ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಗಂಡಹೆಂಡತಿ ಇದ್ದರು. ಗಂಡ ಕುರಿಯಣ್ಣ, ಹೆಂಡತಿ ಕೋರೆಹಲ್ಲಿನ ಕೊರವಿ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬಳು ಒಕ್ಕಣ್ಣಿ, ಇನ್ನೊಬ್ಬಳು ಮುಕ್ಕಣ್ಣಿ. ಚಿಕ್ಕವಳಿಗೆ ಒಂದೇ ಕಣ್ಣು; ಅದಕ್ಕೇ ಅವಳು ಒಕ್ಕಣ್ಣಿ. ದೊಡ್ಡವಳಿಗೆ ಎರಡಲ್ಲದೆ ನೆತ್ತಿಯಲ್ಲೊಂದು ಕಣ್ಣಿತ್ತು; ಅವಳು ಮುಕ್ಕಣ್ಣಿ. ಈ ಇಬ್ಬರಲ್ಲದೆ ಕುರಿಯಣ್ಣನ ಮೊದಲನೇ ಹೆಂಡತಿಯ ಮಲ್ಲಿಗೆ ಎಂಬ ಮಗಳಿಗೆ ಜನ್ಮ ನೀಡಿ ಅಸು ನೀಗಿದ್ದಳು. ಮಲಮಗಳಾದ ಮಲ್ಲಿಗೆಯೂ ಇದೇ ಮನೆಯಲ್ಲಿದ್ದಳು. ಮಲಮಗಳಾಗಿದ್ದರಿಂದ ಮಲತಾಯಿ ಮತ್ತವಳ ಇಬ್ಬರು ಭಯಾನಕ ಹುಡುಗಿಯರು ಮಲ್ಲಿಗೆಯನ್ನ ಕೆಟ್ಟದಾಗಿ ಕಾಣುತ್ತಿದ್ದರು, ಪೀಡಿಸುತ್ತಿದ್ದರು. ಅವಳ ಮೇಲೆ ಶಾಪ, ಬೈಗಳ, ಕಠಿಣೋಕ್ತಿಗಳ ಮಳೆಗರೆಯುತ್ತಿದ್ದರು. ಸೇವಕಿಯಂತೆ ಮನೆಗೆಲಸಗಳನ್ನೂ ಮಲ್ಲಿಗೆಯೇ ಮಾಡಬೇಕಿತ್ತು. ಹೋಗಲಿ ಹೊಟ್ಟೆತುಂಬ ಊಟಕ್ಕಾದರೂ ಹಾಕುತ್ತಿದ್ದರೆ? – ಅದೂ ಇಲ್ಲ. ತಂಗಳು ಪಂಗಳು ಹಾಕಿ, ಕಪಿಲೆ ಹಸು ಬಿಟ್ಟು, ‘ಮೇಯಿಸಿಕೊಂಡು ಬಾ’ ಎಂದು ಕಾಡಿಗಟ್ಟುತ್ತಿದ್ದರು.

ಇಂತಿರಲಾಗಿ ಒಂದು ದಿನ ತಂಗಳನ್ನ ಕೂಡ ಹಾಕದೆ ಮಲ್ಲಿಗೆಯನ್ನ ಕಾಡಿಗಟ್ಟಿದ್ದರು. ಮಲ್ಲಿಗೆ ಕಾಡಿಗೆ ಬಂದು ತನ್ನ ತಾಯಿಯ ಗೋರಿ ಬಳಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಕಪಿಲೆ ಹಸುವಿಗೂ ಕರುಣೆ ಬಂದು ಕತ್ತಿನಿಂದ ಅವಳ ಬೆನ್ನುಜ್ಜಿ ಸಮಾಧಾನ ಮಾಡಲು ಪ್ರಯತ್ನಿಸಿತು. ಅಷ್ಟರಲ್ಲಿ “ಯಾಕಳುತ್ತೀ ಮಗಳೆ?” ಎಂದು ದನಿ ಕೇಳಿಸಿತು. ಇಂತೆಂಬ ನುಡಿ ಕೇಳಿ ಮಲ್ಲಿಗೆಗೆ ಆಶ್ಚರ್ಯವಾಯಿತು. ಯಾರು ಮಾತಾಡಿದರೆಂದು ಸುತ್ತ ನೋಡಿದಳು. ಗೋರಿಯ ಕಡೆಯಿಂದ ಒಬ್ಬ ಹೆಂಗಸು ಬಂದಳು! ಮಲ್ಲಿಗೆ “ಯಾರಮ್ಮ ನೀನು?” ಎಂದಳು.

“ನಾನು ನಿನ್ನ ತಾಯಿ ಮಗಳೇ, ಸತ್ತು ಹೀಗಿದ್ದೇನೆ.”

ಮಲ್ಲಿಗೆ ತಾಯಿ ಎಂಬ ಶಬ್ದ ಕೇಳಿ ದುಃಖ ಒತ್ತರಿಸಿ ಬಂತು, ಇಬ್ಬರೂ ತಬ್ಬಿಕೊಂಡು ಕಣ್ಣೀರ ಕೊಳದಲ್ಲಿ ಮುಳುಗೇಳುತ್ತ ತಮ್ಮಲ್ಲಿದ್ದ ಎಲ್ಲ ಕಣ್ಣೀರನತ್ತರು. ಆಮೇಲೆ ಮಗಳನ್ನ ಸಮಾಧಾನ ಮಾಡುತ್ತ,

“ಹೇಳು ಕಂದಾ, ಯಾಕಳುತ್ತಿ?” ಎಂದಳು.

“ನೀನು ಸಾಯುವಾಗ ನನ್ನನ್ನೂ ಜೊತೆ ಕರೆದೊಯ್ಯಬಾರದಿತ್ತೆ ಅಮ್ಮ? ಈಗ ನನ್ನ ಕಷ್ಟನೋಡು: ಆ ಮಲತಾಯಿ, ಅವಳ ಮಕ್ಕಳೊ! ಕೈತುಂಬ ಕೆಲಸ. ತಂಗಳು ಪಂಗಳು ಹಾಕಿ ಕಳಿಸುತ್ತಾರೆ. ಇವತ್ತು ಅದನ್ನೂ ಕೊಡಲಿಲ್ಲ.”

“ಹಾಗಿದ್ದರೆ ಒಂದು ಕೆಲಸ ಮಾಡು. ಕಣ್ಣೀರು ಒರೆಸಿಕೊ. ನಿನಗೆ ಹಸಿವಾದಾಗ ಅಥವಾ ಇನ್ನೇನಾದರೂ ಅಗತ್ಯ ಬಿದ್ದಾಗ ಈ ಕಪಿಲೆಯ ಮೇಲೆ ಕೈಯಾಡಿಸುತ್ತ –

“ಬಾ ನನ್ನ ಕಪಿಲೇ
ನೀ ನನ್ನ ತಾಯೇ
ಕಾಮಧೇನುವೆ ನನ್ನ ಕಾಯೆ”

ಎಂದು ಹೇಳು. ಆಗ ಹಸು ನಿನ್ನ ಕಡೆಗೆ ನೋಡುತ್ತದೆ. ನಿನಗೇನು ಬೇಕೋ ಅದನ್ನ ಕೇಳಿಕೊ. ನಿನ್ನ ಆಸೆಗಳೆಲ್ಲ ಈಡೇರುತ್ತವೆ. ಸಾಕಾದ ಮೇಲೆ,

“ಇಲ್ಲೀಗಿ ಹರಹರ
ಇಲ್ಲೀಗಿ ಶಿವಶಿವ
ಇಲ್ಲೀಗಿ ಸಾಕಮ್ಮ ನಿನ್ನ ದಯೆ”

ಅಂತ ಹಾಡು ಹೇಳು. ಆದರೆ ನೆನಪಿಡು, ಬೇರೆ ಯಾರಾದರೂ ಇದ್ದಾಗ ಹಸುವಿನ ಬಳಿ ಏನೂ ಕೇಳಬೇಡ.”

– ಎಂದು ಹೇಳಿ ಹೆಂಗಸು ಮಾಯವಾದಳು. ಈಗಲೇ ಪರೀಕ್ಷೆ ಮಾಡೋಣವೆಂದು ಮಲ್ಲಿಗೆ ಕಪಿಲೆಯ ಬೆನ್ನ ಮೇಲೆ ಕೈಯಾಡಿಸುತ್ತ

“ಬಾ ನನ್ನ ಕಪಿಲೇ
ನೀ ನನ್ನ ತಾಯೇ
ಕಾಮಧೇನುವೆ ನನ್ನ ಕಾಯೆ”

ಎಂದು ಹಾಡಿದಳು. ಕಪಿಲೆ ಕರುಣೆಯಿಂದ ಇವಳ ಕಡೆಗೆ ನೋಡಿತು. ಬೂಂದಿ, ಲಾಡು ಹೋಳಿಗೆ ಬೇಕೆಂದಳು. ಅವೆಲ್ಲ ಬೇರೆ ಬೇರೆ ತಟ್ಟೆಯಲ್ಲಿ ಸಿದ್ಧವಾಗಿ ಬಂದವು. ಹೊಟ್ಟೆ ತುಂಬ ತಿಂದು ಸಾಕಾದ ಮೇಲೆ “ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ ಸಾಕಮ್ಮ ನಿನ್ನ ದಯೆ” ಎಂದಳು. ಅವಳು ಬಿಟ್ಟ ವಸ್ತುಗಳೆಲ್ಲ ಮಾಯವಾದವು. ಮಲ್ಲಿಗೆ ಸಂತೋಷ ಮತ್ತು ಕೃತಜ್ಞತೆಗಳಿಂದ ಒಂದು ಜೋಕಾಲಿ ಕಟ್ಟಿಕೊಂಡು ಆಡಿ ಸಂಜೆ ಸಾಯಂಕಾಲವಾದೇಟಿಗೆ ಕಪಿಲೆ ಸಮೇತ ಮನೆಗೆ ಬಂದಳು.

ಕೊಟ್ಟಿಗೆಯಲ್ಲಿ ಕಪಿಲೆಯ ಹೊಗಿಸಿ ನೋಡಿದರೆ ಮಲತಾಯಿ ಕಿರಿಚಿ ಹೇಳಿದಳು.

“ಲೇ ಮಲ್ಲಿಗೆ ಕೊಟ್ಟಿಗೆಯ ಕಟ್ಟೇ ಮೇಲೆ ನಿನ್ನ ಊಟ ಇದೆ, ತಗೊಂಡು ತಿನ್ನು”

“ನನಗೆ ಹಸಿವೆ ಇಲ್ಲಮ್ಮಾ!”

ಎಂದಳು ಮಲ್ಲಿಗೆ. ‘ಹಸಿವೆಯಿಲ್ಲ!’ ಎಂದು ತಾಯಿ ಕಣ್ಣು ಕಿಸಿದಳು –

“ಕಾಡಿನಲ್ಲಿ ಹಣ್ಣು ತಿಂದೆಯೇನೇ? ಮನೆಗೆ ತಂದು ಎಲ್ಲರಿಗೂ ಕೊಟ್ಟು ಉಳಿದರೆ ತಿನ್ನಬಾರದೇನೇ ಹಾಳಾದವಳೇ”, ಎಂದಳು.

ಮಲ್ಲಿಗೆ : ಕಾಡಿನಲ್ಲಿ ಹಣ್ಣಿಲ್ಲವಮ್ಮಾ.

ಮಲತಾಯಿ : ಹಾಗಿದ್ದರೆ ಊಟ ಯಾಕೆ ಮಾಡುತ್ತಿಲ್ಲ?

“ನನಗೆ ಹಸಿವೆ ಆಗಿಲ್ಲ, ಅಷ್ಟೆ”

“ತೋಟದಲ್ಲಿ ಸೊಪ್ಪಿಗೆ. ತಿಂದೆಯಾ?”

“ತೋಟದಲ್ಲಿ ಸೊಪ್ಪೂ ಇಲ್ಲ, ಸದೆಯೂ ಇಲ್ಲ”

“ಮತ್ತೆ ಊಟ ಯಾಕೆ ಮಾಡುತ್ತಿಲ್ಲ?”

“ನನಗೆ ಹಸಿವೆಯಾಗಿಲ್ಲ, ಅಷ್ಟೆ.”

ಎನ್ನುತ್ತ ಮಲ್ಲಿಗೆ ಕಪಿಲೆಗೆ ಅಕ್ಕಚ್ಚು ಹಾಕಲು ಹೋದಳು.

ಮಲತಾಯಿ ಮತ್ತವಳ ಒಕ್ಕಣ್ಣಿ ಮುಕ್ಕಣ್ಣಿಯರು ತಮ್ಮ ಆರೂ ಕಣ್ಣುಗಳನ್ನು ಕಿಸಿದು ಮಲ್ಲಿಗೆಯನ್ನೇ ನೋಡಿದರು. ಅವಳ ಮುಖದಲ್ಲಿ ಕಿಂಚಿತ್ತೂ ಬೇಸರವಿಲ್ಲ, ದಣಿವಿಲ್ಲ, ಹಸಿದ ಲಕ್ಷಣಗಳಿಲ್ಲ. ಸಾಲದ್ದಕ್ಕೆ ಆನಂದದಿಂದ ಕಳಕಳೆಯಾಗಿದ್ದು ನಗುನಗುತ್ತ ಎಲ್ಲರಿಗೂ ಊಟ ಬಡಿಸಿದಳು. ಮುಸುರೆ ತೆಗೆದು ಪಾತ್ರೆ ತೊಳೆದಳು. ತೃಪ್ತಿಯಿಂದ ತನ್ನ ಸ್ಥಳವಾದ ಕೊಟ್ಟಿಗೆಯ ಬಳಿ ಮಲಗಿಕೊಂಡಳು.

ಆದರೆ ಮಲತಾಯಿ ಮತ್ತು ಒಕ್ಕಣ್ಣಿ ಮುಕ್ಕಣ್ಣಿಯರು ಮಲಗಲಿಲ್ಲ. ಪಡುಕೋಣೆಯಲ್ಲಿ ಗುಪ್ತಸಭೆ ಸೇರಿ ಮಾತಾಡಿಕೊಂಡರು.

ಮುಕ್ಕಣ್ಣಿ : ಇದರಲ್ಲೇನೋ ಗುಟ್ಟಿದೆಯೇ ಒಕ್ಕಣ್ಣಿ.

ಒಕ್ಕಣ್ಣಿ : ಹೌದಕ್ಕಾ ಹಾಕಿದ ತಂಗಳನ್ನಾನ್ನ ನಾಯೀ ಹಾಗೆ ಗಬಗಬ ತಿಂಬೋಳು, ಇವತ್ತು ಅನ್ನ ನೋಡಿ ತನಗೆ ಹಸಿವಿಲ್ಲ ಅಂತಾಳೆ!

ಆಗ ಮಲತಾಯಿ ಹೇಳಿದಳು :

“ಒಕ್ಕಣ್ಣಿ ಒಂದು ಕೆಲಸ ಮಾಡು. ನಾಳೆ ಅವಳು ಹಸು ಹೊಡೆದುಕೊಂಡು ಕಾಡಿಗೆ ಹೋಗ್ತಾಳಲ್ಲವೆ? ಅವಳಿಗೆ ಗೊತ್ತಾಗದ ಹಾಗೆ ಹಿಂದಿನಿಂದ ನೀನು ಹೋಗು. ಅವಳ ಗುಟ್ಟೇನಿದೆ ಅಂತ ತಿಳಿದುಕೊಂಡು ಬಾ. ಆಮೇಲೆ ನೋಡೋಣ ಇವಳಾಟ!”

ಮಾರನೇ ದಿನ ಮಲ್ಲಿಗೆ ಕಪಿಲೆಯೊಂದಿಗೆ ಕಾಡಿಗೆ ಹೊರಟಳು. ತನ್ನ ಹಿಂದೆ ಒಕ್ಕಣ್ಣಿ ಕದ್ದು ಬಂದುದು ಅವಳಿಗೆ ಗೊತ್ತಿತ್ತು. ಆದ್ದರಿಂದ ಬಹಿರಂಗವಾಗಿಯೇ ಅವಳನ್ನು ಆಟಕ್ಕೆ ಕರೆದಳು. ಮೊದಲೇ ನಡೆದು ದಣಿದಿದ್ದ ಒಕ್ಕಣ್ಣಿ ಇನ್ನಷ್ಟು ದಣಿದು ಮರದ ತಂಪು ನೆರಳಲ್ಲಿ ನಿದ್ದೆಹೋದಳು. ಮಲ್ಲಿಗೆ ಮೆಲ್ಲಗೆ ಹೋಗಿ ಕಪಿಲೆಯ ಬೆನ್ನ ಮೇಲೆ ಕೈಯಾಡಿಸಿ, ಹಾಡಿ ಸಿಹಿಯಾದ ಊಟ ತಿಂಡಿಗಳನ್ನ ಪಡೆದು ತಿಂದು ಬಂದಳು. ಒಕ್ಕಣ್ಣಿಯಿನ್ನೂ ಗೊರಕೆ ಹೊಡೆಯುತ್ತಿದ್ದಳು. ಸಂಜೆಯಾಗುತ್ತಲೂ ಅವಳನ್ನು ಎಬ್ಬಿಸಿ ಮನೆಯ ಕಡೆಗೆ ನಡೆದರು.

ಅಕ್ಕ, ಮಲತಾಯಿ ಒಕ್ಕಣ್ಣಿಯನ್ನು ಒಳಗೆ ಕರೆದೊಯ್ದು,

“ಹೇಳೇ ಒಕ್ಕಣ್ಣಿ, ಏನೇನು ನಡೆಯಿತು?” ಎಂದರು

“ನನಗೆ ಗೊತ್ತಿಲ್ಲ.”

“ಛೀ ದಡ್ಡಿ, ನಿನಗೆ ಒಂದು ಕಣ್ಣಿದ್ದದ್ದೂ ಕೇಡು.”

“ನೀನ್ಯಾಕೆ ಅವಳ ಹಿಂದಿನಿಂದ ಹೋಗಿದ್ದೆ ಅದಾದರೂ ನೆನಪಿದೆಯೆ?”

“ನೆನಪಿದೆ. ಆದರೆ ಅಲ್ಲೀತನಕ ನಡೆದು ದಣಿವಾಗಿತ್ತು, ಆಮೇಲೆ ಆಟ ಆಡಿ ಇನ್ನಷ್ಟು ದಣಿವಾಯಿತು. ಮಲಗಿಬಿಟೆ, ನಿದ್ದೆ ಹತ್ತಿದ ಮೇಲೆ ಅವಳೇನು ತಿಂದಳೋ ಬಿಟ್ಟಳೋ ಗೊತ್ತಿಲ್ಲ. ನನಗೆ ಎಚ್ಚರವಾದಾಗ ಸಂಜೆಯಾಗಿತ್ತು. ಮನೆಗೆ ಬಂದಿವಿ.”

ನಿರಾಸೆಯಿಂದ ತಾಯಿ ಮುಕ್ಕಣ್ಣಿಗೆ “ನಾಳೆ ಅವಳ ಹಿಂದಿನಿಂದ ನೀನೇ ಹೋಗಿ ಗುಟ್ಟು ತಿಳಿದು ಬಾರೇ” ಎಂದು ಹೇಳಿದಳು.

ಮಾರನೇ ದಿನವೂ ಮಲ್ಲಿಗೆ ಮನೆಯಲ್ಲಿ ಊಟ ಮಾಡದೇ ಹಸುಬಿಟ್ಟುಕೊಂಡು ಕಾಡಿಗೆ ಹೊರಟಳು. ಉಪಾಯ ಮಾಡಿಕೊಂಡಂತೆ ಈ ದಿನ ಮುಕ್ಕಣ್ಣಿ ಜೊತೆ ಬಂದಳು. ಹಸುವ ಮೇಯುವುದಕ್ಕೆ ಬಿಟ್ಟು ಇಬ್ಬರೂ ಕಣ್ಣುಮುಚ್ಚಾಲೆ ಆಟ ಆಡಿದರು. ಮುಕ್ಕಣ್ಣಿ ದಣಿದು ಮರದ ನೆರಳಲ್ಲಿ ಮಲಗಿಕೊಂಡಳು. ನಿದ್ರಿಸುವಾಗ ಅವಳ ಎರಡೂ ಕಣ್ಣು ಮುಚ್ಚಿಕೊಂಡಿದ್ದವು. ಆದರೆ ಮೂರನೇ ಕಣ್ಣು ತೆರೆದಿತ್ತು. ಮಲ್ಲಿಗೆ ಅದನ್ನು ಗಮನಿಸದೆ ಕಪಿಲೆಯ ಕುರಿತು ಹಾಡಿ, ಅದರಿಂದ ಬಿಸಿಬಿಸಿಯಾದ ಸಿಹಿ ಊಟ ತರಿಸಿ ತಿಂದಳು. ಹೊಟ್ಟೆ ತುಂಬಿದ ಮೇಲೆ ‘ಸಾಕಮ್ಮ ನಿನ್ನ ದಯೆ’ ಹಾಡಿ ಮನೆಗೆ ಹೊರಡುವ ಮುನ್ನ ಮುಕ್ಕಣ್ಣಿಯನ್ನ ಎಬ್ಬಿಸಿದಳು.

ನಿನ್ನೆಯಂತೆ ಈ ದಿನವೂ ‘ನನ್ನ ಹೊಟ್ಟೆ ತುಂಬಿದೆ ಹಸಿವೆಯಿಲ್ಲ’ ಎಂದಳು. ತಕ್ಷಣ ಮುಕ್ಕಣ್ಣಿ ಮುಂದೆ ಬಂದು,

“ಇವಳು, ಹೇಳೋದೆಲ್ಲ ಸುಳ್ಳು ಕಣಮ್ಮ. ನಾನು ಆಟ ಆಡಿ ಮಲಗಿದ್ದೇನೆ ಅಂತ ಇವಳು ನಂಬಿದಳು. ಇವಳು ನಂಬಿದ ಹಾಗೆ ನನ್ನ ಎರಡೂ ಕಣ್ಣುಗಳು ಮಲಗಿದ್ದು ನಿಜ. ಆದರೆ ಮೂರನೇ ಕಣ್ಣು ಎಚ್ಚರಿತ್ತು. ಎಲ್ಲಾ ನೋಡಿದೆ!”

ಎಂದಳು. ತಾಯಿ, “ಅದೇನು ನೋಡಿದೆ ಬೇಗ ಹೇಳೇ” ಎಂದಳು.

“ಇವಳು ಹಸುವಿನ ಹತ್ತಿರ ಹೋಗಿ ಅದರ ಮೈಮೇಲೆ ಕೈಯಾಡಿಸುತ್ತ ಒಂದು ಹಾಡು ಹೇಳಿದಳಮ್ಮ. ಹಾಡು ಮುಗಿದ ಮ್ಯಾಕೆ ರುಚಿರುಚಿಯಾದ ಬಿಸಿ ಊಟ ಬಂತು. ನನ್ನ ಕರೆಯಲೇ ಇಲ್ಲ. ಎಲ್ಲವನ್ನು ತಾನೇ ಊಟ ಮಾಡಿ ನನ್ನ ಎಬ್ಬಿಸಿದಳು. ಈ ಕಡೆ ಬಂದಿವಿ. ಇವಳು ಮೂರು ದಿನಗಳಿಂದ ಮನೇಲಿ ಊಟ ಮಾಡದಿರೋ ಗುಟ್ಟು ಇದೇ ಕಣಮ್ಮ!”

ಕೇಳಿ ತಾಯಿ ಕೆಂಡಾಮಂಡಲವಾದಳು.

“ಎಲಾ ಹಾಳಾದವಳೇ! ಇವಳು ಮದ್ದು ಮಾಟದವಳು ಅಂತ ಎಷ್ಟು ಹೇಳಿದೆ ಆ ನಿಮ್ಮ ದರಿದ್ರ ತಂದೆಗೆ. ನನ್ನ ಮಾತನ್ನ ನಂಬಲೇ ಇಲ್ಲ. ಬರಲಿ ಮೊದಲು ಆ ಹಸುವನ್ನ ಕೊಲ್ಲಿಸೋಣ!”

ಆದರೆ ಮುಕ್ಕಣ್ಣಿಗೆ ಅವಸರ “ಅಪ್ಪ ಯಾಕಮ್ಮ ಹಸುವನ್ನ ಕೊಲ್ಲಬೇಕು? ನಾನೇ ಇದ್ದೀನಲ್ಲ! ಬೇಕಾದರೆ ಈಗಲೇ ಕೊಂದುಬಿಡ್ತೀನಿ ತಾಳು, ಮಚ್ಚು ತರ್ತೀನಿ.” ಎಂದಳು.

ಮಲ್ಲಿಗೆ ಕೊಟ್ಟಿಗೆಗೆ ಓಡಿಬಂದು ದುಃಖ ಶೋಕವ ಮಾಡುತ್ತ ಕಪಿಲೆಯನ್ನು ತಬ್ಬಿಕೊಂಡಳು:

“ಯಾಕೆ ದುಃಖಿಸುತ್ತೀ ಮಗಳೆ?” ಎಂದಿತು ಕಪಿಲೆ.

“ಕಪಿಲೆ ನಿನ್ನನ್ನ ಕೊಲ್ಲಬೇಕಂತ ಇದ್ದಾರೆ.”

“ನನಗದು ಗೊತ್ತು. ಅವರು ನನ್ನನ್ನು ಕೊಂದು ತಿನ್ನುವುದು ಖಚಿತ. ನೀನು ದುಃಖಿಸಬೇಡ. ನೀನು ನನ್ನ ಮಾಂಸ ತಿನ್ನಬೇಡ” “ದಯಮಾಡಿ ನನಗೊಂದು ಮೂಳೆಯನ್ನಾದರೂ ಕೊಡಿ” ಅಂತ ಕೇಳಿಕೊ. ಅದನ್ನೆತ್ತಿ ಅಂಗಳದಲ್ಲಿ ಹೂತುಬಿಡು. ಅಗೋ ಆ ಮಾಡು ಇದೆಯಲ್ಲ, ಅಲ್ಲಿ ನಿನ್ನ ತಾಯಿ ಇಟ್ಟ ಬೀಜ ಇದೆ. ನನ್ನ ಮೂಳೆಯ ಹೂತ ಜಾಗದಲ್ಲಿ ಆ ಬೀಜವ ಹಾಕಿ ನೀರು ಹಾಕು. ಹಣ್ಣಿನ ಮರ ಬೆಳೆಯುತ್ತದೆ. ಮುಂದಿನ ನಿನ್ನ ಯೋಗಕ್ಷೇಮವನ್ನ ಆ ಹಣ್ಣಿನ ಮರವೇ ನೋಡಿಕೊಳ್ಳುತ್ತದೆ.”

ಕಪಿಲೆ ಹೇಳಿದ ಹಾಗೇ ಮಾಡಿದ ಮಲ್ಲಿಗೆ ಹಸುವನ್ನು ಕಳೆದುಕೊಂಡಿದ್ದಕ್ಕೆ ಕಣ್ಣಿರ ಕೊಳದಲ್ಲಿ ಮುಳುಗೇಳುತ್ತ ಮಲಗಿದಳು.

ಮಾರನೇ ಬೆಳಿಗ್ಗೆ ಕೋಳಿ ಕೂಗಿ ಬೆಳಗಾಗಿ ಒಕ್ಕಣ್ಣಿ ಮುಕ್ಕಣ್ಣಿ ಮೊದಲು ಹೊರಬಂದು ನೋಡಿದರೆ ಅಂಗಳದಲ್ಲಿ ಎತ್ತರವಾದ ಸುಂದರವಾದ ಮರವೊಂದು ಎಳೆಬಿಸಿಲಲ್ಲಿ ಹಣ್ಣು ಹೂಗಳಿಂದ ನಳನಳಿಸುತ್ತ ತಂಗಾಳಿಗೆ ತೂಗಾಡುತ್ತಿದೆ! ಒಕ್ಕಣ್ಣಿ ಆನಂದದಿಂದ ಕಿಟಾರನೆ ಕಿರಿಚಿ ಹಣ್ಣು ಕೀಳು ಮರವೇರಿದಳು. ಕೈ ಜಾರಿ ಹಾಗೇ ಕೆಳಗೆ ಬಿದ್ದಳು. ಆಗಷ್ಟೆ ಹೊರಬಂದ ನಗುತ್ತಿರುವ ಮಲ್ಲಿಗೆಯ ಕೂದಲು ಜಗ್ಗಿ ಹೊಡೆಯತೊಡಗಿದಳು.

ಅಷ್ಟರಲ್ಲಿ ಶಿವಶಿವಾ – ರಾಜಕುಮಾರ ಮತ್ತು ಮಂತ್ರಿ ಅದೇ ದಾರಿಯಿಂದ ಹೊರಟವರು ಮರದಿಂದ ಆಕರ್ಷಿತರಾಗಿ ಅಲ್ಲಿಗೇ ಬರೋಣವೆ! ಅವರನ್ನ ನೋಡಿದ ತಕ್ಷಣ ಮಲತಾಯಿ ಅವಸರ ಮಾಡಿ ಅಂಗಳದಲ್ಲಿ ಬುಟ್ಟಿಯ ಕೆಳಗೆ ಇಟ್ಟಿದ್ದ ಕೋಳಿಯ ಹೊರಹಾಕಿ ಅದೇ ಸ್ಥಳದಲ್ಲಿ ಮಲ್ಲಿಗೆಯ ಕೂರಿಸಿ ಬುಟ್ಟಿಯ ಡಬ್ಬು ಹಾಕಿದಳು. ಇಬ್ಬರೂ ಆಗಂತುಕರು ಇದನ್ನು ಗಮನಿಸಿದರಾದರೂ ಮರದ ಸೌಂದರ‍್ಯದಲ್ಲಿ ಮೈಮರೆತರು. ರಾಜಕುಮರನೋ ಆಶ್ಚರ್ಯದಿಂದ ಮರನೋಡುತ್ತ, ಕಣ್ಣು ಅಗಲಿಸಿದವನು ಮುಚ್ಚದೆ,

“ಇದೇನಿದು ಮಂತ್ರಿಗಳೆ! ಇಂಥ ಹಣ್ಣಿನ ಮರವನ್ನು ನಾನು ಇದುವರೆಗೆ ಕಂಡಿಲ್ಲ. ಅಬ್ಬ! ಎಷ್ಟು ಸುಂದರ! ಯಾವ ಮರ ಇದು? ಒಂದು ಹಣ್ಣು ಕೊಡುವರೆ? ವಿಚಾರಿಸಿ”

ಎಂದ. ಮಂತ್ರಿ, “ಇದು ಯಾರ ಮನೆ?” ಅಂದುದಕ್ಕೆ ಮಲತಾಯಿ ಮುಂದೆ ಬಂದು “ಗೊತ್ತಾಗೋದಿಲ್ಲವೆ? ನಮ್ಮ ಅಂಗಳದಲ್ಲಿದೆ, ನಮ್ಮದೇ ಮರ” ಅಂದಳು.

“ಬಹಳ ಚಂದವಾದ ಮರ ನೋಡಿ ಇವರೆ, ಇವರು ರಾಜಕುಮಾರರು, ಇವರಿಗೆ ಒಂದು ಹಣ್ಣು ಕಿತ್ತುಕೊಡುವಿರಾ?”

“ಓಹೋ ಅದಕ್ಕೇನಂತೆ ಈಗಲೇ ಕೊಡ್ತೀನಿರಿ.”

ಎಂದು ಹೇಳಿ ಮುಕ್ಕಣ್ಣಿ ಮರ ಹತ್ತಿದಳು. ಅವಳು ಹತ್ತಿದಂತೆ ಮರ ಬೆಳೆಯುತ್ತಾ ಹೋಯಿತು. ಕೈಗೆ ಹಣ್ಣು ಸಿಕ್ಕಲೇ ಇಲ್ಲ. ಎತ್ತರ ಏರಿ ಅಲ್ಲಿಂದ ಜಾರಿ ಬಿದ್ದಳು. ತಾಯಿ ಪ್ರಯತ್ನಿಸಿದಳು. ಅವಳು ಹಾಗೆಯೇ ಬಿದ್ದಳು.

ಆಗ ಆ ರಾಜಕುಮಾರನಿಗೆ ಆಶ್ಚರ್ಯವಾಯಿತು. ಮಂತ್ರಿಗೆ ಸಂಶಯ ಬಂತು.

“ಆಶ್ಚರ್ಯ! ನೀವು ಮೂವರೂ ಪ್ರಯತ್ನಿಸಿದರೂ ಮರ ಬೆಳೆಯುತ್ತ ಹಣ್ಣು ಎತ್ತರಕ್ಕೆ ಹೋದವು. ನಿಮ್ಮ ಮನೆಯಲ್ಲಿ ಪ್ರಯತ್ನಿಸಿಬಲ್ಲವರು ಬೇರೆ ಯಾರೂ ಇಲ್ಲವೆ?”

ತಕ್ಷಣ ಮಲತಾಯಿ ಡಬ್ಬು ಹಾಕಿದ ಬುಟ್ಟಿ ತೆಗೆದಳು. ಮಲ್ಲಿಗೆ ಹೊರಬಂದಳು. “ರಾಜಕುಮಾರನಿಗೊಂದು ಹಣ್ಣು ಕಿತ್ತುಕೊಡೇ” ಎಂದಳು.

ಮಲ್ಲಿಗೆ ಕೈಚಾಚಿದರೆ ಎತ್ತರವಾದ ಹಣ್ಣಿನಮರ ಅವಳ ಕೈಯಳತೆಗೆ ಬಾಗಿ ಬಂತು. ಮಾಗಿದ ಹಣ್ಣು ಕಿತ್ತು ರಾಜಕುಮಾರನಿಗೂ ಮಂತ್ರಿಗೂ ಕೊಟ್ಟಳು. ಆನಂದಪಟ್ಟ ರಾಜಕುಮಾರ ಕೇಳಿದ :

“ಉಪಕಾರ ಮಾಡಿದ ಹುಡುಗಿ! ಹೇಳು ನಾವು ನಿನಗೇನನ್ನ ಕೊಡಬಹುದು?”

ಮಂತ್ರಿಯೇ ನಡುವೆ ಬಂದು ಬಾಯಿ ಹಾಕಿದ –

“ಕೇಳೋದೇನಿದೆ ಪ್ರಭು? ಈ ಮಗು ಸ್ವಯಂ ಮಹಾರಾಣಿಯಾಗುವುದಕ್ಕೆ ಯೋಗ್ಯಳು. ತಮ್ಮ ಕಣ್ಣೆದುರಿನಲ್ಲಿಯೇ ತನ್ನ ಸತ್ಯವನ್ನು ಪ್ರಕಟಪಡಿಸಿದಳು. ಬುಟ್ಟಿಯಿಂದ ಹೊರಬಂದು ತಾನೆಂಥ ಸ್ಥಿತಿಯಲ್ಲಿದ್ದೇನೆಂದು ತೋರ್ಪಡಿಸಿದಳು.”

ಎಂದು ಹೇಳಿ, ಮಲತಾಯಿಯ ಕಡೆಗೆ ಮುಖ ಮಾಡಿ,

“ಇವಳು ನಿನಗೆ ಮಲಮಗಳಲ್ಲವೆ ತಾಯಿ?” ಅಂದ. ಅದಕ್ಕೆ ಮಲತಾಯಿ,

“ಹೌದು ಹೌದು. ಈ ದರಿದ್ರ ನನ್ನ ಮಗಳಲ್ಲ, ನನ್ನ ಸವತಿಯ ಮಗಳು. ಈ ಕರ್ಮವ ನನಗೆ ಬಿಟ್ಟು ಸತ್ತುಹೋದಳು ಹಾಳಾದವಳು?”

ಎಂದು ಲಟಿಕೆ ಮುರಿದೊಂದು ಶಾಪವನ್ನೂ ಒದರಿದಳು. ಮಂತ್ರಿ ಹೇಳಿದ:

“ಗೊತ್ತಾಯಿತಲ್ಲ ಪ್ರಭು, ತಾವು ದೊಡ್ಡಮನಸ್ಸು ಮಾಡಿ ಮದುವೆಯಾದರೆ – ಇವಳ ಕಥೆಗೊಂದು ಸುಖಾಂತ್ಯ ಸಿಗುತ್ತದೆ?”

“ನನ್ನ ಮನಸ್ಸಿನಲ್ಲಿದ್ದುದನ್ನೇ ಹೇಳಿದಿರಿ ಮಂತ್ರಿಗಳೇ. ಇವು ಈಗಲೇ ನಮ್ಮೊಂದಿಗೆ ಬರಲಿ”

ಆಗ ಮಲತಾಯಿ, “ಈಗಲೇ ಇವಳನ್ನು ಕರೆದೊಯ್ಯಿರಿ, ಮರವೊಂದಿದ್ದರೆ ಸಾಕು” ಎಂದು ಹೇಳಿ ಮಂತ್ರಿ, ರಾಜಕುಮಾರ ಮತ್ತು ಮಲ್ಲಿಗೆ ರಾಜಧಾನಿಗೆ ಹೊರಟರು.

ಅವರು ಹೋದಮೇಲೆ ರಾಜಕುಮಾರನೇನೋ ನಮ್ಮ ಕಥೆಗೆ ಸುಖಾಂತ್ಯ ಕೊಡುವುದಕ್ಕಾಗಿ ಮಲ್ಲಿಗೆಯನ್ನು ಕರೆದೊಯ್ದ. ಆಮೇಲೆ ಮರವೂ ಅವರ ಬೆನ್ನು ಹತ್ತಿತೆಂದೂ “ಮರವೇ ಮರ್ಮರವೇ…” ಎಂದು ಕಿರುಚುತ್ತ ಒಕ್ಕಣ್ಣಿ ಮತ್ತು ಮುಕ್ಕಣ್ಣಿ ಮಲತಾಯಿ ಕೂಡ ಬೆನ್ನು ಹತ್ತಿದರೆಂದೂ ಈಗಲೂ ಓಡುತ್ತಿದ್ದಾರೆಂದೂ ಕಥೆಗಾರ ಹೇಳುತ್ತಾನೆ. ನಿಮಗೆ ಅವರು ಸಿಕ್ಕರೆ ಹೇಳಿ: “ ಆ ಮರ ಈಗಲೂ ನಿಮ್ಮ ಅಂಗಳದಲ್ಲೇ ಇದೆ, ಹೋಗಿ ನೋಡಿಕೊಳ್ಳಿ.”

* * *