ಒಂದಾನೊಂದು ಕಾಲದಲ್ಲಿ ಪಟ್ಟಣದ ಬದಿಯಲ್ಲಿ ಒಂದಾನೊಂದು ಹಳ್ಳಿ. ಒಂದಾನೊಂದು ಹಳ್ಳಿಯಲ್ಲ ಒಬ್ಬಾನೊಬ್ಬ ಹುಡುಗ, ಹೆಸರು ಮುನಿಯ. ಮುನಿಯನ ಮನೆಯಲ್ಲಿ ಅವನನ್ನು ಬಿಟ್ಟು ಹೇಳುವ, ಕೇಳುವ ಹಿರಿಕಿರಿಯರ್ಯಾರೂ ಇರಲಿಲ್ಲ. ಹಿರಿಯರಿಂದ ಬಂದ ಅದೊಂದು ಮನೆಯಿತ್ತು. ಮನೆಯ ಹಿಂದೊಂದು ಹಿತ್ತಿಲು; ಹಿತ್ತಿಲಲ್ಲೊಂದು ಬಿದಿರು ಮೆಳೆ – ಇಷ್ಟಾದರಾಯ್ತು. ಅವನಿಗೆ ಅಡವಿಯಲ್ಲಿ ಹೊಲ ಗದ್ದೆ ಇರಲಿಲ್ಲ. ಮಾಡುವುದಕ್ಕೆ ಕೆಲಸ ಇರಲಿಲ್ಲ. ಮುನಿಯ ದಿನಾಲು ಮುಂಜಾನೆ ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದ. ಕೆಲಸ ಸಿಕ್ಕದೆ ಬರಿಗೈಯಲ್ಲಿ ಸಂಜೆಗೆ ಮನೆಗೆ ಬರುತ್ತಿದ್ದ.

ಮುನಿಯ ಪಟ್ಟಣಕ್ಕೆ ಹೋಗಿ ನಿರಾಸೆಯಾಗಿ ಒಂದು ದಿನ ತನ್ನ ಮನೆಯಂಗಳದ ಕಟ್ಟೆಯ ಮೇಲೆ ಮೊಳಕಾಲಿಗೆ ಕೈ ಕಟ್ಟಿಕೊಂಡು ಕೂತಿದ್ದ. ಇವನನ್ನು ನೋಡಿದ ನೆರೆಮನೆ ಮುದುಕಿ ಬಂದಳು. ನಿರಾಸೆಯಿಂದ ಕೂತಿದ್ದ ಮುನಿಯನ ನೋಡಿ ಕೇಳಿದಳು:

ಮುದುಕಿ : ಏನೋ ಮುನಿಯ ನಿನಗಿನ್ನೂ ಕೆಲಸ ಸಿಗಲಿಲ್ಲವೇನೊ?

ಮುನಿಯ : ಇಲ್ಲವಮ್ಮಾ.

ಮುದುಕಿ : ಇಷ್ಟು ದಿನ ಅಲೆದರೂ ನಿನಗೆ ಬುದ್ಧಿ ಬರಲಿಲ್ಲವಲ್ಲ. ಬೇಗ ಬುದ್ಧಿ ಕಲಿತರೋ ಸರಿ, ಇಲ್ಲದಿದ್ದರೆ ಉಪವಾಸ ಸಾಯಬೇಕಾಗುತ್ತದೆ.

ಮುನಿಯ : ಬುದ್ಧಿ ಕಲಿಯೋದು ಅಂದರೆ ಏನು ಮಾಡೋದಮ್ಮಾ?

ಮುದುಕಿ : ಏನು ಅಂದರೆ – ? ಏನಾದರೂ ಮಾಡು. ಅಕಾ ಅಕಾ ನಿನ್ನ ಹಿತ್ತಿಲಲ್ಲೇ ಬಿದಿರು ಮೆಳೆಯಿದೆಯಲ್ಲ, ಬಿದಿರಿನಿಂದ ಬುಟ್ಟೀನೇ ಮಾಡಿ ಮಾರಿ ಹೊಟ್ಟೆ ಹೊರೆಯಬಹುದಲ್ಲ! ಕಾಡಿನ ತಾಯಿ ತನ್ನ ಮಕ್ಕಳನ್ನ ಉಪವಾಸ ಸಾಯಿಸೋದಿಲ್ಲಪ್ಪ! ನಿನ್ನ ಆಲಸ್ಯ ಮತ್ತು ಸೊಕ್ಕಿನಿಂದ ನೀನು ಸಾಯಬೇಕಷ್ಟೆ.

– ಎಂದು ಹೇಳಿ ಮುದುಕಿ ಸರ ಸರ ಹೋದಳು. ಮುನಿಯ ತನ್ನ ಬಿದಿರ ಮೆಳೆಯ ಕಡೆಗೆ ಮೊಟ್ಟಮೊದಲ ಸಲ ನೋಡುತ್ತಿರುವಂತೆ ನೋಡಿದ. ಬಿದಿರಿನ ಮರ ಗಾಳಿ ತುಂಬಿ ಇದನನ್ನ ಕೈ ಮಾಡಿ ಕರೆಯುವಂತೆ ಗಾಳಿ ತುಂಬಿ ಲಯಬದ್ಧವಾಗಿ ಅಲುಗಾಡಿತು. ಅಲುಗಿದ ರಭಸಕ್ಕೆ ಒಂದು ಗಳು ಮರದಿಂದ ಹೊರಗೆ ಬಿತ್ತು. ಅದನ್ನು ನೋಡುತ್ತಿರುವಂತೆ ಮುನಿಯನ ಕಣ್ಣು ಹೊಳೆದವು.

ಹೋಗಿ ಸಿಡಿದುಬಿದ್ದ ಆ ಗಳುವನ್ನ ನೋಡಿದ : ನೆರವಾಗಿದ್ದ ಆ ಗಳು ಕಲಾಕೃತಿಯ ತಯಾರಿಕೆಗಾಗಿ ಹುಟ್ಟಿದ ಮರದಂತೆ ಕಾಡಿತು. ಅದು ಹುಟ್ಟಾ ಕಸಬುದಾರನಾದ ಮುನಿಯನನ್ನು ಕೆರಳಿಸಿತು. ಮಚ್ಚು ತಂದವನೇ ಉಮೇದಿಯಿಂದ ಕಸಬುದಾರನಾದ ಮುನಿಯನನ್ನು ಕೆರಳಿಸಿತು. ಮಚ್ಚು ತಂದವನೇ ಉಮೇದಿಯಿಂದ ಸೀಳಿ ಸೀಳಿ ಸಿಬಿರು ಮಾಡಿ, ಬುಟ್ಟಿ ಹೆಣೆದ. ಒಂದಾಗಿ ಎರಡನೇ ಬುಟ್ಟಿ ಹೆಣೆದ. ಮೂರಾಯ್ತು, ಐದಾಯ್ತು. ಎಷ್ಟು ಬುಟ್ಟಿ ಹೆಣೆದರೂ ಮುನಿಯನಿಗೆ ದಣಿವಾಗಲಿಲ್ಲ. ಕೊನೆಗೆ ಸುಂದರವಾದ ಹತ್ತು ಬುಟ್ಟಿ ಹೆಣೆದು ಮಾರಾಟಕ್ಕೆ ಪೇಟೆಗೊಯ್ದ.

ಅಂಗಡಿಯ ಸಾವ್ಕಾರರಿಗೆ ಬುಟ್ಟಿ ಮಾರಿಬಂದ ಹಣದಲ್ಲಿ ಮನೆ, ಸಾಮಾನು ತಗಂಬಂದು ಮನೆಯಲ್ಲಿಟ್ಟು ಸ್ನಾನ ಮಾಡಿ ಅಡಿಗೆ ಮಾಡಿಕೊಂಡರಾಯ್ತೆಂದು ನದಿಗೆ ಹೋದ.

ಮುನಿಯ ವಾಪಸಾದಾಗ ಅಡಿಗೆಯ ಘಮ ಘಮ ವಾಸನೆ ಮನೆ ತುಂಬ ಇಡಗಿತ್ತು! ಮೂಗರಳಿಸಿ ಆಘ್ರಾಣಿಸುತ್ತ ಮನೆ ತುಂಬ ನೋಡಿದ, ಮನೆ ಸ್ವಚ್ಛವಾಗಿದೆ! ಚೆಲ್ಲಾಪಿಲ್ಲಿಯಾದ ಸಾಮಾನುಗಳನ್ನ ಯಾರೋ ನೀಟಾಗಿ ಇಟ್ಟಿದ್ದಾರೆ! ಒಲೆಯ ಬಳಿ ಊಟ ಬಡಿಸಿದ ತಟ್ಟೆ ಕೂಡ ಸಿದ್ಧವಾಗಿದೆ! ಯಾರು ಇದನ್ನೆಲ್ಲ ಮಾಡಿರಬಹುದು? ಸುತ್ತ ಕಣ್ಣರಳಿಸಿ ನೋಡಿದ. ಯಾರಿರಲಿಲ್ಲ. ಹೊರಗೂ ಬಂದು ಹುಡುಕಿದ. ಯಾರಿರಲಿಲ್ಲ. ಹಸಿವಾಗಿತ್ತು, ಒಳಬಂದು ಅಡಿಗೆಯ ರುಚಿ ನೋಡಿದ. ಅದ್ಭುತವಾಗಿತ್ತು. ಯಾರು ಇದನ್ನೆಲ್ಲ ತಯಾರಿಸಿದವರೆಂದು ಮತ್ತೊಮ್ಮೆ ಹುಡುಕಿದ. ಹೊರಕ್ಕೆ ಬನ್ನಿ ಎಂದು ಕರೆದ. ಯಾರೂ ಬರಲಿಲ್ಲ. ಹಸಿವು ತಡೆಯಲಾರದೆ ತಿಂದು ಪುನಃ ಹುಡುಕಿದ. ಯಾರೂ ಸಿಗಲಿಲ್ಲವಾದ್ದರಿಂದ ಅದನ್ನೇ ಯೋಚಿಸುತ್ತ ಮಲಗಿದ.

ಮಾರನೇ ದಿನವೂ, ಅದರ ಮಾರನೇ ದಿನವೂ ಹಾಗೇ ಆಯಿತು. ಮುನಿಯ ಬುಟ್ಟಿ ಮಾರಿ ಸಾಮಾನು ತಂದಿಟ್ಟು ಮಿಂದು ಬರಲು ನದಿಗೆ ಹೋಗುವುದು, ಬರುವುದರೊಳಗೆ ಘಮ ಘಮ ಅಡಿಗೆ ಸಿದ್ಧವಾಗಿ, ಮಾಡಿದವರನ್ನು ಹುಡುಕುವುದು … ಅವರ್ಯಾರೆಂದು ಮಾತ್ರ ಪತ್ತೆ ಆಗಲೇ ಇಲ್ಲ.

ಒಂದು ದಿನ ಮುನಿಯ ದಿನಕ್ಕಿಂತ ಹೆಚ್ಚಿಗೆ ಬುಟ್ಟಿ ಮಾರಿ ಬಂದು ಸಾಮಾನು ಮನೆಯಲ್ಲಿಟ್ಟು ನದಿಗೆ ಹೋದ. ಕೂಡಲೇ ವಾಪಸು ಬಂದು ಬಾಗಿಲು ಕಿಂಡಿಯಿಂದ ಒಳಗೆ ಇಣುಕಿದ. ನೋಡಿದರೆ ಬಂಗಾರ ಕೂದಲಿನ ಚೆಲುವಾತಿ ಚೆಲುವೆಯೊಬ್ಬಳು ಮನೆ ಗುಡಿಸಿ ಸ್ವಚ್ಛ ಮಾಡುತ್ತಿದ್ದಾಳೆ! ಅಡಿಗೆ ಮಾಡಿ, ಸಾಮಾನುಗಳನ್ನ ಜೋಡಿಸಿಟ್ಟು, ಮೂಲೆಗೆ ನಿಂತಿದ್ದ ಒಂದು ಬಿದಿರಿನಲ್ಲಿ ಮಾಯವಾದಳು. ಆಮೇಲೆ ಆ ಬಿದಿರು ಮನುಷ್ಯರಂತೆ ಸರಿಯುತ್ತ ಬಾಗಿಲು ತೆರೆದು ಹಿತ್ತಲಿನ ಬಿದಿರ ಮೆಳೆಯಲ್ಲಿ ಮಾಯವಾಯಿತು! ಗಾಬರಿಯಾದ ಮುನಿಯ ಓಡಿ ಹೋಗಿ ಪೂಜಾರಿಯ ಆಶ್ರಮಕ್ಕೆ ಹೋಗಿ ಕಾಲು ಗಟ್ಟಿಯಾಗಿ ಹಿಡಿದುಕೊಂಡು “ಕಾಪಾಡು ತಂದೇ!” ಎಂದು ಕೂಗಿದ. ಮುನಿಯನ ಮನೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಕೇಳಿಕೊಂಡ ಪೂಜಾರಿ ಕೊನೆಗೆ ಹೇಳಿದ :

“ಇದು ಭೂತಬಾಧೆ ಮಾರಾಯಾ! ಆ ನಿನ್ನ ಮನೆ ಹಿತ್ತಿಲದ ಬಿದಿರಿನ ಭೂತವೇ ಚೆದುರೆಯಾಗಿ ಬಂದು ಕಾಡುತ್ತಿದೆ. ನೀನು ನೇರ ನನ್ನ ಬಳಿಗೇ ಬಂದುದು ಒಳ್ಳೆಯದಾಯಿತು. ಅದು ಭಯಂಕರ ಭೂತ. ಚಂಡೀ ಯಾಗ ಮಾಡಬೇಕು. ಅದನ್ನೂ ಮಾಡುವಾ. ನಿನಗೇನೂ ಅಪಾಯವಾಗದ ಹಾಗೆ ಕತ್ತಿನಲ್ಲಿ ಚೀಟಿ ಕಟ್ಟಿರುತ್ತೇನೆ. ಇವತ್ತಿನ ಹಾಗೆ ನಾಳೇನೂ ನೀನು ಕದ್ದು ಮನೆಗೆ ಹೋಗು. ಆ ಭೂತ ಕೆಲಸ ಮಾಡುತ್ತ ಇರುತ್ತದಲ್ಲ, ಆವಾಗ ಅದಕ್ಕೆ ಗೊತ್ತಾಗದ ಹಾಗೆ ಒಳಕ್ಕೆ ಹೋಗಿ ಆ ಬಿದಿರು ಸುಟ್ಟು ಹಾಕಿ ಬಿಡು, ಆಮೇಲೆ ಅದೇನು ಮಾಡುತ್ತದೋ ನೋಡುವಾ”

ಮಾರನೇ ದಿನ ಮುನಿಯ ಪೂಜಾರಿ ಹೇಳಿದಂತೆ ಬುಟ್ಟಿ ಮಾರಿ ಬಂದು ಸಾಮಾನು ಒಳಗಿಟ್ಟು ಮಿಂದು ಬರಲು ಹೋದವನಂತೆ ಹೊರಗೆ ಹೋದ. ಹೋದವನು ತಕ್ಷಣ ಹಿಂದಿರುಗಿ ಬಂದು ಅಡಗಿ ನಿಂತುಕೊಂಡು ಕಿಂಡಿಯಿಂದ ನೋಡಿದ. ಹಿತ್ತಿಲ ಕಡೆಯಿಂದ ಬಿದಿರ ಗಳುವೊಂದು ಮನೆಯೊಳಕ್ಕೆ ಬಂದು ಬಾಗಿಲಿಕ್ಕಿಕೊಂಡಿತು. ಅಡಿಗೆ ಮನೆಗೆ ಬಂದೊಡನೆ ಆ ಗಳುವಿನಿಂದ ಒಬ್ಬ ಅಪ್ರತಿಮ ಚೆಲುವೆ ಹೊರಬಂದಳು! ಗಳುವನ್ನು ಮೂಲೆಗಿಟ್ಟು ಮನೆಯ ಕಸಗುಡಿಸಿದಳು. ಮುನಿಯ ತಂದಿಟ್ಟ ಕಾಳು ಹಸನು ಮಾಡಿದಳು. ಆಮೇಲೆ ಒಲೆ ಹೊತ್ತಿಸಿ ಅಡಿಗೆಗಿಟ್ಟಳು. ಇದನೆಲ್ಲ ಕದ್ದು ನೋಡುತ್ತಿದ್ದ ಮುನಿಯ ಅವಳು ನೀರಿಗಾಗಿ ಹಿತ್ತಲ ಬಾವಿಗೆ ಹೋಗುವುದನ್ನೇ ಕಾಯುತ್ತಿದ್ದ. ಅವಳು ಬಿಂದಿಗೆ ತಗೊಂಡು ಹೊರಗೆ ಹೋದ ತಕ್ಷಣ ಇವನು ಅವಸರದಲ್ಲಿ ಒಳಹೊಕ್ಕು, ಅವಳು ಕಳಚಿಟ್ಟ ಬಿದಿರನ್ನು ತಗೊಂಡು ತುಂಡುಮಾಡಿ ಒಲೆಯಲ್ಲಿ ಹಾಕಿದ. ಅದು ಸುಟ್ಟು ಉರಿಯುತ್ತಿದ್ದಂತೆ ಆ ಚೆಲುವೆ ನೀರಿನೊಂದಿಗೆ ಒಳಬಂದು ಇವನನ್ನು ನೋಡಿ ಚಕಿತಳಾಗಿ ನಿಂತಳು. ಮುನಿಯ ಇದ್ದ ಬಿದ್ದ ಧೈರ್ಯದಿಂದ “ಎಲ ಎಲಾ ಭೂತವೇ! ಇಕೊ ನಿನ್ನ ಕವಚದ ಬಿದಿರು ಸುಟ್ಟುಹೋಯಿತು, ಇನ್ನು ಮೇಲೆ ನಿನ್ನ ಆಟ ನನ್ನ ಮುಂದೆ ನಡೆಯಲಾರದು. ಹೇಳು, ಇಲ್ಲಿಗ್ಯಾಕೆ ಬಂದೆ? ಏನು ಬೇಕು ನಿನಗೆ? ಯಾರ ಭೂತ ನೀನು?” ಎಂದ. ಆ ಚೆಲುವೆ ತನ್ನ ಬಿದಿರಿನ ಕವಚ ಒಲೆಯಲ್ಲಿ ಸುಡುತ್ತಿರುವುದನ್ನು ಕಂಡು ಹತಾಶಳಾಗಿ ಸಂಕಟಪಟ್ಟಳು. ಇವನೋ ಯುದ್ಧ ಗೆದ್ದವರಂತೆ ಸಂಭ್ರಮಿಸುತ್ತಿದ್ದ. ಆಕೆ ಶಾಂತವಾಗಿ ಹೇಳಿದಳು :

“ನಾನು ಭೂತವೂ ಅಲ್ಲ; ಪ್ರೇತವೂ ಅಲ್ಲ. ನಿನ್ನ ಹಿತ್ತಿಲಲ್ಲಿರುವ ಬಿದಿರು ನಾನು. ನನ್ನ ಹೆಸರು ಬಿದಿರಿನ ಚೆದುರೆ. ನಿನ್ನ ಕರಕೌಶಲ ನೋಡಿ ಮೆಚ್ಚಿ, ನಿನಗೆ ಸಹಾಯ ಮಾಡಲೆಂದೇ ಈ ರೂಪ ತಾಳಿ ಬಂದೆ. ನನ್ನ ಬಿದಿರಿನ ಕವಚವನ್ನು ನೀನು ನಾಶ ಮಾಡಿದ್ದರಿಂದ ನಾನಿನ್ನು ನಿನ್ನನ್ನ ಬಿಟ್ಟು ಹೋಗಲಾರೆ. ಆದರೆ ಆ ಪೂಜಾರಿ ನಂಬಿಕೆಗೆ ಯೋಗ್ಯನಲ್ಲ.”

ಮುನಿಯನಿಗೆ ಈಗ ಅರ್ಥವಾಯಿತು. ಬಿದಿರಿನ ಚೆದುರೆಯೊಂದಿಗೆ ಲಗ್ನವಾಗಿ ಬಿದಿರಿನ ಬುಟ್ಟಿಗಳ ಮಾಡಿ ಮಾರಿ ಇಬ್ಬರೂ ಸುಖವಾಗಿದ್ದರು.

ಆದರೆ ಪೂಜಾರಿ ಸುಮ್ಮನಿರಲಿಲ್ಲ, “ಭೂತಬಾಧೆ ಅಂತ ಬಂದ ಮುನಿಯ ಆಮೇಲೆ ಬರಲೇ ಇಲ್ಲವಲ್ಲ! ಯಾಕೆ?” – ಅಂತ ತನ್ನ ಶಿಷ್ಯನನ್ನ ಕೇಳಿದ.

ಶಿಷ್ಯ : ಅವನಾಗಲೇ ತನ್ನೆಂಡ್ರ ಜೊತೆ ಸುಖವಾಗಿದ್ದಾನಲ್ಲ ಗುರುವೇ.

ಪೂಜಾರಿ : ಹೆಂಡತಿ ? ಅವನ್ಯಾವಾಗಯ್ಯಾ ಮದುವೆ ಆದ?

ಶಿಷ್ಯ : ಗೊತ್ತಿಲ್ಲ ಗುರುವೇ, ಆದರೆ ಅವನೆಂಡ್ತಿ ಜೊತೆಗೇ ಅವನಿರೋದು.

ಪೂಜಾರಿ : ಹೌದೆ? ಬಾ ನೋಡಿ ಬರುವಾ.

ಎಂದು ಮಾತಾಡಿಕೊಂಡು ಇಬ್ಬರೂ ಮುನಿಯನ ಮನೆಗೆ ಹೋದರು.

ಪೂಜಾರಿ ಮತ್ತವನ ಶಿಷ್ಯ ಬಂದಾಗ ಮುನಿಯ ಮನೆಯಲ್ಲಿರಲಿಲ್ಲ. ಬಾಗಿಲು ಹಾಕಿಕೊಂಡಿತ್ತು. ಪೂಜಾರಿ ಕಿಂಡಿಯೊಳಗಿಂದ ನೋಡಿದ. ಬಿದಿರಿನ ಚೆದುರೆ ಮನೆಗೆಲಸ ಮಾಡುತ್ತಿದ್ದಳು. ಅವಳ ರೂಪಕ್ಕೆ ಮನಸೋತು ಪೂಜಾರಿಯ ಬಾಯಲ್ಲಿ ನೀರು ಬಂತು. ಶಿಷ್ಯನ ಕಿವಿಯಲ್ಲಿ ಮತಲಬಿಯ ಮಾತಾಡಿದ, ಶಿಷ್ಯ ಸಿದ್ಧನಾದ. ಪೂಜಾರಿ ಬಾಗಿಲು ತಟ್ಟಿದ. ಬಾಗಿಲು ತೆರೆಯಿತು. “ಮುನಿಯ ಇಲ್ಲವೆ?” ಎನ್ನುತ್ತ ಇಬ್ಬರೂ ಒಳಕ್ಕೆ ನುಗ್ಗಿ ಬಿದಿರಿನ ಚೆದುರೆಯ ಬಾಯಿ ಕಟ್ಟಿದರು. ಅಲ್ಲೇ ಇದ್ದ ಬಿದಿರಿನ ಪೆಟ್ಟಿಗೆಯಲ್ಲಿ ಅವಳನ್ನು ಹಾಕಿ ಬಾಗಿಲಿಕ್ಕಿದರು. ಆಮೇಲೆ ಪೂಜಾರಿ ಆ ಪೆಟ್ಟಿಗೆಯನ್ನು ಶಿಷ್ಯನ ತಲೆಯ ಮೇಲೆ ಹೊರಿಸಿ, “ಆಶ್ರಮಕ್ಕೆ ನಡೆ, ಮಧ್ಯೆ ಎಲ್ಲಿಯೂ ನಿಲ್ಲಬೇಡ; ಪೆಟ್ಟಿಗೆಯ ಬಾಗಿಲು ತೆರೆಯಬೇಡ.” ಎಂದು ತಾಕೀತು ಮಾಡಿ ಕಳಿಸಿದ.

ಶಿಷ್ಯ ಪೆಟ್ಟಿಗೆ ಹೊತ್ತುಕೊಂಡು ಕಾಡಿನಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಮಡು ಸಿಕ್ಕಿತು. ಭಾರ ಹೊತ್ತು ಬಾಯಾರಿಕೆಯಾಗಿದ್ದರಿಂದ ಪೆಟ್ಟಿಗೆ ಇಳಿಸಿ ನೀರು ಕುಡಿಯಲು ಹೋದ. ಅಷ್ಟರಲ್ಲಿ ಒಂದು ಕೋತಿ ಬಂದು ತನ್ನ ಸಹಜ ಕುತೂಹಲದಿಂದ ಪೆಟ್ಟಿಗೆಯ ಬಾಗಿಲು ತೆರೆಯಿತು. ತಕ್ಷಣ ಬಿದಿರಿನ ಚೆದುರೆ ಹೊರಬಂದು ಅದೇ ಕೋತಿಯನ್ನು ಪೆಟ್ಟಿಗೆಯಲ್ಲಿಟ್ಟು ಪಾರಾದಳು. ನೀರು ಕುಡಿದ ಶಿಷ್ಯ ಮತ್ತೆ ಪೆಟ್ಟಿಗೆ ಹೊತ್ತುಕೊಂಡು ಆಶ್ರಮದ ದಾರಿ ಹಿಡಿದ,

ಆಶ್ರಮದಲ್ಲಿ ಆಗಲೇ ಪೂಜಾರಿ ಶಿಷ್ಯನಿಗಾಗಿ ಕಾಯುತ್ತಿದ್ದ. ಶಿಷ್ಯ ಬಂದು ಪೆಟ್ಟಿಗೆ ಇಳಿಸಿದ ಮೇಲೆ ಶಿಷ್ಯನಿಗೆ ಹೇಳಿದ : –

“ಈಗ ನೀನು ಹೊರಡು. ಇವತ್ತು ರಾತ್ರಿ ಈ ಕಡೆ ಬರಬೇಡ. ವಿಶ್ರಾಂತಿ ತಗೊ, ರಾತ್ರಿ ಇಲ್ಲಿ ಏನೇ, ಎಷ್ಟೇ ಗಲಾಟೆ ಆಗಲಿ ನಾನು ನೋಡಿಕೊಳ್ಳುತ್ತೇನೆ. ನೀನು ಮಾತ್ರ ಜಪ್ಪಯ್ಯಾ ಎಂದೂ ಈ ಕಡೆ ತಲೆ ಹಾಕಬೇಡ. ನಾನೇ ಕಿರಿಚಿದರೂ – ಈ ಕಡೆ ಬರಬೇಡ. ತಿಳಿಯಿತೊ? ಇನ್ನು ಹೊರಡು.”

ಮಾರನೇ ದಿನದಿಂದ ಮೈತುಂಬ ಗಾಯಗಳಾಗಿದ್ದ ಆ ಪೂಜಾರಿ ಯಾರ ಕಣ್ಣಿಗೂ ಬೀಳಲಿಲ್ಲ. ನಿಮ್ಮ ಗುರು ಎಲ್ಲಿ ಹೋದ? ಎಂದು ಯಾರೋ ಕೇಳಿದ್ದಕ್ಕೆ “ಕಠಿಣವಾದ ತಪಸ್ಸು ಮಾಡುತ್ತಿದ್ದಾರೆಂದು ಶಿಷ್ಯ ಹೇಳಿದನಂತೆ.”

* * *