ಕುಂಬಳಬೀಜ

ಈ ಕಥೆಯಲ್ಲಿ ಸಮಾಂತರವೆನ್ನಬಹುದಾದ ಎರಡು ಕಥೆಗಳಿವೆ. ತಮ್ಮನ ಕಥೆ ಆದ ಮೇಲೆ ಅಣ್ಣನ ಕಥೆ ನಡೆಯುತ್ತದೆ. ದಾರಿ ಒಂದೇ ಆದರೂ ವಿವರಗಳಲ್ಲಿ ವ್ಯತ್ಯಾಸಗಳಿವೆ. ಮತ್ತು ಈ ವ್ಯತ್ಯಾಸಗಳಿಂದಾಗಿಯೇ ಪರಿಣಾಮವೂ ಭಿನ್ನವಾಗಿರುತ್ತದೆ.

ತಮ್ಮ ಶ್ರೀಮಂತನಲ್ಲವಾದ್ದರಿಂದ ನಿಸರ್ಗದ ಜೊತೆ ಒಂದಾಗಿ ಗುಡಿಸಲಲ್ಲಿ ಬಾಳುತ್ತಾನೆ. ಅದರಿಂದಾಗಿಯೇ ಮುಕ್ಕಿ ತಿನ್ನುವ ಬಡತನದಲ್ಲೂ ಮಾನವೀಯ ಗುಣಗಳನ್ನು ಹೊಂದಿದ್ದಾನೆ. ಬಿರುಗಾಳಿ ಬೀಸಿ ಗುಬ್ಬಿಯ ಮರಿ ಅನಾಥವಾಗಿದ್ದಾಗ ಅದರ ಬಗ್ಗೆ ಅನುಕಂಪದಿಂದ ಆರೈಕೆ ಮಾಡಿ ಸಾಕುತ್ತಾನೆ ಮತ್ತು ಸಿದ್ಧ ಪರಿಣಾಮವಾಗಿ ಗುಬ್ಬಿ ಕೂಡ ವರ ಕೊಡದೆ ಕುಂಬಳ ಬೀಜ ಕೊಡುತ್ತದೆ. ಅದು ಚಿಗುರಿ ಬಳ್ಳಿಯಾಗಿ ಹಬ್ಬಿ ಹಣ್ಣು ಕೊಟ್ಟದ್ದು ಅವನ ಪರಿಶ್ರಮದ ಫಲದಿಂದ. ಅದಕ್ಕೇ ಕಥೆ ಹೊಟ್ಟೆ ಎರಡಾದರೂ ದುಡಿಯುವ ಕೈ ನಾಲ್ಕಾದವು ಎನ್ನುತ್ತದೆ. ಅಂದರೆ ಪರಿಶ್ರಮ ಹಾಕದಿದ್ದಲ್ಲಿ ಹಣ ಸಿಗುತ್ತಿರಲಿಲ್ಲ. ಸಿಕ್ಕ ಹಣ್ಣುಗಳಲ್ಲಿ ಅಗತ್ಯ ಇದ್ದಷ್ಟನ್ನೇ ಬಳಸಿ, ಮೂರನೇ ಹಣ್ಣಿನ ಬಗ್ಗೆ ಉದಾಸೀನವಾಗಿಯೇ ಇರುತ್ತಾನೆ. ಮುಂದಕ್ಕೆ ಉಪಯೋಗ ಬರುತ್ತದೆಂದು ಈ ಹಣ್ಣನ್ನು ತೆಗೆದಿಡಲು ಅದೀಗ ಅಗತ್ಯ ಇಲ್ಲ ಎಂಬುದು ಮಾತ್ರ ಕಾರಣ.

ಅಣ್ಣನ ಕಥೆಯು ಅದೇ ದಾರಿಯಲ್ಲಿ ಸಾಗಿದರೂ ವಿವರಗಳು ಮಾತ್ರ ಬೇರೆ. ಅಣ್ಣ ನಮ್ಮ ಇಂದಿನ ಸೂಡೋ ಪರಿಸರವಾದಿಗಳಂಥವನು. ಅವನಿಗೆ ನಿಸರ್ಗವೂ ಬೇಕು, ಅದನ್ನು ಶೋಷಣೆ ಮಾಡಿ ಸಿಕ್ಕುವ ಲಾಭಗಳೂ ಬೇಕು. ಅವನೂ ಗುಡಿಸಲಲ್ಲಿ ಇರುತ್ತಾನೆ, ಅನಿವಾರ್ಯವಾದುದರಿಂದ ಅಲ್ಲ. ಅಥವಾ ನಿಸರ್ಗ ಪ್ರೀತಿಯಿಂದಲೂ ಅಲ್ಲ. ಗುಬ್ಬಿಯ ಮರಿಗೆ ಅವನು ಆರೈಕೆ ಮಾಡುತ್ತಾನೆ. ಸಹಜ ಸಹಾನುಭೂತಿಯಿಂದ ಅಲ್ಲ, ಕುಂಬಳ ಬೀಜ ತರುತ್ತದೆ ಎಂದು. ಬಿರುಗಾಳಿ ಬೀಸಲಿಲ್ಲವಾದುದರಿಂದ ಗುಬ್ಬಿಯ ಗೂಡು ಬೀಳಲಿಲ್ಲ. ಆದ್ದರಿಂದ ಗುಬ್ಬಿಯ ಮರಿಗೆ ಗಾಯ ಆಗಲಿಲ್ಲ. ಇವನಾಗಿ ಅದನ್ನೆಲ್ಲಾ ಮಾಡುತ್ತಾನೆ. ಗುಬ್ಬಿಯ ಮರಿಯನ್ನು ಹಾರಿ ಬಿಟ್ಟಿದ್ದು ಕೂಡ ಸುಖವಾಗಿ ಇರಲಿ ಎಂದಲ್ಲ. ಕುಂಬಳ ಬೀಜ ತರಲಿ ಎಂದು. ಸರಿ, ಅದು ಬೀಜ ತಂದಿತು. ಬಿತ್ತಿದ ಬಳ್ಳಿ ಹಬ್ಬಿ ಮೂರರ ಬದಲು ಒಂದೇ ಕಾಯಿ ಬಿಟ್ಟಿತು. ತಮ್ಮ ಮಾಡಿದ್ದನ್ನೆಲ್ಲ ಶಾಸ್ತ್ರವೆಂಬಂತೆ ಇವನೂ ಮಾಡುತ್ತಾನೆ. ಕೊನೆಗೆ ಕುಂಬಳದ ಹಣ್ಣು ಕೊಯ್ದರೆ ಒಳಗಡೆಯಿಂದ ಉರಿ ಬಂದು ಅವನು ಸಂಗ್ರಹಿಸಿದ್ದನ್ನೆಲ್ಲ ಸುಡುತ್ತದೆ.

ಆಹಾರ ಸಾಮಗ್ರಿ ಮತ್ತು ಆಭರಣಗಳ ಬದಲು ಕುಂಬಳದಿಂದ ಬೆಂಕಿ ಬಂದದ್ದು ಆಶ್ಚರ್ಯದ ಸಂಗತಿಯಾಗಿ ತೋರುತ್ತದೆ. ಇದು ಅಣ್ಣನ ಕೃತಕವಾದ ಅನುಕಂಪನೆಗೆ ಶಿಕ್ಷೆಯಾಗಿರಬಹುದು. ಆತ ಮಾಡುವ ನಿಸರ್ಗದ ಶೋಷಣೆಗೆ ಶಿಕ್ಷೆಯಾಗಿರಬಹುದು. ಅಥವಾ ಹಂಚಬೇಕಾದ ಸಮಯದಲ್ಲಿ ಸಂಗ್ರಹಿಸಿಟ್ಟುಕೊಂಡ ಆತನ ದುರ್ಬುದ್ಧಿಗೆ ಶಿಕ್ಷೆ ಆಗಿರಬಹುದು. ಅಂತೂ ಅಂತಿಮದಲ್ಲಿ ನಿಸರ್ಗ ನ್ಯಾಯ ಕೊಡುತ್ತದೆ. ಇಂಥದೇ ಇನ್ನೊಂದು ಕಥೆಯಲ್ಲಿ ಕುಂಬಳದಿಂದ ಹಾವು ಚೇಳು ಬರುತ್ತವೆ.

ಇದು ಕಮ್ಯುನಿಸ್ಟ್ ದೇಶಗಳಲ್ಲಿ ತುಂಬಾ ಪ್ರಚಾರದಲ್ಲಿರುವ ಕಥೆಯಾದ್ದರಿಂದ ಶ್ರೀಮಂತಿಕೆ ಮತ್ತು ಶೋಷಣೆಯ ವಿರುದ್ಧದ ತೀವ್ರ ಎಚ್ಚರವಾಗಿ ಕಥೆಯ ಅಂತ್ಯದಲ್ಲಿ ಬೆಂಕಿ ಬಂದಿರಬಹುದು. ಆದರೆ ಬೇರೆ ದೇಶದ ಕತೆಗಳಲ್ಲೂ ಆತನ ಶ್ರೀಮಂತಿಕೆ ನಾಶವಾಗಿ ಆತ ಪುನಃ ತಮ್ಮನ ಆಶ್ರಯಕ್ಕೆ ಬರುವುದಿದೆ. ಆದರೆ ವಿಧಾನ ಭಿನ್ನವಾಗಿರುತ್ತದೆ. ಉದಾಹರಣೆಗೆ : ಕುಂಬಳಕಾಯಿಯಿಂದ ಭೂತ ಬಂದು ಆತನನ್ನು ಶಿಕ್ಷಿಸಬಹುದು. ಅಣ್ಣ ಬಂದು ತಮ್ಮನ ಕ್ಷಮೆ ಕೇಳಬಹುದು. ಅಥವಾ ಇಬ್ಬರೂ ಸುಖವಾಗಿ ಇರಬಹುದು. ಅಥವಾ ತಮ್ಮ ಸುಖವಾಗಿ ಇದ್ದು ಅಣ್ಣ ಹಾಳಾಗಿ ಹೋಗಬಹುದು.ಇತ್ಯಾದಿ.

ಸಮಾಂತರ ಕಥೆಯ ಇನ್ನೊಂದು ಉಪಯೋಗವೂ ಇದೆ. ಅದು ಜನಪದ ಕಥೆಗಳ ಜೀವನಾಡಿಯಾದ ರಿಪಿಟೀಷನ್ ತಂತ್ರ. ಅಂದರೆ ಜನಪದ ಕಥೆಗಳ ಕಥನ ಪರಂಪರೆಯ ಮುಂದುವರಿಕೆ ಅನೇಕ ಸಾರಿ ಹೀಗೆ ಆಗುವುದಿದೆ. ಬಡ ತಮ್ಮನ ಕಥೆ ಹೀಗಾದರೆ ಶ್ರೀಮಂತ ಅಣ್ಣನ ಕಥೆ ಹೀಗಾಯಿತು. ಅಣ್ಣನ ಕತೆ ಹಿಗೆ ಆದ್ದರಿಂದ ನೀವು ಇನ್ನೊಮ್ಮೆ ತಮ್ಮನ ಕಥೆಯನ್ನು ಹೇಳಬೇಕು ಅಥವಾ ಕೇಳಬೇಕು. ಈ ಬಡ ತಮ್ಮನ ಕಥೆ ಹೀಗಾದರೆ ಶ್ರೀಮಂತ ಅಣ್ಣನ…. ಅಂದರೆ ಹೀಗೇ ಕಥೆಯ ಪರಂಪರೆಯನ್ನು ಅವಿಚ್ಛಿನ್ನವಾಗಿ ಮುಂದುವರಿಸಲು ಈ ಕತೆಗಾರಿಕೆಯ ಉಪಯೋಗ ಆಗುವುದಿದೆ. ಆಗಲಿ ಬಿಡಿ, ಒಳ್ಳೆಯದೇ ಆಯಿತು. ನಾವು ಇನ್ನೊಮ್ಮೆ ಈ ಕಥೆಯನ್ನು ಹೇಳಿಕೇಳಿದಂತಾಯ್ತು.

*

ಚಿನ್ನದಕಡ್ಡಿ

ತುಂಬಾ ಸರಳವಾದ ಕತೆ ಇದು. ಮರ ಮಾತಾಡಿದ್ದು ಮತ್ತು ಚಿನ್ನದ ಕಡ್ಡಿ ಇವೆರಡೇ ಮುಖ್ಯ ಕಥಾ ಪ್ರೇರಣೆಗಳು. ಸಾಮಾನ್ಯವಾಗಿ ಇಂಥ ಕಥೆಗಳಲ್ಲಾಗುವಂತೆ ಮರಕಟುಕನಿಗೆ ಸಮಾಂತರವಾದ ಇನ್ನೊಂದು ಕಥೆ ಇಲ್ಲಿಲ್ಲ. ಮರಗಳ ವಿನಂತಿಗೆ ಮರಕಟುಕ ಸ್ಪಂದಿಸಿದ್ದರಿಂದ ಕಾನನ ದೇವಿ ಇವನಿಗೆ ಚಿನ್ನದ ಕಡ್ಡಿ ಕೊಟ್ಟಳು. ಆದರೆ ಅದನ್ನು ಅವನು ದುರುಪಯೋಗ ಮಾಡಿಕೊಳ್ಳಲಿಲ್ಲ. ತನ್ನ ಹತ್ತಿರ ಚಿನ್ನದ ಕಡ್ಡಿ ಇದೆಯೆಂದು ಅತಿ ಆಸೆ ಮಾಡಲಿಲ್ಲ. ತನ್ನ ಅಗತ್ಯಗಳ ಪೂರೈಕೆಗ ಮಾತ್ರೆ ಬಳಸಿಕೊಂಡ. ಅವು ಕೂಡ ನಿತ್ಯದ ಅಗತ್ಯಗಳು, ಲಕ್ಷುರಿಗಳಲ್ಲ. ಹೆಂಡತಿಗೆ ಪಾಠ ಕಲಿಸಿದ್ದು ಹಾಸ್ಯ ಪ್ರಸಂಗ ಅಷ್ಟೇ. ಅದು ಕಥೆಯ ಗಂಭೀರವಾದ ಭಾಗವಾಗಬೇಕಿಲ್ಲ.

ಈವರೆಗೆ ಮರಗಳನ್ನು ಸ್ವಾರ್ಥ ದೃಷ್ಟಿಯಿಂದ ಮಾತ್ರ ನೋಡುತ್ತಿದ್ದ ಮರಕಟುಕನಿಗೆ ಇನ್ನೊಂದು ಹೊಸ ದೃಷ್ಟಿ ಬರುತ್ತದೆ. ಎಚ್ಚೆತ್ತವನೇ ಕಣ್ಣು ತೆರೆದು ನೋಡಿದರೆ ಒಂದೊಂದು ಮರಕ್ಕೂ ಅದರದ್ದೇ ಆದ ಚಂದ ಇದೆ. ಉಪಯುಕ್ತತೆ ಇದೆ. ಹೂವಿಂದಾಗಿ ಹಕ್ಕಿ ಹಾಡುತ್ತದೆ. ಹಕ್ಕಿ ಹಾಡಿದರೆ ಚಿಗುರು ಹೆಚ್ಚುತ್ತದೆ. ತಂಪು ನೆರಳಲ್ಲಿ ದನಕರು ಮಲಗಿ ಮೆಲುಕಾಡಿಸಿದರೆ ಮರಕ್ಕೆ ಸುಖದ ಅಮಲೇರುತ್ತದೆ. ಒಂದು ಇನ್ನೊಂದಕ್ಕೆ ಆಧಾರವಾಗುತ್ತಾ, ಇನ್ನೊಂದರ ಆನಂದಕ್ಕೆ ಕಾರಣವಾಗುತ್ತಾ ನೆಮ್ಮದಿಯಿಂದ ಮಲಗಿರುತ್ತವೆ. ಹುಡುಗ ಹುಡುಗಿಯರು ತನ್ನ ನೆರಳಲ್ಲಿ ನಲಿದರೆ ಮರ ನಾಲ್ಕು ಹೂವು ಹೆಚ್ಚಾಗಿ ಬಿಡುತ್ತದೆ. ಬರೀ ಉಪಯುಕ್ತತೆಯ ದೃಷ್ಟಿಯಿಂದ ನಿಸರ್ಗವನ್ನು ನೋಡಿದ ಮರಕಟುಕನ ಕಣ್ಣುಗಳಿಗೆ ಈಗ ಭಿನ್ನವಾದ, ಆಹ್ಲಾದಕರವಾದ, ಹೊಚ್ಚ ಹೊಸ ಹಸಿರು ಲೋಕವೇ ತೆರೆದುಕೊಳ್ಳುತ್ತದೆ. ಇದೇ ಈ ಕತೆಯ ಸೊಗಸು.

ಮಾವಿನ ಮರ ಮತ್ತು ಹೊಂಗೆಯ ಮರಗಳಾದರೆ ಅವೇ ಮಾತಾಡುತ್ತವೆ. ಮೂರನೇ ಸಂಪಿಗೆಯ ಮರ ತಲುಪುವ ವೇಳೆಗಾಗಲೆ ಮರಕಟುಕನಿಗೆ ಹೊಸ ಕಣ್ಣು, ಕಿವಿ ಬಂದಿದ್ದವು. ಸಂಪಿಗೆ ಮರದ ಮಾತಿನ ನೆರವು ಇಲ್ಲದೆ ಇವನೇ ಅದರ ಸೌಂದರ್ಯ ನೋಡಲು ಸಮರ್ಥನಾಗುತ್ತಾನೆ. ಮತ್ತು ಭೂತ ಬಾಧೆ ಇರಲಿ, ಇಲ್ಲದಿರಲಿ ಇನ್ನು ಮೇಲೆ ಮರ ಕಡಿಯಬಾರದೆಂದು ಸರಿಯಾದ ತೀರ್ಮಾನಕ್ಕೆ ಬರುತ್ತಾನೆ.

ಚಿನ್ನದ ಕಡ್ಡಿ ನಿಸರ್ಗದ ಔಚಿತ್ಯಪೂರ್ಣ ಬಳಕೆಗೆ ಸಾಧನವಾಗಿ, ಸಂಕೇತವಾಗಿ ಅರ್ಥಪೂರ್ಣವಾದ ಕೊಡುಗೆಯಾಗಿದೆ. ಅದನ್ನು ಎಲ್ಲಿ, ಹ್ಯಗೆ ಉಪಯೋಗಿಸಬೇಕೆಂಬ ವಿವೇಕ ಇರುವ ತನಕ ಮನುಷ್ಯ ಜೀವನಕ್ಕೆ ಅಪಾಯವಿಲ್ಲ. ದೇವತೆ ಕೊಟ್ಟ ಎಚ್ಚರವನ್ನು ಮೀರಿದರೆ ಅದರಿಂದಾಗುವ ಹಾನಿ ಅಷ್ಟಿಷ್ಟಲ್ಲ. ಅಂಥಿಂಥದಲ್ಲ. ಮಾನವ ಕುಲವೇ ನಾಶವಾದ ಮೇಲೆ ಅಂಥ ಹಾನಿಯನ್ನು ತುಂಬಲಿಕ್ಕೆ ಆಗುತ್ತದೆಯೆ? ಅಲ್ಲದೆ ಚಿನ್ನದ ಕಡ್ಡಿಯನ್ನು ದೇವತೆಗೆ ಕೊಟ್ಟವನು ಸೂರ್ಯನಾರಾಯಣ ಸ್ವಾಮಿ. ಜಗತ್ತು ನಡೆಯುವುದೂ ಅವನಿಂದಲೇ – ಎಂಬಂತಹ ಸರಳ ದರ್ಶನವೊಂದನ್ನು ಈ ಕಥೆ ಹೇಳಲು ಹವಣಿಸುವಂತಿದೆ. ನಿಸರ್ಗದೊಂದಿಗಿನ ಬಾಂಧವ್ಯದ ಮಿತಿಗಳನ್ನು ಮೀರಬಾರದು ಎಂಬ ಬುದ್ಧಿವಾದವನ್ನು ಈ ಕಥೆಯೇನೋ ಹೇಳುತ್ತದೆ. ಅದನ್ನು ಕೇಳಿಸಿಕೊಳ್ಳುವಂತಹ ವಿವೇಕ ಈಗ ನಮ್ಮಲ್ಲಿ ಮೂಡಬೇಕಾಗಿದೆ.

*

ಸಂಪಿಗೆರಾಣಿ

ಕಾಡು, ನಾಡುಗಳ ಸಂಬಂಧವನ್ನು ಕುರಿತ ಅಪರೂಪದ ಜನಪದ ಕಥೆ ಇದು. ನಾಲ್ಕು ಚಿಕ್ಕ ಕಲ್ಲುಗಳನ್ನು ಒಂದೊಂದಾಗಿ ಅವಳ ಮ್ಯಾಲೆಸೆದಂತೆ ಒಂದೊಂದು ಋತುಗಳನ್ನು ಅಭಿನಯಿಸುವ ಸಂಪಿಗೆ ಕಾಡಿನ ರೂಪಕವಾದರೆ ನಾಡಿನ ಬದುಕನ್ನು ಆಳುವ ರಾಜ ನಾಗರಿಕತೆಯ ಪ್ರತಿನಿಧಿಯಾಗುತ್ತಾನೆ. ನಾಡು ಕಾಡಿನಲ್ಲಿ ಅಕ್ರಮ ಪ್ರವೇಶ ಮಾಡಿ ಹಿಂಸೆಗೆ ತೊಡಗುವುದರಿಂದ ಕಥೆ ಶುರುವಾಗುತ್ತದೆ. ನಾಡಿನ ಬರ್ಬರತೆಯನ್ನು ಎದುರಿಸಲಾರದೆ ಸಂಪಿಗೆ ನಿಸ್ಸಹಾಯಕಳಾಗಿ, ಹಿಂಸೆಗೆ ತುತ್ತಾಗುವ ಮರವಾಗಿ ಮಾರ್ಪಟ್ಟು ದುಃಖದಿಂದ  ನಿಂತುಕೊಳ್ಳುತ್ತಾಳೆ. ವೈರಿ ಸೈನಿಕರು ಮರ ಕಡಿಯುವುದಕ್ಕೆ ಕಾರಣಗಳೇ ಇಲ್ಲ. ನಾಗರಿಕವೆಂದುಕೊಂಡವರ ಅನಾಗರಿಕತೆ ಅದು. ವನಪಾಲಕನ ಮೂಲಕ ಹುಡುಗಿಯಾಗಿ ಪರಿವರ್ತನೆಗೊಂಡ ಅವಳ ಸೌಂದರ್ಯ ಹಾಗೂ ಮುಗ್ಧತೆಗೆ ಮಾರುಹೋದ ರಾಜ ಅವಳನ್ನು ಹೃದಯದಲ್ಲಿಟ್ಟುಕೊಂಡು ಕಾಪಾಡುವುದಾಗಿ ಮಾತು ಕೊಟ್ಟು ಮದುವೆಯಾಗುತ್ತಾನೆ.

ಸಂಪಿಗೆ ರಾಣಿಗೆ ಅರಮನೆಯ ಬಗ್ಗೆ ಭ್ರಮನಿರಸನವಾಗುವುದು ತಡವಾಗಲಿಲ್ಲ. ಅದು ನಾಗರಿಕತೆಯ ಕೇಂದ್ರ. ಆಳುವ ಸ್ಥಳ. ಸಹಜವಾಗಿಯೇ ಅಲ್ಲಿ ನಾಗರಿಕತೆಯ ಕೃತಕತೆ, ದುಷ್ಟತನ, ಹಿಂಸೆಗಳೆಲ್ಲ ಮಡುಗಟ್ಟಿ ನಿಂತಿವೆ. ಪಶುಪಕ್ಷಿಗಳನ್ನು ವಿನೋದಕ್ಕಾಗಿ ಬಂಧಿಸಿಟ್ಟ ಜಾಗ ಅದು. ಅವುಗಳ ಶಾಪ ಕೂಡ ಅರ್ಥವಾಗದ ಸೊಕ್ಕಿನಲ್ಲಿ ಆ ನಾಗರಿಕತೆ ಮೆರೆಯುತ್ತಿದೆ. ಪಶುಪಕ್ಷಿಗಳ ಬಗ್ಗೆ ಹಾಗಿರಲಿ ಮನುಷ್ಯ ಮನುಷ್ಯರ ಸಂಬಂಧಗಳಾದರೂ ಹದುಳವಿದ್ದವೆ? ಮಹಾರಾಣಿ ಬಂಜೆ. ಅವಳಿಗೆ ಬಂಜೆತನದ ಅರಿವಾಗುವುದು ಕೂಡ ಸಂಪಿಗೆರಾಣಿ ಗರ್ಭವತಿಯಾದ ಮೇಲೆ. ಮತ್ತು ಆ ಕಾರಣಕ್ಕಾಗಿಯೇ ಅವಳು ಮಹಾರಾಣಿಯ ಅಸೂಯೆಗೂ ಕಾರಣಳಾಗುತ್ತಾಳೆ. ಅಸೂಯೆಯಿಂದ ಮಹಾರಾಣಿ ಎಷ್ಟು ಕುರುಡಿಯಾದಳೆಂದರೆ ಗಂಡನ ಮೇಲೆಯೇ ದಂಡೆತ್ತಿ ಬನ್ನಿರೆಂದು ತಂದೆಗೆ ಕಾಗದ ಬರೆಯುತ್ತಾಳೆ. ತಡ ಮಾಡಿದರೆ ನದಿಗೆ ತಳ್ಳುವನೆಂದೂ ಸುಳ್ಳಾಡುತ್ತಾಳೆ. ರಾಜ ಆ ಕಡೆ ಯುದ್ಧಕ್ಕೆ ಹೋದ ಸಂದರ್ಭ ನೋಡಿ ಈ ಕಡೆ ಸಂಪಿಗೆ ರಾಣಿಗೆ ಮರವಾಗುವ, ಹೂವು ಬಿಡುವ ಆಟ ತೋರಿಸೆಂದು ಕೇಳುತ್ತಾಳೆ. ಸಂಪಿಗೆ ರಾಣಿ ಸುಲಭವಾಗಿ ಮೋಸ ಹೋಗುತ್ತಾಳೆಂದು ಅವಳಿಗೆ ಗೊತ್ತು. ಮಹಾರಾಣಿ ಬಯಸಿದಂತೆಯೇ ಎಲ್ಲಾ ನಡೆಯುತ್ತದೆ. ಸಂಪಿಗೆ ರಾಣಿ ಮರವಾಗಿ ಹೂವು ಸುರಿಸಿದ ಮೇಲೆ ನಾಲ್ಕನೆಯ ಕಲ್ಲನ್ನು ಬೇರೆ ಕಡೆ ಎಸೆದು ಆ ಮರವನ್ನು ಕಡಿಯಲಿಕ್ಕೆ ಮರ ಕಟುಕರನ್ನು ಕಳುಹಿಸುತ್ತಾಳೆ. ಮನುಷ್ಯರಿಗೆ ಇಲ್ಲವೆಂದರೆ ಪಶುಪಕ್ಷಿಗಳಿಗೂ ಕರುಳು ಇರೋದಿಲ್ಲವೇ? ಸಹಜವಾಗಿಯೇ ಪಕ್ಷಿಗಳು ಬಂದು ಮರವಾದ ಸಂಪಿಗೆ ರಾಣಿಯನ್ನು ಉಳಿಸಿಕೊಳ್ಳುತ್ತವೆ.

ಹೀಗೆಂದು ಕಥೆ. ಆದರೆ ಈಗ ಅದು ಹುಸಿ ಹೋಗುವ ಸ್ಥಿತಿಯಲ್ಲಿ, ಪಶುಪಕ್ಷಿಗಳ ಬಣ್ಣದ ಬೆಳಕೂ ಕೂಡ ನಂದಿ ಹೋಗುವ ಸ್ಥಿತಿಯಲ್ಲಿ ನಾವಿದ್ದೇವೆ, – ಎನ್ನುವುದನ್ನು ಮರೆಯಬಾರದು. ಹಸಿರಿನಷ್ಟೇ ಮುಗ್ಧವಾದ, ಪರಸ್ಪರ ನಂಬುಗೆಯ, ಸೃಜನಶೀಲವಾದ ಹಸಿರುಲೋಕ ಒಂದು ಕಡೆ; ಬಂಜೆಯಾದ, ಹುಸಿ ವಂಚನೆಗಳನ್ನು ಉಳ್ಳ, ಪರಸ್ಪರ ಕೊಂದು ತಿಂಬುವ ಅನಾಗರಿಕ ಲೋಕ ಇನ್ನೊಂದು ಕಡೆ. ಈ ಮಧ್ಯೆ ರಾಜನಂಥ ವಿವೇಕಿಗಳು ಇದ್ದರೆ ನಾಗರಿಕ ಜಗತ್ತಿನ ಸುದೈವ. ಪಶುಪಕ್ಷಿಗಳಿಗೆ ರಾಜ ಕೃತಜ್ಞನಾಗಿ ಕಾಡನ್ನು ಕಾಪಾಡಿದನೆಂದು ಕಥೆ ಹೇಳುತ್ತದೆ. ಅವನೂ ಮಹಾರಾಣಿಯ ಹಾಗೆ ಕ್ರೂರಿಯಾಗಿದ್ದರೆ ಈ ಕಥೆ ಹೇಳಕೇಳುವುದಕ್ಕೆ ನಾವು ನೀವೂ ಕೂಡ ಇರುತ್ತಿರಲಿಲ್ಲ. ಈಗ ಯೋಚಿಸಿರಿ : ನಮ್ಮ ರಾಜಕಾರಣವೂ ಮಹಾರಾಣಿಯಂತೆ ಕ್ರೂರವಾದರೆ?

*

ಮಳೆರಾಯ

ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಕಥೆಯ ಮೊದಲ ಭಾಗ ಮಳೆರಾಯನ ಆಟವನ್ನು ಹುಡುಗಿಯರು ಆಡುತ್ತಿದ್ದರು ಅಥವಾ ಈಗಲೂ ಆಡುತ್ತಿರಬಹುದು ಸಣ್ಣ ಮಳೆ ಬರುವಾಗ –

ಮಳೆರಾಯಾ ಮಳೆರಾಯಾ
ಹಾರಿ ಹೋಗೊ ಮಳೆರಾಯಾ
ಕಾರ ಮಳೆಯೆ ಕಪ್ಪ ಮಳೆಯೆ
ಎಲ್ಲಿಂದ ಬಂದೆ, ಹ್ಯಾಗೆ ಬಂದೆ
ಹಳ್ಳ ಕೊಳ್ಳ ತಿರುಗಾಡಿ ಬಂದೆ
ಗುಡ್ಡ ಬೆಟ್ಟ ಹಾರಿ ಬಂದೆ
ಹೋ ಹೋ ಮಳೆರಾಯ ಮಳೆರಾಯ!!

– ಎಂದು ತಮ್ಮ ಮತ್ತು ಮಳೆರಾಯನ ಸಂಭಾಷೆಯನ್ನು ಹಾಡುತ್ತಿದ್ದರು ಮತ್ತು ಹಾಗೆ ಹಾಡುವಾಗ ಎರಡೂ ಕೈ ಚಾಚಿ ತಮ್ಮ ಸುತ್ತ ತಾವೇ ತಿರುಗುತ್ತಾ, ತಿರುಗುವ ಭೂಮಿಯನ್ನು ಅನುಕರಿಸುತ್ತಿದ್ದರು. ಅನುಕೂಲಕ್ಕಾಗಿ ಈ ಕಥೆಯಲ್ಲಿ ಎರಡು ಭಾಗ ಮಾಡಿಕೊಳ್ಳೋಣ; ಮಳೆರಾಯ ರಾತ್ರಿ ಬಂದು ಗುಳ್ಳವ್ವನ ಮನೆ ಬಾಗಿಲು ತಟ್ಟುವ ತನಕ ಒಂದು ಭಾಗ; ಅಲ್ಲಿಂದ ಮುಂದೆ ಎರಡನೆ ಭಾಗ. ಈ ಕಥೆಯ ಎರಡು ಪಾಠಗಳು ಕನ್ನಡದಲ್ಲಿ ಇವೆ. ಮೊದಲನೆ ಭಾಗ ಸಾಮಾನ್ಯವಾಗಿ ಎಲ್ಲ ಪಾಠಗಳಲ್ಲಿ ಇದೆ. ಎರಡನೆಯ ಭಾಗದ ಇನ್ನೊಂದು ಪಾಠ ಹೀಗಿದೆ.

ಒಮ್ಮೆ ಮಳೆರಾಯನ ಗಿಳಿಯ ಮೂಲಕ ನಾಯಕರಿಗೆ ಉಡುಗೊರೆ ಕಳುಹಿಸಿದ. ಆದರೆ ಮಳೆರಾಯನ ಪತ್ನಿ ಅಥವಾ ಸೂಳೆ ಅದಕ್ಕೆ ಮುಳ್ಳು ಹಚ್ಚಿ ಕಳುಹಿಸಿದಳು. ನಿಜ ಸಂಗತಿ ತಿಳಿಯದೆ ಕೋಪಗೊಂಡ ನಾಯಕಿ ಮಳೆರಾಯನೊಂದಿಗೆ ಮಾತು ಬಿಡುತ್ತಾಳೆ. ಆಕೆ ತನ್ನೊಂದಿಗೆ ಮಾತನಾಡುವಂತೆ ಮಾಡಲು ಮಳೆರಾಯ ಅವಳನ್ನು ಪರಿಪರಿಯಾಗಿ ಕಾಡಿಸಿದ. ಅವಳ ತವರಿಗೆ ಬಡತನ ಕೊಟ್ಟ, ಬರ ಕೊಟ್ಟ. ಆಕೆ ಬಾಯಾರಿದಾಗ ನೀರಾಗಿ ಹರಿದ, ಹಸಿದಾಗ ಹಣ್ಣಾಗಿ ಕಂಡ, ಅವಳು ಕಾಳು ಕಾಯುತ್ತಿದ್ದಾಗ ಕೋಳಿಯಾದ. ಕೊನೆಗೆ ಆಕೆಯ ಕೋಪದ ಕಾರಣ ತಿಳಿದು ನಿಜ ಸಂಗತಿ ಹೇಳಿ ಆಕೆಯ ಮನಸ್ಸನ್ನು ಗೆದ್ದ.

ಇದು ಶುದ್ಧಾಂಗವಾದ “ಜನಪದ ಅತಿಮಾನುಷ ಪತಿಯ ಕಥೆ”. ಉಡುಗೊರೆ ಅಂದರೆ ಏನು? ಮಳೆರಾಯನ ಇನ್ನೊಬ್ಬ ಪತ್ನಿ ಅಥವಾ ಸೂಳೆ ಅಂದರೆ ಯಾರು? ಇದಕ್ಕೆಲ್ಲ ಇಲ್ಲಿ ಅರ್ಥವೇ ಸಿಗುವುದಿಲ್ಲ. ಆಶ್ಚರ್ಯದ ಸಂಗತಿ ಎಂದರೆ ಮಳೆರಾಯನ ಬಗ್ಗೆ ಮೇಲಿರುವ ಹಾಡು, ಆಚರಣೆ, ಆಟ ಮುಂತಾದವುಗಳಿಗೂ ಈ ಕಥೆಗೂ ಏನೇನೂ ಸಂಬಂಧವಿಲ್ಲ.

ಮಳೆ ಬಾರದಿದ್ದಾಗ ಅದನ್ನು ಬರಿಸುವ ಉಪಾಯಗಳನ್ನು ಕುರಿತ ಮಂತ್ರಾಚರಣೆಗಳ ರಾಶಿಯೇ ನಮ್ಮಲ್ಲಿದೆ. ಆಷಾಢ ಮಾಸದಲ್ಲಿ ಹೆಣ್ಣುಮಕ್ಕಳು ಆಚರಿಸುವ ಗುಳ್ಳವ್ವನ (ಗೋಲವ್ವ?) ಆಚರಣೆಯೊಂದಿದೆ. ಪ್ರತಿ ಮಂಗಳವಾರ ಹುಡುಗಿಯರು ಹೊಲಗಳಿಗೆ ಹೋಗಿ ಜಿಗುಟು ಮಣ್ಣಿನ ಉಂಡೆ ಮಾಡಿ ಹೂಗಳಿಂದ ಅದನ್ನು ಅಲಂಕರಿಸಿ ಹಾಡು ಹೇಳಿಕೊಂಡು ಊರ ಕಡೆ ಬರುತ್ತಾರೆ. ಆವಾಗ ಎಳೆಯ ಹುಡುಗರು ಜೋಳದ ದಂಟುಗಳನ್ನು ಖಡ್ಗದಂತೆ ಹಿಡಿದು ಆ ಮಣ್ಣಿನ ಉಂಡೆಗಳನ್ನು ಹೊಡೆದು ಉರುಳಿಸುತ್ತಾರೆ. ಹುಡುಗಿಯರು ಅಂಗಲಾಚುತ್ತಾ ತಿಂಡಿ ಕೊಟ್ಟರೆ ಹುಡುಗರು ಸುಮ್ಮನಾಗುತ್ತಾರೆ. ಈ ಹುಡುಗರಿಗೆ ಭೂಪತಿಯ ದಂಡೆಂದು ಹೆಸರು. ಹೀಗೆಯೇ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ತಲೆಯ ಮೇಲೆ ಮಣ್ಣಿನ ಉಂಡೆ ಇಟ್ಟುಕೊಂಡು ತಿರುಗುವ ಬಾಲಕನ ಮೇಲೆ ಜರಡಿಯ ಮೂಲಕ ನೀರು ಹುಯ್ದರೆ ಮಳೆ ಆಗುವುದೆಂದು ನಂಬಿಕೆ ಇದೆ. ಇದಕ್ಕೆ ಗುರ್ಚಿ ಎಂದು ಹೆಸರು. ಮಣ್ಣಿನ ಉಂಡೆ ಭೂಮಿಯನ್ನು, ಜರಡಿ ನೀರು ಮಳೆಯನ್ನ ಅನುಕರಿಸುವ ಆಚರಣೆಗಳೆಂದು ಬೇರೆ ಹೇಳಬೇಕಾದ್ದಿಲ್ಲ.

ಹಾಗೆಯೇ ಕಪ್ಪೆಗೂ ಮಳೆಗೂ ನಂಟು ಹೇಳುವ ಸುಮಾರು ಆಚರಣೆಗಳು ನಮ್ಮಲ್ಲಿವೆ. ಕಪ್ಪೆಗೆ ಮಳೆರಾಯನ ಸ್ನೇಹಿತನೆಂದೇ ಕರೆಯುವುದಿದೆ. ಕಪ್ಪೆಯನ್ನು ಹೊಡೆದು ಮನೆಯ ಮ್ಯಾಲೆಸೆದು ಆಕಾಶದ ಕಡೆ ಮುಖ ಮಾಡಿ ಬೊಬ್ಬೆ ಇಟ್ಟರೆ ಮಳೆ ಬರುತ್ತದೆಂದು ನಂಬಿಕೆಯಿದೆ. ಹೀಗೆ ಮಾಡಿದರೆ ತನ್ನ ಗೆಳೆಯ ಕಪ್ಪೆ ಒದ್ದಾಡುತ್ತಿದ್ದು ಜನ ತನ್ನನ್ನು ಬಯ್ಯುತ್ತಿದ್ದಾರೆಂದು ಮಳೆರಾಯನಿಗೆ ಅರಿವಾಗಿ ಕೆಳಗೆ ಸುರಿಯುತ್ತಾನಂತೆ. ಕರ್ನಾಟಕದ ಇನ್ನು ಕೆಲವು ಕಡೆ ಮಳೆ ಬಾರದಿದ್ದಾಗ ಹೆಂಗಸರು ಕೇರುವ ಮರಕ್ಕೆ ಒಂದು ಕಪ್ಪೆ ಕಟ್ಟಿ ಆ ಕಪ್ಪೆಗೆ ನೀರು ಬೇಕಾಗಿದೆ ಎಂಬ ಅರ್ಥ ಬರುವ ಹಾಡುಗಳನ್ನು ಹೇಳುತ್ತಾರೆ. ಆಮೇಲೆ ಜರಡಿಯ ಮೂಲಕ ಕಪ್ಪೆಯ ಮೇಲೆ ನೀರು ಸುರಿಯುತ್ತಾರೆ. ಇಂಥ ಇನ್ನೂ ಕೆಲವು ಉದಾಹರಣೆಗಳನ್ನು ಕೊಡಬಹುದು. ಹೀಗಿದ್ದೂ ಕಪ್ಪೆಯ ವಿಷಯವಾಗಲಿ, ಗುಳ್ಳವ್ವ, ಗುರ್ಚಿ, ಭೂಪತಿಯರ ವಿಷಯವಾಗಲಿ ಜನಪದ ಕಥೆಗಳಲ್ಲಿ ಬರುವುದಿಲ್ಲ. ಯಾಕೆಂದು ತಿಳಿಯುತ್ತಿಲ್ಲ. ಆದರೆ ಅವು ಮಳೆರಾಯನ ಪುರಾಣದ ತುಂಡುಗಳು ಎನ್ನುವುದು ಸ್ಪಷ್ಟವಾಗಿದೆ.

ನೀವು ಮ್ಯಾಲೆ ಓದಿದ ಕತೆಯ ಎರಡನೆಯ ಭಾಗದಲ್ಲಿ ಮಳೆರಾಯನ ಪುರಾಣದ ಚೂರುಗಳನ್ನು ಜೋಡಿಸುವ ಪ್ರಯತ್ನ ಮಾಡಿದ್ದೇನೆ. ನಿಮಗೆ ಜನಪದ ಕಥೆ ಇಷ್ಟವಾದರೂ ಸರಿ ಅಥವಾ ನನ್ನ ಕಥೆ ಇಷ್ಟವಾದರೂ ಸರಿ ಈ ಎರಡರಲ್ಲಿ ಯಾವುದನ್ನಾದರೂ ಕೊನೆಯ ಪಕ್ಷ ಇನ್ನೊಂದು ಮಗುವಿಗೆ ಹೇಳಿರಿ.

*

ಆತ್ಮಹತ್ಯೆ

ಈ ಜಾತಿಯ ಸುಮಾರು ಮೂವತ್ತು ಕಥೆಗಳನ್ನ ನಾನು ಓದಿದ್ದೇನೆ, ಕೇಳಿದ್ದೇನೆ. ಪ್ರತಿಯೊಂದು ಕಥೆಯಲ್ಲಿ ಅಷ್ಟಿಷ್ಟು ಬದಲಾವಣೆಗಳಾಗಿದ್ದರೂ ಪ್ರತಿಯೊಂದು ಕಥೆಯೂ

ಅ. ದುಃಖಕರವಾದ ಭಯಾನಕವಾದ ಘಟ್ಟಕ್ಕೆ ಬಂದು ಕೊನೆಗೊಳ್ಳುತ್ತದೆ.

ಬ. ಅಂಥ ಕೊನೆಗೆ ಮನುಷ್ಯ ಅತಿಯಾಸೆಯೇ ಕಾರಣವಾಗಿರುತ್ತದೆ.

ಕ. ಈ ಅತಿಯಾಸೆ ಕೂಡ ಅನಿವಾರ್ಯವಲ್ಲ. ಅದಕ್ಕೆ ಅವನ ಅವಿವೇಕವೇ ಕಾರಣವಾಗಿರುತ್ತದೆ.

ಡ. ಇವಷ್ಟೂ ಕತೆಗಳು ನಮ್ಮ ದೇಶದಲ್ಲೇ ಸಿಕ್ಕಿವೆ.

ಅಂದರೆ ಮರ ಕಡಿಯುವ ದುಷ್ಟ ಚಾಳಿ ನಮ್ಮಲ್ಲಿಯೇ ಹೆಚ್ಚೆಂದು ಹೇಳಿದಂತಾಯಿತಲ್ಲವೆ? ಮಹಾಭಾರತದಿಂದಲೇ ನಮ್ಮ ಅರಣ್ಯ ನಾಶದ ಚರಿತ್ರೆ ಸುರುವಾಗುತ್ತದೆ. ಕೃಷ್ಣಾರ್ಜುನರು ಸರ್ಪನಾಶಕ್ಕಾಗಿ ಖಾಂಡವದಹನ ಮಾಡಿದ ಪ್ರಸಿದ್ಧ ಕಥೆಯೇ ಇದಕ್ಕೆ ಸಾಕ್ಷಿ.

ಮಹಾಭಾರತ ಯುದ್ಧ ಮುಗಿದ ಮೇಲೆ ಕೃಷ್ಣ ದ್ವಾರಕೆಗೆ ಹೋದಾಗ ಅಲ್ಲಿಯ ಮರಗಳು ನಾಶವಾದುದನ್ನು ಕಂಡು ಮರುಗಿದ ಸಂಗತಿಯೂ ಅಲ್ಲೇ ದಾಖಲಾಗಿದೆ. ಆಮೇಲೆ ಅಥವಾ ಅದಕ್ಕಿಂತ ಮುನ್ನ ಹುಟ್ಟಿರಬಹುದಾದ ಕಥೆಗಳಿವು.

ಈ ಎಲ್ಲ ಕಥೆಗಳು ‘ಪರಿಸರವೆಂದರೆ ಮರ, ಮರ ಕಡಿಯುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ’ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುತ್ತಿವೆ. ಆದರೂ ಪರಿಸರ ನಾಶ ನಿಂತಿಲ್ಲವೆಂಬ ಸಂಗತಿಯೂ ಅಷ್ಟೇ ನಿಜ.

ಸಾಮಾನ್ಯವಾಗಿ ಜನಪದ ಕಥೆಗಳು ನಮ್ಮ ಭಾಗದಲ್ಲಿ “ಅವರಲ್ಲಿ ಹಾಗಿದ್ದರು; ನಾವಿಲ್ಲಿ ಹೀಗಿದ್ದೀವಿ” ಎಂದು ಮುಗಿಯುತ್ತವೆ. ಹಾಗೇ ನಾನೂ ಮುಗಿಸುತ್ತಿದ್ದೇನೆ.

ಕಥಾನಾಯಕರು ಪರಿಸರ ನಾಶ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ನಾವು ಆ ದಾರಿಯಲ್ಲಿ ಸಂತೋಷದಿಂದ ಸಾಗಿದ್ದೇವೆ!

*