ಒಂದಾನೊಂದು ಕಾಲದಲ್ಲಿ ಒಂದಾನೊಂದು ಹಳ್ಳಿಯ ಕೊನೇ ಓಣೆಯ ಕೊನೇ ಮನೆಯಲ್ಲಿ ಬಡ ತಾಯಿ, ಮಗ ಇದ್ದರು. ಬಡತನ ಅಂದರೆ ಅಷ್ಟಿಷ್ಟಲ್ಲ. ಸಾಲದ್ದಕ್ಕೆ ತಾಯಿ ಜಡ್ಡಾಗಿ ಮಲಗಿದ್ದಳು. ಮಗ ಬಲರಾಮನಿಗೆ ಏನು ಮಾಡಬೇಕೆಂದು ದಿಕ್ಕೇ ತೋಚದಾಯ್ತು. ದುಡಿದೇನೆಂದರೆ ಇದ್ದೊಂದು ಎಕರೆ ಹೊಲವನ್ನೂ ಸಾವ್ಕಾರನಲ್ಲಿ ಅಡವಿಟ್ಟು ಸಾಲ ತಂದಿದ್ದ. ಕೂಲಿಯ ಮಾಡೇನೆಂದರೆ ಊರಿನಲ್ಲಿ ಕೆಲಸ ಕೊಡಬಲ್ಲ ಸಾವ್ಕಾರ ಒಬ್ಬನೇ. ಅವನೋ ಜಿಪುಣ ಮತ್ತು ದುಡ್ಡಿಗೆ ದುಡ್ಡಿನ ಬಡ್ಡಿಯವ. ತಾಯಿಯ ಜಡ್ಡಿಗೆ ಮದ್ದಿರಲಿ, ಅವಳಿಗೊಂದು ತುತ್ತು ಗಂಜಿಗೂ ಗತಿಯಿಲ್ಲದಾಗಿತ್ತು. ಕಡ ತರೋಣವೆಂದರೆ ಸಾವ್ಕಾರನಿಂದ ಕಡ ತಂದು ಹಿಂದುರುಗಿಸಿರಲಿಲ್ಲವಾಗಿ ಅವನು ಪುನಃ ಕೊಡುವುದು ಅನುಮಾನವೇ. ಬೇರೆ ಉಪಾಯವೇ ಇಲ್ಲ. ಈ ಹೀಗೆಂದು ಚಿಂತಿಸುತ್ತ, ಪ್ರಯತ್ನಿಸೋಣವೆಂದು ಎದ್ದ.

ತಾಯಿ : ಎಷ್ಟೂಂತ ಕೊಟ್ಟಾನು? ಹಿಂದೆ ಕೊಟ್ಟದನ್ನ ನಾವು ಹಿಂದಿರುಗಿಸಿದ್ದರಲ್ಲವೆ?

ಬಲರಾಮ : ಹಿಂದಿರುಗಿ ಕೊಡಲು ನಮ್ಮ ಹತ್ತಿರ ಏನಿದೆ ತಾಯಿ? ಇದ್ದ ಹೊಲವನ್ನೂ ಅವನಲ್ಲೇ ಅಡವಿಟ್ಟುದಾಯ್ತು. ಇನ್ನಿದೊಂದು ಮನೆ. ಇದರ ಮೇಳು ಅವನು ಕಣ್ಣಿಟ್ಟಿದ್ದರೆ ಆಶ್ವರ್ಯವಿಲ್ಲ. ದುಡಿದೇನೆಂದರೆ ಕೆಲಸ ಕೊಡುವ ಪುಣ್ಯಾತ್ಮರಿಲ್ಲ. ಏನು ಊರೋ! ಇದೊಂದು ಬಾರಿ ಹಿಟ್ಟನ್ನಂತೂ ಕೇಳ್ತೀನಿ.

ಎಂದು ಹೇಳಿ ಬಲರಾಮ ಬುಟ್ಟಿ ತಗೊಂಡು ಸಾವ್ಕಾರನ ಮನೆಗೆ ಹೊರಟ.

ಸಾವ್ಕಾರ ಕೋಲು ಹಿಡಿದುಕೊಂಡು ಆಳುಗಳಿಂದ ಅದು ಇದು ಕೆಲಸ ತೆಗೆಯುತ್ತ ನಿಂತಿದ್ದ. ಬಡವರಿಗೆ ಬಲ ಇರೋದಿಲ್ಲ. ಧೈರ್ಯವೂ ಇರೋದಿಲ್ಲ, ಅಲ್ಲವೆ? ಬಲರಾಮ ಹೆದರಿಕೊಂಡೇ ಹೋಗಿ ಸಾವ್ಕಾರನ ಮುಂದೆ ಬಾಗಿ ನಿಂತ. ಸಾವ್ಕಾರ ಕೇಳಿದ;

ಸಾವ್ಕಾರ : ಏನಯ್ಯಾ ಬಲರಾಮ ಮತ್ತೆ ಬಂದೆ?

ಬಲರಾಮ : ತಾಯಿ ಜಡ್ಡಾಗಿ ಮಲಗಿದ್ದಾಳೆ, ಒಂದು ಪಾವು ಹಿಟ್ಟು ಕಡ ಕೊಟ್ಟರೆ ಗಂಜೀನಾದರೂ ಕುದಿಸಿ ಕುಡಿಸಬಹುದು.

ಸಾವ್ಕಾರ : ಹೌದಯ್ಯ, ಕಡ ಅಂತ ಕೊಟ್ಟುದನ್ನು ಎಂದಾದರೂ ಹಿಂದಿರುಗಿಸಿ ಕೊಟ್ಟಿದ್ದೀಯ?

ಬಲರಾಮ : ವಾಪಸ್ ಮಾಡ್ತೀನಿ.

ಸಾವ್ಕಾರ : ಹಿಟ್ಟು ಕೊಡೋಣ. ಒಂದು ವಾರ ಮುಗಿದ ಮೇಲೆ ಹತ್ತು ಪಾವು ಹಿಟ್ಟು ಕೊಡಬೇಕು. ತಪ್ಪಿದರೆ ಹಿತ್ತಲು ಸಮೇತ ನಿನ್ನ ಮನೆ ಬರೆದುಕೊಡಬೇಕು. ಒಪ್ಪಿಗೆಯೊ? ಒಪ್ಪಿಗೆ ಇದ್ದರೆ ತಗೊಂಡು ಹೋಗು.

ಒಂದು ಪಾವು ಹಿಟ್ಟಿಗೆ ಹಿತ್ತಲು ಸಮೇತ ಮನೆ ಬರೆದು ಕೊಡುವುದು ಅಂದರೆ ದುಬಾರಿಯಾಯಿತು. ಆದರೇನು ಮಾಡುವುದು? ತಾಯಿಯ ಜೀವವೂ ಮುಖ್ಯ ಅಲ್ಲವೆ? ಅಂತ ಯೋಚಿಸಿ

ಬಲರಾಮ : ಆಯ್ತು ಸ್ವಾಮೀ ಕೊಡಿ.

ಎಂದು ಹೇಳಿ, ಸಾವ್ಕಾರನಿಂದ ತನ್ನ ಬುಟ್ಟಿಯಲ್ಲಿ ಒಂದು ಪಾವು ಹಿಟ್ಟು ಹಾಕಿಸಿಕೊಂಡು ಮನೆಗೆ ನಡೆದ.

ಇಂತೀ ರೀತಿಯಲ್ಲಿ ಬಲರಾಮ ಬುಟ್ಟಿಯಲ್ಲಿ ಹಿಟ್ಟು ತಗೊಂಡು ಬರುತ್ತಿರಲಾಗಿ ಮಾಯದ ಗಾಳಿ ಬೀಸಿತು ನೋಡು : ತರುಮರ ತೂಗಾಡಿ, ತರಗೆಲೆ ಹರಾಡಿ, ಬುಟ್ಟಿಯಲ್ಲಿಯ ಹಿಟ್ಟು ಧೂಳಿನೊಂದಿಗೆ ಒಂದಾಗಿ ಹಾರಿಹೋಯಿತು! ಬಲರಾಮನಿಗೆ ರುದ್ರಗೋಪ ಬಂತು. ಅಷ್ಟರಲ್ಲಿ ಚಂಡೆ ಮೃದಂಗ ಡೋಲು ಚಳ್ಳಂಗಳ ದನಿ ಕೇಳಿಸಿ, ನೋಡಿದರೆ ವಾಯುದೇವರು ವಾಯುವೇಗದಲ್ಲಿ ರಭಸದಿಂದ ಬರುತ್ತಿದ್ದಾರೆ! ರಥ ಎಳೆವ ಕುದುರೆಗಳು, ರಥದಲ್ಲಿ ವಾಯುದೇವರು, ಅವನ ಸಾರಥಿ ಕಂಡರು. ಬಿರುಗಾಳಿಯ ರಭಸಕ್ಕೆ ಬಲರಾಮ ತತ್ತರಿಸಿ ಹೋದ. ‘ಎಲಾ ಎಲಾ ಒಬ್ಬರ ನಗಿಸಿ ಒಬ್ಬರ ಅಳಿಸುವ ಇಬ್ಬಂದಿಕಾರ ಗಾಳಿಯೇ ಎಷ್ಟು ನಿನ್ನ ಸೊಕ್ಕು!’ ಎಂದು ಹೇಳುತ್ತ ಇವನೂ ವಾಯುದೇವರ ರಥದ ಬೆನ್ನು ಹತ್ತಿ ಓಡತೊಡಗಿದ. ವಾಯುದೇವರ ರಥ ಬೆಟ್ಟ ಹತ್ತಿ ಹಳ್ಳ ಕೊಳ್ಳ ಇಳಿದು ನೀರು ನಿಡಿ ದಾಟಿ ಓಡಿದರೆ ಇವನೂ ಓಡಿದ. ವಾಯುದೇವರು ಹಿಂದಿನಿಂದ ಓಡಿಬರುತ್ತಿರುವ ಬಲರಾಮನನ್ನು ನೋಡಿ ಬೆಟ್ಟದ ಬಳಿ ರಥವ ನಿಲ್ಲಿಸಿ,

ವಾಯುದೇವ : ಅದ್ಯಾಕೆ ಈ ಬಾಲಕ ಹೀಗೆ ನಮ್ಮೊಂದಿಗೆ ಓಡೋಡಿ ಬರುತ್ತಿದ್ದಾನೆ? ಅಗೋ ಇಲ್ಲಿಗೆ ಬಂದ. ಅವನನ್ನು ವಿಚಾರಿಸು.

ಎಂದು ಸಾರಥಿಗೆ ಹೇಳಿದ.

ಸಾರಥಿ : ಅಯ್ಯಾ ಬಾಲಕ, ನೀನ್ಯಾಕೆ ನಮ್ಮೊಂದಿಗೆ ಸ್ಪರ್ಧೆಗೆ ಇಳಿದಂತೆ ಓಡಿ ಬರುತ್ತಿರುವೆ?

ಬಲರಾಮ : ಸ್ವಾಮಿ, ನಾನು ಬಡವ, ನನ್ನ ತಾಯಿ ಜಡ್ಡಾಗಿ ಮಲಗಿದ್ದಾಳೆ. ಒಂದಷ್ಟು ಹಿಟ್ಟು ಕಡ ತಂದು ತಾಯಿಗೆ ಗಂಜೀನಾದರೂ ಕುದಿಸಿ ಹಾಕೋಣವೆಂದರೆ ನೀವಿದ್ದೀರಲ್ಲ, ನಿಮ್ಮ ಓಟದ ರಭಸಕ್ಕೆ ನನ್ನ ಬುಟ್ಟಿ ಹಿಟ್ಟೆಲ್ಲ ಹಾರಿಹೋಯಿತು. ಈಗ ನನ್ನ ತಾಯಿಯ ಗತಿಯೇನಾಗಬೇಕು? ನೀವೇ ಹೇಳಿ. ಸಾವ್ಕಾರನ ಸಾಲ ಹೇಗೆ ತೀರಿಸಬೇಕು?

ವಾಯುದೇವರಿಗೆ ಕರುಣೆ ಬಂತು. “ಆಯ್ತು ಮಗು” ಎಂದು ಹೇಳುತ್ತ ಬಲಗೈ ಚಾಚಿದಾಗ ಅವರ ಕೈಗೆ ಒಂದು ತೆಂಗಿನ ಸಸಿ ಬಂತು.

ವಾಯುದೇವ : ಇಗೋ ಈ ಸಸಿ ಇದೆಯಲ್ಲ. ಇದನ್ನು ನಿನ್ನ ಹಿತ್ತಿಲಲ್ಲಿ ನೆಡು. ಅದು ದೊಡ್ಡದಾಗಿ ಬೆಳೆದೊಡನೆ ಅದನ್ನು ಹತ್ತಿ ಹೋಗು. ಅಲ್ಲೇ ಮರದ ದೇವತೆ ಇರುತ್ತಾಳೆ. ಅವಳಲ್ಲಿ ನಿನಗೇನು ಬೇಕೋ ಅದನ್ನ ಕೇಳಿಕೊ; ಕೊಡುತ್ತಾಳೆ.

ಎಂದು ಹೇಳಿ ಸಸಿಯನ್ನು ಅವನ ಕೈಗಿಟ್ಟು ವಾಯುದೇವರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಬಲರಾಮ ಸಸಿ ತಗೊಂಡು ಮನೆಗೆ ಬಂದ.

ತಾಯಿಗೆ ವಾಯುದೇವರು ಕೊಟ್ಟ ಸಸಿಯನ್ನು ತೋರಿಸಿ ಉತ್ಸಾಹಗೊಂಡ. ಹಿತ್ತಲಿಗೆ ಬಂದು ಸಸಿ ನೆಟ್ಟು ನೀರು ಹಾಕಿದ್ದೇ ತಡ ಅದು ಕೂಡಲೇ ಸಣ್ಣ ಗಿಡವಾಗಿ, ಆಗಲೇ ಮರವಾಗಿ ಬೆಳೆಯತೊಡಗಿತು. ಇವನು ಮರ ಹತ್ತಿದ. ಮರ ಎತ್ತರತ್ತೆರ ಬೆಳೆಯಿತು. ಕೆಳಗಡೆ ತಾಯಿ ಆಶ್ಚರ್ಯಪಡುತ್ತ ನಿಂತಳು.

ಮರದ ತುದಿಯಲ್ಲೊಂದು ಪೊಟರೆಯಲ್ಲಿ ಒಬ್ಬ ಹಸಿರು ದೇವತೆ ನಗುತ್ತ ಕೂತಿದ್ದಳು. ಅವಳ ಕೈಯಲ್ಲಿ ಬಲರಾಮನ ಹಿಟ್ಟಿದ್ದ ಬುಟ್ಟಿಯಿತ್ತು. ಬಲರಾಮ ಕೈಮುಗಿದು ಕೇಳಿದ:

ಬಲರಾಮ : ವಾಯುದೇವರ ಅಪ್ಪಣೆಯಂತೆ ನಿನ್ನ ದರ್ಶನಕ್ಕೆ ಬಂದಿದ್ದೇನೆ ತಾಯಿ.

ದೇವತೆ : ಈ ಬುಟ್ಟಿ ನಿನ್ನದಲ್ಲವೆ?

ಬಲರಾಮ : ಹೌದು ತಾಯಿ.

ದೇವತೆ : ಇದನ್ನ ಈ ಮರದ ನೆರಳಿನಲ್ಲಿಟ್ಟು ನಿನಗೇನು ಬೇಕೋ ಅದನ್ನು ಕೇಲಿಕೊ. ಆದರೆ ದಿನಾಲು ಮರದ  ಬೇರಿಗೆ ನೀರು ಹಾಕುವುದನ್ನು ಮಾತ್ರ ಮರೆಯಬೇಡ. ಹೋಗು.

ಎಂದು ಬುಟ್ಟಿ ಕೊಟ್ಟು ಮಾಯವಾದಳು. ಬಲರಾಮ ಇಳಿದು ಬಂದು ಇನ್ನೂ ಆಶ್ಚರ್ಯದಲ್ಲಿಯೇ ನಿಂತಿದ್ದ ತಾಯಿಯನ್ನು ಮರದ ನೆರಳಲ್ಲಿ ಕೂರಿಸಿ, ಬುಟ್ಟಿಯನ್ನು ಮುಂದಿಟ್ಟುಕೊಂಡು ನಮಸ್ಕರಿಸಿದ ಕೇಳಿದ:

ಬಲರಾಮ : ಮರದ ತಾಯೇ ಮಹಾ ತಾಯೀ ನನ್ನವ್ವನ ಹಸಿವೆ ಹಿಂಗಿ ಜಡ್ಡು ವಾಸಿಯಾಗುವಂಥ ಗಂಜಿ ಕೊಡು.

ಹೀಗೆ ಕೇಳಿದ್ದೇ ಆಯ್ತು ಗಂಜಿ ತುಂಬಿದ ಪಾತ್ರೆ ಬುಟ್ಟಿಯಲ್ಲಿ ಕಾಣಿಸಿಕೊಂಡಿತು. ತಾಯಿ ಮರಕ್ಕೆ ಕೈಮುಗಿದು ಗಂಜಿ ಕುಡಿದಳು. ಮಿಕ್ಕುದನ್ನು ಮಗನೂ ಕುಡಿದ. ಇಬ್ಬರೂ ತೃಪ್ತರಾದರು. ತಾಯಿಯ ಜಡ್ಡೂ ವಾಸಿಯಾಯ್ತು. ಬಲರಾಮ ಇನ್ನೊಮ್ಮೆ ಕೈ ಮುಗಿದು ಕೇಳಿದ:

“ಮರದ ಮಾಯೀ ಮಹಾತಾಯೀ ಸಾವ್ಕಾರರಿಗೆ ಕೊಡೋದಕ್ಕೆ ಹತ್ತು ಪಾವು ಹಿಟ್ಟುಕೊಡು.”

ಕೂಡಲೇ ಬುಟ್ಟಿಯಲ್ಲಿ ಹತ್ತು ಪಾವು ಹಿಟ್ಟೂ ಬಂತು. ಸಾವ್ಕಾರರಿಗೆ ಕೊಟ್ಟು ಬರ್ತೀನೆಂದು ಹೇಳಿ ಹಿಟ್ಟು ತಗೊಂಡು ಹೋದ.

ಸಾವ್ಕಾರನ ಮನೆಯಲ್ಲಿ ಆಳುದಳು ಅದು ಇದು ಕೆಲಸ ಮಾಡುತ್ತಿದ್ದರು. ಸಾವ್ಕಾರ ಉಸ್ತುವಾರಿ ಮಾಡುತ್ತಿದ್ದ. ಅಷ್ಟರಲ್ಲಿ ಬಲರಾಮ ಹತ್ತು ಪಾವು ಹಿಟ್ಟನ್ನು ಚೀಲದಲ್ಲಿ ಹಾಕಿಕೊಂಡು ಬಂದದನ್ನು ನೋಡಿ ಚಕಿತನಾದ.

ಸಾವ್ಕಾರ : ಏನಯ್ಯಾ ಇಷ್ಟು ಬೇಗ ಬಂದೆ?

ಬಲರಾಮ : ಕಡ ಒಯ್ದ ಹಿಟ್ಟನ್ನು ಹಿಂದಿರುಗಿಸಲು ಬಂದೆ ಸ್ವಾಮಿ.

ಸಾವ್ಕಾರ : ಹಿಟ್ಟು ವಾಪಸ್ಸು ಕೊಡ್ತೀಯಾ? ಏನಯ್ಯಾ ಸೂರ್ಯ ಇವತ್ತು ಪಶ್ಚಿಮದಲ್ಲಿ ಹುಟ್ಟಿದ ಹಾಗಿದೆ! ಏನಾದರೂ ನಿಧಿ ಸಿಕ್ಕಿತೇ?

ಬಲರಾಮ : ಇಲ್ಲ ಸ್ವಾಮಿ, ವಾಯುದೇವರು ವರ ಕೊಟ್ಟರು.

ಸಾವ್ಕಾರ : ವಾಯುದೇವ? ಅವನ್ಯಾರಯ್ಯಾ? ದೇವರ‍್ಯರಾದರೂ ವರ ಕೊಟ್ಟಿದ್ದರೆ ಶ್ರೀಮಂತನಾದ ನನಗೆ ಮೊದಲು ಕೊಡ್ತಿದ್ದ. ನನ್ನ ಬಿಟ್ಟು ದರಿದ್ರನಾದ ನಿನಗೆ ಹ್ಯಾಗೆ ಕೊಟ್ಟ ಅವನು?

ಬಲರಾಮ : ಗೊತ್ತಿಲ್ಲ ಸ್ವಾಮಿ. ಹತ್ತು ಪಾವು ಹಿಟ್ಟಿದೆ. ಇಟ್ಟಿದ್ದೇನೆ. ಅಮ್ಮ ಕಾಯ್ತಾಳೆ ಬರ್ತೀನಿ.

ಅಂತ ಹೇಳಿ ಬಲರಾಮ ಹೋಗಿಬಿಟ್ಟ. ಶ್ರೀಮಂತ ಅಸೂಯೆಯಿಂದ ಉರಿಯುತ್ತ ಕಾಲಿನಿಂದ ನೆಲ ಒದ್ದು ಶತಪಥ ತಿರುಗುತ್ತ ಪರಿತಪಿಸಿದ.

ಆ ದಿನ ಅನ್ನಾಹಾರ ನಿದ್ರೆ ನೀರು ಬಿಟ್ಟು ದವಡೆಯಲ್ಲಿ ಸಿಟ್ಟನ್ನಿಟ್ಟುಕೊಂಡು ಅಗಿಯುತ್ತ ಮಲಗಿದ. ಬೆಳಿಗ್ಗೆದ್ದವನೇ ಆಳುಗಳನ್ನಟ್ಟಿ ಬಲರಾಮ ಹಿಂದಿರುಗಿಸಿದ ಕಡದ ಹಿಟ್ಟಿನ ಮಾಹಿತಿ ತರಿಸಿಕೊಂಡ. ಆ ಕ್ಷಣವೆ ತನ್ನ ನರಿಬುದ್ಧಿಯನ್ನು ಜಾಗೃತಗೊಳಿಸಿಕೊಂಡು ಹೀಗೇ ಬಿಟ್ಟರೆ ಒಂದು ದಿನ ಸಾಲ ತೀರಿಸಿ ಹೊಲವನ್ನೂ ಬಿಡಿಸಿಕೊಂಡಾನೆಂದು ದೌಡಾಯಿಸಿ ಬಲರಾಮನ ಗುಡಿಸಲಿಗೆ ಹೋದ.

ಬಲರಾಮ ಮರದ ಬೇರಿಗೆ ನೀರು ಸುರಿಯುತ್ತಿದ್ದ.

ಸಾವ್ಕಾರ : ಏನು ಮಾಡುತ್ತಿದ್ದೀಯಾ ಬಲರಾಮ?

ಬಲರಾಮ : ಮರಕ್ಕೆ ನೀರು ಹುಯ್ಯುತ್ತಿದ್ದೇನೆ. ಬಾಯಾರಿಕೆಗೆ ಏನಾದರೂ ಕೊಡಲ ಸಾವ್ಕಾರ‍್ರೇ?

ಸಾವ್ಕಾರ : ಎಲಾ ಇವನ ಶ್ರೀಮಂತಿಕೆಯೆ! ಬಾಯಾರಿಕೆಗೆ ಏನು ಕೊಡಲಿ? ಅಂತಾನಲ್ಲ!

ಎಂದು ಸಾವ್ಕಾರ ಆಶ್ಚರ್ಯಪಟ್ಟುಕೊಂಡು ಹುನ್ನಾರದಿಂದ ಹೇಳಿದ:

ಸಾವ್ಕಾರ : ತೆವಲಿಗೆ ಎಲಡಿಕೆ ಕೊಡು ಮಾರಾಯ ಸಾಕು.

ಬಲರಾಮ ನೀರು ಹುಯ್ಯುವುದನ್ನು ನಿಲ್ಲಿಸಿ ಬುಟ್ಟಿಯ ಹತ್ತಿರ ಬಂದು,

ಬಲರಾಮ : ಮರದ ತಾಯೀ, ಮಹಾ ತಾಯೀ ಎಲಡಿಕೆ ಕೊಡು.

ಅನ್ನುವುದೇ ತಡ ಬುಟ್ಟಿಯಲ್ಲಿ ಒಂದು ದೊಡ್ಡ ಕಟ್ಟು ಎಲೆ, ಪುಷ್ಕಳ ಅಡಿಕೆ, ಸುಣ್ಣ ಕಾಚು ಬಂದವು! ಸಾವ್ಕಾರನಿಗೆ ಆಶ್ಚರ್ಯ ಆನಂದ ಎರಡೂ ಆದವು. ಆಶ್ಚರ್ಯ ಯಾಕೆಂದರೆ ಬುಟ್ಟಿಯಲ್ಲಿ ನಿಜವಾದ ಎಲಡಿಕೆ ಬಂದವು. ಆನಂದ ಯಾಕೆಂದರೆ ಇನ್ನು ಮುಂದೆ ತಾನು ಹೊಂಚಿದಂತೆ ಕಾರ್ಯ ಯಶಸ್ವಿಯಾಗುತ್ತದೆಂಬ, ವಿಶ್ವಾಸದಿಂದ.

ಸಾವ್ಕಾರ : ಇದೇನು ಪವಾಡ ಮಾಡಿದೆ ಮಾರಾಯಾ! ವಾಯುದೇವರು ವರ ಕೊಟ್ಟ ಅಂತಿದ್ದೆಯಲ್ಲ, ಇದೇನಾ?

ಬಲರಾಮ : ಹೌದು.

ಸಾವ್ಕಾರ : ಕೇಳಿದ್ದನ್ನೆಲ್ಲಾ ಕೊಡುತ್ತದೆಯೇ ಈ ಬುಟ್ಟಿ?

ಬಲರಾಮ : ಓಹೋ.

ಈಗ ಸಾವ್ಕಾರ ನಗೆಯನ್ನ ಅಭಿನಯಿಸುತ್ತ ಶಬ್ದಗಳಿಗೆ ಸಕ್ಕರೆ ಸವರುತ್ತ ಹೇಳಿದ :

ಸಾವ್ಕಾರ : ಅಯ್ಯಾ ಬಲರಾಮ, ಮನೆಗೆ ಹತ್ತು ಜನ ನೆಂಟರು ಬಂದಿದ್ದಾರೆ. ನನ್ನ ಹೆಂಡತಿ ರೋಗಿ, ಅಡಿಗೆ ಮಾಡಲಾಗುತ್ತಿಲ್ಲ. ನಿನ್ನ ಹತ್ತಿರ ಆ ಬುಟ್ಟಿ ಇದೆಯಲ್ಲಾ – ಅದೇ ಆ ವಾಯುದೇವರು ಕೊಟ್ಟದ್ದು, ಅದನ್ನ ಒಂದು ತಾಸಿನ ಮಟ್ಟಿಗೆ ಕೊಟ್ಟಿರು, ನೆಂಟರ ಊಟವಾದ ಮೇಲೆ ವಾಪಸ್ ಕೊಡುತ್ತೇನೆ.

ಬಲರಾಮ : ಆದರೆ ಈ ಬುಟ್ಟಿಯನ್ನ ಇನ್ನೊಬ್ಬರಿಗೆ ಕೊಡಲಾಗದು ಸಾವ್ಕಾರರೇ.

ಸಾವ್ಕಾರ : ಅಯ್ಯಾ ಒಬ್ಬರಿಗೊಬ್ಬರು ಸಹಾಯ ಮಾಡದೆ ಬದಕಲಿಕ್ಕಾಗುತ್ತದ? ನಿನಗೆ ನಾನು ಎಷ್ಟೊಂದು ಸಹಾಯ ಮಾಡಿಲ್ಲವೆ? ಈಗ ನೀನು ಸಹಾಯ ಮಾಡಬೇಕಪ್ಪ. ಬೇಕಾದರೆ ಅರ್ಧ ತಾಸಿನಲ್ಲಿ ವಾಪಸ್ ಕೊಡ್ತೀನಿ, ಕೊಡು.

ಸಾವ್ಕಾರನ ವಾದ ಸರಿಯೆನಿಸಿ ಬಲರಾಮ ಬುಟ್ಟಿ ಕೊಟ್ಟ. ನೆಂಟರು ಕಾದಿರುತ್ತಾರೆಂದು ಸಾವ್ಕಾರ ಅವಸರದಲ್ಲಿ ಹೋದ.

ಅಷ್ಟೇ ಅವಸರದಲ್ಲಿ ಸಾವ್ಕಾರನ ಆಳು ಅದೇ ಬುಟ್ಟಿ ತಗೊಂಡು ವಾಪಸ್ ಬಂದ.

ಆಳು : ಅಣ್ಣಾ ಬಲರಾಮ, ನಿನ್ನ ಬುಟ್ಟಿ ಸಾವ್ಕಾರರಲ್ಲಿ ಕೆಲಸ ಮಾಡಲಿಲ್ಲವಂತೆ. ಅದಕ್ಕೆ ಸಾವ್ಕಾರ‍್ರು ಹಿಂದಿರುಗಿ ಕಳಿಸಿದರಪ್ಪ.

ಬಲರಾಮ : ಕೊಡು ಮಾರಾಯಾ. ಆಗಲೇ ನನ್ನಮ್ಮನಿಗೆ ಗಂಜಿ ಕೊಡುವ ಸಮಯವಾಯಿತು.

ಬುಟ್ಟಿ ಕೊಟ್ಟು ಸೇವಕ ಅವಸರದಲ್ಲಿ ಮರೆಯಾದ. ಬಲರಾಮ ಬುಟ್ಟಿಯನ್ನ ಮರದ ನೆರಳಲ್ಲಿಟ್ಟು

ಮರದ ತಾಯೀ ಮಹಾಮಾಯಿ ಅವ್ವನಿಗೂ ನನಗೂ ಗಂಜಿ ಕೊಡು ಅಂದ.

ಬುಟ್ಟಿಯಲ್ಲೇನೂ ಮೂಡಲಿಲ್ಲ. ಗಾಬರಿಯಾದ! ಬುಟ್ಟಿಯನ್ನೆತ್ತಿ ಪರೀಕ್ಷಿಸುತ್ತಿದ್ದಾಗ ತಾಯಿ ಬಂದಳು. ಅವಳು ಕೇಳಿದರೂ ಬುಟ್ಟಿ ಏನನ್ನೂ ಕೊಡಲಿಲ್ಲ. ತಾಯಿ ಬುಟ್ಟಿಯನ್ನು ಪರೀಕ್ಷಿಸಿ ನೋಡಿದಾಗ ಗೊತ್ತಾಯಿತು.

“ಸಾವ್ಕಾರನನ್ನ ನಂಬಿ ಬುಟ್ಟಿ ಕೊಟ್ಟದ್ದು ತಪ್ಪು ಕಣಪ್ಪ. ಇದು ನಮ್ಮ ಬುಟ್ಟಿ ಅಲ್ಲ. ಸಾವ್ಕಾರ‍್ರು ಬೇರೆ ಬುಟ್ಟಿ ಕೊಟ್ಟಿದ್ದಾರೆ. ಹೋಗಿ ಅವರ ಬುಟ್ಟಿ ಕೊಟ್ಟು ನಮ್ಮ ಬುಟ್ಟಿ ಇಸಿದುಕೊಂಡು ಬಾ.”

ತಾಯಿಯ ಮಾತಿನಂತೆ ಬಲರಾಮ ಸಾವ್ಕಾರನ ಮನೆಗೇನೋ ಬಂದ. “ಕೊಟ್ಟವ ಕೋಡಂಗಿ ಈಸಿಕೊಂಡವ ಈರಭದ್ರ” ಅಂತ ಹಿರಿಯರು ಗಾದೆ ಮಾಡಿದ್ದು ಸುಳ್ಳಾದೀತೆ? ನಾವಂದುಕೊಂಡಂತೆ ಸಾವ್ಕಾರ ಬುಟ್ಟಿ ಕೊಡಲಿಲ್ಲ. ಮಾತ್ರವಲ್ಲ ಆಳುಗಳೊಂದಿಗೆ ನಗಾಡುತ್ತ ಬಲರಾಮನನ್ನ ತಳ್ಳಿಬಿಟ್ಟ.

ಬಲರಾಮ ನಿರಾಸೆಯಿಂದ ಹಿಂದಿರುಗಿ ಬಂದು ಮರದ ಬುಡದಲ್ಲಿ ಚಿಂತಿಸುತ್ತ ಕೂತ. ಕೊನೆಗೆ ಏನೂ ಹೊಳೆಯದೆ “ಮರದ ತಾಯೀ ಮಹಾಮಾಯೀ ನೀನೇ ಗತಿ” ಎಂದು ಕೈಮುಗಿದ. ಮನುಷ್ಯ ಬಿಟ್ಟರೂ ಮರ ಕೈಬಿಟ್ಟೀತೇ? ಬಲರಾಮನ ಮುಂದೊಂದು ಹಲಗೆ ಕಂಡಿತು. ಮರದ ದೇವತೆಯ ‘ಮಗನೇ’ ಎಂಬ ದನಿ ಕೇಳಿಸಿ ನೋಡಿದ. ಮರದ ದೇವತೆ ಪ್ರತ್ಯಕ್ಷಳಾಗಿ ಹೇಳಿದಳು.

ದೇವತೆ  : ಮಗನೇ ಈ ಹಲಗೆ ತಗೊಂಡು ಟಾಂ ಟಾಂ ಬಾರಿಸುತ್ತ ನಿನಗೆ ಅನ್ಯಾಯವಾದದ್ದನ್ನ ಹೇಳಿ ನ್ಯಾಯ ಬೇಕಂತ ಜನರಲ್ಲಿ ಹೇಳಿಕೊ, ಯಾರೋ ಪುಣ್ಯಾತ್ಮರು ಮುಂದೆ ಬಂದು ನ್ಯಾಯ ಸಿಗುವಂತೆ ಮಾಡಬಹುದು.

ಈಗ ಅದು ಬಿಟ್ಟು ಬೇರೆ ದಾರಿ ಇರಲಿಲ್ಲವಲ್ಲ. ಬುಟ್ಟಿ ತಗೊಂಡು ಸಾವ್ಕಾರನ ಮನೆ ಕಡೆಗೆ ಹೊರಟ.

ಜನ ಕಂಡ ಕೂಡಲೇ “ನನಗೆ ಸಾವ್ಕಾರ‍್ರು ಅನ್ಯಾಯ ಮಾಡಿದ್ದಾರೆ. ನನ್ನ ಬುಟ್ಟಿಯನ್ನ ತಗೊಂಡು ಹೋಗಿ ಅದನ್ನಿಟ್ಟುಕೊಂಡು ಬೇರೆ ಬುಟ್ಟಿ ಕೊಟ್ಟಿದ್ದಾರೆ. ನನಗೆ ನನ್ನ ಬುಟ್ಟಿ ಸಿಗೋತನಕ ಬಿಡೋದಿಲ್ಲ” ಎಂದು ಸಾರಿ ಸಾರಿ ಹೇಳಿ ಹಲಗೆ ಬಾರಿಸತೊಡಗಿದ. ಆಶ್ಚರ್ಯ! ಹಲಗೆ ದನಿ ಕೇಳಿಸಿದವರೆಲ್ಲ ಕುಣಿಯತೊಡಗಿದರು! ಅಡಿಗೆಮನೆಯಲ್ಲಿದ್ದ ಹೆಂಗಸರು ಅಡಿಗೆ ಮಾಡುತ್ತಲೇ, ಪಕ್ಕದ ಹೊಲ ಗದ್ದೆಗಳಲ್ಲಿ ಗೇಯುವವರು ಗೇಯುತ್ತಲೇ, ನೋಡುವವರು ನೋಡುತ್ತಲೇ ಆಡುವ ಮಕ್ಕಳು ಆಡುತ್ತಲೇ, ಕೋಲೂರುವ ಮುದುಕರು ಕೋಲೂರಿಕೊಂಡೇ ಕುಣಿಯಲಾರಂಭಿಸಿದರು! ಇದರಿಂದ ಹುರುಪಾದ ಬಲರಾಮ ಇನ್ನಷ್ಟು ಜೋರಿನಿಂದ ಬಾರಿಸುತ್ತ ಸಾವ್ಕಾರನ ಮನೆಯ ಕಡೆಗೆ ನಡೆದ. ಕುಣಿಯುವ ಜನ ಇನ್ನಷ್ಟು ರಭಸದಿಂದ ಕುಣಿಯುತ್ತ ಅವನ ಬೆನ್ನು ಹತ್ತಿದರು. ಮೆರವಣಿಗೆ ಸಾವ್ಕಾರನ ಮನೆಗೇ ಬಂತು.

ಬಲರಾಮ ಹಲಗೆ ಬಾರಿಸುವುದನ್ನು ನಿಲ್ಲಿಸಿ ಕೇಳಿದ:

ಬಲರಾಮ : ನನ್ನ ಬುಟ್ಟಿ ನನಗೆ ಕೊಡ್ರಿ ಸಾವ್ಕಾರ‍್ರೆ.

ಜನರೂ : ಹೌದು ಹೌದು ಕೊಡ್ರಿ ಸಾವ್ಕಾರ‍್ರೆ.

ಆದರೆ ಸಾವ್ಕಾರನಿಗೆ ಹಲಗೆಯ ಮಹಿಮೆ ತಿಳಿದಿರಲಿಲ್ಲ. ಕೊಬ್ಬಿನಿಂದ,

ಸಾವ್ಕಾರ : ಯಾವ ಬುಟ್ಟೀನಯ್ಯಾ? ನಿನ್ನ ಬುಟ್ಟಿಯನ್ನ ನಿನಗೆ ಆಗಲೇ ಕೊಟ್ಟಾಗಿದೆ. ಅಗೋ ಆ ಸೇವಕನೇ ಕೊಟ್ಟು ಬಂದ. ಅಲ್ಲವೇನಯ್ಯಾ?

ಸೇವಕ : ಹೌದು ನನ್ನೊಡೆಯಾ.

ಬಲರಾಮ : ನನ್ನ ಬುಟ್ಟಿ ಇಟ್ಕೊಂಡು ಬೇರೆ ಬುಟ್ಟಿ ಕೊಟ್ಟಿರೋದು. ಸುಳ್ಳು ಹೇಳಬೇಡಿ. ನನ್ನ ಬುಟ್ಟಿ ನನಗೆ ಕೊಟ್ಟರೆ ಸರಿ; ಇಲ್ಲದಿದ್ದರೆ….

ಈಗ ಸಾವ್ಕಾರನ ಕೊಬ್ಬು ನೆತ್ತಿಗೇರಿತು –

ಸಾವ್ಕಾರ : ಕೊಡದಿದ್ದರೇನು ಮಾಡುತ್ತೀಯೋ ಬೇಕೂಫಾ? ಬೆದರಿಕೆ ಹಾಕುತ್ತೀಯೊ? ಹೋಗು ಕೊಡೋದಿಲ್ಲ.

ಬಲರಾಮ : ಹೀಗೋ? ಹಾಗಿದ್ದರೆ ಕುಣೀರಿ

ಎಂದು ಹಲಗೆ ಬಾರಿಸತೊಡಗಿದ. ಎಲ್ಲರೂ ಕುಣಿಯತೊಡಗಿದರು. ಸಾವ್ಕಾರನ ಕೊಬ್ಬು ಹೆಚ್ಚಿದ್ದರಿಂದ ಅವನು ಎಲ್ಲರಿಗಿಂತ ಹೆಚ್ಚು ಹಾರಾಡಿ ಕುಣಿಯತೊಡಗಿದ. ದಣಿದವರು ಕುಣಿಯುತ್ತಲೇ “ಬಲರಾಮನ ಬುಟ್ಟಿಕೊಡಿ ಸ್ವಾಮೀ” ಎಂದು ಗೋಗರೆದರು. ಬಲರಾಮನ ರಭಸ ಹೆಚ್ಚಿದಂತೆ ಇವರು “ಯೋ ಸಾವ್ಕಾರ ಬಲರಾಮನ ಬುಟ್ಟಿ ಕೊಡಯ್ಯಾ” ಎಂದು ಕುಣಿದರು. ಇನ್ನೂ ರಭಸ ಹೆಚ್ಚಿ, ಬಲರಾಮನ ಬುಟ್ಟಿ ಕೊಡ್ತೀಯೊ? ಇಲ್ಲಾ ನಿನ್ನ ಮನೆಗೆ ಬೆಂಕಿ ಇಡೋಣವ?” ಎನ್ನುತ್ತ ಕುಣಿದರು, ಸಾವ್ಕಾರನ ರೋಗಿ ಹೆಂಡತಿ “ಅಯ್ಯೋ ಬೇಗ ಬುಟ್ಟಿ ಕೊಡಬಾರದೆ?” ಎಂದು ಕುಣಿದಳು. ಸುಸ್ತಾಗಿ ಬಿದ್ದೂ ಎದ್ದು ಕುಣಿದಳು. ಅದೂ ಸಾಕಾಗಿ ಸಾವ್ಕಾರನ ಕಾಲ ಮೇಲೆ ಬಿದ್ದಳು. ಆಗಲೇ ಸಾವ್ಕಾರನಿಗೂ ಕುಣಿದು ಕುಣಿದು ಸಾಕಾಗಿತ್ತು. ಜನ ಕುಣಿಯುತ್ತಲೇ ಸಾವ್ಕಾರನ ಮೇಲೆ ಏರಿಹೋದರು. ಸಾವ್ಕಾರ ಕುಣಿಯುತ್ತಲೇ ಹೆದರಿ ಓಡಿಹೋಗಿ ಬುಟ್ಟಿ ತಂದು ಕೊಟ್ಟ. ಬಲರಾಮ ನ್ಯಾಯ ಕೊಡಿಸಿದ್ದಕ್ಕೆ ಹಲಗೆ ಬಾರಿಸುವುದನ್ನು ನಿಲ್ಲಿಸಿ ಎಲ್ಲರಿಗೂ ಕೃತಜ್ಞತೆ ಹೇಳಿ ನಮಸ್ಕಾರ ಮಾಡಿ ಮನೆಗೆ ಹೋದ.

ಈ ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ. ಇಷ್ಟಂತೂ ನಿಜ: ಇದು ನಿಜವಾಗಿ ನಡೆದದ್ದೆಂದು ನಂಬುವವರು ಈಗಲೂ ಇದ್ದಾರೆ: ಅವರ ಪ್ರಕಾರ ಇದು ಸತ್ಯದಷ್ಟೇ ಸತ್ಯವಾದ ಕಥೆಯಂತೆ.

* * *