ಆ ಸೀಮೆ ನೋಡಿ ನಮಗೆ ಬಹಳ ನಿರಾಸೆ ಮತ್ತು ಆಶ್ಚರ್ಯವಾಯಿತು. ಒಂದು ಗಿಡ ಇಲ್ಲ, ಮರ ಇಲ್ಲ ಅಂಗೈಯಗಲ ಹಸಿರಿಲ್ಲ. ಕ್ಷಿತಿಜರಿಂದ ಕ್ಷಿತಿಜದವರೆಗೆ ಬರೀ ಮರಡಿ. ನೋಡಿದರೆ ಅನಂತಕಾಲದಿಂದ ಈ ಪ್ರದೇಶ ಮಳೆಯನ್ನೇ ಕಂಡಿಲ್ಲವೆಂಬಂತಿತ್ತು. ಅಂಥಲ್ಲೂ ಒಬ್ಬ ಮುದುಕ ಬಂಡೆಯ ಮೇಲೆ ಕೂತಿದ್ದನ್ನ ನೋಡಿ ಇನ್ನೂ ಆಶ್ಚರ್ಯವಾಯ್ತು. ಸಮೀಪ ಹೋಗಿ

‘ಏನಜ್ಜಾ ಮಳೆ ಆಗಿಲ್ಲವೇ’ – ಅಂದೆ.

ತಾತ : ಮಳೆಯೆ? ಈ ಸೀಮೆಗೆ ಮಳೆ ಆಗೋದೇ ಇಲ್ಲವಲ್ಲಪ್ಪ.

‘ಯಾಕೆ’ ಅಂದೆ.

ತಾತ : ಅದೊಂದು ಕಥೆ ಬಿಡು. ಕೇಳುತ್ತೀಯಾ? ಬಿಸಿಲು ಅಂತ ಓಡುತ್ತೀಯಾ?

ಹೋಗಲಿ ಕೇಳೇಬಿಡೋಣವೆಂದು ದೊಡ್ಡ ಮನಸ್ಸು ಮಾಡಿ ‘ಹೇಳು’ ಅಂದೆ. ಅನವು ಹೇಳಿದ ಕಥೆ ಹೀಗಿದೆ:

ಇದೇನೂ ಒಂದಾನೊಂದು ಕಾಲದ ಕಥೆ ಅಲ್ಲ. ಇತ್ತೀಚಿನದು. ಅಗೋ ದೂರ ನೇರಕ್ಕೆ, ಈ ಹೊಲದ ತಲೆಗೊಂದು ತಗ್ಗಿದೆಯಲ್ಲ, ಅದು ಹಿಂದೆ ತುಂಬಿದ ಮಡುವಾಗಿತ್ತು. ಅದರ ಬದುವಿನ ಮ್ಯಾಲೊಂದು ದೊಡ್ಡ ಸಂಪಿಗೆ ಮರ ಇತ್ತು. ಆ ಕಥೆ ನಡೆದದ್ದು ಕೂಡ ಇಲ್ಲೇ.

ಆ ವರ್ಷ ಸಕಾಲದಲ್ಲಿ ಮಳೆ ಬರಲಿಲ್ಲ. ಬರುತ್ತೇನೆಂದು ಹೇಳಿ ಹೋದ ಆರು ಮಳೆಗಳೇ ಬರದೆ ಗಾಳಿಗೆ ಹಾರಿ ಹೋದವು. ಇನ್ನು ಬರಬೇಕಾದ್ದು ಉತ್ತರೀಮಳೆ. ಅದನ್ನ ನಂಬಲಾಗುವುದೇ? ಈಗ ಬಿತ್ತಿಲ್ಲ. ದನಗಳಿಗೆ ಮೇವಿಲ್ಲ. ಕಾಡಿನಲ್ಲಿ ಹಸಿರಿಲ್ಲ. ಹಟ್ಟಿಯ ಜನ ಕಂಗಾಲಾದರು. ಹಿರಿಯನನ್ನ ಎಷ್ಟಂತ ತರುಬಿ ಕೇಳುವುದು? ಅವನು ಸುತ್ತಲಿನ ದೇವರಿಗೆ ಹರಕೆ ಹೊತ್ತು, ಬೇಕಾದಷ್ಟು ಬಲಿ ಕೊಟ್ಟು ಸಾಕಾಗಿ ಮಾತು ಕೂಡ ಕಡಿಮೆ ಮಾಡಿ ಕೂತ. ನೀರು ನೆರಳಿದ್ದ ಕಡೆ ವಲಸೆ ಹೋಗುವುದೊಂದೇ ಈಗಿರುವ ದಾರಿಯೆಂದು ಜನ ತಯಾರಾದರು. ಆಶ್ಚರ್ಯವೆಂದರೆ ಹೀಗೆ ತೀರ್ಮಾನಿಸಿದ ದಿನವೇ ರಾತ್ರಿ ಉಂಡು ಮಲಗುವ ಸಮಯ ಭಾರೀ ಮಳೆ ಸುರಿಯಿತು. ಜನರ್ಯಾರೂ ಗೂಡಿನ  ಒಳಗಡೆ ಉಳಿಯಲೇ ಇಲ್ಲ. ಹೊರ ಬಂದು ಆನಂದದಿಂದ ಕುಣಿದಾಡಿದರು. ಆ ಮೇಲೆ ಜನಕ್ಕೆ ತಿಳಿದದ್ದು, ಮಳೆ ಬಂದದ್ದು ಯಾವ ದೇವರು ದಿಂಡರಿಂದಲ್ಲ, ಹಿರಿಯನ ಮಗಳು ಸುಕ್ರಿಯಿಂದ ಅಂತ. ಅದು ನಡೆದದ್ದು ಹೀಗೆ:

ಹಟ್ಟಿಯ ಹಿರಿಯನ ಮಗಳು ಸುಕ್ರಿ ಮತ್ತವನ ದನಗಾಗಿ ಗೆಳೆಯರು ಹದ ಮಾಡಿ ಬಿತ್ತದ ಹೊಲಗಳ ನೋಡುತ್ತ, ಒಣಗಿದ ಕಾಡು ನೋಡಿ ಕನಿಕರಿಸುತ್ತ, ಬಾಯಾರಿದ ದನಗಳ ನೋಡಿ ಮರುಗುತ್ತ ಕುಂತಿರಲಾಗಿ ಸಂಪಿಗೆ ಮರದ ಕಡೆಯಿಂದ ಪಡ್ಡೆ ಪ್ರಾಯದ ಒಬ್ಬ ಕರೀಹುಡುಗ ಬಂದ. ಹುಡುಗರ ಕಂಡು ಮಿಂಚಿನಂಥ ಹಲ್ಲುಗಳನ್ನು ಪಡ್ಡೆ ಪ್ರಾಯದ ಒಬ್ಬ ಕರೀಹುಡುಗ ಬಂದ. ಹುಡುಗರ ಕಂಡು ಮಿಂಚಿನಂಥ ಹಲ್ಲುಗಳನ್ನು ತೋರಿಸುತ್ತ ನಗಾಡುತ್ತ ಬಂದವನು ನಾತಿ ದೂರ ನಾತಿ ಸಮೀಪದಲ್ಲಿ ನಿಂತು ಸುಕ್ರಿಯನ್ನು ಕೈ ಸನ್ನೆ ಮಾಡಿ ಕರೆದ. ಸುಕ್ರಿ ಓಡಿ ಹೋಗಿ ಏನೆಂದು ನಿಂತರೆ,

ಹುಡುಗ : ಏ ಹುಡುಗಿ ಮಳೆ ತಂದರೆ ಏನು ಕೊಡುತ್ತೀ? – ಅಂದ.

ಸುಕ್ರಿ : ನೀನು ಕೇಳಿದ್ದನ್ನು.

ಹುಡುಗ : ನನ್ನನ್ನು ಮದುವೆ ಮಾಡಿಕೊಳ್ತೀಯಾ?

ಸುಕ್ರಿ : ಮಳೆ ತಂದರೆ.

ಹುಡುಗ : ಆಯಿತಾಯಿತು, ಉಂಡು ಮಲಗೋ ಸಮಯ ಮಳೆ ಬರುತ್ತದೆ. ನನ್ನ ಮಾತು ನಾನುಳಿಸಿಕೊಳ್ತೀನಿ, ನಿನ್ನ ಮಾತು ನೀನು ಉಳಿಸಿಕೊ.

ಎಂದು ಹೇಳಿ ಅದೇ ಮಿಂಚಿನ ಹಲ್ಲುಗಳಲ್ಲಿ ಹೂ ಚೆಲ್ಲಾಡುವ ನಗಾಡುತ್ತ ಕಾಡಿನಲ್ಲಿ ಕಣ್ಮರೆಯಾದ.

ಹುಡುಗರಿಗೆ ದಿಗಿಲಾಯಿತು. ಆತನ ಮೈಬಣ್ಣ ತುಸುವೇ ಕಪ್ಪಾಗಿದ್ದರೂ ಮೈ ಫಳ ಫಳ ಹೊಳೆಯುತ್ತಿತ್ತು. ಹಸಿರುಗಣ್ಣಲ್ಲಿ ಬೆಳಕು ತುಳುಕುತ್ತಿತ್ತು. ಅವನ ಧ್ವನಿ ಯಕ್ಷಿ ಗುಡಿಯ ನಗಾರಿ ಬಾರಿಸಿದ ಹಾಗಿತ್ತು. ಹುಡುಗರಿಗೆ ಅವನ ರೂಪ, ನಡಿಗೆ,ನಗೆ ಎಲ್ಲವೂ ಈ ಲೋಕಮೀರಿದ ಇನ್ಯಾವುದೋ ಲೊಕದ ನಡೆನುಡಿಗಳಾಗಿ ಕಂಡವು. ಈ ತನಕ ಅಂಥವನನ್ನು ಅವರು ಕಂಡಿರಲಿಲ್ಲ. ಇವನ್ಯಾವನೋ ಹಳೇ ಭೂತ, ಸೇಡಿಗಾಗಿ ಬಂದಿರಬಹುದೆಂದು ಕೆಲವರಂದರು. ತೀರಿಸದ ಹರಕೆಗಾಗಿಯಾರೋ ಚಿಲ್ಲರೆ ದೇವರು ಹೀಗೆ ಬಂದಿರಬಹುದೆಂದು ಇನ್ನು ಕೆಲವರಂದರು. ನಮ್ಮ ಚೆಲುವೆ ಸುಕ್ರಿಯನ್ನು ಹಾರಿಸಿಕೊಂಡು ಹೋಗಲು ಬಂದ ಮಲೆಯಾಳ ಮಾಂತ್ರಿಕನೆಂದು ಮತ್ತೆ ಕೆಲವರಂದರು. ಇದೇ ಸೈಯೆಂದು ಬಹುಮತವಾಗಿ ಸುಕ್ರಿಗೆ ಬೇಕಾದಷ್ಟು ಚೇಷ್ಟೆ ಕೀಟಲೆ ಮಾಡಿ, ಎಚ್ಚರಿಕೆ ಕೊಟ್ಟು ಹಟ್ಟಿಗೆ ಹಿಂದಿರುಗಿದರು.

ಹುಡುಗರಿಗೆ ಮೈತುಂಬ ಮುಳ್ಳೇಳುವಷ್ಟು ಗಾಬರಿಯಾದದ್ದು, ಉಂಡು ಮಲಗುವಾಗ! ನಿಜವಾಗಿ ಭಾರೀ ಮಳೆಯಾಯಿತಲ್ಲ ಆವಾಗ! ಜನ ಯಾರೂ ಗೂಡುಗಳಲ್ಲಿ ಉಳಿಯಲೇ ಇಲ್ಲ. ಹೊರ ಬಂದು ಆನಂದದಿಂದ ಕುಣಿದಾಡತೊಡಗಿದರು. ಮುದುಕರು ಕೋಲೂರುತ್ತ ಕುಣಿದದ್ದನ್ನು ಕಂಡವರು ಈ ಹಟ್ಟಿಗೆ ಹುಚ್ಚು ಹತ್ತಿದೆಯೆಂದು ಕೂಡಲೇ ಹೇಳಬಹುದಾಗಿತ್ತು. ಆನಂದದ ರಭಸದಲ್ಲಿ ಹಿರಿಯರು ಮೈಮರೆತಿದ್ದರು, ಆದರೆ ಹುಡುಗರು ಸುಮ್ಮನಿರಲಿಲ್ಲ. ಸಂಜೆ ಹೊಲದಲ್ಲಿ ನಡೆದ ಘಟನೆಯನ್ನ ಹಿರಿಯರ ಕಿವಿಗಳಲ್ಲಿ ದೊಡ್ಡ ದನಿಯಿಂದ ಒದರಿದರು. ಆದರೂ ಹಿರಿಯರ್ಯಾರೂ ತಮ್ಮ ಆನಂದಗಳನ್ನ ಕದಡಿಕೊಳ್ಳಲಿಕ್ಕೆ ಸಿದ್ಧರಿರಲಿಲ್ಲ. ಸುಕ್ರಿಗೆ ಆ ಮಳೆ ತಂದ ಹುಡುಗನ ನೆನಪಿತ್ತು. ಈಗವನ ಹೂ ಬಿಡುವ ಶಬ್ದಗಳ ನೆನಪಾಗಿ ಸಿಹಿ ಕನಸುಗಳಲ್ಲಿ ತೇಲಾಡುತ್ತ ನಿದ್ದೆಗೆ ಸಂದಳು.

ಮಾರನೇ ದಿನದಿಂದ ಇಡೀ ಹಟ್ಟಿ ಗೆಯ್ಮೆಯಲ್ಲಿ ತಲ್ಲೀನವಾಯಿತು. ಆವಾಗಲೇ ಹಂಗಾಮದ ಅಂತಿಮ ದಿನಗಳಾದ್ದರಿಂದ ಉತ್ತುಬಿತ್ತುವ ದಿನಗಳಲ್ಲ. ಆದರೆ ಆ ದಿನಗಳಲ್ಲೂ ಕೆಲವು ಬಿತ್ತುವ ಬೀಜಗಳಿರುತ್ತವಲ್ಲ, ಅವನ್ನಾದರೂ ಬೆಳೆಯೋಣವೆಂದು ಜನ ಮುಂದಾದರು. ಒಂದೊಂದು ಗಳಿಗೆಯನ್ನು ಕೂಡ ಎಣಿಸಿ ಎಣಿಸಿ ದುಡಿದರು. ಸುಕ್ರಿ ಮಾತ್ರ ಒಂದು ಕಣ್ಣನ್ನು ಕೆಲಸದ ಮ್ಯಾಲಿಟ್ಟಿದ್ದರೂ ಇನ್ನೊಂದನ್ನು ಮಳೆ ತಂದ ಹುಡುಗ ಬಂದ ದಿಕ್ಕಿನಲ್ಲೇ ನೆಟ್ಟಿದ್ದಳು. ಅವಳಾಸೆ ಹುಸು ಹೋಗಲಿಲ್ಲ. ಹುಡುಗ ಅದೇ ನಗೆ ನಗಾಡುತ್ತ ಅದೇ ಸ್ಥಳದಲ್ಲಿ ಕಾಣಿಸಿಕೊಂಡೊಡನೆ ಸುಕ್ರಿ ಅಕ್ಕಪಕ್ಕ ಯಾರಿಗೂ ಹೇಳದೆ ಕಾಣೆಯಾದಳು. ಅವಳು ಕಾಣೆಯಾದುದನ್ನು ಗಮನಿಸುವಷ್ಟು ಪುರಸೊತ್ತು ಯಾರಿಗಿತ್ತು?

ಈ ಸಲ ಈ ಸೀಮೆಯಲ್ಲಿ ಏನು ನಡೆದರೂ ಅದಕ್ಕೊಂದು ಪವಾಡದ ಸ್ವರೂಪ ಬರುವಂತಾಯ್ತು. ಬಿತ್ತಿದ ಒಂದೇ ಒಂದು ಬೀಜ ಹುಸಿ ಹೋಗಿರಲಿಲ್ಲ. ಪೈರಂತೂ ಒಂದು ತಿಂಗಳ ಬೆಳವಣಿಗೆಯನ್ನು ಒಂದು ವಾರದಲ್ಲಿ, ಒಂದು ವಾರದ ಬೆಳವಣಿಗೆಯನ್ನು ಒಂದು ದಿನದಲ್ಲಿ ಬೆಳೆದು ಪವಾಡ ಮೆರೆದಿತ್ತು. ಈ ವರ್ಷ ಸೀಗೇ ಹಬ್ಬ ಆಚರಿಸುವುದೇ ಅನುಮಾನವಿದ್ದಾಗ ಬೆಳೆಗಳು ಈ ರೀತಿ ಬಂದರೆ ಜನಕ್ಕೆ ಏನಾಗಬೇಡ! ತುಂಬು ಬಸುರಿಯವರಿಗೆ ಅವರು ಬಯಸುವ ಬಯಕೆಯೂಟ ಹಾಕುವಂತೆ ಬೆಳೆದ ಭೂಮಿಗೂ ಬಯಕೆಯೂಟ ಉಣಬಡಿಸುವ ಆಚರಣೆಯೊಂದಿದೆ. ಅದನ್ನ ಈ ಜನ ಸೀಗೇಹುಣ್ಣಿಮೆ ಹಬ್ಬ ಅಂತ ಕರೆಯುತ್ತಾರೆ. ಈ ದಿನ ಥರಾವರಿ ಅಡಿಗೆ ಮಾಡಿಕೊಂಡು, ಬೆಳೆದ ಹೊಲದ ತುಂಬ ಚೆಲ್ಲಿ, ತಾವೂ ಹೊಲಗಳಲ್ಲಿ ಊಟ ಮಾಡುತ್ತಾರೆ. ಹಾಗೆ ಹೊಲಕ್ಕೆ ಹೋದಾಗ ಮಾಡಿದ ಅಡಿಗೆಯನ್ನು ಪ್ರತ್ಯೇಕ ಕಟ್ಟಿಕೊಂಡು ಸುಕ್ರಿ ಯಾರಿಗೂ ಗೊತ್ತಾಗದ ಹಾಗೆ ಸಂಪಿಗೆ ಮರದತ್ತ ಸರಿದಳು.

ಮಳೆ ತಂದ ಹುಡುಗನ ಸುಳಿವು ಕಾಣಲಿಲ್ಲ. ಸುತ್ತ ಹುಡುಕುತ್ತಿದ್ದಂತೆ ಹುಯ್ಯೆನುವ ಮಾಯದ ಗಾಳಿ ಬೀಸಿ ತನ್ನನ್ನ ಸುತ್ತಿರುಗಿಸುತ್ತ ಯಾರೋ ಎತ್ತಿ ಒಯ್ಯುತ್ತಿರುವಂತೆನಿಸಿತು. ಇನ್ನೇನು ಮರಕ್ಕೆ ಅಪ್ಪಳಿಸುತ್ತೇನೆಂದು ಚೀರಿದಳು. ಸಂಪಿಗೆ ಮರಕ್ಕೆ ಅಪ್ಪಳಿಸಿದ್ದು ನಿಜ. ಆದರೆ ಪೆಟ್ಟಾಗಲಿಲ್ಲ. ಯಾರೋ ತನ್ನ ತೋಳುಗಳಲ್ಲಿ ತಬ್ಬಿಕೊಂಡ ಹಾಗನ್ನಿಸಿತು. ಮರದ ತುಂಬ ಅಂದಚಂದದ ಒಂದು ಸಾವಿರ ಹಕ್ಕಿ ಹಿಗ್ಗ ಸೂಸಿ ಮಧುರ ಸ್ವರದಿಂದ ತಾಳಮೇಳಗಳಲ್ಲಿ ಹಾಡುತ್ತಿರುವಂತೆನಿಸಿತು. ಸಂಪಿಗೆ ಮರದ ಚಿಗುರೆಲೆ ಮೈತುಂಬಾಡಿ ನವಿರೇಳಿಸಿದವು. ಮೆಲ್ಲಗೆ ಕೆನ್ನೆ, ಕಣ್ಣುಗಳ ಮ್ಯಾಲಾಡಿ ಕತ್ತಿನಲ್ಲಿ ಕಚಗುಳಿ ಇಟ್ಟರೆ ಆಶ್ಚರ‍್ಯ ಮರೆತು ಕಿಲಕಿಲ ನಕ್ಕಳು. ಟೊಂಗೆಯಿಂದ ಟೊಂಗೆಗೆ ಹಾರಿ ಜೋಕಾಲಿ ಜೀಕಿದಳು. ಹೂ ಹೂವಿನ ಜೊತೆ ಕುಣಿದಾಡಿದಳು. ಸಂಪಿಗೆ ಮರದ ಸೆಳೆತಕ್ಕೆ ಅದರ ಜೀಕಿಗೆ, ಅದರ ಸ್ಪರ್ಶಕ್ಕೆ, ಅದರ ಕಚಗುಳಿಗೆ, ಅದರ ಚಿನ್ನಾಟಕ್ಕೆ ತನ್ನ ತಾ ಅರ್ಪಿಸಿಕೊಂಡು ಹಾಯೆಂದು ಕಣ್ಮುಚ್ಚಿದಳು.

ಯಾರೋ ಎಚ್ಚರಿಸಿ ಕಣ್ಣು ತೆರೆದಾಗ ತನ್ನ ಓರಗೆಯ ಗೆಳತಿಯರೆಲ್ಲ ಸುತ್ತ ನಗಾಡುತ್ತ ನಿಂತಿದ್ದಾರೆ! ಚೇಷ್ಟೆ ಮಾಡುತ್ತ ಗೆಳತಿಯರೆಲ್ಲ ಸೇರಿ ಕಾಡಿಗೆ ನುಗ್ಗಿ ಚಂದದ ಹೂಗಳ ಹರಿದು ಮುಡಿದರು. ಪರಸ್ಪರರ ಮೈಮ್ಯಾಲೆರಚಿದರು. ಹಾಡು ಗುನುಗಿ ನಕ್ಕರು. ಹಕ್ಕಿಗಳಿಗೆ ಅಣಕಿಸಿದರು. ಅಷ್ಟರಲ್ಲಿ ಸಂಪಿಗೆಯ ಪರಿಮಳದ ಪವನ ಮೂಗಿಗೆ ತಾಗಿದ್ದೇ ಎಲ್ಲರೂ ಸಂಪಿಗೆ ಮರದ ಕಡೆಗೆ ಓಡಿದರು. ಹೂಗಳೆಲ್ಲ ಮರದ ತುದಿಯಲ್ಲಿದ್ದವು, ಹತ್ತುವುದು ಸಾಧ್ಯವಿರಲಿಲ್ಲ. ಅಗೊ, ಕೆಳಗಿನ ಮಡುವಿನಲ್ಲಿ ಒಂದೇ ಹೂ ತೇಲಾಡುತ್ತಿದೆ! ಅದರದ್ದೇ ವಾಸನೆ ಎಂದು ನಾ ಮುಂದೆ ತಾ ಮುಂದೆಂದು ಈಗ ಮಡುವಿಗೆ ಧಾಳಿಯಿಟ್ಟರು. ತೇಲುತ್ತಿದ್ದ ಒಂಟಿ ಹೂವಿಗೆ ಕೈ ಹಾಕಿದರೆ ತೇಲುತ್ತ ಆಳಕ್ಕೆ ಹೋಯಿತು. ಮತ್ತೆ ಎಷ್ಟೆಲ್ಲ ಯತ್ನಿಸಿದರೂ ಯಾರೆಲ್ಲ ಯತ್ನಿಸಿದರೂ ಸನಿಹ ಬರಲಿಲ್ಲ. ಕೊನೆಗೆ ಸುಕ್ರಿ ಮುಂದೆ ಬಂದು ಕೈಚಾಚಿದಾಗ ಕಣ್ಣಿಗೆ ಸಮೀಪ ಕೈಗೆ ದೂರ ದೂರವಾಗುತ್ತ ಆಟ ಆಡಿಸಿತು. ಆಮೇಲೆ ಸೊಂಟದ ಮಟ್ಟ ನೀರಿಗೆ ಹೋದಾಗ ಸಿಕ್ಕಿತು. ಘಮ ಘಮ ಪರಿಮಳದ ಮಾದಕ ಸುಖದಲ್ಲಿ ಹುಡುಗಿಯರೆಲ್ಲ ಮೈಮರೆತರು. ಸುಕ್ರಿ ಮೆಚ್ಚುಗೆಯಿಂದ ಜಡೆಯಲ್ಲಿ ಮುಡಿದುಕೊಂಡಳು. ಹೂವಿಗಾಗಿ ಅವಳು ಕಷ್ಟಪಟ್ಟವಳಾದ್ದರಿಂದ ಯಾರೂ ಅಸೂಯೆ ಪಡಲಿಲ್ಲ. ಈಗ ಪರಿಮಳದ ಭರಣಿಯಾದಳು ಸುಕ್ರಿ.

ರಾತ್ರಿ ಮಲಗಿದಾಗ ಇನ್ನೇನು ನಿದ್ರೆಗೆ ಒಳಗಾಗಬೇಕು, ಅಷ್ಟರಲ್ಲಿ ಹೂವನ್ನ ಇನ್ನೊಮ್ಮೆ ನೋಡುವ ಮನಸ್ಸಾಯಿತು ಸುಕ್ರಿಗೆ. ತೆಗೆದು ನೋಡಿದರೆ ಬಾಡಿರಲಿಲ್ಲ. ಮೂಸಿ ನೋಡುತ್ತಿರುವಂತೆ ಹೂವಿದ್ದದ್ದು ಅವಳ ಮಳೆ ತಂದ ಹುಡುಗನಾಗಿ ರೂಪಾಂತರಗೊಂಡು

ಹುಡುಗ : ಕೊಟ್ಟ ಮಾತನ್ನ ಮರೆತೆಯೇನೆ ಹುಡುಗಿ? ಎಂದ.

ಆತಂಕ ಗಾಬರಿಗಳಿಂದ ಮುಖ ಕೆಂಪೆರಿ ಸುಕ್ರಿ ಎರಡೂ ಕೈಗಳಿಂದ ಮುಖವ ಮುಚ್ಚಿಕೊಂಡಳು.

ಮಾರನೆ ಬೆಳಿಗ್ಗೆ ಸುಕ್ರಿಯ ತಾಯಿ ಹಿರಿಯವ ಕಿವಿಯಲ್ಲಿ

ಮುದುಕಿ : ಲೇ ಹಿರಿಯಾ, ನಿನ್ನೆ ರಾತ್ರಿ ಸುಕ್ರಿ ಮಲಗಿದ್ದ ಮೂಲೆಯಿಂದ ಗಂಡಸಿನ ಪಿಸುದನಿ ಕೇಳಿಸಿತ್ತಲ್ಲ!

ಎಂದಾಗ ಹಿರಿಯನಿಗೆ ಹೆಚ್ಚಿನ ಆತಂಕವಾಯಿತು. ಹಟ್ಟಿಯ ಹಿರಿಯನ ಮಗಳು ಕಾಡಿಗೆ ಹೋಗದೆ, ಕುಲಾಚಾರ ತಪ್ಪಿಸಿ ಗೂಡಿಗೇ ಹುಡುಗನನ್ನು ಕರೆತರಬಹುದೇ? ಯಾರಾಗಿರಬಹುದಾತ? ಇನ್ನೊಬ್ಬರಿಗೆ ತಿಳಿಯುವ ಮೊದಲೇ ಇದಕ್ಕೊಂದು ಕೊನೆ ಕೊಡಬೇಕೆಂದು ಹಿರಿಯ ಮತ್ತವನ ಮುದುಕಿ ಯೋಚಿಸುತ್ತಿದ್ದರೆ ಹಟ್ಟಿಯ ಹೈಕಳು ಅವರಿಗಿಂತ ಮುಂದೆ ಹೋಗಿದ್ದರು.

ಮಳೆ ತಂದ ಹುಡುಗ ಮತ್ತು ಸುಕ್ರಿಯ ಸ್ನೇಹವೀಗ ಗುಟ್ಟಾಗಿ ಉಳಿದಿರಲಿಲ್ಲ. ದನ ಕಾಯುವ ಹುಡುಗರು ತಾವು ಆ ದಿನ ಕಂಡುದನ್ನ ಕಥೆ ಮಾಡಿ ಹೇಳಿದರು. ಸುಕ್ರಿಯನ್ನು ಕಾಡಿಗೆ ಕರೆದೊಯ್ಯುವ ಕನಸು ಕಂಡ ಪಡ್ಡೆ ಹುಡುಗರ ಅಸೂಯೆಗೆ ಈಗ ಬೆಂಕಿಯಿಕ್ಕಿದಂತಾಯ್ತು. ಸುಕ್ರಿ ಮತ್ತವಳ ಹುಡುಗನ ಕಥೆಗೆ ತಮ್ಮ ಕೈಲಾದ ವಿವರ ಸೇರಿಸಿದ ಹುಡುಗನ ತಲೆಗೆರಡು ಕೊಂಬು, ಬಾಯಲ್ಲಿ ಕೋರೆಹಲ್ಲು ಮೂಡಿಸಿ ಸುಕ್ರಿಯ ತಂದೆ ತಾಯಿಗೆ ಹೇಳಿ ಸೇಡು ತೀರಿಸಿಕೊಂಡರು.

ಕಥೆ ಕೇಳಿದ ಮ್ಯಾಲೆ ಕೇಳಿದವರಿಗೆಲ್ಲ ಭಯವಾಯಿತೇ ವಿನಾ ಸಂತೋಷವಾಗಲಿಲ್ಲ. ಹುಡುಗ ಯಾವ ಹಟ್ಟಿ, ಯಾವ ಗೂಡಿನವನೆಂದಿಲ್ಲ. ಯಾವ ಕುಲ ಯಾವ ಜತಿಯವನೆಂದಿಲ್ಲ. ಹೆಸರಿಲ್ಲ, ದೆಸೆಯಿಲ್ಲ, ಯಾರನ್ನ ಕೇಳಿದರೂ ನಾವರಿಯೆವಲ್ಲಾ ಎಂದೇ ಹೇಳಿದರು.

ಸುಕ್ರಿಗೂ ಅವನ ವಿಷಯ ತಿಳಿಯದು. ಸಾಲದ್ದಕ್ಕೆ ಸುಕ್ರಿ ಆ ಹುಡುಗನೊಂದಿಗೆ ಕಾಡಿಗೆ ಹೋಗುವುದಾಗಿ ತನ್ನಿಚ್ಚೆಯ ಬಿಚ್ಚಿ ತಾಯಿಗೆ ಹೇಳಿಯೂ ಬಿಟ್ಟಳು. ಈಗ ಬೇಲಿಯ ಮ್ಯಾಲೆ ಒಣಗು ಹಾಕಿದ ಬಟ್ಟೆಯ ಬಿಡಿಸಿಕೊಳ್ಳಬೇಕು. ಜೋರಿನಿಂದ ಎಳೆದರೆ ಬಟ್ಟೆ ಹರಿಯುತ್ತದೆ. ಮೆಲ್ಲಗೆ ಒಂದೊಂದೇ ಮುಳ್ಳಿನಿಂದ ಬಟ್ಟೆ ಬಿಡಿಸಿ ತೆಗೆಯಬೇಕು. ಹಾಗೆಂದು ಚಿಂತನೆ ಮಾಡಿ ಮತಲಬಿಯಿಂದ ಹಿರಿಯ ಮಗಳಿಗೆ ಹೀಗೆ ಹೇಳಿದ : “ಆಯ್ತು ಮಗಳೇ, ಹದಿ ವಯಸ್ಸಾದ ಮ್ಯಾಕೆ ನೀನು ಕಾಡಿಗೆ ಹೊಗುವುದು ನಮಗೂ ಸಮ್ಮತವೇ. ಆದರೆ ಅದಕ್ಕೂ ಮುನ್ನ ಕುಲಾಚಾರ ಮಾಡಬ್ಯಾಡವೆ? ಇವತ್ತು ಒಳ್ಳೆಯ ವೇಳೆ ಗಳಿಗೆ ನೋಡಿ ಹುಡುಗನ್ನ ಗೂಡಿಗೆ ಕರೆದು ತಾ. ಮಾವನ ಮರ್ಯಾದೆ ಅಂತ ಇರುತ್ತಲ್ಲ. ಮೊದಲು ಅದ ಮಾಡುವಾ” ಅಂದ.

ಆ ದಿನ ಸಂಜೆ ಹೊತ್ತು ಸುಕ್ರಿ ತಲೆ ಬಾಚಿ ಮುಡಿ ಕಟ್ಟಿ ಹೂ ಮುಡಿದಳು. ಸೆಳೆನೂಲುಟ್ಟು ಬಣ್ಣದ ಕಲ್ಲಿನ ಸರ ಹಾಕಿಕೊಂಡು ಸಿಂಗಾರವಾದಳು. ಅಂಗಳದ ರಜವ ಗೂಡಿಸಿ ನಾಲ್ಕೆಳೆ ರಂಗೋಲಿ ಎಳೆದು ಏಳು ಚಿಕ್ಕೆ ಬಿಡಿಸಿದಳು. ಮಳೆ ತಂದ ಹುಡುಗ ಹಿರಿಯನ ಗೂಡಿಗೆ ಬರುವ ಸುದ್ದಿಯಾಗಲೇ ಹಟ್ಟಿಗೆ ತಿಳಿದುಬಿಟ್ಟಿತ್ತು. ಆದ್ದರಿಂದ ಮಳೆ ತರುವಂಥ ಸಜ್ಜನ ಎಂತಿದ್ದಾನೆಂದು ತಿಳಿಯಲು ಅನೇಕರಾಗಲೇ ಹಿರಿಯನ ಗೂಡಿನ ಮುಂದೆ ಕೂಡಿಬಿಟ್ಟಿದ್ದರು. ಹೆಂಗಸರು ಗೂಡಿನೊಳಕ್ಕೆ ಸೇರಿಬಿಟ್ಟಿದ್ದರು. ಹಸು ಕೊಟ್ಟಿಗೆಗೆ ಬರೋ ಹೊತ್ತಿಗೆ ಸರಿಯಾಗಿ ನಾಯಿ ಬೊಗಳಿದ್ದು ಕೇಳಿಸಿ ಆ ಕಡೆ ನೋಡಿದರು. ಅದೇ ಮಳೆ ತಂದ ಹುಡುಗ ದೊಡ್ಡ ಪ್ರಾಣಿಯ ಹಾಗೆ ಹೆಜ್ಜೆ ಹಾಕುತ್ತ ಎತ್ತರದ ಮರ ನಡೆದು ಬಂದ ಹಾಗೆ ಬಿಜು ಮಾಡಿದ! ಅವನೊಂದಿಗೆ ಕುತೂಹಲ ತಾಳದ ಎಳೆಯ ಮಕ್ಕಳೂ ಬೊಗಳುವ ನಾಯಿಗಳು ಬಂದವು. ನೋಡಿದ ಜನ ಹೌಹಾರಿದರು!

ಆಜಾನುಬಾಹು ಹುಡುಗನ ಹುರಿಬಿಗಿದ ಸ್ನಾಯುಗಳು ಜಾಲೀ ಮರದಂತೆ ಬಿರುಸಾಗಿದ್ದವು. ಪಚ್ಚೆಯ ತೆನೆಯಂಥ ಹಸಿರುಗಣ್ಣು ಫಳಫಳ ಹೊಳೆಯುತ್ತಿದ್ದುವು. ಮರದೆಲೆಗಳಲ್ಲಿ ಮಾಡಿದ್ದ ಲಂಗೋಟಿಯ ಕೊನೆಯಲ್ಲಿ ಹೂ ಹೆಣೆದ ಬಾರ್ಡರಿದ್ದು ಚೆಂಡು ಹೂ ತೂಗಾಡುತ್ತಿದ್ದವು. ಪಡ್ಡೆಪ್ರಾಯದ ಮಿಂಚಿನ ನಗೆಯನ್ನು ಒತ್ತಾಯದಿಂದ ತುಟಿಯಲ್ಲಿ ಬಂಧಿಸಿಟ್ಟಿದ್ದ. ತಿದ್ದಿ ಮಾಡಿದ ಮಾಟದ ಗೊಂಬೆಯಂಥ ಹುಡುಗ ಏನಿಲ್ಲದಿದ್ದರೂ ಈ ಲೋಕದವನಲ್ಲ ಎನ್ನುವಂತಿದ್ದ. ತಬ್ಬಿಬ್ಬಾದ ಜನ ನಿಂತವರು ನಿಂತಂತೇ, ಕುಂತವರು ಕುಂತಂತೇ ಬರೆದ ಚಿತ್ರವಾದರು. ಉಪಚಾರಗಳು ಹಾಗಿರಲಿ ಏನು ಮಾಡಬೇಕೆಂಬುದೇ ಹಿರಿಯ ಮತ್ತವನ ಮುದುಕಿಗೆ ಮರೆತು ಹೋಯಿತು. ಸುಕ್ರಿಯೇ ಮುಂದಾಗಿ ನೀರಿನಿಂದ ಕಾಲು ತೊಳೆದು ಧೂಳು ಕಳೆದು ಕುಡಿಯಲು ಹಾಲಿತ್ತಳು. ಹುಡುಗ ಹಾಲು ಕುಡಿದು ಒಡಲು ತಂಪೇರಿಸಿಕೊಂಡು ಚಿಕ್ಕ ಚಾವಡಿಯ ಚಿತ್ರ ಮಂಟಪದಲ್ಲಿ ಹುಲ್ಲಿನ ಕಿರುಚಾಪೆಯ ಮ್ಯಾಲೆ ಕುಂತ. ಎಲ್ಲರ ಕಣ್ಣು ಅವನನ್ನೇ ಇರಿಯುತ್ತಿದ್ದರೆ ಆತ ಎಲ್ಲರನ್ನ ನೋಡುತ್ತಿದ್ದ. ಮತ್ತೆ ಸುಕ್ರಿಯೇ ಮುಂದಾಗಿ “ಇವನೇ ನನ್ನ ಹುಡುಗ”ನೆಂದು ಹೇಳಿ ಅವನ ಕೈ ಹಿಡಿದು ತಂದೆ ಕಾಲಿಗೆ ಬಾಗಿ ನಮಸ್ಕರಿಸಬೇಕೆಂದು ಹೇಳಿ ಹಾಗೆ ಮಾಡಿತೋರಿಸಿದಳು. ಹುಡುಗನೂ ಹಾಗೇ ಮಾಡಿದ. ಹಿರಿಯನಿಗೆ ಈಗ ಬಾಯಿ ಬಂತು. “ಹೆಸರು ಕುಲ ಗೋತ್ರ ಯಾವುದಾಯ್ತೊ?” ಅಂದ. ಹುಡುಗ ಮಾತಾಡಲಿಲ್ಲ. ಯಾರನ್ನೋ ಕೇಳುತ್ತಿರುವರೆಂಬಂತೆ ಎಡಗೈ ಕಿರುಬೆರಳುಗುರು ಕಚ್ಚುತ್ತ ಕುಂತ.

ಹಿರಿಯ : “ನಿನ್ನ ಸೀಮೆಯ ಬಗ್ಗೆ ಒಂದೆರಡು ಮಾತಾಡಿದ್ದರೆ ಆಗಿತ್ತು”

ಈಗಲೂ ಹುಡುಗ ಸುಕ್ರಿಯ ಕಡೆಗೆ ನೋಡಿ ಮುಗುಳುನಕ್ಕ, ನುಡಿದಾಡಲಿಲ್ಲ. ಪುಟ್ಟ ಹುಡುಗರು ಅವನ ಅಜ್ಞಾನಕ್ಕೆ ನಗುತ್ತಿರುವಾಗ ದೊಡ್ಡವರು ಸನ್ನೆ ಮಾಡಿ ಗದರಿದರು. ಮತ್ತೆ ಮೌನ ಆವರಿಸಿತು. ಈಗ ಹಿರಿಯನೇ ಎಚ್ಚೆತ್ತು ಎಲಡಿಕೆ ಮತ್ತು ಹದಿನೆಂಟು ಗೊಂಡೆಗಳ ಒಂದು ಹೊಸ ಲಂಗೋಟಿಯುಳ್ಳ ಹರಿವಾಣವನ್ನು ಹುಡುಗನ ಮುಂದೆ ಹಿಡಿದ. ಹುಡುಗ ಅವನ್ನು ತಗೊಂಡೇನು ಮಾಡಬೇಕೆಂದು ತೋಚದೆ ಗೊಂದಲದಲ್ಲಿದ್ದಾಗ ಹುಡುಗಿಯರು ಗೊಳ್ಳನೆ ನಕ್ಕರು. ಮಳೆ ತಂದ ಹುಡುಗ ಸುಕ್ರಿಯ ಕಡೆ ನೋಡಿ ಬರುವುದಾಗಿ ಸನ್ನೆ ಮಾಡಿ ತಿಳಿಸಿ ಹೋಗಿಬಿಟ್ಟ. ಸುಕ್ರಿ ತನ್ನ ಮೂಲೆಗೆ ಸರಿದಳು.

ಈಗ ಎಲ್ಲರಿಗೂ ಹೋದುಸಿರು ಬಂತು. ಇಂಥವನನ್ನು ಕಂಡರಿಯೆವೆಂದು ಹಿರಿಯರು, ಕೇಳರಿಯವೆಂದು ಮುದುಕಿಯರು ಅಂತೂ ಎಲ್ಲರೂ ಮಂಡೆಗೊಂದೊಂದು ಮಾತಾಡಿಕೊಂಡರು. ಆದರೆ ಕೆಟ್ಟದ್ದನ್ನಾಡಲು ಎಲ್ಲರೂ ಹೆದರಿದರು. ಯಾಕೆಂದರೆ “ಅಕಸ್ಮಾತ್‌ ಇವನು ದೇವರೇ ಆಗಿಬಿಟ್ಟಿದ್ದರೆ! ನಮಗ್ಯಾಕೆ ಸಲ್ಲದ ಉಸಾಬರಿ!”

ಮಾರನೆ ದಿನ ಹಿರಿಯ ಹೊಲಕ್ಕೆ ಹೋಗಿ ಮೀಯಲು ಮಡುವಿಗಿಳಿಯ ಹೋದಾಗ ಆಶ್ಚರ್ಯ ಕಾದಿತ್ತು. ನಿನ್ನೆ ಮಳೆ ತಂದ ಹುಡುಗನಿಗೆ ತಾನು ಮರ್ಯಾದೆ ಮಾಡಿದ್ದ ಹದಿನೆಂಟು ಗೊಂಡೆಗಳ ಲಂಗೋಟಿ ಮಡುವಿನ ಬಳಿಯ ಸಂಪಿಗೆ ಮರಕ್ಕೆ ಸುತ್ತಿಕೊಂಡಿತ್ತು. ಹೋಗಿ ನೋಡಿದರೆ ತಾನು ಕೊಟ್ಟ ಎಲಡಿಕೆ ಹರಿವಾಣ ಸಮೇತ ಅದೇ ಮರದ ಕೊಂಬೆಯ ಮ್ಯಾಲಿತ್ತು. ನೋಡಿದ್ದೇ ಹಿರಿಯನ ಹೃದಯ ಡಬ ಡಬ ಅದೇ ಮರದ ಕೊಂಬೆಯ ಮ್ಯಾಲಿತ್ತು. ನೋಡಿದ್ದೇ ಹಿರಿಯನ ಹೃದಯ ಡಬ ಡಬ ಬಡಿದುಕೊಂಡಿತು. “ಮರದ ಭೂತವೇನಾದರೂ ಹುಡುಗನ ವೇಷವಾಗಿ ಬಂದು ಎಳೆಮನದ ಸುಕ್ರಿಯ ಮನಸ್ಸನ್ನು ಮಂಕು ಮರುಳು ಮಾಡಿದೆಯೆ?” – ಇಂತೀ ಪರಿ ಚಿತ್ತ ಸಂಶಯ ಮೂಡಿ ಅವಸರದಲ್ಲಿ ಗೂಡಿಗೋಡಿ ಬಂದ. ತನ್ನ ಅಭಿಪ್ರಾಯ ಪ್ರಕಟವಾಗುವ ಹಾಗೆ ಮುಚ್ಚಿ ಮಗಳಿಗೆ ಹೇಳಿದ :

ಹಿರಿಯ : ನಿನ್ನೆ ನೀನೇ ನೋಡಿದೆಯಲ್ಲ – ನಾವೆಲ್ಲ ಹ್ಯಾಗೆ ಸಂಕೋಚದಿಂದ ಮುದುಡಿಕೊಂಡೆದ್ದೆವಂತ. ಮಾಡಬೇಕಾದ ಮರ್ಯಾದೆಯನ್ನ ಪೂರ್ತಿ ಮಾಡಲಾಗಲೇ ಇಲ್ಲ. ಏನಿದ್ದರೂ ಇವತ್ತು ಅವನನ್ನ ಇನ್ನೊಮ್ಮೆ ಕರೆದುಕೊಂಡು ಬಾ. ಮರ್ಯಾದೆ ಮಾಡಿ ಕಳಿಸುವಾಗ. ನೀವಿಬ್ಬರೂ ಕಾಡಿಗೆ ಹೋಗುವುದು ಇದ್ದೇ ಇದೆ. ನಾಳೆ ಹೋದರಾಯ್ತು.

ಈ ದಿನವೂ ನಿನ್ನೆಗಿಂತ ಹೆಚ್ಚಿಗೇನೂ ನಡೆಯಲಿಲ್ಲ. ಹಿರಿಯ ಈ ದಿನ ಮೈಛಳಿ ಬಿಟ್ಟು ನಾಕು ಮಾತಾಡಿ ಧಡಿ ಧೋತ್ರ ಮತ್ತು ಮುಡಿಗೆ ಕೆಂಪು ಜರಿ ರುಂಬಾಲು ಆಹೇರು ಮಾಡಿ ಅಳಿಯನನ್ನ ಬೀಳ್ಕೊಟ್ಟ.

ಮಾರನೇ ದಿನ ಹಿರಿಯ ಬೆಳಿಗ್ಗೆ ಯಾರಿಗೂ ಹೇಳದೇ ಸಂಪಿಗೆ ಮರಕ್ಕೆ ಹೋಗಿ ನೋಡಿದರೆ ನಿನ್ನೆ ಕೊಟ್ಟ ಧಡಿಧೋತ್ರವನ್ನ ಸಂಪಿಗೆ ಮರ ಉಟ್ಟಿತ್ತು! ಟೊಂಗೆಯ ತುದಿಯಲ್ಲಿ ಕೆಂಪು ಜರಿ ರುಂಬಾಲಿತ್ತು! ಹಿರಿಯನನ್ನ ಕಂಡುದೇ ಮರ ಹಿಗ್ಗಿನಿಂದ ಕೈ ಬೀಸಿ ಸ್ವಾಗತಿಸಲೆಂಬಂತೆ ಟೊಂಗೆಗಳ ಅಲುಗಾಡಿಸಿ ಹತ್ತೆಂಟು ಹೂ ಉದುರಿಸಿತು. ನೋಡಿ ಹಿರಿಯ ಅಡಿಯಿಂದ ಮುಡಿತನಕ ಥರ ಥರ ನಡುಗಿದ. ಎಲ ಎಲ ಈ ಸಂಪಿಗೆ ಮರವೇ ಹೀಗೆ ತನ್ನ ಮಗಳನ್ನ ಮೋಸ ಮಾಡುತ್ತಿದೆಯೆಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಅವಸರದಲ್ಲಿ ಹಟ್ಟಿಗೆ ಬಂದವನೆ ಕಟ್ಟುಮಸ್ತಾದ ನಾಕೈದಾಳು ಮರಕುಟುಕರನ್ನು ಕರೆದುಕೊಂಡು ಹೊಲಕ್ಕೆ ಹೋಗಿ ಮರವನ್ನ ಕಡಿಯ ಹೇಳಿದ!

ಇತ್ತ ಗೂಡಿನಲ್ಲಿ ಸುಕ್ರಿ ಗರ್ಭಹಿಡಿದುಕೊಂಡು ಅಯ್ಯೊ ಸತ್ತೆ ಎಂದು ಕಿರುಚುತ್ತ ಉರುಳಾಡುತ್ತಿದ್ದಳು. ಮುದುಕಿ ಮತ್ತು ಹಟ್ಟಿಯ ಜನ ಮದ್ದಿಗಾಗಿ ಇಲ್ಲಿ ತಡಕಾಡುತ್ತಿದ್ದರೆ, ಅಲ್ಲಿ ಹೊಲದಲ್ಲಿ ಮರಕಟುಕರು ಮರ ಕಡಿಯುತ್ತಿದ್ದರು! ಬಹಳ ಹೊತ್ತು ಕಡಿದ ಮೇಲೆ ಮರ ಉರುಳಿ ಮಡುವಿಗೆ ಬಿತ್ತು. ಹಿರಿಯ ಹೆಮ್ಮೆಯಿಂದ ಬೀಗುತ್ತ ಗೂಡಿಗೆ ಬಂದಾಗ ಸುಕ್ರಿಯೂ ಗರ್ಭ ಹಿಡಿದುಕೊಂಡು ಅಸುನೀಗಿದ್ದಳು!

ನಮ್ಮ ಕಥೆ ಮುಗಿಯಿತಲ್ಲ!

* * *