ಕಾಡಿನ ಹಸಿರು ಈ ದಿನ ಹೆಚ್ಚು ಹಸಿರಾಗಿತ್ತು. ಪ್ರತಿಯೊಂದು ತರುಮರ ಬಳ್ಳಿ ಕಂಟಿಗಳು ಹೆಚ್ಚು ಹೂ ಬಿಟ್ಟಿದ್ದವು. ಹಕ್ಕಿಗಳಂತೂ ವಿನಾಕಾರಣ ಹಾರಾಡಿ ಹಾಡುತ್ತ ಹಾಡಿನ ಸ್ಪರ್ಧೆಯಲ್ಲಿ ತೊಡಗಿದ್ದವು. ಕೆಲವು ಮಾಗಿದ ಹೂಗಳುದುರಿ ಅವುಗಳ ಮಿಡಿಗಳು ಹೊಳೆಯತೊಡಗಿದ್ದವು. ಅವುಗಳ ಮುನ್ಸೂಚನೆಯ ವಾಸನೆಯೂ ಈಗ ಉದುರುವ ಹೂಗಳಲ್ಲಿ ಸೇರಿಕೊಂಡು ಕಾಡು ಹಿತಕರ ಪರಿಮಳಗಳ ಕಗ್ಗಾಡಾಗಿತ್ತು.

ಸಂಪಿಗೆ ರಾಣಿ ಅಲ್ಲಿಗೆ ತರುಮರಗಳನ್ನು ಎದುರು ಬಂದ ಖಗಮಿಗಗಳನ್ನು ಮಹಾರಾಜನಿಗೆ ಪರಿಚಯಿಸುತ್ತ ನಡೆದಳು. ಅಷ್ಟರಲ್ಲಿ ದೂರದಲ್ಲಿದ್ದ ಕೋಗಿಲೆಯೊಂದು ಕೂಗಿತು.

ಸಂ.ರಾಣಿ : ಪ್ರಭು ಅದು ಪರಪುಟ್ಟ, ನನ್ನ ಸ್ನೇಹಿತ, ಚೆನ್ನಾಗಿ ಹಾಡುತ್ತಾನೆ. ನಿಮಗೆ ಶುಭವಾಗಲಿ ಎನ್ನುತ್ತಿದ್ದಾನೆ.

ಮಹಾರಾಜ ಆನಂದ ಆಶ್ಚರ್ಯಗಳಿಂದ ಉಬ್ಬಿಹೋದ –

ರಾಜ : ನಿನ್ನ ಸ್ನೇಹಿತನಿಗೆ ವಂದನೆ ಹೇಳು

ಇನ್ನೊಂದು ಹಕ್ಕಿ ಅನೇಕ ಸಲ ಕೂಗಿ ಗಮನ ಸೆಳೆಯಿತು.

ಸಂ.ರಾಣಿ : ಪ್ರಭು ಇವಳೆ ಹಣ್ಣುಕುಟುಕಿ. ಪಂಚರಂಗಿಯ ಮಗಳು. ಅರಮನೆಯಲ್ಲಿ ಪಂಜರದಲ್ಲಿದ್ದಳಂತೆ. ಅಕ್ಕನ ಬಗ್ಗೆ ನನ್ನಲ್ಲಿ ತಕರಾರು ಹೇಳುತ್ತಿದ್ದಾಳೆ.

ಅಷ್ಟರಲ್ಲಿ ಪಂಚರಂಗಿ ಗಿಳಿಯೇ ಕೂಗಿತು.

ಸಂ.ರಾಣಿ : ಪ್ರಭು ಆಕೆ ಪಂಚರಂಗಿ ನನ್ನ ಗೆಳತಿ. ಇನ್ನು ಮೇಲೆ ಪ್ರಭುಗಳು ಯಾರನ್ನೂ ಪಂಜರದಲ್ಲಿಡಬಾರದಂತೆ. ಹಾಗಂತ ನಿಮ್ಮಲ್ಲಿ ವಿನಂತಿಯಂತೆ.

ಹಕ್ಕಿಯ ಈ ವಿನಂತಿ ಕೇಳಿ ಮಹಾರಾಜನ ಅಂತಃಕರಣ ಕರಗಿ ಹೋಯಿತು.

ರಾಜ : ವಿನಂತಿಯಲ್ಲ, ಆಜ್ಞೆಯಾಗಿ ಸ್ವೀಕರಿಸಿದ್ದೇನೆಂದು ಹೇಳು ದೇವಿ ಎಂದ.

ಅದನ್ನವಳು ಪಂಚರಂಗಿಗೆ ತಿಳಿಸುವಷ್ಟರದಲ್ಲಿ ದೂರದಿಂದ ಪರಿಚಿತ ಧ್ವನಿಯ ಕೇಕೆ ಕೇಳಿಸಿತು. ತಿರುಗಿ ನೋಡಿದರೆ ಹುಣಿಸೇಮರದಲ್ಲಿ ತಿಳಿಹಸಿರೆ ಕೂತಿದ್ದಳು. ಅದನ್ನು ನೋಡಿ ಸಂಪಿಗೆ ಉತ್ಸಾಹದಿಂದ ಮಹಾರಾಜನ ಕೈಹಿಡಿದು ಹುಣಿಸೆಮರದಡಿ ಕರೆದೊಯ್ದಳು.

ಸಂ.ರಾಣಿ : ಏನೆ ತಿಳಿಹಸಿರೆ, ಇಲ್ಲಿದ್ದೀಯಾ ಕಳ್ಳಿ, ನನಗೊಂದು ಹುಣಸೆ ಹಣ್ಣು ಎಸಿಯೆ.

ಮರದಲ್ಲಿದ್ದ ತಿಳಿಹಸಿರೆ ಉತ್ಸಾಹದಿಂದ ಕೇಕೆ ಹಾಕಿದ ಹಾಗೆ ಕೂಗಿತು.

ಸಂ.ರಾಣಿ : ಅದೇನೆ ತಿಳಿಹಸಿರೆ ಉತ್ಸಾಹದಿಂದ ಕೇಕೆ ಹಾಕುತ್ತಿ?

ಎಂದಳು ಅದು ಕೂಗಿದೊಡನೆ,

ಸಂ.ರಾಣಿ : ಪ್ರಭು ತಿಳಿಹಸಿರೆ ನಿಮಗೆ ಅಭಿನಂದನೆ ಹೇಳುತ್ತಿದ್ದಾಳೆ.

ಎಂದಳು. ಮಹಾರಾಜನಿಗೆ ಅರ್ಥವಾಗಲಿಲ್ಲ.

ರಾಜ : ಅಭಿನಂದನೆ? ಯಾಕಾಗಿ?

ಈಗ ತಿಳಿಹಸಿರೆ ಇನ್ನೊಮ್ಮೆ ಹಾಡಿನಂತೆ ರಾಗ ಎಳೆದು ಕೂಗಿತು. ಸಂಪಿಗೆ ನಾಚಿ ಮುಖ ಮುಚ್ಚಿಕೊಂಡಳು.

ರಾಜ : ದೇವಿ ತಿಳಿಹಸಿರೆ ಏನು ಹೇಳಿದಳು?

ಸಂ.ರಾಣಿ : ಹೋಗಿ ಪ್ರಭು ನನಗೆ ನಾಚಿಕೆ.

ರಾಜ : ವಿಷಯವೇನೆಂಬುದೇ ತಿಳಿಯಲಿಲ್ಲವಲ್ಲ.

ಸಂ.ರಾಣಿ : ಪ್ರಭು ನೀವು ಇನ್ನು ಕೆಲವೇ ತಿಂಗಳಲ್ಲಿ ಯುವರಾಜನ ತಂದೆಯಾಗುತ್ತೀರಂತೆ.

ಎಂದು ಹೇಳಿ ರಾಜನ ಎದೆಯಲ್ಲಿ ಮುಖ ಮುಚ್ಚಿಕೊಂಡಳು. ರಾಜ ಆನಂದತುಂದಿಲನಾಗಿ ಕೇಳಿದ –

ರಾಜ : ಹೌದೆ? ನನಗ್ಯಾಕೆ ಹೇಳಲಿಲ್ಲ?

ಸಂ.ರಾಣಿ : ನನಗೂ ಗೊತ್ತಿರಲಿಲ್ಲ, ತಿಳಿಹಸಿರೆ ಹೇಳಿದ್ದರಿಂದಲೇ ತಿಳಿಯಿತು.

ಸುದ್ದಿ ತಿಳಿದಿದ್ದೇ ಇಡೀ ಕಾಡಿನ ಜೀವರಾಶಿ ಸಂಭ್ರಮದಿಂದ ಕೇಕೆ ಹಾಕಿ ಕುಣಿದಾಡಿದವು. ತರುಮರಗಳು ಹೂ ಉದುರಿಸಿ ಸಂತೋಷಪಟ್ಟವು. ವನಪಾಲಕನಂತೂ ಸುತ್ತಲಿನ ಹತ್ತೂ ದೇವರಿಗೆ ಕೈಮುಗಿದು ಸುಖವಾದ ಹೆರಿಗೆಯ ಹರಕೆ ಹೊತ್ತು, ಮಗಳಿಗೆ ದೃಷ್ಟಿ ನಿವಾಳಿಸಿದ. ಎಲ್ಲ ಬಳಗವನ್ನ ಬೀಳ್ಕೊಂಡು ಬರುವಾಗ ಕುದುರೆಗಳು ಕೂಡ ರಥ ಕುಲಕದ ಹಾಗೆ ಆದರೆ ಉತ್ಸಾಹವನ್ನೂ ತಡೆದುಕೊಳ್ಳಲಾರದೆ ಕುಣಿದ ಹೆಜ್ಜೆಗಳನ್ನು ನಿಧಾನವಾಗಿ ಹಾಕುತ್ತಾ ಬಂದವು.

ಸಂಪಿಗೆ ರಾಣಿ ಗರ್ಭವತಿಯಾದ ಸುದ್ದಿ ತಿಳಿದುದೇ ಆಯ್ತು, ಮಹಾರಾಣಿ ಉರಿದುರಿದು ಕೆಂಡಾಮಂಡಲವಾದಳು.

ರಾಣಿ : ಅಯ್ಯೊ ಅಯ್ಯೊ ಅಯ್ಯೊ! ಕೂದಲು ಕಿತ್ತುಕೊಳ್ಳಲೆ? ತಲೆಬುರುಡೆ ಜಜ್ಜಿಕೊಳ್ಳಲೆ? ಇನ್ನಿವಳನ್ನು ತಡೆಯುವವರುಂಟೆ? ಮೊದಲೇ ಮದ್ದುಮಾಟದ ಚೆಲುವೆ. ಇದೂ ಸಾಲದೆಂದು ನನ್ನ ಹೊಟ್ಟೆ ಉರಿಸೋದಕ್ಕೆ ಗರ್ಭಿಣಿ ಬೇರೆ ಆಗಿಬಿಟ್ಟಳು. ಇನ್ನು ಕೇಳಬೇಕೆ? ಅಯ್ಯೊ! ಅಯ್ಯೊ!”

ಎಂದು ಹೇಳುತ್ತ ಕೈಯಲ್ಲಿದ್ದ ಹೂಮಾಲೆಯನ್ನು ಹೊಸಕಿ ಎಸೆದಳು.

ಸೇವಕಿ : ದೇವರು ನಿಮಗೂ ಒಳ್ಳೆಯದನ್ನು ಮಾಡುತ್ತಾನೆ. ಶಾಂತರಾಗಿರಿ ಮಹಾರಾಣೀ.

ರಾಣಿ : ದೇವರು ಇಂಥವಳಿಗೂ ಒಳ್ಳೆಯದನ್ನು ಮಾಡುತ್ತಾನೆಂದರೆ ನನಗೆ ಅವನ ಒಲ್ಳೆಯತನವೇ ಬೇಡ. ಮನುಷ್ಯರಿಗೆ ಬರುವ ಕೆಟ್ಟ ರೋಗಗಳೆಲ್ಲಾ ಅವಳ ಗರ್ಭಕ್ಕೆ ಬರಲಿ.

ಎಂದು ಶಾಪ ಹಾಕಿದಳು.

ಸೇವಕಿ : ಕೋಪದಲ್ಲಿ ವಿವೇಕವನ್ನು ಸುಟ್ಟುಹಾಕಬೇಡ ತಾಯೀ ಶಾಂತಳಾಗು

ಎಂದರೆ

ರಾಣಿ : ಇನ್ನೆಲ್ಲಿಂದ ಶಾಂತಿ? ದೇವರು ಮಾಡಿದ ಈ ಅನ್ಯಾಯವನ್ನ ನಾನಾದರೂ ಸರಿಪಡಿಸಲೇಬೇಕು

ಎಂದು ಇನ್ನಷ್ಟು ಕೋಪಗೊಂಡಳು.

ದಿನದಿನಕ್ಕೆ ಅವಳ ಕೋಪ ಬೆಳೆದು ದೊಡ್ಡ ಪ್ರಾಣಿಯಾಗಿ ಬೇಟೆಯಾಡಲು ಸಿದ್ಧವಾಯಿತು.

ಒಂದು ದಿನ ಮಹಾರಾಣಿ ಹೊಟ್ಟೆಕಿಚ್ಚಿನಿಂದ ಉರಿಯುತ್ತ ತನ್ನ ಅಂತಃಪುರದಲ್ಲಿ ಕೂತಿದ್ದಳು. ಕೂದಲು ಕೆದರಿ ಮುಖ ಕರಾಳವಾಗಿತ್ತು. ಸಂಪಿಗೆರಾಣಿ ಗರ್ಭಿಣಿಯಾದಾಗಿನಿಂದ ಸರಿಯಾಗಿ ಊಟ ನಿದ್ದೆಯಿಲ್ಲದೆ ಅವಳ ಸಹಜಸೌಂದರ‍್ಯ ಕೂಡ ವಿಕಾರವಾಗಿತ್ತು.

ಸೇವಕಿ : ದೇವರು ಕಣ್ಣು ತೆರೆದರೆ ನೀವೂ ತಾಯಿಯಾಗಬಹುದು ಎಂದು ಬುದ್ಧಿ ಹೇಳಿದ ಸೇವಕಿಗೆ,

ರಾಣಿ : ಅವನು ಕಣ್ಣು ತೆರೆಯೋತನಕ ಕಯುವವಳಲ್ಲ ನಾನು. ಅವನ ಕಣ್ಣಿಗೆ ಈಗಲೇ ಬೆಂಕಿ ಸುರಿಯುತ್ತೇನೆ ಎಂದು ಹೇಳಿ ‘ಗುಣವಂತನನ್ನು ಕಳಿಸು’ ಎಂದು ಹೇಳಿದಳು.

ಗುಣವಂತ ಮಹಾರಾಣಿಯ ತೌರುಮನೆ ಕಡೆಯಿಂದ ಬಂದವ, ನಂಬಿಗಸ್ಥ. ಮಹಾರಾಣಿಯನ್ನ ಮದುವೆ ಮಾಡಿಕೊಡುವಾಗ  ಮಗಳ ಜೊತೆಗಿರಲಿ ಎಂದು ನಂಬಿಗಸ್ಥರಾದ ಇಬ್ಬರು ಸೇವಕರನ್ನು ಉಡುಗೊರೆಯಾಗಿ ಕಳಿಸಿದ್ದ ಆಕೆಯ ತಂದೆ.

ಆ ಪೈಕಿ ಗುಣವಂತ ಒಬ್ಬ. ರಣಹದ್ದು, ಗಿಡುಗ, ಗರುಡ ಮುಂತಾದ ಹಕ್ಕಿಗಳಿಗೆ ಬೇಟೆಯಾಟ ಕಲಿಸುವುದರಲ್ಲಿ ನಿಪುಣ. ಹೇಳಿಕಳಿಸಿದೊಡನೆ ಆತ ಬಂದು ‘ಸೇವಕ ಸಿದ್ಧನಿದ್ದೇನೆ ಮಹಾರಾಣಿ’ ಅಂದ. ಮಹಾರಾಣಿ ಸುತ್ತನೋಡಿ, ಯಾರೂ ಇಲ್ಲವೆಂದು ಖಾತ್ರಿ ಮಾಡಿಕೊಂಡು ಹೇಳಿದಳು:

ರಾಣಿ : ಇದು ಗುಪ್ತ ವಿಚಾರ. ಗುಟ್ಟು ಕಾಪಾಡಬೇಕು. ಯಾರಾದರೂ ತಿಳಿದರೆ ತಲೆದಂಡ ತೆರಬೇಕಾಗುತ್ತದೆ. ತಿಳಿಯಿತಾ? ಹುಷಾರ್!

ಗುಣವಂತ : ನೀವು ನನ್ನನ್ನು ನಂಬಬಹುದು ಮಹಾರಾಣಿ.

ರಾಣಿ : ಇವತ್ತೇ ನನ್ನ ತಂದೆಯ ಬಳಿ ಹೋಗು. ಸ್ನೇಹಿತ ರಾಜರನ್ನ ಸೇರಿಸಿ ಈ ರಾಜ್ಯದ ಮೇಲೆ ದಂಡೆತ್ತಿ ಬಾ ಅಂತ ಹೇಳು.

ಗುಣವಂತನಿಗೆ ಆಶ್ಚರ್ಯವಾಯಿತು; ಸಂಶಯದಿಂದ –

ಗುಣವಂತ : ಆದರೆ ಮಹಾರಾಣಿ….

ಎಂದು ಕೇಳಬೇಕೆನ್ನುವಷ್ಟರಲ್ಲಿ ಅವಳೇ ಹೇಳಿದಳು:

ರಾಣಿ : ಚಿಕ್ಕರಾಣಿ ಗರ್ಭಿಣಿಯಾದಾಗಿನಿಂದ ಮಹಾರಾಜರು ನನ್ನನ್ನ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಅವಳ ಮಾತು ಕೇಳಿಕೊಂಡು ನನ್ನನ್ನು ನೀರಿಗೆ ತಳ್ಳುವ ವಿಚಾರವನ್ನು ಮಾಡುತ್ತಿದ್ದಾರೆಂದು ಹೇಳು. ತಡ ಮಾಡಿದರೆ ನನ್ನ ಹೆಣ ಕೂಡ ತಂದೆತಾಯಿಗಳಿಗೆ ಸಿಕ್ಕಲಾರದೆಂದು ಹೇಳು.

ಗುಣವಂತ : ಆದರೆ ಮಹಾರಾಣಿ ಅಳಿಯನ ರಾಜ್ಯದ ಮೇಲೆ ದಂಡೆತ್ತಿ ಹೋದರೆ ಏನು ಪ್ರಯೋಜನ? ಎಂದು ರಾಜರು ಕೇಳಿದರೆ?……

ರಾಣಿ : ಪ್ರಯೋಜನ ಏನು ಮತ್ತು ಅದನ್ನು ಹ್ಯಾಗೆ ಪಡೆಯಬೇಕೆಂಬುದು ನನಗೆ ಗೊತ್ತು. ಇದರಲ್ಲಿ ಎಲ್ಲಾ ಬರೆದಿದ್ದೇನೆ. ಇದನ್ನು ತೆಗೆದುಕೊಂಡು ಹೋಗು.

ಎಂದು ಹೇಳಿ ಒಂದು ಪತ್ರ ಕೊಟ್ಟು ತೌರಿಗೆ ಕಳಿಸಿದಳು.

ಗುಣವಂತನ ಕೆಲಸವೇನೋ ಈಗ ಹಗುರವಾಯಿತು ನಿಜ. ಯಾಕೆಂದರೆ ಮಹಾರಾಣಿಯ ಅಸಂಗತ ವಿಚಾರಗಳನ್ನು ತಾನು ವಿವರಿಸಬೇಕಾದ ಅಗತ್ಯವಿಲ್ಲ. ಪತ್ರವೇ ಆ ಕೆಲಸ ಮಾಡುತ್ತದೆ. ಆದರೆ ಅನುಮಾನಗಳು ಅವನ ತಲೆ ತಿನ್ನತೊಡಗಿದವು. “ಮಗಳೇನೋ ತಂದೆಗೆ ಕಾಗದ ಬರೆದು ‘ಗಂಡನ ಮೇಲೆ ದಂಡೆತ್ತಿ ಬಾ’ ಅಂದರೆ ಯಾವ ದಡ್ಡ ತಂದೆ ಬಂದಾನು? ಹೋಗಲಿ ಗಂಡನ ಮೇಲೆ ದಂಡೆತ್ತಿ ಬಾ ಎಂದು ಯಾವ ಹೆಂಡತಿ ಹೇಳಿಯಾಳು? ತಾನು ಕೊಡುವ ಪತ್ರ ನೋಡಿ ಅವರಪ್ಪ ಅಂದುಕೊಳ್ತಾನೆ; ಓಹೋ ಗಂಡಹೆಂಡಿರು ಜಗಳವಾಡಿದ್ದಾರೆ. ಗಂಡ ಹೆಂಡಿರ ಜಗಳ ಉಂಡುಮಲಗೋತನಕ. ಅಂದರೆ ಈ ಪತ್ರ ಕೈಸೇರುವ ಹೊತ್ತಿಗೆ ಇಬ್ಬರೂ ಉಂಡು ಮಲಗಿರುತ್ತಾರೆ. ಜಗಳ ಮರೀತಾರೆ. ಅಂದುಕೊಂಡು ನಗಾಡುತ್ತಾನೆ, ಅಷ್ಟೇ!”

ಆದರೆ ಗುಣವಂತ ಅಂದುಕೊಂಡ ಹಾಗೆ ನಡೆಯಲಿಲ್ಲ. ತಂದೆ ಮಗಳ ಪತ್ರ ಓದಿದ. ಮಗಳಿಗಾದ ಅನ್ಯಾಯ ನೆನೆದು ಕರ‍್ರಂ ಕುರ‍್ರಂ ಹಲ್ಲು ದವಡೆ ತಿಂದ. ಗೌಡಳಿಕೆ ಪಾಳೇಗಾರರು ಮಾಂಡಳಿಕ ಮಾನ್ಯರನ್ನು ಕರೆದು “ನಡೀರಯ್ಯಾ ಯುದ್ಧಕ್ಕೆ” ಅಂದ. ಅಂದು ಮಾಂಡಳಿಕರ ಹೆಸರು ಮುಂದೆ ಮಾಡಿಕೊಂಡು ತಾನೂ ಬಂದೇಬಿಟ್ಟು!

ಶಿವಾಪುರದ ಮಹಾರಾಜನಿಗಷ್ಟೇ ಅಲ್ಲ. ಪ್ರಜೆಗಳಿಗೂ ಆಶ್ಚರ್ಯವಾಯಿತು. ಯಾವ ಸುಳಿವೂ ನೀಡದೆ ಮಾಂಡಳಿಕರು ಹೀಗೆ ದಂಡೆತ್ತಿ ಬರಬೇಕಾದರೆ ಏನು ಕಾರಣವಿರಬಹುದು? ಎಂದು ಎಷ್ಟು ಯೋಚನೆ ಮಾಡಿದರೂ ಉತ್ತರ ಹೊಳೆಯಲಿಲ್ಲ. ಇದು ಮಾಂಡಳಿಕರ ತಲೆ ಅಂತೂ ಅಲ್ಲ. ಈ ದಾಳಿಯ ಹಿಂದೆ ಇನ್ಯಾರದೋ ತಲೆ ಇರಬೇಕೆಂದೂ ಯೋಚನೆಯಾಯ್ತು. ಮಾಂಡಳಿಕರು ದಂಗೆ ಏಳಲು ತಲೆ ಕಾರಣವೋ ಬಾಲ ಕಾರಣವೋ – ಯುದ್ಧವನ್ನಂತೂ ಮಾಡಲೇಬೇಕಲ್ಲ – ಎಂದು ಕೂಡಲೇ ಸೈನ್ಯವನ್ನು ಸಜ್ಜು ಮಾಡಿ ಕಳಿಸಿ ಮಹಾರಾಜ ಸಂಪಿಗೆರಾಣಿಯಲ್ಲಿಗೆ ಬಂದ.

ಸಂಪಿಗೆ ಈಗ ತುಂಬು ಬಸುರಿ. ಅರಮನೆಯ ಅಂಗಳದಲ್ಲಿ ಆಡುವ ಕಂದ ಇಂದು ಬಂದಾನು ನಾಳೆ ಬಂದಾನೆಂದು ಕೂತಿರುವಾಗಲೇ ಮಹಾರಾಜ ಬಂದ. ಇದನ್ನೆಲ್ಲ ಮುಂದಾಗಿ ತಿಳಿದೇ ಮಹಾರಾಣಿ ಇಲ್ಲೇ ಇದ್ದಳು. ರಾಜ ಕಾಳಜಿಯಿಂದ ಹೇಳಿದ:

ರಾಜ : ಮಹಾರಾಣಿ ಇಲ್ಲೆ ಇದ್ದದ್ದು ಅನುಕೂಲವೇ ಆಯ್ತು. ಮಾಂಡಳಿಕರು ನಮ್ಮ ಮೇಲೆ ದಂಡೆತ್ತಿ ಬಂದಿದ್ದಾರೆ. ಹೋಗಿ ಸದೆ ಬಡಿದು ಬೇಗನೆ ಬರುತ್ತೇನೆ. ಅಲ್ಲಿಯತನಕ ಸಂಪಿಗೆರಾಣಿಯನ್ನು ನಿಮ್ಮ ಕೈಗೆ ಒಪ್ಪಿಸಿದ್ದೇನೆ. ನಿಮ್ಮ ಜೀವದ ಹಾಗೆ ಈಕೆಯನ್ನು ಕಾಪಾಡಬೇಕು.

ರಾಣಿ : ತಂಗಿಯ ಯೋಗಕ್ಷೇಮವನ್ನು ಅಕ್ಕನಿಗೆ ವಹಿಸಿ ಕೊಡೋದೇನು ಬಂತು ಪ್ರಭು? ಅದು ನನ್ನ ಕರ್ತವ್ಯ. ನೀವು ನಿಶ್ಚಿಂತರಾಗಿ ಹೋಗಿ ಬನ್ನಿ.

ಆದರೆ ಸಂಪಿಗೆಗೆ ಆತಂಕ.

ಸಂ.ರಾಣಿ : ಪ್ರಭು ನೀವು ಯುದ್ಧಕ್ಕೆ ಹೋಗಲೇಬೇಕೆ? ಎಂದು ಅಸಹಾಯಕಳಾಗಿ ಕೇಳಿದಳು.

ರಾಣಿ : ಅದೇನು ಹಾಗೆ ಆತಂಕ ಪಡುತ್ತೀ ತಂಗಿ? ನಿನ್ನ ಸೌಭಾಗ್ಯ ಮತ್ತು ಆತಂಕದಲ್ಲಿ ಭಾಗಿಯಾಗಲು ನಾನಿಲ್ಲವೇ? ಅಥವಾ ನೀನು ಬಯಸಿದರೆ ನಿನ್ನ ತೌರಿಗೂ ಎರಡು ದಿನ ಹೋಗಿ ಬಾ. ಎಂದಳು. ಅಷ್ಟರಲ್ಲಿ ಮಹಾರಾಜ ಮುಂದೆ ಬಂದು,

ರಾಜ : ಎಲ್ಲಿಗೂ ಹೋಗುವುದು ಬೇಡ. ಒಂದೆರಡು ದಿನಗಳಲ್ಲಿ ಬಂದು ಬಿಡುತ್ತೇನೆ.

ಎಂದು ಹೇಳಿ ಕಣ್ಣೀರು ಸುರಿಸುತ್ತಿದ್ದ ಸಂಪಿಗೆರಾಣಿಯನ್ನು ಸಂತೈಸಿ ಹೋದ. ಮಹಾರಾಣಿಯ ಮುಖದಲ್ಲಾಗಲೇ ಗೆಲುವು ಮೂಡಿತು.

೧೦

ಮಾರನೇ ಬೆಳಿಗ್ಗೆ ಬೆಳ್ಳಿ ಮೂಡುವ ಸಮಯದಲ್ಲಿ ಸಂಪಿಗೆರಾಣಿಗೆ ಯಾರೋ ಹಣ್ಣಿನ ಮರ ಕಡಿದಂತೆ ಕನಸಾಯಿತು. ಬೆಚ್ಚಿ ಎದ್ದು ಕೂತವಳು ಪುನಃ ಮಲಗಲೇ ಇಲ್ಲ. ಕನಸು ನೆನೆದು ಆತಂಕವಾಯಿತು. ತಂದೆಯ ನೆನಪಾಯಿತು. ಕಾಡಿನ ಪ್ರಾಣಿಪಕ್ಷಿಗಳ ನೆನಪಾಯಿತು. ದುಃಖವಾಗಿ ಯಾರಿಗೂ ಗೊತ್ತಾಗದಂತೆ ಅಳುತ್ತ ಕೂತಳು.

ಬೆಳಗಾದದ್ದೇ ತಡ ಮಹಾರಾಣಿಯ ಬಳಿಗೆ ಹೋಗಿ

ಸಂ.ರಾಣಿ : ಮಹಾರಾಜರಿಂದ ಏನಾದರೂ ಸುದ್ದಿ ಬಂತೆ?

ರಾಣಿ : ಚಿಂತೆ ಬೇಡ ತಂಗಿ. ಮಹಾರಾಜರು ಗೆಲ್ಲೋದರಲ್ಲಿ ಸಂಶಯವೇ ಇಲ್ಲ. ಸೇವಕಿಯರೊಂದಿಗೆ ನೆಮ್ಮದಿಯಿಂದ ಇರು.

ಮಹಾರಾಣಿಯ ಮಾತಿನಿಂದ ಸಮಾಧಾನವಾಗಲಿಲ್ಲ. ಬಹಳ ಹೊತ್ತಿನ ತನಕ ಹೀಗೇ ಚಡಪಡಿಸಿದಳು. ಜಂತಿಯ ಮ್ಯಾಲಿನ ಹಲ್ಲಿ ಲೊಚಗುಡತ್ತಲೂ ಬೆಚ್ಚಿ ಮತ್ತೆ ಮಹಾರಾಣಿಯ ಬಳಿ ಹೋದಳು.

ರಾಣಿ : ಯಾಕಿಷ್ಟು ಚಿಂತೆ ಮಾಡುತ್ತೀ ತಂಗೀ? ಮಹಾರಾಜರು ಗೆದ್ದು ಬರುತ್ತಾರೆ.

ಎಂದು ಹೇಳಿ ಸೇವಕಿಯನ್ನು ಕರೆದು

ರಾಣಿ : ತಂಗಿಯೊಂದಿಗಿದ್ದು ಆಟವಾಡಿ ಆಕೆಗೆ ಏನಾದರು ಮನರಂಜನೆ ಮಾಡಿರೆ.

ಸೇವಕಿ : ಚಿಕ್ಕ ರಾಣಿಯರು ಯಾವುದಕ್ಕೂ ಒಪ್ಪುತ್ತಿಲ್ಲ ಮಹಾರಾಣಿ.

ಎಂದರು. ಈಗ ಮಹಾರಾಣಿಯೇ ಮುಂದೆ ಬಂದಳು. ಸಂಪಿಗೆಯ ತಲೆ ನೇವರಿಸಿ ಮಕ್ಕಳಿಗೆ ಮಾಡುವಂತೆ ಗದ್ದ ಹಿಡಿದು ಮುದ್ದು ಮಾಡಿದಳು. ಆಮೇಲೆ  ನುಡಿಗಳಿಗೆ ವೇಷ ತೊಡಿಸಿ,

ರಾಣಿ : ತಂಗೀ, ನೀನು ಬಯಸಿದಾಗ ಮರವಾಗುತ್ತೀಯಂತೆ, ಹೂ ಬಿಡುತ್ತೀಯಂತೆ. ಆ ಆಟವನ್ನಾದರೂ ನಮಗೆ ತೋರಿಸಬಾರದೆ?

ಸಂ.ರಾಣಿ : ಬನ್ನಿ ತೋರಿಸುತ್ತೇನೆ.

ಎಂದು ಎದ್ದು ನಿಂತಳು, ಎಲ್ಲರೂ ಹಿತ್ತಲ ಕಡೆ ನಡೆದರು.

ಆಕಾಶ ಇಂದು ಎಂದಿಗಿಂತ ನೀಲಿಯಾಗಿತ್ತು. ಉಸಿರುಗಟ್ಟಿದಂತೆ ಗಾಳಿ ಸುಮ್ಮನಿತ್ತು, ಹಸಿರನ್ನು ನೋಡಿ ಚಕಿತಳಾಗಿ ಸಂಪಿಗೆ

ಸಂ.ರಾಣಿ : ಹಿತ್ತಲಲ್ಲಿಯ ಹಸಿರು ಬಿಳಿಚಿಕೊಂಡಿದೆಯಲ್ಲ!

ರಾಣಿ : ಎಳೆ ಬಿಸಿಲಿಗೆ ಹಸಿರು ಬಿಳಿಚಿಕೊಂಡಂತೆ ಕಾಣುತ್ತದೆ. ಅಷ್ಟೆ. ಬಾಮ್ಮ  ನೀನು.

ಅಷ್ಟರಲ್ಲಿ ಎಲ್ಲಿಂದಲೋ ಪಂಚರಂಗಿಯ ಮರಿ ಹಣ್ಣುಕುಟುಕಿ ದಾರಿಗಡ್ಡ ಬಂದು “ಬೇಡ ಅಕ್ಕಾ ಹೋಗಬೇಡ” ಎಂದು ಕಿರಿಚಿ ಎದುರಿನ ಮರದ ಮೇಲೆ ಕುಳಿತುಕೊಂಡಿತು. ಸಂಪಿಗೆ ಮುಂದೆ ಹೆಜ್ಜೆಯಿಡಲು ಅನುಮಾನಿಸುತ್ತಿದ್ದಾಗ ಮಹಾರಾಣಿ ಮುಂದೆ ಬಂದು ಗಿಲೀಟು ನಗೆ ನಗುತ್ತ ಕೈ ಹಿಡಿದು ಕರೆದೊಯ್ದಳು. ಸಂಪಿಗೆ ನಾಲ್ಕು ಕಲ್ಲುಗಳನ್ನು ಆಯ್ದು ಮಹಾರಾಣಿಯ ಕೈಗಿಡುತ್ತ –

ಸಂ.ರಾಣಿ : ಅಕ್ಕಾ ನಾಲ್ಕು ಚಿಕ್ಕ ಕಲ್ಲುಗಳಲ್ಲಿಯ ಒಂದು ಕಲ್ಲನ್ನು ನನ್ನ ಮೇಲೆಸೆದರೆ ನಾನು ಸಂಪಿಗೆ ಮರವಾಗುತ್ತೇನೆ. ಎರಡನೆಯನ್ನು ಎಸೆದರೆ ಮರ ಹೂ ಬಿಡುತ್ತದೆ. ಮೂರನೆಯದನ್ನು ಎಸೆದರೆ ಹೂಗಳು ಉದುರುತ್ತವೆ. ನಾಲ್ಕನೆಯದನ್ನು ಎಸೆದರೆ ಪುನಃ ನಿನ್ನ ತಂಗಿಯಾಗುತ್ತೇನೆ’.

ಎಂದು ಹೇಳಿ ಒಂದೆರಡು ಮಾರು ದೂರದಲ್ಲಿ, ಮರಗಳಿಲ್ಲದಲ್ಲಿ ನಿಂತಳು. ಹಣ್ಣು ಕುಟುಕಿ ಮಾತ್ರ ಕೂಗುತ್ತಲೇ ಇತ್ತು.

ಮಹಾರಾಣಿ ಅವಳ ಮೇಲೆ ಒಂದು ಕಲ್ಲೆಸೆದಳು. ಆಶ್ಚಯ! ಸಣ್ಣ ಸಂಪಿಗೆ ಮರ ಪ್ರತ್ಯಕ್ಷವಾಯಿತು. ಅದರ ಮ್ಯಾಲೆ ಶಿವಲೋಕದ ತಂಗಾಳಿ ಬೀಸಿ ಹೊಳೆಹೊಳೆವ ಎಳೆ ಎಲೆಗಳು ನಲುಗಾಡಿದವು. ಆಗಲೇ ನಾಲ್ಕೆಂಟು ಮರಿಹಕ್ಕಿಗಳು ಬಂದು ಚಿಲಿಪಿಲಿ ಒದಿ ಇದು ಸರಿಯಿಲ್ಲವೆಂದು ಸಾರಿದವು. ಮಹಾರಾಣಿ ಮಾತ್ರ “ಅಬ್ಬಾ! ಎಂಥಾ ಮಲೆಯಾಳ ಮಾಂತ್ರಿಕರಿಗೂ ಗೊತ್ತಿರದ ಮಾಟಗಾರಿಕೆಯಿದು!” ಎಂದುಕೊಂಡು ಎರಡನೆಯ ಕಲ್ಲನ್ನ ಎಸೆದಳು.

ಎಳೆಯ ಮರದಲ್ಲಿ ಸಾವಿರ ದೀಪ ಹಚ್ಚಿದ ಹಾಗೆ ಹೂಗಳರಳಿದರು. ಹಿತ್ತಲ ತುಂಬ ಪರಿಮಳ ಗಮ್ಮಂತ ಅಡರಿತು. ಮಹಾರಾಣಿ ಕಣ್ಣು ಕಿಸಿದು ತನ್ನ ನಡುವಳಿಕೆಗೆ ತಾನೇ ಪ್ರೋತ್ಸಾಹಗೊಂಡು ಮೂರನೇ ಕಲ್ಲನ್ನೂ ಎಸೆದಳು. ಆಕಾಶದಿಂದ ಉಲ್ಕೆ ಉದುರಿದ ಹಾಗೆ ಹೂಗಳು ಉದುರಿ ಬಿದ್ದವು. ಮಾಗಿಯ ಚಳಿಗೆ ಹಣ್ಣೆಲೆ ನಡುಗಿ ನಲುಗಿದವು ಸೇವಕಿ ಉತ್ಸಾಹದಿಂದ ಓಡಿಬಂದು, –

ಸೇವಕಿ : ಆನಂದದಿಂದ ಆತುರ ತಾಳೆ ಹೇಳುತ್ತಿದ್ದೇನೆ ಮಹಾರಾಣಿ, ಚಿಕ್ಕರಾಣಿಯವರು ನಮ್ಮನ್ನು ಅಮೃತಕೊಳದಲ್ಲಿ ಅದ್ದಿಬಿಟ್ಟರು! ಬೇಗನೆ ಕೊನೆಯ ಕಲ್ಲನ್ನು ಎಸೆಯಿರಿ. ಅವರನ್ನು ಯಾವಾಗ ನೋಡೇನೋ ಎನಿಸುತ್ತಿದೆ! ಅಂದಳು,

ಮಹಾರಾಣಿಗೆ ಕೋಪ ಬಂತು, ಹೇಳಿದಳು –

ರಾಣಿ : ನನಗೆ ಆಜ್ಞೆ ಮಾಡುತ್ತೀಯೇನೆ? ಎಲ್ಲಿ, ಯಾವಾಗ, ಏನು ಮಾಡಬೇಕೆಂದು ನನಗೆ ತಿಳಿಯದೆ? ಮದ್ದು ಮಾಟ ಮಾಡಿ ಮಹಾರಾಜರನ್ನ ವಶೀಕರಣ ಮಾಡಿಕೊಂಡಿದ್ದಳಲ್ಲವೆ? ಅದ್ಯಾರು ಇವಳನ್ನು ಪುನಃ ಸಂಪಿಗೆರಾಣಿಯನ್ನಾಗಿ ಪರಿವರ್ತನೆ ಮಾಡುತ್ತಾರೋ ನಾನೂ ನೋಡೇ ಬಿಡುತ್ತೇನೆ. ಈಗಲೇ ಹೋಗಿ ಗುಣವಂತನನ್ನು ಕರೆದುಕೊಂಡು ಬಾ.

ಗುಣವಂತ ಬಂದೊಡನೆ ‘ಗುಣವಂತ ಈ ಮರವನ್ನ ಕಡಿಸಿ ಬಿಡು’ ಎಂದು ಆಜ್ಞೆ ಮಾಡಿ ನಾಲ್ಕನೆಯ ಕಲ್ಲನ್ನು ಬೇರೆ ಕಡೆ ಎಸೆದು ನಡೆದಳು. ಇದನ್ನೆಲ್ಲ ಅಸಹಾಯಕತೆಯಿಂದ ನೋಡುತ್ತಿದ್ದ ಹಣ್ಣುಕುಟುಕಿ ಹಾರಿಹೋಗಿ ನಾಲ್ಕನೆಯ ಕಲ್ಲನ್ನ ಕಚ್ಚಿಕೊಂಡು ತಂದು ಜೋಪಾನವಾಗಿಟ್ಟು ಹಾಡಿಕೊಂಡಿತ್ತು:

ಚೀರಿದವೇ ತಾಯಿ ಚೀರಿದವೇ
ಖಗಮಿಗ ಎಲ್ಲವೂ ಚೀರಿದವೇ!
ನಂಬಿಕೆಯ ಮೈಲಗೆಗೊಳಿಸಿದ ದುಷ್ಟರಿಗೆ
ಶಿಕ್ಷೆ ಇಲ್ಲವೆ ಎಂದು ಕಿರುಚಿದವೇ||

ಅತ್ತು ಮುಖ ಕೆಂಜಗಾದ ಸೂರ್ಯನಾರಾಯಣಸ್ವಾಮಿಯೂ ಪಡುಮಲೆಯ ಕೆಳಗೆ ಅಸ್ತಂಗತನಾದ.

೧೧

ಮಾರನೇ ಮುಂಜಾನೆ ಗುಣವಂತ ಮರಕಟುಕರನ್ನು ಕರೆದುಕೊಂಡು ಅರಮನೆಯ ಹಿತ್ತಲಿಗೆ ಬಂದು ನೋಡಿದರೆ – ಅರೆ! ಸಂಪಿಗೆ ಮರದ ಸುತ್ತ ಮುತ್ತ ಕಾಡಿನ ಕ್ರೂರ ಪ್ರಾಣಿಗಳು ಜನರ ಮೇಲೆ ಎರಗುವುದಕ್ಕೆ ಸಮಯ ಕಾಯುತ್ತಿವೆ! ಸಾವಿರ ಸಾವಿರ ಪಕ್ಷಿಗಳು ಅರಮನೆಯ ಮೇಲೆ ಹಾರುತ್ತ ವಿಚಿತ್ರ ದೃಶ್ಯಗಳ ಸೃಷ್ಟಿಮಾಡಿ ಮೆರೆಯುತ್ತಿವೆ! ಈಗ ಮಾತ್ರ ಮಹಾರಾಣಿ ಗಾಬರಿಯಾದಳು. ಅರಮನೆಯಲ್ಲಿ ಮಹಾರಾಜನಿಲ್ಲ. ಪಟ್ಟಣದಲ್ಲಿ ಮಂತ್ರಿ ಸೇನಾಪತಿ ಸೈನಿಕರಲಿಲ್ಲ. ಅರಮನೆಯಲ್ಲಿದ್ದವರು ಹೊರಗೆ ಹೋಗುವಂತಿಲ್ಲ. ಹೊರಗಿನವರು ಒಳಬರುವಂತಿಲ್ಲ. ಅಂದರೆ ಒಳಗೂ ಹೊರಗೂ ಹೇಳಕೇಳುವವರು ಯಾರೂ ಇಲ್ಲ ಅಂತಾಯಿತು. ಮಹಾರಾಣಿ ಇದ್ದಾಳೆ. ಆಕೆಯ ಮಾತು ಕೇಳಲಿಕ್ಕೆ ಪಶುಪಕ್ಷಿ ತಯಾರಿಲ್ಲ.

ಇಂತಪ್ಪ ಕಷ್ಟನಿಷ್ಠುರಗಳನ್ನು ಸಂಪಿಗೆರಾಣಿ ಸಹಿಸುತ್ತಿರಲಾಗಿ ಖಗಮಿಗಾದಿಗಳು ಜಾಗ ಬಿಟ್ಟು ಕದಲದೆ ಅರಮನೆಯ ಹಿತ್ತಲಲ್ಲಿ ಮರದ ಸುತ್ತ ಗಟ್ಟಿಮುಟ್ಟಾಗಿ ಕೂತಿರಲಾಗಿ ನಾಳೆ ಹ್ಯಾಗೆಂದು ಚಿಂತಿಸುತ್ತ ಮಹಾರಾಣೆ ಮೆತ್ತನೆಯ ಮಂಚದ ಮ್ಯಾಲೆ ಮಲಗಿರಲಾಗಿ ಅವಳಿಗೊಂದು ಕನಸಾಯಿತು –

ಅರಮನೆಯ ಮುಂಭಾಗದ ಕಟ್ಟೆಯ ಮೇಲೆ ಕೂತು ತನ್ನ ಪ್ರೀತಿಯ “ಗಿಳಿ  ಗಿಡುಗನ ಆಟ” ದಲ್ಲಿ ತಲ್ಲೀನಳಾಗಿದ್ದಾಳೆ. ಅಂಗಳದಲ್ಲಿ ರೆಕ್ಕೆ ಬಲಿಯದ ಒಂದು ಗಿಳಿಮರಿ ಹಾರಲಿಕ್ಕೆ ಕಲಿಯುತ್ತಿದೆ. ಮ್ಯಾಲೆ ನೀಲಿ ಆಕಾಶದಲ್ಲಿ ಮೊರದಂಥ ರೆಕ್ಕೆ ಕೆದರಿಕೊಂಡು ಗಿಡುಗ ಹಾರಾಡುತ್ತ ಹೊಂಚಿದೆ. ಈ ನಡುವೆ ತಾಯಿ ಗಿಳಿ ಮತ್ತು ಉಳಿದ ಹಕ್ಕಿಗಳು ಮರಿಯನ್ನ ಕಾಪಾಡಲಾಗದೆ, ಗಿಡುಗನನ್ನು ಎದುರಿಸಲಾಗದೆ ಹತಾಶೆಯಿಂದ ಕಿರುಚಿತ್ತಿವೆ. ಮ್ಯಾಲಿನ ಗಿಡುಗ ಮಾತ್ರ ವೀರಾವೇಶ ಮತ್ತು ರಭಸದಿಂದ ಅಗೋ ಅಗೋ ಎಗರೇಬಿಟ್ಟತು! ಆದರೆ ಸುದೈವದಿಂದ ಮರಿ ಸಿಕ್ಕಲಿಲ್ಲ.

“ಗಿಡುಗನ್ಯಾಕೆ ಮರಿ ಹಿಡಿಯುತ್ತಿಲ್ಲ?” ಅಗೋ ಅಗೋ ಗಿಡುಗ ಹಾರಿ ಬಂದು ಎಗರುವುದಕ್ಕಗಿ ಈ ಬಾರಿ ಹಿಂದಕ್ಕೆ ತುಸು ದೂರ ಹೋಗಿ ಹೊಂಚಿತು. ಇನ್ನೇನು ಎರಗಬೇಕು. ಅಗೋ ಬಂತು ಎನ್ನುವಷ್ಟರಲ್ಲಿ ಮರಿ ಬಂದು ಮಹಾರಾಣಿಯ ತೊಡೆಯೇರಿ ಕೂತಿತು! ಗಿಡುಗನೀಗ ಮಹಾರಾಣಿ ಗುರಿಯಾಗಿ ಅವಳ ಕಡೆಗೇ ಬರುತ್ತಿದ್ದಾಗ ಸೇವಕಿ ಬಂದು –

ಸೇವಕಿ : ಮಹಾರಾಣಿ ಆಗೋ ಗಿಡುಗ ಈಗ ನಿಮ್ಮನ್ನೇ ಗುರಿ ಹಿಡಿದು ಬರುತ್ತಿದೆ. ಕೂಡಲೇ ಆ ಮರಿಯನ್ನು ಗಿಡುಗನತ್ತ ಎಸೆಯಿರಿ,

ಎಂದು ಚೀರಿದಳು, ಮಹಾರಾಣಿಗೆ ಆಶ್ಚರ್ಯವಾಯಿತು!

ಗಿಳಿಮರಿ : ಅಮ್ಮಾ… ಎಂದಿತು!

ರಾಣಿ : ಆಶ್ಚರ್ಯ!

ಗಿಳಿಮರಿ : ಅಮ್ಮಾ ನನ್ನನ್ನು ಕಾಪಾಡು ತಾಯಿ!

ರಾಣಿ : ಆಶ್ಚರ್ಯ! ಮಕ್ಕಳ ಹಾಗೆ ತೊದಲಿ ನನಗೇ ಅಮ್ಮ ಎನ್ನುತ್ತಿದೆ ಗಿಳಿಮರಿ! ಕೇಳಿದೆಯೇನೆ?”

ಎಂದು ಸೇವಕಿಯನ್ನು ಕೇಳಿದಳು.

ಸೇವಕಿ : ಮಹಾರಾಣೀ ನನಗೇನೂ ಕೇಳಿಸುತ್ತಿಲ್ಲವಲ್ಲಾ!

ಗಿಳಿಮರಿ : ಅಮ್ಮಾ ನನ್ನನ್ನ ಕಾಪಾಡು ತಾಯೀ!

ಈಗ ಸೇವಕಿಗೂ ಕೇಳಿಸಿತು, ಹೇಳಿದಳು;

ಸೇವಕಿ : ಹೌದು ಅರಮನೆಯ ಸಹವಾಸದಿಂದ ಮನುಷ್ಯರ ಮಾತು ಕಲಿತಿದೆ. ಇರಲಿ, ಅಗೋ ಗಿಡುಗ ಹೊಂಚಿ ನಿರಾಸೆ ಹೊಂದಿ ಹಾರಿಹೋಗುವ ಮೊದಲೇ ಮತ್ತೆ ಆಟ ಶುರು ಮಾಡಿರಿ ಮಹಾರಾಣಿ –

ಗಿಳಿಮರಿ ಮತ್ತೆ “ಅಮ್ಮಾ…” ಎಂದಿತು. ಗಿಳಿಮರಿಯ ನುಡಿಗಳಿಗೆ ಮಹಾರಾಣಿಯ ಹೃದಯ ಮಿಡಿಯಿತು. ಈಗ ಸುತ್ತ ಸೇರಿದ ಪಕ್ಷಿಗಳೆಲ್ಲ ‘ಏನು ಮಾಡುವಳೋ’ ಎಂದು ಮಹಾರಾಣಿಯನ್ನೇ ನೋಡುತ್ತಿದ್ದವು. ತಕ್ಷಣ ಸೇವಕಿ ಮಹಾರಾಣಿಯ ತೊಡೆಯ ಮೇಲಿದ್ದ ಮರಿಯನ್ನು ಹಿಡಿದು ಅವಳ ಕೈಗೆ ಕೊಡುತ್ತ –

ಸೇವಕಿ : ಇಂತಹ ಅಪರೂಪದ ಅವಕಾಶ ಇನ್ನೊಮ್ಮೆ ಸಿಕ್ಕಲಾರದು ಮಹಾರಾಣಿ. ತಗೊಳ್ಳಿ ಈ ಮರಿಯನ್ನ. ಕತ್ತು ಹಿಸುಕಿ ಹದ್ದಿನ ಕಡೆ ಎಸೆಯಿರೆಂದು ಕೊಟ್ಟಳು.

ಮಹಾರಾಣಿ ಕೈಯಲ್ಲಿ ಆ ಹಕ್ಕಿಯನ್ನು ಹಿಡಿದುಕೊಂಡು ನೋಡಿದಳು. ಮರಿಹಕ್ಕಿ ದಯನೀಯವಾಗಿ ಇವಳ ಕಡೆ ನೋಡುತ್ತ “ಅಮ್ಮಾ…” ಎಂದಿತು.

ರಾಣಿ : ಈ ಮರಿ ಅಮ್ಮಾ ಬಂದಾಗ ಹೂಗು ಹೋಗಿದ್ದ ನಿಧಿ ಹೊರಬಂದು ಕಾಣಿಸಿದ ಅನುಭವವಾಯಿತು. ಅದ್ಯಾಕೆ ನನಗೆ ಸಂತೋಷವಾಗುತ್ತಿದೆ? ಕಳೆದ ಜನ್ಮದಲ್ಲಿ ಇದು ನನಗೆ ಮಗುವಾಗಿತ್ತೆ? ಹೌದು ನನ್ನ ಮಗುವಾಗಿರಲೇಬೇಕು. ನಿಜ ಇಂತಹ ಅಪರೂಪದ ಅವಕಾಶ ಇನ್ನೊಮ್ಮೆ ಸಿಕ್ಕಲಾರದು. ಅದ್ಯಾಕೆ ಹಕ್ಕಿಗಳೆಲ್ಲ ನನ್ನ ಕಡೆ ಹೀಗೆ ನೋಡುತ್ತಿವೆ? ಹೆದರಬೇಡಿ ಹಕ್ಕಿಗಳೇ ಈ ಮರಿಯನ್ನ ನಾನು ಗಿಡುಗನಿಗೆ ಕೊಡುವುದಿಲ್ಲ!

ಎಂದಳು. ಮರಿಯೀಗ ಆನಂದದಿಂದ ಮುಖ ಅರಳಿಸಿ ಮತ್ತೆ “ಅಮ್ಮಾ…” ಅಂದಿತು.

ರಾಣಿ : ಹಕ್ಕಿಗಳೇ ಇಕೋ ನಿಮ್ಮ ಮರಿಯನ್ನ ತೆಗೆದುಕೊಂಡು ಹೋಗಿರಿ.

ಎಂದಳು. ಅಷ್ಟರಲ್ಲಿ ಈ ಮರಿಗಾಗಿ ಮ್ಯಾಲೆ ಹೊಂಚಿದ್ದ ರಣಹದ್ದು ಹಾರಿ ಬಂದು ಮಹಾರಾಣಿಯ ಬಳಿಯಲ್ಲೇ ಕೂತು ಮನುಷ್ಯರಂತೆ ಮಾತಾಡಿತು.

ರಣಹದ್ದು : ಆ ಮರಿ ನಿಮ್ಮ ಮಗ ತಾಯಿ.

ರಾಣಿ : ನಿಜವಾಗಿಯೂ?

ರಣಹದ್ದು : ನಿಜವಾಗಿ ಅವನು ನಿಮ್ಮ ಮಗ ತಾಯಿ!

ರಾಣಿ : ಅದು ಹ್ಯಾಗೆ?

ಮಹಾರಾಣಿಗೀಗ ಆನಂದ ಮತ್ತು ಸಂದೇಹಗಳನ್ನು ತಡೆದುಕೊಳ್ಳಲು ಸಾಧ್ಯವಾಗದಾಯ್ತು –

ರಾಣಿ : ಅದು ಹ್ಯಾಗೆ! ಅಕ್ಕಪಕ್ಕ ಯಾರಾದರೂ ದೇವತೆಗಳಿದ್ದರೆ ವಿವರಿಸಿಯಪ್ಪ! ಅಥವಾ ಹದ್ದಾಗಿ ತಿನ್ನಬೇಕಿದ್ದವನು ನೀನೇ ಹೇಳುತ್ತಿ ಅಂದರೆ ನಿಜವೇ ಆಗಿರಬೇಕು. ನೀನಾದರೂ ಸರಿಯಾಗಿ ಹೇಳಪ್ಪ.

ಶಾಂತವಾಗಿ ಹದ್ದು ಹೇಳಿತು:

ಹದ್ದು : ಆ ಮರಿ ನಿಜವಾಗಿ ನಿಮ್ಮ ಮಗ ತಾಯಿ! ಈಗಷ್ಟೆ ತೊದಲಿ ಅವನು ನಿಮಗೇ ಪ್ರಪ್ರಥಮವಾಗಿ “ಅಮ್ಮಾ…” ಅಂದ.

ರಾಣಿ : ಅಂದರೆ?

ಹದ್ದು : ಸಂಪಿಗೆರಾಣಿ ಮದ್ದುಮಾಟದವಳಲ್ಲ ತಾಯಿ. ಆಕೆ ವನದೇವತೆಯ ಮಗಳು. ಅದಕ್ಕೇ ಅವಳು ಮನಸ್ಸು ಬಂದಾಗ ಮರವಾಗಬಲ್ಲಳು, ಹೂ ಬಿಡಬಲ್ಲಳು, ಉದುರಿಸಬಲ್ಲಳು. ಖಗಮಿಗಾದಿಗಳು ಸಂಪಿಗೆರಾಣಿಯ ಮರವನ್ನು ಸುತ್ತುವರಿದಿದ್ದು ಈ ಕಾಳಜಿಯಿಂದಾಗಿ. ಅವಳ ಪುತ್ರನಾದ ಇವನು ಅಜ್ಜಿಯ ಆಶೀರ್ವಾದದಿಂದ ಹೀಗೆ ಹಕ್ಕಿಯಾಗಿ ನಿಮ್ಮ ತೊಡೆಯೇರಿದ್ದಾನೆ. ಇಗೊ ಮಗುವಾದ ನೋಡಿರಿ.

ಈಗ ನೋಡಿದರೆ ಹಕ್ಕಿಮರಿಯ ಬದಲು ಅವಳ ತೊಡೆಯ ಮೇಲೆ ಅಂದದ ಮಗು ಅಮ್ಮಾ ಎನ್ನುತ್ತಿದ್ದಾನೆ!

ಈಗ ಮಾತ್ರ ಮಹಾರಾಣಿಯ ಹೃದಯದ ಕಾಳಿಕೆ ಪಶ್ಚಾತ್ತಾಪದಿಂದ ಸುಟ್ಟುಹೋಯಿತು. “ಅಯ್ಯೋ ನಾನೆಂಥ ಪಾಪಿ!” ಎಂದು ಎದೆ ಬಡಿದುಕೊಳ್ಳುತ್ತಾ ಎದ್ದು ನಿಂತು,

ರಾಣಿ : ಪಕ್ಷಿಗಳೇ ನನ್ನನ ಹೃದಯದಲ್ಲಿ ಕತ್ತಲು ತುಂಬಿ ಏನು ಮಾಡುತ್ತಿದ್ದೇನೆಂದು ಅರಿಯದೆ ನನ್ನ ತಂಗಿ ಸಂಪಿಗೆ ರಾಣಿಯನ್ನು ಮರವಾಗಿಸಿದ್ದೇನೆ. ನಾಲ್ಕನೆಯ ಕಲ್ಲು ಎಲ್ಲೊ ಎಸೆದಿದದೇನೆ. ಕೈಮುಗಿದು ಕೇಳಿಕೊಳ್ಳುತ್ತೇನೆ; ಮರವಾಗಿರುವ ನನ್ನ ತಂಗಿಯನ್ನ ಪುನಃ ಮನುಷ್ಯಳಾಗಿ ಪಡೆಯುವ ಉಪಾಯವನ್ನ ನೀವಾದರೂ ಹೇಳಿಕೊಡಿರಿ.

ಎಂದು ಅಂಗಲಾಚುತ್ತಿದ್ದಂತೆ ಕನಸೊಡೆದು ಎಚ್ಚರವಾಯಿತು.

ತಕ್ಷಣ ಎದ್ದು ಕೂತಳು. ಮೈತುಂಬ ಜಲಜಲ ಬೆವರಿ ಹಾಸಿಗೆ ಒದ್ದೆಯಾಗಿತ್ತು. ಅಯ್ಯೊ ತಂಗಿಗೆ ಅನ್ಯಾಯ ಮಾಡಿದೆನೆಂದು ರೋದಿಸುತ್ತ ಗೋಳು ಗೋಳೆಂದು ಗೋಳಾಡತೊಡಗಿದಳು.

೧೨

ಅತ್ತ ಮಹಾರಾಜ ಯುದ್ಧವನ್ನು ಗೆದ್ದನಾದರೂ ಸಂತೋಷವಾಗಲಿಲ್ಲ. ಎಲ್ಲವೂ ವಿಚಿತ್ರವಾಗಿತ್ತು. ಯಾಕೆಂದರೆ ಮಹಾರಾಣಿಯ ತಂದೆ ಮತ್ತು ಸೋದರರೇ ಎದುರಾಳಿಗಳಾಗಿ ಹೋರಾಡಿದರು. ಯುದ್ಧ ಮಾಡಿದರೂ ಯಾರೂ ಗಂಭೀರವಾಗಿರಲಿಲ್ಲ. ಸಮಯ ತಳ್ಳುವುದಕ್ಕಾಗಿ ಯುದ್ಧಮಾಡಿದಂತಿತ್ತು. ಈ ಅಣುಕು ಯುದ್ಧ ಮುಗಿಯುತ್ತಿದ್ದಂತೆ ಸಂಪಿಗೆರಾಣಿ ಅರಮನೆಯಲ್ಲಿ ಇಲ್ಲವೆಂದು ಸುದ್ದಿ ಬಂತು. ಮಂತ್ರಿ ಮಾನ್ಯರನ್ನು ಸೈನ್ಯ ಸಮೇತ ಅರಮನೆಗೆ ಕಳಿಸಿ ರಾಜ ನೇರವಾಗಿ ಉಪವನಕ್ಕೆ ಹೊರಟ. ಆದರೆ ದಾರಿಯಲ್ಲಿ ಗಿಳಿಯೊಂದು ತನ್ನ ಜೊತೆಗೇ ಹಾರಿ ಬರುತ್ತಿದೆ. ಹಣ್ಣುಕುಟುಕಿ ಎಂದು ಸಂಪಿಗೆರಾಣಿ ಹೇಳುತ್ತಿದ್ದ ಗಿಳಿ ಇದೇ ಇರಬಹುದೆ? ಹಾಗಿದ್ದರೆ ನನಗೆ ಇದೇನನ್ನೋ ಕೂಗಿ ಹೇಳುತ್ತಿದೆ, ಅದರ ಕೂಗಿನ ಅವಸರ ಮತ್ತು ತೀವ್ರತೆ ನೋಡಿದರೆ ಯಾವುದೋ ಆತಂಕದ ವಿಷಯವನ್ನು ಅದು ಹೇಳುತ್ತಿರುವಂತಿದೆಯಲ್ಲ! ಇದೆಲ್ಲ ವನಪಾಲಕನ ಬಳಿಯೇ ತೀರ್ಮಾನವಾಗುವಂಥದೆಂದು ದೌಡಾಯಿಸಿದ.

೧೩

ವನಪಾಲಕನ ಬಳಿಗೆ ಹೋದವನೇ

ರಾಜ : ಸಂಪಿಗೆ ರಾಣಿ ಎಲ್ಲಿ?

ಅಂದ, ಅವಸರ ಮತ್ತು ಆತಂಕಗಳಿಂದ.

ವನಪಾಲಕ : ಅರಮನೆಯಲ್ಲಿ! ಯಾಕೆ ಪ್ರಭು, ನನ್ನ ಮಗಳು ಅಲ್ಲಿಲ್ಲವೆ?

ರಾಜ : ತೌರಿಗೆ ಬಂದಿರುವಳಂತೆ.

ವನಪಾಲಕನಿಗೆ ಅಪಾಯದ ಅರಿವಾಯಿತು. ಕಣ್ಣೀರು ಸುರಿಸುತ್ತ ಹೇಳಿದ:

ವನಪಾಲಕ : ಉಪವದನ ಮರಗಳು ಬಾಡಿದಾಗಲೇ ಇಂಥದೇನೋ ಅನಾಹುತ ಆಗಿದೆ ಅಂತ ನನಗೆ ಗೊತ್ತಾಯಿತು! ಸಂಪಿಗೆ ಖಂಡಿತವಾಗಿಯೂ ಬರಲಿಲ್ಲ ಪ್ರಭು. ಹೃದಯದಲ್ಲಿಟ್ಟುಕೊಂಡು ಕಾಪಾಡುತ್ತೇನೆ ಅಂದಿದ್ದಿರಿ.

ರಾಜ : ಇದರಲ್ಲೇನೋ ದ್ರೋಹ ನಡೆದಿದೆ. ಏನು ಮಾಡಲಿ ವನಪಾಲಕಾ? ನಾನೇ ಈ ದ್ರೋಹಕ್ಕೆ ಗುರಿಯಾಗಿದ್ದೇನೆ.

ಎಂದು ಅಸಹಾಯಕನಾಗಿ ನುಡಿದ.

ವನಪಾಲಕ : ನೀವು ಯುದ್ಧಕ್ಕೆ ಹೋದಾಗಿನಿಂದಲು ಅಪಶಕುನಗಳು ಆಗುತ್ತಲೇ ಇವೆ ಪ್ರಭು. ತರುಮರಗಳು ತಲ್ಲಣಿಸಿವೆ. ಹಕ್ಕಿಗಳು ಅಸಹಜ ದನಿಯಲ್ಲಿ ಕಿರುಚುತ್ತ ಹಾರಾಡುತ್ತಿವೆ. ಪ್ರಾಣಿಗಳು ವಿನಾಕಾರಣ ರೇಗುತ್ತಿವೆ. ಮೋಡಗಳು ಉರಿಯುತ್ತ ಹಾರಾಡುತ್ತಿವೆ.

ರಾಜ : ವನಪಾಲಕ ಈ ಗಿಳಿ ಮಾತ್ರ ನಾನು ಯುದ್ಧದಿಂದ ಹಿಂದಿರುಗಿದಾಗಿನಿಂದಲೂ ಕೂಗುತ್ತಾ ನನ್ನನ್ನ ಹಿಂಬಾಲಿಸುತ್ತಿದೆ. ಇದರ ಭಾಷೆ ನಿನಗೆ ಅರ್ಥವಾಗುವುದೇ?

ವನಪಾಲಕ : ಸ್ವಲ್ಪ ಸ್ವಲ್ಪ. ಮಗಳೇ ಅಷ್ಟಿಷ್ಟು ಹೇಳಿಕೊಟ್ಟಿದ್ದಳು.

ರಾಜ : ಕೇಳು –

ಒಂದೇ ಸಮನೆ ಕೂಗುತ್ತಿದ್ದ ಗಿಳಿಯ ಮಾತನ್ನ ವನಪಾಲಕ ಲಕ್ಷ್ಯಕೊಟ್ಟು ಕೇಳಿಸಿಕೊಂಡ. ಕೇಳಿ ಆಘಾತವಾಯ್ತು.

ವನಪಾಲಕ : ಆಘಾತವಾಯ್ತು ಪ್ರಭು. ಮಹಾರಾಣಿಯವರು ಮೋಸಮಾಡಿ ನನ್ನ ಮಗಳನ್ನು ಮರವಾಗಿ ಪರಿವರ್ತಿಸಿ, ನಾಲ್ಕನೆಯ ಕಲ್ಲನ್ನು ಸಂಪಿಗೆ ಮರದ ಮೇಲೆ ಎಸೆಯದೆ ಬೇರೆ ಕಡೆ ಎಸೆದರಂತೆ! ಸಾಲದ್ದಕ್ಕೆ ಈ ಮರವನ್ನು ಕಡಿಯಲು ಮರಕಟುಕರನ್ನು ಕಳಿಸಿದ್ದರಂತೆ. ಆದರೆ ಖಗಮಿಗಗಳು ಅವರನ್ನೋಡಿಸಿ ಸಂಪಿಗೆಯ ಜೀವ ಕಾಪಾಡಿಕೊಂಡಿವೆ ಪ್ರಭು. ದೇವರ ದಯೆ ಈ ಗಿಳಿ ಆ ನಾಲಕ್ನೇ ಕಲ್ಲನ್ನು ಕಚ್ಚಿಕೊಂಡು ಹಾರಾಡುತ್ತಿದೆ!

ಮತ್ತೆ ಗಿಳಿ ಕೂಗಿತು. ವನಪಾಲಕ ಉಡಿಯೊಡ್ಡಿ ‘ಕೊಡು ತಾಯಿ’ ಅಂದ. ಅವನ ಉಡಿಯಲ್ಲಿ ಒಂದು ಚಿಕ್ಕ ಕಲ್ಲು ಬಿತ್ತು. ತಗೊಂಡು – ಹೇಳಿದ

ವನಪಾಲಕ : ಆ ಮರ ಎಲ್ಲಿದೆಯೆಂದು ತೋರಿಸುತ್ತೀಯಾ ತಾಯಿ!

ಗಿಳಿ ಹಾರತೊಡಗಿತು. ಇಬ್ಬರೂ ಅದರ ಹಿಂದಿನಿಂದ ದೌಡಾಯಿಸಿದರು.

೧೪

ಇಬ್ಬರೂ ಅರಮನೆಯ ಹಿತ್ತಲಕ್ಕೆ ಬರುವುದರೊಳಗಾಗಿ ಮಹಾರಾಣಿ ತಲೆ ತಲೆ ಚಚ್ಚಿಕೊಳ್ಳುತ್ತ ಕೂದಲು ಕಿತ್ತುಕೊಳ್ಳುತ್ತ, ಗೋಳು ಗೋಳೆಂದು ಗೋಳಾಡುತ್ತಿದ್ದಳು. ಪ್ರಾಣಿ ಪಕ್ಷಿಗಳ ನೆರವಿ ಇಲ್ಲದಲ್ಲಿ ದೂರದಲ್ಲಿ ಜನರೂ ಸೇರಿದ್ದರು. ಮಹಾರಾಜನನ್ನು ನೋಡಿದ್ದೇ ಮಹಾರಾಣಿ ಪಶ್ಚಾತ್ತಾಪದಿಂದ ಹೇಳಿದಳು :

ರಾಣಿ : ಬನ್ನಿ ಪ್ರಭು, ನನ್ನ ದುಷ್ಟತನಕ್ಕೆ ಬಲಿಯಾಗಿ ಸಂಪಿಗೆರಾಣಿ ಮರವಾಗಿದ್ದಾಳೆ. ಬುದ್ಧಿಪಲ್ಲಟವಾಗಿ ನಾಲ್ಕನೆಯ ಕಲ್ಲನ್ನು ಎಲ್ಲಿ ಎಸೆದನೆಂದು ತಿಳಿಯುತ್ತಿಲ್ಲ. ನಿಮ್ಮನ್ನು ಯುದ್ಧಕ್ಕೆ ಅಟ್ಟಿದವಳೂ ನಾನೇ. ಸಂಪಿಗೆರಾಣಿಯನ್ನು ಬಲಿ ತೆಗೆದುಕೊಂಡವಳೂ ನಾನೇ! ಈ ಪಾಪಕೃತ್ಯಕ್ಕೆ ಕೊನೆಯಪಕ್ಷ ನನಗೆ ಗಲ್ಲುಶಿಕ್ಷೆಯಾದರೂ ಆಗಬೇಕು. ಇಗೋ ನಾನೇ ಸಾವಿನ ಕಡೆಗೆ ಹೋಗುತ್ತಿದ್ದೇನೆ. ದಯಮಾಡಿ ಸಂಪಿಗೆರಾಣಿಯನ್ನು ಹ್ಯಾಗಾದರೂ ಮಾಡಿ ವಾಪಸ್ಸು ಕರೆದು ತನ್ನಿ.

ವನಪಾಲಕ : ಮಹಾರಾಣಿ ನಾಲ್ಕನೆಯ ಕಲ್ಲು ಇಲ್ಲಿದೆ. ನೀವೇ ಇದನ್ನು ಸಂಪಿಗೆ ಮರದ ಮೇಲೆ ಎಸೆಯಿರಿ.

ರಾಣಿ : ದೇವರ ದಯೆ, ನಾನೀನ ಸಣ್ಣ ತೃಪ್ತಿಯಿಂದಲಾದರೂ ಸಾಯಬಹುದು. ಕೊಡಿ ಸ್ವಾಮಿ.’

ಮಹಾರಾಣಿ ನಾಲ್ಕನೆಯ ಕಲ್ಲನ್ನು ಮರದ ಮೇಲೆ ಎಸೆದಳು. ಎಲ್ಲರ ಆನಂದ ಆಶ್ಚರ್ಯಗಳಿಗೆ ಪಾರವೇ ಇರಲಿಲ್ಲ. ಸಂಪಿಗೆ ರಾಣಿ ಮಗು ಸಮೇತ ಪ್ರತ್ಯಕ್ಷಳಾದಳು! ಮಗುವನ್ನು ಮಹಾರಾಜ ಮತ್ತು ಮಹಾರಾಣಿಗೆ ತೋರಿಸುತ್ತ ಹೇಳಿದಳು:

ಸಂ.ರಾಣಿ : ಅಕ್ಕಾ, ಪ್ರಭು ಇವನು ನಮ್ಮ ಕಂದ!

ರಾಜ : ಇದಕ್ಕೆಲ್ಲ ಕಾರಣಳಾದ ಮಹಾರಾಣಿಗೆ ಶಿಕ್ಷೆಯಾಗಲೇಬೇಕು.

ರಾಣಿ : ಹೌದು ಪ್ರಭು.

ಮಗ್ಗು : ಅಮ್ಮ!

ಸಂ.ರಾಣಿ : ತಾಯಿಗೆ ಮಗ, ನನಗೆ ಅಕ್ಕ ಮತ್ತು ನೀವು ಸಿಕ್ಕ ಸಿಹಿ ಸಂದರ್ಭದಲ್ಲಿ ದಂಡ ಶಿಕ್ಷೆ ಯಾಕೆ ಬೇಕು ಪ್ರಭು? ಇವನು ನ್ಯಾಯವಾಗಿ ಮಹಾರಾಣಿಯ ಮಗ. ಯಾಕೆಂದರೆ ಕನಸಿನಲ್ಲಿ ಇವನು ಪ್ರಪ್ರಥಮವಾಗಿ ಮಹಾರಾಣಿಗೇ ಅಮ್ಮ ಅಂದದ್ದು. ತಾಯಿ ಮಕ್ಕಳನ್ನು ಅಗಲಿಸಬಾರದು ಪ್ರಭು.

ರಾಣಿ : ನನ್ನನ್ನು ಧನ್ಯಳಾಗಿಸಿದೆ ತಂಗಿ!

ರಾಜ : ದೇವಿ, ನಿನ್ನ ಮತ್ತು ನಮ್ಮ ಮಗುವಿನ ಜೀವ ಕಾಪಾಡಿದ ಈ ಪ್ರಾಣಿಪಕ್ಷಿಗಳಿಗೆ ಹ್ಯಾಗೆ ಕೃತಜ್ಞತೆ ಹೇಳಲಿ?

ಸಂ.ರಾಣಿ : ಅವುಗಳ ಪಾಡಿಗೆ ಅದನ್ನು ಬಿಟ್ಟುಬಿಡಿ. ನೀವು ಅರಣ್ಯ ನಾಶ ಮಾಡದೇ ಹೋದರೆ ಸಾಕು. ನಿಮಗೂ ಅವು ಕೃತಜ್ಞರಾಗಿರುತ್ತವೆ.

ಆಮೇಲೆ ಅವರು ಅಲ್ಲಿ ಕಾಡಿನಲ್ಲಿ ಸುಖವಿದ್ದರು, ನಾವು ಹೀಗಿದ್ದೀವಿ.

* * *