ಮಹಿಳೆ : ಸಾಂಸ್ಕೃತಿಕ ರಂಗಭೂಮಿ

’ಕೊಂಬುಗಳು ಕರೆದಾವ / ಕಾಳಿಗಳು ಊದ್ಯಾವ
ದಿಮ್ಮಿ ಕರಡೆಲ್ಲ ಕಣಿ ಕಣಿಸಿ  / ನಿಬ್ಬಣದ
ಅಬ್ಬರ ಸಂಭ್ರಮ ಕೇಳ್ಯಾವ’

– ಹೌದು ಜನಪದ ಸಾಂಸ್ಕೃತಿಕ ವೈಭವದೊಂದಿಗೆ ತಳುಕು ಹಾಕಿಕೊಂಡೇ ಬೆಳೆದ ಧಾರ್ಮಿಕ ಹಬ್ಬ ಹರಿದಿನಗಳ ಮೂಲ ಸೆಲೆ ಅನಕ್ಷರಸ್ಥ ಜನಪದರ ಅಂತರಂಗ ಎಂದು ಹೇಳಬಹುದು. ಇವು ಬೆಳೆದು ಬಂದದ್ದು ಲೋಕಕ್ಕೆ ಉಣ ಬಡಿಸುವ ರೈತರ ಮನೆಯ ಅಂಗಳದ ಒಳ  / ಹೊರಗೆ. ’ನಮ್ಮ ಜನಪದ ಬದುಕಿಗೆ ಹುಟ್ಟಿದ ಪರಿಸರವೇ ಶಾಲೆ. ಪಟ್ಟ ಅನುಭವವೇ ಗುರು’ ಎಂದಿದ್ದಾರೆ ಗೊ.ರು. ಚೆನ್ನಬಸಪ್ಪನವರು.

ನಮ್ಮಲ್ಲಿನ ಆರಾಧನೆ ಮೂಲತಃ ತಾಯಿಯ ಆರಾಧನೆ. ಮಾತೃದೇವತೆಯ ಆರಾಧನೆ. ದೇವಿಯ ಆರಾಧನೆ. ಇಲ್ಲಿ ಅಮ್ಮ ಮುಖ್ಯವೇ ಹೊರತು ಅಪ್ಪನಲ್ಲ ! ಈ ಅಂಶವನ್ನು ಜೀವನಕ್ಕೆ ಕಾರಣಿಭೂತಳಾದ ದೈವೀ ಶಕ್ತಿಯ ಆರಾಧನೆ ಮೊದಲಿನಿಂದಲೂ ನಡೆದು ಬಂದಿದೆ. ಅದರಲ್ಲೇ ನೆಮ್ಮದಿಯನ್ನು ಕಂಡ ಮನುಜನ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ತನ್ನ ಬದುಕಿನ ಸಕಲ ಒಳಿತು ಕೆಡಕು, ಆಗು ಹೋಗುಗಳ ಮೇಲೆ ಹಿಡಿತವಿಟ್ಟುಕೊಂಡ ಆ ಅಸದೃಶ ಶಕ್ತಿಯನ್ನು ಸಂತೃಪ್ತಿ ಪಡಿಸುವುದು ಅದರೊಂದಿಗೆ ಸಂತೋಷ ಸಂಭ್ರಮಗಳನ್ನು ಪಡೆಯುವುದು, ಜನಪದರ ಬದುಕಿನ ಗುರಿಯು ಆಗಿದೆ ಎನ್ನಬಹುದು. ಅಂತೆಯೇ ಆ ಶಕ್ತಿಯನ್ನು  ಪೂಜಿಸುವಾಗ ಮನ ತುಂಬಿ ಹಾಡು ಹೊರಟಿತು. ಮೈ ತುಂಬಿ ಕುಣಿಯತೊಡಗಿದಾಗ ಆ ಸಾಂಸ್ಕೃತಿಕ ನೆರಳಲ್ಲೇ ಧಾರ್ಮಿಕ ಹಬ್ಬಹರಿದಿನಗಳ ರಂಗಭೂಮಿ ಹುಟ್ಟಿಬಂದಿತೆನ್ನಬಹುದು.

ಈ ದೈವೀ ಆರಾಧನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಹಾಡು- ಕುಣಿತಗಳಲ್ಲಿ ಕೆಲವು ವಾದ್ಯ ಪ್ರಧಾನಕಲೆಗಳು. ಕೆಲವು ಗೀತ ಪ್ರಧಾನವಾದವುಗಳು, ಮತ್ತೆ ಕೆಲವು ಅಭಿನಯ, ನೃತ್ಯ ಪ್ರಧಾನವಾದವುಗಳೆನ್ನಬಹುದು. ಇನ್ನು ಕೆಲವು ಪೂರ್ಣ ಪ್ರಮಾಣದಲ್ಲಿ ಮನೋರಂಜನೆಗೆ ಮೀಸಲು. ಮಿಕ್ಕವು ಧಾರ್ಮಿಕ ಆಚರಣೆಗಳಾಗಿವೆ. ಅಂದರೆ ಕಾಲಕ್ರಮೇಣ ಕೆಲವು ಮನೋರಂಜನೆಯ ಮಾಧ್ಯಮವಾದವು. ಮತ್ತೆ ಕೆಲವು ಉಪಜೀವನದ ಮಾರ್ಗಗಳಾದವು. ಮತ್ತೆ ಕೆಲವು ದೈವೀ ಆರಾಧನೆಗಾಗಿ ಮೀಸಲಾದವು. ಈ ಮೂರು ನೆಲೆಗಳು ಶತಶತಮಾನಗಳಿಂದ ಜನಪದರ ಬದುಕಿನೊಂದಿಗೆ ಹಾಸು ಹೊಕ್ಕಾಗಿ ಲಾಳಿಯಾಡುತ್ತಿವೆಯೆಂದು ಹೇಳಬಹುದು. ಗೊ.ರು.ಚಿಯವರು ಹೇಳುವಂತೆ ’ದೇವರ ಆರಾಧನೆಗಿರಲಿ, ದುಡಿಮೆಯ ಬೇಸರ ಪರಿಹಾರಕ್ಕಿರಲಿ ನಮ್ಮ ಜನ ಸೃಷ್ಟಿಸಿದ ಸಾಹಿತ್ಯ ಮತ್ತು ಕಲೆಗಳ ಮೌಲ್ಯ ಅನುಪಮವಾದುದು. ಅವುಗಳನ್ನು ಗಮನಿಸಿದಾಗ ನಮ್ಮ ಜನರ ಅಸಾಧಾರಣ ಪ್ರತಿಭೆಯ ವಿರಾಟ್ ದರ್ಶನವೇ ಆಗುತ್ತದೆ. ಅವರ ಒಂದೊಂದು ನುಡಿಗೂ, ಒಂದೊಂದು ಕಲೆಗೂ ಅರ್ಥಪೂರ್ಣ ಹಿನ್ನೆಲೆಯಿದೆ. ಸಮಷ್ಟಿ ಕ್ಷೇಮದ ಚಿಂತನೆಯಿದೆ. ಅಂದರೆ ’ಜನಪದ ಕಲೆಗಳು ಗ್ರಾಮೀಣ ಜೀವನದ ಸೂತ್ರಧಾರಿಗಳಿದ್ದಂತೆ ’ ಎಂದಿರುವುದು ಸಮಂಜಸವಾಗಿದೆ.

ಜಗತ್ತಿನ ಕಾರ್ಯಕಾರಣ ಮೂಲವಾದ ದೇವಿಯನ್ನು ಪ್ರಾರ್ಥಿಸುವಾಗ ಭಜನೆ ಪಂಡರೀ ಭಜನೆ ಇದ್ದಂತೆ. ಗೀತ ನೃತ್ಯಗಳ ಮೂಲಕ ದೇವಿ-ದೇವತೆಯರ ಮಹಿಮೆಯನ್ನು ಕೊಂಡಾಡಲು ಪುರಾಣ/ ಪುಣ್ಯ ಕಥೆಗಳನ್ನು ಹೇಳಲು – ಚೌಡಿಕೆ, ಕರಪಾಲ, ನೀಲಗಾರ, ಭಾಗವತಿಕೆ, ಗೊಂದಲಿಗರು ಬುರ‍್ರಕಥಾ, ಗಮಟೆ ಸಾಂಗ್ ಮೊದಲಾದ ಮೇಳಗಳಿವೆ. ಮರಾಠಿ ನಾಯ್ಕರ ಸಂದರ್ಭದಲ್ಲಿ ಮುಖ್ಯವಾಗುವುದು ಗೊಂದಲಿನ ಗೋಂದೋಲು ಪೂಜಾ. ಇದರ ಕಿರು ಪರಿಚಯದೊಂದಿಗೆ ಈ ಪೂಜಾ ವಿಧಾನದ ಅಡಿಯಲ್ಲಿ ಮಹಿಳೆಯೆಲ್ಲಿದ್ದಳು ಎಂಬುದರ ಹುಡುಕಾಟ ಇಲ್ಲಿದೆ.

ಗೊಂದಣ – ಗೊಂದಳ  – ಇಸ – ಪ್ರತ್ಯಯ – ಒಟ್ಟಾಗು, ಗುಂಪುಗೂಡು, ಹೆಚ್ಚಾಗು, ಅಧಿಕವಾಗು, ಗದ್ದಲವೆಬ್ಬಿಸು, ಗಾಬರಿ ಪಡು, ಗಲಿಬಿಲಿಯಾಗು ಎಂಬರ್ಥಗಳನ್ನು ಪಡೆದುಕೊಂಡಿರುವುದನ್ನು ಗಮನಿಸಬಹುದು. ಗೊಂದಲ (ನಾ) ಗಲಾಟೆ, ಗದ್ದಲ, ಗೊಂದಳ ಗುಂಪು ಹಿಂಡು, ಮೊತ್ತ, ಗೊಂದಲ ಒಂದು ಬಗೆಯ ಕುಣಿತ ಮೇಳನೃತ್ಯ ಎಂಬರ್ಥವನ್ನು ಕನ್ನಡ – ಕನ್ನಡ ನಿಘಂಟಿನಲ್ಲಿ ನೋಡಬಹುದು.

ಗೊಂದಣ – ಗೊಂದಲ  – ಗೊಂದ- ಗೋಂದೋಲು – ಮಾತುಮಾತು ಬಾಯಿಂದ ಬಾಯಿಗೆ ಬಂದ ಪದದ ಸ್ವರೂಪವಿದು. ಇದು ವೃತ್ತಾಕಾರವಾಗಿ ತಿರುಗುತ್ತಾ, ಕುಣಿಯುತ್ತಾ, ನರ್ತಿಸುತ್ತಾ, ಶಕ್ತಿ ರೂಪಣಿಯ ಆರಾಧಿಸುವ ಪ್ರಕಾರ, ಜೊತೆಗೂಡಿ ಭೈರವನ ಪೂಜೆಗಾಗಿ ಹುಟ್ಟಿ ಬಂದಿರುವ ಆರಾಧನೆಯೇ ಗೋಂದೋಲು ಪೂಜೆಯಾಗಿದೆ. ಇದು ಮರಾಠಿ ನಾಯ್ಕ ಗಿರಿಜನರ ಸಂಸ್ಕೃತಿ ಪರಂಪರೆಯಲ್ಲಿ ಇರುವ ಅತಿ ಮುಖ್ಯವಾದ ಪ್ರಧಾನ ವಿಧಿಯಾಗಿದೆ ಎಂದು ಹೇಳಬಹುದು.

ಗೋಂದಲಿಗರ ಮೇಳ ಎಂಬುದು ಉತ್ತರ ಕರ್ನಾಟಕದಲ್ಲಿ ಚಲಾವಣೆಯಲ್ಲಿರುವ ಒಂದು ಪೂಜಾಕಾರ್ಯ. ’ಹಿನ್ನೆಲೆಯ ವಾದ್ಯಗಳ ಮೂಲಕ ದೊಡ್ಡ ಧ್ವನಿಯಲ್ಲಿ ಕಥೆಯನ್ನು ಹೇಳುವುದರ ಮೂಲಕ ಗೊಂದಲವೆಬ್ಬಿಸುವುದರಿಂದ ಈ ಹೆಸರು ಬಂದಿರಬಹುದು. ಕೆಲವೆಡೆ ಗೊಂದಲ ಪೂಜೆ ಎಂದು ಕರೆಯುತ್ತಾರೆ. ೧೦ ಇದು ಆರಾಧನೆಯ ಆಚರಣೆಯ ವಿಧಿ ವಿಧಾನಗಳ್ಲಿ ಹಾಡು ಮತ್ತು ಕುಣಿತಗಳ ಸಮ್ಮಿಳನವನ್ನು ಕಾಣಬಹುದು.

ದಕ್ಷಿಣ ಕನ್ನಡ ಜಿಲ್ಲೆಗೆ ಈ ಮರಾಠಿ ನಾಯ್ಕರು ಬಂದದ್ದು ಮಹಾರಾಷ್ಟ್ರದಿಂದಲೇ. ಮೂಲತಃ ಇಲ್ಲಿನವರಾಗಿದ್ದರೂ, ಎಷ್ಟೋ ತಲೆ ಮಾರುಗಳಿಂದ ಮಹಾರಾಷ್ಟ್ರದಲ್ಲಿ ನೆಲಸಿ ಅಲ್ಲಿನ ಸಾಂಸ್ಕೃತಿಕರಣಗೊಂಡ ಇವರು ಬಂದದ್ದು ಶಿವಾಜಿಯ ಅಪ್ಪಣೆಯಂತೆ ಗೂಢಚರ್ಯೆಗಾಗಿ ಬಂದ ಗೂಢಚಾರರ ಗುಂಪಿದು ಎನ್ನಬಹುದು. ತಮ್ಮ ನಾಯಕನ ಪರವಾಗಿ ಹಾಗೂ ಶತ್ರುಗಳ ಅರ್ಥವಾಗದಂತೆ ನಿಗೂಢವಾಗಿ ಯಾರಿಗೆ ಸಂದೇಶ ತಲುಪಬೇಕೋ ಅದನ್ನು ತಲುಪಿಸುವ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದು ಈ ಗೊಂದಲದ ವಿನ್ಯಾಸವನ್ನು ಎಂದು ಹೇಳಬಹುದು.

ಇದರಲ್ಲಿನ ಪುನರುಕ್ತಿಯ ಪಲ್ಲವಿ, ಅನುಪಲ್ಲವಿಯನ್ನು ಪಂಚಮ ಸ್ಥಾನದಲ್ಲಿ ಉಚ್ಚರಿಸುತ್ತಾ ಜನಸಂದಣಿ ಇರುವಲ್ಲಿ ಅವರ ಗದ್ದಲವನ್ನು ಮೀರಿಸಿ ಧ್ವನಿಯನ್ನು ಏರಿಸಿ ಆಕರ್ಷಣೆಗಾಗಿ ವೃತ್ತಾಕಾರದ ಕುಣಿತವನ್ನು ಸೇರಿಸಿಕೊಂಡ ಈ ಕಲಾ ಪ್ರಕಾರ ಕ್ರಮೇಣ ಪರಂಪರೆಯಾಗಿ ಮುಂದೆ ಸಂಪ್ರದಾಯವಾಗಿ ಬೆಳೆದು ಬಂದಿರಬಹುದೆಂದು ಊಹಿಸಬಹುದಾಗಿದೆ. ಇದನ್ನೇ ಚೆನ್ನಬಸಪ್ಪನವರು ’ಗೂಡ ಚರ್ಯೆಗಾಗಿ ಬಂದವರೆಂದೂ; ಗೊಂದಲ ಹಾಡುವ ಕಲೆಯನ್ನು ಇವರು ಗೂಢಚರ್ಯೆಗೆ  ಚೆನ್ನಾಗಿ ಬಳಸಿಕೊಂಡರೆಂದು’ ಹೇಳಿದ್ದಾರೆ. ಅಲ್ಲದೆ ಗೂಢಚರ್ಯೆಯ ಕಾರ್ಯ ಮುಗಿದ ನಂತರವೂ ಕಾರಣಾಂತರಗಳಿಂದ ಕೆಲವರಾದರು ಇಲ್ಲೇ ಉಳಿಯುವಂತಾಯಿತೆಂದು ಹೇಳಿದ್ದಾರೆ. ಇವರ ಈ ಅಭಿಪ್ರಾಯ ಸಮಂಜಸವಾದುದಾಗಿದೆ.

ಇಲ್ಲೇ ನೆಲೆಯೂರಲು ಕಾರಣವಾದ ಅಂಶಗಳನ್ನು ಹೀಗೆಂದು ಊಹಿಸಬಹುದಾಗಿದೆ. ಗೂಢಚರ್ಯೆ ಕೇವಲ ಒಂದೆರಡು ದಿನಗಳಲ್ಲಿ ಮುಗಿಯುವಂಥದಲ್ಲ. ಆದ್ದರಿಂದ ಆ ಗೂಢಚಾರರು ತಮ್ಮ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿರಬೇಕು. ಅಥವಾ ಜೊತೆಯಲ್ಲಿಯೇ ಕರೆತಂದಿರಬೇಕು ಅಥವಾ ಇಲ್ಲಿನ ಹೆಣ್ಣುಗಳನ್ನು ವಿವಾಹವಾಗಿರಬೇಕು. ಇವುಗಳಲ್ಲಿ ಯಾವುದೇ ಕಾರಣವಿರಲಿ, ಮುಖ್ಯವಾಗಿ ರಾಜಕೀಯ ಸ್ಥಿತ್ಯಂತರಗಳು… ಇಲ್ಲಿದ್ದ ಬದುಕಿನ ಪ್ರಶಾಂತ ವಾತಾವರಣ ಇವರಿಗೆ ಬದುಕಲು ಮಾರ್ಗ ತೋರಿಸಿದ್ದಿರಬೇಕು. ಇವರಲ್ಲಿ ಕೆಲವರು ಬದುಕಿಗಾಗಿ ಕುಮ್ರಿ ಬೇಸಾಯವನ್ನು ಅನುಷ್ಠಾನಕ್ಕೆ ತಂದಂತೆ, ಕೆಲವರು ಗೊಂದಲದ ಹಾಡು ಕುಣಿತವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಇದು ಮುಂದೆ ಗೊಂದಲಿಗರ ವೃತ್ತಿಪರ ಮೇಳವಾಗಿ ಪರಿಣಮಿಸಿರಬಹುದು.

ಕುಮ್ರಿ ಬೇಸಾಯಗಾರರು ಇದನ್ನು ಧಾರ್ಮಿಕ ವಿಧಿಯನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದಂತೆ ಇದನ್ನು ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ವಿಶೇಷ ಸ್ಥಾನಮಾನಗಳು ದೊರೆಯುವಂತಾದವು. ಮಹಾರಾಷ್ಟ್ರದಲ್ಲಿ ಈ ಪೂಜೆ ಜನಪದ ಕಲೆಯಾದರೆ; ಉತ್ತರ ಕನ್ನಡ ಜಿಲ್ಲೆಯಲ್ಲಿ ವೃತ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಸ್ವರೂಪದಲ್ಲಿ ಅಸ್ಥಿತ್ವ ಪಡೆದಿದೆ. ಇಲ್ಲಿ ಪೂಜೆ ಸಲ್ಲಿಸಿಕೊಳ್ಳುವ ದೇವತೆ ಅಂಬಾ ಭವಾನಿ. ಕೆಲವೆಡೆ ರೇಣುಕಾದೇವಿಗೆ ಪೂಜೆ ಸಲ್ಲುತ್ತದೆ.  ಕೊನೆಗೆ ಈ ವಿಧಿಯಲ್ಲಿ ಭೈರವ ಪೂಜೆ ನಡೆಯುತ್ತದೆ.

ಮರಾಠಿ ನಾಯ್ಕರು ಹರಿಕೆಯ ಹೆಸರಿನಲ್ಲಿ ಈ ಗೋಂದೋಳೂ ಪೂಜೆಯನ್ನು ಮಾಡಿಸುತ್ತಾರೆ. ಸಾಮಾನ್ಯವಾಗಿ ವಿವಾಹದ ಸಂದರ್ಭದಲ್ಲಿ, ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಇಲ್ಲವೇ ಮನೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಅಂದರೆ ತಮ್ಮ ಮನೆತನದ ಕುಲಧರ್ಮಪಾಲನೆಗಾಗಿ ಈ ಪೂಜೆಯನ್ನು ಮಾಡಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂಜೆ ಮಾಡುವವರು ಪುರುಷರು ಈ ಪೂಜೆಯನ್ನು ಮಂಗಳವಾರ, ಶುಕ್ರವಾರ, ಆದಿತ್ಯವಾರಗಳಂದು ಮಾಡುತ್ತಾರೆ. ಕನ್ನಡದಲ್ಲಿ ಗೊಂದಳ / ಮರಾಠಿಯಲ್ಲಿ ಗೋಂಧಳ್ ಎಂದು ಕರೆಸಿಕೊಳ್ಳುವ ಈ ಪೂಜೆ ಮಾಹಾಮ್ಮಾಯಿ, ತುಳಜಾ ಭವಾನಿ, ಅಂಭಾ ಭವಾನಿ, ದೇವಿ ದುರ್ಗೆ, ದುರ್ಗಾ ಪರಮೇಶ್ವರಿ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ತಾಯಿಗೆ ಪೂಜೆ ಸಲ್ಲುತ್ತದೆ. ಈ ಪೂಜೆಯ ವಿಧಿ ವಿಧಾನದಲ್ಲಿ ಸಂಗೀತ, ನೃತ್ಯ,ದರ್ಶನ, ದೀವಟಿಗೆ ಬಲಿ ಸೇವೆಗಳು ಇರುತ್ತವೆ.

ಗೋಂಧೋಳ್ ಪೂಜೆಯ ದಿನದಂದು ಮುಖ್ಯ ದರ್ಶನದ ಪಾತ್ರಿ ಮತ್ತು ಆತನ ಸಹಾಯಕರು ಪೂಜೆಗೆ ಬೇಕಾಗುವ ಪರಿಕರಗಳೊಂದಿಗೆ ಬರುತ್ತಾರೆ. ಜೊತೆಗೆ ಗುರೂಪದೇಶ ಗುರುಮಾರಿಕೆ ಪಡೆದ ಸ್ತ್ರೀ ಪುರುಷರು ಬರುತ್ತಾರೆ. ಆಗ ಕುಟುಂಬದ ಹಿರಿಯ ಮಹಿಳೆ ’ಪೂಜಾ ಜ್ಯೋತಿ’ ಬೆಳಗುತ್ತಾಳೆ. ಎಲ್ಲಾ ಪೂಜಾರಿಗಳು ಯಜಮಾನನಿಂದ  ಎಣ್ಣೆ ಬೂಳ್ಯವನ್ನು ತೆಗೆದುಕೊಂಡು ಮನೆಯಾಕೆ ಇಟ್ಟ ಪೂಜಾ ಜ್ಯೋತಿ/ ದೀಪಕ್ಕೆ ಮೂರು ಬಾರಿ ತೆಂಗಿನ ಎಣ್ಣೆ ಹಾಕಿ ಎಲ್ಲರಿಗೂ ಪರಸ್ಪರ ನಮಸ್ಕರಿಸುತ್ತಾರೆ. ಆಮೇಲೆ ಎಣ್ಣೆಯ ಬೆರಳನ್ನು ನೆಲಕ್ಕೆ ಮುಟ್ಟಿಸುತ್ತಾರೆ. ಈ ಕ್ರಿಯೆ ಮನೆಯಲ್ಲಿ ಗತಿಸಿದವರಿಗೆ ತೋರಿಸುವ ಗೌರವವೆಂದು ತಿಳಿಸಿದ್ದಾರೆ. ಈ ಕ್ರಿಯೆಗೆ ಮರಾಠಿಯುಲ್ಲಿ  ’ಪಾಯದ್ ’ ಎನ್ನುತ್ತಾರೆ.

ಪೂಜಾರಿಗಳ ಮುಖ್ಯಸ್ಥನಿಗೆ ’ಪರಶುರಾಮ’ ಎನ್ನುವರು. ಈತ ಬಲಿ ಕೊಡುವ ಕೋಳಿ ಮತ್ತು ಹಂದಿಗೆ ತೀರ್ಥ ಸಿಂಪಡಿಸಿ ಹೂ-ಕುಂಕುಮ- ಗಂಧ ಇಡುತ್ತಾನೆ. ಇದಾದ ಮೇಲೆ ಮಧ್ಯಾಹ್ನದ ಊಟದ ಕಾರ್ಯಕ್ರಮ.ನಂತರ ಮತ್ತೊಮ್ಮೆ ಸ್ನಾನ ಮಾಡಿ ತುಳಸಿ ಕಟ್ಟೆಯ ಬಳಿ ಇಟ್ಟಿರುವ ಪುಣ್ಯ ತೀರ್ಥದಿಂದ ಶುದ್ಧರಾಗುತ್ತಾರೆ. ಶುದ್ಧಿ ಕಾರ್ಯ ಮುಗಿಯುತ್ತಾ ಬಂದಂತೆ, ಬದ್ದುಗೆ ಅಲಂಕಾರ ಮಾಡಲು ಆರಂಭ. ಈ ಗದ್ದುಗೆಯ ಅಲಂಕಾರಕ್ಕಾಗಿ ತುಳಸಿ, ಕಿಸ್ಕರ ಕೇಪ್ಲು, ಹಿಂಗಾರ, ಸೇವಂತಿಗೆ, ಮಲ್ಲಿಗೆ ಹೀಗೆ ಪಂಚ ಹೂಗಳನ್ನು ಬಳಸುತ್ತಾರೆ. ಪಂಚ ದೀವಿಗೆಯನ್ನು ಇಡುತ್ತಾರೆ. ಹಾಗೆಯೇ ಮಣ್ಣಿನ ಕಳಸಕ್ಕೆ ಅಲಂಕಾರ. ಇದಕ್ಕೆ ಮರಾಠಿ ಭಾಷೆಯಲ್ಲಿ ’ಗೇಟ್’ಎಂದು ಕರೆಯುತ್ತಾರೆ. ಇದರ ಅಲಂಕಾರ ಮುಗಿಯುವ ಹೊತ್ತಿಗೆ ಸಂಜೆಯಾಗುತ್ತದೆ.

ಗದ್ದುಗೆಯ ಅಲಂಕಾರ ಮುಗಿಸಿ ಸಂಜೆಗೆ ಭೈರವ ಪೂಜೆಗೆ ಸಿದ್ಧತೆಗಳು ಆರಂಭವಾಗುತ್ತದೆ. ಐದು ಕೊಂಡೆ ಅಕ್ಕಿಯಿಂದ ಅನ್ನ ಮಾಡುತ್ತಾರೆ. ಐದು ಕೊಂಡೆ ಅಕ್ಕಿರೊಟ್ಟಿ ತಯಾರಾಗುತ್ತದೆ. ಹುರುಳಿ ಮತ್ತು ಮೀನಿನ ಸಾರು ಸಿದ್ಧವಾಗುತ್ತದೆ. ಇದರೊಂದಿಗೆ ಶೇಂದಿ, ಕರಾಬು, ಕೋಳಿಗಳನ್ನು ನೇವೇದ್ಯಕ್ಕಾಗಿ ತೆಗೆದಿರಿಸಿಕೊಳ್ಳುತ್ತಾರೆ. ಜೊತೆಗೆ ತೆಂಗು, ವೀಳ್ಯ, ಅಡಿಕೆ, ತುಳಸಿ, ಕೇಪುಳ ಈ ಮಂಗಳ ದ್ರವ್ಯಗಳೊಂದಿಗೆ ದೀಪ, ಕೋಲ್ತಿರಿಗಳನ್ನು ತೆಗೆದುಕೊಂಡು ಬನಕ್ಕೆ ಹೋಗಿ ಭೈರವನ ಕಲ್ಲಿಗೆ ಪೂಜೆ ಮಾಡಿ ಬರುತ್ತಾರೆ.

ಮಂಡಲದಲ್ಲಿ ಸೂರ್ಯ, ಚಂದ್ರ, ನಾಗ, ನಕ್ಷತ್ರ, ಅರಳಿ ಎಲೆ, ಕಾಮಧೇನು, ಡಮರುಗ, ತ್ರಿಶೂಲ, ಭೈರವಮೂರ್ತಿ, ಗಣಪತಿ, ಸ್ವಸ್ತಿಕ, ಕಳಶ ಇವೆಲ್ಲವನ್ನು ಇಡುತ್ತಾರೆ. ಇದಾದ ನಂತರ ಮಹಾಮಾಯಿಯನ್ನು ಗದ್ದುಗೆಗೇರಿಸುತ್ತಾರೆ. ತಾಯಿಯನ್ನು ಗದ್ದುಗೆ ಏರಿಸಿದ ನಂತರ ದೇವಿಗೆ ಶಕ್ತಿ ತುಂಬುವ ವಿಧಿ ನಡೆಯುತ್ತದೆ. ಇದನ್ನು ನೆರವೇರಿಸುವವಳು ಮನೆಯ ಯಜಮಾನಿ. ಈಕೆ ದೇವರ ಮುಂದೆ ತನ್ನ ಎರಡೂ ಕೈಗಳನ್ನು ಇಡುತ್ತಾಳೆ. ಆಗ ’ಪರಶುರಾಮ’ ಯಜಮಾನಿಯ ಕೈಯನ್ನು ತುಳಸಿ ಮತ್ತು ಸಿಂಗಾರಗಳಿಂದ ಸ್ಪರ್ಶಿಸಿ ಅವುಗಳನ್ನು ದೇವಿಯ ಮುಂದೆ ಅರ್ಪಿಸುತ್ತಾನೆ. ಈ ಆಚರಣೆಗೆ ’ಶಕ್ತಿ ನೀಡುವ ಕ್ರಿಯೆ’ ಎನ್ನುವರು. ನಂತರ ನಂದಾ ದೀಪ ಹಚ್ಚುವ ಮತ್ತು ಪೂಜಾ ಕಾರ್ಯ  ಆರಂಭವಾಗುತ್ತದೆ. ಆಗ ದೇವಿಯನ್ನು ಸ್ತುತಿಸುತ್ತಾರೆ.

’ಪಾಂಚು ಜನೀ ನಾರ್ಯೋತಿ ದೀವೇ ಲೋವೇ
ಪಾಂಚು ಜನೀ ನಾರ್ಯೋತಿ ಅಕ್ಷತ ಗಾಳೀಲೋ
ಪಾಂಚು ಜನೀ ನಾರ್ಯೋತಿ ದಂಡತ್ತ ಮಾರೇಲೋ ೧೧

ನಂತರ ರಾತ್ರಿ ಎಂಟು  ಗಂಟೆಯ ಹೊತ್ತಿಗೆ ’ಈಸ್ ದೇವ್ ಪೂಜೆ’ ನಡೆಯುತ್ತದೆ. ದೇವಿ ಅಡ್ಡಲಾಗಿ ಪರದೆ ಹಿಡಿದು ಬಲಿ ಕೊಡುವ ಪ್ರಾಣಿಗಳಿಗೆ ಊಟ ಕೊಡುತ್ತಾರೆ. ನಂತರ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಹೀಗೆ ಬಲಿ ಕೊಡುವ ಸಂದರ್ಭದಲ್ಲಿ

’ತೋಪೇಲ ಯೋಪೇಲ ದಂತಪೇಲ ಬಾರ್ ಪಂತ್ ಪೇಲ
ತೋನಾತ್ ಯೋನಾತ್ ಗೋರೋಕ್ ನಾರ್ಥ
ತೋನಾತ್ ಯೋನಾತ್ ವಿಶ್ವನಾಥ
ಬಾರ ಪಂಥ್ ದೇಸಾದೇಸ್ ಗುರ್ಪುರತ್ತ ರಾಜಕಾರ್ಯ ಮಂತಾಯ ಮಂತಾಯ್
ತೋದೇವ ಯೋದೇವ ಮಜಗುರು ಮಂಜುನಾಥ್’

 

ಕನ್ನಡದಲ್ಲಿ

’ಅವನು ಕುಡಿದ, ಇವನು ಕುಡಿದ, ಹನ್ನೆರಡು ಸಲ ಕುಡಿದ
ಅವನು ಒಡೆಯ, ಇವನು ಒಡೆಯ, ಗೋರಕನಾಥ
ಅವನು ನಾಥ, ಇವನು ನಾಥ, ಅವನೇ ವಿಶ್ವನಾಥ
ದೇಶ ದೇಶ ಗುರುಪುರದ ರಾಜ ಎನ್ನುತ್ತಾರೆ

ಅವನು ದೇವ, ಇವನು ದೇವ, ನನ್ನ ಗುರು ಮಂಜುನಾಥ         ೧೨

ಈ ಬಲಿಕಾರ್ಯಕ್ಕೆ ಹಂದಿಗಳು ಮುಖ್ಯವಾಗಿ ಬೇಕು. ಆಕಸ್ಮಿಕ ಹಂದಿಗಳು ಸಿಗದಿದ್ದರೆ ಎರಡು ಗಂಡು ಕೋಳಿ /ಹುಂಜ ಒಂದು ಹೆಣ್ಣು ಕೋಳಿ ಹೆಂಟೆಯನ್ನು ಬಲಿ ಕೊಡಲು ಉಪಯೋಗಿಸುತ್ತಾರೆ.

ಗೊಂದೋಳು ಪೂಜಾ ಕಾರ್ಯ ನಡೆಯುತ್ತಿರುವಂತೆ ದೇವಿ ಸ್ತುತಿಗಳನ್ನು ಭಜನೆ ರೂಪದಲ್ಲಿ ಸಾಮೂಹಿಕವಾಗಿ ಎಲ್ಲರೂ ಹಾಡುತ್ತಾರೆ. ಈ ಭಜನೆಯು ಮುಗಿಯುತ್ತಾ ಬಂದಂತೆ ಗೋಂದೋಳೂ ಕುಣಿತ ಆರಂಭವಾಗುತ್ತದೆ. ಧಾರ್ಮಿಕ ವಿಧಿಯ ದೃಷ್ಟಿಯಿಂದ ನೋಡಿದಾಗ ’ಪರಶುರಾಮ’ ನಿಗೆ ದರ್ಶನ ಬರುತ್ತದೆ. ಅಲ್ಲಿ ನೆರೆದಿರುವವರೆಲ್ಲರೂ ತಮ್ಮ ಕಷ್ಟ – ಸುಖಗಳ ಪ್ರಶ್ನೋತ್ತರ ಕಾರ್ಯಕ್ರಮ ನಡೆಯುತ್ತದೆ. ದರ್ಶನದಿ ಬಂದ ಪರಶುರಾಮ ಅದಕ್ಕೆ ಉತ್ತರಿಸುತ್ತಾ ಪರಿಹಾರ ಹೇಳುತ್ತಾನೆ. ಇತರರ ಕೈಯಲ್ಲಿದ್ದ ದೀವಟಿಗೆಯನ್ನು ತಾನು ತೆಗೆದುಕೊಂಡು ನರ್ತಿಸುತ್ತಾನೆ / ಕುಣಿಯುತ್ತಾನೆ. ಇದು ’ದೊಂದಿಸೇವೆ’ ಎನ್ನಿಸಿಕೊಂಡಿದೆ. ಇದಕ್ಕೆ ಮೊದಲು ’ಹಿಂಗಾರ’ ವನ್ನು ಕೈಯಲ್ಲಿ ಹಿಡಿದುಕೊಂಡು ಕುಣಿಯುತ್ತಾನೆ. ಇದಕ್ಕೆ ’ಹಿಂಗಾರ ಸೇವೆ’  ಎನ್ನುತ್ತಾರೆ. ಆಮೇಲೆ ಉರಿಯುವ ಬುತ್ತಿಯನ್ನು ಬಾಯಿಯೊಳಗೆ ಇಟ್ಟುಕೊಳ್ಳುತ್ತಾನೆ. ಇದನ್ನು ’ಬತ್ತಿಸೇವೆ ’ ಎನ್ನುತ್ತಾರೆ. ಈ ಕ್ರಿಯೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಭೂತಾರಾಧನೆಯ / ಕೋಲದಲ್ಲಿನ ಪ್ರಭಾವೀಕರಣ ಎನ್ನಿಸುತ್ತದೆ. ಆಮೇಲೆ ದೊಂದಿಯನ್ನು ಬಾಳೆಯ ಎಲೆಯ ಮೇಲಿಟ್ಟು ನಂದಿಸುತ್ತಾರೆ. ನಂತರ ಎಲ್ಲರೂ ಗದ್ದುಗೆಗೆ ವಂದಿಸುತ್ತಾರೆ. ಈ ಎಲ್ಲಾ ಆಚರಣೆಗಳು ಮುಗಿಯುವಷ್ಟರಲ್ಲಿ ಬೆಳಗಿನ ಜಾವ ನಾಲ್ಕು ಗಂಟೆಯ ಸಮಯವಾಗಿರುತ್ತದೆ.

ಇಲ್ಲಿ ಕಂಡು ಬರುವ ಜನಪದೀಯ ಗೀತ -ಕುಣಿತ – ವಾದ್ಯ-ಮೇಳ ಬಹು ವಿಶಿಷ್ಟವಾದದ್ದು. ಈ ಮೇಳದಲ್ಲಿ ಸಾಮಾನ್ಯವಾಗಿ ಮೂವ್ವರು ಇರುತ್ತಾರೆ. ಇದರಲ್ಲಿನ ನಾಯಕನನ್ನು ’ಪರಶುರಾಮ’ ಎನ್ನುವರು. ಉಳಿದ ಇಬ್ಬರು ಸಂಬಾಳ ಮತ್ತು ಶೃತಿಯನ್ನು ಹಿಡಿದು ನುಡಿಸಲು ಸಿದ್ಧರಾಗುತ್ತಾರೆ. ’ಸಂಬಾಳ’- ಇದನ್ನು ಮರ ಅಥವಾ ಲೋಹದಿಂದ ಮಾಡಿದ ದೊಡ್ಡ ಬಾಯಿಯುಳ್ಳ ಎರಡೂ ಕಡೆಗೆ ಚರ್ಮವನ್ನು ಹೊದಿಸಿ ಮಾಡಿದ ವಾದ್ಯವಾಗಿದೆ. ಇದರ ನಡುವೆ ತಾಳವನ್ನು ಅದರಲ್ಲೂ ಕಂಚಿನ ತಾಳವನ್ನು ಜೋಡಿಸಿರುತ್ತಾರೆ. ಬಾಗಿದ ಬಿದಿರಿನ ಕಡ್ಡಿಗಳಿಂದ ಎರಡೂ ಕಡೆ ಬಾರಿಸಿದಾಗ ಶಬ್ದ ಮತ್ತು ತಾಳ ಎರಡೂ ಮಿಳಿತವಾಗಿ ಆಕರ್ಷಣೀಯವಾದ ನಾದವು ಹೊಮ್ಮುತ್ತದೆ.

ಸಂಬಾಳಕ್ಕೆ ಜೊತೆಗೂಡಿಸಿದ ಮತ್ತೊಂದು ವಾದ್ಯ ಶೃತಿ. ಇದಕ್ಕೆ ತುಂತುಣಿ, ತಂತಿಣಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಇದಕ್ಕೆ ’ಚೌಡಿಕೆ’ ಎನ್ನುತ್ತಾರೆ. ಸುಮಾರು ಒಂದು ಅಡಿ ಎತ್ತರ/ಉದ್ದವಿರುತ್ತದೆ. ಒಂದು ಅಡಿ ವ್ಯಾಸ ಇರುವ ಮರದ ತುಂಡನ್ನು ತೆಗೆದುಕೊಂಡು, ಅದರಲ್ಲಿರುವ ತಿರುಳನ್ನು ತೆಗೆದು; ಅದರ ಒಂದು ಕಡೆ ಹದಮಾಡಿದ ಚರ್ಮವನ್ನು ಹೊದಿಸುತ್ತಾರೆ. ಆ ಚರ್ಮದ ಮಧ್ಯಭಾಗದಲ್ಲಿ ಒಂದು ರಂಧ್ರ ತೆಗೆದು ಈ ರಂಧ್ರದ ಹೊರಗಡೆ ಲೋಹದ ಸಣ್ಣ ತಗಡಿನ ಚೂರನ್ನು ಸೇರಿಸಿರುತ್ತಾರೆ. ಈ ಮರದ ಕೊಳವೆಯ ಒಂದು ಮೈಗೆ ಸುಮಾರು ಮೂರು ಅಡಿ ಉದ್ದದ ಬಿದಿರು ಕೋಲನ್ನು ಜೋಡಿಸಿ ಅದರ ತುದಿಗೆ ಒಂದು ಬಂಡೆಯನ್ನು ಕೂಡಿಸಿರುತ್ತಾರೆ. ನಾದವನ್ನು ಹೊಮ್ಮಿಸುವ ತಂತಿಯನ್ನು ಚರ್ಮ ಹೊದಿಸಿದ ಹೊರ ಮೈಗೆ ರಂಧ್ರದ ಮೂಲಕ ಹೊರಗಳೆದು ಚಿಕ್ಕ ಕಡ್ಡಿಗೆ ಕಟ್ಟಿ ಅದರ ಮತ್ತೊಂದು ತುದಿಯನ್ನು ಬಿದಿರಿನ ಕೊನೆಯಲ್ಲಿರುವ ಬಿರಡೆಗೆ ಬಿಗಿಯಾಗಿ ಎಳೆದು ಸುತ್ತಿರುತ್ತಾರೆ. ಈ ಬಿರಡೆಯನ್ನು ತಿರುಗಿಸಿದರೆ ತಂತಿಯನ್ನು ಸಡಿಲ ಅಥವಾ ಬಿಡಿ ಮಾಡಿ ತಮಗೆ ಬೇಕಾದ ಶೃತಿಯನ್ನು ಇಟ್ಟುಕೊಳ್ಳಬಹುದಾಗಿದೆ.

ಈ ಗೊಂದಲ ಮೇಳವನ್ನು ಸಾಮಾನ್ಯವಾಗಿ ಯುಗಾದಿ, ನವರಾತ್ರಿ, ಜಾತ್ರೆ, ಸುಗ್ಗಿ ಮುಂತಾದ ಸಂದರ್ಭದಲ್ಲಿ ಆಡಿಸುತ್ತಾರೆ. ಕೆಲವೆಡೆ ಮದುವೆ, ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಹರಕೆಯ ಪ್ರಯುಕ್ತ ಗೊಂದಲದ ಕಥೆಯನ್ನು ಹೇಳಿಸುವ ರೂಢಿಯಿದೆ. ಇದರಿಂದ ಎಲ್ಲರಿಗೂ ಶುಭಪ್ರದವಾಗುವುದೆಂಬ ಆಶಯವಿದೆ. ಕಲಾವಿದರಿಗಂತೂ ಇದರಿಂದ ಶುಭವಾಗಿ ಆದಾಯ ತರುತ್ತದೆ. ಇದು ವೃತ್ತಿಯಾಗಿರುವುದರಿಂದ ಈ ಕಲಾವಿದರು ತಮ್ಮ ಸಂಸಾರವನ್ನು ಕಟ್ಟಿಕೊಂಡು ಊರೂರು ಸುತ್ತುತ್ತಿರುತ್ತಾರೆ. ಒಂದೊಂದು ಊರಿನಲ್ಲಿ ಎಂಟು/ ಹತ್ತು ಕಥೆಗಳನ್ನು ನಡೆಸಿಕೊಡುತ್ತಾರೆ. ಓನಿಗೊಂದೊಂದು ಕಥೆ ಹೇಳುತ್ತಾರೆ.

ಇವರ ವೇಷಭೂಷಣಗಳೆಂದರೆ, ತಲೆಗೆ ಕೆಂಪು ಬಿಳಿಯ ಬಣ್ಣದ ರುಮಾಲು, ಧೋತರ, ನಿಲುವಂಗಿ, ಅದರ ಮೇಲೆ ಕೋಟು, ಕೊರಳಿಗೆ ಕವಡೆ, ಕಾಲಿಗೆ ಗೆಜ್ಜೆ. ಕೆಲವರು ಕೊರಳ ಸುತ್ತ ಶಲ್ಯ ಹಾಕಿಕೊಂಡಿರುತ್ತಾರೆ. ಇದು ಗೌರವದ ಸಂಕೇತವು ಹೌದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ’ದಡಿಯ ಧೋತರ’ ಎಂದ ಹೆಸರಿದೆ. ಈ ವೇಷಭೂಷಣಗಳನ್ನು ಧರಿಸಿದೆ ದೇವಿಯ ಮುಂದೆ ಕುಣಿಯಬಾರದೆಂಬ ನಿಯಮ ಇವರಲ್ಲಿರುವುದನ್ನು ಗಮನಿಸಬಹುದು.

ಗೋಂದೋಳದವರ ಗೀತ, ನೃತ್ಯ, ವಾದ್ಯ ಮೇಳಕ್ಕೆ ಚಿಕ್ಕ ಅಂಗಳ ಸಾಕಾಗುತ್ತದೆ. ಮನೆಯ ಮುಂದಿನ ಅಂಗಳವನ್ನು ಸಾರಿಸಿ ರಂಗೋಲಿ ಹಾಕಿ ಚಪ್ಪರ ಹಾಕುತ್ತಾರೆ. ಚಪ್ಪರಕ್ಕೆ ಬಾಳೆಕಂಬ, ತಳಿರು ತೋರಣ ಕಟ್ಟಿ, ಹೂಗಳಿಂದ ಅಲಂಕಾರ ಮಾಡಿರುತ್ತಾರೆ. ಒಂದೆಡೆಯಲ್ಲಿ ಅಂಬಾ ಭವಾನಿಯ ಕಳಶವನ್ನು ಪ್ರತಿಷ್ಠಾಪಿಸಿ ಪೂಜೆ ಆರತಿ ಬಲಿ ನೈವೇದ್ಯ ಮಾಡುತ್ತಾರೆ. ಈ ಕಥೆ ಮುಗಿಯುವವರೆಗೆ ದೇವಿಯ ಮುಂದಿರುವ ನಂದಾದೀಪ ಉರಿಯುತ್ತಿರುವಂತೆ ಮನೆಯಾಕೆ ನೋಡಿಕೊಳ್ಳುತ್ತಿರುತ್ತಾರೆ. ಚಪ್ಪರದ ಮಧ್ಯೆ ಪರಶುರಾಮ /ಮುಖ್ಯ ಗೊಂದಲಿ ನಿಲ್ಲುತ್ತಾನೆ. ಉಳಿದವರು ಎಡ ಬಲದಲ್ಲಿ ನಿಲ್ಲುತ್ತಾರೆ. ಕೆಲವೆಡೆ ನಾಲ್ಕು ಜನರಿದ್ದು ಅವರ ದೊಡ್ಡ ತಾಳವನ್ನು ಹಿಡಿದು ನಿಲ್ಲುತ್ತಾರೆ.

ಶೃತಿಯನ್ನು ನುಡಿಸುವುದರ / ಸರಿ ಪಡಿಸುವುದರ ಮೂಲಕ ಪ್ರದರ್ಶನ ಆರಂಭವಾಗುತ್ತದೆ. ನಾಯಕ ಗಣಪತಿಯನ್ನು ಆರಂಭದಲ್ಲಿ ಸ್ತುತಿಸುತ್ತಾನೆ. ಇವನ ಸ್ವರ ಮತ್ತು ತಾಳಕ್ಕೆ ಅನುಗುಣವಾಗಿ ’ಸಂಬಾಳ’ವು ಜೊತೆಗೂಡುತ್ತದೆ. ಮುಖ್ಯಸ್ಥ ಹಾಡುವಾಗ ಶೃತಿ ಚರಣದ ಕೊನೆಗೆ ಸಂಬಾಳದವರು ಮತ್ತು ಶೃತಿಯನ್ನು ಹಿಡಿದಿರುವವನು ಪಲ್ಲವಿಯನ್ನು ರಾಗವಾಗಿ ಎಳೆದೆಳೆದು ಆಲಾಪನೆ ಮಾಡುತ್ತಾ ಹಾಡುತ್ತಾನೆ. ನಂತರ ದೇವಿಯನ್ನು ಸ್ತುತಿಸುತ್ತಾರೆ. ’ಮಾಯಾ ಜನನಿ ಅಂಬಾ ಜಗದಂಬಿ/ ಮಾಯಾ ಜಗದಂಬಿ / ವರವ ನೀಡು ತಾಯಿ ಪ್ರಾರ್ಥನೆ ಮುಗಿದ ಕೂಡಲೇ ಮೇಳದವರು ತಮ್ಮಲಿರುವ ಕತೆಗಳ ಪಟ್ಟಿಯನ್ನು ನೆರೆದವರ /  ಪ್ರೇಕ್ಷಕರ ಮುಂದಿಡುತ್ತಾರೆ. ಅವರುಗಳು ಆಯ್ಕೆ ಮಾಡಿದ ಕಥೆಯನ್ನು ಮೇಳದವರು…. ಹಾಡು ವಾದ್ಯ ಕುಣಿತ ಅಭಿನಯಗಳ ಮೂಲಕ ಮಾಡಿ ತೋರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ :

೧. ಎಲ್ಲಮ್ಮನ ಕಥೆ

೨. ಸೋಮಶೇಖರ ರಾಜನ ಕಥೆ

೩. ಭೋಜರಾಜನ ಕಥೆ

೪. ಗುಣಸಾಗರಿಯ ಕಥೆ

೫. ಜಯರಾಣಿಯ ಕಥೆ

೬. ಬಳಾವತಿ ಕಥೆ

೭. ಶಿವಶಂಖರನ ಕಥೆ

೮. ನಳ/ ನೀಳರ ಕಥೆ

೯. ಚೂಡಾಮಣಿ ಕಥೆ

೧೦. ಬಂಗಾರದ ಗಿರಿಭಾವನ ಕಥೆ

೧೧. ಚಂದ್ರ ಚೂಡಾಮಣಿಯ ಕಥೆ

೧೨. ಬಸವಕುಮಾರನ ಕಥೆ

೧೩. ಏಳು ಕೊಳ್ಳದ ರಾಕ್ಷಸನ ಕಥೆ

೧೪. ಲೌತಕುಮಾರನ ಕಥೆ

೧೫. ಲಕ್ಷಾಪತಿಯ ಕಥೆ

೧೬. ಬಲವಂತ – ಬಸವಂತನ ಕಥೆ

೧೭. ಪಾಮಡು ದತ್ತಾಜಿ

೧೮. ಶ್ರವಣ ಕುಮಾರನ ಕಥೆ

೧೯. ರಾಜ ಹರಿಶ್ಚಂದ್ರನ ಕಥೆ

೨೦. ದಶರಾಜನ ಶಾಪದ ಕಥೆ

೨೧. ಸಿರಿಯಾಳದ ಕಥೆ

೨೨. ಸತಿ ಅನುಸೂಯಳ ಕಥೆ

೨೩. ಅರಣ್ಯ ಕುಮಾರನ ಕಥೆ

೨೪. ಶಂಕಿನಿ ಕುಮಾರನ ಕಥೆ

– ಹಾಡಿನ ಮೂಲಕ ಕಥೆಗಳನ್ನು ರಾಗವಾಗಿ ಹಾಡುತ್ತಾ ಮಧ್ಯೆದಲ್ಲಿ ಕತಾ ಸಾರವನ್ನು ಸ್ವಾರಸ್ಯವಾಗಿ ವರ್ಣಿಸುತ್ತಾ ಸಾಗುವ ಈ ಮೇಳ ಗಾನ – ಹರಿಕಥೆಗೆ ತಕ್ಕ ನರ್ತನ ಮಾಡುತ್ತಿರುತ್ತದೆ. ಕಥೆಯ ನಿರೂಪಣೆ ಮಾಡುವಾಗ ಒಬ್ಬ ರಾಜನಾಗುತ್ತಾನೆ. ಮತ್ತೊಬ್ಬ ಮಂತ್ರಿಯಾಗುತ್ತಾನೆ. ಹೀಗೆ ಅವರವರಲ್ಲೇ ಪಾತ್ರಗಳ ಹಂಚಿಕೆಯಾಗಿ ನಾಟಕರಂಗವೇ ಅವತರಿಸಿ ಬಿಡುತ್ತದೆ. ಕಥೆ, ಸಂಭಾಷಣೆ, ಭಾವಾಭಿನಯ, ನರ್ತನ, ಹಾಡು, ಪಕ್ಕವಾದ್ಯ, ಲಲಿತ ಕಲೆಗಳ ಸಂಗಮವೇ ಆಗಿಬಿಡುತ್ತದೆ. ಇದರೊಂದಿಗೆ ಉಪಕಥೆಗಳು ಸೇರಿರುತ್ತವೆ.

ಗೊಂದಲಿಗರ ಕಥಾ ನಿರೂಪಣಾ ವೈಖರಿಯೆಂದರೆ ನಾಯಕ ’ಕುದುರೀನ ಏರ‍್ಯಾನ’ ಎಂದು ರಾಗವಾಗಿ ಹಾಡಿದರೇ ಎರಡನೆಯವನು ಆ ರಾಗವನ್ನು ಮುಂದುವರಿಸಿ ’ಹರ ನನ್ನ ಮಹಾದೇವ’ ಎನ್ನುತ್ತಾನೆ. ಮೂರನೆಯವನು ಅದಕ್ಕೆ ತನ್ನ ನರ್ತನವನ್ನು ಸೇರಿಸಿ ಕುಣಿಯುತ್ತಾ ಅದಕ್ಕೆ ತಕ್ಕಂತೆ ಭಾವಾಭಿನಯವನ್ನು ಮಾಡುತ್ತಾನೆ. ಇದು ಹೀಗೆ ಮುಂದುವರೆಯುತ್ತದೆ. ಉದಾಹರಣೆಗಾಗಿ..

’ ಚಪ್ಪರಿಸಿ ಬಿಟ್ಟಾನ… ಹರನನ್ನ ಮಹಾದೇವ
ಒಂದ ಗಾವುದ ಮ್ಯಾಲ…ಹರ ನನ್ನ ಮಹಾದೇವ
ಒಂದೆಂಬ ಪಟ್ಟಣ.. ಹರ ನನ್ನ ಮಹಾದೇವ
ಎರಡು ಗಾವುದ ಮ್ಯಾಲ.. ಹರ ನನ್ನ ಮಹಾದೇವ
ಎರಡೆಂಬ ಪಟ್ಟಣ.. ಹರ ನನ್ನ ಮಹಾದೇವ
ಕುದರೀಯ ಹಾರೈತಿ – ಹರ ನನ್ನ ಮಹಾದೇವ
ಗಗನಕ್ಕೆ ಎಗರತೈತಿ… ಹರ ನನ್ನ ಮಹಾದೇವ
ಕಲ್ಲಿನ ಕೋಟೆ ಕಟ್ಟಿದಳಂತೆ ತಾಯೇ.- ನಾಯಕ ಹೇಳುತ್ತಾನೆ.
ಕಲ್ಲಿನ ಕೋಟೆ ಮುರಿದಾಳಂತೇ….. ಮೂರನೆಯವರು ಹಾಡುತ್ತಾನೆ.
ಲಾಗೆಲೋ ಪನಿ ಲಾಗೆಲಾಲೋ… ನರ್ತಕ ಕುಣಿಯುತ್ತಾನೆ.
ಭಕ್ತಿ ಗೋಂದೋಳು ಗಾ ಮಾಯೆ ಶಕ್ತಿ ಗೋಂದೋಳು ಗಾ
ನಾಚ್ ಗೋಂದೋಳುಗಾ ಮಾಯೆ ಕೇಳ್ ಗೋಂದೋಳು ಗಾ
ಎಲ್ಲಾ ಹೂಗಳಲ್ಲಿ… ಕಬ್ಬಿನ ಸಿಹಿಯಲ್ಲು ಇರುವ ಮಾಯೆ
ಲಾಗೆಲೋ ಪಾನಿ ಲಾಗೆಲಾಳೊ

ತಾಯಿಯ ಎಲ್ಲ ಹೆಸರುಗಳನ್ನು ಹೇಳುತ್ತಾ…
ಭಕ್ತಾಂಸ್ ರಕ್ಷಣೆ ಕೇರ್ ಮಾಯೆ ಮಹಾಮಾಯೇ
ವಿದ್ಯೆ ಬುದ್ಧಿ ಸಾಕ್ಯದೀಗೆ ಮಾಯೆ ಮಹಾಮಾಯಿ
ಸುಖ ಸಂಪತ್ ದೀಗೆ ಮಾಯೆ ಮಹಾಮಾಯೆ
ಲಾಗೆಲೋ ಪಾನಿ ಲಾಗೇಲಾಳೋ…

ಹೀಗೆ ಕಥೆ ಸರಳವಾಗಿ, ಭಾವನಾ ಪೂರ್ಣವಾಗಿ ಮುಂದೆ ಮುಂದಕ್ಕೆ ಸಾಗುತ್ತದೆ. ಇನಿದಾದ ಸ್ವರಪೂರಿತ ಹಾಡು, ಗೆಜ್ಜೆಯ ಸದ್ದು, ವಾದ್ಯಗಳ ಹಿಮ್ಮೇಳ ಇವು ಶೋತೃಗಳನ್ನು ಸೆರೆ ಹಿಡಿದಿಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಗೊಂದಲಿಗರು ಹೇಳುವ ಪೌರಾಣಿಕ, ಐತಿಹಾಸಿಕ ಕಥೆಗಳಲ್ಲಿ ಸಾಹಿತ್ಯದ ಅಪೂರ್ವ ನಿಧಿಯೇ ಅಡಗಿದೆ. ಇದರಲ್ಲಿ ಕಥನ ಕವನಗಳು, ಲಾವಣಿಗಳು, ತತ್ವಪದಗಳು, ಶಾಸ್ತ್ರದ ಪದಗಳು, ಸ್ತ್ರೋತ್ರಗಳ ಜೊತೆಗೆ ಸಾಮಾಜಿಕ ಕಥೆಗಳು ಹೀಗೆ ಹಾಡುಗಳ ಭಂಡಾರವೇ ಅಂತರ್ಗತವಾಗಿದೆ ಎನ್ನಬಹುದು.

ಈ ಗೊಂದಲಿಗರ ಮೇಳ ಇಡೀ ರಾತ್ರಿ ನಡೆಯುತ್ತದೆ. ಬೆಳಗಿನ ಜಾವಕ್ಕೆ ಇವರ ಹಾಡು, ಕಥೆ, ನಾಯ, ವಾದ್ಯದ ಝೇಂಕಾರಕ್ಕೆ ಅಂತಿಮ ತೆರೆ ಬೀಳುತ್ತದೆ. ನಂತರ ದೇವಿಗೆ ದೇವಿಯ ಸ್ವರೂಪದ ಕಳಸಕ್ಕೆ ಕಾಯಿ ಒಂದು ಕರ್ಪೂರದಾರತಿ ಬೆಳಗಿ ಮಂಗಳ ಹಾಡುತ್ತಾರೆ. ಈ ಕಥೆಯನ್ನು ಹೇಳಲು ಕರೆಯಿತ್ತ ಯಜಮಾನ / ಯಜಮಾನಿಗೆ ಗೊಂದಲದ ಪರಶುರಾಮ ಅವರಿಬ್ಬರ ಹೆಸರನ್ನು ಉಚ್ಛ ಸ್ವರದಲ್ಲಿ ಹೇಳಿ ’ಅಂಬಾದೇವಿ’ ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಕೆ ಹಾಡನ್ನು ಹಾಡುತ್ತಾನೆ. ಇದಾದ ಮೇಲೆ ಕಥಾ ಪ್ರಸಂಗವನ್ನು ನೋಡಲು / ಕೇಳಲು ನೆರೆದ ಸಮಸ್ತರಿಗೂ ಶುಭಕೋರಿ ಮತ್ತು ಎಲ್ಲರೂ ವಿನಯ ಪೂರ್ವಕವಾಗಿ ವಂದಿಸಿ ಪ್ರಸಂಗವನ್ನು ಕೊನೆಗೊಳಿಸುತ್ತಾರೆ.

ಈ ಗೋಂದೋಳೂ ಪೂಜೆಯ ಹಿನ್ನೆಲೆಯಲ್ಲಿ ಗಮನಿಸಬೇಕಾದದ್ದು… ದೇವಿಯ ಆರಾಧನೆ. ಆದರೆ ಪೂಜಿಸಲ್ಪಡುವವಳು ಹೆಣ್ಣು. ಪುರಾಣ ಕಾಲದಿಂದಲೂ ಜಗತ್ತಿನ ದುಷ್ಟರ ದಮನ ಪುರುಷನಿಗೆ ಅಸಾಧ್ಯವಾದಾಗ ಆ ಶಕ್ತಿಗಳನ್ನು ದಮನ ಮಾಡುವ ಮತ್ತು ಎಲ್ಲವನ್ನು ರಕ್ಷಿಸುವ ಹೊಣೆಗಾರಿಕೆ ಹೆಣ್ಣಿನದು. ಆಗ ಪುರುಷನ ಸ್ಥಾನ ಗೌಣವಾಗುತ್ತದೆ. ಬಿಡಿ ಬಿಡಿಯಾಗಿ ಚದುರಿ ಹೋಗಿರುವ ಎಲ್ಲಾ ಶಕ್ತಿಗಳ ಕೇಂದ್ರೀಕರಣ ಹೆಣ್ಣಿನ ದೇಹ / ಮನಸ್ಸುಗಳಲ್ಲಿ. ಅಂಥ ದೇವಿಯ ಆರಾಧನೆ ನವ ಶಕ್ತಿಗಳ ಎರಕವಾದ ಈ ದೇವಿ ಮನುಜನ ಜೀವಿತದಲ್ಲಿ ಸದಾ ಕಾಲ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವವಳು ಹೆಣ್ಣೆ. ಈ ಆರಾಧನೆಯ ಸಮಯದಲ್ಲಿ ದೇವಿಯ ಮುಂದೆ ಇಟ್ಟ ನಂದಾದೀಪ ನಂದದಂತೆ ಪ್ರಜ್ವಲಿಸುತ್ತಿರುವಂತೆ ನೋಡಿಕೊಳ್ಳುವ ಹೊಣೆ ಹೆಣ್ಣಿನದು. ಇದು ಬದುಕಿನ ಚಕ್ರಗತಿ ತಪ್ಪದಂತೆ / ಆರದಂತೆ  ನೋಡಿಕೊಳ್ಳುವುದರ ಸಂಕೇತವು ಹೌದು. ಹೊರ ನೋಟಕ್ಕೆ ಎಲ್ಲಾ  ಕ್ರಿಯೆಗಳಲ್ಲಿ ಪುರುಷನೇ ಪ್ರಧಾನ ಹೆಣ್ಣು ಎಲ್ಲೋ ಮರೆಯಾಗಿ ಬಿಟ್ಟಿದ್ದಾಳೆ ಎಂಬ ಭ್ರಮೆ ಮೂಡುತ್ತದೆ. ಆದರೆ ಈ ಎಲ್ಲಾ  ಕ್ರಿಯೆಗಳ ಅಡಿಗಲ್ಲೂ ಹೆಣ್ಣು ನಂತರ ದೇವಿಗೆ ಶಕ್ತಿ ತುಂಬುವ ವಿಧಿಗಾಗಿ ಮನೆಯಾಕೆ ದೇವಿಯ ಮುಂದೆ ತನ್ನ ಎರಡೂ ಕೈಗಳನ್ನು ಇಡುವ ಆಚರಣೆ. ಆ ಕೈಗಳನ್ನು ’ಪರಶುರಾಮ’ ತುಳಸಿ ಮತ್ತು ಹಿಂಗಾರಗಳಿಂದ ಸ್ಪರ್ಶಿಸಿ ಅವುಗಳನ್ನು ದೇವಿಯ ಮುಂದೆ ಸಮರ್ಪಿಸುವ ಮತ್ತು ಈ ತುಳಸಿ ಮತ್ತು ಹಿಂಗಾರಗಳ ಅವುಗಳ ಮೂಲಕ ಮನೆಯಾಕೆಗೆ ಶಕ್ತಿ ತುಂಬುವ ಈ ಶಕ್ತಿ ಕ್ರಿಯೆಯ ಹಿಂದೆ ಇರುವ ಆಶಯ ಪುರುಷನ ಅಸ್ತಿತ್ವವನ್ನೇ ಅಲ್ಲಾಡಿಸಿ ಬಿಡುತ್ತದೆ. ಇದರ ಅಂಗವಾಗಿಯೇ ಬರುವ ಭೈರವನ ಪೂಜಾ ವಿಧಿಯನ್ನು ಗಮನಿಸಬಹುದು. ಏಕೆಂದರೆ ಪುರುಷನಾದ ಭೈರವ ನಿನ್ನ ಪೂಜೆಯ ದಿನ ತನಗೂ ಪೂಜೆಸಲ್ಲುವಂತಾಗಲಿ ಎಂಬ ಬೇಡಿಕೆ ಇದನ್ನು ಗಮನಿಸಿದಾಗ ಹೆಣ್ಣು ಎಲ್ಲೂ ಮರೆಯಾಗಿಲ್ಲ; ಸೂಕ್ಷ್ಮಾಣು ಸೂಕ್ಷ್ಮ ಸ್ಥಿತಿಯಲ್ಲಿ ಹೆಣ್ಣು ಪ್ರಕಟಗೊಳ್ಳುವ ವೇದಿಕೆಯಾಗಿ ಗೊಂದೋಳು / ಭೈರವ ಪೂಜೆ ಪರಿಣಮಿಸಿದೆಯೆಂದು ಹೇಳಬಹುದು. ಈ ಸಂದರ್ಭದಲ್ಲಿ ಇಹ / ಪರಗಳಲ್ಲಿ ಹೆಣ್ಣು ಮರೆಯಾಗಿದ್ದರೆ ಈ ಎರಡೂ ಆಚರಣೆಗಳು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಜೊತೆಗೆ ತಮ್ಮ ಅರ್ಥ ಪರಂಪರೆಯನ್ನು ಸಾರಾಸಗಟಾಗಿ ಕಳೆದುಕೊಳ್ಳುತ್ತಿದ್ದವು ಎಂದು ಹೇಳಬಹುದು.

ಗೊಂದೋಳು ಪೂಜೆಯ ಸಂದರ್ಭದಲ್ಲಿ ’ಪರಶುರಾಮ’ ನಿಗೆ ’ದರ್ಶನ’ ಬರುವುದು ದೇವಿಯ ಅಂಶವೇ. ಈ ಹೆಣ್ಣಿನ ಮುಂದೆ ಪುರುಷ ವರ್ಗದ ಬದುಕಿನ ಸರಿ ತಪ್ಪುಗಳ ವಿಮರ್ಶೆ ನಂತರ ಅದಕ್ಕೆ ಪರಿಹಾರ. ದೇವಿ ಸಹಬಾಳ್ವೆಯ ಮಹತ್ವವನ್ನು ಸೂಚಿಸುತ್ತಾಳೆ.

ಈ ಪೂಜೆಯ ಕಾರ್ಯದಲ್ಲಿ ಹಂದಿಯನ್ನು ಬಲಿ ಕೊಡುವ ಕ್ರಿಯೆ ನಡೆಯುತ್ತದೆ. ಆಮೇಲೆ ಅದರ ತಲೆಯ ಮೇಲೆ ದೀಪವನ್ನು ಹತ್ತಿಸಿ ದೇವಿಯ ಮುಂದೆ ಇಡುತ್ತಾರೆ. ಇದನ್ನು ಗಮನಿಸಿದಾಗ ಅದಿಮ ಸ್ಥಿತಿಯಲ್ಲಿ ಬೆಳೆಗಳನ್ನು ನಾಶ ಮಾಡುತ್ತಿದ್ದ ಕಾಡು ಮೃಗಗಳ ಬೇಟೆ ಮತ್ತು ಅದರ ವಿಜಯೋತ್ಸವದ ಸಂಕೇತವಿರಬಹುದು ಅನಿಸುತ್ತದೆ.

ಹೀಗೆ ಯಾವ ನೆಲೆಯಿಂದ ನೋಡಿದರೂ ಗೋಂದೋಳು ಆಚರಣೆಯ ಹಿಂದೆ ಹೆಣ್ಣಿನ ಬಹುರೂಪದ ದರ್ಶನವಾಗುತ್ತದೆ. ಹಾಗೆಯೇ ಜನಪದ ಸಾಂಸ್ಕೃತಿಕ /ಧಾರ್ಮಿಕ/ ಹಬ್ಬಹರಿದಿನಗಳ ರಂಗಭೂಮಿಯು ಹೌದೆಂದು ಹೇಳಬಹುದು.

ಮರಾಠಿಗ ಜನಾಂಗದಲ್ಲಿ ಕಂಡು ಬರುವ ಮತ್ತೊಂದು ಜನಪದ ಉತ್ಸವ / ಆಚರಣೆ ’ಬಾಳ್ ಸಾಂತು’ ಉತ್ಸವ. ಇದನ್ನು ಕುಂಭಮಾಸ ಮಾಯಿ ಹುಣ್ಣಿಮೆಯ ದಿನ ಆಚರಿಸುತ್ತಾರೆ.

ಬೇಸಾಯ ಮಾಡಿ ಫಸಲನ್ನು ಮನೆಗೆ ತಂದ ಮೇಲೆ ರೈತಾಪಿ ವರ್ಗಕ್ಕೆ ಬಿಡುವಿನ ಕಾಲ. ಈ ಕಾಲದಲ್ಲಿ ಮರಾಠಿ ಸಮುದಾಯದವರು ’ಬಾಳ್ ಸಾಂತು’ ಹಬ್ಬ / ಕುಣಿತ  / ಉತ್ಸವವನ್ನು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ.

ಈ ಆಚರಣೆಯ ಹಿಂದೆ ಮತ್ತೆ ಪ್ರತೀಕವಾಗಿ ನಿಲ್ಲುವವಳು ಒಬ್ಬ ಹೆಣ್ಣು ಮಗಳು. ಬಾಳಮ್ಮ ಎಂಬ ಅನಾಥ ಭಿಕ್ಷುಕಿಯೊಬ್ಬಳ ಕಥೆ. ಒಂದು ದಿನ ಈಕೆಯ ಕನಸಿನಲ್ಲಿ ಶ್ರೀ ಶಾರದಾಂಬೆ ದೇವಿ ಬಂದು ಶೃಂಗೇರಿಯ ಜಗದ್ಗುರುಗಳನ್ನು ಭೇಟಿ ಮಾಡಲು ಹೇಳಿದಳಂತೆ! ಅದರಂತೆ ಬಾಳಮ್ಮ ಗುರುಗಳನ್ನು ಭೇಟಿ ಮಾಡಿದಳಂತೆ ! ಗುರುಗಳು ಬಾಳಮ್ಮನಿಗೆ ಘಟ್ಟ ಹತ್ತಿ ಹೋಗಿ ನಿನಗೆ ಬೇಕಾದ ಹುಡುಗನನ್ನು ಮದುವೆಯಾಗು ನಿನಗೆ ಒಳ್ಳೆಯದಾಗುತ್ತದೆ. ಆಯುಷ್ಯ, ಆರೋಗ್ಯ, ಸುಖ ಸಂಪತ್ತು ಕೈವಶವಾಗುತ್ತದೆ. ಆದರೆ ನೀನು ಪ್ರತಿ ಮಾಯಿ ಹುಣ್ಣಿಮೆಯ ದಿನ ಬಂದು ನನ್ನ ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಹರಸಿ ಜೊತೆಗೆ ಮುಂದಿನ ಕರ್ತವ್ಯದ ಬಗ್ಗೆಯೂ ಸೂಚನೆ ಕೊಟ್ಟು ಕಳಿಸಿದರಂತೆ.

ಗುರುಗಳ ಆಣತಿಯಂತೆಯೇ ಘಟ್ಟ ಹತ್ತಿ ಬಂದು ತಾನು ಮೆಚ್ಚಿದ ಹುಡುಗನನ್ನು ಮುವೆಯಾದಳು. ಗುರುಗಳ ಶುಭ ಹಾರೈಕೆಯಂತೆಯೇ ಸಕಲ ಸುಖ-ಭೋಗಗಳನ್ನು ಅನುಭವಿಸಿದಳು. ಆ ಹೊತ್ತಿಗೆ ಕುಂಭ ಮಾಸ ಆರಂಭಾಗಿ ಮಾಯಿ ಹುಣ್ಣಿಮೆ ಹತ್ತಿರ ಬಂದಿತು. ಆದರೆ ಬಾಳಮ್ಮನಿಗೆ ತನ್ನ ಸುಖದ ಬದುಕಿನಲ್ಲಿ ಗುರುಗಳು ಹೇಳಿದ ಎಚ್ಚರಿಕೆಯ ಮಾತು ಮರತೇ ಹೋಯಿತು.  ಇದನ್ನು ನೆನಪು ಮಾಡಲು ಗುರುಗಳು ಇಬ್ಬರು ಸಂನ್ಯಾಸಿಗಳನ್ನು ಕಳಿಸುತ್ತಾರೆ. ಈ ಸಂನ್ಯಾಸಿಗಳು ಬಾಳಮ್ಮನ ಮನೆಗೆ ಬಂದು ನಾವು ಶೃಂಗೇರಿಯಿಂದ ಬಂದಿದ್ದೇವೆ. ಭಿಕ್ಷೆ ಕೊಡಿ ಎಂದರು. ಆದರೆ ಬಾಳಮ್ಮ ಅವರಿಬ್ಬರನ್ನು ತನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡು ಬಿಡುತ್ತಾಳೆ. ಕಳುಹಿಸಿದ ಸಂನ್ಯಾಸಿಗಳು ಮರಳಿ ಬಾರದೇ ಹೋದಾಗ ಗುರುಗಳು ಮತ್ತೆ ’ಕೊರಗಕೊರಪ್ಪೋಳು’ ಹೊಲೆಯ ಜನಾಂಗದ ಕಳಿಸುತ್ತಾರೆ. ಆದರೆ ಅವರು ಕೂಡಾ ಬಾಳಮ್ಮನ ಮನೆಯಲ್ಲಿ ಕೆಲಸದಾಳುಗಳಾಗಿ ಬಿಟ್ಟರು. ನಂತರ ಪೂಜೆ ಮಾಡುವ ಪುರೋಹಿತ, ಮಂಗಕುಣಿಸುವವನು, ಪಾತ್ರಿ, ಓಲೆಗಾರ, ಮುಂತಾದವರನ್ನು ಕಳಿಸುತ್ತಾರೆ. ಎಲ್ಲರೂ ಇಲ್ಲಿ ಕೆಲಸದವರಾಗಿ ಬಿಡುತ್ತಾರೆ.

ಈ ಘಟನೆಗಳಿಂದ ಕೋಪಗೊಂಡ ಗುರುಗಳು ತಾವು ಕಳುಹಿಸಿದ ಎಲ್ಲಾ ವೇಷವನ್ನು ಏಕ ಕಾಲಕ್ಕೆ ಧರಿಸಿ ಬಾಳಮ್ಮನ ಮನೆಗೆ ಬಂದಾಗ ಈಕೆಗೆ ಎಲ್ಲವೂ ನೆನಪಿಗೆ ಬರುತ್ತದೆ. ಮರೆತು ಮಾಡಿದ ತಪ್ಪಿಗಾಗಿ ಅವಳನ್ನು ಗುರುಗಳು ’ಮಾಯ’ ಮಾಡಲು ಸಿದ್ಧರಾದಾಗ ಬಾಳಮ್ಮ ಬೇಡಿಕೊಂಡಳು. ಆಗ ಗುರುಗಳು ನೀನು ಇನ್ನು ಮುಂದೆ ’ಬಾಳ್ ಸಾಂತು’ ಎಂಬ ಮಾಯಾವಿಯಾಗಿರು. ನಾನು ಯಾವ ಯಾವ ರೀತಿ ವೇಷಗಳನ್ನು  ಧರಿಸಿಕೊಂಡು ಬಂದೆನೋ ಅದೇ ರೀತಿಯ ವೇಷಗಳನ್ನು ಹಾಕಿ. ಈ ತಿಂಗಳಲ್ಲಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವ ಸಂಪ್ರದಾಯ ಉಳಿಸಿಕೊಂಡು ಬಂದರೆ ಊರಿನಲ್ಲಿ ಕಂಡು ಬರುವ ಪೈಶಾಚಿಕ ಶಕ್ತಿಗಳ ತೊಂದರೆ ದೂರವಾಗುತ್ತದೆ ಎಂದು ಉಃಶಾಪವನ್ನು ಹೇಳಿ ಬಾಳಮ್ಮನನ್ನು ಮಾಯ ಮಾಡಿದರು.  ಶೃಂಗೇರಿ ಗುರುಗಳ ಶಾಪ ಉಃಶಾಪದ ನೆನಪಗಾಗಿ ಮರಾಠಿಗರು ಮಾಯಿ ತಿಂಗಳಿನ ಚತುರ್ಥಿಯಿಂದ ಆರಂಭಿಸಿ ಹುಣ್ಣಿಮೆಯವರೆಗೂ ಈ ’ಬಾಳ್ ಸಾಂತು’ ಹಬ್ಬವನ್ನು ಆಚರಿಸುತ್ತಾರೆ.

ಈ ವಿಶಿಷ್ಟ ಆಚರಣೆಯಲ್ಲಿ ಹಾಕುವ ವೇಷಗಳು ಒಣಗಿದ ಬಾಳೆ ಎಲೆಗಳಿಂದ ದೇಹವನ್ನು ಅಲಂಕರಿಸಿಕೊಂಡು ಮನೆ ಮನೆ ತಿರುಗುವ ವೇಷ. ಇದಕ್ಕೆ ’ಚಾಂಬಾರ‍್ದಮರ’ ಎನ್ನುವರು. ಈ ವೇಷ ಬಾಳಮ್ಮನ ಮನೆಗೆ ಗುರುಗಳು ಕಳುಹಿಸಿದ ಸಂನ್ಯಾಸಿಗಳ ಸಂಕೇತವಾಗಿದೆ. ನಂತರ ದೇವರನ್ನು ಹೊರುವವರು, ಪೂಜೆ ಮಾಡುವ ಪೂಜಾರಿ, ಭೂತದ ಮಾಣಿ, ಕೊರಗ ವೇಷಧಾರಿಗಳಿಬ್ಬರು ಕೊರಗ ಮತ್ತು ಕೊರಪ್ಪೋಳು, ಓಲೆ ಓದುವವನು, ಮಂಗ ಮತ್ತು ಮಂಗವಾಡಿಸುವವನು. ಇದಿಷ್ಟು ಈ ಉತ್ಸವದ ಸಂದರ್ಭದಲ್ಲಿ ಬರುವ ವೇಷಧಾರಿಗಳು.

ಈ ವೇಷಧಾರಿಗಳೆಲ್ಲರು ಚತುರ್ಥಿ ದಿನದ ನಾಲ್ಕು ದಿನಗಳ ಮೊದಲೇ ಒಂದು ಕಲ್ಲನ್ನು ನಿಗದಿತ ಪ್ರದೇಶದಲ್ಲಿ ಇಡುತ್ತಾರೆ. ಇವೆಲ್ಲ ದೇವಿ ಶಾರದಾಂಬೆಯನ್ನು ಸ್ತುತಿಸುತ್ತಾರೆ. ಮತ್ತೆ ದೇವಿಗೆ ಪ್ರದಕ್ಷಿಣೆ ಹಾಕಿ ’ಬಾಲ್ ಬಾಳ್ಯ ಸಾಂತು…’ ಎಂದು ಹಾಡುತ್ತಾ ಕುಣಿಯುತ್ತಾರೆ.

“ಶೃಂಗೇರಿಚೆ ಶಿಷ್ಯರೇ ಅಮಿ ಬಾಲ್ ಬಾಳ್ಯ ಬಾಳ್ ಸಾಂತು
ಶೃಂಗೇರಿಚೆ ಗೋಡೆರೇ ಅಮಿ ಬಾಲ್ ಬಾಳ್ಯ  ಬಾಳ್ ಸಾಂತು
ಪುಟ್ಟ ಪುರುಷ ಜೋಗಿರೆ ಅಮಿ ಬಾಲ್ ಬಾಳ್ಯ ಬಾಳ್ ಸಾಂತು
ನಾರೆಲೀಚೆ ಕೊಂಕೆರೇ ಅಮಿ ಬಾಲ್ ಬಾಳಿಯ ಬಾಳ್ ಸಾಂತು
ಘಟ ಓರ‍್ಚೆ ಘಟ್ಟರೆಏ ಅಮಿ ಬಾಲ್ ಬಾಳ್ಯ ಬಾಳ್ ಸಾಂತು’೧೩

ಹೀಗೆ ಹಾಡುತ್ತಾ ಮನೆ ಮನೆಗೆ ಹೋಗುತ್ತಾರೆ. ಮೊದಲು ಸಂನ್ಯಾಶಿ ವೇಷಧಾರಿ ಯಾವುದಾದರೊಂದು ಮನೆಯ ಮುಂದೆ ಹೋಗಿ ಮನೆಯ ಯಜಮಾನಿಯನ್ನು ಕರೆಯುತ್ತಲೇ ಮೆಟ್ಟಿಲು / ಜಗುಲಿಯ ಮೇಲೆ ಕುಳಿತು ರಾಗವಾಗಿ ಹಾಡಲು ಆರಂಭಿಸುತ್ತಾನೆ.

’ತರುತಾರ ಅಮ್ಮ ತರುತಾರೆ… ಅಟ್ಟದಿಂದ ತೆಂಗಿನಕಾಯಿ ತರುತ್ತಾರೆ
ತರುತಾರೆ ಅಮ್ಮ ತರುತಾರೆ… ಅಟ್ಟದಿಂದ ಬತ್ತ, ಅಕ್ಕಿ ತರುತ್ತಾರೆ
ತರುತಾರೆ ಅಮ್ಮ ತರುತಾರೆ… ಅಟ್ಟದಿಂದ ಬೆಲ್ಲ, ಸಕ್ಕರೆ ತರುತ್ತಾರೆ

– ಹೀಗೆ ಊಟಕ್ಕೆ ಬೇಕಾಗುವ / ಜೊತೆಗೆ ವಿಶೇಷವಾದ ಪದಾರ್ಥಗಳ ಹೆಸರನ್ನು ಹೇಳುತ್ತಾ ಹಾಡಿನ ರೂಪದಲ್ಲಿ ಉಲ್ಲೇಖಿಸುತ್ತಾ ಹೋಗುತ್ತಾನೆ. ಇದಾದ ಮೇಲೆ ಶಾರದಾಂಬೆಯ ಪ್ರಭಾವಳಿಯನ್ನು ತುಳಸಿ ಕಟ್ಟೆಯ ಹತ್ತಿರ ಇಟ್ಟು ಪೂಜೆಯನ್ನು ಮಾಡುವವನು ಪೂಜಾರಿ ವೇಷಧಾರಿ. ಪೂಜೆ ಮಾಡಿ ಮಂಗಳಾರತಿ ಬೆಳಗಿ ಅಲ್ಲಿ ನೆರೆದಿರುವವರಿಗೆಲ್ಲ ಪ್ರಸಾದ ವಿನಿಯೋಗ ನಡೆಯುತ್ತದೆ. ಆಗ ಭೂತ ವೇಷಧಾರಿಗೆ ದರ್ಶನ ಬರುತ್ತದೆ. ಯಥಾಪ್ರಕಾರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯುತ್ತದೆ. ಇದಾದ ಕೂಡಲೇ ಕೊರಗ ಕುಣಿತ ಮಂಗ / ಕುಣಿಸುವವನಿಂದ ಹಾಸ್ಯ ಕಾರ್ಯಕ್ರಮ. ಓಲೆ ಓದುವ ವೇಷಧಾರಿಯಿಂದ ಓಲೆ ಓದುವ ಅಣಕು ಪ್ರಹಸನ. ಇವೆಲ್ಲವು ಅಲ್ಲಿ ನೆರೆದಿರುವವರನ್ನೆಲ್ಲಾ ರಂಜಿಸುತ್ತದೆಂದು ಹೇಳಬಹುದು. ಒಟ್ಟಿನಲ್ಲಿ ನವರಸಗಳ ರಸಪಾಕ. ಮನೆಯವರು ಅವರವರ ಶಕ್ತ್ಯಾನುಸಾರ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಅಡಿಕೆ, ಹಣ ಮುಂತಾದವುಗಳನ್ನು ಕೊಡುತ್ತಾರೆ.

ಈ ವೇಷಧಾರಿಗಳೆಲ್ಲರೂ ಹೀಗೆ ಸಂಗ್ರಹವಾದ ಎಲ್ಲವನ್ನು ಒಂದು ಕಡೆರ ಕೂಡಿಸಿಡುತ್ತಾರೆ. ಆಮೇಲೆ ತಾವು ಪ್ರತಿಷ್ಠಾಪಿಸಿದ ಕಲ್ಲಿಗೆ ಪೂಜೆ ಮಾಡಿದ ಮೇಲೆ ಅವರವರ ವೇಷ ತೆಗೆದು ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ಈ ರೀತಿ ಸುಮಾರು ಏಳು ದಿನ, ಒಂಭತ್ತು ದಿನ, ಹನ್ನೊಂದು ದಿನಗಳ ಕಾಲ ಈ ಕಾರ್ಯಕ್ರಮ ಆಚರಣೆಯನ್ನು ನಡೆಸುತ್ತಾರೆ. ಪ್ರತಿ ದಿನವು ಈ ಕೆಲಸ ಸುಮಾರು ಮಧ್ಯರಾತ್ರಿಯವರೆಗೂ ನಡೆಯುತ್ತದೆ.

ಮಾಯಿ ಹುಣ್ಣಿಮೆ ದಿನ ಸಂಗ್ರಹಿಸಿದ ಎಲ್ಲಾ ದವಸ ಧಾನ್ಯವನ್ನು ದೇವಕಲ್ಲಿನ ಮುಂದೆ ಇಟ್ಟು ಸಿದ್ಧಮಾಡುವ ಹೊತ್ತಿಗೆ ಊರಿನ ಪ್ರತಿಯೊಂದು ಮನೆಯಿಂದ ಆಯಾಯ ಮನೆಯ ತಾಯಂದಿರು ಬರುತ್ತಾರೆ. ಇಲ್ಲಿ ಸಂಗ್ರಹವಾದ ಅಕ್ಕಿಯಿಂದ ಹುಡಿಮಾಡಿ ರೊಟ್ಟಿಗಳನ್ನು ಮಾಡುತ್ತಾರೆ. ಈ ರೊಟ್ಟಿಗಳ ಸಂಖ್ಯೆ ೩೦೦೦ನ್ನು ದಾಟುವುದಿದೆ. ಈ ರೊಟ್ಟಿಗೆ ಒಲ್ಕಾರು ಮೀನು ಮತ್ತು ಹುರಳಿ ಸಾರು ಮಾಡುತ್ತಾರೆ. ನಲವತ್ತೆಂಟು ಎಲೆಗಳಲ್ಲಿ ರೊಟ್ಟಿ ಸಾರು ನೇವೈದ್ಯ ಮಾಡುತ್ತಾರೆ. ಇದನ್ನು ’ಅಗೆಲು’ ಎನ್ನುವರು. ಒಂದು ಎಡೆಯ ಮುಂದೆ ತೆಂಗಿನ ಗರಿಗೆ ಬಟ್ಟೆ ಸುತ್ತಿ ದೀವಿಗೆ ಮಾಡುತ್ತಾರೆ. ಇದಕ್ಕೆ ವೇಷ ಹಾಕಿದ ಎಲ್ಲರೂ ಪ್ರದಕ್ಷಿಣೆ ಹಾಕುತ್ತಾರೆ. ಪೂಜಾರಿ ಪೂಜೆ ಮಾಡುತ್ತಾರೆ. ಇಲ್ಲಿ ಪೂಜಿಸಿ ಕಲ್ಲನ್ನು ಊರ ಹೊರಗಿನ ಕಾಸರ ಮರದ ಬುಡದಲ್ಲಿಟ್ಟು ಮತ್ತೆ ಪೂಜಿಸುತ್ತಾರೆ. ಇದಾದ ಮೇಲೆ ವೇಷಧಾರಿಗಳೆಲ್ಲರೂ ಅಲ್ಲಿಯೇ ತಮ್ಮ ತಮ್ಮ ವೇಷಗಳನ್ನು ಕಳಚಿ ಹಾಕುತ್ತಾರೆ. ಆಮೇಲೆ ತೆಂಗಿನ ಗರಿಗಳಿಂದ ಮಾಡಿದ ಪಂಚುಗಳನ್ನು ನದಿ ತೋಡಿನ ಬಳಿ ರಾಶಿ ಹಾಕಿ… ಅದಕ್ಕೆ ಬೆಂಕಿ ಹಾಕುತ್ತಾರೆ. ವೇಷಧಾರಿಗಳೆಲ್ಲರೂ ಕಿಚ್ಚು ಹಾಯ್ದು ಸ್ನಾನ ಮಾಡಿ ಮನೆಗೆ ಬರುತ್ತಾರೆ. ಬಂದವರಿಗೆ ಎಡೆ / ಅಗೆಲು ಕೊಡುತ್ತಾರೆ.

ಅನಾಥ ಹೆಣ್ಣು ಬಾಳಮ್ಮ ದೇವಿಶಾರದಾಂಬೆ ಮಾಯವಾದ ಬಾಳಮ್ಮನ ಉತ್ಸವ ದಿನ ಒಂದೊಂದು ಮನೆಯಿಂದ ಬರುವ ತಾಯಂದಿರು ಮೂರು ರೀತಿಯ ವರ್ಗಕ್ಕೆ ಸೇರಿದ ಮಹಿಳೆಯರು ಈ ಉತ್ಸವದಲ್ಲಿ ಸೇರುತ್ತಾರೆ. ಕೆಳವರ್ಗದ ಹೆಣ್ಣು ಬಾಳಮ್ಮನ ಬಾಳ್ವೆ ಅನಿರೀಕ್ಷಿತವಾಗಿ ಅಲ್ಲಿ ಗುರು ಮುಖೇನ ದೊರೆತ ಮಾರ್ಗದರ್ಶನ ಅದರಿಂದ ತನ್ನ ಪ್ರಯತ್ನವನ್ನು ಮುಂದುವರೆಸಿ ಪಡೆದುಕೊಂಡ ಬಾಳು ಇದು ಉತ್ಕೃಷ್ಟ ಸ್ಥಿತಿಗೇರಿದಾಗ ಹಿಂದಿನ ಬದುಕನ್ನೇ ಮರೆಸಿ ಬಿಡುತ್ತದೆ. ಆದರೆ ಯಾರೇ ಆಗಲಿ ಹಳೆಯದನ್ನು ಮರೆಯಬಾರದೆಂಬುದನ್ನು ತೋರಿಸಿ ಕೊಡುವ ದೈವೀ ಸ್ವರೂಪಿಣಿ ಶಾರದಾಂಬೆ ಗುರುಗಳ ಮೂಲಕ ಪ್ರಕಟವಾಗುವ ಕ್ರಿಯೆ ಇಲ್ಲಿದೆ. ಮಾಯವಾದ ಬಾಳಮ್ಮ ಈ ವೇಷಧಾರಿಗಳ ಮುಖಾಂತರ ಮತ್ತೆ ಮನೆ ಮನೆ / ಮನ ಮನ ಮುಟ್ಟುವ ಕ್ರಿಯೆ ಈ ಹಬ್ಬದಲ್ಲಿ ನಡೆಯುತ್ತದೆ. ಹೀಗೆ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಬದುಕುತ್ತಿದ್ದ ಜೀವನ ಕ್ರಮವನ್ನು ತೋರಿಸುವ ಸಾಂಕೇತಿಕ ಆಚರಣೆ ನಂತರ ಅದೆಲ್ಲವನ್ನು ಒಟ್ಟು ಮಾಡುವಲ್ಲಿ ಬದುಕನ್ನು ಕಟ್ಟಿಕೊಡುವಂತೆ… ಅನ್ನಪೂರ್ಣೆಯರಾಗಿ ಬರುವ ಒಂದೊಂದು ಮನೆಯ ಮಾತೃತ್ವ ಸ್ವರೂಪದ ಹೆಣ್ಣುಗಳ ಮಿಲನ ಈ ಹಬ್ಬದಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ.

’ಬಾಳ್ ಸಾಂತು’ ಎಂಬುದು ಬಾಳಮ್ಮನ ಮಾಯಾರೂಪದ ಹೆಸರು. ಬದುಕಿನಲ್ಲಿ ನಾವು ನಟಿಸುವ ವೇಷಗಳು ಮುಖವಾಡಗಳೆಲ್ಲವನ್ನು ಮಾಯಿ ಹುಣ್ಣಿಮೆಯ ದಿನ ಅವರವರ ದೇಹ ಮನಸ್ಸುಗಳಲ್ಲಿರುವ ಕಲ್ಮಶವನ್ನು ಸ್ವಚ್ಛಗೊಳಿಸುವ ಸಂಕೇತವಾಗಿ ಈ ಆಚರಣೆ ಮರಾಠಿಗರಲ್ಲಿರಬೇಕು.

ಒಟ್ಟಾರೆ ಹೇಳುವುದಾದರೆ ಮರಾಠಿಗಳ ಬದುಕಿನಲ್ಲಿ ಜನಪದ, ಸಾಂಸ್ಕೃತಿಕ, ಧಾರ್ಮಿಕ, ಹಬ್ಬಹರಿದಿನಗಳು ವಿಶಿಷ್ಟವಾಗಿ ಬೆರೆತು ಹೋಗಿದೆ. ಒಂದೊಂದು ಆಚರಣೆಗಳಿಗೂ ಹತ್ತು ಹಲವು ಮುಖಗಳಿರುವುದನ್ನು ಗಮನಿಸಬಹುದು. ಆ ಎಲ್ಲಾ ಮುಖಗಳು ಒಂದೇ ದೇಹದಲ್ಲಿ ಅಂತರ್ಗತವಾಗಿರುವುದೊಂದು ವಿಶೇಷ – ವಿಶಿಷ್ಟವಾದ ಆಚರಣೆಗಳಾಗಿವೆ ಎಂದು ಹೇಳಬಹುದು. ಇವರಲ್ಲಿನ ಆಚರಣೆಗಳನ್ನು ಕೇವಲ ಜಪದ ದೃಷ್ಟಿಯಿಂದ, ಧಾರ್ಮಿಕ ದೃಷ್ಟಿಯಿಂದ, ಸಾಂಸ್ಕೃತಿಕ ದೃಷ್ಟಿಯಿಂದ ನೋಡಲು ಸಾಧ್ಯವಾಗದಂತೆ ಹೆಣೆದುಕೊಂಡು ಬಿಟ್ಟಿರುವುದು ಬಹು ಮಹತ್ವದ್ದು. ಇವುಗಳ ಹಿಂದಿರುವ ಪ್ರೇರಣೆ ಎದುರಿಗೆ ಆಹ್ವಾನಿಸಿಕೊಂಡಿರುವ ಶಕ್ತಿ ’ಹೆಣ್ಣು’ ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.