ನಾನು ಓದಿದ ಬಹಳಷ್ಟು ನಾಟಕಗಳಲ್ಲಿ ಏಕತಾನತೆಯಿದೆ. ಸದ್ಯಕ್ಕಂತೂ ಇದರಿಂದ ಹೊರ ಬರುವದು ಅಸಾಧ್ಯ ಎಂದೆನಿಸುತ್ತಿದೆ. ದಲಿತರ ವಾಸ್ತವ ಬದುಕು ಎದುರಿಸುತ್ತಿರುವ ಸಮಸ್ಯೆ, ಸದ್ಯದ ಸ್ಥಿತಿ-ಗತಿ, ದಲಿತರ ದೌರ್ಜನ್ಯ-ಇದನ್ನೇ ಕೇಂದ್ರ ಸ್ಥಾನದಲ್ಲಿಟ್ಟು ಚಿತ್ರಿಸಲಾಗಿದೆ. ಇದೇ ಈ ರಂಗಭೂಮಿಯ ಉದ್ದೇಶವೂ ಆಗಿದೆ. ಈ ಎಲ್ಲ ನಾಟಕಗಳು ದುಃಖದಲ್ಲಿ ಅಂತ್ಯಗೊಳ್ಳುತ್ತವೆ. ದುರಂತ ಸಮಸ್ಯೆಯನ್ನೇ ಪ್ರಧಾನವಾಗಿಟ್ಟುಕೊಳ್ಳಲಾಗಿದೆ. ಕಥೆ ಗ್ರಾಮೀಣ ಪ್ರದೇಶಕ್ಕೆ, ಪರಿಸರಕ್ಕೆ ಸೀಮಿತಗೊಂಡಿರುವಂತಹದು. ನಗರ ಜೀವನದ ವಸ್ತುವನ್ನು ಹೊಂದಿದ ಅಪರೂಪದ ಕೃತಿಗಳೂ ಇವೆ. ಈ ಎಲ್ಲ ನಾಟಕಗಳು ಸವರ್ಣೀಯರ ದಬ್ಬಾಳಿಕೆಯನ್ನು ಬಿಂಬಿಸುವ ಪ್ರಯತ್ನವನ್ನೂ ಮಾಡುತ್ತದೆ. ಸಾಮಾನ್ಯವಾಗಿ ಈ ನಾಟಕಗಳ ನಾಯಕ ದಲಿತ ಜಾತಿಗೆ ಸೇರಿದವನು. ಸಹಜವಾಗಿಯೇ ಖಳನಾಯಕ ಸವರ್ಣಿಯ. ಜತೆಗೆ ಸವರ್ಣಿಯರನ್ನು ಹಂಗಿಸುವ, ಉಪಹಾಸ ಮಾಡುವ ದಾಟಿ ಬಳಸಲಾಗಿದೆ. ದಲಿತ-ದಲಿತೇತರರ ಸಂಘರ್ಷ, ದ್ವಂದ್ವಾತ್ಮಕ ತಾಕಲಾಟ, ಅಂತಿಮವಾಗಿ ಜಾಗೃತಿ-ಇದೇ ಅವುಗಳ ಮುಖ್ಯ ಆಶಯ. ಕೆಲವು ನಾಟಕಗಳಲ್ಲಿ ಸೂತ್ರದಾರನೇ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆ. ಇಲ್ಲೆಲ್ಲ ಲೋಕನಾಟ್ಯದ ಪ್ರಭಾವವನ್ನು ಗುರುತಿಸಬಹುದಾಗಿದೆ. ಇಲ್ಲೊಂದು ವಿಶೇಷ ನಾಟಕದ ಬಗ್ಗೆ ನಿಮ್ಮ ಗಮನ ಸೆಳೆಯುತ್ತೇನೆ.

ದಲಿತರಿಗಿಂತ ಒಂದು ಭಿನ್ನ ಆಶಯದಿಂದ ನನ್ನ ವಿಶೇಷ ಗಮನ ಸೆಳೆದ ನಾಟಕವೆಂದರೆ ‘ಕಿರವಂತ’-ನಾಟಕಕಾರ ಪ್ರೇಮಾನಂದ ಗಜವಿ. ಈ ನಾಟಕವು ಒಂದು ಹೊಸ ವಿಷಯವನ್ನು ನಮ್ಮ ಮುಂದಿಡುತ್ತದೆ. ಭಾರತೀಯ ಸಮಾಜ ವ್ಯವಸ್ಥೆಯು ದಲಿತರ ಶೋಷಣೆಯ ಹಲವು ಬರವಣಿಗೆಯನ್ನು ಕಂಡಿದೆ. ಆದರೆ ಹಿಂದೂ ಸಮಾಜದಲ್ಲಿ ಅತ್ಯಂತ ಶ್ರೇಷ್ಠರೆಂದು ಪರಿಗಣಿಸಲ್ಪಟ್ಟ ಬ್ರಾಹ್ಮಣ ಸಮಾಜದಲ್ಲೂ ಇಂಥ ಹೀನವಾದ ಒಂದು ಗುಂಪು ಇದೆ. ಅವರು ಜನ್ಮದಿಂದ, ಬ್ರಾಹ್ಮಣರಾಗಿದ್ದರೂ ಕರ್ಮದಿಂದ ‘ಕಿರವಂತ’ರೆಂದು ಉಪೇಕ್ಷೆ ಗೊಳಗಾಗಿದ್ದಾರೆ. ಬರೇ ಸ್ಮಶಾನದ ಅಂತ್ಯಕ್ರಿಯೆ ಮಾಡುವರೆಂಬ ಕಾರಣಕ್ಕೆ ಅವರನ್ನು ದಲಿತರಂತೆ ನೋಡಿಕೊಳ್ಳಲಾಗುತ್ತಿದೆ. ಇಂಥ ಹಿಂದೂ ಧರ‍್ಮದ ಆದರೆ ಅಪರಿಚತವಾದ ಒಂದು ಗುಂಪಿನ ಚಿತ್ರಣವನ್ನು ಗಜವಿ ಇಲ್ಲಿ ಮಂಡಿಸುವ ಪ್ರಯತ್ನ ಮಾಡಿದ್ದಾರೆ.

ಕಿರವಂತ ಎಂದರೆ ಕ್ರಿಯಾವಂದ ಎಂದರ್ಥ. ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿ ಅವನನ್ನು ಮೋಕ್ಷಕ್ಕೆ ಕಳಿಸುವ, ಆತ್ಮ ಶಾಂತಿ ದೊರಕಿಸುವ ಕ್ರಿಯೆ ಬ್ರಾಹ್ಮರ್ಣರ ವಿಶಿಷ್ಟವಾದ ಒಂದು ವರ್ಗ ಮಾಡುತ್ತದೆ. ಅಂತ್ಯ ವಿಧಿ ಹಾಗೂ ಮಂತ್ರ ಪಠಣದ ಮೂಲಕ ಮೃತಾತ್ಮಕ್ಕೆ ಚಿರಶಾಂತಿ ದೊರಕಿಸಿ ಕೊಡುವ ಕರ‍್ಮ ಈ ಗುಂಪಿನ ಜನಕ್ಕೆ ಸೇರಿದ್ದು. ಅದಕ್ಕಾಗಿ ಅವರನ್ನು ಕ್ರಿಯಾವಂತ ಎಂದು ಕರೆಯಲಾಗುತ್ತದೆ.

ಇಂಥ ಉಪೇಕ್ಷಿತ ಬ್ರಾಹ್ಮಣ ಕಿರುವಂತರ ವರ್ಗ, ಜೀವನವನ್ನು ಅಲ್ಲಿಯ ಹಲವು ಗೋಜಲುಮಯವಾದ ಸಮಸ್ಯೆಗಳನ್ನು ನಾಟಕಕಾರ ಕೈಗೆತ್ತಿಕೊಂಡಿದ್ದಾನೆ. ಜತೆಗೆ ಸಾಮಾಜಿಕ ವಾಸ್ತವ, ರೂಢಿ, ಪರಂಪರೆ ಇದರ ಚಿತ್ರಣವೂ ಮಾಡಲಾಗಿದೆ. ಅಲ್ಲದೆ ಬದಲಾಗುತ್ತಿರುವ ಸಮಾಜ ವ್ಯವಸ್ಥೆಯೊಳಗಿನ ಮೂರು ತಲೆಮಾರುಗಳ ಸಂಘರ್ಷವನ್ನು ಮಾರ್ಮಿಕವಾದ ರೀತಿಯಲ್ಲಿ ಮಂಡಿಸಿದ್ದಾರೆ. ಪರಂಪರೆಯನ್ನು ಅಪ್ಪಿಕೊಂಡು ಸನಾತನ ವೃತ್ತಿಯನ್ನು ಜೋಪಾಸನೆ ಮಾಡುವ ತಲೆಮಾರು ಒಂದೆಡೆ, ಮನುಷ್ಯರೆಂದು ಬದುಕಲು ಹವಣಿಸುವ ಹೊಸ ತಲೆಮಾರು ಇನ್ನೊಂದೆಡೆ. ಈ ಎರಡು ಪರಂಪರೆಗಳ ನಡುವೆ ಇತ್ತ ಹಳೆಯ ಪರಂಪರೆಯ ಜೊತೆಗೂ ಇರದೆ, ಆಧುನಿಕತೆ ಪರಂಪರೆಯನ್ನು ಸ್ವೀಕರಿಸುವ ಎದೆಗಾರಿಕೆಯನ್ನು ತೋರಿಸದೇ ನಡುವೆ ಸಿಕ್ಕು ತೊಳಲಾಡುವ, ಉಸಿರುಗಟ್ಟಿದ ಮನೋಸ್ಥಿತಿಯಲ್ಲಿ ತ್ರಿಶಂಕು ವಿನಂತೆ ಬದುಕುತ್ತಿರುವ ರೀತಿ ಇದನ್ನೆಲ್ಲ ಅಷ್ಟೇ ಸೊಗಸಾಗಿ ಮಂಡಿಸಲಾಗಿದೆ.

ಇಂಥ ಮೂರು ಪೀಳಿಗೆಯ ಆಂತರಿಕ ಸಂಘರ್ಷಮಯ ಚಿತ್ರಣವೇ ‘ಕಿರವಂತ’ ಭಾರತೀಯ ಸಮಾಜ ವ್ಯವಸ್ಥೆಯ ಒಂದು ವಿಷಮತೆಯ ಅಧ್ಯಾಯ ಇಲ್ಲಿದೆ. ಶುದ್ಧ-ಅಶುದ್ಧ; ಮಡಿವಂತಿಕೆ-ಮೈಲಿಗೆ, ಮಂಗಲ-ಅಮಂಗಲ ಇವುಗಳ ಮಾನಸಿಕ ತಿಕ್ಕಾಟವನ್ನೂ ಈ ನಾಟಕ ಎತ್ತಿ ತೋರಿಸುತ್ತದೆ. ಹಿಂದೂ ಧರ‍್ಮದ ಆಂತರಿಕ ವೈರುದ್ಧವೂ ಇಲ್ಲಿ ಸೂಚಿಸಲಾಗಿದೆ. ಪರಂಪರಾಗತ ಸಮಾಜದ ವಿರುದ್ಧ ನಡೆಸಲಾದ ಒಂದು ಪ್ರಖರ ಬಂಡುಕೋರತನದ ಪ್ರಕ್ರಿಯೆಯನ್ನೂ ಇಲ್ಲಿ ನಾಟಕಕಾರ ಗಜವಿ ತರುವ ಪ್ರಯತ್ನ ಮಾಡಿದ್ದಾರೆ. ‘ಕಿರವಂತ’ ಉಳಿದ ದಲಿತ ನಾಟಕಕ್ಕಿಂತ ತೀರಾ ಭಿನ್ನ ಆಶಯ ಹೊಂದಿದ ಮಹತ್ವದ ನಾಟಕ.

* * *

ಒಂದೆಡೆ ಜಾನಪದ ಕಲೆಯ ಆಕರ್ಷಣೆ, ಇನ್ನೊಂದೆಡೆ ಆಧುನಿಕ ತಂತ್ರಗಾರಿಕೆ, ಈ ಎರಡರ ನಡುವೆ ಸಿಕ್ಕು ದಲಿತ ರಂಗಭೂಮಿ ತತ್ತರಿಸುತ್ತಿದೆ. ಆ ರಂಗಭೂಮಿಯ ಪಾಲಿಗೆ ಇದು ಸಂಕ್ರಮಣಾವಸ್ಥೆಯ ಕಾಲ. ಜೊತೆಗೆ ಗೊಂದಲದ ಸ್ಥಿತಿಯೂ ಇದೆ. ಈ ಎರಡನ್ನು ಒಂದುಗೂಡಿಸುವ ಸಾಮರ್ಥ್ಯ ಸದ್ಯಕ್ಕಂತೂ ಈ ರಂಗಭೂಮಿಗಿಲ್ಲ. ಆಧುನಿಕ ಮನಸ್ಸನ್ನು ಹೊರ ಹಾಕಲು ಸ್ವದೇಶಿ ರಂಗಭೂಮಿಯೇ ಇದಕ್ಕೆ ಯೋಗ್ಯ ವೇದಿಕೆ ಎಂದು ಅದು ಒಪ್ಪಿಕೊಂಡಂತಿದೆ. ಅದನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಯತ್ನವೂ ನಡೆದಿದೆ. ದಲಿತ ರಂಗಭೂಮಿಗೆ ನಿಶ್ಚಿತವಾದ ಬದುಕಿನ ಧೋರಣೆಯಿದೆ, ಪ್ರಾದೇಶಿಕ, ಸ್ವದೇಶಿ ಶಕ್ತಿಯೂ ಇದೆ. ಇತಿಹಾಸ, ಜಾನಪದಗಳಲ್ಲಿ ಅದು ತನ್ನ ಬೇರು ಹುಡುಕುವ ಪ್ರಯತ್ನವನ್ನು ಮಾಡುತ್ತಿದೆ. ವೈದಿಕ ಪರಂಪರೆಗೆ ನಿಷ್ಠರಾಗಿದ್ದವರು ದಲಿತ ನಾಟಕಗಳಲ್ಲಿ ತಮ್ಮ ಪೂರ್ವಾಶ್ರಮದ ಕಪ್ಪು ಮುಖಗಳನ್ನು ಕಂಡು ಬೆಚ್ಚಿ ಬೀಳುತ್ತಿದ್ದಾರೆ. ಕೆಂಡದಂತಹ ಸಾಮಾಜಿಕ ಸಂಘರ್ಷವನ್ನು ಚಿತ್ರಿಸುವ ದಿಟ್ಟ ಪ್ರಯತ್ನ ಅವರದ್ದು. ಬಲಶಾಲಿಗಳಾಗಿ ಬೆಳೆದ ಸವರ್ಣೀಯ ಸಮಾಜದ ಸ್ವಾರ್ಥವನ್ನು, ಕಪಟತನವನ್ನು ಈ ರಂಗಭೂಮಿಯು ಅನಾವರಣಗೊಳಿಸುತ್ತಿದೆ. ಅವಕಾಶ ಸಿಕ್ಕಲ್ಲೆಲ್ಲ ಸನಾತನ ಪರಂಪರೆಯ ಹಿರಿಯ ಆದರ್ಶವನ್ನು, ಸಂಸ್ಕೃತಿಯನ್ನು ಗೇಲಿ ಮಾಡುವ ಸಾಹಸಕ್ಕೂ ಕೈ ಹಾಕುತ್ತಿದೆ.

ಇದರರ್ಥ ದಲಿತ ರಂಗಭೂಮಿಯು ಅತ್ಯಂತಿಕ ಸ್ಥಿತಿಯನ್ನು ಮುಟ್ಟಿದೆ. ಅದರಲ್ಲಿ ಯಾವ ಲೋಪ ದೋಷಗಳಿಲ್ಲ. ಅದೊಂದು ಪರಿಪೂರ್ಣವಾದ ರಂಗಭೂಮಿ ಎಂದೇನೂ ಭಾವಿಸಬೇಕಿಲ್ಲ.

ಈ ನಾಟಕಗಳು ವ್ಯಕ್ತಿಪ್ರಧಾನವಾದವು. ದೌರ್ಜನ್ಯ, ಅನ್ಯಾಯದ ನಿಶ್ಚಿತ ವಸ್ತು. ಆದೇಶ ನೀಡುವ, ಬೋರು ಹೊಡೆಸುವ ಭಾಷಣದ ದಾಟಿ, ಅಶಕ್ತ ಘಟನಾವಳಿಗಳ ದುರ್ಬಲ ಚಿತ್ರಣ, ನಾಟಕಕಾರ ಇಚ್ಛೆಗೆ ಮಣಿಯುವ ಪಾತ್ರಗಳು, ಪ್ರಚಾರ ಪ್ರಿಯತೆ, ಒಂದೇ ವಸ್ತುವಿನ ಸುತ್ತಲೂ ಗಿರಕಿ ಹೊಡೆಯುವ ಸನ್ನಿವೇಶಗಳು ಇತ್ಯಾದಿ ಏಕತಾನತೆಯ ಕಾರಣದಿಂದಾಗಿ ನಾಟಕ ಎಷ್ಟೋ ಸಲ ನೀರಸ ಎಂದೆನಿಸಿ ಬಿಡುತ್ತದೆ. ಬಹಳಷ್ಟು ನಾಟಕಗಳು ದಲಿತ ಜಾಗೃತಿಯಷ್ಟೇ ನಾಟಕದ ಅಂತಿಮ ಗುಣ ಎಂದು ಭಾವಿಸಿಕೊಂಡಂತಿದೆ. ಹೀಗಾಗಿ ನಾಟಕ ಕಳಾಹೀನ, ಚೈತನ್ಯರಹಿತ ಎಂದೆನಿಸಲು ಆರಂಭಿಸುತ್ತದೆ. ದಲಿತ ರಂಗಭೂಮಿ ಇದೆಲ್ಲದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಈ ದೌರ್ಬಲ್ಯವನ್ನು ಕಳಚಿಕೊಳ್ಳಬೇಕಾಗಿದೆ.

ಇದರ ಜೊತೆಗೆ ಗಮನಿಸಬೇಕಾದ ಇನ್ನೊಂದು ಮಗ್ಗಲೆಂದರೆ, ಈಗಿರುವ ಪ್ರಾಸ್ತಾಪಿತ ರಂಗಭೂಮಿಯು ದಲಿತರ ಸಮಸ್ಯೆಯನ್ನು ತೀವ್ರವಾಗಿ, ಅಷ್ಟೇ ಕಾಳಜಿಯಿಂದ ಅಭಿವ್ಯಕ್ತಿ ಮಾಡುವ ಸ್ಥಿತಿಯಲ್ಲಿಲ್ಲ. ಅಂಥ ಉತ್ಸಾಹವನ್ನೂ ಅದು ತೋರಿಸುತ್ತಿಲ್ಲ. ಇದನ್ನೂ ಈ ರಂಗಭೂಮಿ ಅರಿತುಕೊಂಡಿದೆ. ಸದ್ಯ ಆಸ್ತಿತ್ವದಲ್ಲಿರುವ ಮರಾಠಿ ರಂಗಭೂಮಿಯು ದಲಿತರ ಆಶಯದ ಬಗ್ಗೆ ಸ್ಪಂದಿಸುವ ಪ್ರಯತ್ನ ಮಾಡಲೇ ಇಲ್ಲ. ಹೀಗಾಗಿ ದಲಿತ ಆಶಯವನ್ನು ಅವರು ಅಳವಡಿಸಿಕೊಳ್ಳಲೇ ಇಲ್ಲ. ಅದು ಇವತ್ತಿಗೂ ಪರಂಪರೆಯ ಸುತ್ತಲೂ, ಮಧ್ಯಮ ವರ್ಗದ ಕೌಟುಂಬಿಕ ಸಮಸ್ಯೆಗಳ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಇಂಥ ಹಲವಾರು ರೋಚಕ ನಾಟಕಗಳು ಮಹಾರಾಷ್ಟ್ರದಲ್ಲಿ ಇಂದಿಗೂ ಜನ ಸಮುದಾಯವನ್ನು ಅತೀ ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುತ್ತಿವೆ. ರಂಗಭೂಮಿಯನ್ನು ಇವತ್ತಿಗೂ ಪ್ರೀತಿಸುವ ಈ ನಾಡಿನ ಪ್ರೇಕ್ಷಕ ವರ್ಗ ದಲಿತ ರಂಗಭೂಮಿ ಬಗ್ಗೆ ಏಕೋ ಅನಾಸ್ಥೆಯನ್ನು ತೋರಿಸುತ್ತಿರುವದು ಚಿಂತೆಗೀಡು ಮಾಡಿದೆ. ಪ್ರಸ್ತಾಪಿತ ರಂಗಭೂಮಿಯು ಮನರಂಜನೆಯನ್ನು ತನ್ನ ಉದ್ದೇಶವನ್ನಾಗಿ ಮಾಡಿಕೊಂಡಿದ್ದರಿಂದ ಜನ ಸಹಜವಾಗಿ ಅತ್ತ ಸೆಳೆಯಲ್ಪಡುತ್ತಾರೆ. ತಮ್ಮ ಅಸ್ಮಿತೆಯ ಮೇಲೆ ಹಲ್ಲೆ ಮಾಡುವ ದಲಿತ ರಂಗಭೂಮಿಯನ್ನು ಮಧ್ಯಮ ವರ್ಗ ಸಹಿಸುವದೂ ಇಲ್ಲ, ಒಪ್ಪಿಕೊಳ್ಳುವದೂ ಇಲ್ಲ. ಪ್ರಾಯಶಃ ಈ ಕಾರಣಕ್ಕಾಗಿಯೇ ವಿಮರ್ಶಕರು ‘ಪ್ರೇಕ್ಷಕರನ್ನು ನಿಶ್ಚಯಿಸಿಕೊಳ್ಳಿ’ ಎಂದು ಹೇಳಿರಬೇಕು. ಹೀಗಾಗಿ ದಲಿತ ರಂಗಭೂಮಿಯೇ ದಲಿತರ ಸಮಸ್ಯೆಯನ್ನು ಸಮರ್ಥವಾಗಿ ಬಿಂಬಿಸುವದು ಸಾಧ್ಯ, ಅಲ್ಲದೆ ಅಲ್ಲಿಯ ಜೀವನ ದರ್ಶನ ವಸ್ತು ನಿಷ್ಠ ಸ್ವರೂಪದ್ದು. ತನಗೆ ಪೋಷಕವಾದ ರೀತಿಯಲ್ಲಿ ರಂಗಭೂಮಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ.

ಇನ್ನೊಂದು ಮಹತ್ವದ ಪ್ರಶ್ನೆಯೆಂದರೆ ರಂಗಭಾಷೆಯದು. ನಾಟಕದ ಪ್ರೇಕ್ಷಕ ನಗರ ಜೀವನಕ್ಕೆ ಸಂಬಂಧ ಪಟ್ಟವನು. ನಾಟಕದ ಭಾಷೆ ಗ್ರಾಮ್ಯ. ನಾಟಕದ ವಸ್ತು ಹಾಗೂ ಪರಿಸರದ ಬಗ್ಗೆ ಯೋಚಿಸಿದರೆ ಗ್ರಾಮ್ಯ ಭಾಷೆಯ ಬಳಕೆ ಸೂಕ್ತ ಎಂದೆನಿಸುತ್ತದೆ. ಆದರೆ ಕೆಲವು ನಾಟಕಕಾರರು ಸಂವಹನದ ತೊಡಕಿನಿಂದ ಗ್ರಾಂಥಿಕ ಭಾಷೆ ಬಳಸುವ ಪ್ರಯತ್ನ ಮಾಡುತ್ತಾರೆ. ಈ ವೈರುಧ್ಯವನ್ನು ಹೋಗಲಾಡಿಸುವದು ದುಸ್ತರ. ಸಂವಹನದ ದೃಷ್ಟಿಯಿಂದ ಇದೊಂದು ಜಟಿಲ ಸಮಸ್ಯೆಯೂ ಆಗಿದೆ. ಆದರೆ ದಲಿತ ನಾಟಕಕಾರ ಭಾಷೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಾತತ್ಯವಾಗಿ ನಾಟಕ ರಚಿಸಿ ರಂಗ ಪ್ರಯೋಗ ಮಾಡುತ್ತಿರಬೇಕೆಂಬ ಸಲಹೆ ರಂಗ ವಿಮರ್ಶಕರು ನೀಡುತ್ತಿದ್ದಾರೆ.

ಕಾಳಿದಾಸ ಕಾವ್ಯಮಯವಾದ ಅಲಂಕಾರಿಕ ಭಾಷೆಯಿಂದ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿದ. ತೆಂಡೂಲಕರ ಪ್ರಶ್ನೆ ಕಾಲೀನ ಸಾಂಸ್ಕೃತಿಕ ಭಾಷೆಗೆ ಜಾನಪದದ ಮೆರಗು ನೀಡಿ ‘ಘಾಶಿರಾಮ್’ನ್ನು ಜಾಗತಿಕ ಮಟ್ಟಕ್ಕೇರಿಸಿದರು. ಆದರೆ ದಲಿತ ರಂಗಭೂಮಿಗೆ ಈ ಎರಡೂ ಮಾರ್ಗ ಒಗ್ಗುವದಿಲ್ಲ. ಇದರ ಆಶಯಕ್ಕೆ ಹೊಂದಿಕೊಳ್ಳುವ ಭಾಷೆಯೆಂದರೆ ಗ್ರಾಮ್ಯ. ಆದರೆ ಆಧುನಿಕ ಮನಸ್ಥಿತಿ ಹೊಂದಿದ ಪ್ರೇಕ್ಷಕ ಈ ಜಾನಪದ ಭಾಷೆಯನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾನೆ ಎಂಬ ತೊಡಕೂಯಿದೆ. ಸಂಸ್ಕೃತದ ಮೋಹಕ ನಾದಮಯತೆಯಾಗಲಿ, ರಾಜಭಾಷೆಯ ಘನತೆಯಾಗಲಿ ಈ ರಂಗಭೂಮಿಗೆ, ಅದರ ಆಶಯಕ್ಕೆ ಹೇಳಿ ಮಾಡಿಸಿದ್ದಲ್ಲ. ಸದ್ಯಕ್ಕಂತೂ ಜಾನಪದ ಸತ್ತ್ವ ಪಡೆದ ಗ್ರಾಮ್ಯಭಾಷೆಯೇ ಅದರ ರಂಗಭಾಷೆಯಾಗುವದು ಸೂಕ್ತವೆಂದೆನಿಸುತ್ತದೆ. ಗ್ರಾಮ್ಯ ಭಾಷೆಯಲ್ಲಿ ದಲಿತರ ನೋವು, ವೇದನೆಯನ್ನು ಹಿಡಿದಿಡುವ ಶಕ್ತಿಯಿದೆ. ಆದರೆ ಕ್ರಿಯಾಶೀಲಬರಹಗಾರನಿಗೆ ಇಂಥ ಲಕ್ಷಣಗಳಲ್ಲಿ ಬಂಧಿಸಿಡುವದು ಸರಿಯಲ್ಲ. ಈಗಾಗಲೇ ಕವಿತೆ, ಕಥೆ, ಕಾದಂಬರಿ, ಆತ್ಮಕತೆಗಳು ದಲಿತ ಭಾಷೆಯಲ್ಲಿ ಬಂದಿರುವದರಿಂದ ಸಂವಹನಕ್ಕೆ ಯಾವ ತೊಂದರೆಯೂ ಬರಲಾರದು ಎಂದೆನಿಸುತ್ತದೆ. ಕಾಲಾಂತರದಲ್ಲಿ ಇದೂ ಸಹ ಒಂದು ಪ್ರಮಾಣ ಭಾಷೆಯಾಗುವದನ್ನು ನಿರಾಕರಿಸುವಂತಿಲ್ಲ. ಯಾಕೆಂದರೆ ಸಾಹಿತ್ಯ ಈಗ ಮತ್ತೆ ದೇಶಿಯತೆಯತ್ತ ವಾಲುತ್ತಿದೆ.

ರಂಗಭೂಮಿಗೆ ತಾಂತ್ರಿಕತೆ, ಕಲಾತ್ಮಕತೆಗಿಂತ ನಾಟಕಕಾರನ ಆಂತರಿಕ ತೊಳಲಾಟ ಹಾಗೂ ಆತ್ಮನಿಷ್ಠೆ ಮಹತ್ವದ್ದು. ಹಾಗೆ ಮಾಡದಿದ್ದರೆ ಅದರ ಅಸ್ತಿತ್ವ, ಉದ್ದೇಶ ವಿಫಲಗೊಳ್ಳುತ್ತದೆ. ಇಂದು ದಲಿತ ಜೀವನ ಹಾಗೂ ಮನಸ್ಸು ಒಂದು ಆಂದೋಲನದ ಮೂಲಕ ಮುಂದಡಿಯಿಡುತ್ತಿದೆ. ಇಂಥ ಪ್ರಯತ್ನ ಸಾತತ್ಯದಿಂದ ನಡೆಸಿಕೊಂಡು ಬರುವ ವಿಚಾರ ಈ ರಂಗಭೂಮಿ ಮಾಡುತ್ತಿದೆ.

‘ಪಥನಾಟ್ಯ’ (ಬೀದಿ ನಾಟಕ)ವು ದಲಿತ ರಂಗಭೂಮಿಗೆ ಹೊಂದಿಕೊಳ್ಳುವ ಕಲಾಮಾಧ್ಯಮ. ಇದೇ ಅದರ ಬುನಾದಿಯಾಗಬೇಕು. ಆದರೆ ಇಲ್ಲಿಯೂ ಒಂದು ತೊಡಕಿದೆ. ಇದೇ ನೆಲಗಟ್ಟಿನ ಮೇಲೆ ನಿಂತ ‘ಕಾರ್ಮಿಕ ರಂಗಭೂಮಿ’ ಇನ್ನೂ ಶೈಶವಾವಸ್ಥೆಯಲ್ಲಿದೆ. ಅದರ ಜೊತೆಗೆ ಸ್ತ್ರೀ ಮುಕ್ತಿಯ ಹೆಸರಿನಲ್ಲೂ ನಾಟಕಗಳು ಹೊರ ಬರುತ್ತಿವೆ. ಈ ಬೆಳವಣಿಗೆಯನ್ನು, ಈ ಹೊಸ ಸವಾಲನ್ನು ದಲಿತ ರಂಗಭೂಮಿಯು ತೀರಾ ಆಸಕ್ತಿಯಿಂದ ಗಮನಿಸುತ್ತಿದೆ. ಪುಣೆಯಲ್ಲಿ ಪ್ರಯೋಗಗೊಂಡ ‘ನಾರಿಮಣೀ’ಯು ಹೆಣ್ಣು ಜೀವನದ ಕಠೋರವಾಸ್ತವವನ್ನು ಎದುರಿಗಿಡುವಲ್ಲಿ ಯಶಸ್ವಿಯಾಗಿದೆ.

ದಲಿತ ರಂಗಭೂಮಿಯು ದಲಿತ ಸಮಸ್ಯೆಯ ಜೊತೆಗೆ ರಂಗ ಮಾಧ್ಯಮ, ರಂಗ ತರಬೇತಿ, ರಂಗ ಸಂಗೀತ, ರಂಗ ಶೈಲಿ, ರಂಗ ಸಾಧನೆ ಹಾಗೂ ಆಧುನಿಕ ತಂತ್ರಜ್ಞಾನದ ಬಗ್ಗೂ ಗಮನ ಹರಿಸಬೇಕಾಗುತ್ತದೆ. ಅಂದಾಗಲೇ ಆಧುನಿಕ ರಂಗಭೂಮಿಯೊಂದಿಗೆ ಪೈಪೋಟಿ ಸಾಧ್ಯ. ರಂಗಭೂಮಿಯು ದಲಿತ ಚಳುವಳಿಯ ಒಂದು ಘಟಕವಾಗಿರುವದರಿಂದ ಈ ಕೊರತೆಗಳನ್ನೆಲ್ಲ ತಟಸ್ಥವಾಗಿ, ಅಷ್ಟೇ ವಸ್ತನಿಷ್ಠವಾಗಿ ಯೋಚಿಸಬೇಕಾಗುತ್ತದೆ. ‘ಚಿಂತನಶೀಲತೆ ಹಾಗೂ ಅಂತರ್ ಮುಖತೆಯಿದ್ದ ವಿನಾ ವಿಚಾರದ ಹಾಗೂ ಭಾವನೆಯ ಆಳ ಲೇಖಕನಿಗೆ ದೊರಕುವದಿಲ್ಲ’ ಎಂಬ ಜನಾರ್ಧನ ವಾಘಮೋರೆಯ ಮಾತು ದಲಿತ ರಂಗಭೂಮಿಯು ಅರ್ಥ ಮಾಡಿಕೊಳ್ಳಬೇಕಾಗಿದೆ.

೧೦

ಉಪ ಸಂಹಾರ

ಮರಾಠಿ ರಂಗಭೂಮಿಯ ಇತಿಹಾಸ ೧೮೪೩ರಿಂದ ಆರಂಭಗೊಳ್ಳುತ್ತದೆ. ವಿಷ್ಣುದಾಸ ಭಾವೆ ರಂಗಭೂಮಿಯ ಜನಕ. ‘ಸೀತಾ-ಸ್ವಯಂವರ’ ಮೊದಲ ನಾಟಕ. ಫಾರ್ಸ್, ಬುಕಿಶ್ ನಾಟಕಗಳು ಇದೇ ಕಾಲದಲ್ಲಿ ಹುಟ್ಟಿಕೊಂಡವು. ಅಲ್ಲಿಂದ ಮರಾಠಿ ರಂಗಭೂಮಿಯ ಒಂದು ಪರಂಪರೆಯೇ ಆರಂಭಗೊಂಡಿತು. ಅನಂತರ ಗೊಂಬೆಯಾಟ, ಭಾರೂಡ, ಗೊಂಧಳ, ದಶಾವತಾರೀ ಆಟ, ತಮಾಶಾ-ಇತ್ಯಾದಿ ರಂಗ ಮಾಧ್ಯಮದ ಮೂಲಕ ಲೋಕನಾಟ್ಯದ, ನಾಟಕದ ಅವಿಷ್ಕಾರವಾಯಿತು. ಆ ಬಳಿಕ ಕಿರ್ಲೋಸ್ಕರ್, ಕೋಲ್ಹಟಕರ, ಖಾಡಿಲ್ಕರ್, ಗಡಕರಿ, ವರೇರಕರ, ಮತ್ತು ಅತ್ರೆಯಂತಹ ಮಹತ್ವದ ವಾಟಕಕಾರರ ಒಂದು ದೀರ್ಘ ಪರಂಪರೆಯೇ ಬೆಳೆಯಿತು. ಇದೇ ಕಾಲದಲ್ಲಿ ಬಾಲ ಗಂಧರ್ವರಂತಹ ನಟರು ಜನರಿಗೆ ನಾಟಕದ ಹುಚ್ಚೇ ಹಿಡಿಸಿದರು. ‘ಇಬ್ಸೆನ್’ನಿಂದಾಗಿ ರಂಗಭೂಮಿಗೆ ಹೊಸರೂಪ ದಕ್ಕಿತು.

ಅರವತ್ತರ ದಶಕದಲ್ಲಿ ವಸಂತ ಕಾನೇಟಕರ, ವಿಜಯ ತೆಂಡೂಲಕರನಂಥ ಮೇಧಾವಿ ಲೇಖಕರು ಪರಂಪರೆಗೆ, ಶ್ರದ್ಧೆಗೆ ತೀವ್ರ ಆಘಾತ ನೀಡಿದರು. ‘ರಂಗಾಯಣ’ ಎಂಬ ಸಂಸ್ಥೆಯು ರಂಗಭೂಮಿಗೆ ಹೊಸ ತಿರುವು ನೀಡುವ ಪ್ರಯತ್ನ ಮಾಡಿತು. ಅನಂತರದ ಕಾಲದಲ್ಲಿ ಮಾನವನ ಆಸ್ತಿತ್ವ ಹಾಗೂ ಅವನ ವೃತ್ತಿ, ಪ್ರವೃತ್ತಿಯನ್ನು ಕೇಂದ್ರವಾಗಿಟ್ಟು ತೆಂಡೂಲಕರ, ಸತೀಶ ಆಳೇಕರ, ಮಹೇಶ ಎಲಕುಂಚವಾರನಂತವರು ಹೊಸ ರೀತಿಯ ನಾಟಕ ಬರೆದರು. ಸಾಮಾಜಿಕ ಆಶಯಕ್ಕೆ ಸಂಬಂಧಪಟ್ಟ ನಾನಾ ರೀತಿಯ ಮೂಲಭೂತ ಪ್ರಶ್ನೆಗಳನ್ನು ಎದುರಿಗಿಟ್ಟರು. ನಾಟಕ ನೋಡಲು ಬಂದ ಪ್ರೇಕ್ಷಕ ಈಗ ಯೋಚಿಸುವಂತಾಯಿತು. ಸಂಪ್ರದಾಯದ ಚೌಕಟ್ಟಿನಿಂದ ಸಿಡಿದು ನಿಂತು ಇಲ್ಲಿ ನಾಟಕ ವಿವಿಧ ಮಗ್ಗಲುಗಳಲ್ಲಿಮೈ ತಳೆದು ನಿಂತಿತು. ಈ ದಶಕದಲ್ಲಿ ಹೊಸ ಪ್ರವಾಹ ಹರಿದು ಬರಲಾರಂಭಿಸಿತು. ಗುಣಾತ್ಮಕ ಹಾಗೂ ಸಂಖ್ಯಾತ್ಮಕ ದೃಷ್ಠಿಯಿಂದ ಇದು ಸಮೃದ್ಧಿಯ ಕಾಲ ಎನ್ನಬಹುದು. ನಾಟಕಗಳ ಆಶಯ ಹಾಗೂ ಅವಿಷ್ಕಾರದ ದೃಷ್ಠಿಯಿಂದ ಇದು ಅತ್ಯಂತ ಮಹತ್ವದ್ದು. ಇದಕ್ಕೆ ಪಾಶ್ಚಾತ್ಯ ವೈಚಾರಿಕತೆ ಹಾಗೂ II ಮಹಾಯುದ್ಧವೇ ಕಾರಣವೆಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಜೊತೆಗೆ ಅಸ್ತಿತ್ವವಾದೀ ಅರಿವು ಸಹ ಇದೇ ಕಾಲಕ್ಕೆ ಮೂಡಿತೆನ್ನಬಹುದು. ಇದರಿಂದ ಮರಾಠಿ ರಂಗಭೂಮಿಯ ಕಕ್ಷೆ ಮತ್ತಷ್ಟು ವಿಸ್ತೃತಗೊಂಡಿತು. ಇನ್ನೊಂದು ಕಹತೂಹಲಕಾರಿ ಅಂಶವೆಂದರೆ, ತೆರೆಯ ಹಿಂದೆ ಸರಿದ ಸೂತ್ರಧಾರನನ್ನು ಮತ್ತೇ ಎಳೆದು ತಂದು ವರ್ತಮಾನದ ಅಸ್ತಿತ್ವ ನೀಡಲಾಯಿತು. ಕಾವ್ಯತ್ಮಕತೆ ಹಾಗೂ ಸ್ವಗತಕ್ಕೆ ಮರಾಠಿ ರಂಗಭೂಮಿಯು ಮೊದಲಿನಿಂದಲೂ ಆದ್ಯತೆ ನೀಡಿದೆ. ಈಗ ಅದಕ್ಕೆ ವಾಸ್ತವದ ಹಾಗೂ ಅಸ್ತಿತ್ವವಾದಿಯ ಹೊಸ ರೂಪ ಸಿಕ್ಕಂತಾಯಿತು.

ದಲಿತ ರಂಗಭೂಮಿಯೂ ಸಹ ಪ್ರಾಯೋಗಿಕ ರಂಗಭೂಮಿಯಂತೆ ವಿಭಿನ್ನ ದೃಷ್ಟಿಕೋನ ಹಾಗೂ ನವೀನ ವೈಶಿಷ್ಟ್ಯವನ್ನು ತನ್ನ ಜೊತೆಗೆ ತಂದಿತು. ೧೯೮೦ನ್ನು ದಲಿತ ರಂಗಭೂಮಿಯ ಕಾಲಖಂಡವೆಂದು ಗುರುತಿಸಲಾದರೂ, ಅದರ ಬೇರು ಮಹಾತ್ಮಾ ಫುಲೇ, ಅಂಬೇಡ್ಕರ ಅವರ ಸತ್ಯ ಶೋಧಕ ಮಂಡಳ ಹಾಗೂ ಜಲಸಾದಲ್ಲಿದೆ ಎಂಬುದನ್ನು ಮರೆಯುವಂತಿಲ್ಲ. ಇದು ಹೊಸ ಚೈತನ್ಯ ನೀಡಿದ್ದಲ್ಲದೆ, ಪ್ರಚಂಡ ಜಾಗೃತಿಯನ್ನೂ ಉಂಟು ಮಾಡಿತು. ಹಾಗೆ ನೋಡಿದರೆ ಜಲಸಾನೇ ದಲಿತ ರಂಗಭೂಮಿಗೆ ನಿಜವಾದ ಪ್ರೇರಣೆ ನೀಡಿತು ಎನ್ನಬಹುದು. ‘ತಮಾಶಾ, ಗೊಂಧಳ, ಜಲಸಾ-ಈ ಲೋಕ ಕಲೆಯೇ ದಲಿತ ರಂಗಭೂಮಿಯ ಜನನಿ’ ಎಂದು ರಮೇಶ ಜನಬಂಧು ಹೇಳುತ್ತಾರೆ. ಸಾಮಾಜಿಕ ಆಶಯವನ್ನು ವಿದ್ರೋಹಿ ನೆಲೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮಂಡಿಸಿದ್ದು ದಲಿತ ರಂಗಭೂಮಿಯೇ. ಪಾರಂಪಾರಿಕ ಲೋಕಕಲೆಗೆ ವೈಚಾರಿಕ ರೂಪ ನೀಡಿ, ಪರಿವರ್ತನೆಯ ಪ್ರಭಾವೀ ಮಾಧ್ಯಮವೆಂದು ದುಡಿಸಿಕೊಂಡಿದ್ದರಿಂದ ದಲಿತ ರಂಗಭೂಮಿಯು ಜನ್ಮ ತಾಳಿತು ಎಂದರೂ ತಪ್ಪಲ್ಲ.

ಫುಲೇ ರಚಿಸಿದ ‘ತೃತೀಯ ರತ್ನ’ವೇ ದಲಿತ ರಂಗಭೂಮಿಯ ಮೂಲ ನಾಟಕವೆಂದು ಪರಿಗಣಿಸಲಾಗಿದೆ. ಆದರೆ ಚಿಟ್ನೀಸರ ‘ಯುಗಯಾತ್ರಾ’ ದಲಿತ ರಂಗಭೂಮಿಗೆ ಹೊಸ ಪರಿಣಾಮ ನೀಡಿತು. ಅನಂತರ ದಲಿತ ನಾಟಕಗಳ ಒಂದು ಚಳುವಳಿಯೇ ಆರಂಭಗೊಂಡಿತು ಎನ್ನಲಡ್ಡಿಯಿಲ್ಲ. ಅವುಗಳ ನೂರಾರು ರಂಗ ಪ್ರಯೋಗವೂ ಆಯಿತೆಂದು ಹೇಳುತ್ತಾರೆ. ವೇದನೆ ಹಾಗೂ ವಿದ್‌ಓಹವೇ ದಲಿತ ನಾಟಕಗಳ ಮುಖ್ಯ ಪ್ರೇರಣೆ. ಇಂಥ ನಾಟಕಗಳ ಮೂಲಕ ದಲಿತ ಚಳುವಳಿಗೆ ತೀವ್ರ ಚಾಲನೆ ನೀಡುವ ಉದ್ದೇಶವೂ ಕಾಣಿಸಿಕೊಂಡಿತು. ದಲಿತ ಸಾಹಿತ್ಯದಂತೆ ದಲಿತ ನಾಟಕಗಳು ಸಾಮಾಜಿಕ ಹೊಣೆಗಾರಿಕೆಯನ್ನು ಹೊರುವ ಪಣವನ್ನು, ವೀಳ್ಯವನ್ನು ಸ್ವೀಕರಿಸಿದವು. ಸಮಾಜ ಪ್ರಬೋಧನೆ, ಜಾಗೃತಿ, ಆತ್ಮ ಶೋಧ-ಇದುವೇ ಈ ರಂಗಭೂಮಿಯ ಮುಖ್ಯ ಉದ್ದೇಶವಾಯಿತು. ಅಂದರೆ ಸ್ವಾತಂತ್ರ‍್ಯ, ಸಮತೆ, ಬಂಧುತ್ವಕ್ಕಾಗಿ ನಡೆಸುವ ಹೋರಾಟ ಹಾಗೂ ಪರಂಪರಾಗತ ವೇದನೆಯನ್ನು ವಿದ್ರೋಹದ ಮೂಲಕ ಮಂಡಿಸಿ ಸಮಾಜ ಪ್ರಬೋಧನೆ ಮಾಡುವದೇ ದಲಿತ ರಂಗಭೂಮಿಯ ಹೇತುವಾಯಿತು.

ದಲಿತ ರಂಗಭೂಮಿಯ ಸ್ವರೂಪಕ್ಕೂ ಉಳಿದ ದಲಿತ ಸಾಹಿತ್ಯದ ಸ್ವರೂಪಕ್ಕೂ ವಿಶೇಷ ವ್ಯತ್ಯಾಸವಿಲ್ಲ. ಈ ವರೆಗೆ ಉಳಿದ ರಂಗಭೂಮಿ ತರದಿದ್ದ ಪ್ರಸಂಗ. ಘಟನೆ, ವ್ಯಕ್ತಿ ಹಾಗೂ ಅವರ ಸುಖ- ದುಃಖಗಳನ್ನು ತಂದು ಅದಕ್ಕೆ ಪ್ರತಿಷ್ಠೆಯ ಸ್ಥಾನ ಕಲ್ಪಿಸುವದೇ ಈ ರಂಗಭೂಮಿಯ ವೈಶಿಷ್ಟ್ಯವೆನ್ನಬಹುದು. ಮಾನವನ ಹತ್ತಿಕ್ಕಲ್ಪಟ್ಟ ಭಾವನೆಗಳನ್ನು, ತುಳಿಯಲ್ಪಟ್ಟ ಪ್ರವೃತ್ತಿಗಳನ್ನು ಇದು ಸಾಕಾರಗೊಳಿಸಬೇಕಾಗಿದೆ. ಜತೆಗೆ ಅಂಬೇಡ್ಕರರ ಕ್ರಾಂತಿ ಮಾರ್ಗವನ್ನೂ ಮುನ್ನಡೆಸಬೇಕಾಗಿದೆ. ಬಹಿಷ್ಕೃತ ಮನಸ್ಸನ್ನು ಹೊಸ ರೀತಿಯಿಂದ ವಿಶ್ಲೇಷಿಸಲು ಅದು ಮುಂದಾಗಿದೆ. ಪ್ರಸ್ಥಾಪಿತ ರಂಗಭೂಮಿಯು ಜೀವನವನ್ನು ನಕಾರಾತ್ಮಕ ಧೋರಣೆಯಿಂದ ನೋಡುತ್ತಿದೆ. ಆದರೆ ದಲಿತ ರಂಗಭೂಮಿಯು ತನ್ನ ವಿದ್ರೋಹವನ್ನು ಜೀವನಾನುಭವದ ಮೂಲಕ ಮಂಡಿಸುತ್ತದೆ. ಇಂದು ದಲಿತ ರಂಗಭೂಮಿಯು ಕೇವಲ ಒಂದು ವಿಶಿಷ್ಟ ವರ್ಗದ ಚಿತ್ರಣವನ್ನಷ್ಟೇ ಮಾಡುತ್ತಿದೆ ಎಂಬ ಆರೋಪವಿದ್ದರೂ ಅದೇ ಅದರ ಉದ್ದೇಶವಲ್ಲ. “ದಲಿತ ರಂಗಭೂಮಿಗೆ ಜಾತಿಯ ಅಹಂಕಾರವಿಲ್ಲ. ಅದಕ್ಕೆ ಜಾತಿ ಹಾಗೂ ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ತೋರಿಸಬೇಕಾಗಿದೆ. ಹೊಸ ಸಮಾಜ ರಚನೆ ಮಾಡಬೇಕಾಗಿದೆ.” ಎಂದು ಡಾ. ಬಾಲಚಂದ್ರ ಫಡಕೆ ಹೇಳುತ್ತಾರೆ. ಒಟ್ಟಿನಲ್ಲಿ ಮಾನವನನ್ನು ಶೋಷಣೆಯಿಂದ ಮುಕ್ತಗೊಳಿಸುವದೇ ಅದರ ಮುಖ್ಯ ಗುಣವಾಗಿದೆ.

ಸದ್ಯಕ್ಕಂತೂ ಪ್ರಬೋಧನೆ ಹಾಗೂ ದಟ್ಟ ಜೀವನಾನುಭವಗಳ ಅಭಿವ್ಯಕ್ತಿಯನ್ನು ಈ ರಂಗಭೂಮಿ ಮಾಡುತ್ತಿದೆ. ಹೀಗಾಗಿ ಈ ನಾಟಕಗಳು ಅತ್ಯಂತ ವಾಸ್ತವವಾದಿ. ಈ ಎರಡೂ ಗುಣಗಳನ್ನು ಅಳವಡಿಸಿಕೊಂಡು ಜೊತೆಗೆ ಕಲಾತ್ಮಾಕತೆಗೂ ಅಷ್ಟೇ ಮಹತ್ತ್ವ ನೀಡಲು ಯತ್ನಿಸುತ್ತಿರುವ ದತ್ತಾ ಭಗತ್ ಹಾಗೂ ಪ್ರೇಮಾನಂದ ಗಜವಿಯವರ ನಾಟಕಗಳು ಸದ್ಯ ಪ್ರಾಯೋಗಿಕ ಹಾಗೂ ವ್ಯವಸಾಯಿಕ ದೃಷ್ಟಿಯಿಂದ ಮಹತ್ತ್ವದ್ದಾಗಿವೆ. ಪರಂಪರಾಗತ ವಿಷಮತೆ, ಶೋಷಣೆ ಹಾಗೂ ಅಂಧಶ್ರದ್ಧೆ-ಇಂಥ ವಸ್ತುಗಳನ್ನು ಸಮರ್ಥವಾಗಿ ದುಡಿಸಿಕೊಂಡಿದ್ದರಿಂದ ಆಳ ಹಾಗೂ ವ್ಯಾಪ್ತಿಯ ಗುಣದಿಂದಾಗಿ ಉಳಿದ ದಲಿತ ನಾಟಕಗಳಿಗಿಂತ ಭಿನ್ನವಾಗಿ ನಿಲ್ಲುವಲ್ಲಿ ಯಶಸ್ವಿಯಾಗಿವೆ.

ದಲಿತ ರಂಗಭೂಮಿಯಿಂದಾಗಿ ಒಂದು ಶೋಷಿತ ವರ್ಗ ಎದೆ ಸೆಟೆಸಿ ನಿಲ್ಲುವಂತಾಯಿತು. ದಲಿತತ್ವದ ವ್ಯಾಪಕ ಅರಿವು ಮೂಡಿತು. ಇಷ್ಟಾದರೂ ‘ಘಾಶಿರಾಮ್’ ‘ಮಹಾನಿರ್ವಾಣ’ ‘ವಾಡಾ ಚಿರೆಬಂದಿ’ಯಂತಹ ಶ್ರೇಷ್ಠ ನಾಟಕ ಇನ್ನೂ ಮೂಡಿ ಬರಬೇಕಾಗಿದೆ ಎಂಬುದನ್ನು ದಲಿತ ರಂಗಭೂಮಿಯು ಒಪ್ಪಿಕೊಳ್ಳುತ್ತದೆ.