರಟ.
೨
ಸೋಂಬೇರಿ ಕಾಡತುಂಬ ಜಾಲಿಯಾಗಿ ಸಿಳ್ಳೇ ಹಾಕಿಕೊಂಡು ಅಲೆದಾಡಿದ. ಟೊಪ್ಪಿಗೆಗೆ ಒಂದೆರಡು ಹೂ ಸಿಕ್ಕಿಸಿಕೊಂಡು ಹೂವಿನಂತಿದ್ದ ಚಿಟ್ಟೆಗಳನ್ನ ಅಟ್ಟಿಸಿಕೊಂಡು ಓಡಾಡಿದ. ಕಾಡ ಪ್ರಾಣಿಗಳ ನಡಿಗೆ ಮತ್ತು ಪಕ್ಷಿಗಳ ಧ್ವನಿಗಳನ್ನು ಅನುಕರಿಸಿದ. ಹೀಗೇ ಅಲೆದಾಡುತ್ತಿರುವಾಗ ಒಂದು ಒಣಗಿದ ಮರ ಕಂಡಿತು. ಸಂತೋಷದಿಂದ ಅದರ ಬಳಿಗೆ ಬಂದು ಇದ್ದಿಲು ಮರ ಅಂದರೆ ಇದೇ ಇರಬೇಕೆಂದು, “ಮುದಿಮರವೇ, ನಿನಗೆ ವಯಸ್ಸಾಗಿದೆ ಅಂದ್ಕೋತೀನಿ. ನನಗೆ ಇದ್ದಿಲು ಬೇಕು. ಅದಕ್ಕೇ ಕಡಿತೇನೆ. ಕ್ಷಮೆ ಇರಲಿ” ಎಂದು ನಮಸ್ಕರಿಸಿ, ಕೊಡಲಿಯಿಂದ ಮರಕ್ಕೆ ಒಂದೇಟು ಹಾಕಿದ. ‘ಅಯ್ಯೋ’ ಎಂದು ಯಾರೋ ಹೆಂಗಸು ನರಳಿದ ಹಾಗಾಯ್ತು. ಆಸುಪಾಸು ನೋಡಿದ. ಯಾರೂ ಇರಲಿಲ್ಲ. ‘ಮತ ಮಾತಾಡಿತೆ?’ ಅಂತ ಅದಕ್ಕೆ ಕಿವಿ ಹಚ್ಚಿದ. ‘ಅಮ್ಮಾ ನೀರು!’ ಎಂದು ಹೆಂಗಸೊಬ್ಬಳು ದಯನೀಯವಾಗಿ ನರಳಿದ್ದು ಕೇಳಿಸಿತು. ಮತ್ತೆ ಅಕ್ಕಪಕ್ಕ ನೋಡಿದ. ಯಾರೂ ಕಾಣಲಿಲ್ಲ. ‘ಪಾಪ ಬಾಯಾರಿಕೆ; ಅದಕ್ಕೇ ‘ನೀರು’ ಅಂತಿದೆ ಎಂದುಕೊಂಡು ಅವಸರದಿಂದ ಹೊಂಡಕ್ಕೋಡಿದ.
ಅಲ್ಲೊಂದು ಮಡಕೆ ಇತ್ತು. ತುಂಬಿಕೊಂಡು ಬಂದು ನರಳಿದ ಮರದ ಬುಡಕ್ಕೆ ಸುರಿದು ಮರಕ್ಕೆ ಕಿವಿ ಹಚ್ಚಿದ. ಅದಿನ್ನೂ ನಿಟ್ಟುಸಿರು ಬಿಡುತ್ತಿತ್ತು. ನಾಲ್ಕೈದು ಸಲ ನೀರು ಸುರಿದು ಮರಕ್ಕೆ ಕಿವಿ ಹಚ್ಚಿದ. ಈ ಸಲ ಅದು ‘ಆಹಾ!’ ಎಂದಿತು. ‘ಸದ್ಯ ಈ ಮರದ ತಂಟೆಯೇ ಬೇಡ’ ಎಂದು ಮುಂದೆ ನಡೆದ.
ಬರಿಗೈಯಲ್ಲೇ ಮನೆಗೆ ಬರುತ್ತಿರುವಾಗ ಅಂತೂ ಒಂದು ಒಣ ಮರ ಸಿಕ್ಕಿತು. ಇದರಲ್ಲೂ ಬಾಯಾರಿದ ಹೆಣ್ಣಿದೆಯೋ? ಅಂತ ಕಿವಿ ಹಚ್ಚಿ ಕೇಳಿದ. ಸದ್ಯ ಏನೂ ಕೇಳಿಸಲಿಲ್ಲ. ಮರಕ್ಕೆ ನಮಸ್ಕರಿಸಿ ಕೊಡಲಿನಿಂದ ಜೋರಾಗಿ ಏಟು ಹಾಕಿದ. ಸಿಡಿಲೆರಗಿದಂತೆ ಸದ್ದಾಗಿ ಏನೆಂದು ನೋಡಿದರೆ ಕೊಂಬು ಕೋರೆಹಲ್ಲಿನ ಭಯಂಕರ ರಾಕ್ಷಸಿ ಕಿರುಚಿ,
“ಯೋ ಯಾವೋನಯ್ಯಾ ನೀನು? ಮರ ಕಡಿಯೋದಿಕ್ಕೆ ಬುದ್ಧಿ ಇಲ್ಲವೆ ನಿನಗೆ? ನಿಲ್ಲಿಸು” ಎಂದು ಅಬ್ಬರಿಸಿದಳು. ಸೋಂಬೇರಿ ಹೆದರಿ ಗಡಗಡ ನಡುಗುತ್ತಾನೆಂದು ನಿರೀಕ್ಷಿಸಿದ್ದ ರಾಕ್ಷಸಿಗೆ ಭಾರೀ ನಿರಾಸೆಯಾಯ್ತು. ಯಾಕೆಂದರೆ ಸೋಂಬೇರಿ ಹೆದರಲಿಲ್ಲ. ಹೆದರುವ ಲಕ್ಷಣಗಳೂ ಕಾಣಲಿಲ್ಲ. ಸಾಲದ್ದಕ್ಕೆ ಮೋಜು ಕಂಡ ಮಕ್ಕಳಂತೆ ನಗಾಡುತ್ತಿದ್ದ! ‘ನಿಲ್ಲಿಸೋ’ ಎಂದು ಗದರಿದಳು.
ಸೋಂಬೇರಿ : ನಿಲ್ಲು ಅನ್ನೋದಿಕ್ಕೆ ನೀನು ಯಾರು? ಕಡಿಯೋದು ಬಿಡೋದು ನನ್ನಿಷ್ಟ. ನನಗಿಷ್ಟವಾಗಿದೆ, ಅದಕ್ಕೆ ಕಡೀತೀನಿ.
ರಾಕ್ಷಸಿ : ನಾನು ಅಂದರೆ ಏನೆಂದುಕೊಂಡಿದ್ದೀಯ? ಭಯಂಕರ ರಾಕ್ಷಸಿ ನಾನು. ನನ್ನ ಕಂಡರೆ ಮನುಷ್ಯರಷ್ಟೇ ಅಲ್ಲ. ಪ್ರನಿಗಳೂ ಗಡಗಡಾಂತ ನಡುಗುತ್ತವೆ. ನಿನ್ನಂಥವ್ನು ನನಗೆ ಒಂದೇ ತುತ್ತು.
ಸೋಂಬೇರಿ : ಹಾಗೋ? ನುಂಗು ಹಾಗಾದರೆ, ಹ್ಯಾಗೆ ನುಂಗುತ್ತೀ ಅಂತ ನಾನೂ ನೋಡೇಬಿಡ್ತೀನಿ. ಅಂದ ಹಾಗೆ ನಿನಗೆ ತಿನ್ನೋದಕ್ಕೆ ಬೇರೇನೂ ಸಿಗಲಿಲ್ಲವೋ?
ಅವನ ಧೈರ್ಯದಿಂದ ರಾಕ್ಷಸಿಗೆ ಇನ್ನಷ್ಟು ನಿರಾಸೆಯಾಯಿತು. ‘ಇವನೆಲ್ಲಿಯ ದಡ್ಡ ಗಂಟುಬಿದ್ದ ನನಗೆ!’ ಅಂತ ಹಸ್ತ ಹೊಸೆಯುತ್ತ, ಏನು ಮಾಡುವುದೆಂದು ತಲೆ ಕೆರೆದುಕೊಳ್ಳುತ್ತ ಕೊನೆಗೆ ಏನೂ ಹೊಳೆಯದೆ –
ರಾಕ್ಷಸಿ : ನಾನು ಭಯಂಕರ ರಾಕ್ಷಸಿ. ಹೆದರಿಕೆ ಬರೋದಿಲ್ಲವೇನೋ ನನ್ನ ನೋಡಿ?
ಸೋಂಬೇರಿ : ಇಲ್ಲವಲ್ಲ, ನಗೆ ಬರ್ತಿದೆ!
ರಾಕ್ಷಸಿ : ಹೋಗಲಿ ನಿನಗೇನು ಬೇಕು ಹೇಳಯ್ಯಾ, ಕತ್ತಲಾಗ್ತಾ ಇದೆ.
ಸೋಂಬೇರಿ : ಒಣ ಮರ ಬೇಕು.
ರಾಕ್ಷಸಿ : ಒಣ ಮರ ಯಾಕೆ ಬೇಕು?
ಸೋಂಬೇರಿ : ಇದ್ದಿಲು ಮಾಡೋದಕ್ಕೆ.
ರಾಕ್ಷಸಿ : ಇದ್ದಿಲು ಕೊಟ್ಟರಾದೀತೊ?
ಸೋಂಬೇರಿ : ಓಹೋ.
ರಾಕ್ಷಸಿ : ಹಾಗಾದರೆ ಇದ್ದಿಲು ಕೊಡ್ತೀನಿ, ಮರ ಕಡೀಬೇಡ. ಅಷ್ಟೇ ಅಲ್ಲ, ನಿನ್ನ ತಂದೆ ತಾಯಿ ಅಣ್ಣಂದಿರು ಹಿಂದೆಂದೂ ಕಂಡಿರಬಾರದು. ಅಷ್ಟು ಒಳ್ಳೆ ಇದ್ದಿಲು ಕೊಡ್ತೀನಿ. ಚೀಲ ತಂದಿದ್ದೀಯೋ? ಕೊಡು ಇತ್ಲಾಗೆ.
ಎಂದು ಹೇಳಿ ಚೀಲ ಇಸಿದುಕೊಂಡು “ಇಲ್ಲೇ ಇರು” ಎಂದು ಹೇಳಿ ಮಾಯವಾದಳು.
“ಇವಳು ಇರೋದೇ ಹೀಗೊ? ಅಥವಾ ಯವುದಾದರೂ ನಾಟಕದ ರಾಕ್ಷಸಿಯೋ?” ಎಂದು ಯೋಚಿಸುತ್ತಾ ನಿಂತ. ಅಷ್ಟರಲ್ಲಿ ರಾಕ್ಷಸಿ ಇದ್ದಿಲು ಸಮೇತ ಬಂದಳು. ಅವನ ಮೇಲೆ ಇದ್ದಿಲು ಹೊರಿಸಿ ‘ಇನ್ನು ನೀನು ಹೊರಡು’ ಎಂದಳು. ಇನ್ನೂ ಸೋಂಬೇರಿಯ ಅನುಮಾನ ದೂರವಾಗಿರಲಿಲ್ಲ, ಕೇಳಿಯೇಬಿಟ್ಟ –
ಸೋಂಬೇರಿ : ಅಮ್ಮಾ ರಾಕ್ಷಸಿ, ನೀನು ಇರೋದೇ ಹೀಗಾ? ಅಥವಾ ನೀನು ಯವುದಾದರೂ ಯಕ್ಷಗಾನದ ಬಣ್ಣದ ವೇಷವ?
ರಾಕ್ಷಸಿ : ಹೋಗೋ… ಸೋಂಬೇರಿ!’
ಸೋಂಬೇರಿ : ಎಲಾ ಇವಳ! ನನ್ನ ಹೆಸರೂ ಗೊತ್ತಿದೆ ಇವಳಿಗೆ!
ನಿಜವಾದ ರಾಕ್ಷಸಿಯೇ ಇರಬೇಕು ಎಂದುಕೊಂಡು ಮನೆಗೆ ಬಂದ.
೩
ಉಂಡು ಮಲಗುವ ಹೊತ್ತಾದರೂ ಸೋಂಬೇರಿ ಬಂದಿರಲಿಲ್ಲ. ತಂದೆ ತಾಯಿಗಳಲ್ಲದೆ ಸೋದರರಿಬ್ಬರೂ ಅವನ್ಯಾಕೆ ಬರಲಿಲ್ಲ ಅಂತ ಚಿಂತೆ ಮಾಡುತ್ತ ಕೂತಿದ್ದರು. ಸೋಂಬೇರಿ ಬಂದವನೇ “ತಗೊಳ್ಳಿ ಇದ್ದಿಲು” ಅಂತಂದು ಚೀಲ ಒಗೆದು ಕೊಡಲಿ ಇಟ್ಟು “ನನಗೆ ಊಟಕ್ಕೆ ಕೊಡಮ್ಮ, ಹಸಿವೆಯಾಗಿದೆ” ಅಂತಂದು ನೇರ ಅಡಿಗೆ ಮನೆಗೇ ಹೋದ. ಚೀಲದಲ್ಲಿ ಇದ್ದಿಲಿರಬಹುದೆಂದು ಅಣ್ಣಂದಿರು ನಂಬಲಿಲ್ಲ. ಯಾಕೆಂದರೆ ಅವರಿಗೆ ಒಣಮರ ಮಾತ್ರ ಸಿಕ್ಕಿತ್ತು. ಅದೇನು ತಂದಿದ್ದಾನೋ ನೋಡೋಣವೆಂದು ಚೆಲ್ಲಿದ ಚೀಲ ಬಿಚ್ಚಿದರು. ಇಬ್ಬರಲ್ಲಿ ಒಬ್ಬ “ಅಮ್ಮಾ, ಅಪ್ಪಾ!” ಎಂದು ಕಿರುಚಿದ. ಇನ್ನೊಬ್ಬ ಆಶ್ಚರ್ಯದಿಂದ ಮೂರ್ಛೆ ಹೋದ. ತಂದೆ ತಾಯಿಗಳಿಬ್ಬರೂ ಬಂದು ನೋಡುತ್ತಾರೆ. ಅದು ಇದ್ದಿಲಲ್ಲ. ಚಿನ್ನದ ಗಟ್ಟಿ! ಮುದುಕ ನಡುಗುತ್ತ.
ಮುದುಕ : ಇದನ್ನೆಲ್ಲ ಹ್ಯಾಗೆ ತಂದೆಯೋ ಸೋಂಬೇರಿ?
ಸೋಂಬೇರಿ : (ಊಟ ಮಾಡುತ್ತ), “ಹೊತ್ತುಕೊಂಡು ಬಂದೆ” ಅಂದ.
ಅಣ್ಣ : ಸರಿಯಪ್ಪ, ಎಲ್ಲಿಂದ ತಂದೆಯೋ ಸೋಂಬೇರಿ?
ಸೋಂಬೇರಿ : ಕಾಡಿನಿಂದ.
ತಾಯಿ : ಯಾರಪ್ಪ ನಿನಗಿದನ್ನು ಕೊಟ್ಟವರು?
ಸೋಂಬೇರಿ : ಭಯಂಕರ ರಾಕ್ಷಸಿ ಕೊಟ್ಟಳಮ್ಮ! ಅವಳು ಕೊಟ್ಟಳು, ನಾನು ತಂದೆ.
ಸೋಂಬೇರಿಯನ್ನು ಬಿಟ್ಟು ಉಳಿದವರ್ಯಾರೂ ಆ ದಿನ ಮಲಗಲಿಲ್ಲ. ಮುಂದೆ ಚಿನ್ನದಿಂದ ಏನೇನು ಮಾಡಬೇಕೆಂದು ಕನಸು ಕಾಣುತ್ತ ಬೆಳ್ಳಂಬೆಳಗೂ ಅಲ್ಲದೆ ಮಾರನೇ ದಿನ ಸಂಜೆಯವರೆಗೂ ಕೂತಿದ್ದರು.
೪
ಅಣ್ಣಂದಿರಿಬ್ಬರೂ ಹೊಸ ಮನೆ ಕಟ್ಟಿಸಿಕೊಂಡು ಮದುವೆ ಮಾಡಿಕೊಂಡು ತಂತಮ್ಮ ಹೆಂಡಂದಿರೊಂದಿಗೆ ಸುಖವಾಗಿದ್ದರು. ಸೋಂಬೇರಿ ಮಾತ್ರ ತಂದೆ – ತಾಯಿಗಳ ಜೊತೆಗೆ, ಈಗ ಕೊಂಚ ಸುಧಾರಣೆಯಾದ ಅದೇ ಹಳೇ ಮನೆಯಲ್ಲಿ ಇದ್ದ.
ತಂದೆ : ನೀನೂ ಒಂದು ಮನೆ ಕಟ್ಟಿಸಿಕೊಳ್ಳಯ್ಯ.
ಸೋಂಬೇರಿ : ಬ್ಯಾಡಪ್ಪ ನಾನು ನಿಮ್ಮ ಜೊತೆಗೇ ಇರ್ತೇನೆ.
ಆಗ ತಾಯಿ ಹೇಳಿದಳು —
ತಾಯಿ : ನಿನಗೆ ಹೊತ್ತು ಹೊತ್ತಿಗೆ ಅಡಿಗೆ ಮಾಡಿ ಹಾಕೋದಕ್ಕೆ, ಉಡುಪು ತೊಡಪು ಒಗೆದು ಕೊಡೋದಕ್ಕೆ ಒಂದು ಹೆಂಡತಿ ಬೇಡವೇನೋ ಸೋಂಬೇರಿ?
ಸೋಂಬೇರಿ : ಬೇಕು ನಿಜ, ಆದರೆ ಅವಳೆಲ್ಲಿ ಸಿಗ್ತಾಳೆ?
ತಾಯಿ : ಅವಳೆಲ್ಲಿ ಸಿಗ್ತಾಳೆ ಅಂದರೆ? ನೀನೂ ಒಂದು ಹುಡುಗೀನ್ನ ನೋಡಿ ಮದುವೆ ಮಾಡಿಕೊಳ್ಳಪ್ಪಾ.
ಸೋಂಬೇರಿ : ಎಲ್ಲಿ ನೋಡಲಿ?
ತಂದೆ : ನಿನ್ನ ಅಣ್ಣಂದಿರು ಹ್ಯಾಗೆ ಅಕ್ಕಪಕ್ಕ ಹುಡುಗಿಯರನ್ನ ನೋಡಿ ಮದುವೆ ಮಾಡಿಕೊಂಡರೋ ಹಾಗೆ ನೀನೂ ನೋಡು, ನಾವು ಹೋಗಿ ಅವಳ ತಂದೆ ತಾಯಿಗೆ ಭೇಟಿಯಾಗಿ ಕೇಳ್ತೇವೆ.
ಸೋಂಬೇರಿಗೆ ಸಂತೋಷವಾಯಿತು.
ಸೋಂಬೇರಿ : ನನಗೆ ಬೇಕಾದ ಹುಡುಗಿಗಾಗಿ ಅವಳ ತಂದೆ ತಾಯೀನ್ನ ನೋಡ್ತೀರಾ?
ತಂದೆ : ಖಂಡಿತ.
ಸೋಂಬೇರಿ : ಹಾಗಾದರೆ ಹೋಗಿ ರಾಜನ್ನ ಕೇಳಿ ಬರ್ತೀರಾ?
ಉಕ್ಕಿಬಂದ ಕೋಪವನ್ನು ನಿಯಂತ್ರಿಸಿಕೊಂಡು ತಂದೆ ಹೇಳಿದ.
ತಂದೆ : ಲೋ ಸೋಂಬೇರಿ, ರಾಜರೆಂದಾದರೂ ತಮ್ಮ ಮಗಳನ್ನು ನಿನ್ನಂಥ ದಡ್ಡನಿಗೆ ಕೊಡೋದುಂಟೇನಯ್ಯಾ? ಅವರ ಅಂತಸ್ತೇನು? ನಮ್ಮದೇನು? ನಾವು ಇದ್ದಿಲು ಮಾರುವವರು, ಕೇಳೋದಕ್ಕೆ ಒಂದು ಇತಿಮಿತಿ ಅಂತ ಬೇಡವೇನಯ್ಯಾ? ಅಣ್ಣಂದಿರ ಹಾಗೆ ನೀನೂ ನಮ್ಮ ಆಸುಪಾಸಿನ ಒಂದು ಹುಡುಗೀನ್ನ ಹುಡುಕು.
ಸೋಂಬೇರಿ ಹಟ ಹಿಡಿದು ಹೇಳಿದ.
ಸೋಂಬೇರಿ : ನನಗೆ ಬೇರೆ ಯಾರೂ ಬೇಡ. ಅರಮನೆಗೆ ಹೋಗಿ ರಾಜರಾಣಿಯರ ಹತ್ತಿರ ನನಗಾಗಿ ಅವರ ಮಗಳ್ನ ಕೇಳಿ ಬನ್ನಿ ಅಷ್ಟೆ.
ತಂದೆ : ದಡ್ಡಾ, ಅವರು ನಮ್ಮನ್ನ ಕಣ್ಣೆತ್ತಿ ಕೂಡ ನೋಡುವುದಿಲ್ಲ. ಗೇಟಿನೊಳಕ್ಕೂ ಬಿಡುವುದಿಲ್ಲ ಗೊತ್ತ? ಹಾಗೂ ನಿನ್ನ ಮಾತು ಕೇಳಿಕೊಂಡು ನಾವೇನಾದರೂ ಒಳಗೆ ಹೋದರೆ ದೊಡ್ಡ ದೊಡ್ಡ ನಾಯಿಗಳನ್ನು ಛೂ ಬಿಡ್ತಾರಷ್ಟೆ.
ಸೋಂಬೇರಿ : ನಾಯಿಗಳನ್ನ ಛೂ ಬಿಟ್ಟರೂ ನಿಮಗೇನೂ ಆಗಬಾರದು. ಅಷ್ಟೆ ತಾನೆ? ಆಯ್ತು ಬಿಡಿರಿ.
ಎಂದು ಹೇಳಿ ಕೊಡಲಿ ತೆಗೆದುಕೊಂಡು ನಡೆದೇ ಬಿಟ್ಟ.
ತಾಯಿ : ಎಲ್ಲಿಗೆ ಹೊರಟೆ? ಕಾಡಿಗ? ಅರಮನೆಗಾ?
ಸೋಂಬೇರಿ : ಕಾಡಿಗೆ.
ಇನ್ನೊಂದು ಮಾತು ಹೇಳುವುದರೊಳಗೆ ಸೋಂಬೇರಿ ಹೊರಟುಹೋಗಿದ್ದ.
೫
ಸೋಂಬೇರಿ ಅದೇ, ಒಣ ಮರದ ಬಳಿಗೆ ಬಂದು, ಬುಡದ ತುಂಬ ನೀರು ಹಾಕಿ, ನಮಸ್ಕಾರ ಮಾಡಿ ಕೊಡಲಿ ಎತ್ತಿ ಏಟು ಹಾಕೇಬಿಟ್ಟ. ವಿಶ್ರಾಂತಿ ತಗೊಳ್ಳುತ್ತಿದ್ದ ರಾಕ್ಷಸಿಗೆ ಈಗ ಮಾತ್ರ ಕೋಪ ಬಂತು.
ರಾಕ್ಷಸಿ : ಲೋ ಸೋಂಬೇರಿ, ಮತ್ಯಾಕಯ್ಯಾ ಬಂದೆ? ನಿನಗೆ ಕೊಟ್ಟ ಸಲಿಗೆ ಜಾಸ್ತಿಯಾಯ್ತು. ಈ ಸಲ ನನಗೆ ನಿಜವಾದ ಕೋಪ ಬಂದಿದೆ, ಹೇಳಿರ್ತೀನಿ. ಮರ ಬಿಟ್ಟು ಹಿಂದೆ ಸರಿದೆಯೋ – ಸರಿ, ಇಲ್ಲದೆ ಹೋದ್ರೆ ನೋಡು, – ಖಂಡಿತ ನುಂಗಿಬಿಡ್ತೀನಿ.
ದಡ್ಡರಿಗೆ ಭಯವಿಲ್ಲ, ಅಲ್ಲವೇ? ಸೋಂಬೇರಿಯೂ ಅಷ್ಟೆ ಹಠದಿಂದ ಹೇಳಿದ.
ಸೋಂಬೇರಿ : ಈ ಸಲ ನನಗೆ ಇನ್ನೇನೂ ಬೇಕು, ಕೊಟ್ಟರೆ ಸರಿ, ಇಲ್ಲದಿದ್ದರೆ ಮರವನ್ನು ಕಡಿದು ತುಂಡು ತುಂಡು ಮಾಡಿಬಿಡ್ತಿನಿ ಅಷ್ಟೆ.
ರಾಕ್ಷಸಿ : ಈ ಸಲ ಏನು ಬೇಕು ನಿನಗೆ?
ಸೋಂಬೇರಿ : ನನಗೇನು ಬೇಕೋ ಗೊತ್ತಿಲ್ಲ. ನಿನಗೂ ಗೊತ್ತಿದೆ ನಾನು ದಡ್ಡ ಅಂತ. ನೀನು ರಾಕ್ಷಸಿಯಾದ್ದರಿಂದ ನನಗಿಂತ ಬುದ್ಧಿವಂತಳಿರಲೇ ಬೇಕು. ನನಗೆ ಅದೆಂಥದೋ ಮಂತ್ರದ ನೀರು ಬೇಕು. ಆ ನೀರು ಹ್ಯಾಗಿರಬೇಕಪ್ಪಾ ಅಂದರೆ ಅದನ್ನ ಮೈಗೆ ಸವರಿಕೊಂಡರೆ ಮೈಗೆ ಕತ್ತಿ ನೆಡಬಾರದು, ಗುಂಡು ತಾಗಬಾರದು. ನಾಯಿ ಕಚ್ಚಿದರೂ, ಯಾರೇನು ಚುಚ್ಚಿದರೂ, ಕೊಚ್ಚಿದರೂ ಮೈಗೆ ತಾಗಬಾರದು, ನೋವಾಗಬಾರದು, ಗಾಯವಾಗಬಾರದು. ಒಟ್ಟಿನಲ್ಲಿ ಅಂಥಾ ನೀರು ನಿನ್ನ ಹತ್ತಿರ ಇದೆ. ನನಗದು ಬೇಕು ಅಷ್ಟೆ.
ರಾಕ್ಷಸಿ : ಅಂಥದ್ಯಾವುದೂ ನನ್ನ ಹತ್ತಿರ ಇಲ್ಲವಲ್ಲ ಮಾರಾಯಾ!
ಸೋಂಬೇರಿ : ಇಲ್ಲವ? ಇರು ಹಾಗಿದ್ದರೆ ಈ ಮರ ತುಂಡು ತುಂಡಾಯ್ತು ಅಂತ ತಿಳಿದುಕೊ.
ಅಂದವನೇ ಕೊಡಲಿ ಎತ್ತಿದ.
ರಾಕ್ಷಸಿ : ಇರಯ್ಯ, ನಿನ್ನ ಹತ್ತಿರ ಬಾಟ್ಲಿ ಇದೆಯಾ?
ಸೋಂಬೇರಿ : ಇಲ್ಲ.
ರಾಕ್ಷಸಿ : ಮತ್ತೆ ಮಂತ್ರದ ನೀರು ಯಾವುದರಲ್ಲಿ ಒಯ್ತೀಯ?
ಸೋಂಬೇರಿ : ನೀನೇ ಒಂದು ಬಾಟ್ಲಿ ಕೊಡು, ಆಮೇಲೆ ಬಾಟ್ಲಿ ವಾಪಸ್ ಕೊಡ್ತೀನಿ.
ಇದೊಳ್ಳೆ ದಡ್ಡನ ಸಹವಾಸವಾಯ್ತಲ್ಲಾ ಎಂದು ಗೊಣಗುತ್ತ ಅಂತೂ ಮಂತ್ರದ ನೀರನ್ನ ರಾಕ್ಷಸಿ ಕೊಟ್ಟಳು. ತಗೊಂಡು ಹೊರಟ. ಮನೆಗೆ ಬಂದವನೇ
ಸೋಂಬೇರಿ : ತಗೊಳ್ಳಪ್ಪ, ಮಂತ್ರದ ನೀರು! ಅರಮನೆಗೆ ಹೆಣ್ಣು ಕೇಳಲು ಹೋದಾಗ ಅವರು ನಾಯಿ ಛೂ ಬಿಡ್ತಾರೆ ಅಂದೆಯಲ್ಲವೇ? ಇಕಾ ಈ ಮಂತ್ರದ ನೀರನ್ನ ಮೈಗೆ ಸವರಿಕೊ. ಆಮೇಲೆ ಅವರು ನಾಯಿ ಛೂ ಬಿಡುವುದಿರಲಿ, ಕೊಡಲಿಯಿಂದ ಕಡಿದರೂ, ಮಚ್ಚಿನಿಂದ ಕೊಚ್ಚಿದರೂ ನಿನಗೇನೂ ಆಗೋದಿಲ್ಲ. ಆಯ್ತೊ?
ಎಂದು ಹೇಳಿ ತಾನೇ ತಂದೆಯ ಮೈಗೆ ಮಂತ್ರದ ನೀರು ಸವರಿ ಕಳಿಸಿದ.
೬
ಮುದುಕ ವಿಶ್ವಾಸದಿಂದಲೇ ಅರಮನೆಗೆ ಬಂದ. ಗೇಟಿನ ಹತ್ತಿರ ನಿಂತಿದ್ದ ಕಾವಲುಗಾರ ನಿಲ್ಲಿಸಿ “ಯಾರು ಬೇಕಿತ್ತೋ ಮುದುಕ?” ಅಂದ.
ತಂದೆ : ರಾಜರನ್ನ ನೋಡಬೇಕು ಒಳಗೆ ಬಿಡಪ್ಪ.
ಕಾವಲುಗಾರ : ರಾಜರನ್ನು ಯಾಕೆ ನೋಡಬೇಕು?
ತಂದೆ : ನನ್ನ ಮಗ ಸೋಂಬೇರಿಗೆ ಅವರ ಮಗಳನ್ನು ಕೇಳಬೇಕು.
ಈಗ ಮಾತ್ರ ಕಾವಲುಗಾರ ಮನಸಾರೆ ಬಿದ್ದು ಬಿದ್ದು ನಕ್ಕ. ನಗುತ್ತಲೇ ತಡೆಯಲಾರದೆ ಮತ್ತಷ್ಟು ನಗುತ್ತ “ತೊಲಗಯ್ಯ ಆಚೆ. ನಗಿಸಬೇಡ ನನ್ನನ್ನ” ಎಂದು ನಗುತ್ತಲೇ ಕತ್ತುಹಿಡಿದು ಹೊರಕ್ಕೆ ದಬ್ಬಿದ. ಆದರೆ ಮುದುಕನಿಗೆ ಮಗ ಕೊಟ್ಟ ವಿಶ್ವಾಸವಿತ್ತಲ್ಲ, ಮತ್ತೆ ಗೇಟಿನ ಬಳಿ ಬಂದು, “ಗೇಟು ಬಾಗ್ಲು ತಗೀಯಪ್ಪ” ಅಂದ.
ಕಾವಲುಗಾರ : ಯಾಕೆ, ಹೇಳಿದ್ದು ಕೇಳಿಸಲಿಲ್ಲವ? ಹೋಗ್ತೀಯಾ, ಇಲ್ಲ ಕೈಕಾಲು ಮುರಿದು ಹಾಕಬೇಕ?
ತಂದೆ : ರಾಜರನ್ನ ನೋಡಬೇಕಪ್ಪ, ನೀನು ಹೋಗಿ ಹೇಳು : ನಾನು ಬಂದಿದೀನಿ ಅಂತ. ರಾಜರು ಆಗೋದಿಲ್ಲ ಅಂದರೆ ಬಂದು ಹಾಗೇ ಹೇಳು, ಸಾಕು.
ಕಾವಲುಗಾರ : ಓ ದೊಡ್ಡ ಮನುಷ್ಯ! ರಾಜರಿಗೆ ನಿಮ್ಮನ್ನೋಡಲು ಯಾರು ಬಂದಿದ್ದಾರೆ ಅಂತ ಹೇಳಲಿ?
ತಂದೆ : ಇದ್ದಿಲು ಮಾರೋ ತಿಮ್ಮಪ್ಪ ಬಂದಿದ್ದಾನೆ ಅಂತ ಹೇಳಪ್ಪ.
ಕಾವಲುಗಾರ : ಇರು ಇರು, ನಿನಗೆ ನನ್ನ ಮಾತು ಅರ್ಥವಾಗೋ ಹಾಗೆ ಕಾಣೆ….
ಎಂದು ಒಳಕ್ಕೆ ಹೋಗಿ ಕಾವಲುಗಾರ ಮುದುಕ ತಂದೆಯ ಮೇಲೆ ನಾಯಿಗಳನ್ನು ಛೂಬಿಟ್ಟ. ಆರ್ಭಟಿಸುತ್ತ ಓಡಿಬಂದ ನಾಯಿ ಮುದುಕನ ಸಮೀಪ ಹೋಗದೆ ಹೆದರಿಕೊಂಡು ಓಡಿಹೋಗೇಬಿಟ್ಟವು! ಕಾವಲುಗಾರನಿಗೆ ಆಶ್ಚರ್ಯವಾಗಿ ರಾಜರ ಬಳಿಗೆ ಓಡಿ ಹೋದ.
ಕಾವಲುಗಾರ : ಸ್ವಾಮಿ ಇದ್ದಿಲು ಮಾರೋ ತಿಮ್ಮ ನಿಮ್ಮನ್ನು ನೋಡಬೇಕಂತೆ ಅಂತ ಹೇಳಿದ. ರಾಜನಿಗೆ ಕೋಪ ಬಂತು.
ರಾಜ : ಇದ್ದಿಲು ಮಾರೋ ತಿಮ್ಮ? ನಿನಗೆ ತಲೆ ಕೆಟ್ಟಿದೆಯೇನಯ್ಯಾ? ಎತ್ತಿ ಬಿಸಾಕಲಿಲ್ಲವ ಬೀದಿಗೆ?
ಕಾವಲುಗಾರ : ಬಿಸಾಕಿದೆ, ಮತ್ತೆ ಬಂದ ಸ್ವಾಮಿ.
ತಂದೆ : ನಾಯಿಗಳನ್ನ ಛೂ ಬಿಡಬಾರದೆ?
ಕಾವಲುಗಾರ : ಬಿಟ್ಟೆ ಅವನನ್ನು ಕಂಡು ನಾಯಿಗಳು ಹೆದರಿ ಓಡಿದವೇ ಹೊರತು ಕಚ್ಚಲಿಲ್ಲ ಸ್ವಾಮಿ.
ಈಗ ರಾಜ ಯೋಚಿಸಲೇಬೇಕಾಯಿತು.
ರಾಜ : ಓಹೋ ಇಷ್ಟು ದೊಡ್ಡ ಪುಂಡನೋ ಇವನು! ಅಗೋ ಅಲ್ಲಿ ಬಂದೂಕಿದೆ. ತಗೊಂಡು ಕೊಂದು ಬಿಸಾಕಿಬಿಡು. ಇನ್ನೊಮ್ಮೆ ಅವನ ಹೆಸರೆತ್ತಬೇಡ ನನ್ನ ಮುಂದೆ ಗೊತ್ತಾಯ್ತೋ?
ಕಾವಲುಗಾರ ಬಂದೂಕು ತೆಗೆದುಕೊಂಡು ಹೋದ.
ರಾಜ ಒಬ್ಬನೇ ಅತ್ತಿತ್ತ ಅಲೆದಾಡುತ್ತಾ ಹೊಸದಾಗಿ ಹುಟ್ಟಿಕೊಂಡ ಪುಂಡನ ಬಗ್ಗೆಯೇ ಯೋಚನೆ ಮಾಡುತ್ತಿದ್ದಾಗ ಹೊರಗೆ ಕಾವಲುಗಾರ ಹಾರಿಸಿದ ಬಂದೂಕಿನ ಸದ್ದು ಕೇಳಿಸಿತು. ಓಡಿ ಹೋಗಿ ‘ಸತ್ತನಾ ಪುಂಡ?’ ಅಂದುಕೊಳ್ಳುತ್ತ ಕಿಡಿಕಿಯಲ್ಲಿಂದ ನೋಡಿದ. ಈಗಷ್ಟೆ ಕಾವಲುಗಾರ ಗುಂಡು ಹಾರಿಸಿದ್ದ. ಹೊಗೆ ಕವಿದಿತ್ತು. ಹೊಗೆ ಕಡಿಮೆಯಾದ ಮೇಲೆ ನೋಡಿದರೆ ಹೊಗೆಯ ಸ್ಥಳದಲ್ಲಿ ಒಬ್ಬ ಮುದಕ ನಗುತ್ತ ನಿಂತಿದ್ದ! ಅವನ ನಗೆ ನೋಡಿ ಕಾವಲುಗಾರ ಗಾಬರಿಯಾಗಿ ಒಳಗೋಡಿ ಬಂದ. ಇದನ್ನೆಲ್ಲ ನೋಡುತ್ತಾ ಕಿಡಿಕಿಯಲ್ಲಿ ನಿಂತಿದ್ದ ರಾಜನಿಗೂ ಆಶ್ಚರ್ಯ ಗಾಬರಿಯಾಯ್ತು, ಓಡಿಬಂದ. ಕಾವಲುಗಾರ ಬಾಯಿ ತೆಗೆಯುವ ಮೊದಲೇ ಹೇಳಿದ –
ರಾಜ : ಗೊತ್ತು, ಅವನಿಗೇನೂ ಆಗಿಲ್ಲ, ಅವನ್ಯಾನವನೋ ಮಾಂತ್ರಿಕನೋ, ದೊಡ್ಡ ಮನುಷ್ಯನೋ ಆಗಿರೇಕು. ಮರ್ಯಾದೆಯಿಂದ ಒಳಗೆ ಕರೆದುಕೊಂಡು ಬಾ.
ಕಾವಲುಗಾರ ಓಡಿ ಹೋಗಿ ಮುದುಕನನ್ನು ಕರೆತಂದ. ಇದ್ದಿಲು ಮಾರುವ ತಿಮ್ಮ ರಾಜನಿಗೆ ನಮಸ್ಕಾರ ಮಾಡಿ ಹೇಳಿದ.
ತಿಮ್ಮ : ಸ್ವಾಮೀ, ನಾನು ಇದ್ದಿಲು ಮಾರೋ ತಿಮ್ಮ. ನನ್ನ ಕೊನೇ ಮಗ ಸೋಂಬೇರಿ. ಅವನು ನಿಮ್ಮ ಮಗಳನ್ನ ಮದುವೆಯಾಗಬೇಕಂತ ದೊಡ್ಡ ಮನಸ್ಸು ಮಾಡಿದ್ದಾನೆ.
ರಾಜನ ಕೋಪ ನೆತ್ತಿಗೇರಿ ನೆತ್ತಿಯ ಕೂದಲು ಸುಟ್ಟವು.
ರಾಜ : ಏನಂದೆ?
ತಿಮ್ಮ : ಹೌದು ಸ್ವಾಮಿ! ಅದಾಗದು, ಬೇಡ ಅಂತ ನಾನೆಷ್ಟು ಹೇಳಿದರೂ ಕೇಳವೊಲ್ಲ. ನೀನ್ಹೋಗಿ ಕೇಳಿಕೊಂಡು ಬಾ ಅಂತ ಒಂದೇ ಸಮ ಗೋಗರೆದ. ನಾನಿನ್ನೇನ್ಮಾಡಲಿ?
ರಾಜ : ಅರಮನೆಗೆ ಬಂದೆ ಅಲ್ಲವೆ?
ತಿಮ್ಮ : ಅಷ್ಟೇ ಸ್ವಾಮಿ.
ರಾಜ : ಹೋಗಿ ನಿನ್ನ ಮಗನನ್ನೇ ಇಲ್ಲಿಗೆ ಕಳಿಸು. ಅವನೆಂಥವನು ಅಂತ ನಾವೂ ನೋಡಿದಂತಾಗುತ್ತದೆ. ಅವನೂ ನಮ್ಮ ಮನೆ ಒಂದ್ಸಲ ನೋಡ್ಲಿ. ಎಷ್ಟೆಂದರೂ ಈ ಅರಮನೆಗೆ ಅಳಿಯಂದಿರಲ್ಲವೇ?
ತಿಮ್ಮ : ಆಯ್ತು ಸ್ವಾಮಿ.
೭
ಇದ್ದಿಲು ಮಾರುವ ತಿಮ್ಮ ಬಂದು ಅರಮನೆಯಲ್ಲಿ ನಡೆದದ್ದನ್ನು ವಿವರಿಸಿ ‘ಹೋಗಿ ರಾಜನನ್ನ ನೋಡಲು’ ಹೇಳಿದ. ರಾಜನಿಗಿಂತ ಇವನೇನು ಕಡಿಮೇನಾ? “ಅವನನ್ನೇನು ನೋಡೋದು? ನೀನೇ ಇನ್ನೊಮ್ಮೆ ಹೋಗಿ ನಾಳೆಗೆ ಮದುವೆ ನಿಶ್ಚಯ ಮಾಡಿಕೊಂಡು ಬಾಪ್ಪಾ” ಅಂದ.
ತಿಮ್ಮ : ಅಲ್ಲಯ್ಯಾ ಮದುವೆಗೆ ಮುಂಚೆ ವರನನ್ನ ವಧುವಿನ ತಂದೆ ತಾಯಿ ನೋಡಬೇಡವ? ವರ ಹ್ಯಾಗಿದ್ದಾನೆ, ಏನು ಎತ್ತ ತಿಳಕೊಳ್ಳಬೇಡವ?
ಸೋಂಬೇರಿ : ನನ್ನನ್ನೇನು ನೋಡೋದು? ಮನುಷ್ಯರ ಥರ ಇದ್ದೇನೆ. ಮನುಷ್ಯರ ಥರ ಏನು? ಮನುಷ್ಯನೇ. ಹಾಗಂತ ಹೇಳಪ್ಪ ಹೋಗಿ.
ತಾಯಿ : ಅಲ್ಲವಪ್ಪಾ, ರಾಜಕುಮಾರಿಯನ್ನಾದರೂ ನೀನು ನೋಡ ಬ್ಯಾಡವೇ?
ಸೋಂಬೇರಿ : ಅವಳನ್ನೇನಮ್ಮ ನೋಡೋದು?
ತಾಯಿ : ರಾಜಕುಮಾರಿ ಕುರುಡೀನ? ಕುಂಟೀನ? ಗೊತ್ತಾಗಬ್ಯಾಡವ?
ಸೋಂಬೇರಿ : ಅವ್ಳು ಹ್ಯಾಗಿದ್ದರೂ ಸರಿ, ಏನಾಗಿದ್ದರೂ ಸರಿ. ಒಟ್ಟಿನಲ್ಲಿ ರಾಜಕುಮಾರಿ ಆಗಿರಬೇಕು. ಮದುವೆ ಆದಮೇಲೆ ನನ್ನ ಜೊತೆ ನಮ್ಮ ಮನೇಲಿರಬೇಕು. ನನ್ನ ಬಟ್ಟೆ ಒಗೀಬೇಕು. ಅಡಿಗೆ ಮಾಡಿ ಊಟಕ್ಕೆ ಹಾಕಿದರಾಯ್ತು.
ತಾಯಿ : ಅವಳು ನಿನ್ನನ್ನು ಇಷ್ಟಪಡದಿದ್ದರೆ?
ಸೋಂಬೇರಿ : ಯಾಕಿಷ್ಟಪಡೋದಿಲ್ಲ? ನಾನಿಷ್ಟಪಟ್ಟಿದ್ದೀನಿ. ಅಂದಮೇಲೆ ಅವಳೂ ಇಷ್ಟಪಡಬೇಕು ಅಷ್ಟೆ.
“ಇದೊಳ್ಳೇ ದಡ್ಡನ ಸಹವಾಸವಾಯ್ತು” ಅಂತ ತಂದೆ ತಲೆ ತಲೆ ಚಚ್ಚಿಕೊಳ್ಳುತ್ತಿರಬೇಕಾದರೆ,
ಸೋಂಬೇರಿ : “ನೀನು ನಾಳೆ ಹೋಗಿ ಮದುವೆ ಗೊತ್ತು ಮಾಡಿಕೊಂಡು ಬಾಪ್ಪಾ” ಎಂದು ಹೇಳಿ ಕೊಡಲಿ ತಗೊಂಡು ಕಾಡಿಗೆ ಹೊರಟ.
೮
ಈ ಸಲ ಅವನು ಬರುವುದನ್ನು ನೋಡುತ್ತ ಭಯಂಕರ ರಾಕ್ಷಸಿಯೇ ನಿಂತಿದ್ದಳು. ಸೋಂಬೇರಿ ‘ಬಂದು ಮರದ ಬದಲು ಅವಳಿಗೇ ಅಡ್ಡಬಿದ್ದು ಹೇಳಿದ –
ಸೋಂಬೇರಿ : ನೋಡಮ್ಮ ಭಯಂಕರ ರಾಕ್ಷಸಿ, ಇದೇ ಕೊನೇ ಸಲ ನಿನ್ನ ಸಹಾಯ ಕೇಳೋದು. ಇದಾದ ಮೇಲೆ ನೀನೇ ಸಹಾಯ ಮಾಡ್ತೀನಿ ತಗೊ ಅಂತ ಬಂದರೂ ನಾನು ತಗೊಳ್ಳಾಕಿಲ್ಲ. ನಾಳೆ ನನ್ನ ಮದುವೆ. ರಾಜಕುಮಾರಿ ಜೊತೆಗೆ ಮದುವೆ ಅಂದರೆ ಏನೇನೆಲ್ಲಾ ವ್ಯವಸ್ಥೆ ಆಗಬೇಕಲ್ಲವೆ? ಆದರೆ ಏನೇನು ವ್ಯವಸ್ಥೆ ಅಂತ ನನಗ್ಗೊತ್ತಿಲ್ಲ. ಅದೆಲ್ಲಾ ನೀನೇ ಮಾಡಬೇಕು.
ರಾಕ್ಷಸಿ : ನಿನ್ನ ಮದುವೆಗೆ ಏನೇನು ಬೇಕಂತ ನನಗೆ ಹ್ಯಾಗಯ್ಯಾ ಗೊತ್ತಾಗಬೇಕು?
ಸೋಂಬೇರಿ : ನನಗಿನ್ನೇನು ಐದಾರು ಮದುವೆ ಆಗಿ ಅನುಭವ ಇದೆಯಾ? ಏನೋ ದೊಡ್ಡವಳು, ನನಗಿಂತ ತಿಳಿದವಳು ಅಂತ ಕೇಳ್ದೆ. ತಿಳಿದಷ್ಟು ಹೇಳಿದರಾಯ್ತಪ್ಪ.
ರಾಕ್ಷಸಿ : ಮದುವೆ ಯಾವ ದಿನ?
ಸೋಂಬೇರಿ : ನಾಳೆ.
ರಾಕ್ಷಸಿ : ಮದುವೆ ಸಾಮಾನಿನ ಪಟ್ಟಿ ಮಾಡಿಕೊಂಬರ್ತೀಯಾ?
ಸೋಂಬೇರಿ : ಅಯ್ಯೋ ನೀನೊಬ್ಬಳು! ಒಂದು ಕೆಲಸ ಮಾಡು. ನನಗೇನು ಬೇಕೋ ತಕ್ಷಣ ಸಿಕ್ಕೋ ಹಾಗೆ ಒಂದು ಥರಾ ಶಕ್ತಿ ಕೊಟ್ಟುಬಿಡು, ಸಾಕು. ಮದುವೆ ಮುಗಿದ ಮೇಲೆ ಅದನ್ನು ವಾಪಸ್ ನಿನಗೇ ಕೊಡ್ತೀನಿ.
ರಾಕ್ಷಸಿ : ಇರು ಹಾಗಾದರೆ.
ಅಂತ ಹೇಳಿ ಅವಳು ತಾನು ನಿಂತ ಮರದ ಪೊಟರೆಯಲ್ಲಿ ಕೈಹಾಕಿ ಒಂದು ಬೀಜ ತೆಗೆದಳು. ಅದನ್ನು ಸೋಂಬೇರಿಗೆ ಕೊಡುತ್ತ “ತಗೋ ಇದನ್ನ, ಇದು ನೀನು ಹಿಂದೆ ನೀರು ಹಾಕಿದ ಮರದ ಬೀಜ. ಇದನ್ನ ಬಾಯಲಿಟ್ಟುಕೊಂಡರೆ ನಿನಗೇನು ಆಸೆಯಾಗುತ್ತೋ ಅದು ನಿನ್ನ ಮುಂದೆ ಇರ್ತದೆ. ಆದರೆ ಮದುವೆ ಆದ ಮೇಲೆ ಇದನ್ನ ವಾಪಸ್ ಕೊಡೋದನ್ನ ಮರೀಬೇಡ” ಎಂದು ಹೇಳಿ ಆಶೀರ್ವದಿಸಿದಳು.
ಇಷ್ಟಾದ ಮೇಲೆ ಮದುವೆ ಆಯಿತೆಂದು ಬೇರೆ ಹೇಳಬೇಕೋ? ನೀವು ಹ್ಯಾಗೆ ಊಹಿಸುತ್ತೀರೋ ಹಾಗೇ ಮದುವೆ ಆಯ್ತು. ನಿಮ್ಮ ಕಲ್ಪನೆಗೆ ಮೀರಿದ ಒಂದು ಘಟನೆಯನ್ನ ಹೇಳಬೇಕೆಂದರೆ ಮದುವೆ ಆದಮೇಲೆ ಸೋಂಬೇರಿ ರಾಜಕುಮಾರಿಯ ಜೊತೆಗೆ ಮಾತು ಕೊಟ್ಟಂತೆ ಭಯಂಕರ ರಾಕ್ಷಸಿಯ ಹತ್ತಿರ ಬಂದ. ಇವನ ದಾರಿಯನ್ನೇ ಕಾಯುತ್ತಿರುವಂತೆ ರಾಕ್ಷಸಿ ಆಶೀರ್ವದಿಸುವ ಭಂಗಿಯಲ್ಲಿ ನಿಂತಿದ್ದಳು. ಆದರೆ ಬಾಯಿ ತೆರೆದವಳು ಮುಚ್ಚದೆ ಹಾಗೇ ನಿಂತುಬಿಟ್ಟಳು. ಯಾಕೆಂದರೆ ರಾಜಕುಮಾರಿ ಕುಂಟಿಕೊಂಡು ಬರುತ್ತಿದ್ದಳು. ಅವಳೇನೋ ಹುಟ್ಟಾ ಕುಂಟಿ, ಕುಂಟುತ್ತಿರಬೇಕು; ಆದರೆ ನಮ್ಮ ನಾಯಕ ಸೋಂಬೇರಿಯೂ ಕುಂಟುತ್ತಿದ್ದಾನೆ! “ನೀನ್ಯಾಕಯ್ಯಾ ಕುಂಟುತ್ತಿ?” ಅಂದರೆ “ರಾಜಕುಮಾರಿ ಕುಂಟಿ, ಒಬ್ಬಳೇ ಕುಂಟಿದರೆ ಬೋರಾಗುತ್ತಲ್ಲ, ಅದಕ್ಕೇ ಸಹಾನುಭೂತಿ ಸೂಚಿಸಲು ನಾನೂ ಕುಂಟುತ್ತಿದ್ದೇನೆ” ಅನ್ನೋದೆ! ನಿಮಗೆ ನಗೆ ಬರಬಹುದು. ಆದರೆ ಭಯಂಕರ ರಾಕ್ಷಸಿಗೆ ಸಂತೋಷವಾಯ್ತು. ತಾನು ಕಾಡಿನ ದೇವತೆಯೆಂದೂ ಇದು ತನ್ನ ನಿಜವಾದ ಸ್ವರೂಪವೆಂದೂ ಅವರೆದುರಿನಲ್ಲಿಯೇ ಮುದುಕಿಯಾಗಿ ಪರಿವರ್ತನೆ ಹೊಂದಿ ತನಗೆ ಹಿಂದಿರುಗಿಸಲು ಬಂದ ‘ಬೇಡಿದ್ದನ್ನು ಕೊಡುವ ಬೀಜ’ವನ್ನು ಹೊಸ ದಂಪತಿಗಳಿಗೆ ತನ್ನ ಕಾಣಿಕೆಯಾಗಿ ಕೊಟ್ಟು. ನಮಸ್ಕರಿಸಿದ ಇಬ್ಬರನ್ನೂ ಆಶೀರ್ವದಿಸಿದಳೆಂಬಲ್ಲಿ ಕಥೆಗೆ ಮಂಗಲವಾಯ್ತು.
* * *
Leave A Comment