ಜಾನಪದದಲ್ಲಿ ‘ಪರಿಸರ’ ಎಂದರೆ ತರುಮರಗಳೆ. ಮಳೆ, ಗಾಳಿ, ಮೋಡಗಳ ಬಗ್ಗೆ ಒಂದೆರಡು ಜನಪದ ಕಥೆಗಳಿವೆಯಾದರೂ ಅವುಗಳಿಗೆ ಪ್ರಾಮುಖ್ಯತೆ ಇಲ್ಲ. ಮರಗಳೆಂದರೆ ಪ್ರತ್ಯಕ್ಷ ದೇವತೆಗಳೆಂದು ಹೇಳುವ ಕಥೆಯೊಂದಿದೆ:

ದೇವತೆಗಳು ಭೂಲೋಕದ ಮೇಲಿನ ಬೆಳದಿಂಗಳಿಗೆ ಮಾರುಹೋಗಿ ಮನರಂಜನೆಗಾಗಿ ಇಲ್ಲಿಗೆ ಹೊರಟರು. ಶಿವ ಪಾರ್ವತಿ ಮಕ್ಕಳನ್ನು ಕರೆದು “ಸುರ್ಯೋದಯವಾಗುವುದರೊಳಗೆ ಮಿರಿಲೋಕಕ್ಕೆ ಬಂದು ಬಿಡಿರಿ” ಎಂದು ತಾಕೀತು ಮಾಡಿ ಕಳಿಸಿದರು. ಒಪ್ಪಿಕೊಂಡು ಬಂದವರು ಬೆಳ್ಳಿ ಮೂಡಿದರೂ ಗೊತ್ತಾಗದೆ ಆಟದಲ್ಲಿ ಮೈಮರೆತರು. ಮೂಡು ಬೆಟ್ಟದಲ್ಲಿ ಸೂರ್ಯನಾರಾಯಣಸ್ವಾಮಿ ಮೂಡಿದಾಗ ಮ್ಯಾಲಿನ ಮಿರಿಲೋಕ ಮಾಯವಾಗಿತ್ತು. ಭೂಮಿಯ ಮ್ಯಾಲಿದ್ದ ದೇವತೆಗಳೆಲ್ಲ ದೇವಲೋಕಕ್ಕೆ ಹೋಗಲಾರದೆ ಇಲ್ಲಿಯೇ ಉಳಿದುಬಿಟ್ಟರು.

ಪುನಃ ಸಂಜೆಯಾದ ಮೇಲೆ ದೇವಲೋಕಕ್ಕೆ ಹೋಗಬೇಕೆಂದರೆ ಆಗಲೇ ನೆಲದಲ್ಲಿ ಬೇರುಬಿಟ್ಟಿದ್ದರು! ಕಿತ್ತುಕೊಂಡು ಹೋಗಲಿಕ್ಕಾಗದೆ ಇಲ್ಲಿಯೇ ಉಳಿದರು. ಕಳೆದು ಹೋದ ಮಕ್ಕಳಿಗಾಗಿ ಶಿವ ಪಾರ್ವತಿ ಕಣ್ಣೀರು ಸುರಿಸಿದರು. ಆ ಕಣ್ಣೀರೇ ಮಳೆಯಾಗಿ ಮರಗಳಿಗೆ ಜೀವನಾಧಾರವಾಯಿತು.

ಇದೇ ಕಥೆಯ ಇನ್ನೊಂದು ಪಾಠದಲ್ಲಿ ಆಡಲಿಕ್ಕೆ ಬಂದ ದೇವತೆಗಳಲ್ಲಿ ಮಳೆರಾಯನೂ ಒಬ್ಬ. ಬೆಳ್ಳಿ ಮೂಡಿದಾಗಲೇ ಅವನಿಗೆ ಶಿವ ಪಾರ್ವತಿಯರ ತಾಕೀತು ನೆನಪಾಗಿ ದೇವಲೋಕಕ್ಕೆ ಓಡಿಹೋದ. ಆದರೆ ಉಳಿದವರು ಆಟದಲ್ಲಿ ಮೈಮರೆತು ಇಲ್ಲಿಯೇ ಉಳಿದರಾಗಿ ಅವರನ್ನು ಕರೆದೊಯ್ಯಲು ಸಂಜೆ ಇಲ್ಲಿಗೆ ಬಂದ. ಅವರಾಗಲೇ ಬೇರು ಬಿಟ್ಟಿದ್ದರು.

ಜನಪದ ಕಥೆಗಳಲ್ಲಿ ಮರಗಳಿಗೆ ಶಾಪಾನುಗ್ರಹ ಶಕ್ತಿ ಬಂದುದು ಈ ಕಾರಣಕ್ಕಾಗಿ. ಅದರಲ್ಲೂ ಅನುಗ್ರಹಿಸುವ ಕಥೆಗಳೇ ಹೆಚ್ಚು. ಕೊಟ್ಟ ವರಗಳನ್ನು ಮನುಷ್ಯನೇ ತನ್ನ ದುರಾಸೆಯಿಂದ ಶಾಪವಾಗಿ ಪರಿವರ್ತಿಸಿಕೊಳ್ಳುತ್ತಾನೆ. ಉದಾಹರಣೆಗೆ: ಒಬ್ಬ ಒಂದು ಮರವನ್ನು ಕಡಿಯಹೋಗಿ ಒಂದೇಟು ಹಾಕಿದಾಗ ಅದರಿಂದ ನೀರು ಸುರಿಯಿತು. ಆತ ನೀರು ಕುಡಿದು ಬಾಯಾರಿಸಿಕೊಂಡ. ಇನ್ನೊಂದೇಟು ಹಾಕಿದಾಗ ಹಾಲು ಸುರಿಯಿತು. ಹಾಲು ಕುಡಿದು ಹಸಿವನ್ನ ತಣಿಸಿಕೊಂಡ. ಆತನ ಅಗತ್ಯಗಳು ಮುಗಿದದ್ದರಿಂದ ಇಲ್ಲಿಗೆ ನಿಲ್ಲಿಸಬೇಕಾಗಿತ್ತು. ಇಷ್ಟೆಲ್ಲ ಸುರಿಯಬೇಕಾದರೆ ಈ ಮರದಿಂದ ಇನ್ನೇನು ಸುರಿಯುತ್ತದೆ? ಎಂದು ಇನ್ನೊಂದೇಟು ಹಾಕಿದ. ಮರ ಸುಮ್ಮನಿತ್ತು. ಮತ್ತೂ ಒಂದೇಟು ಹಾಕಿದ, ರಕ್ತ ಸುರಿಯತೊಡಗಿತು! ರಕ್ತದಲ್ಲಿ ಆತ ಮುಳುಗಿ ಸತ್ತನೆಂದು ಕಥೆಗಳು ಮುಗಿಯುತ್ತದೆ. ನಮ್ಮ ಕಥೆಯೂ ಹಾಗೇ ಮುಗಿಯಬಹುದೆಂಬುದನ್ನು ಈ ಕಥೆ ಸೂಚಿಸುವಂತಿದೆ.

ಮರ ಕಡಿಯುವುದರ ಬಗ್ಗೆ ಸ್ಪಷ್ಟವಾದ ಎಚ್ಚರಿಕೆ ಕೊಡುವ ಇಂಥ ಕಥೆಗಳು ಪ್ರಪಂಚದಾದ್ಯಂತ ಸಿಕ್ಕರೂ ನಮ್ಮ ದೇಶದಲ್ಲೇ ಯಾಕೆ ಹೆಚ್ಚಾಗಿವೆಯೆಂದೂ ವಿಚಾರ ಮಾಡಿಕೊಳ್ಳಬೇಕಾಗಿದೆ. ಪಶು ಪಕ್ಷಿಗಳಿಗೆ ಆಸರೆಯಾದ, ನೆರಳು ನೀಡುವ ಮರವನ್ನು ಯಾವ ಸಂದರ್ಭದಲ್ಲಿಯೂ ಕಡಿಯಬಾರದೆಂದು ಜಾನಪದ ಹೇಳುತ್ತದೆ. ತೀರಾ ಅಗತ್ಯವಾಗಿದ್ದಲ್ಲಿ ಮರದ ಮುಂದೆ ನಿಂತು “ಅನಿವಾರ್ಯವಾದ್ದರಿಂದ ಕಡಿಯುತ್ತೇನೆ; ಕ್ಷಮಿಸು ತಾಯೀ” ಎಂದು ಕೈಮುಗಿದು ಪ್ರಾರ್ಥಿಸಿ ಕಡಿಯಬೇಕಾಗಿತ್ತು ಒಂದು ಕಾಲದಲ್ಲಿ! ಈಗಲೂ ಕೆಲವು ಬಡಗಿ ಜನ ಹಾಗೆ ಮಾಡುವುದುಂಟು. ಈ ಧೋರಣೆಗೂ ಲಾರಿಗಟ್ಟಲೆ ಮರ ಕಡಿದು ಮಾರುವ ನಮಗೂ ಎಲ್ಲಿಯ ಸಂಬಂಧ?

ಇಂಥ ಕಥೆಗಳಲ್ಲಿ ಉಕ್ತವಾದ ನಮ್ಮ ಹಿರಿಯರ ತಿಳುವಳಿಕೆಯಿಂದಾದರೂ, ನಮಗೆ ಬಿಡ್ರಿ, ನಮ್ಮ ಮಕ್ಕಳಿಗಾದರೂ ಬುದ್ಧಿ ಬಂದೀತೆಂದು ನಂಬಿ ಈ ಕಥೆಗಳನ್ನು ಹೇಳುತ್ತಿದ್ದೇನೆ. ಮಕ್ಕಳು ಶಾಲೆಗಳಲ್ಲಿ ದೃಶ್ಯವಾಗಿಸಿ ನಲಿಯಲೆಂಬ ಉದ್ದೇಶದಿಂದ ಸಂಭಾಷಣೆಗಳಲ್ಲಿಯೇ ಕಥೆ ಹೇಳಿದ್ದೇನೆ. ಇದರೊಂದಿಗೆ ಅಂತ್ಯದಲ್ಲಿ ಕೆಲವು ಟಿಪ್ಪಣಿಗಳನ್ನೂ ಕೊಟ್ಟಿದ್ದೇನೆ. ಆಸಕ್ತರು ಗಮನಿಸಬಹುದು.

ಈ ಕಥೆಗಳನ್ನು ಪ್ರಕಟಿಸಿದ ‘ಅಂಕಿತ ಪುಸ್ತಕ’ದ, ಪ್ರಕಾಶ್ ಕಂಬತ್ತಳ್ಳಿಯವರಿಗೂ ‘ಸುಧಾ’ದಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ ಮತ್ತು ಒಳಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಸಂಪಾದಕರಾದ ಶ್ರೀ ತಿಲಕ್‌ಕುಮಾರ್‌ಅವರಿಗೂ ಮತ್ತು ಶ್ರೀ ಆರ್‌.ಪಿ.ಜಗದೀಶ್ ಅವರಿಗೂ, ಚಿತ್ರ ರಚಿಸಿದ ಶ್ರೀ ಹರೀಶ್ ಅವರಿಗೂ ವಂದನೆಗಳು.

ಚಂದ್ರಶೇಖರ ಕಂಬಾರ