ಒಂದು ಬಡ ಕುಟುಂಬದಲ್ಲಿ ಅಣ್ಣ ತಮ್ಮ ಇದ್ದರು. ಇಬ್ಬರೂ ಮದುವೆ ವಯಸ್ಸಿಗೆ ಬಂದರು. ಅಣ್ಣ ಶ್ರೀಮಂತ ಹುಡುಗಿಯನ್ನು ಮದುವೆಯಾದ. ತಮ್ಮ ಅನಾಥ ಹುಡುಗಿಯೊಬ್ಬಳನ್ನು ಮದುವೆಯಾದ. ಮದುವೆಯಾದ ಮೇಲೆ ಅಣ್ಣನ ದೆಸೆ ತಿರುಗಿ ಸುಖವಾಗಿದ್ದ. ತಮ್ಮನ ಬದುಕಿಗೆ ಬಡತನದ ಜೊತೆಗೆ ಉಣ್ಣುವ ಇನ್ನೊಂದು ಹೊಟ್ಟೆ ಬಂದು ಸೇರಿಕೊಂಡಿತಷ್ಟೆ. ಹಾಗಂತ ಅವನೇನೂ ಕೈಚೆಲ್ಲಿ ಕೂರಲಿಲ್ಲ. ಹೊಟ್ಟೆ ಎರಡಾದರೇನು? ದುಡಿಯುವ ಕೈಗಳು  ನಾಲ್ಕಾದುವಲ್ಲವೆ? ಎಂದು ಸಮಾಧಾನದಿಂದ ಇದ್ದ. ಮೊದಮೊದಲಲ್ಲಿ ಅಣ್ಣ ತಮ್ಮ ಸಹಕಾರದಿಂದಲೇ ಇದ್ದರು. ಆದರೆ ಅಣ್ಣನ ಶ್ರೀಮಂತಿಕೆ, ಮತ್ತು ತಮ್ಮನ ಬಡತನ ಹೆಚ್ಚಾದಂತೆ ಅಣ್ಣ ತಮ್ಮನನ್ನು ದೂರ ಮಾಡಿದ. ತಮ್ಮ ಏನಾದರೂ ಕಡ ಕೇಳಲಿಕ್ಕೆ ಬಂದರೆ ಅಣ್ಣ ರೇಗುತ್ತಿದ್ದ. ಒಂದು ಬಾರಿ ಮನೆ ಬಿಟ್ಟು ಹೊರಕ್ಕೆ ತಳ್ಳಿಯೂ ಬಿಟ್ಟ. ಶ್ರೀಮಂತರಿಗೆ ಸಿಟ್ಟಿದೆಯೆಂದು ಬಡವರು ಸಿಟ್ಟು ಮಾಡಿಕೊಳ್ಳಲಿಕ್ಕಾಗುತ್ತದೆಯೆ? ತಮ್ಮ ತನ್ನ ಸಿಟ್ಟನ್ನು ತಾನೇ ಜಗಿದು ನುಂಗಿಕೊಂಡ.

ಬಡದಂಪತಿಗಳು ಹೀಗೇ ದಿನ ತಳ್ಳುತ್ತಿರಬೇಕಾದರೆ ಬೇಸಿಗೆ ಮುಗಿದು ಮಳೆಗಾಲ ಬಂತು. ತಮ್ಮನ ಗುಡಿಸಲು ಭದ್ರವಾಗಿರಲಿಲ್ಲ. ಸಾಲದ್ದಕ್ಕೆ ಸೂರಿನಲ್ಲೊಂದು ಗುಬ್ಬಚ್ಚಿಯ ಗೂಡಿತ್ತು. ಅಂತೂ ಆ ಗುಡಿಸಲು ನಾಲ್ಕು ಜೀವಗಳಿಗೆ ಅಂದರೆ ಇಬ್ಬರು ದಂಪತಿಗಳು ಹಾಗೂ ತಾಯಿ ಗುಬ್ಬಿ ಮತ್ತು ಮರಿ ಗುಬ್ಬಿಗೆ ಆಶ್ರಯವಾಗಿತ್ತು.

ಮೃಗಮಳೆಗೆ ಅಬ್ಬರ ಜಾಸ್ತಿ ಅಂತ ನಿಮಗೂ ಗೊತ್ತಿಲ್ಲ. ಒಂದು ಸರುವು ಮಳೆಗೆ ಹದಿನಾರು ಬಾರಿ ಬೀಸಿ ಬೀಸಿ ಬರುವ ಬಿರುಗಾಳಿಯಿಂದ ಏಟು ತಿನ್ನಬೇಕು. ಇಲ್ಲಿ ಮಳೆಯಾಗುತ್ತದೆಂದರೆ ಅದನ್ನು ಇನ್ನೆಲ್ಲೊ ಹಾರಿಸಿಕೊಂಡು ಹೋಗುವ ರೊಯ್ಯಂತ ಬೀಸುವ ಗಾಳಿಗೆ ಬಡವನ ಗುಡಿಸಲು ಅಲ್ಲಾಡತೊಡಗಿತು. ಅದರ ಒಂದೊಂದೇ ಗರಿ ಗಾಳಿಗೆ ಹಾರಿಹೋಗತೊಡಗಿದವು. ಗುಬ್ಬಚ್ಚಿಯ ಗೂಡು ಹರಿದು ಬಿದ್ದು ನೆಲ ಕಚ್ಚಿತು. ಆಗ ತಾಯಿ ಗುಬ್ಬಿ ಇರಲಿಲ್ಲ. ಬಡ ತಮ್ಮ ಮತ್ತು ಅವನ ಹೆಂಡತಿ ಮನೆಯಲ್ಲಿದ್ದರು.

ಇಬ್ಬರಿಗೂ ಗುಬ್ಬಚ್ಚಿಯ ಮರಿಯ ಬಗ್ಗೆ ದಯೆ ಬಂತು. ಗಾಯಗೊಂಡ ಅದನ್ನು ತಗೊಂಡು ಬೆಚ್ಚಗಿಟ್ಟು ಆರೈಕೆ ಮಾಡಿ ಬೆಳೆಸಿದರು. ಕೆಲದಿನಗಳಾದ ಮೇಲೆ ಮರಿ ದೊಡ್ಡ ಗುಬ್ಬಿಯಾಯ್ತು. ತಮ್ಮ ಒಂದು ದಿನ ಅದನ್ನು ಕಾಡಿನಲ್ಲಿ ಹಾರಿಸಿ ಬಂದ.

ಹೀಗೇ ಅನೇಕ ದಿನ ಕಳೆದವು. ಒಂದು ದಿನ ಒಂದು ಗುಬ್ಬಿ ಬಂದು ಗುಡಿಸಲ ಹೊಸ್ತಿಲ ಮೇಲೆ ಒಂದು ಕುಂಬಳಬೀಜ ಚೆಲ್ಲಿತು.

ಬಡ ತಮ್ಮನ ಹೆಂಡತಿ ಇದನ್ನು ಮೊದಲು ನೋಡಿದಳು. ಗುರುತು ಸಿಕ್ಕಂತಾಗಿ ಉತ್ಸಾಹದಿಂದ ಕೂಗಿ “ನೋಡಿದಿರಾ, ಇದು ನಾವು ಆರೈಕೆ ಮಾಡಿದ ಗುಬ್ಬಚ್ಚಿಯಲ್ಲವೇ?” ಎಂದು ಕೂಗಿ ಗಂಡನನ್ನು ಕರೆದಳು. ಬಡ ತಮ್ಮ ನೋಡಿದ, ಅವನಿಗೂ ಗುರುತು ಸಿಕ್ಕಿತು. ಹೌದೆಂದು ಹೇಳುತ್ತ ಹೊಸ್ತಿಲ ಬಳಿ ಹೋದ. ಕುಂಬಳ ಬೀ ಸಿಕ್ಕಿತು. “ನೋಡಿದೆಯಾ? ಗುಬ್ಬಚ್ಚಿ ಕುಂಬಳ ಬೀಜ ಕೊಟ್ಟಿದೆ. ಇದನ್ನು ಬಿತ್ತಿ ನೋಡೋಣ, ಇದರಿಂದಲಾದರೂ ನಮ್ಮ ಸುದೈವದ ಬಾಗಿಲು ತೆರೆದೀತು” ಎಂದು ಹಿತ್ತಲಲ್ಲಿ ಕುಂಬಳಬೀಜ ಬಿತ್ತಿದ. ಬೀಜ ಕುಡಿಯೊಡೆದು ಸಸಿಯಾಯಿತು. ಸಸಿ ಚಿಗಾರಿ ಬಳ್ಳಿಯಾಗಿ ಹಬ್ಬಿತು. ಚಿಗುರು ಎಲೆ, ಹೂವು ಕಾಯಿಗಳಾದವು.

ಕೆಲವೇ ತಿಂಗಳಲ್ಲಿ ಕುಂಬಳ ಬಳ್ಳಿ ಹಿತ್ತಲದ ತುಂಬ ಹಬ್ಬಿ ಮೂರು ಬಹು ದೊಡ್ಡ ಕಾಯಿಗಳು ಕಾಣತೊಡಗಿದವು. ಆ ಕಾಯಿಗಳು ಎಷ್ಟು ದೊಡ್ಡವಾಗಿದ್ದವೆಂದರೆ ಬಡ ತಮ್ಮ ಮತ್ತು ಅವನ ಹೆಂಡತಿ ಈ ಗಾತ್ರದ ಕುಂಬಳ ಕಾಯಿಗಳನ್ನು ಹಿಂದೆಂದೂ ಕಂಡಿರಲಿಲ್ಲ. ಕಾಯಿ ಹಣ್ಣಾಗುವುದು ತಡವಾಗಲಿಲ್ಲ.

ಒಂದು ದಿನ ಬಡ ತಮ್ಮ ಹೆಂಡತಿಗೆ ಹೇಳಿದ, “ಈಗ ಒಂದು ಕುಂಬಳಕಾಯಿಯನ್ನು ಕಿತ್ತು ತಾ, ತಿನ್ನೋಣ.” ಬಡ ತಮ್ಮನ ಹೆಂಡತಿ ಕುಂಬಳಕಾಯಿ ತರೋಣ ಎಂದರೆ ಅವಳೊಬ್ಬಳಿಗೆ ಎತ್ತಿ ತರಲು ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರೂ ಕೈಗೂಡಿಸಿ ಕಷ್ಟಪಟ್ಟು ಹೊತ್ತು ತರಬೇಕಾಯಿತು. ಸಂಭ್ರಮದಿಂದ ಒಂದನೇ ಹಣ್ಣನ್ನು ಕೊಯ್ದು ನೋಡಿದರೆ ಅದರ ಒಳಗಡೆಯಿಂದ ಭಾರೀ ದವಸ ಧಾನ್ಯಗಳು ಸುರಿದವು. ಕುತೂಹಲದಿಂದ ಎರಡನೇ ಹಣ್ಣನ್ನು ಕೊಯ್ದು ನೋಡಿದರೆ ಅದರಿಂದ ಚಿನ್ನ ಬೆಳ್ಳಿಯ ನಾಣ್ಯ ಮತ್ತು ಆಭರಣಗಳು ಸುರಿದವು. ಚಿನ್ನ ಬೆಳ್ಳಿಯ ನಾಣ್ಯಗಳು ಎಷ್ಟು ಹೇರಳವಾಗಿದ್ದವೆಂದರೆ ಅವರು ಅವನ್ನು ಎಣಿಸುವ ಗೋಜಿಗೇ ಹೋಗಲಿಲ್ಲ. ಮೂರನೆಯ ಹಣ್ಣಿನ ತನಕ ಅವರ ಕುತೂಹಲ ಮುಂದುವರಿಯಲೇ ಇಲ್ಲ. ಯಾಕೆಂದರೆ ಅಷ್ಟಕ್ಕೇ ತೃಪ್ತರಾದರು.

ಇದು ಶ್ರೀಮಂತ ಅಣ್ಣನಿಗೆ ಗೊತ್ತಾಯಿತು. ಹೊಟ್ಟೆ ಉರಿದುಕೊಂಡ. ಅವನು ಹೆಂಡತಿಯನ್ನು ಕರೆದು, “ಹೋಗು, ಅದು ಹ್ಯಾಗೆ ಅವರು ಶ್ರೀಮಂತರಾದರೆಂದು ತಿಳಿದು ಬಾ” ಎಂದು ಕಿರುಚಿ ಹೇಳಿದ.

ಬಡ ತಮ್ಮನ ಹೆಂಡತಿ ಎಲ್ಲವನ್ನೂ ಹೇಳಿದಳು. ಕೇಳಿಸಿಕೊಂಡಿದ್ದೇ ಶ್ರೀಮಂತ ದಂಪತಿಗಳು ಕಾರ್ಯೋನ್ಮುಖರಾದರು. ಅವಸರದಿಂದ ಹೊಲದಲ್ಲಿ ಒಂದು ಗುಡಿಸಲು ಕಟ್ಟಿದರು. ಗುಬ್ಬಿಗೂ ಒಂದು ಗೂಡು ಕಟ್ಟಿದರು.

ಒಂದು ಗುಬ್ಬಿಯೂ ಮರಿಯೊಂದಿಗೆ ಬಂದು ವಾಸ ಮಾಡಿತು. ಮೃಗಮಳೆಯೇನೋ ಬಂತು. ಆದರೆ ಬಿರುಗಾಳಿ ಬೀಸಲಿಲ್ಲ. ಅದು ಬೀಸಲಿಲ್ಲವೆಂದು ಸುಮ್ಮನೇ ಕೂತರೆ? ಇಲ್ಲ. ತಾವೇ ಕೋಲು ಬೀಸಿ ಗುಬ್ಬಿ ಗೂಡನ್ನು ಕೆಳಕ್ಕೆ ಬೀಳಿಸಿದರು. ಇವರ ಏಟಿಗೆ ಗಾಯಗೊಂಡ ಗುಬ್ಬಿಯ ಮರಿಗೆ ಉಪಚಾರ ಮಾಡಿ ಬೆಳೆಸಿದರು. ಬೆಳಿಸಿ, ಕಾಡಿನಲ್ಲಿ ಹಾರಿಬಿಟ್ಟರು. ಬಡ ತಮ್ಮನ ಕಥೆಯಲ್ಲಾದಂತೆ ಇಲ್ಲಿಯೂ ಕಾಲ ಗತಿಸಿದ ಮೇಲೆ ಆ ಗುಬ್ಬಿ ಒಂದು ಕುಂಬಳ ಬೀಜ ಕೊಟ್ಟಿತು. ಅತಿ ಅವಸರದಿಂದ ಬೀಜವನ್ನು ದೊಡ್ಡ ಹೊಲದಲ್ಲಿಯೇ ಬಿತ್ತಿದರು. ಬೀಜ ಮೊಳಕೆಯೊಡೆದು ಸಸಿಯಾಗಿ ಬಳ್ಳಿಯಾಗಿ ಹಬ್ಬಿ ಚಿರುಗಿ ಎಲೆ ಹೂ ಕಾಯಿ ಬಿಟ್ಟಿತು. ಆದರೆ ಬಡ ತಮ್ಮನ ಹಿತ್ತಲಲ್ಲಾದಂತೆ ಮೂರು ಕಾಯಿಗಳಿಗೆ ಬದಲು ಒಂದೇ ಕಾಯಿ ಬಿಟ್ಟಿತು. ಕಾಯಿ ಹಣ್ಣಾದ ನಂತರ ದಂಪತಿಗಳು ಕಷ್ಟಪಟ್ಟು ಹರಿದು ತಂದರು. ನಿರೀಕ್ಷೆಯಂತೆ ರೋಮಾಂಚನಗೊಳ್ಳುತ್ತ ಹಣ್ಣು ಒಡೆದರು. ಆದರೆ ಒಳಗಿಂದ ಭಗ್ಗನೆ ಬೆಂಕಿ ಬಂದು ಶ್ರೀಮಂತನ ಮನೆ, ಮಟ ಎಲ್ಲವನ್ನೂ ಸುಟ್ಟುಹಾಕಿತು. ಈಗ ಶ್ರೀಮಂತ ದರಿದ್ರನಾಗಿ ಭಿಕ್ಷೆ ಬೇಡುತ್ತ ಊರೂರು ಅಲೆಯತೊಡಗಿದ. ಕೊನೆಗೊಮ್ಮೆ ತಮ್ಮನ ಬಳಿಗೆ ಬಂದಾಗ ಬಡ ತಮ್ಮ ಹತ್ತಿರವಿದ್ದ ಮೂರನೇ ಕುಂಬಳಕಾಯಿಯನ್ನು ಅಣ್ಣನಿಗೆ ಕೊಟ್ಟ.

ಮೂರನೆಯ ಕುಂಬಳಕಾಯಿಯನ್ನು ಒಡೆದಾಗ ಅದರಿಂದ ಏನು ಸಿಕ್ಕಿತೆಂಬುದು ನಮಗೆ ತಿಳಿಯದು. ಆದರೆ ಆಮೇಲೆ ಎಲ್ಲರೂ ನೆಮ್ಮದಿಯಿಂದ ಇದ್ದರೆಂದು ಎಲ್ಲರೂ ಹೇಳುತ್ತಾರೆ. ಅವರು ಹಾಗಿದ್ದಾಗ ನಾವು ಹೀಗಿದ್ದೇವೆ.

* * *