ಉಳಿದ ಸಂಗತಿಗಳು

ಗೊಂದೋಳೂ ಪೂಜೆಯ ಸಂದರ್ಭದಲ್ಲಿ ಬರುವ ಭೈರವನ ಪೂಜೆಗೂ ಕಥೆಯಿದೆ. ಮೇಲು ವರ್ಗದ ಹೆಣ್ಣನ್ನು ಕೆಳವರ್ಗದ ಗಂಡು ಸತ್ಯಸಂಗತಿಯನ್ನು ಮುಚ್ಚಿಟ್ಟು ವಿವಾಹವಾದನು. ಮಕ್ಕಳಾದ ಮೇಲೆ ಹೆಣ್ಣಿಗೆ ನಿಜ ವಿಷಯ ತಿಳಿಯಿತು. ಅವನ ಮೋಸಕ್ಕೆ ಸರಿಯಾಗಿ ದಂಡಿಸಿದಳು. ಆಮೇಲೆ ಆ ಗಂಡು ಈಕೆಯನ್ನು ಬೇಡಿಕೊಂಡನಂತೆ/ ತನ್ನ ತಪ್ಪನ್ನು ಒಪ್ಪಿಕೊಂಡು ನಿನ್ನ ಪೂಜಾ ಸಮಯದಲ್ಲಿ ತನಗೂ ಪೂಜೆ ಸಲ್ಲಿಸುವಂತಾಗಲಿ ಎಂದು ಬೇಡಿಕೊಂಡನಂತೆ. ಅದೇ ಭೈರವ ಪೂಜೆಯಾಗಿದೆ ಎನ್ನುತ್ತಾರೆ.

ಇವರದು ಬರೆದಿಟ್ಟ ಸಾಹಿತ್ಯವಲ್ಲ ಬಾಯಿಯಿಂದ ಬಾಯಿಗೆ, ಪೀಳಿಗೆಯಿಂದ ಪೀಳಿಗೆಗೆ ಸಾಗುವ ಸಾಹಿತ್ಯ ಎನ್ನಬಹುದು. ನಾಟಿ ಮಾಡುವಾಗ, ಕಳೆ ಕೀಳುವಾಗ, ಬತ್ತ ಕುಟ್ಟುವಾಗ, ರಾಗಿ ಬೀಸುವಾಗ, ಮದುವೆ, ನಾಮಕರಣ, ಸೋಬಾನೆ, ಲಾಲಿ, ಮದರಂಗಿ ಶಾಸ್ತ್ರ ಮುಂತಾದ ಸಂದರ್ಭಗಳಲ್ಲಿ ಇವರ ಸೊಲ್ಲು ಹರಿಯುತ್ತದೆ.

ಇವರು ಕುಮ್ರಿ ಬೇಸಾಯ ಮಾಡುತ್ತಿದ್ದಾಗ ಹಾಡುತ್ತಿದ್ದ ಪಾಡ್ದನಗಳ ನಿಧಿಯೇ ಒಂದು ಕಾಲದಲ್ಲಿತ್ತು ಎಂದು ಹೇಳಬಹುದು. ಗದ್ದೆಯನ್ನು ಉತ್ತು ಹಸನುಗೊಳಿಸುವ ಸಂದರ್ಭದಲ್ಲಿ ಕೋಣಗಳನ್ನು ಕುರಿತು ಹಾಡುವ ಹಾಡು ಉರಲ್ / ಒರಲ್ ಎನ್ನುತ್ತಾರೆ. ನೇಜಿ ನೆಡುವ / ನೆಜಿ ತೆಗೆಯುವ ’ಕಬಿತ’ ಕೆಲಸದ ಹಾಡುಗಳಲ್ಲಿ ಪ್ರಧಾನ ಪಾತ್ರಧಾರಿ ಹೆಣ್ಣು ಮಕ್ಕಳು. ಹೆಂಗಳೆಯರ ನಗು ಹಾಸ್ಯ ಧಣಿವರಿಯದ ಉಲ್ಲಾಸ ಎಲ್ಲವೂ ಇದರೊಳಗಿದೆ. ಈ ಪಾದ್ದನಗಳಲ್ಲಿ ಸಂಸಾರಗಳ ಕಥೆ / ವ್ಯಥೆ ಇರುತ್ತದೆ. ದುಃಖ / ದುಮ್ಮಾನಗಳ ಸಂಕಟಗಳಿವೆ. ಕಷ್ಟಸುಖಗಳ ವಿವರಗಳಿವೆ. ವ್ಯಕ್ತಿತ್ವಗಳ ವಿಮರ್ಶೆ ಇದೆ. ಸುದ್ದಿ  ಪ್ರಸಾರವಿರುತ್ತದೆ. ಇದರೊಂದಿಗೆ ಹಾಸ್ಯ – ನಗು ಎರಡು ಇರುತ್ತದೆ.

ಮುಖ್ಯ ಹಾಡುಗಾರ್ತಿ ಹಾಡುತ್ತಾಳೆ. ಉಳಿದವರು ಧ್ವನಿಗೂಡಿಸುತ್ತಾರೆ.

’ಲಕ್ಕುಜರಯೇ ಲಕ್ಕುಜರಯೇ ದೂಜಪೊರ್ಬುಲೆ
ಏಳುವುದಿಲ್ಲವೇ ಏಳುವುದಿಲ್ಲವೇ ದೂಜ ಪ್ರಭುಗಳೇ’

-ಮನೆಯಲ್ಲೊಬ್ಬನು ನಿದ್ರೆ ಮಾಡಿದ್ದಾನೆ. ಅವನ ನಿದ್ರೆ ಹೇಗಿದೆಯೆಂದರೆ, ಎಲ್ಲವನ್ನು ಕಳ್ಳರು ಕದ್ದುಕೊಂಡು ಹೋದರು ಅವನಿಗೆ ಗೊತ್ತಾಗುವುದಿಲ್ಲ. ಕೊನೆಗೆ ಕಳ್ಳರು ಅವರ ಹೆಂಡತಿಯನ್ನು ಕದ್ದುಕೊಂಡು ಹೋದಾಗ … ನಿದ್ರೆಯಿಂದ ಏಳುತ್ತಾನೆ… ಇಂಥ ಪೇಚಿನ ಪ್ರಸಂಗ ಮೋಜು / ಹಾಸ್ಯ ಎಲ್ಲವು ಕೆಲಸದ ಆಯಾಸವನ್ನು ಮರೆಸಿ ಬಿಡುತ್ತವೆ.

ಕೆಲವು ’ಕಬಿತ’ ಗಳ ಕೊನೆಯಲ್ಲಿ ಹುಲಿ ಹಿಡಿಯುವ ಸನ್ನಿವೇಶದ ಚಿತ್ರಣವಿದೆ. ಆದರೆ ಇದನ್ನು ಗದ್ದೆ ಉಳುವ ಸಂದರ್ಭದಲ್ಲಿ ಹೇಳಬಾರದು ಎನ್ನುತ್ತಾರೆ. ಅದನ್ನು ’ಈಜೋ ಮಂಜೊಟ್ಟಿ ಗೋಣಾ’ ಎನ್ನುತ್ತಾರೆ.

ಇಲ್ಲಿ ಬರೀ ಹಾಡುವುದಷ್ಟೇ ಅಲ್ಲ. ಕೆಲವು ಸಂದರ್ಭದಲ್ಲಿ ಹೆಂಗಸರು ಸನ್ನಿವೇಶಗಳನ್ನು ಹಾಡುತ್ತಾ / ಅಭಿನಯ / ಅನುಕರಣೆ ಏಕಕಾಲಕ್ಕೆ ಜರುಗುವ ವೇದಿಕೆಯು ಆಗಿ ಬಿಡುತ್ತದೆ, ಕೆಸರು ಗದ್ದೆಯ ಪ್ರದೇಶ.

ನಾಟಿ ಮಾಡುವಾಗ ಆರಂಭದಲ್ಲಿ ’ಓ ಬೇಲೇ ಕಬಿತ’ ಹಾಡಿದ ಮೇಲೆ ಇತರ ಕಬಿತಗಳನ್ನು ಹಾಡುತ್ತಾರೆ. ನೇಜಿ ನೆಡುವ ಕೊನೆಯ ದಿನ ’ಒಯ್ಯಾ’ ಹಾಡುತ್ತಾರೆ. ಇದರೊಂದಿಗೆ ಮರಾಠಿಗರಲ್ಲಿ ಒಂದು ನಂಬಿಕೆ ತಳುಕು ಹಾಕಿಕೊಂಡಿದೆ. ’ಒಯ್ಯಾ; ಹಾಡಿದ ಮೇಲೆ ಗದ್ದೆಯಲ್ಲಿ ಬಾಳೆ’ ಕಂದು ನೆಡಬೇಕೆಂಬ ಸಂಪ್ರದಾಯವಿದೆ.

ನೇಜಿ ಹಾಡುವ ಹೆಂಗಸರು ತಮ್ಮ ಬುದ್ಧಿವಂತಿಕೆ, ಜಾಣ್ಮೆ, ಕಲ್ಪನ ಶಕ್ತಿಯ ಸಾಮರ್ಥ್ಯ ತೋರಿಸುವ ಸ್ಥಳವು ಇದಾಗಿದೆ ಎಂದು ಹೇಳಬಹುದು. ಇವರ ಹಾಡುಗಳಲ್ಲಿ ಆಭರಣ, ಅಲಂಕಾರದ ವಸ್ತುಗಳು, ಹೂವು, ಮರ, ತರಕಾರಿ, ಮನುಷ್ಯ, ಪ್ರಾಣಿ, ಊರು, ಜಾತಿ ಮುಂತಾದ ಹೆಸರುಗಳು ಬರುತ್ತದೆ. ಸರಪಣಿಯ ರೀತಿಯಲ್ಲಿ ಈ ಕಬಿತಗಳನ್ನು ಬೆಳೆಸುತ್ತಾ.. ಹೋಗುತ್ತಾರೆ.

ಇದಿಷ್ಟೆ ಅಲ್ಲ ಹೆಂಗಸರ ನೋವು – ನಲಿವು, ಆಸೆ -ಭರವಸೆಗಳನ್ನು ಬಿಂಬಿಸುವ ಕಬಿತಗಳಿವೆ. ಹಸಿವು, ಬಡತನ, ತಾಯ್ತನದ ಹಂಬಲ, ಫಲವಂತಿಕೆ, ಒಂಟಿತನ, ಒಡೆಯತನ ದಬ್ಬಾಳಿಕೆ, ಲೈಂಗಿಕ ಶೋಷಣೆ, ಕುಡಿತದ ದುಷ್ಪರಿಣಾಮ, ಕ್ರೌರ್ಯ ಎಲ್ಲವು ಇದರೊಳಗಿವೆ. ಒಟ್ಟಿನಲ್ಲಿ ಹೆಣ್ಣಿನ ಬದುಕಿನಲ್ಲಿ ಆಕೆ ಪಡಬಹುದಾದ ಎಲ್ಲ ಸಂವೇದನೆಗಳ ದೊಡ್ಡ ಮೊತ್ತ ಅನಾವರಣಗೊಂಡಿದೆ. ನಿದರ್ಶನಕ್ಕಾಗಿ ಒಂದನ್ನು ಇಲ್ಲಿ ಗಮನಿಸಬಹುದು.

ರಾವೋ ರಾವು ಕೊರುಂಗೋರಾವಂದೇನ್ ದಾನ್ ಬೆ || ಪಲ್ಲವಿ ||
……………………………………………………………………………….
……………………………………………………………………………….
ಪೋ ಬರ‍್ಹೆಂದ್ ಪನ್ ಕೊರುಂಗೋ ಪನಂದೇನ್ ದಾನ್ ಬೆ
ಬಿನ್ನಡಿ ದಾಡ್ ಕಡತ್ತೊನುಬೆ ಆಯಿಡ್ದ್ ಬೊಕ್ಕ ರಾವೋನುಬೆ
ರಾವೋ ರಾವು ಕೊರಂಗೋ ರಾವಂದೇನ್ ದಾನ್ ಬೆ ||

ಹಾರೋ ಹಾರು ಕೊಕ್ಕರೆಯೇ
ಹಾರದೆ  ನಾನೇನು ಮಾಡಲಿ || ಪ ||

ಬಳೆ, ಉಂಗುರ, ಕೈ ಕಾಲಿಗೆ ಕಾಲುಚೈನು, ಕಾಲುಸರಪಳಿ, ಸೊಂಟಪಟ್ಟಿ, ಬುಲಾಕು, ಮೂಗುಬಟ್ಟು, ಬೆಂಡೋಲೆ, ಜುಮಕಿ, ಕಿವಿಗೆ ಕೊಪ್ಪು

ಮಲ್ಲಿಗೆ ಸರ, ಅವಲಕ್ಕಿಸರ…
ತಲೆಬಾಚಿ …ಜಡೆ, ಮಲ್ಲಿಗೆ / ಕೇದಿಗೆ
ಬಂಗಾರ ಪುಚ್ಚ ನೆತ್ತಿಬೊಟ್ಟು
ರವಿಕೆ. ಲಂಗ, ಸೀರೆ…
ಕುಂಕುಮ, ಕಾಡಿಗೆ, ಕೊಡೆ…
ಪೆಟ್ಟಿಗೆ….
ಚಪ್ಪಲಿ ಹಾಕಿ
ಹೋಗಿ ಬರುತ್ತೇನೆಂದು ಹೇಳು ಕೊಕ್ಕರೆಯೇ
ಹೇಳದೇ ನಾನೇನು ಮಾಡಲಿ
ಬನ್ನಾಡಿ ಕಾಡು ದಾಟಿಕೊಳ್ಳುವೆ… ಅನಂತರ ಹಾರಿಕೊಳ್ಳುವೆ
ಹಾರೋ ಹಾರು ಕೊಕ್ಕರೆಯೇ
ಹಾರದೆ ನಾನೇನು ಮಾಡಲಿ….

– ಈ ಪಾಡ್ದನದಲ್ಲಿ ಹುದುಕಿ ಹೋಗಿರುವ ಹೆಣ್ಣಿನ ಸ್ವಾತಂತ್ರ‍್ಯಕ್ಕೆ ಹಾಕಿಟ್ಟ ಸಂಕೋಲೆಗಳು. ಅದನ್ನು ನಿರಾಕರಿಸಿ ಪ್ರೇರಣೆ ಕೊಡುವ ಮಾತುಗಳು ಹಾರದೆ ನಾನೇನು ಮಾಡಲಿ ಎಂಬ ಅಸಹಾಯಕತೆ ಇಲ್ಲಿ ಮುಖ್ಯವಾಗಿ ಬಿಡುತ್ತದೆ. ಆಕಸ್ಮಿಕ ತಪ್ಪು ಮಾಡಿದರೆ ಕತ್ತರಿಯ ಆಕಾರದಲ್ಲಿ ಬೈಹುಲ್ಲಿನಿಂದ ಕಾಡಿನಲ್ಲಿ ಗುಡಿಸಲನ್ನು ನಿರ್ಮಿಸುತ್ತಾರೆ. ಆಮೇಲೆ ತಪ್ಪಿತಸ್ಥರ ತಲೆಯ ಮೇಲೆ ಗಂಧದ ನೀರನ್ನು ಚಿಮುಕಿಸುತ್ತಾರೆ. ಆಮೇಲೆ ಆ ಗುಡಿಸಲಿಗೆ ಬೆಂಕಿ ಹಚ್ಚಿ ಉರಿಯುತ್ತಿರುವ ಗುಡಿಸಲು ಮುಂಬಾಗಿಲಿನಿಂದ ತಪ್ಪಿತಸ್ಥರು ಗುಡಿಸಲನ್ನು ಪ್ರವೇಶಿಸಿ ಹಿಂಬಾಗಿಲಿನಿಂದ ಹೊರಬರಬೇಕು. ಹಾಗೆ ಹೊರ ಬರುವಾಗ ಹೊರಗಡೆ ನಿಂತವರು ತಪ್ಪಿತಸ್ಥರಿಗೆ ಕೋಲಿನಿಂದ ಹೊಡೆಯುತ್ತಿದ್ದರು. ಇದೆಲ್ಲಾ ದೈಹಿಕ ಯಾತನೆಯನ್ನು ಅನುಭವಿಸಿದ ಮೇಲೆ ಮತ್ತೆ ತಮ್ಮ ಜಾತಿಗೆ ಸೇರಿಸಿಕೊಳ್ಳುತ್ತಿದ್ದರು.

ಇವರಲ್ಲಿ ಇರುವ ನಿಷೇಧಗಳು ಎರಡು ಮುಖಗಳನ್ನು ಹೊಂದಿರುವುದನ್ನು ಗುರುತಿಸಬಹುದು. ಮನೆಯೊಳಗಿನ ನಿಷೇಧಗಳು. ಹೊರಗಿನ ನಿಷೇಧಗಳು. ಆರಂಭದ ದಿನಗಳಲ್ಲಿ ಇಲ್ಲದ ನಿಷೇಧಗಳು ದಿನ ಕ್ರಮೇಣ ಮನೆಯೊಳಗೆ ಕಾಲಿಟ್ಟ ಅಂಶಗಳನ್ನು ಗುರುತಿಸಬಹುದು. ಮೊದಲು ತಂದೆಯನ್ನು ಬಾಬಾ ಎಂದೂ, ತಾಯಿಯನ್ನು ಬಾಯಿ ಎಂದು ಕರೆಯುತ್ತಿದ್ದರು. ಇಲ್ಲಿ ಗಂಡನಾದವನು ಹೆಂಡತಿಯನ್ನು ಏಕವಚನದಿಂದ ಕರೆಯುವ ಹಕ್ಕು. ಆದರೆ ಹೆಂಡತಿಯಾದವಳು ಗಂಡನನ್ನು ಬಹುವಚನದಿಂದ ಮಾತ್ರ ಕರೆಯಬೇಕೆಂಬ ಅಣತಿ ಇದೆ. ಮನೆಯ ಹೆಂಗಸರೆಲ್ಲ ಸೇರಿ ಮನೆಯೊಳಗೆ ಅಡಿಗೆ  ಇತ್ಯಾದಿ ಕೆಲಸಗಳನ್ನು ಮಾಡಬೇಕೆ ಹೊರತು ಇತರ ಕೆಲಸಗಳಲ್ಲಿ ಕೈ ಹಾಕುವಂತಿಲ್ಲವೆಂಬುದನ್ನು ಗಮನಿಸಬಹುದು. ಹೆಂಡತಿಯಾದವಳು ಗಂಡ, ಅತ್ತೆ, ಮಾವ, ಅತ್ತಿಗೆ, ಭಾವನನ್ನು ಹೆಸರಿಡಿದು ಕರೆಯಬಾರದು.  ಸೊಸೆಯಾದವಳು ಪೊರಕೆಯನ್ನು ಅತ್ತೆಗೆ, ಮಾವ, ಭಾವಂದಿರ ಕಾಲಿಗೆ ತಾಗಿಸಬಾರದು. ಇವರೆಲ್ಲರ ಎದುರು ಸೊಸೆಯಾದವಳು ಕುರ್ಚಿ, ಬೆಂಚು ಕೊನೆಗೆ ಚಾಪೆಯ ಮೇಲು ಕುಳಿತುಕೊಳ್ಳದೇ  ನಿಂತಿರಬೇಕು. ಸೊಸೆ ಒಬ್ಬಳೇ ಇದ್ದಾಗ ಅತ್ತೆ ಅಥವಾ ನಾದಿನಿಯರ ಜೊತೆಗೆ ಮಲಗಬೇಕು. ಗಂಡನ ಜೊತೆಗೆ ಮಾತ್ರ ಹೊರಗಡೆ ಹೋಗುವ ಅವಕಾಶ ಇದೆಷ್ಟೆ ಅಲ್ಲ ಹೆಣ್ಣಿಗಿರುವ ’ಬೇಡ’ಗಳು ಇನ್ನೂ ಇವೆ. ಅಣ್ಣನು ತಮ್ಮನ ಹೆಂಡತಿಯ ಜೊತೆಗೆ ಸಲಿಗೆಯಿಂದ ನಡೆದುಕೊಳ್ಳಬಾರದು. ತಮ್ಮನ ಹೆಂಡತಿ ಮನೆಯಲ್ಲಿ ಒಬ್ಬಳೇ ಇರುವಾಗ ಅಣ್ಣ ಅಲ್ಲಿಗೆ ಹೋಗಬಾರದು. ಈ ಎರಡು ನಿಷೇಧಗಳು ಗಂಡಿಗೆ ಅನ್ವಯಿಸುತ್ತದೆಂದು ಹೊರ ನೋಟಕ್ಕೆ ಕಂಡು ಬಂದರೂ, ಇದು ಹೆಣ್ಣಿಗೆ ಅನ್ವಯಿಸಿ ಬಿಡುವ ನಿಷೇಧವಾಗಿದೆ ಎಂದು ಹೇಳಬಹುದು.

ಇದರಂತೆಯೇ ಮರಾಠಿ ಬುಡಕಟ್ಟಿಗೆ ಹೊರಗಿನ ನಿಷೇಧಗಳು ಹಲವಾರಿದ್ದ ವೆನ್ನಬಹುದು. ಗಂಡಸು ಉದ್ದ ಪಂಚೆ / ಹೆಂಗಸು ಉದ್ದದ ಸೀರೆ ಉಡುವಂತಿರಲಿಲ್ಲ. ಚಪ್ಪಲಿ ಹಾಕಿ ಧಣಿಯ ಮನೆಯ ಅಂಗಳಕ್ಕೆ ಕಾಲಿಡಲು ಸಾಧ್ಯವಿರಲಿಲ್ಲ. ಗಾಡಿಯಲ್ಲಿ ಕಾಲಿ ಕೆಳಗೆ ಬಿಟ್ಟು ಕೂಡುವಂತಿರಲಿಲ್ಲ. ಅಲ್ಲದೆ ಪ್ರತಿಯೊಂದು ಮನೆಯಿಂದ ಧಣಿಯ ಮನೆಗೆ ಒಬ್ಬರಾದರೂ ಕೆಲಸಕ್ಕೆ ಹೋಗಲೇಬೇಕಿತ್ತು. ವಯಸ್ಸಿನ ಅಂತರವಿಲ್ಲದೆ ಚಿಕ್ಕವರಾಗಲಿ ದೊಡ್ಡವರಾಗಲಿ ದಣಿಯ ಕುಟುಂಬದವರನ್ನು ಬಹುವಚನದಿಂದಲೇ ಸಂಬೋಧಿಸಬೇಕಿತ್ತು. ಸ್ವಾಮಿ, ಅಯ್ಯ, ಅಕ್ಕಯ್ಯ, ದೊಡ್ಡಮ್ಮ, ಅಣ್ಣಯ್ಯ, ಸಣ್ಣಧಣಿ, ದೊಡ್ಡ ಧಣಿ ಎಂದು ಕರೆಯಬೇಕಿತ್ತು. ಇದಿಷ್ಟೇ ಸಾಲದೆಂಬಂತೆ ಇವರ ಹೆಣ್ಣು ಮಕ್ಕಳ ಮೇಲೆ ಆಗುತ್ತಿದ್ದ ಲೈಂಗಿಕ ದೌಜನ್ಯಕ್ಕೇನು ಕೊರತೆಯಿರಲಿಲ್ಲ ! ಮರಾಠಿ ಪುರುಷ ತಪ್ಪು ಮಾಡಿದರೆ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದರು.

ಮನುಷ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ನಂಬಿಕೆಗಳು ಗಾದೆಗಳು ಒಗಟುಗಳು ಆಟಗಳು ಎಲ್ಲೆಡೆ ಸರ್ವೇಸಾಮಾನ್ಯ ವಾಗಿರುವುದನ್ನು ಮರಾಠಿ ಬುಡಕಟ್ಟಿನಲ್ಲಿಯೂ ಗಮನಿಸಬಹುದಾಗಿದೆ. ಇವರಿಗೆ ಮಾತ್ರ ಸೇರಿರುವುದು ಎಂಬ ವಿಶೇಷ ಇಲ್ಲಿ ಕಂಡು ಬರುವುದಿಲ್ಲ.

ಪ್ರತಿಯೊಂದು ಜನ ಸಮುದಾಯದಲ್ಲಿ ಮಿಳಿತವಾಗಿರುವ ನಂಬಿಕೆಗಳು ಇವರಲ್ಲೂ ಸೇರಿ ಹೋಗಿವೆ. ಮಧ್ಯಾಹ್ನದ ನಂತರ ತುಳಸಿ ಗಿಡ ಮುಟ್ಟಬಾರದು. ಗರ್ಭಿಣಿಯರು ಸಂಜೆ ಹೊತ್ತು ಹೊರ ಹೋಗಬಾರದು. ಉರ್ಕು /ತಾಯಿತವನ್ನು ಕಟ್ಟಿಕೊಳ್ಳಬೇಕು. ಯಾರೇ ಆದರೂ ಬಾಣಂತಿಯ ಕಾಲನ್ನು ದಾಟಬಾರದು. ದಾಟಿದರೆ ಮಕ್ಕಳಿಗೆ ಹಾಲು ಬರುವುದಿಲ್ಲ. ಆಕಸ್ಮಿಕ ತಪ್ಪಿ ದಾಟಿ ಬಿಟ್ಟರೆ ಮತ್ತೆ ವಾಪಸ್ಸು ದಾಟಿ ಬರಬೇಕು. ಮಗುವಿಗೆ ತಾಯಿಯು ಒಂದು ಮೊಲೆಯ ಹಾಲನ್ನು ಮಾತ್ರ ಕುಡಿಸಿ ನಿಲ್ಲಿಸಬಾರದು. ಮುಟ್ಟಾದ ಹೆಂಗಸರು ಮನೆಯೊಳಗೆ ಪ್ರವೇಶಿಸುವಂತಿಲ್ಲ. ಬಾಣಂತಿ ಹೊರ ಹೋಗುವಾಗ ಕಬ್ಬಿಣದ ಸಣ್ಣ ಕತ್ತಿಯನ್ನು ಹಿಡಿದುಕೊಂಡಿರಬೇಕು. ತಂದೆ  / ತಾಯಿ ಇರುವವರು ತಲೆ ಕೈಯಿಟ್ಟು ಕುಳಿತುಕೊಳ್ಳಬಾರದು. ಹೆಣ್ಣು ನೋಡಲು ಬಂದಾಗ ಮನೆಯಲ್ಲಿ ಎದುರಲ್ಲಿ ಪೊರಕೆ ಇರಬಾರದು. ಮಂಗಳವಾರ ಅಥವಾ ಶುಕ್ರವಾರ ಮಗಳು / ಮದುವೆಯಾದ ತಾಯಿಯ ಮನೆಯಿಂದ ಹೊರಡಬಾರದು. ಹೆಂಗಸು ಅವಳಿ ಬಾಳೆ ಹಣ್ಣು ತಿನ್ನಬಾರದು. ಇಂಥ ನಂಬಿಕೆಗಳು ಎಲ್ಲ ಜನಾಂಗಗಳಲ್ಲೂ ಮನೆ ಮಾಡಿಕೊಂಡಿವೆ.

ಈ ಸಂದರ್ಭದಲ್ಲಿ ಒಂದೆರಡು ಒಗಟಗುಳು

ಮನೆಯ ಹೆಣ್ಣಿಗೆ ಮಿಂಡನ ಗೆಳೆತನ – ಉತ್ತರ / ಹೆಣ್ಣು ಕೋಳಿ

ಒಂದು ಅಜ್ಜಿಗೆ ಮೂರು ಕಣ್ಣು – ಉತ್ತರ / ತೆಂಗು

ಕಪ್ಪು ಅಮ್ಮನಿಗೆ ಬಿಳಿ ಮಗಳು – ಉತ್ತರ / ದೋಸೆ.

ತಾಯಿ ತರಕಳಿ, ಮಗಳು ಗಮಗಮ, ಮೊಮ್ಮಕ್ಕಳು ಬೋಡಿ ಉತ್ತರ : ಹಲಸು

ತಂದೆ ಆಕಾಶಕ್ಕೆ ಸುಳಿ , ತಾಯಿ ಪಾತಾಳಕ್ಕೆ ಬೇರು, ಮಗ ಅಂಗಡಿಗೆ  ಅಡಿಕೆ, ಮಗಳು ಮದುವೆಗೆ ಹಿಂಗಾರ ಒಟ್ಟು ಉತ್ತರ ಅಡಿಕೆ

ಇದೇ ರೀತಿ ಎಲ್ಲರು ಆಡುವ ಆಟಗಳು ಇವರಲ್ಲೂ ಇವೆ. ಚೆನ್ನಮಣೆ ಆಟ. ಇದನ್ನು ಅಕ್ಕ / ತಂಗಿ – ಗಂಡ ಹೆಂಡತಿ ಆಡಬಾರದೆಂದು ಹೇಳುತ್ತಾರೆ. ಮಿಕ್ಕಂತೆ ಕುಂಟು ಬಿಲ್ಲೆ, ಕಲ್ಲಾಟ, ಕಣ್ಣಾಮುಚ್ಚಾಲೆ, ಹಗ್ಗದಾಟ ಇತ್ಯಾದಿ. ಹಾಗೆಯೇ ಕಾಗೆ / ಗಿಳಿ ಆಟವನ್ನು ಹುಡುಗ /ಹುಡುಗಿಯರು ಆಡಬಾರದೆಂದೂ ಹೇಳುತ್ತಾರೆ.

ಇದರೊಂದಿಗೆ ಗಮನಿಸಬಹುದಾದುದೆಂದರೆ ಮರಾಠಿಗರ ಉಡುಪು / ಆಭರಣ, ಗಂಡಸು ಸಾಮಾನ್ಯವಾಗಿ ಜುಟ್ಟು ಬಿಟ್ಟಿರುತ್ತಾರೆ. ಕಿವಿಗೆ ಟಕ್ಕಿಇಡುತ್ತಾನೆ. ೧೩ ವರ್ಷಕ್ಕೆ ಹುಡುಗಿಗೆ ಮೂಗು ಚುಚ್ಚಿಬಿಡುತ್ತಾರೆ. ಕೆಂಪು / ಬಿಳಿ ಕಲ್ಲಿನ ಓಲೆ ಧರಿಸುತ್ತಾರೆ. ಮದುಮಗ ಕಾಲು ಬೆರಳಿಗೆ ಉಂಗುರ ಧರಿಸುತ್ತಾನೆ. ಬಿಳಿ ಷರ್ಟು, ಶಾಲು, ಪೇಟ, ಈತನ ಉಡುಪು, ಕೆಲವರು ಕಚ್ಚೆ ಉಡುತ್ತಾರೆ. ತಲೆಗೆ ಮುಂಡಾಸು ಕಾಲಿಗೆ ಬೆಳ್ಳಿಯ ಬಳೆ ಹಾಕಿಕೊಂಡಿರುತ್ತಾರೆ. ಹೆಂಗಸರು ಕಚ್ಚಾ ಸೀರೆ ಕೆಂಪು / ನೀಲಿ ಬಣ್ಣದ ಚೌಕಳಿ ಸೀರೆ ಉಡುತ್ತಾರೆ. ಸಾಮಾನ್ಯವಾಗಿ ಕೂದಲನ್ನು ಗಂಟು ಹಾಕುತ್ತಾರೆ. ಮಿಸರಿಮಾಲೆ ಮತ್ತು ಗೋಧಿಸರವನ್ನು ಧರಿಸುತ್ತಾರೆ. ಕೆಲಸದ ವೇಳೆಯಲ್ಲಿ ಹೆಂಗಸರು ತಲೆಗೆ ಮುಬ್ಬಾಳೆ ಇಟ್ಟುಕೊಳ್ಳುತ್ತಾರೆ.

ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು ಬದುಕ ಕಂಡುಕೊಂಡು ನೆಲೆ ನಿಂತ ಮರಾಠಿ ಬುಡಕಟ್ಟು ಎರಡು ಕವಲಾಗಿರುವುದನ್ನು ಆಧುನಿಕ ಸಂದರ್ಭದಲ್ಲಿ ಗುರುತಿಸಬಹುದಾಗಿದೆ. ಬ್ರಿಟಿಷರ ಆಗಮನದಿಂದಾಗಿಯೇ ಭಾರತದಲ್ಲಿ ನವೋದಯದ ಗಾಳಿ ಬೀಸಿದಂತೆ ಅನೇಕ ಮಹನೀಯರು  / ಮಹಿಳೆಯರಲ್ಲಿ ಬೌದ್ಧಿಕ ಜಾಗೃತಿ ಮೂಡಿಸಿದ್ದು ಈಗ ಇತಿಹಾಸ. ಶಿಕ್ಷಣದ ಮಹತ್ವವನ್ನು ಅರಿತುಕೊಂಡ ಮರಾಠಿ ಕುಟುಂಬಗಳಲ್ಲಿ ಈಗ ವೈದ್ಯರು, ಇಂಜಿನಿಯರುಗಳು, ಶಿಕ್ಷಕ / ಶಿಕ್ಷಕಿಯರು, ಲಾಯರು, ಶಾಸಕರು ಆಗುತ್ತಿದ್ದಾರೆ. ವಿದ್ಯಾವಂತರ ಸಂಖ್ಯೆ ಸರಾಸರಿ ಅಂಕಿ ಅಂಶಗಳ ಆಧಾರದ ಮೇಲೆ ಹೇಳುವುದಾದರೆ ಅತೀ ಕಡಿಮೆಯೆಂದೇ ಹೇಳಬೇಕಾಗುತ್ತದೆ. ಇದು ಒಂದು ಕವಲಿನ ದಾಖಲೆ. ಆದರೆ ಇದರ ಇನ್ನೊಂದು ಕವಲು ನಿರಂತರ ಬಡತನ, ಅಜ್ಞಾನ, ಇತ್ಯಾದಿಗಳ ಜಂಜಾಟದಲ್ಲಿಯೇ ಬದುಕುತ್ತಿರುವುದು ವಿಪರ್ಯಾಸವೆಂದೇ ಹೇಳಬೇಕಾಗುತ್ತದೆ. ಒಂದೆಡೆ ತಾರಸಿಯ ಮನೆಗಳ ಬದುಕು. ಇನ್ನೊಂದೆಡೆ ಗುಡಿಸಲು ಕಾಲೋನಿಗಳ ಬದುಕು. ಉದರ ನಿರ್ವಹಣೆಗಾಗಿ ತಮ್ಮ ಮೂಲಭೂತ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಆಚಾರ – ವಿಚಾರ ಕೊನೆಗೆ ಭಾಷೆಯನ್ನು ಹೊಸ ಪೀಳಿಗೆಯಲ್ಲಿ ನಿಧಾನವಾಗಿ ಮರಾಠಿ ಭಾಷೆಯು ಮರೆಯಾಗುತ್ತಿದೆ. ತುಳು ಭಾಷೆಯೇ ಮಾತೃಭಾಷೆ ಎಂಬಂತಾಗಿದೆ.

ಅಡಿ ಟಿಪ್ಪಣಿಗಳು

೧. ಪ್ರಸ್ತಾವನೆ – ಕರ್ನಾಟಕ ಬುಡಕಟ್ಟು ಸಂ. ಪ್ರೊ., ಎಚ್.ಜೆ. ಲಕ್ಕಪ್ಪಗೌಡ, ಬೆಂಗಳೂರು ೧೯೯೮, ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ

೨. ಅದೇ

೩.  ಅದೇ

೪. ಪುಟ ೨೩, ಶಂಬಾ ಕೃಥಿ ಸಂಪುಟ ಕಂನಾಡು ಕರ್ನಾಟ ೧, ಸಂ. ಮಲ್ಲೇಪುರಂ ಜಿ. ವೆಂಕಟೇಶ್, ೧೯೯೯. ಕನ್ನಡ ಪುಸ್ತಕ ಪ್ರಾಧಿಕಾರ, ಚಾಮರಾಜಪೇಟೆ, ಬೆಂಗಳೂರು

೫. ಅದೇ ಪುಟ ೨೯

೬. ಪುಟ ೩೦ ಕರಾವಳಿ ಕರ್ನಾಟಕದ ಮರಾಠಿ ಜನಾಂಗ – ಪರಂಪರೆ ಮತ್ತು ಆಧುನಿಕತೆ ಡಾ. ಜಿ. ಸುಂದರನಾಯಕ್, ಮಂಗಳೂರು ವಿ.ವಿ. ಮಹಾಪ್ರಬಂಧ

೭. ಪುಟ ೨೧೧, ಮನುಕುಲದ ಕಥೆ, ಸಂಪುಟ ೧, ಸಂ. ನಿರಂಜನ

೮. ಪುಟ ೧೭೯, ಸಮಾಜಶಾಸ್ತ್ರದ ಮೂಲತತ್ವಗಳು, ಚ.ನ. ಶಂಕರರಾವ್ ಜೈಭಾರತ ಪ್ರಕಾಶನ, ಮಂಗಳೂರು

೯. ಪುಟ ೧೦೪, ಬುಡಕಟ್ಟು ದೈವಾರಾಧನೆ ಬುಡಕಟ್ಟು ಅಧ್ಯಯನ ಮಾಲೆ ೧,

ಡಾ.ಹಿ.ಚಿ. ಬೋರಲಿಂಗಯ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೦

೧೦. ಪುಟ ೬೩ ಕರ್ನಾಟಕ ಜನಪದ ಕಲೆಗಳು, ಸಂ. ಗೊ.ರು.ಜೆ. ೧೯೭೯

೧೧. ಉಟ ೧೪೦, ಡಾ. ಸುಂದರನಾಯ್ಕ, ಕರಾವಳಿ ಮರಾಠಿ ಜನಾಂಗದ ಪರಂಪರೆ ಮತ್ತು ಆಧುನಿಕತೆ

೧೨. ಪುಟ ೧೨೦, ಅಶೋಕ ಆಳ್ವ, ಗೊಂದೋಳು ಪೂಜೆಯ ತಾತ್ವಿಕ ಅಧ್ಯಯನ

೧೩. ಮರಾಠಿ ಸಮ್ಮೇಳನ ೨೦೦೨, ಸ್ಮರಣ ಸಂಚಿಕೆ ಕ.ಮ. ಸಂಘ (ರಿ) ಬೆಂಗಳೂರು ಆಶ್ರಯದಲ್ಲಿ

ಅಭ್ಯಾಸ ಗ್ರಂಥಗಳು

೧. ಉಪಸಂಸ್ಕತಿಮಾಲೆ – ಬರಗೂರು ರಾಮಚಂದ್ರಪ್ಪ – ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು ೧೯೯೩

೨. ಕರ್ನಾಟಕ ಜನಪದ ಕಲೆಗಳು – ಗೊ.ರು.ಚೆ

೩. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ – ಡಾ. ಎಂ. ಚಿದಾನಂದಮೂರ್ತಿ

೪. ಕನ್ನಡ ಶಾಸನಗಳ – ಸಾಂಸ್ಕೃತಿಕ ಅಧ್ಯಯನ – ಡಾ. ಎಂ. ಚಿದಾನಂದಮೂರ್ತಿ

೪. ಕನ್ನಡ ಕನ್ನಡ ನಿಘಂಟು – ಕ.ಸಾ.ಪ. ಪಂಪ ಮಹಾಕವಿ ರಸ್ತೆ, ಚಾ., ಪೇಟೆ. ಬೆಂ.

೫. ಕರ್ನಾಟಕದ ಬುಡಕಟ್ಟುಗಳು – ಸಂ. ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ

೬. ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು – ಗಾಯತ್ರಿ ನಾವಡ – ಸಿರಿ ಪ್ರಕಾಶನ

೭. ಕರಾವಳಿ ಕರ್ನಾಟಕದ ಮರಾಠಿ ಜನಾಂಗ ಪರಂಪರೆ ಮತ್ತು ಆಧುನಿಕತೆ, ಡಾ. ಕೆ. ಸುಂದರನಾಯ್ಕ, ಮಹಾಪ್ರಬಂಧ

೮., ಕೊರಗ ಸಂಸ್ಕೃತಿ – ಡಾ. ಬಿಳಿಮಲೆ ಕ.ಸಾ.ಪ. ಬೆಂ.

೯. ಜನಪದ ಆರಾಧನೆ ಮತ್ತು ರಂಗಕಲೆ  – ಸುಶೀಲ ಸಿ. ಉಪಾಧ್ಯಾಯ – ಆರ್. ಆರ್. ಸಿ. ಉಡುಪಿ

೧೦. ಪೊಕರೆ ಮತ್ತು ಇತರ ಜಾನಪದೀಯ ಲೇಖನಗಳು – ಪೂವಪ್ಪ ಕಣಿಯೂರು ರಾಜಪ್ರಕಾಶ, ಮೈಸೂರು

೧೧. ಬುಡಕಟ್ಟು ಅಧ್ಯಯನ – ಸಂ. ಡಾ. ಹಿ.ಚಿ. ಬೋರಲಿಂಗಯ್ಯ , ಎ.ಎಸ್. ಪ್ರಭಾಕರ

೧೨. ಬುಡಕಟ್ಟು ಅಧ್ಯಯನ ಮಾಲೆ – ೧ ಡಾ.ಹಿ.ಚಿ.ಬೋರಲಿಂಗಯ್ಯ

೧೩. ಮನುಕುಲದ ಕಥೆ – ಜ್ಞಾನಗಂಗೋತ್ರಿ – ೧ ಸಂ. ನಿರಂಜನ

೧೪. ಶಂಬಾ ಕೃಥಿ ಸಂಪುಟ (೧) ಕಂನಾಡು – ಕರ್ನಾಟಕ ಸಂ. ಮಲ್ಲೇಪುರಂ ಜಿ. ವೆಂಕಟೇರ್ಶ

೧೫. ಶಿಷ್ಟ – ಪರಿಶಿಷ್ಟ ಡಾ. ಬಿಳಿಮಲೆ – ಮದಿಪು ಪ್ರಕಾಶನ

೧೬.ಸಮಾಜಶಾಸ್ತ್ರದ ಮೂಲ ತತ್ವಗಳು – ಚ.ನ. ಶಂಕರರಾವ್

೧೭. ಸಿರಿಗನ್ನಡ ಅರ್ಥಕೋಶ – ಡಾ. ಶಿವರಾಮ ಕಾರಂತ

೧೮. ಸ್ಮರಣ ಸಂಚಿಕೆ – ಮರಾಠಿ ಸಮ್ಮೇಳನ – ೨೦೦೨.