ಒಂದಾನೊಂದು ಕಾಲದಲ್ಲಿ ಮೂಡುಮಲೆಯ ಸೂರ್ಯನಾರಾಯಣಸ್ವಾಮಿ ಬೆಳಗುವ ಕಾಡು, ಸದಾ ತುಂಬಿ ಹರಿವ ನದಿಗಳಿಂದ, ಎತ್ತರ ಮತ್ತು ಸದಾ ಹಸಿರಾದ ತರುಮರಾದಿಗಳಿಂದ ಶೋಭಾಯಮಾನವಾಗಿತ್ತು. ಕಾಡಿಗೆ ಕೈಕಾಲು ಮೂಡಿದಂತೆ ನಾಡು ಬೆಳೆಯಿತು. ಕಾಡಿಗೆ ಋತುಮಾನ ಬಂದರೆ ನಾಡಿಗೆ ಬಣ್ಣವೇರುತ್ತಿತ್ತು. ಕಾಡಿನ ಮೂಗುತಿಯ ಹಾಗೆ ಅಲ್ಲೊಂದು ಪಟ್ಟಣ, ಹೆಸರು ಶಿವಾಪುರ. ಸದರಿ ಶಿವಾಪುರದಲ್ಲಿ ಕೈಜಾರುವಂಥ ಕಲ್ಲಿನಲ್ಲಿ ಕಟ್ಟಿಸಿದ, ಸಾಲಿಗೆ ಸಾವಿರ ಕಂಬ, ಮೂಲೆಗೆ ಮುನ್ನೂರು ಕಂಬಗಳಿರುವಂಥಾ ನೂರಂಕಣದ ಅರಮನೆ. ಮಹಡೀ ಮ್ಯಾಲೆ ಮಹಡಿ ಉಂಟು, ಮ್ಯಾಲೆ ಚಿನ್ನದ ಕಳಸ ಉಂಟು. ಮುತ್ತಿನ ಮುಂಬಾಗಿಲು ರತ್ನದ ತೊಲೆಗಂಬ. ಹವಳದ ಹರಿಗೋಡೆ ಆ ಅರಮನೆಗೆ!

ಶಿವಾಪುರಕ್ಕೆ ಸೋಮರಾಯನ ಒಡೆತನ; ಅವನು ಕಾಡಿಗೂ ರಾಜ, ನಾಡಿಗೂ ರಾಜ. ಅವನು ವೀರ ಧೀರ ಶೂರ. ಹಿಂದೆ ಸಾವಿರ ದಂಡು, ಮುಂದೆ ಸಾವಿರ ದಂಡು, ಗೌಡಳಿಕೆ ಪಾಳೇಗಾರ ಮಂತ್ರಿ ಮಾನ್ಯರನ್ನಿಟ್ಟುಕೊಂಡು ಅಷ್ಟೈಶ್ವರ‍್ಯ ಐಭೋಗ ಸಕಲ ಸೌಭಾಗ್ಯದಿಂದ ರಾಜ್ಯವಾಳುತ್ತಿದ್ದ. ಸೂರ್ಯನಾರಾಯಣ ಸ್ವಾಮಿ ಹೆಚ್ಚು ಉದಾರವಾಗಿ ಇಲ್ಲಿಯ ಜೀವರಾಶಿಗೆ ಚೈತನ್ಯ ನೀಡುತ್ತಿದ್ದ. ಯಾಕೆಂದರೆ ಅರಮನೆಯ ಮೇಲುಪ್ಪರಿಗೆಯಲ್ಲಿ ಕುಳಿತು ಕಿಡಿಕಿಯಿಂದ ನದಿಹಳ್ಳ ಕಾಡುಉಪವನ ಉದ್ಯಾನಗಳನ್ನು ನೋಡುವುದರಲ್ಲಿ ಈ ರಾಜ ಸುದೈವ ಕಾಣುತ್ತಿದ್ದ.

ಇಂತಿರಲಾಗಿ ಒಂದು ದಿನ ವೈರಿ ಸೈನಿಕರು ಸದರಿ ರಾಜನ ಉದ್ಯಾನ ಉಪವನಕ್ಕೆ ನುಗ್ಗಿ ಕಾಳಜಿಯಿಂದ ಬೆಳೆಸಿದ ಎತ್ತರ ಮತ್ತು ನೀಳವಾದ ಮರಗಳನ್ನು ಕಡಿಯತೊಡಗಿದರು. ಒಂದೊಂದು ಮರ ಉರುಳುವಾಗಲೂ ಹಕ್ಕಿ ಪಕ್ಷಿಗಳು ಕಿರಿಚಿ, ವನ್ಯಜೀವಿ ಪ್ರಣಿಗಳು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದವು. ವನಪಾಲಕ ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ರಾಜನಲ್ಲಿ ಹೋಗಿ ದೂರು ಹೇಳಿದ. ಕೂಡಲೇ ಸೈನ್ಯ ಕಳಸಿ, ಬೆಟ್ಟದಂಥ ಬಿಳಿಕುದುರೆಯೇರಿ ಹಿಂದಿನಿಂದ ರಾಜನೂ ಮಂತ್ರಿ ಮಾನ್ಯರೊಂದಿಗೆ ಕಾಡಿಗೆ ಹೊರಟ.

ಒಂದು ಕಡೆ ಯುದ್ಧ ನಡೆಯುತ್ತಿರಬೇಕಾದರೆ, ಇನ್ನೊಂದು ಕಡೆಯಿಂದ ರಾಜ ಯುದ್ಧ ನಡೆಯುವಲ್ಲಿಗೆ ಬರುತ್ತಿದ್ದಾಗ ಕಾಡಿನಲ್ಲಿ ಯಾರೋ ಹುಡುಗಿ ಕೂಗಿದಂತಾಯ್ತು. ಯಾರು ಕೂಗಿದರೆಂದು ತಿಳಿಯಲು ರಾಜ ಕುದುರೆ ನಿಲ್ಲಿಸಿ ಸುತ್ತ ನೋಡಿದ. ಯಾರೂ ಕಾಣಲಿಲ್ಲ. ಆದರೆ ಮರದ ಮರೆಯಿಂದ ವನಪಾಲಕ ಬಂದ. ರಾಜ ಕೇಳಿದ;

ರಾಜ : ಏನಯ್ಯಾ ಯುದ್ಧಕ್ಕೆ ಹೆದರಿ ಇಲ್ಲಿ ಅಡಗಿಕೊಂಡಿದ್ದೀಯಾ?

ವನಪಾಲಕ : ಇಲ್ಲ ಪ್ರಭು, ನನ್ನ ಮಗಳ ರಕ್ಷಣೆಗಾಗಿ ನಿಂತುಕೊಂಡಿದ್ದೆ.

ರಾಜ : ಮಗಳು? ಎಲ್ಲಿದ್ದಾಳೆ?

ವನಪಾಲಕ : ವೈರಿ ಸೈನಿಕರಿಗೆ ಹೆದರಿ ಮರವಾಗಿದ್ದಾಳೆ ಪ್ರಭು.

ಈ ತನಕ ಸುಮ್ಮನಿದ್ದ ಮಂತ್ರಿ ಕೇಳಿದ;

ಮಂತ್ರಿ : ಏನಯ್ಯಾ ಮನುಷ್ಯರು ಮರವಾಗುವುದುಂಟೆ? ಕಟ್ಟುಕಥೆ ಹೇಳತ್ತೀಯಾ?

ಎಂದು ಗದರಿದ.

ವನಪಾಲಕ : ಕಥೆಯಲ್ಲ ಸತ್ಯ ಸ್ವಾಮಿ.

ಮಂತ್ರಿ : ಹ್ಯಾಗೆ ನಂಬುವುದು?

ಗಾಬರಿಯಿಂದ ವನಪಾಲಕ ಹೇಳಿದ: ಇಗೋ ನೀವೇ ನೋಡಿ

ಎಂದು ಹೇಳುತ್ತ ಕೈಯಲ್ಲಿದ್ದ ಚಿಕ್ಕ ಕಲ್ಲನ್ನು ಮೆಲ್ಲಗೆ ಒಂದು ಎಳೆಯ ಸಂಪಿಗೆ ಮರದ ಮೇಲೆ ಎಸೆದ. ಆಶ್ಚರ್ಯ! ನೋಡನೋಡುತ್ತಿದ್ದಂತೆ ಮರದ ರೂಪವಡಗಿ ಅದರ ಸ್ಥಳದಲ್ಲಿ ಸುಂದರಿಯಾದ ಕನ್ಯೆಯೊಬ್ಬಳು ನಿಂತು ಕಣ್ಣಿಗೆ ಹಬ್ಬವಾದಳು. ರಾಜ, ಮಂತ್ರಿ ಮಾನ್ಯರೆಲ್ಲಾ ತಬ್ಬಿಬ್ಬಾದರು.

ಮಂತ್ರಿ : ಏನಯ್ಯಾ ಇದು ಭೂತಚೇಷ್ಟೆಯೊ, ಮಂತ್ರಗಾರಿಕೆಯೊ?

ವನಪಾಲಕ ಕನ್ಯೆಯ ಬಳಿಗೆ ಹೋಗಿ ಹೇಳಿದ : ಭೂತಚೇಷ್ಟೆಯೂ ಅಲ್ಲ, ಮಂತ್ರಿಗಾರಿಕೆಯೂ ಅಲ್ಲ.

ಈಕೆ ನನ್ನ ಮಗಳು, ಸ್ವಂತ ಮಗಳಲ್ಲ, ಕಾಡಿನಲ್ಲಿ ಸಿಕ್ಕವಳು. ಸಂಪಿಗೆರಾಣಿ ಅಂತ ನಾನೇ ಹೆಸರಿಟ್ಟೆ. ಆಮೇಲೆ ತಿಳಿಯಿತು: ಈಕೆ ವನದೇವತೆಯ ಮಗಳೆಂದು. ಅವಳೇ ನಾಲ್ಕು ಚಿಕ್ಕ ಕಲ್ಲು ಆರಿಸಿಕೊಡುತ್ತಾಳೆ. ಒಂದೊಂದನ್ನೇ ಅವಳ ಮೇಲೆ ಎಸೆಯುತ್ತಾ ಹೋದರೆ ಒಂದರಿಂದ ಸಂಪಿಗೆ ಮರವಾಗುತ್ತಾಳೆ. ಇನ್ನೊಂದನ್ನ ಎಸೆದರೆ ಹೂ ಬಿಡುತ್ತಾಳೆ. ಮೂರನೆಯದರಿಂದ ಹೂ ಉದುರಿಸುತ್ತಾಳೆ. ನಾಲ್ಕನೆಯ ಕಲ್ಲು ಎಸೆದರೆ ಹೀಗೆ ಪುನಃ ಹುಡುಗಿಯಾಗುತ್ತಾಳೆ.

ಮಂತ್ರಿ ಮುಂದೆ ಬಂದು “ಈ ಪವಾಡವನ್ನು ನಾವು ನೋಡಬಹುದೆ?” – ಅಂದ.

ವನಪಾಲಕ ಆಗಲೆಂದು “ನಿನ್ನ ಪವಾಡವನ್ನು ತೋರಿಸು ಮಗಳೆ” ಎಂದು ಹೇಳಿದ.

ಸಂಪಿಗೆ ನಾಲ್ಕು ಚಿಕ್ಕ ಕಲ್ಲು ಆಯ್ದು ರಾಜನ ಕೈಗಿಟ್ಟು ಮರಗಳಿಲ್ಲದಲ್ಲಿಗೆ ಹೋಗಿ ನಿಂತಳು. ಎಳೆ ಬಿಸಿಲಿನಲ್ಲಿ ಮಲ್ಲಿಗೆಯ ಬಳ್ಳಿ ಸುಳಿದಂತಿತ್ತು ಅವಳ ನಡಿಗೆ.

ಮಹಾರಾಜ ಮೆಲ್ಲಗೆ ಅವಳ ಮೇಲೊಂದು ಕಲ್ಲೆಸೆದ. ಕಣ್ಣೆದುರಲ್ಲೇ ಕನ್ಯೆ ಇದ್ದವಳು ಬೆಳೆದು ಎಳೆಯ ಸಂಪಿಗೆ ಮರವಾದಳು! ನೋಡಿದರೆ ಮರದ ಮೇಲೆ ಶಿವಲೋಕದ ತಂಗಾಳಿ ಬೀಸಿ ಚಿಗುರೆಲೆ ನಲುಗುತ್ತಿವೆ! ಮರಿಹಕ್ಕಿಗಳು ಹಾರಿಬಂದು ಮರದಲ್ಲಿ ಚೆಲ್ಲಾಟವಾಡುತ್ತಾ ಚಿಲಿಪಿಲಿ ಹಾಡತೊಡಗಿವೆ! ಮಹಾರಾಜನಿಗೆ ಪರಮಾಶ್ಚರ್ಯವಾಯ್ತು. ಈ ಪರಿ ಹಸಿರಾದ ಹಸಿರನ್ನು ನಾನು ಈವರೆಗೆ ಕಂಡಿಲ್ಲವೆಂದು ಹೇಳಿದ ಮೈ ಮರೆತು. ಮಂತ್ರಿ ಕುತೂಹಲ ಹತ್ತಿಕ್ಕಲಾರದೆ,

“ಎಲ್ಲಿ ಪ್ರಭು, ಇನ್ನೊಂದು ಕಲ್ಲು ಎಸೆಯಿರಿ” ಎಂದು ಹೇಳಿ ರಾಜನನ್ನ ಎಚ್ಚರಿಸಿದ. ಮಹಾರಾಜ ಇನ್ನೊಂದು ಕಲ್ಲನ್ನು ಎಸೆದರೆ – ಸಾವಿರಾರು ಸಂಪಿಗೆ ಹೂವರಳಿ ಎಳೆಮರದ ಮೈತುಂಬ ಸಾವಿರ ದೀಪಗಳ ದೀಪಾವಳಿ ಬೆಳಗುತ್ತಿದೆ! ಪರಿಮಳದ ಪವನ ತೀಡಿ ತೀಡಿ ಬರುತ್ತಿದೆ! ಸಂಗೀತದ ಮುನ್ಸೂಚನೆಯಂತೆ ದುಂಬಿಗಳ ತಂಬೂರಿ ನಿನಾದ ಮರದ ಸುತ್ತಡಗಿದೆ! ಪ್ರೀತಿಗೆ ಪೀಠಿಕೆ ಬೇಕೆ? ‘ನನ್ನ ಹೃದಯದಲ್ಲಿ ಅಮೃತದ ಮಳೆಯಾಗುತ್ತಿದೆ!’ ಎಂದು ಮಹಾರಾಜ ಬಾಯಿಬಿಟ್ಟ ಹೇಳಿ ಮೂರನೆಯ ಕಲ್ಲನ್ನು ಎಸೆದ. ಆಕಾಶದ ಮರದಿಂದ ಉಲ್ಕೆಗಳು ಧರೆಗುರುಳಿದ ಹಾಗೆ ಹೂಗಳುದುರಿ, ನಮ್ಮ ಕಥೆಗೆ ಅರಳಿದ ಹೂವನ್ನ ಮಹಾರಾಜ ಹಿಡಿದುಕೊಂಡು ಹೃದಯದಲ್ಲಿ ಇಟ್ಟುಕೊಂಡುಬಿಟ್ಟ! ಆ ಮೇಲೆ ನಾಲ್ಕನೆಯ ಕಲ್ಲಿನಿಂದ ಸಂಪಿಗೆ ಅವತರಿಸಿ ಹೊಂಬಿಸಿಲು ಹೊಮ್ಮಿದ ಹಾಗೆ ನಕ್ಕಳು. ಸಂಪಿಗೆಯ ಚಿತ್ರ ಚರಿತ್ರೆಯ ನೋಡಿ ಮಹಾರಾಜ ಪುಳಕ ಜಲದಲ್ಲಿ  ಮೈ ತೊಳೆದುಕೊಂಡು. ಆಶ್ಚರ್ಯ ಆನಂದಗಳಿಂದ ಚಕಿತಚಿತ್ತನಾಗಿ ಓಡಿಬಂದು ವನಪಾಲಕನ ಕೈಹಿಡಿದುಕೊಂಡು ಹೇಳಿದ.

ರಾಜ : ಅಯ್ಯಾ ನನಗೊಂದು ಉಪಕಾರ ಮಾಡುತ್ತೀಯಾ?

ವನಪಾಲಕ : ಪ್ರಭುಗಳಿಗೆ ನನ್ನಂಥ ವನಪಾಲಕ ಮಾಡುವ ಉಪಕಾರವೇನಿದ್ದೀತು?

ರಾಜ : ಈ ಸಂಪಿಗೆಯನ್ನು ನನಗೆ ಮದುವೆ ಮಾಡುಕೊಡುತ್ತೀಯಾ?

ವನಪಾಲಕ : ಇಂಥ ಪ್ರಶ್ನೆಗೆ ನಿಂತ ಕಾಲ ಮೇಲೆ ಹ್ಯಾಗೆ ಉತ್ತರಿಸಲಾದೀತು? ಬೆಳೆದ ಮಗಳನ್ನು ಯೋಗ್ಯ ವರನಿಗೆ ಮದುವೆ ಮಾಡಿಕೊಡಬೇಕಾದ್ದು ನನ್ನ ಕರ್ತವ್ಯ. ಆದರೆ ಇದಕ್ಕೆ ಸಂಪಿಗೆಯೂ ಒಪ್ಪಬೇಕಲ್ಲವೆ ಪ್ರಭು?

ಎಂದು ವನಪಾಲಕ ಮಾತು ಮುಗಿಸುವಷ್ಟರಲ್ಲಿ ಮಂತ್ರಿ ತಡಮಾಡದೆ ಮುಂದೆ ಬಂದು “ಅಮ್ಮಾ ಸಂಪಿಗೆ, ಮಹಾರಾಜರ ರಾಣಿಯಾಗುವುದು ನಿನಗೆ ಒಪ್ಪಿಗೆಯೆ ತಾಯಿ?” ಎಂದು ಕೇಳಿಯೇಬಿಟ್ಟ. ಸಂಪಿಗೆ ನಾಚಿ ಸಮ್ಮತಿ ಸೂಚಿಸಿದಲು. ಮಹಾರಾಜನೇ ವರನಾಗಿ ಸಿಕ್ಕನೆಂದು ವನಪಾಲಕ ಸುಮ್ಮನಾಗಲಿಲ್ಲ.

ವನಪಾಲಕ : ಆದರೆ ಸ್ವಾಮೀ, ಸಂಪಿಗೆ ಒಂದರಿತು ಇನ್ನೊಂದನ್ನರಿಯದ ಕೂಸು. ಆಕೆಗೆ ತಿಳಿಯದ ಅನೇಕ ವಿಷಯಗಳಿವೆ. ಅವಳು ಮೃದು ಸ್ವಭಾವದವಳು. ನಗರದ ನಾಗರೀಕತೆ ಅರಿಯದವಳು. ಅರಮನೆಯ ಶಿಷ್ಟಾಚಾರ ತಿಳಿಯದವಳು. ಅಲ್ಲದೆ ಮಹಾಪ್ರಭುಗಳಿಗೆ ಆಗಲೇ ಮಹಾರಾಣಿಯವರಿದ್ದಾರೆ. ಸವತಿ ಅಂದರೇನೆಂಬುದನ್ನಾದರೂ ಅವಳಿಗೆ ತಿಳಿಸಬೇಕಲ್ಲವೇ?

ಮಾತು ಮುಂದುವರಿಯುವುದಕ್ಕೆ ಮಹಾರಾಜ ಬಿಡಲೇ ಇಲ್ಲ.

ರಾಜ : ಚಿಂತೆ ಬೇಡ ವನಪಾಲಕಾ, ಇಲ್ಲಿಯ ತನಕ ಈಕೆ ಕಾಡಿನಲ್ಲಿ ಇದ್ದಳು. ಇನ್ನು ಮೇಲೆ ನನ್ನ ಹೃದಯದಲ್ಲಿರುತ್ತಾಳೆ.

ಎಂದು ಹೇಳುತ್ತ ಪಕ್ಕದ ಬಳ್ಳಿಯ ಒಂದು ಹೂಕಿತ್ತು ಅದನ್ನು ಸಂಪಿಗೆಗೆ ಕೊಡುತ್ತ.

ರಾಜ : ಇಕೊ ಈ ಹೂವು ಮತ್ತು ನನ್ನ ಹೃದಯಗಳನ್ನು ನನಗೆ ಅರ್ಪಿಸುತ್ತೇನೆ. ಸ್ವೀಕರಿಸು ದೇವೀ.

ಸಂಪಿಗೆ ನಾಚಿ ಮುಖ ಮುಚ್ಚಿಕೊಂಡಳು. ಮಂತ್ರಿಯೇ ಮುಂದೆ ಬಂದು ವನಪಾಲಕನನ್ನು ಸಮಾಧಾನ ಮಾಡಿದ. ಅಷ್ಟರಲ್ಲಿ ಯುದ್ಧಗೆದ್ದ ವಾರ್ತೆಯೂ ಬಂತು. ಗಾಂಧರ್ವವಿಧಿಯಿಂದ ಅಲ್ಲಿಯೇ ವಿವಾಹ ಮಾಡಿಕೊಂಡು ಮಹಾರಾಜ ಅರಮನೆಗೆ ಹೊರಟ.

 ಇಷ್ಟು ಬೇಗ ತಂದೆಯಿಂದ ಅಗಲಬೇಕಾಗುವುದೆಂದು ಸಂಪಿಗೆಗೆ ತಿಳಿದಿರಲಿಲ್ಲ. ‘ಅಪ್ಪಾ’ ಎಂದು ವನಪಾಲಕನನ್ನು ತಬ್ಬಿಕೊಂಡಳು. ಅವನೇ ಸಮಾಧಾನ ಮಾಡಿದ.

ವನಪಾಲಕ : ಹೌದು ಮಗಳೆ, ಹೆಣ್ಣಿಗೆ ತೌರುಮನೆ ಕೊನೆಯಲ್ಲ. ಆಗಲೇ ದೊಡ್ಡವಳಾಗಿದ್ದಿ, ಮಹಾರಾಜರ ಅರಮನೆಗೆ ಬೆಳಕಾಗಿ, ಅವರ ವಂಶ ವಿಸ್ತರಿಸಿ ಉದ್ಧಾರ ಮಾಡು. ನೀನು ವನದೇವತೆಯ ಮಗಳಾದ್ದರಿಂದ ಹ್ಯಾಗೂ ಬೆಳೆದು ದೊಡ್ಡವಳಾಗುತ್ತಿದ್ದೆ. ಆದರೆ ನಿನಗೆ ತಂದೆ ತಾಯಿ ಆಗುವ ಎರಡೂ ಭಾಗ್ಯಗಳನ್ನ ನನಗೆ ದಯಮಾಡಿ ಕೊಟ್ಟೆ ತಾಯಿ. ನೀನು ನನ್ನ ಕಾಳಜಿ ಬಿಟ್ಟು ಅರಮನೆಯಲ್ಲಿ ಸುಖವಾಗಿರು. ನನಗೆ ಜೊತೆಗಾರರಾಗಿ ಈ ಹಸಿರಿದೆ, ನಿನ್ನ ಅಗಲಿಕೆಯ ಕಣ್ಣಿರಿವೆ.

ಸಂಪಿಗೆ ಕಾಳಜಿಯಿಂದ,

ಸಂಪಿಗೆ : ನೀನೂ ನಮ್ಮೊಂದಿಗೆ ಅರಮನೆಯಲ್ಲೇ ಇರಬಹುದಲ್ಲಪ್ಪ?

ಈ ಮಾತು ರಾಜನಿಗೂ ಸಮ್ಮತವೆನ್ನಿಸಿ,

ರಾಜ : ಹೌದು ವನಪಾಲಕಾ, ವಯಸ್ಸಾದ ನಿನು ಅರಮನೆಗೆ ಬಂದು ನಮ್ಮೊಂದಿಗೆ ಇರುವುದಾದರೆ ಅದು ನನ್ನ ಭಾಗ್ಯವೆಂದು ಕೊಳ್ಳುತ್ತೇನೆ.

ವನಪಾಲಕ : ಈ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಇದನ್ನು ಅಗಲಿರುವುದು ಸಾಧ್ಯವಾಗದು ಕ್ಷಮಿಸಿ ಪ್ರಭು, ನಿಮ್ಮ ಕಾಳಜಿಗೆ ಕೃತಜ್ಞನಾಗಿದ್ದೇನೆ. ನನ್ನ ಮಗಳನ್ನ ಚೆನ್ನಾಗಿ ನೋಡಿಕೊಂಡರೆ ನನಗೆ ಇಮ್ಮಡಿ ಸಂತೋಷವಾಗುತ್ತದೆ.

ತಂದೆಯ ಸ್ವಭಾವ ಗೊತ್ತಿದ್ದ ಸಂಪಿಗೆ ಒತ್ತಾಯ ಮಾಡಲಿಲ್ಲ, ಸುತ್ತ ನೋಡುತ್ತಾ –

ಸಂ.ರಾಣಿ : ನನ್ನ ಪ್ರೀತಿಯ ತರುಮರಗಳೇ, ಪ್ರಾಣಿಗಳೇ, ಪಕ್ಷಿಗಳೇ ನನ್ನ ವೃದ್ಧತಂದೆಯನ್ನ ಚೆನ್ನಾಗಿ ನೋಡಿಕೊಳ್ಳಿರಿ. ನನ್ನನ್ನ ಕಣ್ತುಂಬ ನೋಡಿದಲ್ಲದೆ ಬಾಯಲ್ಲಿ ನೀರುಕೂಡ ಹಾಕುತ್ತಿರಲಿಲ್ಲ. ನನ್ನ ನೆನಪೇ ಅವನಿಗೆ ಇನ್ನು ಮೇಲೆ ಸಂಜೀವಿನಿ. ಆದ್ದರಿಂದ ಅವನಿಗೆ ನನ್ನ ಯೋಗಕ್ಷೇಮದ ವರದಿಯನ್ನು ಆಗಾಗ ಒಪ್ಪಿಸುತ್ತಿರಿ. ಬೆಳಗಿನ ಚಳಿಗೆ ಅವನ ಪಕ್ಕ, ಮರೆಯದೆ ಒಂದಿಷ್ಟು ಬೆಂಕಿ ಮಾಡಿಕೊಡಿರಿ.

ಎಂದು ಅತ್ತಳು.

ಕೊನೆಗೆ ವನಪಾಲಕನೇ ಮುಂದೆ ಬಂದು ಸಂಪಿಗೆಯ ಕೈಯನ್ನು ಮಹಾರಾಜನ ಕೈಯಲ್ಲಿಟ್ಟು ಹೇಳಿದ.

ವನಪಾಲಕ : ನನ್ನ ಹೃದಯದಲ್ಲಿ ನೆಟ್ಟಿರುವ ಈ ಪುಷ್ಪವನ್ನು ಕಷ್ಟಪಟ್ಟು ಕಿತ್ತು ಕೊಡುತ್ತಿದ್ದೇನೆ ಪ್ರಭು. ಗಾಯವಾದ ನನ್ನ ಹೃದಯಕ್ಕೆ ಇನ್ನು ಮೇಲೆ ಸಾವಿನಲ್ಲೇ ಶಾಂತಿ ಸಿಗಬೇಕು.

ರಾಜ : ಹಾಗೆನ್ನಬೇಡ ವನಪಾಲಕಾ, ಸಂಪಿಗೆ ಸಮೇತ ನಮ್ಮೆಲ್ಲರನ್ನು ನಿನ್ನ  ಹೃದಯದಲ್ಲಿಟ್ಟುಕೊ. ಅಲ್ಲಿ ನಾವೆಲ್ಲ ಸುರಕ್ಷಿತರಾಗಿರುತ್ತೇವೆ.

ಎಂದು ಸಮಾಧಾನ ಮಾಡಿ ಸಂಪಿಗೆಯನ್ನು ಕರೆದುಕೊಂಡು ಹೊರಟ.

ಈ ಕಡೆ ಅರಮನೆಯಲ್ಲಿ ಏನು ಕಥೆ ನಡೆಯುತ್ತಿದ್ದಿತೆಂದರೆ ಮಹಾರಾಜನಿಗೊಬ್ಬ ಮಹಾರಾಣಿಯಿದ್ದಳಲ್ಲ, ಆಕೆಗೆ ಮಕ್ಕಳಿರಲಿಲ್ಲ. ಆದರೆ ನಗರ ನಾಗರೀಕತೆಯ ಭಯಾನಕ ರೋಗಗಳೆಲ್ಲ ಅವಳಿಗಿದ್ದವು. ಉದಾಹರಣೆಗೆ ಕಾಡಿನ ಬಗೆ ಬಗೆಯ ಖಗಮಿಗಾದಿಗಳನ್ನ ವಿನೋದಕ್ಕಾಗಿ ಬಂಧಿಸಿ ಪಂಜರದಲ್ಲಿಡುವುದು, ಮತ್ತು ಹಬ್ಬ ಹರಿದಿನಗಳಲ್ಲಿ ಪರಸ್ಪರ ವಿರೋಧವುಳ್ಳ ಪ್ರಾಣಿಗಳನ್ನ ಒಂದರಮೇಲೊಂದು ಬಿಟ್ಟು ಅವು ಕಚ್ಚಾಡಿ ಸಾಯುವುದನ್ನು ಕಂಡು ನಗಾಡುವುದು. ಅಲ್ಲದೆ ಸಣ್ಣ ಪುಟ್ಟ ಪಕ್ಷಿಗಳನ್ನು ಹಿಡಿದು ತರಿಸಿ ಅವುಗಳನ್ನು ಕೆಳಗಡೆಯಿಂದ ಹಾರಿಬಿಟ್ಟು ಮ್ಯಾಲಿಂದ ಸಾಕಿದ ಗಿಡುಗನನ್ನು ಬಿಟ್ಟು – ಆ ಗಿಡುಗ ಪುಟ್ಟ ಹಕ್ಕಿಗಳ ಮ್ಯಾಲೆರಗಿ ಕೊಕ್ಕಿನಿಂದ ಕುಕ್ಕಿ ಸೊಕ್ಕಿನ ಬೇಟೆಯಾಡುತ್ತಿದ್ದರೆ ಮಹರಾಣಿ ಆಹಾ ಅಂತ ಆನಂದಪಡುವುದು ಇತ್ಯಾದಿ. ಮಹಾರಾಣಿಯ ಬಳಿ ಇಂಥ ಬೇಟೆಯಲ್ಲಿ ಪಳಗಿದ ನಾಲ್ಕು ಗಿಡುಗಗಳಿದ್ದವು ಮತ್ತು ಗಿಡುಗಗಳಿಗೆ ಇಂಥ ವಿದ್ಯೆ ಲಿಸುವುದರಲ್ಲಿ ನಿಪುಣನಾದವನು ಗುಣವಂತ.

ಹೀಗಿರುತ್ತಾ ಮಹಾರಾಣಿ ಈ ದಿನ ಪುಟ್ಟ ಹಕ್ಕಿಗಳ ಮ್ಯಾಲೆ ಗರುಡನ ಬಿಟ್ಟು ಬೇಟೆಯ ಆಟವನ್ನು ಮೆಚ್ಚಿಕೊಳ್ಳತ್ತಿರಲು ಒಂದು ವಿಚಿತ್ರ ನಡೆಯಿತು. ಹಿಡಿದು ತಂದ ಪುಟ್ಟ ಗುಬ್ಬಿಯೇ ಗರುಡನನ್ನು ಎದುರಿಸಿ ಅದರ ಮ್ಯಾಲೆರಗಿ ಹೆದರಿಸಿತು. ಈ ಅನಿರೀಕ್ಷಿಸತವನ್ನು ಎದುರಿಸದೆ ಗಿಡುಗ ಮ್ಯಾಲೆ ಮ್ಯಾಲಕ್ಕೆ ಹಾರಿಹೋಯಿತು. ಚಿಕ್ಕ ಗುಬ್ಬಿ ಅದನ್ನು ನೋಡುತ್ತಿದ್ದಾಗ ಅವಳ ಮೆಚ್ಚಿನ ಸೇವಕ ಗುಣವಂತ ಬಂದ.

ಆತ ಇವತ್ತು ಕಾಡಿನಿಂದ ತಂದಿದ್ದ ಪಂಚರಂಗಿ ಗಿಳಿಯ ಮರಿಯನ್ನು ಕೊಟ್ಟು ನಿಂತ. ರಾಣಿ ಅದನ್ನು ಕೈಗೆತ್ತಿಕೊಂಡಳು.

ರಾಣಿ : ಚೆನ್ನಾಗಿದೆ, ಇದಿನ್ನೂ ಮರಿ ಅಲ್ಲವೇ?

ಗುಣವಂತ : ಹೌದು ಮಹಾರಾಣಿ, ಇದಿನ್ನೂ ದೊಡ್ಡದಾಗಬೇಕು; ಅಂದರೇನೇ ಬೇಟೆ ಚಂದ!

ರಾಣಿ : ಇದರ ಜೊತೆ ಇದೇ ವಯಸ್ಸಿಗೆ ಗಿಡುಗ ಸಿಕ್ಕಿದ್ದರೆ ಚೆನ್ನಾಗಿತ್ತು. ಕೆಳಗೆ ಬಣ್ಣದ ಚಿಟ್ಟೆಯಂತೆ ಇದು ಹಾರಬೇಕು. ಮೇಲಿನಿಂದ ಕೆಳಕ್ಕೆ ಇದರ ಮೇಲೆ ಗಿಡುಗ ಎಗರಿ ಬೇಟೆಯಾಡುತ್ತಿದ್ದರೆ ನೋಡುವುದಕ್ಕೆ ಎಷ್ಟು ಚಂದ!

ಗುಣವಂತ : ಆದರಿದು ಭಾರೀ ಬೆರಿಕಿ ಪಕ್ಷಿ ಮಹಾರಾಣಿ! ಒಮ್ಮೊಮ್ಮೆ ಗಿಡುಗನನ್ನೇ ಹೆದರಿಸುತ್ತದೆ. ಹುಷಾರಾಗಿರಬೇಕು.

ರಾಣಿ : ಇವತ್ತು ಅದೇ ಕಥೆ ಆಯ್ತು ಮಾರಾಯಾ. ಪುಟ್ಟ ಗುಬ್ಬಿ ಗಿಡುಗನನ್ನೇ ಹೆದರಿಸಿತೆಂದರೆ ನಂಬಲಿಕ್ಕಾಗುತ್ತದೆಯೆ?

ಗುಣವಂತ : ಹೌದೆ ಮಹಾರಾಣಿ? ನೀವು ಗರುಡನನ್ನು ಬಿಟ್ಟಿದ್ದರೋ ಏನೊ.

ರಾಣಿ : ಅಗೊ ಅಲ್ಲಿದೆ ನೋಡು, ಅದ್ಯಾವುದು?

ಗುಣವಂತ ನೋಡಿದ.

ಗುಣವಂತ : ಅದು ಗರುಡ, ಅದಕ್ಕಿನ್ನೂ ಬೇಟೆಯ ನೈಪುಣ್ಯ ಸಾಲದು. ಮಹಾರಾಣಿ, ಇದು ಮಾತ್ರ ರಣಹದ್ದಿಗೆ ಸಮಜೋಡಿಯಾದ ಪಕ್ಷಿ.

ರಾಣಿ : ಹಾಗಿದ್ದರೆ ಒಳ್ಳೆಯದಾಯಿತು ಬಿಡು. ಪರಸ್ಪರ ಬೇಟೆ ಆಡುವ ದೃಶ್ಯ ನೋಡಬಹುದು.

ಗುಣವಂತ : ಹಾಗಲ್ಲ ಮಹಾರಾಣಿ, ಈ ಹಕ್ಕಿಗೆ ರಣಹದ್ದು ವೈರಿ, ಇದರ ಮೈ ಬಣ್ಣ ದೂರದ ಅದರ ಕಣ್ಣಿಗೆ ಹಸಿ ಮಾಂಸದಂತೆ ಕಾಣುವುದಂತೆ.

ರಾಣಿ : ಹಾಗೊ? ರಣಹದ್ದಿನಿಂದಲೇ ಬೇಟೆ ಆಡಿಸಿದರಾಯ್ತು.

ಎಂದು ಹೇಳಿ ಸೇವಕಿಗೆ ಪಂಚರಂಗಿ ಮರಿಯನ್ನು ಪಂಜರದಲ್ಲಿಡಲು ತಿಳಿಸಿ. ಗುಣವಂತ ಏನನ್ನೋ ಹೇಳಲು ಹವಣಿಸುವಂತೆ, ಆದರೆ ಹೇಳಲು ಆತಂಕ ಪಡುವಂತೆ ಕಂಡಿತು.

ರಾಣಿ : ಇನ್ನೇನಾದರೂ ಹೇಳಲಿಕ್ಕಿದೆಯಾ ಗುಣವಂತ?

ಗುಣವಂತ : ಹೌದು ಮಹಾರಾಣಿ, ಆತಂಕದ ಸುದ್ದಿ. ಮಹಾರಾಜರು ಕಾಡಿನಲ್ಲಿ ಸಿಕ್ಕ ಒಂದು ಹುಡುಗಿಯನ್ನು ಗಾಂಧರ್ವ ವಿಧಿಯಿಂದ ಮದುವೆ ಮಾಡಿಕೊಂಡು ಅರಮನೆಗೆ ಕರೆದು ತರುತ್ತಿರುವರು. ಸ್ವಾಗತಿಸಲು ಸಿದ್ಧತೆ ಮಾಡಬೇಕೆಂದು ನಿಮಗೆ ತಿಳಿಸಲು ನನ್ನನ್ನ ಕಳಿಸಿದರು.

ಆಘಾತಕರ ಸುದ್ದಿಯ ಕೇಳಿ ಮಹಾರಾಣಿಯ ಆನಂದಗಳೆಲ್ಲ ಮಾಯವಾದವು.

ಹೊಸರಾಣಿ ಮಾಯಮಾಟ ಬಲ್ಲವಳೆಂದು, ಬೇಕು ಬೇಕಾದಾಗ ಮರವಾಗಿ, ಹೂವಾಗಿ ಬೇಡವಾದರೆ ಕನ್ಯೆಯಾಗಿ ರೂಪ ಪರಿವರ್ತನೆ ಹೊಂದುವಳೆಂದು ತಿಳಿದ ಮೇಲಂತೂ ಗಾಬರಿಯಾದಳು.

“ಅಯ್ಯೋ ಅಯ್ಯೋ ಅಯ್ಯೋ! ನಾನು ಮತ್ತು ನನ್ನ ಆಸೆ ಇಬ್ಬರೂ ಬಂಜೆಯರು. ಇವಳ್ಯಾವಳೋ ಕೊಂಚದವಳಲ್ಲ. ಮದ್ದು ಮಾಟ ಮಾಡಿ ಮಹಾರಾಜರನ್ನು ವಶೀಕರಣ ಮಾಡಿಕೊಂಡಿದ್ದಾಳೆ ಎಂದಾಯ್ತು. ಹೊಸರಾಣಿಯನ್ನು ದ್ವಾರಬಾಗಿಲಲ್ಲಿ ನಿವಾಳಿ ತೆಗೆದು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಸೇವಕಿಗೆ ಹೇಳಿದಳು.

ಸಂಪಿಗೆರಾಣಿ ಅರಮನೆಗೆ ಬಂದುದೇ ಆಯ್ತು ಬೆರಗಿನಿಂದ ಕಣ್ಣು ತೆರೆದವಳು ನಿದ್ದೆ ಬರುವತನಕ ಮುಚ್ಚುತ್ತಿರಲಿಲ್ಲ. ಅರಮನೆಯ ತುಂಬ ಕೌತುಕದ ವಸ್ತುಗಳು, ಅರಮನೆ, ಅದರ ಅಲಂಕರಣಗಳು, ಆಭರಣಗಳು ಒಂದೇ ಎರಡೇ? ಒಂದು ದಿನ ದಾಸಿಯರ ಆಭರಣಗಳು ತನಗೂ ಬೇಕೆಂದಳು. ‘ಇವೆಲ್ಲ ದಾಸಿಯರು ಧರಿಸುವಂಥವು. ರಾಣಿಯರಿಗಲ್ಲ’ ಎಂದರೆ ದಾಸಿ ಎಂದರೇನು? ಎಂದಳು. ದಾಸಿಯರಂತೂ ಇವಳ ದಡ್ಡತನಕ್ಕೆ ಬಿದ್ದು ಬಿದ್ದು ನಕ್ಕರು. ಇವರು ಹೀಗೆ ನಕ್ಕುದು ಮಹಾರಾಣಿಗೂ ಪ್ರಿಯವಾದುದೇ.

“ನಗರೇ ನಗರೇ ನನಗೆ ಮೋಸಮಾಡಿ ಈ ಮೃಗವನ್ನು ಕಟ್ಟಿಕೊಂಡರಲ್ಲ ಮಹಾರಾಜರು, ಅವರನ್ನ ನೋಡಿ ನಗಿರಿ” ಎಂದು ಪ್ರೋತ್ಸಾಹಿಸಿದಳು.

ದಾಸಿಯರು ಆನಂದದಿಂದ ನಗುವರೆಂದು ಭಾವಿಸಿ ಸಂಪಿಗೆರಾಣಿಯೂ ನಕ್ಕಳು. ಇದನ್ನೊಮ್ಮೆ ದೂರದಿಂದ ಗಮನಿಸಿದ ಮಹಾರಾಜನಿಗೆ ಸುಮ್ಮನಿರುವುದು ಸಾಧ್ಯವಾಗಲಿಲ್ಲ. ಎದ್ದು ಬಂದು ಗದರಿದ –

ರಾಜ : ಅದೇನು ಹಾಗೆ ಕಿವಿಯಿಂದ ಕಿವಿಯ ತನಕ ನಗುತ್ತಿದ್ದೀರಿ? ಮುಗ್ಧರನ್ನು ಅಪಹಾಸ್ಯ ಮಾಡುವುದು ಅನಾಗರಿಕತೆಯೆಂದು ಗೊತ್ತಾಗುವುದಿಲ್ಲವೆ? ಇವಳು ಈ ರಾಜ್ಯದ ರಾಣಿ ಎನ್ನುವುದು ತಿಳಿದಿರಲಿ, ಕರೆದುಕೊಂಡು ಹೋಗಿ ಅರಮನೆಯ ಶಿಷ್ಟಾಚಾರ ಕಲಿಸಿರಿ.

ಅಂದಿನಿಂದ ಮಹಾರಾಣಿಯ ಆತ್ಮ ಮಾತ್ರ ಸವತಿ ಮತ್ಸರದಿಂದ ಸುಡತೊಡಗಿತು.

ರಾಣಿ : ತನ್ನಲ್ಲಿಲ್ಲದ ಯಾವ ವಿಶೇಷ ಅವಳಲ್ಲಿದೆ? ಒಂದು ನಯವೆ? ಒಂದು ವಿನಯವೆ? ಒಂದು ಸಂಗೀತವೇ? ಒಂದು ಸಂಸ್ಕೃತಿಯೇ? ಯಾವುದರಲ್ಲಿ ಈಕೆ ತನಗೆ ಸಮಾನಳು? ಜಡೆ ಹಾಕಿಕೊಳ್ಳಲೂ ಬಾರದ ಹುಡುಗಿ ರಾಣಿಯಾಗುವುದೆಂದರೇನು? ಮದ್ದು ಮಾಟ ಅನ್ನುವುದು ಅದಕ್ಕೇ ಇರಬೇಕು. ನಾನಿನ್ನೂ ನೋಡಿಲ್ಲ ನಿಜ. ಆದರೆ ಅವಳು ಬಯಸಿದಾಗ ಮರವಾಗುವುದನ್ನು ಸ್ವಯಂ ಮಂತ್ರಿಯೇ ಕಣ್ಣಾರೆ ಕಂಡನಂತಲ್ಲ!

ಹೀಗೆ ಹಲವಾರು ಬಗೆ ಯೋಚಿಸುತ್ತಿದ್ದಳು. ಒಬ್ಬರ ಬಗ್ಗೆ ಒಮ್ಮೆ ಅನುದಾನ ಬಂದರಾಯಿತು. ಅವರಿಗೆ ಕೊಂಬು, ಕೋರೆಹಲ್ಲು ಮೂಡಿದಂತೆಯಾ ಕಾಣಿಸುತ್ತದೆ. ಹೀಗಾಗಿ ಸಂಪಿಗೆರಾಣಿ ಎಲ್ಲೇ ಹೋಗಲಿ, ಕೂರಲಿ, ನಿಲ್ಲಲಿ ಮಹಾರಾಣಿ ದೂರದಲ್ಲಿ ಅಡಗಿ ನಿಂತು ‘ಸಂಪಿಗೆ ಏನು ಮಾಡುತ್ತಿದ್ದಾಳೆ? ಅಂತ ಗಮನಿಸುತ್ತಿದ್ದಳು. ಹೀಗೆ ಅಡಗಿ ನೋಡಿದಷ್ಟೂ ‘ಸಂಪಿಗೆ ರಾಣಿಯ ನಯದ ಅಭಿನಯದ ಹಿಂದೆ ಮದ್ದು ಮಾಟದ ವಿದ್ಯೆಯನ್ನ ಮುಚ್ಚಿ ಬೀಗ ಹಾಕಿದ್ದಾಳೆಂದೇ’ ನಂಬಿದಳು. ಅವಳು ಅಂದುಕೊಂಡಂಥ ಯಾವ ಮದ್ದು ಮಾಟದ ಲಕ್ಷಣಗಳೂ ಸಿಕ್ಕಲಿಲ್ಲ. ಆದರೂ ಸಂಪಿಗೆರಾಣಿಯನ್ನು ಕಂಡು ತನ್ನ ವಸಡು ತಾನೇ ತಿನ್ನುವುದನ್ನು ನಿಲ್ಲಿಸಲಿಲ್ಲ.

ಸಂಪಿಗೆರಾಣಿಗೆ ಏನು ಅಂದರೆ ಏನೂ ತಿಳಿಯುವುದಿಲ್ಲವೆಂದು ತಿಳಿಯಲು ಸೇವಕಿಯರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಕೂಸಿನ ಕನವರಿಕೆಯಂಥ ಆಕೆಯ ಮಾತು ಕೇಳಿ ಅವರಿಗೂ ಈಗ ಆನಂದವಾಗುತ್ತಿತ್ತು. ಆಕೆ ನಡೆದಾಡುವಾಗ ಕೂಡ ಯಾವುದೋ ಹಾಡಿಗೆ ಕುಣಿತದ ಹೆಜ್ಜೆ ಹಾಕಿದಂತೆ ಕಾಣುತ್ತಿತ್ತು. ಮಹಾರಾಣಿ ಸವತಿ ಮತ್ಸರದಿಂದ ಒಮ್ಮೊಮ್ಮೆ ಬಯ್ದರೂ ಬೈಗುಳೊಂದೂ ಸಂಪಿಗೆರಾಣಿಗೆ ಅರ್ಥವಾಗುತ್ತಿರಲಿಲ್ಲ. ಅರ್ಥವಾಗದ್ದಕ್ಕೆ ನಗುತ್ತಿದ್ದಳು. ಮಹಾರಾಣಿ ಅಣಕಿಸಿ ನಕ್ಕರೆ ನಿಜವಾದ ನಗೆ ಅಂತಲೇ ನಂಬಿ ಸಂತೋಷಪಡುತ್ತಿದ್ದಳು. ಆಗ ಸೇವಕಿಯರು ಮಹಾರಾಣಿಕೆ ಕಾಣದ ಹಾಗೆ ಮರುಗುತ್ತಿದ್ದರು.

ಅರಮನೆಯ ಜೀವನಶೈಲಿ ಕಾಡಿನದಕ್ಕಿಂತ ಭಿನ್ನವಾಗಿತ್ತು ನಿಜ. ಆದರೆ ದಿನಗಳೆದಂತೆ ಅದರ ಕರಾಳ ಮುಖದರ್ಶನವೂ ಸಂಪಿಗೆರಾಣಿಗಾಯ್ತು. ಒಂದು ದಿನ ಅರಮನೆಯ ಇನ್ನೊಂದು ಭಾಗದಲ್ಲಿ ಅಡ್ಡಾಡುತ್ತಿದ್ದಾಗ ಪಂಜರಗಳಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನ ಬಂಧಿಸಿಟ್ಟದ್ದು ಕಂಡಿತು. ಅವುಗಳಲ್ಲಿ ಅನೇಕ ಪ್ರಾಣಿ ಪಕ್ಷಿಗಳು ಸಂಪಿಗೆರಾಣಿಯ ಗೆಳತಿಯರಾಗಿದ್ದರು. ತನ್ನ ಆತ್ಮೀಯ ಗೆಳತಿ ಪಂಚರಂಗಿಯ ಮಗಳೂ ಅದರಲ್ಲಿತ್ತು. ಅದರ ಪಂಜರದ ಬಳಿಗೆ ಓಡುತ್ತ ಬಂದವಳೇ –

ಸಂ.ರಾಣಿ : ಲೇಲೇ ನೀನು ಉಪನವದಲ್ಲಿರುವ ಪಂಚರಂಗಿಯ ಮಗು ಹಣ್ಣುಕುಟುಕಿ ಅಲ್ಲವೇನೇ?

ಅಂದಳು. ಹಣ್ಣು ಕುಟುಕಿಗೆ ಇವಳನ್ನು ಕಂಡು ಹೋದ ಜೀವ ಬಂದಂತಾಯ್ತು.

ಪಂಚರಂಗಿ : ಹೌದಕ್ಕ!

ಎಂದು ಖೇದದಿಂದ ಹೇಳಿತು.

ಸಂ.ರಾಣಿ : ಲೇ ಹಣ್ಣುಕುಟುಕಿ ನಿನ್ನಮ್ಮ ನಿನ್ನೆಯಷ್ಟೇ ನಿನ್ನನ್ನು ಹುಡುಕಿಕೊಂಡು ಈ ಕಡೆ ಬಂದಿದ್ದಳು ಕಣೇ. ನಿನ್ನನ್ನ ನೆನಪಿಸಿಕೊಂಡು ಅಳುತ್ತಿದ್ದಳು.

ಎಂದು ಹೇಳುತ್ತಲೂ ಹಣ್ಣುಕುಟುಕಿ ಬಿಕ್ಕತೊಡಗಿತು. ಆಮೇಲೆ ಸಂಪಿಗೆರಾಣಿಯೇ ಅದನ್ನು ಸಮಾಧಾನ ಮಾಡಿ.

ಸಂ.ರಾಣಿ : ಇಲ್ಲಿಗ್ಯಾಕೆ ಬಂದೆಯೇ?

ಆಗ ಅದು ಗಿಳಿ ಮತ್ತು ಗಿಡುಗನ ಬೇಟೆಯಾಟದ ವಿಷಯ ಹೇಳಿ ಜೋರಾಗಿ ಅಳತೊಡಗಿತು.

ಸಂ.ರಾಣಿ : ಛೆ! ಎಂಥಾ ಅನಾಗರಿಕ ಆಟವಿದು!

ಎಂದು ಜಿಗುಪ್ಸೆಗೊಂಡು ಕೂಡಲೇ ಪಂಜರದ ಬಾಗಿಲು ತೆರೆದು,

ಸಂ.ರಾಣಿ : ಈಗಲೇ ನಿಮ್ಮಮ್ಮನ ಬಳಿಗೆ ಹೊಗು, ನಾನು ಚೆನ್ನಾಗಿದ್ದೇನೆಂದು ನಮ್ಮಪ್ಪನಿಗೆ ಹೇಳು. ನನ್ನ ವೃದ್ಧತಂದೆಯನ್ನು ನೀವೆಲ್ಲಾ ಚೆನ್ನಾಗಿ ನೋಡಿಕೊಳ್ರೇ.

ಎಂದು ಹೇಳಿ ಹಾರಿಸಿಬಿಟ್ಟಳು. ಜೊತೆಗೆ ಎಲ್ಲ ಪ್ರಾಣಿಪಕ್ಷಿಗಳನ್ನೂ ಬಂಧಮುಕ್ತ ಗೊಳಿಸಿದಳು!

ಆತಂಕ ಅಸಮಾಧಾನಗಳಿಂದ ಉರಿಯುತ್ತಿದ್ದ ಮಹಾರಾಣಿಯ ಕಣ್ಣರೆಪ್ಪೆಯ ಕಡೆಗೆ ನಿದ್ದೆ ಸುಳಿಯಲೇ ಇಲ್ಲ. ಹೋಗಲಿ ಗಿಳಿ ಗಿಡುಗನ ಆಟವನ್ನಾದರೂ ಆಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳೋಣ ಅಂದರೆ ಸಂಪಿಗೆರಾಣಿ ಅದಕ್ಕೂ ಕಲ್ಲು ಹಾಕಿದ್ದಳು. ಆಟದಲ್ಲಿ ರಣಹದ್ದಿಗೆ ಬೇಟೆಯಾಗಬೇಕಿದ್ದ ಪಂಚರಂಗಿಯ ಮರಿ ಹಣ್ಣುಕುಟುಕಿಯನ್ನಷ್ಟೇ ಅಲ್ಲದೇ ಅಲ್ಲಿದ್ದ ಎಲ್ಲ ಪಕ್ಷಿ ಪ್ರಾಣಿಗಳನ್ನೂ ಬಂಧನದಿಂದ ಸ್ವತಂತ್ರಗೊಳಿಸಿ ಹಾರಿಸಿಬಿಟ್ಟಿದ್ದಳು. ಇನ್ನು ಹೇಳಬೇಕೆ? ರುದ್ರಗೋಪಗೊಂಡಳು.

ರಾಣಿ : ಎಲಾ ಇವಳ ದುರಹಂಕಾರವೇ! ನನ್ನ ಆನಂದಗಳನ್ನ ಅರಮನೆಯಿಂದ ಹೊರಗಟ್ಟಲಿಕ್ಕೆ ಇವಳ್ಯಾರು? ಇದು ಅತಿಯಾಯಿತು.

ಎಂದು ಸದ್ದಾಗುವಂತೆ ಹೆಜ್ಜೆ ಊರಿ ಮಹಾರಾಜನಲ್ಲಿಗೆ ಹೋದಳು.

ಸಂಪಿಗೆರಾಣಿ ಪಂಚರಂಗಿ ಗಿಳಿಮರಿಯನ್ನು, ಹಾಗೇ ಉಳಿದ ಪ್ರಾಣಿಪಕ್ಷಿಗಳನ್ನ ಸ್ವತಂತ್ರಗೊಳಿಸಿದ ಸಂಗತಿ ತಿಳಿಸಿ ಅವಳ ಇಂಥ ಅಧಿಕ ಪ್ರಸಂಗತನವನ್ನು ಸಹಿಸಲು ಸಾಧ್ಯವಿಲ್ಲವೆಂದು ‘ಅರಮನೆಯಲ್ಲಿ ಇಲ್ಲಾ ಅವಳಿರಬೇಕು ಇಲ್ಲಾ ತಾನಿರಬೇಕೆಂದು’ ಹೇಳಿದಳು.

ಮಹಾರಾಜನಿಗೂ ಮಹಾರಾಣಿಯ ಕೋಪ ಸಕಾರಣವೆಂದು ಅನ್ನಿಸಿತು.

ಒಂದು ದಿನ ಸಂಪಿಗೆ ರಾಣಿ ಮತ್ತು ಮಹಾರಾಜ ಇಬ್ಬರೇ ಇದ್ದಾಗ ಕೇಳಿದ :

ರಾಜ : ದೇವಿ ನೀನು ಮಹಾರಾಣಿಯ ಪಂಚರಂಗಿ ಗಿಳಿಮರಿಯನ್ನು ಹಾರಿಸಿಬಿಟ್ಟದ್ದು ತಪ್ಪಲ್ಲವೇ?

ಸಂ.ರಾಣಿ : ಇದರಲ್ಲಿ ತಪ್ಪೇನಿದೆ ಪ್ರಭು? ಅದು ಅವಾಚ್ಯಶಬ್ದಗಳಿಂದ ನಿಮಗೂ ಅಕ್ಕನಿಗೂ ಶಾಪ ಹಾಕುತ್ತಿತ್ತು. ಅದರ ಮಾತು ತಿಳಿದಿದ್ದರೆ ನೀವದನ್ನು ಒಂದು ಕ್ಷಣವೂ ಅರಮನೆಯಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ.

ರಾಜ : ಅಂದರೆ ಆ ಗಿಳಿಮರಿ ನಿನಗೆ ಗೊತ್ತೆ?

ಸಂ.ರಾಣಿ :  ಹೌದು, ಅದು ನಮ್ಮ ಉಪವನದ ಪಂಚರಂಗಿಯ ಮಗಳು. ಅವಳ ತಾಯಿ ನನಗೆ ಗೊತ್ತು. ಅಲ್ಲಿ ಉಪವನದಲ್ಲಿ ತಾಯಿಗಿಳಿ ಇಲ್ಲಿ ಮರಿಗಿಳಿ ಇದ್ದರೆ ಹ್ಯಾಗೆ ಪ್ರಭು. ಮಗುವಿನ ರೆಕ್ಕೆ ಸರಿಯಾಗಿ ಬಲಿಯದಿದ್ದಾಗ ತಾಯಿ ಮತ್ತು ಮರಿಗಳನ್ನು ಅಗಲಿಸಬಾರದು ಪ್ರಭು.

ರಾಜ : ಹೋಗಲಿ ಪಂಜರ ತರಿಸಿಕೊಡುತ್ತೇನೆ. ಇನ್ನೊಂದು ಗಿಳಿಯನ್ನು ಹಿಡಿದು ಕೊಡುತ್ತೀಯಾ?

ಸಂ.ರಾಣಿ : ಪಂಜರ ಯಾಕೆ ಬೇಕು ಪ್ರಭು? ನೀವು ಬಯಸಿದಾಗ ಗಿಳಿಯೇ ನಿಮ್ಮಲ್ಲಿಗೆ ಬಂದು ಹಾಡಿ ಹೋಗುತ್ತದೆ ಸಾಲದೆ? ಇವತ್ತು ಬೆಳಿಗ್ಗೆ ನಿನ್ನೆ ಬಿಟ್ಟ ಮರಿ ಮತ್ತು ತಾಯಿ ಹಕ್ಕಿ ಎರಡೂ ಬಂದಿದ್ದವು. ಮರಿಯಂತೂ ಆಗಲೇ ಭತ್ತದ ತೆನೆ ಬಗ್ಗೆ ಒಂದು ಹಾಡು ಕಟ್ಟಿತ್ತು. ಅದನ್ನು ಕೇಳಿ ಎಷ್ಟು ಆನಂದವಾಯಿತೆಂದರೆ…

ರಾಜ : ಅಂದರೆ ನಿನಗೆ ಪಕ್ಷಿಗಳ ಭಾಷೆ ಅರ್ಥವಾಗುವುದೆ?

ಸಂ.ರಾಣಿ : ಹೌದು.

ರಾಜ : ನನಗೂ ಕೇಳಿಸುತ್ತೀಯಾ?

ಸಂ.ರಾಣಿ : ಓಹೋ!

ರಾಜ : ಆಯ್ತು ಒಂದು ದಿನ ಕಾಡಿಗೆ ನಾನೂ ಬರುತ್ತೇನೆ. ಹಾಗೆಯೇ ನಿನ್ನ ತಂದೆಯನ್ನು ನೋಡಿಕೊಂಡು ಬರಬಹುದು.

ಅದಾಗಿ ಕೆಲದಿನಗಳಾದ ಮೇಲೆ ಬಿಡುವು ಮಾಡಿಕೊಂಡು ಮಹಾರಾಜ ಸಂಪಿಗೆರಾಣಿಯೊಂದಿಗೆ ರಥದಲ್ಲಿ ಕೂತುಕೊಂಡು ಕಾಡಿಗೆ ಹೋದ. ಮನುಷ್ಯ ಸಂಚಾರ ಕಡಿಮೆಯಾಗುವ ತನಕ ಸುಮ್ಮನಿದ್ದು ಹಕ್ಕಿಗಳು ಆಮೇಲೆ ಚಿಲಿಪಿಲಿ ಹಾಡುತ್ತಾ ರಥದ ಹಿಂದೆ ಮುಂದೆ ಸಂಭ್ರಮದಿಂದ ಹಾರಾಡತೊಡಗಿದವು. ಅವನ್ನು ನೋಡಿ ಸಂಪಿಗೆ ರಾಣಿಗೆ ಸಂತೋಷ ತಡೆಯದಾಯಿತು. “ಪ್ರಬು ಹಕ್ಕಿಗಳೆಲ್ಲಾ ಅಕ್ಕಾ ಬಂದಳು! ಅಕ್ಕಾ ಬಂದಳೆಂದು ಸಡಗರ ಮಾಡುತ್ತಿವೆ!” ಎಂದು ಹೇಳಿ ಆನಂದದ ಕಣ್ಣೀರುಗರೆದಳು. ಕೆಲವು ಮರಿಹಕ್ಕಿಗಳಂತೂ ಧೈರ್ಯ ಮಾಡಿ ಅವಳ ಭುಜದ ಮೇಲೆ ಕುಳಿತು ಚಕ್ಕಂದವಾಡಿದವು. ಒಂದರಡು ದೊಡ್ಡ ಹಕ್ಕಿಗಳಾಗಲೇ ವನಪಾಲಕನಿಗೆ ಸುದ್ದಿ ತಿಳಿಸಲು ಮುಂದೆ ಹೋದವು.

ಮುಂದೆ ನೋಡಿದರೆ ರಥದ ಮುಂದೆ ಆನೆಯ ಹಿಂಡು ನಿಂತಿತ್ತು. ಎಲ್ಲವೂ ಸೊಂಡಿಲೆತ್ತಿ ಕೂಗಿ ಸಂಪಿಗೆಗೆ ಸ್ವಾಗತ ಕೋರಿದವು. ಜಿಂಕೆಗಳ ಹಿಂಡಾಗಲೇ ಹಳ್ಳಿಯ ಬಾಲಕರು ಹೊಸ ವಾಹನಗಳ ಹಿಂದೆ ಹಿಂದೆ ಓಡೋಡಿ ಬರುವಂತೆ ರಥದ ಹಿಂದೆ ಹಾರಿ ಹಾರಿ ಬರುತ್ತಿದ್ದವು. ಒಂದು ಮರಿಯಾನೆ ಓಡಿ ಬಂದು ರಥಕ್ಕೆ ಅಡ್ಡನಿಂತು ಬಿಟ್ಟಿತು. ಈಗ ಸಂಪಿಗೆ ಕೆಳಕ್ಕಿಳಿಯಲೇಬೇಕಾಯಿತು. ಆಕೆ ಇಳಿದೊಡನೆ ಮರಿಯಾತೆ ಓಡಿಬಂದು ಅಕ್ಕನನ್ನು ಮೈತುಂಬ ಸೊಂಡಿಲಿನಿಂದ ತಬ್ಬಿ ಆನಂದಪಟ್ಟಿತು. ಜಿಂಕೆಯ ಮರಿಗಳು ತಾ ಮುಂದೆ ನೀ ಮುಂದೆ ಎಂದು ಸಂಪಿಗೆಯ ಕಾಲಿಗೆ ತೊಡರು ಬೀಳುತ್ತಾ ನಡೆದವು. ಅಷ್ಟರಲ್ಲಿ ಕಾಡಿನಿಂದ ರಭಸದಿಂದ ಓಡಿ ಬರುತ್ತಿದ್ದ ಹುಲಿಮರಿಗಳನ್ನು ನೋಡಿ ಮಹಾರಾಜ ಕೈಗೆ ಬಲ್ಲೆ ತಗೊಂಡ. ಸಂಪಿಗೆರಾಣಿ ತಡೆದು ಭಲ್ಲೆಯನ್ನು ರಥದಲ್ಲಿ ಇಡುವುದರೊಳಗೆ ಮರಿಗಳು ಚಂಗನೆ ನೆಗೆದು ಸಂಪಿಗೆಯನ್ನು ತಬ್ಬಿಕೊಂಡು ಹಣೆ ಕೆನ್ನೆ ಕಣ್ಣುಗಳಿಗೆ ಮೂಸಿ ಮುದ್ದಾಡಿದವು.

ಅಂತಃಕರಣದ ಈ ಅದ್ಭುತಲೋಕ ಕಂಡು ರಾಜ ಅಕ್ಷರಶಃ ಆನಂದದ ಸಮುದ್ರದಲ್ಲಿ ಮುಳುಗಿ ತೇಲಾಡಿದ. ಪ್ರತಿಯೊಂದು ಪ್ರಾಣಿ ಪಕ್ಷಿಯೂ ಸಂಪಿಗೆಯನ್ನು ಸ್ಪರ್ಶಿಸಿ ಮೂಸಿ ಮುದ್ದಿಟ್ಟು ಸಂತೋಷಪಟ್ಟಿತು. ಸಂಪಿಗೆಯಂತೂ ಪ್ರತಿಯೊಂದನ್ನು ತಬ್ಬಿ ತಟ್ಟಿ ಮುದ್ದಿಟ್ಟು ಆನಂದಬಾಷ್ಪ ಉದುರಿಸಿದಳು. ನೋಡಿದರೆ ಅಲ್ಲೊಂದು ಖಗಮಿಗಗಳ ದೊಡ್ಡ ಜಾತ್ರೆಯೇ ನೆರೆದ ಹಾಗಿತ್ತು. ಯಾವುದಕ್ಕೂ ಜಾತಿವೈರವಾಗಲಿ, ಅಸೂಯೆಯಾಗಲಿ ಇರಲಿಲ್ಲ. ಅಷ್ಟರಲ್ಲಿ ವನಪಾಲಕನೂ ಓಡಿಬಂದು ಮಗಳನ್ನು ಕಂಡು ಆನಂದದಿಂದ ಹೋ ಎಂದು ಅತ್ತುಬಿಟ್ಟ. ನೆರವಿ ನಿಧಾನವಾಗಿ ಮುಮದೆ ಸಾಗಿತು.

ಮೆರವಣಿಗೆ ವನಪಾಲಕನ ವಾಸಸ್ಥಾನದ ಬಳಿಗೆ ಬಂತು. ಮಗಳು ತಂದೆಗಾಗಿ ತಂದಿದ್ದ ಬೆಚ್ಚನೆಯ ಬಟ್ಟೆ ಮತ್ತು ಕಂಬಳಿಗಳನ್ನು ಕೊಟ್ಟಳು. ತಾನೇ ಮಾಡಿದ್ದ, ಅವನಿಗೆ ಪ್ರಿಯವಾದ ರೊಟ್ಟಿ ಸೊಪ್ಪಿನಸಾರು ಹಾಗೂ ಹೀರೇಕಾಯಿ ಪಲ್ಯವನ್ನು ಕೈಯಾರೆ ತುತ್ತು ಮಾಡಿ ಉಣಿಸಿದಳು. ಆಮೇಲೆ ‘ಮಹಾರಾಜನಿಗೆ ನಮ್ಮ ಕಾಡು ತೋರಿಸಿಕೊಂಡು ಬರುತ್ತೇನೆ ಇಲ್ಲೇ ಇರಿ’ ಎಂದು ಮರಿಗಳನ್ನು ಅಲ್ಲೇ ಬಿಟ್ಟು ಮಹಾರಾಜನ ಕೈ ಹಿಡಿದು ಕರೆದೊಯ್ದಳು.