ಈ ಕಥೆಯನ್ನು ಈಗೀಗ ಒಂದಾನೊಂದು ಕಾಲದಲ್ಲಿ ಎಂದು ಯಾರೂ ಸುರು ಮಾಡುವುದಿಲ್ಲ. ಯಾಕೆಂದರೆ ಈ ಕಥೆ ಹಿಂದೆ ನಡೆದದ್ದಲ್ಲ. ಈಗೀಗ ನಿತ್ಯ ನಡೆಯುವ ಸತ್ಯ ಕಥೆಯೆಂದೇ ಜನ ನಂಬಿರುವರಂತೆ. ಹಾಗಿದ್ದರಿದು ಹಿಂದಿನ ಕಥೆಯೋ? ಇಂದಿನ ಕಥೆಯೊ? ನಮ್ಮ ತೀರ್ಮಾನ ಆಮೇಲೆ ಹೇಳೋಣ. ಮೊದಲು ಕಥೆಯನ್ನಂತೂ ತಿಳಿದಿರೋಣ.

ಒಂದು ಬೆಟ್ಟ. ಬೆಟ್ಟಕ್ಕಂಟಿ ವಿಶಾಲವಾಗಿ ತರುಮರ ಬೆಳೆದ ಹುಲ್ಲುಗಾವಲು, ಅದಕ್ಕಂಟಿ ಒಂದು ಗುಡಿಸಲಿತ್ತು. ಗುಡಿಸಲಲ್ಲಿ ಒಬ್ಬ ಅಡಗೂಲಜ್ಜಿ, ಅವಳ ಇಬ್ಬರು ಮೊಮ್ಮಕ್ಕಳು, ಒಬ್ಬಳು ಕಾಶಿ, ಇನ್ನೊಬ್ಬಳು ಕಣಗಿಲೆ, ಮೂವರೂ ದನಕರು ಮೇಯಿಸಿಕೊಂಡು ಸುಖವಿದ್ದರು.

ಇಂತಿರುವಲ್ಲಿ ಒಂದು ದಿನ ಭಯಂಕರ ಬಿರುಗಾಳಿ ಬೀಸತೊಡಗಿತು. ಬಿರುಗಾಳಿಯೆಂದರೆ ಬರೀ ಹಗುರು ಪದಾರ್ಥಗಳು ಹಾರಿ ಬೀಳುವ ಬಿರುಗಾಳಿಯಲ್ಲ, ಗುಡಿಸಲು ಮನೆಗಳನ್ನೇ ಎತ್ತಿ ಒಗೆವ ಚಂಡಮಾರುತವದು! ಬಿರುಗಾಳಿಯ ರಭಸಕ್ಕೆ ಹಕ್ಕಿಪಕ್ಕಿ ಗೂಡು ಹಾರಿಹೋದವು. ಹುಲಿ ಕರಡಿ ಸಾರಂಗ ಮೃಗಜಾತಿ ಗವಿ ಸೇರಿದವು. ಒಂಟಿ ಗುಡಿಸಲಲ್ಲಿದ್ದ ಕಾಶಿ ಕಣಗಿಲೆ ಅಜ್ಜಿಯನ್ನು ತಬ್ಬಿಕೊಂಡು ಕಂಗಾಲಾಗಿ ಕೂತರು. ಹೆದರಿದ ಕಣಗಿಲೆ ಕೇಳಿದಳು

ಕಣಗಿಲೆ : ಒಂದೇ ಸಮ ಹೀಗೆ ಚಂಡಮಾರುತ ಬೀಸಿದರೆ, ಖಗಮಿಗಾದಿಗಳ ಗತಿಯೇನು? ನಮ್ಮ ಗತಿಯೇನಜ್ಜಿ?

ಅಜ್ಜಿ : ವಾಯುದೇವರಿಗೆ ಭಯಂಕರ ಕಾಯಿಲೆ ಬಂದರೆ ಹೀಗಾಗುತ್ತದೆ ಮಗಳೆ.

ಕಾಶಿ : ವಾಯುದೇವನಿಗೆ ಕಾಯಿಲೆ? ಅವನು ದೇವರಲ್ಲವೆ ಅಜ್ಜಿ?

ಅಜ್ಜಿ : ದೇವರು ನಿಜ. ಆದರೆ ಮನುಷ್ಯನ ಮನಸ್ಸು ದೇವರಿಗೂ ಕಾಯಿಲೆ ಬರಿಸುವಷ್ಟು ವಿಕಾರವಾಗಿರುತ್ತದೆ ಮಗಳೆ.

ಕಾಶಿ : ಅಂದರೆ ಮನುಷ್ಯ ದೇವರಿಗೆ ಅಂಟಿಸಿದ ರೋಗದಿಂದಾಗಿ ಇಂಥ ಚಂಡಮಾರುತ ಬೀಸುವುದೆ?

ಅಜ್ಜಿ : ಹೌದು ಮಗಳೆ. ಗಾಳಿ ನಮ್ಮ ಮೈಮನಸ್ಸಿಗೆ ಮುದ ನೀಡುತ್ತಾ ತಂಗಾಳಿಯಾಗಿ, ಸುಳಿಗಾಳಿಯಾಗಿ ಬೀಸಿದರೆ ಅವನೇ ವಾಯುದೇವ. ರಭಸದಿಂದ ತರು ಮರಗಳನ್ನು ಬುಡಮೇಲು ಮಾಡುತ್ತಾ ಬೀಸಿದರೆ ಅವನೇ ಚಂಡಮಾರುತ. ವಾಯುದೇವ ಚಂಡಮಾರುತನಾಗುವುದಕ್ಕೆ ಈಗೀಗ ನಾವೇ ಕಾರಣ.

ಕಣಗಿಲೆ : ನಾವೇನು ಮಾಡಿದ್ದೇವಜ್ಜಿ?

ಅಜ್ಜಿ : ಅತಿಯಾಸೆಯಿಂದ ನಾವು ವಾಯುದೇವನಿಗೆ ಮತ್ತು ಅವನ ತಾಯಿ ಭೂದೇವಿಗೆ ಕೊಡುವ ಹಿಂಸೆ ಸಾಮಾನ್ಯವಲ್ಲ ಮಗಳೆ. ಶೀಘ್ರ ಮತ್ತು ಅಲ್ಪಸುಖಕ್ಕಾಗಿ ವಿಷಗಳನ್ನು ತಯಾರಿಸಿ ಆಹಾರದಲ್ಲಿ ಬೆರೆಸುತ್ತೇವೆ, ಬೆಳೆಯುತ್ತೇವೆ. ನದಿ ಕೆರೆಗಳನ್ನು ಚರಂಡಿ ಮಾಡಿ ಗಬ್ಬೆದ್ದು ನಾರುವ ಹಾಗೆ ಮಾಡುತ್ತೇವೆ. ಹಣ್ಣಿನಲ್ಲಿ ಹುಳ ಬೀಳಿಸುತ್ತೇವೆ. ಹಸಿರನ್ನ ಬೂದಿ ಮಾಡುತ್ತೇವೆ. ಹೀಗೆ ನಾವು ಮಾಡಿದ ಕೊಚ್ಚೆ ತಿಪ್ಪೆಯನ್ನೇ ತಬ್ಬಿ ತೀಡಿ ಬೀಸುವ ವಾಯುದೇವನಿಗೆ ರೋಗ ಬಡಿಯದಿರುತ್ತದೆಯೋ? ಅವನು ರೋಗದಿಂದ ನರಳಿ ಬಿಸಿಯುಸಿರು ಹಾಕಿದಾಗ ಹೀಗೆ ಬಿರುಗಾಳಿಯಾಗುತ್ತದೆ. ವಾಯುದೇವನ ನಿಟ್ಟುಸಿರೇ ಚಂಡಮಾರುತ ಮಗಳೆ.

ಕಣಗಿಲೆ : ಇದಕ್ಕೆ ನಾವು ಮಾಡಬಹುದಾದ ಉಪಾಯ ಯಾವುದಾದರೂ ಇದೆಯೆ ಅಜ್ಜಿ?

ಕಾಶಿ : ಹ್ಯಾಗೆ ಸಾಧ್ಯ? ಉಪಾಯ ಮಾಡಬೇಕೆಂದರೂ ಅವನಲ್ಲಿಗೆ ಹೋಗುವ ದಾರಿಗಳನ್ನು ಅವನೇ ಮುಚ್ಚಿದ್ದಾನೆ.

ಅಜ್ಜಿ : ಅವನ ಆರೈಕೆ ಮಾಡಲು ಸಿದ್ಧರಾದರೆ ಅವನೇ ಅನುಕೂಲಗಳನ್ನು ಸೃಷ್ಟಿ ಮಾಡಿಕೊಡಬಲ್ಲ.

ಅಷ್ಟರಲ್ಲಿ ಕೊಟ್ಟಿಗೆಯ ಮೇಲಿನ ಛಾವಣಿ ಹಾರಿಹೋಗಿ ದನಕರು ಗಾಬರಿಯಲ್ಲಿ ಒದ್ದಾಡಿದವು. ಇದನ್ನು ಕಂಡ ಹುಡುಗಿಯರು ಇನ್ನಷ್ಟು ಹೆದರಿದರು. ಕೊನೆಗೆ ಕಿರಿಯಳಾದ ಕಣಗಿಲೆ ಹೇಳಿದಳು.

ಕಣಗಿಲೆ : ಬಿರುಗಾಳಿ ನಿಲ್ಲುವ ಸೂಚನೆಗಳಂತೂ ಇಲ್ಲ. ಉಪಾಯ ಹೇಳಜ್ಜಿ. ಅದನ್ನಾದರೂ ಮಾಡಿ ನೋಡೋಣ.

ಅಜ್ಜಿ : ಮನಸ್ಸಿದಲ್ಲಿ ಮಾರ್ಗದ ಇದ್ದೇ ಇರುತ್ತದೆ ಮಗಳೆ.

ಆಗೋ ಬೆಟ್ಟದಾಚೆ ಗಂಧವತಿನಗರ ಇದೆ. ಅಲ್ಲಿರೋದೇ ವಾಯುದೇವನ ಅರಮನೆ. ನಿನು ಅಲ್ಲಿಗೆ ಹೋಗಿ ವಾಯುದೇವನ ಆರೈಕೆ ಮಾಡಿ ಅಡಿಗೆ ಬೇಯಿಸಿ ನೈವೇದ್ಯ ನೀಡಿದರೆ ಆತನ ಕೋಪ ಕಡಿಮೆಯಾಗಬಹುದು. ಪ್ರಸನ್ನನಾದರೆ ಆತ ನಿನ್ನನ್ನ ಮದುವೆಯಾಗಲೂಬಹುದು.

ಕಾಶಿ ; ಹಾಗಾದರೆ ನಾನೇ ಹೋಗುತ್ತೇನೆ. ದಾರಿ ಹೇಳಜ್ಜಿ.

ಅಜ್ಜಿ : ನೆನಪಿನಲ್ಲಿಡು; ಅವನಲ್ಲಿಗೆ ಹೋಗುವ ದಾರಿಯನ್ನು ಮಾತ್ರ ನಾನು ಹೇಳಬಲ್ಲೆ. ಹೋದಮೇಲೆ ಅವನ ಮನಸ್ಸನ್ನ ಗೆಲ್ಲುವುದು ನಿನಗೇ ಬಿಟ್ಟದ್ದು. ಆರೈಕೆ ಸರಿಯಾಗದಿದ್ದಲ್ಲಿ ಅವನು ನಿನ್ನನ್ನ ಕಣ್ಣೆತ್ತಿ ಕೂಡ ನೋಡಲಾರ. ಆಗ ಮಾತ್ರ ಹಿಂದಿರುಗಿ ಮನೆ ಸೇರುವ ಜವಾಬ್ದಾರಿಯೂ ನಿನ್ನದೇ.

ಕಾಶಿ : ದಾರಿ ಹೇಳಜ್ಜಿ ಮುಂದಿನದನ್ನ ನಾನು ನೋಡಿಕೊಳ್ಳುತ್ತೇನೆ.

ಅಜ್ಜಿ : ಬೆಟ್ಟದ ದಾರಿ ಹಿಡಿದು ನಡೆಯುತ್ತ ನಡೆಯುತ್ತ ಹೋದಂತೆ ಒಂದು ನದಿ ಅಡ್ಡಬರುತ್ತದೆ. ನದಿಯಲ್ಲೊಂದು ನಾವೆ ಇರುತ್ತೆ. ನಾವೆಯಲ್ಲಿ ಕೂತರಾಯ್ತು. ಇದು ನಿನ್ನನ್ನ ನದಿ ದಾಟಿಸುತ್ತದೆ. ನದಿಯಾಚೆ ಒಂದು ಗಾಡಿ ನಿಂತಿರುತ್ತದೆ. ನೀನು ಅದರಲ್ಲಿ ಕೂತರೆ ಸಾಕು, ಗಾಡಿ ತಂತಾನೆ ನಿನ್ನನ್ನ ವಾಯುದೇವನಲ್ಲಿಗೆ ತಲುಪಿಸುತ್ತದೆ.

ಕಾಶಿ : ಆಯಿತಜ್ಜಿ. ಹಾಗಾದರೆ ನಾನು ಹೋಗಿ ವಾಯುದೇವನ ಆರೈಕೆ ಮಾಡಿ ಅವನನ್ನೇ ಮದುವೆಯಾಗುತ್ತೇನೆ. ಇಕೋ…

ಎಂದು ಕಾಶಿ ಹೊರಟೇ ಬಿಟ್ಟಳು. ಕಣಗಿಲೆ ಮತ್ತು ಅಜ್ಜಿ ಆಕೆಯನ್ನ ಬೀಳ್ಕೊಟ್ಟರು.

ಬಿರುಗಾಳಿಯಲ್ಲಿ ಕಾಶಿ ನಡೆದೇ ನಡೆದಳು. ಸುದೈವದಿಂದ ಅವಳು ಮುಂದುವರಿದಂತೆ ಬಿರುಗಾಳಿಯ ಅಬ್ಬರ ಕಡಿಮೆಯಾಗಿ, ವಾತಾವರಣ ಸಹಜ ಸ್ಥಿತಿಗೆ ಬಂತು. ಉತ್ಸಾಹದಿಂದ ಮುಂದುವರಿದಳು. ನಡೆಯುತ್ತ ದಾರಿಗಡ್ಡ ಒಂದು ನದಿ ಸಿಕ್ಕಿತು. ಹ್ಯಾಗೆ ದಾಟುವುದೆಂದು ಅತ್ತಿತ್ತ ನೋಡುವಾಗ ನಾವೆಯೊಂದು ತೇಲುತ್ತ ಬಂತು.

ಹೋಗಿ ನಾವೆಯಲ್ಲಿ ಕೂತಳು. ಮುಂದೇನು ಮಾಡುವುದೆಂದಾಗ ನಾವೆ ತಂತಾನೇ ತೇಲುತ್ತ ಆಚೆ ದಡ ತಲುಪಿತು. ನಾವೆಯಿಂದಿಳಿದು ರಸ್ತೆ ಸುರುವಾಗುವಲ್ಲಿ ಒಂದು ಗಾಡಿ ನಿಂತಿತ್ತು. ಗಾಡಿಯಲ್ಲಿ ಕಂಬಳಿ ಹೊತ್ತು ಬೆನ್ನು ಮಾತ್ರ ಕಾಣಿಸುವ ವ್ಯಕ್ತಿಯೊಬ್ಬ ಕೂತಿದ್ದ. ಕಾಶಿ ಅವನ ಬಳಿಗೆ ಹೋಗಿ “ವಾಯುದೇವರ ಅರಮನೆಗೆ ಹೋಗಬೇಕು ಬರುತ್ತೀಯಾ?” ಎಂದಳು.

ಆತ ಮಾತನಾಡಲಿಲ್ಲ. ಆದರೆ ಇವಳು ಗಾಡಿ ಹತ್ತಿ ಕೂತಳು. ಗಾಡಿ ಚಲಿಸಿತು. ಅವನ ಮುಖ ನೋಡುವುದಕ್ಕೆ ಪ್ರಯತ್ನಿಸಿದಳು, ಕಾಣಲಿಲ್ಲ, ಇವಳೇ ಮುಂದಾಗಿ “ವಾಯುದೇವರ ಅರಮನೆ ತುಂಬ ದೂರ ಇದೆಯಾ?” ಅಂದಳು.

ಮಾತಿಲ್ಲ.

“ಸಂಜೆ ಆಗುವುದರೊಳಗೆ ನಾವು ಅಲ್ಲಿಗೆ ತಲುಪುತ್ತೀವಾ?” ಅಂತ ಕೇಳಿದಳು. ಉತ್ತರವಿಲ್ಲ. ಹುಡುಗಿ ಈಗ ನಿಜವಾಗಿ ಗಾಬರಿಯಾಗಿ, “ನಿನ್ನ ಹೆಸರನ್ನಾದರೂ ಹೇಳಪ್ಪ. ನೀನು ಹೀಗೆ ಸುಮ್ಮನೆ ಕೂತಿದ್ದರೆ ನಾನು ನಿನ್ನ ಜೊತೆ ಬರುವುದಾದರೂ ಹ್ಯಾಗೆ?”

ವ್ಯಕ್ತಿ : ಅಗೊ ಅಲ್ಲಿ ಮೆಳೆಯ ಆಚೆ ಹೊಂಡವಿದೆಯಲ್ಲ. ಆ ನೀರು ತಗೊ, ಅದು ವೈದ್ಯ ವೃಕ್ಷಗಳ ಬೇರುಗಳು ತೇಲಾಡುವ ನೀರು. ಹಾಗೆಯೇ ಅಲ್ಲೊಂದು ಗಿಡದಲ್ಲಿ ಕಾಯಿ ಇದೆಯಲ್ಲ. ಕಿತ್ತುಕೊ. ಆ ನೀರು ಬೆರೆಸಿದ ಬಿಸಿ ನೀರಿನಿಂದ ಸ್ವಾಮಿಯನ್ನ ಸ್ನಾನ ಮಾಡಿಸಿ ಈ ಕಾಯಿಗಳಿಂದ ಉಜ್ಜಿದರೆ ಸ್ವಾಮಿಯ ಮೈಮೇಲಿನ ಕೊಳೆಯೆಲ್ಲ ತೊಳೆದು ಹೋಗುತ್ತದೆ. ಗಾಯಗಳು ಬೇಗ ವಾಸಿಯಾಗುತ್ತವೆ.

ಕಾಶಿ : ವಾಯುದೇವರ ಅರಮನೆಯಲ್ಲಿ ಇವೆಲ್ಲ ಇರೋದಿಲ್ಲವೆ? ನೀನು ಸುಮ್ಮನೆ ಗಾಡಿ ಓಡಿಸಪ್ಪ. ಸದ್ಯ ಮಾತಾಡಿದೆಯಲ್ಲ ಅದೇ ನನ್ನ ಪುಣ್ಯ.

ಹುಡುಗಿ ಗಾಡಿಯಿಂದ ಇಳಿಯಲೂ ಇಲ್ಲ. ಅವನು ಹೇಳಿದ ನೀರು ಮತ್ತು ಕಾಯಿಗಳ ಕಡೆಗೆ ನೋಡಲೂ ಇಲ್ಲ.

ಗಾಡಿ ಹೊರಟಿತು. ಮತ್ತೆ ಮೌನ ಆವರಿಸಿತು. ಕಾಶಿಗೆ ಬೋರಾಗಿ –

“ನೀನು ವಾಯುದೇವರ ಸೇವಕನ?” ಎಂದಳು, ಮಾತಿಲ್ಲ.

“ಅರಮನೆಯಲ್ಲಿ ಯಾರ್ಯಾರಿದ್ದಾರೆ?” ಎಂದು ಕೇಳಿದಳು. ಉತ್ತರವಿಲ್ಲ.

“ಹೋಗಲಿ, ಈಗಲಾದರೂ ನಿನ್ನ ಹೆಸರು ಹೇಳಪ್ಪ” ಎಂದಳು. ಈಗ ವ್ಯಕ್ತಿ ಮಾತಾಡಿದ.

ವ್ಯಕ್ತಿ : ಅಗೊ ಅಲ್ಲಿ ಅಮೃತವಲ್ಲಿ ಹಬ್ಬಿದೆಯಲ್ಲ? ಅದರ ಸೊಪ್ಪು ಕಿತ್ತುಕೊ, ವಾಯುದೇವರ ಮೈ ಗಾಯಗಳಿಗೆ ಉಜ್ಜಿದರೆ ಒಂದೆ ದಿನದಲ್ಲಿ ವಾಸಿಯಾಗುತ್ತದೆ. ಹಾಗೆಯೇ ಅದರ ಪಕ್ಕದ ಬಳ್ಳಿಯನ್ನೂ ಕಿತ್ತುಕೊ. ಅದರಲ್ಲಿ ಸಂಜೀವಿನಿ ರಸವಿದೆ. ಅದರ ರಸ ಸೇವಿಸಿದರೆ ಆ ಕ್ಷಣವೆ ಚೇತರಿಕೆ ಉಂಟಾಗುತ್ತದೆ.

ಕಾಶಿ : ವಾಯುದೇವರ ಹಿತ್ತಲ ತೋಟದಲ್ಲಿ ಇಂಥ ಸೊಪ್ಪು ಇರುವುದಿಲ್ಲವೆ? ನೀನು ಗಾಡಿ ಓಡಿಸಪ್ಪ.

ಗಾಡಿ ಯಥಾಪ್ರಕಾರ ಹೊರಟಿತು. ಮತ್ತೆ ಅದೇ ಮೌನ. ಹುಡುಗಿಗೆ ಬೋರಾಯಿತು.

ಕಾಶಿ : ಹೋಗಲಿ ಅರಮನೆ ಹ್ಯಾಗಿದೆ? ವಾಯುದೇವರು ಹ್ಯಾಗೆ? ಕೋಪದವರ? ನನ್ನನ್ನ ಇಷ್ಟಬಡಬಹುದ ಅವರು? ಚಿನ್ನ ಬೆಳ್ಳಿ ಆಭರಣಗಳು ಅರಮನೆಯಲ್ಲಿ ತುಂಬಿರಬೇಕಲ್ಲ? ಅವರಿಗೆ ಬೇರೆ ರಾಣಿಯರಿದ್ದಾರೆಯೆ? ಮನೆಯಲ್ಲಿ ಯಾರ್ಯಾರಿದ್ದಾರೆ? ಅತ್ತೆ ಮಾವ ನಾದಿನಿಯರು ಇದ್ದಾರೆಯೆ?

ಅಷ್ಟರಲ್ಲಿ ವ್ಯಕ್ತಿ ಗಾಡಿ ನಿಲ್ಲಿಸಿದ.

ವ್ಯಕ್ತಿ : ಅಗೊ ಅಲ್ಲಿ ಹುಲ್ಲಿನ ಮೇಲೆ ಅಪರೂಪಕ್ಕೆ ಇಬ್ಬನಿ ಬಿದ್ದಿದೆ. ಸ್ನಾನವಾದ ಮೇಲೆ ಇಬ್ಬನಿಯನ್ನ ವಾಯುದೇವರ ಮೈಗುಜ್ಜಿದರೆ ಹೊಸ ಯೌವನ ಬರುತ್ತದೆ. ಅದನ್ನ ತೆಗೆದುಕೊ.

ಕಾಶಿ : ಅಂದರೆ ಅವರಿಗೆ ಭಯಂಕರ ರೋಗ ಇದೆಯ?

ವ್ಯಕ್ತಿ : ಭಯಂಕರ ರೋಗವೇನಲ್ಲ. ಸರಿಯಾಗಿ ಆರೈಕೆ ಮಾಡಿದರ ವಾಸಿಯಾಗಬಹುದಾದ ರೋಗ.

ಕಾಶಿ : ವಯಸ್ಸಾಗಿದೆಯೆ ಅವರಿಗೆ?

ವ್ಯಕ್ತಿ : ಹಾಗೇನಿಲ್ಲ, ಕೊಚ್ಚೆ ಕೊಳಚೆ ಅನ್ನದೆ ಭೂಲೋಕದ ತುಂಬ ಎಲ್ಲೆಂದರಲ್ಲಿ ಅಡ್ಡಾಡಿ ಬರುತ್ತಾರೆ. ಜನ ಈಗೀಗ ಅತಿಯಾಸೆಯಿಂದ ಸಿಕ್ಕ ಸಿಕ್ಕಲ್ಲಿ ಹೊಲಸು ಮಾಡಿಕೊಳ್ತಾರೆ. ಅದೆಲ್ಲ ಇವರಿಗೆ ತಾಗಿ ಇವರೂ, ಇವರುಸಿರು ತಾಗಿ ಜನರೂ ಪರಸ್ಪರ ಪ್ರಾಣಗಳಿಗೆ ಅಪಾಯ ತಂದುಕೊಳ್ಳುತ್ತಾರೆ. ಬಿರುಗಾಳಿ ಬೀಸುತ್ತಿದೆಯಲ್ಲ, ಅದು ಇವರ ನಿಟ್ಟುಸಿಸರು. ನೀನು ಸರಿಯಾಗಿ ಆರೈಕೆ ಮಾಡಿದರೆ ಅದೆಲ್ಲ ವಾಸಿಯಾಗುತ್ತದೆ. ಅದಕ್ಕೇ ಹೇಳಿದೆ, ಆ ಇಬ್ಬನಿ ಬಳಿದುಕೊ.

ಕಾಶಿ : ಅದೆಲ್ಲ ಆಮೇಲೆ ನೋಡೋಣ, ಮೊದಲು ವಾಯುದೇವರನ್ನ ತೋರಿಸಪ್ಪ.

ಗಾಡಿ ಮೌನವಾಗಿ ಚಲಿಸಿತು.

ಗಾಡಿ ಚಲಿಸುತ್ತ ಬೆಟ್ಟದ ಹಳೇ ಗವಿಯಂಥ ಮನೆಗೆ ತಲುಪಿತು. ಆಳುಗಳಿಲ್ಲ, ಜನ ಜವಾನರಿಲ್ಲ. ಇಡೀ ಪ್ರದೇಶ ಭಿಕೋ ಎನ್ನುತ್ತಿತ್ತು. ಸಾಲದ್ದಕ್ಕೆ ದುರ್ವಾಸನೆ ಮೂಗಿಗೆ ಹೊಡೆಯುತ್ತಿತ್ತು. ನಿರಾಸೆಯಿಂದ ಹುಡುಗಿ ವ್ಯಕ್ತಿಯ ಕಡೆಗೆ ನೋಡಿದಳು.

ವ್ಯಕ್ತಿ : ಇದೇ ಅರಮನೆ.

ಕಾಶಿ : ವಾಯುದೇವರೆಲ್ಲಿ?

ವ್ಯಕ್ತಿ : ಅಗೊ ಗವಿಯ ಒಳಗಡೆ ಇದ್ದಾರೆ. ನೀನು ಅಲ್ಲಿಗೆ ಹೋಗಿ ಆರೈಕೆ ಮಾಡಲು ಬಂದಿರುವುದಾಗಿ ಹೇಳಿಕೊ. ಅವರೊಮ್ಮೆ ನಿನ್ನ ನೋಡಿದರೆ ಸಾಕು. ನೀನು ಮುಂದೇನು ಮಾಡಬೇಕೆಂಬುದನ್ನು ಅವರೇ ಹೇಳುತ್ತಾರೆ.

ಹುಡುಗಿಗೆ ಈಗ ಗೊತ್ತಾಯಿತು. ಗವಿಯ ಒಳಗಡೆಯಿಂದಲೇ ದುರ್ವಾಸನೆ ಬರುತ್ತಿದೆ ಎಂದು. ಮೂಗು ಮುಚ್ಚಿಕೊಂಡು ಒಳಕ್ಕೆ ಹೋದಳು.

ವಾಯುದೇವ ಈ ಕಡೆ ಬೆನ್ನು ಮಾಡಿಕೊಂಡು ಹಾಸಿಗೆಯ ಮೇಲೆ ನರಳುತ್ತಾ ಮಲಗಿದ್ದ. ಕಾಶಿ ಅವನ ಸಮೀಪ ಹೋಗಿ ತಾನು ಬಂದಿರುವುದನ್ನು ಸೂಚಿಸಲು ಕೆಮ್ಮಿ ಪುನಃ ಮೂಗು ಮುಚ್ಚಿಕೊಂಡಳು. ವಾಯುದೇವ ಇವಳನ್ನು ನೋಡಲು ಈ ಕಡೆ ತಿರುಗಿದ. ಅಬ್ಬ! ಮೈತುಂಬ ಕೊಳತೆ ಕೀವು ರಕ್ತ ಸೋರುತ್ತಿದ್ದ, ಹುಣ್ಣುಗಳಿಗೆ ಮೂರು ಕೋಟಿ ನೊಣ ಮುತ್ತಿ ಗತ ಗತ ನಾರುತ್ತಿದ್ದ, ವಿಕಾರನಾಗಿ ಅಸಹ್ಯಕರ ಆಕಾರದಲ್ಲಿದ್ದ ವಾಯುದೇವನ ನೋಡಿ ಕಿಟಾರನೆ ಕಿರಿಚಿ ಕಾಶಿ ಹೊರಗೋಡಿ ಬಂದಳು. ಪುನಃ ಭಯಂಕರ ಬಿರುಗಾಳಿ ಬೀಸತೊಡಗಿ, ಲೋಕದ ಬದುಕು ಕದಡಿಬಿಟ್ಟಿತು.

ಈ ಕಡೆ ಗುಡಿಸಲಲ್ಲಿ ಏನು ಕಥೆ ನಡೆಯಿತೆಂದರೆ – ಬಿರುಗಾಳಿ ಪುನಃ ಬೀಸತೊಡಗಿತಲ್ಲ. ಗುಡಿಸಲಲ್ಲಿದ್ದ ಕಣಗಿಲೆ ಮತ್ತು ಅಜ್ಜಿಗೆ ಚಿಂತೆಯಾಯಿತು.

ಬಿರುಗಾಳಿಯ ರಭಸ ಹೆಚ್ಚಾದ ಮೇಲಂತೂ ಕಾಶಿಗೇನೋ ಅಪಾಯ ಒದಗಿತೆಂದೇ ಗಾಬರಿಯಾದರು.

ಕಣಗಿಲೆ : ಯಾಕಜ್ಜಿ ಹೀಗಾಯಿತು? ಎಂದಳು.

ಅಜ್ಜಿ : ಅವಳಿಗೆ ಹೇಳಿದ್ದೆಲ್ಲ ನೆನಪಿದೆಯಲ್ಲ?

ಕಣಗಿಲೆ : ನೆನಪಿದೆ.

ಅಜ್ಜಿ : ಹಾಗಿದ್ದರೆ ಹೊರಡು.

ಕಣಗಿಲೆ ಹೊರಟಳು. ಅವಳು ಹೋದ ದಿಕ್ಕನ್ನೇ ನೋಡುತ್ತಾ ಅಜ್ಜಿ ನಿಂತಳು.

ಕಾಶಿ ಹೋದ ದಾರಿಯಲ್ಲೇ ಕಣಗಿಲೆ ಹೋದಳು. ಅದೇ ನದಿ ಅಡ್ಡ ಬಂತು. ಈಗಲೂ ಬಿರುಗಾಳಿಯ ರಭಸ ಕಡಿಮೆಯಾಯಿತು. ನದಿಯನ್ನ ಹ್ಯಾಗೆ ದಾಟುವುದೆಂದು ಅತ್ತಿತ್ತ ನೋಡುತ್ತಿದ್ದಾಗ ನಾವೆ ಬಂತು. ಆಚೆ ಹೋಗಿ ಸಿದ್ಧವಾಗಿದ್ದ ಗಾಡಿಯಲ್ಲಿ ಕುಳಿತಳು. ಈಗಲೂ ಅದೆ ವ್ಯಕ್ತಿ ಗಾಡಿಯಲ್ಲಿ ಕೂತಿದ್ದ. ಮೌನವಾಗಿ ಗಾಡಿ ಚಲಿಸಿತು. ವ್ಯಕ್ತಿ ಸುಮ್ಮನಿದ್ದ. ಇವಳೂ ಮಾತಾಡುವ ಗೋಜಿಗೆ ಹೋಗಲಿಲ್ಲ. ತುಸು ಹೊತ್ತು ಹೀಗೇ ಹೋದ ಬಳಿಕ ವ್ಯಕ್ತಿ ಮಾತಾಡಿದ:

ವ್ಯಕ್ತಿ : ಅಗೊ ಅಲ್ಲಿ ಮೆಳೆಯಾಚೆ ಹೊಂದ ಇದೆಯಲ್ಲ? ನೀರು ತಗೊ. ಅದು ವೈದ್ಯ ವೃಕ್ಷಗಳ ಬೇರು ತೇಲಾಡುವ ನೀರು. ಹಾಗೆಯೇ ಆ ಗಿಡದ ಕಾಯಿ ಕಿತ್ತುಕೊ. ಆ ನೀರನ್ನ ಬೆರೆಸಿ ಬಿಸಿನೀರಿನಿಂದ ಸ್ವಾಮಿಯನ್ನ ಸ್ನಾನ ಮಾಡಿಸಿ ಕಾಯಿಗಳಿಂದ ಉಜ್ಜಿದರೆ ಮೈಮೇಲಿನ ಕೊಳೆಯೆಲ್ಲ ತೊಳೆದು ಹೋಗುತ್ತದೆ.

ಹುಡುಗಿ ಮಾತಾಡದೆ ಇಳಿದು, ಕಾಯಿ ಹರಿದುಕೊಂಡು ಉಡಿಯಲ್ಲಿ ತುಂಬಿಕೊಂಡಳು. ಬರುವಾಗ ಅಲ್ಲೇ ಬಿದ್ದಿದ್ದ ಕಾಯಿ ಚಿಪ್ಪಿನಲ್ಲಿ ನೀರು ತುಂಬಿಕೊಂಡು ಬಂದು ಗಾಡಿ ಹತ್ತಿದಳು. ಗಾಡಿ ಚಲಿಸಿತು.

ಮೌನವಾಗಿ ಗಾಡಿ ಚಲಿಸುತ್ತಿದ್ದಾಗ ಗಾಡಿಯಲ್ಲಿದ್ದ ವ್ಯಕ್ತಿ ಹಿಂದಿರುಗಿ ನೋಡಲೇ ಇಲ್ಲ. ಇವಳಿಗೂ ನೋಡಬೇಕೆಂದು ಅನ್ನಿಸಲಿಲ್ಲ. ಅಷ್ಟರಲ್ಲಿ ವ್ಯಕ್ತಿ ಪುನಃ ಗಾಡಿಯನ್ನು ನಿಲ್ಲಿಸಿ ಹೇಳಿದ.

ವ್ಯಕ್ತಿ : ಅಗೊ ಅಲ್ಲಿ ಅಮೃತವಲ್ಲಿ ಇದೆಯಲ್ಲ. ಅದರ ಸೊಪ್ಪು ಕಿತ್ತುಕೊ, ವಾಯುದೇವರ ಮೈ ಗಾಯಗಳಿಗೆ ಉಜ್ಜಿದರೆ ಒಂದೇ ದಿನದಲ್ಲಿ ವಾಸಿಯಾಗುತ್ತದೆ. ಹಾಗೆಯೇ ಅದರ ಪಕ್ಕದ ಬಳ್ಳಿಯನ್ನೂ ಕಿತ್ತುಕೊ. ಅದರಲ್ಲಿ ಸಂಜೀವಿನಿ ರಸವಿದೆ. ಅದನ್ನ ಮೈಗೆ ಉಜ್ಜಿದರೆ ಮೈಯೊಳಗೆ ಎಂಥ ರೋಗಗಳಿದ್ದರೂ ಆ ಕ್ಷಣದಲ್ಲಿ ವಾಸಿಯಾಗಿ ಚೇತರಿಕೆ ಉಂಟಾಗುತ್ತದೆ. ಆನಂತರ ಅಕೋ ಅಲ್ಲಿ ಹುಲ್ಲಿನ ಮೇಲೆ ಇಬ್ಬನಿಯಿದೆ. ತಗೊ.

ಹುಡುಗಿ ಏನೇನೂ ಮಾತಾಡದೆ ಕೆಳಗಿಳಿದು ಅವನು ಹೇಳಿದಲ್ಲಿಗೆ ಹೋಗಿ ಅಮೃತವಲ್ಲಿಯ ಸೊಪ್ಪು ಹಾಗೂ ಪಕ್ಕದ ಬಳ್ಳಿಯನ್ನು ಕಿತ್ತುಕೊಂಡು ಬಂದಳು. ಗಾಡಿ ಯಥಾಪ್ರಕಾರ ಮೌನವಾಗಿ ಮುಂದುವರೆಯಿತು. ಮುಂದೆ ಬಂದು ಇಬ್ಬನಿಯನ್ನು ತಗೊಂಡು ಕೊನೆಗೆ ವಾಯುದೇವನ ಗವಿಯಂಥ ಅರಮನೆಗೆ ಬಂದರು. ವ್ಯಕ್ತಿ ಹೇಳಿದಂತಯೇ ಗವಿಯೊಳಕ್ಕೆ ಹೋಗಿ ವಾಯುದೇವನ ಬಳಿ ನಿಂತು:

“ಸೇವೆ ಮಾಡಲು ಬಂದಿದ್ದೇನೆ. ದಯಮಾಡಿ ಅವಕಾಶ ಮಾಡಿಕೊಡಿ ಸ್ವಾಮಿ” ಎಂದಳು. ವಾಯುದೇವ ಈ ಕಡೆ ತಿರುಗಿದ. ಮೈತುಂಬ ಹುಣ್ಣುಗಳಿಂದ ವಿಕಾರನಾಗಿ ಮುರಿದ ಮಹಿಮನಾಗಿ ನರಳುತ್ತ, ಕ್ಷಣಕ್ಷಣಕ್ಕೂ ಹೊಸ ದುಃಖಗಳ ದುಃಖಿಸುತ್ತ ಅಸಹ್ಯಕರ ಆಕಾರದಲ್ಲಿ ಬಿದ್ದಿದ್ದ ಅವನನ್ನು ನೋಡಿ “ದೇವರಿಗೂ ಇಂಥ ಗತಿ ಬರಬೇಕೆ?’ ಎಂದು ಮಮ್ಮಲ ಮರುಗಿ ಸೇವೆ ಮಾಡಲು ಮುಂದಾದಳು. ವಾಯುದೇವನ ಹುಬ್ಬಿನ ಗಂಟು ಸಡಲಿ ಮುಗುಳ್ನಕ್ಕು ಕೇಳಿದ.

ವಾಯುದೇವ : ಹೊಂಡ ನೀರು ತಂದೆಯಾ? ಮದ್ದಿನಕಾಯಿ ತಂದೆಯಾ?

ಕಣಗಿಲೆ : ತಂದಿದ್ದೇನೆ ಸ್ವಾಮಿ.

ವಾಯುದೇವ : ಒಳಗೆ ಬಚ್ಚಲಿಗೆ ಹೊಗಿ ಒಲೆಯ ಮೇಲಿನ ಹಂಡೆಗೆ ಹೊಂಡದ ನೀರು ಸುರಿ. ನೂರು ಚೊಂಬು ನೀರು ಕಾಯಿಸಿ ಮದ್ದಿನ ಕಾಯಿ ಉಜ್ಜಿನ ಸ್ನಾನ ಮಾಡಿಸು.

ಕಣಗಿಲೆ ಒಳಗೆ ಹೋಗಿ ಅಲ್ಲಿದ್ದ ಹಂಡೆಗೆ ತಾನು ತಂದ ನೀರು ಬೆರೆಸಿ ನೀರು ಕಾಯಿಸಿದಳು. ಆಮೇಲೆ ವಾಯುದೇವರನ್ನು ಮೆಲ್ಲಗೆ ಕರೆದೊಯ್ದು ನೂರು ಚೊಂಬು ನೀರಿನಿಂದ ಮದ್ದಿನ ಕಾಯುಜ್ಜಿ ಸ್ನಾನ ಮಾಡಿಸಿದಳು. ಹೊರಗೆ ಕರೆತಂದು ಮೆಲ್ಲಗೆ ಮೈಗೆ  ಸೊಪ್ಪಿನ ರಸ ಲೇಪಿಸಿ, ಮೈ ಉರಿಯತೊಡಗುತ್ತಲೂ ತಾನು ತಂದ ತಣ್ಣನೆಯ ಇಬ್ಬನಿಯಿಂದ ಮೈ ಸವರಿದಿಳು. ಸ್ವಲ್ಪ ಹೊತ್ತು ವಿಶ್ರಾಂತಿಗೆ ಬಿಟ್ಟು ಹೊರಬಂದಳು. ನೋಡಿದರೆ ಒಬ್ಬ ಮುದುಕಿ ಸಂತೋಷದಿಂದ ಇವಳು ಆರೈಕೆ ಮಾಡುವುದನ್ನೇ ನೋಡುತ್ತಾ ನಿಂತಿದ್ದಳು.

ಮುದುಕಿ : ಸಂಜೀವಿನಿ ರಸದ ಬಳ್ಳಿ ತಂದಿದ್ದೀಯಾ ಮಗಳೆ?

ಕಣಗಿಲೆ : ತಂದಿದ್ದೇನೆ ತಾಯಿ.

ಮುದುಕಿ : ವಾಯುದೇವನಿಗೆ ಎಚ್ಚರವಾಗದ ಹಾಗೆ ಮೈಗೆ ಲೇಪಿಸು, ಆಮೇಲೆ ಅನ್ನ ಸಾರು ಮಾಡು ಎಂದಳು.

ಮುದುಕಿ ಹೇಳಿದಂತೆ ಸಂಜೀವಿನಿ ರಸವನ್ನ ಮೆಲ್ಲಗೆ ವಾಯುದೇವರ ಮೈಗೆ ಲೇಪಿಸಿದಳು. ಅಷ್ಟರಲ್ಲಿ ಕಾಡಿನಿಂದ ಹಸು ಬಂದವು. ಕೊಟ್ಟಿಗೆಯಲ್ಲಿ ಅವನ್ನು ಕಟ್ಟಿ ಕಪಿಲೆಯ ಹಾಲು ಕರೆದಳು. ನೆಲ ಒಲೆ ಸಾರಿಸಿ ಮಲ್ಲಿಗೆ ಬಣ್ಣದ ಅನ್ನ, ಪಚ್ಚೆ ಬಣ್ಣದ ಸೊಪ್ಪಿನ ಸಾರು ಮಾಡಿ ಮುದುಕಿಗೂ ಗಾಡಿಯವನಿಗೂ ಬಡಿಸಿದಳು. ಅಷ್ಟರಲ್ಲಿ ವಾಯುದೇವನ ಮೈ ಹಗುರಾಗಿ ಸುಮ್ಮಾನ ಸುಖನಿದ್ದೆಯಿಂದ ಎದ್ದು ಕುಳಿತ. ಅವನಿಗೂ ಊಟ ಬಡಿಸಿದಳು.

ಎಲ್ಲರ ಊಟವಾದ ಮೇಲೆ ತಾನು ಊಟ ಮಾಡಿ ತಟ್ಟೆ ಸಾಮಾನು ಅಡಿಗೆ ಪಾತ್ರೆಗಳ ಒಳಗಿಟ್ಟು ಹೊರಗೆ ಬಂದು ನೋಡಿದರೆ ಮುದುಕಿ ಅಂದರೆ ವಾಯುದೇವರ ತಾಯಿ ಸಂತೋಷದಿಂದ ತನ್ನ ಅಜ್ಜಿಯ ಕೈಗೆ ಬಾಗಿನ ನೀಡುತ್ತಿದ್ದಾಳೆ! ಮುದುಕಿ ಕಣಗಿಲೆಗೆ ಹೇಳಿದಳು

ಮುದುಕಿ : ನಾನು ಕಾಡಿನ ದೆವತೆ, ಅವನು ನನ್ನ ಮಗ ವಾಯುದೇವ. ನೀನು ನನ್ನ ಸೊಸೆಯಾಗಬೇಕೆಂದು ನನ್ನ ಆಸೆ, ವಾಯು ದೇವನಿಗೂ ಒಪ್ಪಿಗೆಯಾಗಿದೆ. ನಿನಗೆ ಒಪ್ಪಿಗೆಯೆ ಮಗಳೆ?

ಅಷ್ಟರಲ್ಲಿ ವಾಯುದೇವನೂ ಅಲ್ಲಿಗೆ ಬಂದುದರಿಂದ ಕಣಗಿಲೆ ನಾಚಿ ಅಜ್ಜಿಯ ಮರೆಗೆ ನಿಂತಳು. ಅಲ್ಲಿಗೆ ಒಪ್ಪಿಕೊಂಡಳೆಂದಾಯಿತಲ್ಲ? ಅಂದ ಹಾಗೆ ಕಾಶಿ ಎಲ್ಲಿ ಹೋದಳೆಂದು ನಿಮಗೆ ಆತಂಕವಾಗಿರಬಹುದಲ್ಲವೆ? ಅವಳೂ ಅಜ್ಜಿಯ ಹಿಂದೆ ನಿರಾಶೆಯಿಂದ ನಿಂತಿದ್ದಳು.

* * *