ಒಂದಾನೊಂದು ಕಾಲದಲ್ಲಿ ಶಿವಾಪುರವೆಂಬ ಚಿಕ್ಕ ಹಳ್ಳಿಯಲ್ಲಿ ಮೊಸರಜ್ಜಿ ಅಂತ ಒಬ್ಬ ಮುದುಕಿ ಇದ್ದಳು. ಮಕ್ಕಳು ಮರಿ ಇರಲಿಲ್ಲ. ಆದರೆ ಕೊಟ್ಟಿಗೆ ತುಂಬ ದನ ಇದ್ದವು. ಅವು ಗಡಿಗೆ ತುಂಬ ಹಾಲು ಕೊಡುತ್ತಿದ್ದವು. ಮುದುಕಿ ಹಾಲಿಗೆ ಹೆಪ್ಪು ಹಾಕಿ ಮಲ್ಲಿಗೆ ಬಣ್ಣದ ಮೊಸರು ಮಾಡಿ ಊರಿನ ಮಕ್ಕಳಿಗೆ ತಿನಿಸುತ್ತಿದ್ದಳು. ಆಕೆಯ ಮೊಸರು ಬಹಳ ರುಚಿಕಟ್ಟಾದ್ದರಿಂದ ಮಕ್ಕಳು ಆಕೆಯನ್ನು ಮೊಸರಜ್ಜಿ ಎಂದೇ ಕರೆಯುತ್ತಿದ್ದವು. ಆ ಊರಿನಲ್ಲಿ ಮೊಸರಜ್ಜಿಯಿಂದ ಮೊಸರು ತಿನ್ನದೆ ದೊಡ್ಡವರಾದವರ್ಯಾರೂ ಇಲ್ಲೆಂದು ಜನ ಆಡಿಕೊಳ್ಳುವುದುಂಟು. ಆದ್ದರಿಂದಲೇ ಅವಳ ಬಗ್ಗೆ ಜನರಲ್ಲಿ ಎಲ್ಲಿಲ್ಲದ ಪ್ರೀತಿ ಗೌರವಗಳಿದ್ದವು. ಆಕೆ ಇಲ್ಲದೆ ಒಂದು ಮದುವೆಯಾಗಲಿ, ಒಂದು ಜಾತ್ರೆ ಸಮಾರಂಭಗಳಾಗಲಿ ನಡೆದದ್ದಿಲ್ಲ, ಪಂಚಾತಿಕೆಯಲ್ಲಂತೂ ಅವಳದೇ ಕೊನೇ ಮಾತು.

ಇನ್ನವಳ ದನಗಳದೂ ವಿಶೇಷವೇ, ಅವೆಲ್ಲ ಕೃಷ್ಣನ ಕಾಲದವು; ಇವಳಿಗಾಗಿ ಈಗ ಇನ್ನೊಮ್ಮೆ ಅವತಾರ ತಾಳಿ ಬಂದ ಗೋವುಗಳಂತೆ! ಹಾಗಂತ ಅವಳಲ್ಲ, ಜನ ಹೇಳಿದ್ದು! ಇರಬಹುದೋ ಏನೋ, ಅವು ಈವರೆಗೆ ಮುಂದೆ ಬಂದ ಒಬ್ಬರನ್ನೂ ಇರಿದಿಲ್ಲ, ಹಿಂದೆ ಬಂದವರನ್ನ ಒದ್ದಿಲ್ಲ.

ಇಂತಿರಲಾಗಿ ಶಿವಾಪುರಕ್ಕೆ ಗಂಡಾಗುಂಡಿ ಎಂಬ ಸೇಡುವಾರಿಯರು ಬಂದರಾಗಿ ಬರಗಾಲ ಬಂತು. ಮಳೆ ಇಲ್ಲ, ನೀರಿಲ್ಲ. ಆದ್ದರಿಂದ ರೈತರು ತಮ್ಮ ದನಗಳ ಸಂಕಟ ನೋಡಲಾರದೆ ಹಸಿರಿದ್ದಲ್ಲಿ ಮೇದು, ನೀರಿದ್ದಲ್ಲಿ ಕುಡಿದು, ನೆರಳಿದ್ದಲ್ಲಿ ಮಲಗಲೆಂದು ಕಣ್ಣಿ ಬಿಚ್ಚಿ ಹೊಡೆದುಬಿಟ್ಟರು. ಆದರೆ ಮೊಸರಜ್ಜಿಯ ದನಗಳು ಹೊಡೆದರೂ ಬೇರೆಲ್ಲೂ ಹೋಗಲಿಲ್ಲ. ಎಲ್ಲೋ ಹಸಿರು ಸಿಕ್ಕರೆ ಮೇದು ಇಲ್ಲದಿದ್ದರೆ ಹಾಗೇ ಅಲೆದಾಡಿ ದವಡೆ ತಿನ್ನುತ್ತ ಸಂಜೆ ಮನೆಗೇ ಬರುತ್ತಿದ್ದವು.

ಹೀಗಿರುತ್ತ ಒಂದು ದಿನ ದನಗಳು ಮನೆಗೆ ಬರಲೇ ಇಲ್ಲ. ಮೊಸರಜ್ಜಿಗೆ ಚಿಂತೆಯಾಯ್ತು. ಮಾರನೇ ದಿನ ಕೋಲೂರಿಕೊಂಡು ದನ ಹುಡುಕಿಕೊಂಡು ಹೊರಟೇಬಿಟ್ಟಳು. ಒಂದು ಹುಡುಗಿ ಆಶ್ಚರ್ಯದಿಂದ ಕೇಳಿದಳು :

ಹುಡುಗಿ  : ಏನಜ್ಜಿ ಇಷ್ಟೊತ್ತಿನಲ್ಲಿ ಯಾವ ಕಡೆ ಹೊರಟೆ?

ಮೊಸರಜ್ಜಿ : ನೀನು ಬಂದ ದಿಕ್ಕಿನಲ್ಲಿ ನನ್ನ ದನ ಕಂಡುವಾ ಮಗಳೆ?

ಹುಡುಗಿ : ಇಲ್ಲವಲ್ಲ.

ಮೊಸರಜ್ಜಿ : ಎಲ್ಲಿ ಹೋದವೋ, ಏನು ಕಥೆಯೋ! ಮನೆಯಲ್ಲಿ ನಿನ್ನಂಥಾ ಮಗಳಿದ್ದಿದ್ದರೆ ನೋಡಿಕೊಳ್ಳುತ್ತಿದ್ದಳು. ದೇವರು ಅವಳನ್ನೂ ಕೊಡಲಿಲ್ಲ.

ಎಂದು ಒಟಗುಟ್ಟುತ್ತ ತನ್ನ ಪಾಡಿಗೆ ದನ ಹುಡುಕಿಕೊಂಡು ಹೊರಟಳು.

ಎಲ್ಲಿ ಹುಡುಕದಿರೂ ಒಣನೆಲ, ನೋಡಿದಲ್ಲೆಲ್ಲ ಬಿಸಿಲುಗುದುರೆ ಮೇಯುತ್ತಿದ್ದವೇ ವಿನಾ ದನ ಇರಲಿಲ್ಲ. ದಣಿದು ಹೈರಾಣಾಗಿ ಎತ್ತರದಲ್ಲಿ ಏರಿ ನಿಂತು ಹುಬ್ಬುಗೈ ಹಚ್ಚಿಕೊಂಡು ನೋಡುವಾಗ ದೂರದಲ್ಲಿ ತುಸು ಹಸಿರಿದ್ದು ಮರದ ಕೆಳಗೆ ತನ್ನ ದನ ನಿಂತದ್ದು ಕಾಣಿಸಿತು. ಮುದುಕಿ ದಣಿದಿದ್ದರೂ ಗಣನೆಗೆ ತಾರದೆ ಅವರಸರವಸರವಾಗಿ ಆ ಕಡೆ ಧಾವಿಸಿದಳು.

ಅದೊಂದು ದೊಡ್ಡ ಹೊನ್ನೆ ಮರ. ಕೆಳಗೆ ನೆರಳಲ್ಲಿ ತನ್ನ ದನ ಮಲಗಿವೆ! ಹೋಗಿ ನಿರುಮ್ಮಳ ನಿಟ್ಟುಸಿರು ಬಿಟ್ಟು, ದನಗಳ ಜೊತೆ ತಾನೂ ಕೂತು ಬೆವರೊರೆಸಿಕೊಂಡಳು. “ಸದ್ಯ! ಈಗಲಾದರೂ ಸಿಕ್ಕಿರಲ್ಲ! ನಮ್ಮೂರಿಗೆ ಏನಾಗಿದೆಯೋ! ಒಂದು ಗಿಡ ಇಲ್ಲ, ಮರ ಇಲ್ಲ. ಊರೆಲ್ಲ ಒಲೆಯ ಹಾಗೆ ಉರೀತಾ ಇದೆ. ಇರು ಅಂದರೆ ದನಗಳಾದರೂ ಹ್ಯಾಗಿದ್ದಾವು? ಇದ್ದರೆ ಮೇಯೋದಕ್ಕೇನಿದೆ? ದನ ಏನು, ಜನಗಳೇ ಊರು ಬಿಟ್ಟು ಹೋಗುತ್ತಿದ್ದಾರೆ. ಜನರ ಕಥೆಯೇ ಹೀಗಾದರೆ ಇನ್ನು ದನಗಳನ್ನು ದೇವರೇ ಕಾಪಾಡಬೇಕು. ಹೌದು! ಇಲ್ಲಿ ಮಾತ್ರ ಹಸಿರಿದೆಯಲ್ಲ! ಯಾಕಿದ್ದೀತು?” ಎಂದು ದಿಗಿಲುಗೊಂಡು ಯಾಕೆಂದು ಬಗೆಹರಿಯದೆ “ಆಯ್ತು ಎದ್ದೇಳಿ, ಬಿಸಿಲು ತಗ್ಗಿದೆ, ಬೇಗ ಹೋಗಿ ಮನೆ ಸೇರಿಕೊಂಬುವಾ, ಅಮ್ಮಾ ಕಪಿಲೆ ಮುಂದಾಗು” ಎಂದು ಎದ್ದಳು.

ಕೋಲು ತಗೊಂಡು ದನಗಳನ್ನು ಒಟ್ಟುಗೂಡಿಸಿ ಇನ್ನೇನು ಹೊರಡಬೇಕು, ಅಷ್ಟರಲ್ಲಿ ಕೂಸು ಅತ್ತ ದನಿ ಕೇಳಿಸಿತು. ಮುದುಕಿಗೆ ಆಶ್ಚರ್ಯ! “ಇದೆಲ್ಲಿಂದ ಮಗು ಬಂತು?” ಎನ್ನುತ್ತ ಸುತ್ತ ನೋಡಿದಳು. ಎಲ್ಲೂ ಕಾಣಿಸಲಿಲ್ಲ. “ನನಗೂ ಅರಿವು ಮರೆವು” ಎಂದುಕೊಂಡು ನಡೆದಳು. ಮತ್ತೆ ಮಗು ಅಳುವ ದನಿ ಕೇಳಿಸಿತು. ಮುದುಕಿ ಈಗ ಚುರುಕಾದಳು. ಸುತ್ತ ಹುಡುಕಿದಳು. ಏನಿರಲಿಲ್ಲ. ಯಾರೋ ಚೇಷ್ಟೆ ಮಾಡುತ್ತಿರಬೇಕೆನಿಸಿತು. ಮತ್ತೆಯೂ ಮಗುವಿನ ಅಳು ಕೇಳಿಸಿ ಮರದ ಸುತ್ತ ಹುಡುಕಿದಳು. “ಮಾಯೆಯೊ! ಮಾಟವೊ! ಭೂತಬಾಧೆಯೊ! ಏನು ಕಥೆಯೊ!” ಈಗ ಅವಳೆದುರಿನಲ್ಲೇ ಕೇಳಿಸಿತು. ದನಿ ಬಂದಲ್ಲಿ ನೋಡಿದರೆ ಅಲ್ಲೊಂದು ಮುದ್ದಾದ ಹೊನ್ನೆ ಸಸಿ ಇತ್ತು. ಈ ಸಸಿಯೇ ಅಳುತ್ತಿರಬಹುದೇ ಅಂತ ಮುದುಕಿ ಅದರ ಮುಂದೆಯೇ ಕೂತಳು. ಈಗಲೂ ದನಿ ಕೇಳಿಸಿತು. ಮೆಲ್ಲನೆ ಅದರ ಮೇಲೆ ಬೆರಳಾಡಿಸಿದಳು. ಈಗ ಕೂಸು ಬಿಕ್ಕಿದ್ದು ಕೇಳಿಸಿತು. ಇನ್ನೊಮ್ಮೆ ಅದರ ಮೇಲೆ ಕೈಯಾಡಿಸಿದಾಗ ಇಡೀ ಸಸಿ ಕೈಗೇ ಬಂತು! ಕೂಸಿನ ಹಾಗೆ ಎತ್ತಿಕೊಂಡಳು. ಹೌದು ಸಸಿಯೇ ಅಳುತ್ತಿದೆ ಎಂದು ಗೊತ್ತಾಗಿ “ಅಳ್ಳಳ್ಳಾಯೀ” ಎಂದು ಹಾಡುತ್ತಾ ಸಸಿಮಗುವ ರಮಿಸುತ್ತ ಮನೆಗೆ ಬಂದಳು. ತೊಟ್ಟಿಲಲ್ಲಿ ಮಲಗಿಸಿ ಮೆಲ್ಲಗೆ ಜೋಗುಳ ಹಾಡಿದಳು

ಜೋ ಜೋ ಎನ್ನ
ಹೊನ್ನೆಯ ಕಂದಾ|| ಜೋ ಜೋ
ದೊಡ್ಡೊಂದು ಮರದಡಿ ಒರಗಿದ್ದೆ ಕಂದಾ
ಬಂಜೆ ಮುದುಕಿಗೆ ಒಲಿದು ಬಂದೆಯಾ ಕಂದಾ
ಯಾವ ದೇವರ ವರವೋ ಯಾವ ಸೌಭಾಗ್ಯವೋ
ಓ ನನ್ನ ಮುದ್ದಿನ ಭಾಗ್ಯದ ಕಂದಾ ಜೋ ಜೋ ||

ಹೀಗೆ ಹಾಡುತ್ತ ತೊಟ್ಟಿಲು ತೂಗುತ್ತಿದ್ದಂತೆ ಹೊನ್ನೆಯ ಸಸಿ ಹೋಗಿ ಹೆಣ್ಣು ಕೂಸಾಗಿ ಪರಿವರ್ತನೆ ಹೊಂದಿತು! ಮುದುಕಿಗೆ ಆನಂದದ ಹುಚ್ಚು ಹತ್ತಿ ಜಲ ಜಲ ಕಣ್ಣೀರು ಸುರಿಸುತ್ತ ತೊಟ್ಟಿಲು ತೂಗುತ್ತ ಅಲ್ಲೇ ಕೂತಳು.

ಮೊಸರಜ್ಜಿಗೆ ಹೆಣ್ಣು ಕೂಸು ಸಿಕ್ಕಿದ್ದು ಕೇಳಿ ಇಡೀ ಊರು ಆನಂದದಿಂದ ಕುಣಿದಾಡಿತು. ಕೂಸಿಗೆ ಭಾಗ್ಯವಂತಿ ಎಂದು ಹೆಸರಿಟ್ಟು ಗುಗ್ಗರಿ ಹಂಚಿಕೊಂಡು ತಿಂದರು. ಹೆಸರಿಗೆ ತಕ್ಕಂತೆ ಆ ಊರಿಗೆ ಭಾಗ್ಯವಂತಿ ಬಂದುದೇ ಆಯ್ತು; ಅಂದಿನಿಂದ ಆ ಸೀಮೆಗೆ ಕಾಲಕಾಲಕ್ಕೆ ಮಳೆ ಬೆಳೆಯ ಸಮೃದ್ಧಿ ಒದಗಿ ಬಂತು. ಜನರಂತೂ ಅವಳನ್ನು ಭಾಗ್ಯವಂತಿ ಎನ್ನುವ ಬದಲು ಭಾಗ್ಯಲಕ್ಷ್ಮಿಯೆಂದೇ ಕರೆದರು. ಒಬ್ಬರ ಪ್ರೀತಿ ಇದ್ದರೇನೇ ಮಕ್ಕಳು ದಿನಕ್ಕೊಂದು ಚಂದ ಬೆಳೆಯುತ್ತಾರೆ. ಇನ್ನು ಊರ ಎಲ್ಲರ ಪ್ರೀತಿ ಸಿಕ್ಕರೆ ಕೇಳಬೇಕೆ? ಭಾಗ್ಯವಂತಿ ಐದನೇ ತಿಂಗಳು ಐದು ವರ್ಷಗಳ ಮಗಳಾಗಿ, ಹತ್ತನೇ ತಿಂಗಳಿಗೆ ಹತ್ತು ವರ್ಷಗಳ ಬಾಲಕಿಯಾಗಿ ಬೆಳೆದು ಹದಿನೈದನೇ ವರ್ಷಕ್ಕೆ ಓರಗೆಯ ಹುಡುಗಿಯರ ಜೊತೆ ದನ ಮೇಯಿಸಿಕೊಂಡು ಬರಲು ಹೊರಟಳು. ಅವಳು ಕೋಲು ತಗೊಂಡು ಗೋಮಾಳಕ್ಕೆ ಹೊರಟರೆ ಮೊಸರಜ್ಜಿ “ಭಾಗ್ಯವಂತೀ ನಿಲ್ಲು” ಎಂದು ಹೇಳಿ “ಹಾಳಾದ್ದು ನನ್ನ ದೃಷ್ಟೀನೇ ತಾಗುತ್ತದೆ ನಿನಗೆ. ಇನ್ನು ಹಾಳು ಮೂಳರ ದೃಷ್ಟಿ ತಾಗದಿದ್ದೀತೆ? ತಾಳು” ಎಂದು ಹೇಳಿ, ದೃಷ್ಟಿ ತೆಗೆದು ನಿವಾಳಿಸಿ ಚೆಲ್ಲುತ್ತಿದ್ದರು.

ಇಂತಿರುವಲ್ಲಿ ಅವಳ ನಡೆನುಡಿ ಸೌಂದರ್ಯಗಳ ಖ್ಯಾತಿ ದೇಸಗತಿಗೂ ತಲುಪಿತು. ಸ್ವತಃ ದೇಸಾಯಿಯೇ ಬಂದು ತನಗೆ ಭಾಗ್ಯವಂತಿಯನ್ನು ಮದುವೆ ಮಾಡಿಕೊಡಬೇಕೆಂದು ಕೇಳಿ ಹೋದ. ದೇಸಾಯಿಯಂಥ ಯೋಗ್ಯ ವರ ಆ ಸೀಮೆಯಲ್ಲಿ ಇನ್ಯಾರಿದ್ದಾರೆ? ಮೊಸರಜ್ಜಿಯೂ ಒಪ್ಪಿದಳು. ಇಷ್ಟು ದಿವಸ ಪ್ರಾಣ ಅಂದ್ಕೊಂಡು ಬೆಳೆಸಿದ ಕೂಸನ್ನ ಇನ್ನೊಬ್ಬರಿಗೆ ಕೊಡಬೇಕಲ್ಲಾ ಅಂತ ಸಂಕಟವಾಯಿತು. ಹೆಣ್ಣುಮಕ್ಕಳಿಗೆ ತೌರುಮನೆಯೇ ಕೊನೆಯಲ್ಲವಲ್ಲ. ವೈಭವದಿಂದ ಒಂದು ವಾರದವರೆಗೆ ಮದುವೆ ಮಾಡಿಕೊಟ್ಟಳು.

ನಿಮಗೆ ಸೇಡುಮಾರಿಯರ ವಿಚಾರ ಗೊತ್ತಿಲ್ಲ ಅಲ್ಲವೇ? ಅವರು ಬರಗಾಲದಂಥ ದುಷ್ಕಾಲವನ್ನ, ರೋಗರುಜಿನಾದಿಗಳನ್ನ ತರುವ ಕ್ಷುದ್ರದೇವತೆಗಳು. ಜನರ ಅಜ್ಞಾನವನ್ನು ಉಪಯೋಗಿಸಿಕೊಂಡು ಆ ಮೂಲಕವೇ ಊರಿನಲ್ಲಿ ಪ್ರವೇಶ ಪಡೆದು, ರೋಗಗಳನ್ನ ಪಸರಿಸಿ ಗಾಡಿ ಗಾಡಿ ಹೆಣಗಳನ್ನು ಒಯ್ದು ಊರ ಹೊರಗೆ ರಾಶಿ ಹಾಕುತ್ತಾರೆ. ಆಮೇಲೆ ದಿನಂಪ್ರತಿ ತಿನ್ನುತ್ತ ಕಾಲ ಕಳೆಯುತ್ತಾರೆ. ಊರ ಹಿರಿಯರು ಇವರ ಮರದ ಗೊಂಬೆಗಳನ್ನು ಮಾಡಿ ಅದರಲ್ಲಿ ಇವರನ್ನು ಆವಾಹಿಸಿ ಊರ ಹೊರಗೆ, ತಮ್ಮ ಊರಿನ ಕಡೆಗೆ ಬೆನ್ನು ಮಾಡಿ ಬಿಡುತ್ತಾರೆ. ಅವರನ್ನು ಸುಟ್ಟರೆ ಅವರು ಒಂದು ವರ್ಷ ನಾಶವಾಗುತ್ತಾರೆ. ಆದರೆ ಕೆಲವು ಸಲ ಊರ ಹೊರಗೆ ಬಿಡುವ ಮುನ್ನ ಅವರು ‘ನಿಮ್ಮೂರಿಗೆ ಬರುವುದಿಲ್ಲ. ಮುಂದಿನೂರಿಗೆ ಹೋಗುತ್ತೇವೆ. ನಮ್ಮನ್ನ ಜೀವಂತ ಬಿಡಿರಿ’ ಎಂದು ಕೇಳಿಕೊಳ್ಳುತ್ತಾರೆ. ಜನ ಆಗಲೆಂದು ಉದಾರವಾಗಿ ಬಿಡುತ್ತಾರೆ. ಗಂಡಾಗುಂಡಿ ಎಂಬುವರು ಆ ಭಾಘದ ಸೇಡಮಾರಿಯರು. ಭಾಗ್ಯವಂತಿ ಬಂದಾಗಿನಿಂದ ಅವರಿಗೆ ಒಂದು ದನಕರುವಿರಲಿ ತಿನ್ನಲಿಕ್ಕೆ ಒಂದು ಕೋಳೀ ಪಿಳ್ಳೆಯೂ ಸಿಕ್ಕಿರಲಿಲ್ಲ. ಈಗ ಭಾಗ್ಯವಂತಿ ದೇಸಾಯಿಯ ಜೊತೆ ಮದುವೆಯಾಗಿ ಹೋಗುತ್ತಿರುವ ಸುದ್ದಿ ಕೇಳಿ ಇಬ್ಬರೂ ಕಳೆಕಳೆಯಾದರು.

ಗಂಡ : ಎಲಾ ಗುಂಡಿ, ನಿನ್ನೆಯಷ್ಟೆ ಭಾಗ್ಯವಂತಿ ಮದುವೆಯಾಗಿ ಅವಳು ಇವತ್ತು ಗಂಡನ ಮನೆಗೆ ಓಯ್ತಿದಾಳೆ! ಇನ್ನು ಮ್ಯಾಕೆ ಇಲ್ಲಿಯ ಜನ ದನ ಎಲ್ಲ ನಮ್ಮವೇ! ಬೇಕಾದಷ್ಟು ತಿಂದು ತೇಗಿ ವಾಂತಿ ಮಾಡಿಕೋಬೌದು.

ಗುಂಡಿ  : ಲೋ ಗಂಡಾ

ಗಂಡ : ಲೇ ಗುಂಡಿ?

ಗುಂಡಿ : ಕುಡಿಯೋದಕ್ಕೆ ದೇಸಗತಿ ರಕ್ತ ಎಂಗಿರ‍್ತದೆ?

ಗಂಡ : ಅಬ್ಬ! ಆ ರುಚಿ ನೆನೆದರೇ ಈಚಲು ಮರದಂಗೆ ಮೈ ಮುಳ್ಳೇಳುತ್ತವೆ!

ಗುಂಡಿ : ಹಾಂಗಿದ್ದರೆ ಬಾ

ಎಂದು ಗುಂಡಿ ಗಂಡನ ಕರೆದುಕೊಂಡು ನಡೆದಳು.

ಇತ್ತ ಮೊಸರಜ್ಜಿಯ ಮನೆಯಲ್ಲಿ ಸಂಭ್ರಮ, ದುಃಖ ಎರಡೂ ಇದ್ದವು. ಸಂಭ್ರಮ ಯಾಕೆಂದರೆ ಭಾಗ್ಯವಂತಿಯ ಮದುವೆ, ಹುಡುಗಿಯರ ಒಯ್ಯಾರ, ತಾಯಂದಿರ ಸಡಗರ, ಹುಡುಗರ ಉತ್ಸಾಹ – ಒಂದು ಕಡೆಗಾದರೆ; ಮಗಳನ್ನು ಗಂಡನ ಮನೆಗೆ ಕಳಿಸಿಕೊಡಬೇಕಲ್ಲಾ ಎಂದು ಮೊಸರಜ್ಜಿ ಮುಖ ಚಿಕ್ಕದು ಮಾಡಿಕೊಂಡಿದ್ದರೆ, ಅಜ್ಜಿಯನ್ನು ಬಿಟ್ಟು ಹೋಗಬೇಕಲ್ಲಾ ಎಂದು ಭಾಗ್ಯವಂತಿ ಬಾಡಿದ್ದಳು. ಎಲ್ಲ ಮುಗಿದ ಮೇಲೆ ವರ ಕುದುರೆಯೇರಿದ. ಮುತ್ತೈದೇರು ಭಾಗ್ಯವಂತಿಯನ್ನು ಪಲ್ಲಕ್ಕಿಯವರೆಗೆ ಕರೆತಂದರು. ಭಾಗ್ಯವಂತಿ ಅಜ್ಜಿಯನ್ನು ತಬ್ಬಿಕೊಂಡತ್ತಳು. ಮುದುಕಿಗೇನು ಸಮಾಧಾನವೇ? ತನ್ನಲ್ಲಿದ್ದ ಅಷ್ಟೂ ಕಣ್ಣೀರನ್ನು ಅತ್ತು ಮಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿದಳು.

ದಿಬ್ಬಣ ಗದ್ದೆ, ತೋಟಗಳ ದಾಟಿ ಕಲ್ಲು ಬಂಡೆಗಳಿದ್ದ ಗುಡ್ಡದ ಬಳಿ ಹಾದು ಹೋಗುತ್ತಿದ್ದಾಗ ಕೊನೆಯ ಬಾರಿ ತನ್ನ ಊರನ್ನು ನೋಡಬೇಕೆಂದು ಪರದೆ ಸರಿಸಿ ನೋಡಿದಾಗ ಕುಲು ಕುಲು ನಗುತ್ತಿದ್ದ ಸೇಡುಮಾರಿಯ ಗೊಂಬೆ ಕಂಡಿತು. ಇಷ್ಟು ಅವಕಾಶ ಸಿಕ್ಕುದೇ ಆಯ್ತು, ಸೇಡುಮಾರಿ ಭಯಂಕರ ಬಿರುಗಾಳಿಯನ್ನು ಸೃಷ್ಟಿಸಿ ದಿಬ್ಬಣದ ಮೇಲೆ ಛೂ ಬಿಟ್ಟಳು. ಧೂಳೆದ್ದು ತರಗೆಲೆಗಳು ಹಾರಿ, ತರುಮರಗಳು ಅಲುಗಿ ದಿಬ್ಬಣದ ಜನ ಕಂಗಾಲಾಗಿ ಚೆಲ್ಲಾಪಿಲ್ಲಿಯಾದರು. ಭಾಗ್ಯವಂತಿ ಪಲ್ಲಕ್ಕಿಯಿಂದ ಉರುಳಿ ಕೆಳಕ್ಕೆ ಬಿದ್ದಳು. ಗಾಬರಿಯಾಗಿ ಕಿರುಚುವಷ್ಟರಲ್ಲಿ ಸೇಡುಮಾರಿ ಮಾಯದ ಗಾಳಿಯ ಬೀಸಿ ಭಾಗ್ಯವಂತಿಯನ್ನು ಮೂರ್ಛೆಗೊಳಿಸಿ ಎತ್ತಿಕೊಂಡು ಹೋಗಿ ಪಕ್ಕದ ಕಲ್ಲುಬಂಡೆಗಳಿದ್ದಲ್ಲಿ ಚೆಲ್ಲಿ, ತಾನು ಭಾಗ್ಯವಂತಿಯ ವೇಷ ಹಾಕಿಕೊಂಡು ಬಂದು ಪಲ್ಲಕ್ಕಿಯಲ್ಲಿ ಕೂತಳು! ಈಗ ಗಾಳಿಯ ಅಬ್ಬರ ಕಡಿಮೆಯಾಗಿ ಯಥಾಸ್ಥಿತಿ ಬಂತು. ದೇಸಾಯಿ ಓಡಿಬಂದು ಪಲ್ಲಕ್ಕಿಯಲ್ಲಿ ಹಣಿಕಿದ. ಒಳಗಿದ್ದ ಭಾಗ್ಯವಂತಿ ಮುಗುಳು ನಕ್ಕಳು! ಪುನಹ ದಿಬ್ಬಣ ಕರೆದುಕೊಂಡು ನಡೆದ. ಪಲ್ಲಕ್ಕಿ ಹೊರುವ ಇಬ್ಬರು ಬೋಯಿಗಳ ಜೊತೆಗೆ ಈಗೊಬ್ಬ ಚೌರಿ ಬೀಸುವ ದೊಡ್ಡ ಹೊಟ್ಟೆಯ ಆಸಾಮಿ ಸೇರಿಕೊಂಡಿದ್ದನ್ನು ಯಾರೂ ಗಮನಿಸಲಿಲ್ಲ.

ಅರಮನೆಗೆ ಬಂದ ಮೊದಲ ರಾತ್ರಿ ಸಸ್ಯಾಹಾರವಾದ್ದರಿಂದ ಭಾಗ್ಯವಂತಿ ಊಟ ಮಾಡಲಿಲ್ಲ. ದೇಸಾಯಿಗೆ ಆಶ್ಚರ್ಯವಾಗಿ ಕೇಳಿಯೂಬಿಟ್ಟ.

ದೇಸಾಯಿ : ನೀನು ಇವತ್ತು ಊಟ ಮಾಡಲಿಲ್ಲ?

ಭಾಗ್ಯವಂತಿ : ಹೌದು, ಇವತ್ತು ಪತಿಪಾರಾಯಣ ವ್ರತ, ಉಪವಾಸ.

ದೇಸಾಯಿ : ಹಾಲು ತಗೋಬೌದಲ್ಲ?

ಭಾಗ್ಯವಂತಿ : ಉಂಟೇ? ಉಗುಳು ನುಂಗಿದರೂ ವ್ರತಭಂಗವಾದೀತು. ಬೇಡ.

ದೇಸಾಯಿ ಮಾತ್ರ ಹೆಸರೇ ಕೇಳಿರದ ವ್ರತದ ಬಗ್ಗೆ ಆಶ್ಚರ್ಯಪಡುತ್ತ ಮಲಗಿದ.

ಬೆಳಿಗ್ಗೆ ದೇಸಾಯಿ ಇನ್ನೂ ಹಾಸಿಗೆಯಲ್ಲಿ ಇರುವಾಗಲೇ ಕುದುರೆ ಪಾಗಾದ ಮೇಲ್ವಿಚಾರಕ ಮುದುಕ ಬಂದು,

ಮುದುಕ : ಸ್ವಾಮಿ, ಕೊಟ್ಟಿಗೆಯಲ್ಲಿ ಕುದುರೆಗಳು ಕಾಣುತ್ತಿಲ್ಲ,

ಎಂದು ಕೂಗಿ ಹೇಳಿದ.

ದೇಸಾಯಿಗೆ ಆಶ್ಚರ್ಯವಾಯಿತು, ಎದ್ದು ಬಂದು ಅಂದ –

ದೇಸಾಯಿ : ಏನು ಹಾಗಂದರೆ? ಅಲ್ಲೆಲ್ಲೊ ಇರಬಹುದು. ಹುಡುಕಿ ನೋಡು

ಮುದುಕ : ನೋಡಿಯಾಯ್ತು ಸ್ವಾಮಿ.

ದೇಸಾಯಿ ಕೊಟ್ಟಿಗೆಗೆ ಬಂದು ನೋಡಿದ. ಒಂದೂ ಕುದುರೆ ಇರಲಿಲ್ಲ. ಕೊಟ್ಟಿಗೆ ಬಿಕೋ ಎನ್ನುತ್ತಿತ್ತು. ಮುದುಕ ಹೇಳಿದ.

ಮುದುಕ : ಇದು ಹೊಸ ಸೊಸೆಯ ಆಗಮನಕ್ಕೆ ಶುಭಸೂಚನೆ ಅಲ್ಲ ಸ್ವಾಮಿ!

ದೇಸಾಯಿ : ಮೂರ್ಖ, ಬಾಯಿಗೆ ಬಂದದ್ದನ್ನು ಆಡಬೇಡ ನಡೆ, ಗದ್ದೆ ತೋಟದ ಕಡೆಗೆ ಹೋಗಿ ನೋಡುವಾ.

ಮುದುಕ : ಅದರೆ ತಮ್ಮ ಅರಮನೆ ಹಿತ್ತಿಲಲ್ಲಿ ಮೂಳೆಗಳು ಬಿದ್ದಿವೆ.

ದೇಸಾಯಿ : ಏನಂದೆ?

ಮುದುಕ : ತಾವೇ ಬಂದು ನೋಡಬಹುದು ಸ್ವಾಮಿ.

ಹೋಗಿ ನೋಡಿದರೆ ಮೂಳೆಗಳ ರಾಶಿಯೇ ಬಿದ್ದಿದೆ! ಅವರು ಚಿಂತಾಕುಲರಾಗಿ ಹಿಂದಿರುಗಿದರು.

ಹೀಗೆಯೇ ಇನ್ನೊಂದು ದಿನ ದನಕರುಗಳು ಮಾಯವಾಗಿ ಮೂಳೆರಾಶಿ ಎರಡು ಪಟ್ಟು ಬೆಳೆಯಿತು. ಅರಮನೆಯ ದನಕರುಗಳಾದ ಮೇಲೆ ಊರಿನ ದನಕರುಗಳೂ ಎಳೆಯ ಮಕ್ಕಳೂ ಕಾಣೆಯಾಗತೊಡಗಿದವು. ಮೂಳೆಗಳ ರಾಶಿ ಈಗ ಚಿಕ್ಕ ಬೆಟ್ಟದಷ್ಟು ಬೆಳೆಯಿತು. ದನಕರು ಮನುಷ್ಯರನ್ನು ಯಾರು ಕದ್ದು ತಿನ್ನುತ್ತಿದ್ದಾರೆಂದು ತಿಳಿಯದಾಯಿತು.

ಒಂದು ದಿನ ದೇಸಾಯಿ ಭಾಗ್ಯವಂತಿಗೆ ತನ್ನ ಚಿಂತೆಯನ್ನು ಹೇಳಿದ :

ದೇಸಾಯಿ : ಅರಮನೆಯಲ್ಲಿಯ ನನ್ನ ಕುದುರೆಯೂ ಮಾಯವಾಗಿದೆ!

ಭಾಗ್ಯವಂತಿ : ಅಯ್ಯೋ ಅದಕ್ಕಿಲ್ಲ ಇಷ್ಟು ಯೋಚನೆ ಮಾಡಿದರೆ ಹ್ಯಾಗೆ? ಒಂದು ಕುದುರೆ ಹೋದರೆ ಇನ್ನೊಂದು ತಂದರಾಯ್ತು.

ದೇಸಾಯಿ : ಕೊಟ್ಟಿಗೆಯ ದನಕರು ಮಾಯವಾಗಿವೆ!

ಭಾಗ್ಯವಂತಿ : ಇನ್ನಷ್ಟು ದನಕರು ಕೊಂಡು ತನ್ನಿ. ಹೋಗಿವೆ ಅಂತ ನಾವು ಸಾಯ್ಲಿಕ್ಕಾಗುತ್ತದಾ?

ದೇಸಾಯಿ : ಆದರೆ ಅವೆಲ್ಲ ಎಲ್ಲಿ ಹೋದವು. ಅಂತ!

ಭಾಗ್ಯವಂತಿ : ತಪ್ಪಿಸಿಕೊಂಡು ಹೋಗಿರಬಹುದು. ಯಾರೋ ಕಳ್ಳರು ಒಯ್ದಿರಬಹುದು. ಎಲ್ಲಿಗೋ ಸುಡುಗಾಡಿಗೆ ಹೋಗಿರಬಹುದು.

ದೇಸಾಯಿ : ಹಿಂದೆಂದೂ ಹೀಗಾಗಿರಲಿಲ್ಲ.

ಭಾಗ್ಯವಂತಿ : ಈವಾಗಾಯ್ತಲ್ಲ, ಏನು ಮಾಡಬೇಕು?

ದೇಸಾಯಿ : ಹೀಗಂತೀಯಾ?

ಭಾಗ್ಯವಂತಿ : ಮತ್ತಿನ್ನೇನು? ಪಕ್ಕದ ಊರಿಗೆ ಹೋಗಿ ನೂರಿನ್ನೂರು ಕುದುರೆ ತನ್ನಿ. ದನಕರು ತನ್ನಿ. ಹಿಂಡು ಕುದುರೆ ತಂದರೆ ಬ್ಯಾಡ ಅಂತೀನಾ ನಾನು?

ದೇಸಾಯಿಗೆ ಅವಳ ವಾದವೂ ಸರಿಯೆನ್ನಿಸಿತು. ದನಕರು ಕುದುರೆ ಹೋದವು ಅಂತ ಸುಮ್ಮನೆ ಕೂರಲಿಕ್ಕಾಗುತ್ತದೆಯೆ? ಮುಂದಿನ ವ್ಯವಸ್ಥೆ ಆಗಲೇಬೇಕಲ್ಲ? ಅವರನ್ನೆಲ್ಲ ಯಾರು ಒಯ್ದರು? ಹ್ಯಾಗೆ ಒಯ್ದರು? ಹಿತ್ತಲ ಮೂಳೆಗಳು ಎಲ್ಲಿಯವು? – ಇದೆಲ್ಲ ಆಮೇಲೆ ತಾನೆ? ಅಂದುಕೊಂಡು ಕುದುರೆ ತರಲು ನಡೆದ. “ಹಾಗೇ ಬರುವಾಗ ನಿನ್ನ ತಾಯಿ ಮನೆಗೂ ಹೋಗಿ ಬರ್ತೀನಿ. ನೀನು ಬರ್ತೀಯೇನು?” ಅಂದ.

ಭಾಗ್ಯವಂತಿ : ಮತ್ತೆ ನಾನ್ಯಾಕೆ? ನಾನು ಬಂದರೆ ಈ ಊರು, ಜನ – ದನ ನೋಡಿಕೊಳ್ಳೋರ್ಯಾರು? ನೀವೇ ಹೋಗಿ ಬನ್ನಿ.

ದೇಸಾಯಿ : ನಿನ್ನ ತಾಯಿಗೇನಾದರೂ ಹೇಳಬೇಕೇನು?

ಭಾಗ್ಯವಂತಿ : ಏನೂ ಬೇಡ. ನಿನ್ನ ಮಗಳು ಚೆನ್ನಾಗಿದ್ದಾಳೆ. ನೀನೇನೂ ಚಿಂತಿ ಮಾಡಬೇಡ. ಈ ಕಡೆ ಬರಲೂ ಬೇಡ ಅಂತ ಹೇಳಿ.

ಈ ಮಾತು ಕೇಳಿ ದೇಸಾಯಿಗೆ ಆಶ್ಚರ್ಯವಾಯಿತು. “ಇವಳು ಮೊಸರಜ್ಜಿಯ ಮಗಳು ಭಾಗ್ಯವಂತಿಯೇ?” ಎಂದುಕೊಂಡು ಹೊರಟ. ಭಾಗ್ಯವಂತಿ ವಿಕಾರದ ನಗೆ ನಕ್ಕಳು. ಅವಳ ನಗೆಯೊಂದಿಗೆ ನಗೆ ಸೇರಿಸಲು ಅವಳ ಗಂಡನೂ ಬಂದ.

ಗಂಡ : ಮೆಚ್ಚಿದೆ ಮಡದೀ, ನಿನ್ನ ಉಪಾಯ ಮೆಚ್ಚಿದೆ! ದೇಸಾಯಿ ಆ ಕಡೆ ಹೋದ. ಈಗ ಇದು ನಮ್ಮದೇ ರಾಜ್ಯ!

ಭಾಗ್ಯವಂತಿ : ಹಿರಿಯಾ ನಿನ್ನ ಹೊಟ್ಟೆ ಉರಿಯಾ, ಇನ್ನು ಮ್ಯಾಕೆ ಊರಿನ ದನಕರು ನಿನ್ನವು. ಮನುಷ್ಯರೆಲ್ಲ ನನ್ನವರು. ಇದಕ್ಕೆ ಒಪ್ಪಿದರೆ ಹೊಟ್ಟೆ ಬಿರಿಯೋ ಹಾಗೆ ತಿಂದುಕೊಂಡಿರು. ಇಲ್ಲವೋ ಜಾಗ ಖಾಲಿ ಮಾಡು.

ಗಂಡ : ಒಪ್ಪಿಕೊಂಡೆ ಮಡದಿ. ಎತ್ತಿದೆ ನನ್ನ ಬಿಡದಿ – ಎಂದು ಊರಾಡಲು ಹೊರಟ.

ಕೊಂಡ ಕುದುರೆಗಳನ್ನು ಹೊಡೆದುಕೊಂಡು ಬಾಡಿದ ಮುಖದ ದೇಸಾಯಿ ಮೊಸರಜ್ಜಿಯ ಮನೆಗೆ ಬಂದ. ಮೊಸರಜ್ಜಿಗಂತೂ ಮೊದಮೊದಲು ಗುರುತೇ ಸಿಕ್ಕಲಿಲ್ಲ.

ಮೊಸರಜ್ಜಿ : ಯಾರಿದು? ಅಳೀಮಯ್ಯ ದೇಸಾಯಿಯಲ್ಲವೆ?

ದೇಸಾಯಿ : ಹೌದು ಅತ್ತೆ.

ಮೊಸರಜ್ಜಿ : ಮಗಳು ಕ್ಷೇಮವೇ?

ದೇಸಾಯಿ : ಇದ್ದಾಳೆ ಅತ್ತೆ.

ಮೊಸರಜ್ಜಿ : ಏನು ಹಾಗಂದರೆ? ಸರಿಯಾಗಿ ಹೇಳಪ್ಪ. ನನ್ನ ಭಾಗ್ಯವಂತಿ ಯಾಕೆ ಬರಲಿಲ್ಲ? ನಾನೇ ಬರೋಣ ಅಂತ ಇದ್ದೆ. ಏನು ಹೇಳಿದಳು ಮಗಳು?

ದೇಸಾಯಿ : ನೀನು ಬಾ ಅಂದೆ. ನಾನು ಬಂದರೆ ದನಕರು ನೋಡಿಕೊಳ್ಳೋರ್ಯಾರು? ಅಂದಳು. ನಿನ್ನ ತಾಯಿಗೇನಾದರೂ ಹೇಳಬೇಕೆ? ಅಂದೆ. ‘ಚೆನ್ನಾಗಿದ್ದೇನೆ ಚಿಂತೆ ಮಾಡಬೇಡ. ಈಕಡೆ ಬರಲೂ ಬೇಡ ಅಂತಂದ್ಲು.’

ಮುದುಕಿಗೆ ನಿರಾಸೆ ಮತ್ತು ಆಶ್ಚರ್ಯವಾಯಿತು. ಮಗಳು ತನಗೆ ಬರಲು ಹೇಳಲಿಲ್ಲವಲ್ಲ ಎಂದು ನಿರಾಶೆಯಾಯಿತಾದರೂ ಆಮೇಲೆ “ಇವು ನನ್ನ ಭಾಗ್ಯವಂತಿಯ ಮಾತುಗಳೆ?” ಎಂದು ಅನುಮಾನವಾಯಿತು.

ಮೊಸರಜ್ಜಿ : ನಿನ್ನ ಮಾತನ್ನ ನಂಬಲಿಕ್ಕಾಗುತ್ತಿಲ್ಲ ಅಳೀಮಯ್ಯ. ನೀನ್ಯಾಕೆ ಹೀಗಿದ್ದಿ?

ದೇಸಾಯಿ : ಏನು ಹೇಳಲಿ ತಾಯಿ. ಭಾಗ್ಯವಂತಿ ಅರಮನೆ ಸೇರಿದ್ದೇ ಆಯ್ತು, ಮಾರನೆ ದಿನದಿಂದಲೇ ಕುದುರೆ ದನ ಕರುಗಳೆಲ್ಲ ಕೊಟ್ಟಿಗೆಯಿಂದ ಮಾಯವಾಗತೊಡಗಿದವು. ಊರಲ್ಲಿಂದ ದನಕರುಗಳೂ ಮಾಯವಾದವು. ಈಗೀಗ ಎಳೆಮಕ್ಕಳೂ ಮಾಯವಾಗುತ್ತಿವೆ.

ಮೊಸರಜ್ಜಿಗೆ ಆಶ್ಚರ್ಯದೊಂದಿಗೆ ಭಯವೂ ಆಯ್ತು.

ಮೊಸರಜ್ಜಿ : ಏನು ಮಾತಾಡುತ್ತಿ ಅಳೀಮಯ್ಯ? ನನ್ನ ಭಾಗ್ಯವಂತಿ ನಿನ್ನ ಮನೆ ತುಂಬಿದ ದಿನದಿಂದ ಸಮೃದ್ಧಿ ತುಳುಕಬೇಕು. ಮಳೆಬೆಳೆ ಹಸಿರು ಹೆಚ್ಚಾಗಬೇಕು. ದನಕರುಗಳಿಂದ ನಿನ್ನ ಕೊಟ್ಟಿಗೆ, ಧನ ಧಾನ್ಯಗಳಿಂದ ಮನೆ ತುಂಬಬೇಕು. ನೀನು ಮಾತಾಡುವುದು ಕೇಳಿದರೆ ಅದಕ್ಕೆ ವಿರುದ್ಧ!

ದೇಸಾಯಿ : ಹೌದು ತಾಯಿ, ವಿರುದ್ಧವಾದುದೇ ಆಗುತ್ತಿದೆ. ನಿಜ ಹೇಳಬೇಕೆಂದರೆ ಸಮೃದ್ಧಿಯಾಗುತ್ತಿರೋದು ನಮ್ಮ ಮನೆ ಹಿತ್ತಿಲನ ಮೂಳೆ ರಾಶಿ ಮಾತ್ರ!

ಮೊಸರಜ್ಜಿ ; ಛೇ, ಛೇ ನಿನ್ನ ಮಾತು ನಂಬುವುದು ಸಾಧ್ಯವೆ? ನೀನು ಹೇಳುವುದು ನಿಜವೇ ಆಗಿದ್ದರೆ ನಿನ್ನ ಮನೆ ಹೊಕ್ಕವಳು ಅವಳ್ಯಾವಳೋ ರಾಕ್ಷಸಿ ಇರಬೇಕು. ನನ್ನ ಮಗಳು ಭಾಗ್ಯವಂತಿಯಂತೂ ಅಲ್ಲ. ನಡೆ ನಾನೇ ನೋಡಿಬರುತ್ತೇನೆ.

ಎಂದು ಹೇಳಿ ಕೋಲು ತಗೊಂಡು ಭಾಗ್ಯವಂತಿ ಸಿಕ್ಕ ದೊಡ್ಡ ಮರದ ಬೇರನ್ನು ಜೋಪಾನವಾಗಿ ತೆಗೆದಿಟ್ಟುಕೊಂಡು ಹೊರಟೇಬಿಟ್ಟಳು ಮೊಸರಜ್ಜಿ.

ಹಿಂದೆ ದಿಬ್ಬಣ ಹೊರಟಾಗ ಮಾಯದ ಬಿರುಗಾಳಿ ಬೀಸಿದ್ದ ಬಂಡೆಗಳ ಹತ್ತಿರ ಬಂದರು. ಅಲ್ಲೇ ಸೇಡುಮಾರಿಯರ ಎರಡು ಗೊಂಬೆಗಳಿದ್ದವು. ಯಾರೋ ಹೆಣ್ಣುಮಗಳು “ಕಾಪಾಡಿರಯ್ಯೋ, ಹೆಣ್ಣಾದರೆ ತಾಯಿಯೆಂಬೆ, ಗಂಡಾದರೆ ತಂದೆಯೆಂಬೆ; ಕಾಪಾಡಿರಯ್ಯೋ” ಎಂದು ಅಳುತ್ತಿರುವುದು ಕೇಳಿಸಿತು.

ಮೊಸರಜ್ಜಿ : ಕೇಳಿದೆಯಾ ಅಳೀಮಯ್ಯ, ಸಮೀಪದಲ್ಲೇ ಯರೋ ಹೆಂಗಸು ಅಳುತ್ತಿರುವ ಹಾಗಿದೆಯಲ್ಲ!

ದೇಸಾಯಿ : ಹೌದು ತಾಯಿ!

ಮೊಸರಜ್ಜಿ : ಬಾ ನೋಡೋಣ.

ಇಬ್ಬರೂ ಬಂಡೆಗಳಿದ್ದಲ್ಲಿಗೆ ಹೋದರು. ಇಕ್ಕಟ್ಟಾದ ದಾರಿಗುಂಟ ಹೋದಾಗ ಒಂದು ಕಿಂಡಿ ಕಾಣಿಸಿತು. ಒಳಕ್ಕೆ ನೊಡಿದರೆ ಗವಿ, ಅದರೊಳಗೆ ಭಾಗ್ಯವಂತಿ ಅಳುತ್ತಿರುವುದು ಕಾಣಿಸಿತು. ದೇಸಾಯಿ ಗಾಬರಿಯಿಂದ ಹೇಳಿದ.

ದೇಸಾಯಿ : ಇದರಲ್ಲೇನೋ ಮೋಸ ಇದೆ ತಾಯಿ! ಒಳಗೆ ಭಾಗ್ಯವಂತಿಯ ಹಾಗೇ ಒಂದು ಹೆಣ್ಣಿದೆ.

ಮೊಸರಜ್ಜಿ : ಏನೆಂದೆ?

ಎಂದು ಮುದುಕಿಯೂ ನೋಡಿ ಖಾತ್ರಿಯಾದ ಮೇಲೆ ಬಾಗಿಲಿಗಡ್ಡ ಇಟ್ಟಿದ್ದ ಬಂಡೆಗಲ್ಲನ್ನು ನೂಕಿ ಸರಿಸಿದರು. ಭಾಗ್ಯವಂತಿ “ಅಮ್ಮಾ” ಎಂದು ಓಡಿಬಂದು ಮೊಸರಜ್ಜಿಯನ್ನು ತಬ್ಬಿಕೊಂಡಳು. ಭಾಗ್ಯವಂತಿಯಿಂದ ವಿಷಯ ತಿಳಿದ ಮೇಲೆ ಅಜ್ಜಿ ಹೇಳಿದಳು.

ಮೊಸರಜ್ಜಿ : ದೇಸಾಯಿ ಮನೆಯಲ್ಲಿರೋಳು ನೀನಾಗಿರಲಾರೆ ಎಂದು ನನಗೆ ಮೊದಲೇ ಅನ್ನಿಸಿತ್ತು ಮಗಳೆ. ಅದಕ್ಕೇ ಇದೋ ನಿನ್ನ ತಾಯಿ ಮರದ ಬೇರು ತಂದೆ. ಇದು ನಿನ್ನ ಬಳಿಯಿದ್ದರೆ ಅವಳ ಮದ್ದು ಮಾಟದ ಆಟ ನಡೆಯಲಾರದು. ಇದನ್ನು ಇಟ್ಟುಕೊ. ಅವಳು ನಿನ್ನನ್ನು ಕೊಲೆ ಮಾಡಲು ಹೊಂಚಿರಬಹುದು. ಹುಷಾರಾಗಿರ ಬೇಕು. ನಡೆ ನೋಡುವಾ,

ಎಂದು ಮೂವರೂ ಹೊರಟರು. ಮುದುಕಿ ಮರೆಯದೆ ಸೇಡುಮಾರಿಯರ ಎರಡೂ ಗೊಂಬೆಗಳನ್ನು ತಗೊಂಡು ಸೆರಗಿನಲ್ಲಿ ಬಚ್ಚಿಟ್ಟುಕೊಂಡಳು.

ಮೂವರೂ ಅರಮನೆ ಪ್ರವೇಶಿಸಿದೊಡನೆ ಅರಮನೆಯಲ್ಲಿದ್ದ ಕೃತಕ ಭಾಗ್ಯವಂತಿ “ಉರಿ ಉರಿ ಉರಿ” ಎಂದು ಕಿರುಚತೊಡಗಿದಳು. ಮೊಸರಜ್ಜಿ ಉಪಾಯವಾಗಿ ಸರಿದು ತಾನು ತಂದಿದ್ದ ಸೇಡುಮಾರಿಯರ ಗೊಂಬೆಗಳನ್ನು ಉರಿಯುವ ಒಲೆಯಲ್ಲಿ ಎಸೆದಳು. ಕೃತಕ ಭಾಗ್ಯವಂತಿ ಹಾಗೂ ಅವಳ ಗಂಡನ ರೂಪು ಕರಗಿ ಮೂಲ ಸೇಡುಮಾರಿಯರ ರೂಪ ಬಂತು. ಉರಿ ಉರಿ ಎಂದು ಒದರುತ್ತ ಇಬ್ಬರೂ ಬೆಂಕಿಯಲ್ಲಿ ಬೆಂದುಹೋದರು.

ದೇಸಾಯಿ ಮತ್ತು ಭಾಗ್ಯವಂತಿಯನ್ನು ಹರಸಿ ಮೊಸರಜ್ಜಿ ತನ್ನ ಊರಿಗೆ ಹಿಂದಿರುಗಿದಳು. ಆಮೇಲೆ ಹೊನ್ನೆ ಮರದ ಮಗಳು ಭಾಗ್ಯವಂತಿಯಿಂದಾಗಿ ಅರಮನೆ ಮತ್ತು ಆ ಇಡೀ ಊರಿನ ಭಾಗ್ಯತೆರೆದಂತೆ ಮಳೆ ಬೆಳೆ ಸಮೃದ್ಧಿಯಿಂದ ತುಳುಕಾಡಿತು. ನಮ್ಮಲ್ಲಿ ಹೊನ್ನೆಮರ ಇಲ್ಲವಾಗಿ ಹೀಗಿದ್ದೇವೆ.

*