ಇದು ಉತ್ತರ ಕರ್ನಾಟಕದ ನಮ್ಮ ಊರಿನಲ್ಲಿ ಅಂದರೆ ಶಿವಾಪುರದಲ್ಲಿ ನಿಜವಾಗಿ ನಡೆದ ಕಥೆ. ಕಥೆಯ ನಾಯಕಿ ಗುಳ್ಳವ್ವ ಮತ್ತು ನಾಯಕ ಮಳೆರಾಯನಿಗೆ ಸಂಬಂಧಪಟ್ಟ ಆರಾಧನೆಗಳು ಇಂದಿಗೂ ನಮ್ಮ ಊರಿನಲ್ಲಿವೆ. ಪ್ರತಿವರ್ಷ ಶ್ರಾವಣ ಮಾಸದ ಪ್ರತಿ ಮಂಗಳವಾರ ಮದುವೆಯಾಗದ ಬಾಲಕಿಯರು ಊರ ಹೊರಗಿನಿಂದ ಹಸಿ ಮಣ್ಣಲ್ಲಿ ಮಾಡಿದ ಗುಳ್ಳವ್ವವನ್ನು ಹಾಡುತ್ತ ಮನೆಗೆ ತರುವುದು, ಪುಂಡ ಹುಡುಗರು ಅದನ್ನು ತಡೆಯುವುದು, ಮಳೆ ಆಗದಿದ್ದರೆ ಗುರ್ಚಿ ತಿರುಗುವುದು ಇತ್ಯಾದಿ ಈಗಲೂ ನಮ್ಮಲ್ಲಿ ಆಚರಣೆಯಲ್ಲಿವೆ. ಕಥೆಯನ್ನು ಮೊದಲು ಕೇಳಿರಿ :

ಒಂದಾನೊಂದು ಕಾಲದಲ್ಲಿ ದಟ್ಟವಾದ ಕಾಡು, ಕಾಡಿಗಂಟಿ ನಾಡು ಬೆಳೆದು ಎರಡೂ ತಾಯಿ ಮಕ್ಕಳಂತಿದ್ದವು. ತಾಯಿ ಚಿಗುರು ಹೂಗಳ ತೊಟ್ಟಿಲಲ್ಲಿ ತನ್ನ ಕಂದನನ್ನು ಇಟ್ಟು ಚಿಕ್ಕೆ ತಾರೆಯ ಗಿಲಕಿ ಹಿಡಿದು, ಹಕ್ಕಿಗೊರಳಿನಲ್ಲಿ ಜೋಗುಳ ಹಾಡಿ ಕೂಸನ್ನು ಕಾಪಾಡುತ್ತಿದ್ದಳು. ಆದರೆ ತುಂಟ ಕೂಸು ತಂಟೆ ಮಾಡಿ ದುರಾಸೆಯಿಂದ ಕಡ್ಡೀ ಗೀರಿ, ತಾಯಾಕರುಳಿಗೆ ಬೆಂಕಿ ಸುರಿದು ಆತ್ಮಹತ್ಯಗೆ ನಲಿಯುತ್ತಿತ್ತು. ಅಂಥ ಸಮಯದಲ್ಲಿ ಮಳೆ ಬೀಳದ ಬರಗಾಲ ಬಂದು ತರುಮರ ಹಕ್ಕಿಪಕ್ಕಿ ಖಗಮೃಗಾದಿ ಜೀವರಾಶಿ ಸಂಕಟವನ್ನು ಅನುಭವಿಸುತ್ತಿತ್ತು. ಇದೆಲ್ಲ ಯಾಕಾಯಿತೆಂದು, ಹ್ಯಾಗಾಯಿತೆಂದು ಹೇಳುವ ಕಥೆಯಿದು.

ಕಾಡಿತ್ತಲ್ಲ, ಕಾಡಿನಲ್ಲಿ ಒಂದು ಬೆಟ್ಟವಿತ್ತು. ಸದರಿ ಬೆಟ್ಟದಲ್ಲಿ ಇರುವೆ ಮೊದಲು ಮಾನವ ಕಡೆಯಾಗಿ ಸರ್ವ ಜೀವರಾಶಿಯಿತ್ತು. ಬೆಟ್ಟದ ಬಳಿಯಿಂದ ಆಳ ಮತ್ತು ಅಗಲ ಹಾಗೂ ಸದಾ ತುಂಬಿರುವ ಘಟಪ್ರಭಾ ನದಿ ಹರಿಯುತ್ತಿತ್ತು. ಅದರ ಮಡದಲ್ಲಿ ತರುಮರಾದಿಗಳ ತೋಪು ಇತ್ತು. ಶಿವಾಪುರದಲ್ಲಿ ಗುಡಿಸಲುಗಳಿದ್ದವು. ಗುಡಿಸಲಲ್ಲಿ ತಾಯಿ – ಮಗಳು ಇದ್ದರು. ಮಗಳ ಹೆಸರು ಗುಳ್ಳವ್ವ.

ಗುಳ್ಳವ್ವ ಬಹಳ ಚೆಲುವೆ. ತಾವರೆಯಂಥ ಮುಖ, ಸಂಪಗೆಯೆಸಳು ಮೂಗು, ನೀಲಿ ಕಮಲದಂಥ ಕಣ್ಣು, ಬಳ್ಳಿಯಂಥ ದೇಹ…. ಗುಳ್ಳವ್ವ ಹಕ್ಕಿಗಳೊಂದಿಗೆ ಚಂದಾಗಿ ಹಾಡುತ್ತಿದ್ದಲು. ಬಳ್ಳಿಗಳ ಮ್ಯಾಲೆ ಕಸೂತಿ ಬರೆಯುತ್ತಿದ್ದಳು. ಚಿಟ್ಟೆಗಳ ರೆಕ್ಕೆಗಳಿಗೆ ಥರಾವರಿ ಬಣ್ಣ ಹಚ್ಚುತ್ತಿದ್ದಳು. ಆಕೆ ನಡೆದರೆ ಮುಂಜಾನೆಯ ಬಣ್ಣದ ಮೋಡ ತೇಲಿದಂತೆ ಕಾಣುತ್ತಿದ್ದಳು. ಆಕೆಯ ಚೆಲುವಿಕೆಯ ಬಗ್ಗೆ ಶಿವಪುರದ ಜನಕ್ಕೆ ಬಹಳ ಹೆಮ್ಮೆ. ಅವಳನ್ನು ಅವರು ಕಾಡಿನ ದೇವತೆಯೆಂದೇ ಕರೆಯುತ್ತಿದ್ದರು.

ಗುಳ್ಳವ್ವನಿಗೆ ಎಲ್ಲ ನಾರು ಬೇರು ತರುಮರಾದಿಗಳ ಹೆಸರು ಗೊತ್ತಿದ್ದವು. ಸಸ್ಯಗಳು ಸಕಾಲದಲ್ಲಿ ಚಿಗುರಿ ಹೂ ಬಿಡುವುದಕ್ಕೆ, ಹೂ ಬಿಟ್ಟರೆ ಹಣ್ಣಾಗುವುದಕ್ಕೆ ಸಹಾಯ ಮಾಡುವಳೆಂದು, ಆ ಮೂಲಕ ಕಾಡಿನಲ್ಲಿ ಕೈಲಾಸ ತೂಗುವಳೆಂದು ಜನ ಹೇಳುತ್ತಿದ್ದರು. ರೋಗಗಳ ನಾರು ಬೇರಿಗಾಗಿ ಯಾರೇ ಬರಲಿ ಅಂಥವರಿಗೆ ಗುಳ್ಳವ್ವ ಸಹಾಯ ಮಾಡುತ್ತಿದ್ದಳು. ಹಾಗೆಯೇ ಸಸ್ಯಗಳನ್ನು ಯಾರಾದರೂ ದುರುಪಯೋಗ ಮಾಡಿಕೊಂಡರೆ ದಂಡಿಸುತ್ತಿದ್ದಳು ಕೂಡ.

ಒಂದು ದಿನ ಗುಳ್ಳವ್ವ ಸಖಿಯರೊಂದಿಗೆ ಮದುವೆ ಆಟ ಆಡುತ್ತಿದ್ದಳು. ಹುಡುಗಿಯರಲ್ಲಿ ಒಬ್ಬಳು ವರನೆಂದು, ಗುಳ್ಳವ್ವ ವಧುವೆಂದು ಅವರವರೇ ನಿರ್ಧರಿಸಿಕೊಂಡಳು. ಮದುವೆಯ ಆಟ ರಂಗೇರಿ ಇನ್ನೇನು ಅಕ್ಷತೆ ಬೀಳುವಷ್ಟರಲ್ಲಿ ಜೋರಾಗಿ ಮಳೆ ಬಂತು! ಹುಡುಗಿಯರಿಗೆ ಬಹಳ ನಿರಾಸೆಯಾಯಿತು. ಆಟ ಕೆಟ್ಟು ಹೋಯಿತಲ್ಲಾ ಎಂದು ಬಹಳ ಹಳಹಳಿಸಿದರು. ಅಷ್ಟರಲ್ಲಿ ಒಬ್ಬ ಹುಡುಗಿ ಮುಂದೆ ಬಂದು –

“ಮಳೆರಾಯ ಮಳೆರಾಯ
ಈಗ ಬರೋ ಮಳೆರಾಯ ನಾಳೆ ಬಂದರೆ
ಬಿಸಿ ರೊಟ್ಟಿ ಮ್ಯಾಲೆ ತುಪ್ಪ ಬೆಲ್ಲ ಇಟ್ಟುಕೊಡ್ತೀನಿ
ಸುರೀಬೇಡ ಮಳೆರಾಯ ಸುರೀಬೇಡ”

– ಎಂದಳು. ಮಳೆ ನಿಲ್ಲಲಿಲ್ಲ. ಮತ್ತೊಬ್ಬಳು ಮುಂದೆ ಬಂದು,

“ಮಳೆರಾಯ ಮಳೆರಾಯ
ಈಗ ಬರೋ ಮಳೆರಾಯ ನಾಳೆ ಸಂಜೆ ಬಂದರೆ
ನನ್ನ ಪಾಲಿನ ಲಾಡು ಕಡುಬು ಕೊಡ್ತೀನಿ
ಸುರೀಬೇಡ ಮಳೆರಾಯ ಸುರೀಬೇಡ”

– ಎಂದಳು. ಯಾರು ಏನು ಹೇಳಿದರೂ ಮಳೆ ನಿಲ್ಲಲಿಲ್ಲ. ಕೊನೆಗೆ ಗುಳ್ಳವ್ವ ಮುಂದೆ ಬಂದು –

“ಮಳೆರಾಯ ಮಳೆರಾಯ
ಈಗ ಬರೋ ಮಳೆರಾಯ ಮಧ್ಯರಾತ್ರಿ ಬಂದರೆ
ಮಾವಾ ಅಂದು ಮದುವೆ ಆಗ್ತೀನಿ
ಸುರೀಬೇ ಮಳೆರಾಯ ಸುರೀಬೇಡ”

ಎಂದಳು. ಗಪ್ಪನೆ ಮಳೆ ನಿಂತುಬಿಟ್ಟಿತು!

ಹುಡುಗಿಯರು ಹಿಂದೆ ಮುಂದೆ ನೋಡದೆ ಆಟ ಮುಂದುವರಿಸಿದರು. ಆದರೆ ಕಪ್ಪೆರಾಯ ಅಡ್ಡಬಂದ. ಗುಳ್ಳವ್ವ ಮಳೆರಾಯನನ್ನು ಮದುವೆಯಾಗುವುದಾಗಿ ಆಗಲೇ ಮಾತು ಕೊಟ್ಟಾಗಿದೆ. ಈಗ ಅವಳು ಯಾರೋ ಬೇರೆ ವರನ ಜೊತೆ ಮದುವೆಯಾಗುವುದಕ್ಕೆ ನಾನು ಬಿಡುವುದಿಲ್ಲ ಎಂದ. ಇದು ಆಟದ ಮದುವೆಯೆಂದರೂ ಕೇಳಲಿಲ್ಲ. “ಆಟ ಆದರೇನು? ಅದನ್ನೂ ಚೆನ್ನಾಗಿ ಆಡಬಹುದಲ್ಲ?” ಎಂದು ಗಲಾಟೆ ಮಾಡಿದ. ಉಪಾಯವಿಲ್ಲದೆ ಮಳೆರಾಯನ ಸಂಕೇತವಾಗಿ ಚೊಂಬಿನಲ್ಲಿ ನೀರು ಹಾಕಿ ಗುಳ್ಳವ್ವ ಅದರೊಂದಿಗೆ ಮದುವೆಯಾಗುವುದೆಂದು ತೀರ್ಮಾನವಾಯಿತು. ಆಟ ಮುಂದುವರೆಯಿತು.

ಮಟ್ಟಸ ಮಂಗಳವಾರ ಸಪ್ಪಟ ಸರಿರಾತ್ರಿಯಲ್ಲಿ ಗುಳ್ಳವ್ವ ತಾಯಿಯೊಂದಿಗೆ ಗುಡಿಸಲಲ್ಲಿ ಮಲಗಿರಬೇಕಾದರೆ ಯಾರೊ ಬಾಗಿಲು ತಟ್ಟಿದಂತಾಯಿತು. ಯಾರೆಂದು ಬಾಗಿಲು ತೆರೆದು ನೋಡಿದರೆ ಎದುರಿಗೆ ಕರಿಮೋಡದಂಥ ಬಣ್ಣದ, ಆಜಾನುಬಾಹು ಆಸಾಮಿ! ತಲೆಯ ಮೇಲೆ ಮುತ್ತಿನಪಾಗು ಸುತ್ತಿಕೊಂಡು, ಹೆಗಲ ಮೇಲೆ ಕರಿ ಕಂಬಳಿ ಹಾಕಿಕೊಂಡು, ಕೈಯಲ್ಲಿ ಮಿಂಚಿನ ಬೆತ್ತ ಹಿಡಿದುಕೊಂಡು, ಬೆಳ್ಳಿ ಉಡುದಾರ, ತೂಗುವ ಗೊಂಡೆಗಳ ಲಂಗೋಟಿ ಉಟ್ಟುಕೊಂಡು ಬೆಳ್ದಿಂಗಳ ನಗುತ್ತ ನಿಂತಿದ್ದಾನೆ!

ಗುಳ್ಳವ್ವ : ಯಾರು ನೀನು?

ಮಳೆರಾಯ : ನರಲೋಕ ಸುರಲೋಕಗಳನ್ನ ಜಬರ್‌ದಸ್ತ್ ಆಳುವ ಮಳೆರಾಯ.

ಗುಳ್ಳವ್ವ : ಇಲ್ಲಿಗ್ಯಾಕೆ ಬಂದೆ?

ಮಳೆರಾಯ : ಮಾವನಾಗಿ ನಿನ್ನ ಕೈ ಹಿಡಿಯೋದಕ್ಕೆ.

ಗುಳ್ಳವ್ವ : ನನಗ್ಯಾರು ಮಾವ ಭಾವ ಇಲ್ಲವಲ್ಲ?

ಮಳೆರಾಯ : ಮರೆತೆಯೇನೇ ಹುಡುಗಿ? ಈಗ ಬರೋ ಮಳೆರಾಯ ಮಧ್ಯರಾತ್ರಿ ಬಂದರೆ ಮಾವಾ ಅಂದು ಮದುವೆ ಆಗ್ತೀನಿ ಅಂತ ಅನ್ನಲಿಲ್ಲವೆ ನೀನು?

ಎಂದು ಡೊಳ್ಳು ಬಾರಿಸಿದಂತೆ ನಗುತ್ತ ಹೇಳಿದ.

ಇವನ ಆರ್ಭಟಕ್ಕೆ ಗುಳ್ಳವ್ವನ ತಾಯಿಗೂ ಎಚ್ಚರವಾಗಿ ಎದ್ದು ಬಂದಳು. ಮಳೆರಾಯ ನಡೆದ ಕತೆಯನ್ನೆಲ್ಲ ಹೇಳಿದ. ಗುಳ್ಳವ್ವ ಮಾತಿಗೆ ತಪ್ಪುತ್ತಿದ್ದಾಳೆಂದು ದೂರಿದ, ನೀರು ತುಂಬಿದ ಚೊಂಬಿನ ಜೊತೆ ಅವಳ ಮದುವೆ ಆದದ್ದನ್ನು ಹೇಳಿದ. ಕಪ್ಪೆರಾಯನಿಂದ ಸಾಕ್ಷಿ ಹೇಳಿಸಿದ. ಗುಳ್ಳವ್ವ ಹೇಳಿದಳು:

ಗುಳ್ಳವ್ವ : ಅದೆಲ್ಲ ಆಟದಲ್ಲಿ! ಅದನ್ನೇ ನಿಜವೆಂದು ನಂಬಬಹುದ?

ತಾಯಿ : ಆಟದಲ್ಲೇ ಆಡಲಿ, ನಿಜದಲ್ಲೇ ಆಡಲಿ, ಮಾತು ಮಾತೇ ಮಗಳೇ. ಮಳೆರಾಯ ಆಕಾಶದ ದೇವರು. ನೀನು ನಮ್ಮ ವನದೇವತೆ. ಮಳೆರಾಯ ನಿನಗೆ ಅನುರೂಪನಾದ ವರ. ಮಳೆಯಿಲ್ಲದೆ ನೀನಿಲ್ಲ. ನೀನಿಲ್ಲದೆ ಮಳೆರಾಯನಿಲ್ಲ. ನಿಮ್ಮಿಬ್ಬರ ಕಲ್ಯಾಣದಲ್ಲಿ ಲೋಕದ ಕಲ್ಯಾಣವಿದೆ. ಒಪ್ಪಿಕೋ, ಮಗಳೇ.

ತಾಯಿ ಮಾತು ಕೇಳಿ ಚಿಕ್ಕಪ್ರಾಯದ, ಕಣ್ಣು ಮೂಗಿಲೆ ಸುಂದರನಾದ, ಮುಗಿಲು ಗುಡುಗಿದ ಹಾಗೆ ಮಾತಾಡುವ, ಚೆಲುವ ಮಳೆರಾಯನ ಬಗ್ಗೆ ಮೆಚ್ಚುಗೆಯಾಯಿತು ಗುಳ್ಳವ್ವನಿಗೆ. ಮಲ್ಲಿಗೆಯ ಮೊಗ್ಗರಳಿದ ಹಾಗೆ ಮುಗುಳುನಕ್ಕು ಸಮ್ಮತಿ ಸೂಚಿಸಿದಳು. “ಕಾಲ ಕಾಲಕ್ಕೆ ಮಳೆ ಸುರಿಸುವ ತೆರವು ಕೊಡಬೇಕೆಂದು” ಊರವರು ಮಳೆರಾಯನಿಗೆ ಕರಾರು ಹಾಕಿದರು. ಅಂತೆಯೇ ಆಗಲೆಂದು ಮಳೆರಾಯ ಬಲಗೈ ಭಾಷೆ ಎಡಗೈ ನಂಬಿಕೆ ಕೊಟ್ಟಾದ ಮೇಲೆ ಮದುವೆ ನಿಶ್ಚಯಕಾರ್ಯ ನೆರವೇರಿತು. ಊರವರ ಸಂಭ್ರಮ ಅಂಬಾರಕಡರಿತು.

ಮದುವೆಯ ಮಂಗಳಕಾರ್ಯಕ್ಕೆ ಶಿವಪುರದ ಸುತ್ತ ಜನರಲ್ಲದೆ ಖಗಮಿಗಾದಿ ಜೀವರಾಶಿ, ದೇವದಾನವರೆಲ್ಲ ಬಂದಿದ್ದರು. ವರನಂತೂ ಆಕಾಶದ ಪಡ್ಡೆ ದೇವರನ್ನೆಲ್ಲ ಊಟಕ್ಕೆ ಕರೆದಿದ್ದ. ಮದುವೆಯೂಟ ಎಷ್ಟು ಭರ್ಜರಿಯಾಗಿತ್ತೆಂದರೆ ಪ್ರಪಂಚದಲ್ಲಿ ಯಾವ ರಾಜಕುಮರನ ಮದುವೆಯೂಟವೂ ಹೀಗಿರಲಿಲ್ಲವಂತೆ, ಊಟ ಉಂಡರೋ ಆನಂದಗಳನುಂಡರೋ! ಊಟದ ರುಚಿ ಹತ್ತಿ ಕೆಲವು ದೇವತೆಗಳು ತಿರುಗಿ ಆಕಾಶಕ್ಕೆ ಹೋಗದೆ ಭೂಮಿಯೆ ಮ್ಯಾಲೇ ಗುಡಿ ಕಟ್ಟಿಕೊಂಡು ನೆಲೆಸಿದರಂತೆ!

ಇಬ್ಬರ ಮದುವೆಯ ನಂತರ ಎಲ್ಲವೂ ಸುಖಕರವಾಗಿತ್ತು. ಕಾಲಕಾಲಕ್ಕೆ ಮಳೆಯಾಗಿ, ಭೂಮಿಯ ಮ್ಯಾಲೆ ಬೆಳೆಯಾಗಿ ತೂಗುತೊಟ್ಟಿಲು ಬೆಳ್ಳಿ ಬಟ್ಟಲಾಗಿ ಜನ ಸುಖವಿದ್ದರು. ಆದರೆ ಈ ಸುಖ ಕೊನೆಬಾಳಲಿಲ್ಲ. ನಾಡಿನಲ್ಲಿ ಭೂಪತಿಯೆಂಬವನೊಬ್ಬನಿದ್ದ. ಹಿಂದೆ ಸಾವಿರ ಪುಂಡರು ಮುಂದೆ ಸಾವಿರ ಪೋಕರಿಗಳನ್ನಿಟ್ಟುಕೊಂಡು ಬಲವೇ ನ್ಯಾಯವೆಂದು ಎಲ್ಲರನ್ನು ಹೆದರಿಸಿ ರಾಜನಾಗಿದ್ದ. ಗುಳ್ಳವ್ವನ ಸೌಂದರ‍್ಯದ ಬಗ್ಗೆ ಕೇಳಿಸಿಕೊಂಡಿದ್ದನಾಗಿ ಅವಳು ತನ್ನ ರಾಣಿಯಾಗಬೇಕೆಂದು ಅಳ್ಳೆಯ ಅರಳಿಸಿಕೊಂಡು ಬಂದ.

ಯಕ್ಷಗಾನದ ಬಣ್ಣದ ವೇಷ ಹಾಗೆ ಗಂಟಲು ಹರಿಯೋ ಹಾಗೆ ಆರ್ಭಟ ಮಾಡುತ್ತ ಬಂದು ಗುಳ್ಳವನ ಗುಡಿಸಲು ಮುಂದೆ ಮೂರುಬಿಡ್ತಿಗೆ ಥಾಥೈಯಾ ಕುಣಿದು ನಿಂತು. ಊರ ಹಿರಿಯ ಬಂದು,

ಹಿರಿಯ : ಬಂದಂಥವರು ತಾವು ಯಾರು ಸ್ವಾಮಿ?

ಭೂ.ರಾಜ : ಅಯ್ಯ ಆತಳ ವಿತಳ ಪಾತಾಳಕ್ಕೆ ಅಧಿಪತಿಯಾದಂಥಾ, ನಾಕು ರಾಜ್ಯ ಎಂಟು ದಿಕ್ಕುಗಳಲ್ಲಿ ಸಮಾನರಿಲ್ಲದಂಥಾ, ನನ್ನ ಬಿಟ್ಟು ಉಳಿದವರಿಗೆ ಉಳಿಗಾಲವಿಲ್ಲ – ನನಗೆ ಮಾತ್ರ ಭಯವಿಲ್ಲಾಂತ ವರಪಡೆದಂಥಾ, ಮರೆತವರನ್ನ ಮುರಿಯುವಂಥಾ ಧೀರ ವೀರ ಶೂರ ಯಾರೆಂದು ಬಲ್ಲೆ?

ಹಿರಿಯ : ಭೂಪತಿ ಮಹಾರಾಜ!

ಭೂ.ರಾಜ : ನಾವೇ ಸೈ.

ಹಿರಿಯ : ಬಂದಂಥ ಕಾರಣ?

ಭೂ.ರಾಜ : ಅಯ್ಯಾ ನಮಗೆ ಭರ್ತಿ ಪ್ರಾಯವೊದಗಿ ಯೋಗ್ಯ ಕನ್ಯೆಯ ಶೋಧನೆಯಲ್ಲಿರಲಾಗಿ ಶಿವಪುರದ ಗುಳ್ಳವ್ವ ಎಂಬುವಳು ನಮ್ಮ ರೂಪ ಯೌವನ ಅಂತಸ್ತಿಗೆ ಯೋಗ್ಯ ಕನ್ಯೆಯಾಗಿ ಕಂಡಳು. ಅವಳನ್ನು ವರಿಸಿ ಮದುವೆ ಮಂಗಳಕಾರ್ಯವನೆಸಗಿ ಕರೆದೊಯ್ಯಲು ಬಂದೆವಯ್ಯಾ ಮುದಿಯಾ.

ಗುಳ್ಳವ್ವ ಒಪ್ಪಲಿಲ್ಲ. ರಾಜ ನಖಶಿಖಾಂತ ಉರಿದು ಕಠಿಣೋಕ್ತಿ ಆಡಿದ. ಇದೆಲ್ಲಿಯ ನ್ಯಾಯವೆಂದು ಗುಳ್ಳವ್ವನ ತಾಯಿ ಹೇಳಿದಳು. ಅವಳ ಮಾನಕ್ಕೆ ಹೀನಾಯ ಮಾಡಿ ಮಾತಾಡಿದ. “ಮದುವೆ ಮಂಗಳಕಾರ್ಯವಾಗಿದೆಯಪ್ಪ ಅವಳಿಗೆ” ಎಂದು ಜನ ನೀತಿನುಡಿ ಹೇಳಿದರೆ ಘಟ ಹೋದರೂ ಹಟ ಬಿಡಲಾರೆನೆಂದ ಆ ಭೂಪತಿ! ಕೊನೆಗೆ ರುದ್ರಕೋಪ ತಾಳಿ ಧಿಃಕರಿಸುವ ಧಿಮಾಕಿನಿಂದ ಹೇಳಿದ :

ಭೂ.ರಾಜ : ನನ್ನ ರಾಜ್ಯದಲ್ಲಿ ಪ್ರತಿಯೊಂದು ವಸ್ತುವಿನ ಮೇಲೆ ನನ್ನ ಅಧಿಕಾರವಿದೆ, ಹಕ್ಕಿದೆ, ಗುಳ್ಳವ್ವ ನ್ಯಾಯವಾಗಿ ಸಿಕ್ಕಬೇಕಾದದ್ದು ನನಗೆ. ನೀವ್ಯಾರೂ ಆಕೆಗೆ ಸರಿಯಾಗಿ ಬುದ್ಧಿ ಹೇಳಿಲ್ಲವಾದ್ದರಿಂದ ಅವಳು ಮಳೆರಾಯನನ್ನ ಮದುವೆಯಾಗಿದ್ದಾಳೆ. ಈಗಲೂ ಕಾಲ ಮಿಂಚಿಲ್ಲ. ಅವನನ್ನು ಬಿಟ್ಟು ಅವಳು ನನ್ನೊಂದಿಗೆ ಬಂದರಾಯಿತು.

– ಎಂದು ಊರಿನ ಕಟ್ಟಳೆಯ ಕಡೆಗಣಿಸಿ ನುಡಿದು, ಸ್ವಲ್ಪ ಹೊತ್ತು ಸುಮ್ಮನಿದ್ದು ಎಲ್ಲರ ಮುಖ ನೋಡಿ “ಸಿಟ್ಟು ಬಂದರೆ ನಾನು ಬೆಟ್ಟವನ್ನೇ ನುಂಗುವಾತ; ನೆನಪಿರಲಿ” ಎಂದು ತಾರಾಮಾರು ಹಾರಾಡಿದ. ಆಗ ರಾಜನಿಗೆ ನೆನಪಾಯಿತು.

ರಾಜ : ಮಳೆರಾಯನೆಂಬಾತ ಹೆಂಡತಿಯ ರಕ್ಷಣೆಗ್ಯಾಕೆ ಬರುತ್ತಿಲ್ಲ?

ಪುಂಡರು : ಇನ್ನೇನು ಬೇಸಿಗೆ ಕಳೆಯಿತಲ್ಲ. ಮಳೆರಾಯ ಇಂದು ನಾಳೆ ಬಂದಾನೆಂದು ಅಂದಾಜಿದೆ ಪ್ರಭು.

ರಾಜ : ಹಾಗೋ? ಈ ಮಳೆರಾಯನೆಂಬಾತ ಎಲ್ಲಿರುತ್ತಾನೆ? ಹ್ಯಾಗೆ ಬರುತ್ತಾನೆ? ಹ್ಯಾಗೆ ಹೋಗುತ್ತಾನೆ? ಎಲ್ಲ ಮಾಹಿತಿ ತಿಳಿದುಕೊಂಡು ಬನ್ನಿರಯ್ಯಾ

ಎಂದು ನೂರೆಂಟು ಜನ ಪುಂಡಪೋಕರಿಗಳನ್ನು ಗುಳ್ಳವ್ವನ ಗುಡಿಸಲ ಸುತ್ತ ಕಾವಲಿಟ್ಟ. ಒಂದು ವಾರದ ತರುವಾಯ ಅವರು ಬಂದು,

“ಮಳೆರಾಯನೆಂಬಾತ ಆಕಾಶದಲ್ಲಿರುವಾತ
ಮರದಿಂದ ಇಳಿದು ಬರುವಾತ
ಮರವೇರಿ ಮೇಲೆ ಹೋಗುವಾತ”

ಅಂದರು. ರಾಜನಿಗಿಷ್ಟು ಸುಳಿವು ಸಿಕ್ಕದ್ದೇ ಆಯ್ತು.

ರಾಜ : ಏನೆಂದೆ? ಮಳೆರಾಯ ಮರದಿಂದ ಇಳಿದು ಬರುತ್ತಾನೆ. ಮರ ಏರಿ ಹೋಗುತ್ತಾನೆ. ಹಾಗಿದ್ದರೆ ಮರಗಳನ್ನೆಲ್ಲ ಕಡಿದು ಹಾಕಿರಯ್ಯಾ.

– ಎಂದು ರಾಜಾಜ್ಞೆ ಹೊರಡಿಸಿದ. ಸಾವಿರಾರು ಸಂಖ್ಯೆಯಲ್ಲಿ ಅವನ ಪುಂಡಪೋಕರಿಗಳು ಒಂದು ಕಡೆಯಿಂದ ತರುಮರಗಳನ್ನು ಕಡಿಯತೊಡಗಿದರು. ಮರ ಕಡಿದುದರಿಂದ ಒಂದು ಕಡೆಯಿಂದ ತರುಮರಗಳನ್ನು ಕಡಿಯತೊಡಗಿದರು. ಮರ ಕಡಿದುದರಿಂದ ಮಳೆರಾಯ ಕೆಳಗಿಳಿಯಲಿಲ್ಲ. ಕಪ್ಪೆ ಕೂಗಿದರೆ ಉತ್ಸಾಹದಿಂದ ಸುರಿಯುವವನು ಈಗ ಕಪ್ಪೆ ಒದರಿದರೂ ಕೆಳಕ್ಕಿಳಿಯಲು ಸಾಧ್ಯವಾಗದೆ ಚಡಪಡಿಸಿದ. ಗುಳ್ಳವ್ವನಿಗೆ ಕೊಡಲು ಪಕ್ಷಿ ರಾಜನಿಂದ ಋತುಗಳ ಬಾಗಿನ ಕಳಿಸಿದ. ಆದರೆ ಭೂಪತಿಯ ಚಂಡಾಲರು ಪಕ್ಷಿರಾಜನನ್ನು ಹೆದರಿಸಿ ಋತುಗಳನ್ನು ಕಸಿದುಕೊಂಡರು. ಪಕ್ಷಿರಾಜನಿಂದ ವಿಷಯ ಗೊತ್ತಾಗಿ ಮರಗಳಿಲ್ಲದೆ ಭೂಮಿಯ ಮ್ಯಾಲೆ ಹ್ಯಾಗೆ ಇಳಿಯಬೇಕೆಂದು ತಿಳಿಯದೆ ಮಳೆರಾಯ ಒದ್ದಾಡಿದ. ಆದರೆ ಮಳೆಯಿಲ್ಲದೆ ಯಾರಾದರೂ ಬದುಕಲುಂಟೆ? ಭೂಮಿಯ ಮೇಲೆ ಬರಗಾಲ ಬಂದು ಇರುವೆ ಮೊದಲುಗೊಂಡು ಆನೆ ಕಡೆಯಾಗಿ ಜೀವರಾಶಿ ನೀರಿಲ್ಲದೆ, ತಿನ್ನಲು ಆಹಾರವಿಲ್ಲದೆ ಹಾಹಾಕಾರವಾಯಿತು. ಹಕ್ಕಿ ಪಕ್ಕಿ ನಾಡು ನರಲೋಕ ನೆಲ ಬಡಿಬಡಿದತ್ತು, ಬೆದಬೆದ ಬೆಂದು ಹೋದರು. ಕೆರೆ ನದಿ ಸಮುದ್ರಗಳು ಬತ್ತಿ ಬಚ್ಚಲಾದವು. ನೆಲ ಒಣಗಿ ಹುಚ್ಚು ಹತ್ತಿದ ಬಿಸಿಲುಗುದುರೆಗಳು ಸಿಕ್ಕ ಸಿಕ್ಕಲ್ಲಿ ಓಡಾಡುವಂತಾಯಿತು. ಗುಳ್ಳವ್ವನೂ ನೀರಿಲ್ಲದೆ ಕಣ್ಣೀರ ಕೊಳದಲ್ಲಿ ಮುಳುಗಿದಳು.

ರಾಜನಿಗು ಅವನ ಪುಂಡಪೋಕರಿಗಳಿಗೂ ಈಗ ತಾವು ಮಾಡಿದ ತಪ್ಪಿನ ಅರಿವಾಯಿತು. ಆದರೆ ಕಾಲ ಮೀರಿ ಹೋಗಿತ್ತು. ಎಲ್ಲರೂ ಓಡಿ ಬಂದು ‘ಕಾಪಾಡು ತಾಯಿ’ ಎಂದು ಗುಳ್ಳವ್ವನ ಕಾಲು ಹಿಡಿದರು. ಸಿಕ್ಕ ಸಿಕ್ಕ ಸಸ್ಯಗಳನ್ನು ಮನಬಂದಂತೆ ಬೆಳೆಸತೊಡಗಿದರು. ಕೊನೆಗೆ ಪಕ್ಷಿರಾಜನನ್ನು ಸಂಧಾನಕ್ಕಾಗಿ ಆಕಾಶಕ್ಕೆ ಕಳಿಸಿ ಬಾರದಿದ್ದಲ್ಲಿ ಗುಳ್ಳವ್ವ ಮೊದಲಾಗಿ ಜೀವರಾಶಿ ನಾಶವಾಗುವುದೆಂದು ಹೇಳಿ ಕಳಿಸಿದರು.

ಆದರೆ ಮಳೆರಾಯನಿಗೆ ಹುಚ್ಚುಹತ್ತಿ ಹ್ಯಾಗೆ ಸುರಿಯಬೇಕೆಂಬುದೇ ಮರೆವಾಗಿತ್ತು. ಆಗ ರಾಜ ಹಸೀಮಣ್ಣಿನಲ್ಲಿ ಗುಳ್ಳವ್ವನ ಗೊಂಬೆ ಮಾಡಿ ತಲೆಮ್ಯಾಲಿಟ್ಟುಕೊಂಡು ಊರಾಡಿದ. ಜನ ಅವನ ನೆತ್ತಿಯ ಮ್ಯಾಲಿನ ಗುಳ್ಳವ್ವನ ಮೇಲೆ ನೀರೆರೆದು ತೋರಿಸಿದರು. ನೆನಪು ಮರುಕಳಿಸಿ ಮಳೆರಾಯ ಸುರಿದ.

ಆಗ ಮತ್ತು ಆಮೇಲೂ ಮಳೆಯಾದುದರಿಂದ ಈ ತನಕ ಅಂದರೆ, ಈ ಕಥೆಯನ್ನು ನಾವು ಹೇಳುವತನಕ ನೀವು ಕೇಲುವತನಕ ಬದುಕಿದ್ದೇವೆ.

ಮುಂದಿನವರೂ ಬದುಕಬೇಕಲ್ಲವೆ?

* * *