ಕಳಶಸ್ನಾನ ಅಥವಾ ಎಲೆಸ್ನಾನದ ಸಂದರ್ಭದಲ್ಲಿ ಮಡಿವಾಳ್ತಿಗೆ ಅಗ್ರಪ್ಟ, ಈಕೆ ಅಂಗದಲ್ಲಿ ಅಕ್ಕಿಹಿಟ್ಟು ಮತ್ತು ಜೇಡಿ ಮಣ್ಣಿನಿಂದ ಮಂಡಲವನ್ನು ಹಾಕುತ್ತಾಳೆ. ಮಂಡಲದ ನಾಲ್ಕು ಮೂಲೆಗಳು ತಂಬಿಗೆಯನ್ನು ಇಟ್ಟು ಅವುಗಳಿಗೆ ನೀರು, ಅಡಿಕೆ ಮಾವು ಮತ್ತು ಹಲಸಿನ ಎಲೆಗಳಿಂದ ಸಿಂಗರಿಸುತ್ತಾಳೆ. ಮಧ್ಯದ ಕಳಶಕ್ಕೆ ಬಂಗಾರ ಮತ್ತು ಚಕ್ರಪಾವಲಿಯನ್ನು ಹಾಕಿ ಇಡುತ್ತಾಳೆ. ಈ ಮಂಡಲದ ಮಧ್ಯೆ ಅಜ್ಜಿಯನ್ನು ಕೂಡಿಸಿ ಅವರ ಮೊಣಕಾಲಿನ ಮೇಲೆ  ಮಧುಮಕ್ಕಳನ್ನು ಕೂಡ್ರಿಸುತ್ತಾಳೆ.   ಇದಿಷ್ಟು ಮಡಿವಾಳ್ತಿಯ ಕೆಲಸ. ಈ ಸ್ಥಾನದಲ್ಲಿ ಗುರಿಕಾರನ ಹೆಂಡತಿ ಪ್ರಮುಖಳಾಗಿ ನಿಂತು ಮುಂದಿನ ಕಾರ್ಯಕ್ಕೆ ಚಾಲನೆ ನೀಡುತ್ತಾಳೆ. ಇವಳ ಕೆಲಸದಲ್ಲಿ ನಾಲ್ಕು ಜನ ಸುಮಂಗಲೆಯರು ಸಹಕರಿಸುತ್ತಾರೆ. ಮಂಡಲದೊಳಗಿನ ಕಳಶದ ತಂಬಿಗೆಗಳನ್ನು ತೆಗೆದುಕೊಂಡು ಮೂರು ಅಥವಾ ಐದು ಪ್ರದಕ್ಷಿಣೆ ಹಾಕುತ್ತಲೇ ಅದರಲ್ಲಿನ ನೀರನ್ನು ಚಿಮುಕಿಸುತ್ತಾರೆ. ಆಮೇಲೆ ಮಂಡದಲ್ಲಿರುವ ಕಳಸದ ನೀರನ್ನು ಅಜ್ಜಿ ಮತ್ತು ಅವಳ ತೊಡೆಯ ಮೇಲೆ ಕುಳಿತಿರುವ ಮದುಮಕ್ಕಳ ಮೇಲೆ ಹೊಯ್ಯುತ್ತಾರೆ. ಇದನ್ನು ಮರಾಠಿಗರು ಪಿಲೆಸ್ನಾನ ಅಥವಾ ಕಳಶದ ಸ್ನಾನ ಎಂದು ಹೇಳುತ್ತಾರೆ. ಇಲ್ಲಿಯೂ ಹಾಡಿನ ಮೇಳವಿದೆ.

ಲಿಂಬಾರೇ.. ಲಿಂಬಾ.. ಜೋ.. ಉನ್ ತೇ… ಲಿಂಬಾತೋ..
ನವರಾಜ್ ತಲೌವ್… ರ್ … ಲಿಂಬಾರೇ. .. ಲಿಂಬಾತೋ
ಜುಓಳ ಉನ್ ತೇ… ಲಿಂಬಾತೋ..
ಅತ್ತಾಜಾ ಲಿಂಬಾತೋ… ಗಂಗೇ… ಜೋ … ತೋ..
ಲಿಂಬಾರೇ ಲಿಂಬಾ.. ಓ. .. ಜೋ.. ಉನ್ ತೇ… ಲಿಂಬಾತೋ…
ನವರಾಜ್ … ಕಾಂದರ್ .. ಲಿಂಬಾರೇ… ಲಿಂಬಾ.. ತೋ..

ಜೋ ಉನ್ ತೇ… ಲಿಂಬಾತೋ
ಅತ್ತಜಾ ಲಿಂಬಾ ತೋ… ಗಂಗೇ ಜೋ … ತೋ..
ಲಿಂಬಾರೇ ಲಿಂಬಾ.. ಊಜೋ.. ಉನ್ ತೇ ಲಿಂಬಾತೋ
ಜೋ ಉನ್ ತ್ತೆ ಲಿಂಬಾತೋ ನವರಾಜ್ ಟೊಂಪ್ರರೋ
ಅತ್ತಜಾ ಲಿಂಬಾತೋ.. ಗಂಗೇ ಜೋ… ತಾ….
ಲಿಂಬಾರೇ ಲಿಂಬಾ.. ಓ… ಜೋ… ಉನ್ ತೇ ಲಿಂಬಾತೋ
ಜೋ ಉನ್ ತ್ತೆ ಲಿಂಬಾತೋ ನವರಾಜ್ ಪಾಯ… ಒರ್
ಅತ್ತಜ ಲಿಂಬಾತೋ… ಗಂಗೇ…. ಜೋ.. ತಾ…

ಈ ರೀತಿ ಸ್ನಾನ ಮಾಡಿಸುವಾಗ ಈ ಹಾಡು ಹೇಳುತ್ತಾ ಸ್ನಾನ ಮಾಡಿಸುತ್ತಾರೆ. ಪೂರ್ವದಿಕ್ಕಿನತ್ತ  ಮುಖ ಮಾಡಿ ಕುಳಿತ ಇವರಿಗೆಲ್ಲಾ ಬೈಹುಲ್ಲಿನಿಂದ ಮಾಡಿದ ಹಗ್ಗದಿಂದ ತಲೆಯ ಮೂಲಕ ಸೊಂಟಕ್ಕೆ, ಸುತ್ತಿರುತ್ತಾರೆ. ಪಿಲೆಸ್ನಾನದ ನಂತರ ಇವೆರಲ್ಲಾ ಹಗ್ಗವನ್ನು ತುಂಡು ಮಾಡಿ ಏಳಬೇಕೆಂಬ ಸಂಪ್ರದಾಯವಿದೆ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸಮರ್ಥವಾಗಿ ಬಗೆಹರಿಸಿ ಬದುಕುತ್ತೇವೆ ಎಂಬುದರ ಸಂಕೇತ ಈ ಕ್ರಿಯೆ ಇರಬೇಕೆಂದು ಊಹಿಸಬಹುದಾಗಿದೆ. ಇಲ್ಲಿ ಅಜ್ಜಿ ಮಂಡಲದೊಳಗೆ ಕುಳಿತುಕೊಳ್ಳುವ ಕ್ರಿಯೆ ಬಹು ಮುಖ್ಯ. ಎಲ್ಲದರ ಕೇಂದ್ರ ಬಿಂದು ಮಹಿಳೆ.

ಇದೇ ಸಮಯದಲ್ಲಿ ಜರುಗುವ ಮತ್ತೊಂದು ಕ್ರಿಯೆ. ಇಲ್ಲಿ ನೆಟ್ಟಿರುವ ಬಾಳೆ ಗಿಡಗಳನ್ನು ಒಂದೇ ಏಟಿಗೆ ತುಂಡರಿಸಬೇಕು. ಈ ಪದ್ಧತಿ ಕೊಡಗಿನಲ್ಲಿದೆ. ಬಹುಶಃ ಹಿಂದೆ ಸ್ವಯಂವರ ಪದ್ಧತಿ ಇತ್ತು. ಇದರ ಶೇಷವೇ ಈ ಬಾಳೆಗಿಡವನ್ನು ತುಂಡರಿಸುವ ಸಂಪ್ರದಾಯವಾಗಿ ರೂಪುಗೊಂಡಿರಬೇಕೆಂದು ಹೇಳಬಹುದಾಗಿದೆ. ಆಮೇಲೆ ಕಳಶಗಳ ಕೆಳಗೆ ಇರಿಸಿದ್ದ ಸಿಂಬಿಗಳನ್ನು ಮಡಿವಾಳ್ತಿ ತನ್ನ ಎಡಗೈಯಿಂದ ದೂರಕ್ಕೆ ಬಿಸಾಡಿ ಆ ಜಾಗವನ್ನು ಸಗಣಿ ಹಾಕಿ ಸಾರಿಸಿ ಸ್ವಚ್ಛ ಮಾಡುತ್ತಾಳೆ. ಇದು ಕೂಡಾ ಜೀವನದಲ್ಲಿರುವ ಎಲ್ಲಾ ರೀತಿಯ ದೃಷ್ಟಿದೋಷಗಳನ್ನು ಪರಿಹರಿಸುವ ಕ್ರಿಯೆಯಾಗಿದೆ. ಇದನ್ನು ಮಾಡುವವಳು ಮಡಿವಾಳ್ತಿ.

ಪಿಲೆ ಸ್ನಾನ ಮಾಡಿ ಪರಿಶುದ್ಧಳಾಗಿ ಚಪ್ಪರದ ಕಡೆಗೆ ಹೊರಟ ಮದುಮಗಳಿಗೆ ನಾದಿನಿ ಕೊಡೆ ಹಿಡಿದು ನೆರಳಿನಲ್ಲಿ ಜರೆದುಕೊಂಡು ಬರುವ ಸಂಪ್ರದಾಯ ಇವರಲ್ಲಿದೆ. ಇದು ಮರಾಠಿಗರಲ್ಲಿ ಕಂಡು ಬರುವ ವಿಶಿಷ್ಟ ಆಚರಣೆ ಅತ್ತಿಗೆ ನಾದಿನಿಯರಿಬ್ಬರೂ ಸ್ನೇಹಿತರಂತೆ ಬಾಳಲಿ ಎಂಬುದರ ಛಾಯೆ ಇದು. ಹೀಗೆ ಬಂದ ವಧುವಿಗೆ ಮದುಮಗನ ತಮ್ಮ ಮಡಿಲು ತುಂಬುತ್ತಾನೆ. ಈ ಆಚರಣೆಯನ್ನು ಮರಾಠಿಗರು ’ಚೆಡುವಾಲೇ ಓಂಟಿ ಬರೋಂಚಿ ಮುತ್ತೆತ್’ ಎಂದು ಕರೆಯುತ್ತಾರೆ. ಮಧುಮಗಳು ತನ್ನ ಎಲ್ಲಾ ದೋಷಗಳನ್ನು ಕಳೆದು ಪರಿಶುದ್ಧಳನ್ನಾಗಿ ಮಾಡಿದ ಅಜ್ಜಿಗೆ ಫಲತಾಂಭೂಲಗಳನ್ನು ಅರ್ಪಿಸಿ ಹೊಸ ಜೀವನಕ್ಕೆ ಆರ್ಶೀವಾದ ಪಡೆದುಕೊಳ್ಳಬಹುದು. ಗಮನಾರ್ಹವಾದದ್ದು. ಅತ್ತ ವರನ ಕಡೆ, ವರನ ಭಾವ ಚಾಕುವಿಗೆ ಸುಲಿದ ಅಡಿಕೆಯನ್ನು ಸಿಕ್ಕಿಸಿ / ತಾಗಿಸಿ ಅದನ್ನು ಬಿಳಿ ವಸ್ತ್ರದಿಂದ ಸುತ್ತಿ ಅದನ್ನು ವರನ ಸೊಂಟದಲ್ಲಿ ಸಿಕ್ಕಿಸುವ ಪದ್ಧತಿಯಿದೆ. ಇದು ಕೂಡಾ ಈ ಜನಾಂಗದವರಲ್ಲಿ ಮಾತ್ರ ಕಂಡು ಬರುವ ಆಚರಣೆಯಾಗಿದೆ. ಈ ಆಚರಣೆಗೆ ’ಬಾಂಕ್’ ಎಂದು ಕರೆಯುತ್ತಾರೆ. ಇದು ಮರಾಠಿಗರ ವೀರಪರಾಕ್ರಮವನ್ನು ಬಿಂಬಿಸುವ ಸಂಕೇತವಾಗಿರಬೇಕೆಂದು ಹೇಳಬಹುದು.

ಇಲ್ಲಿ ಗಮನಾರ್ಹವಾದ ಮತ್ತೊಂದು ವಿಷಯವಿದೆ. ಪಿಲೆ ಸ್ನಾನಕ್ಕೆ ಮೊದಲು ವರನಿಗೂ ’ಕಾಲುಂಗರ’ ತೊಡಿಸುವ ಪದ್ಧತಿ ಇತ್ತು.  ಇದನ್ನು ಗುರಿಕಾರನ ಹೆಂಡತಿ ಮಾಡುತ್ತಿದ್ದಳು. ಕೆಲವೆಡೆ ಈ ಆಚರಣೆ ಈಗಲೂ ಉಳಿದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ವರನ ಉಪಚಾರ ಮಾಡುವವರಿಗೆ ’ಬುಡ್ಕ್ಲೋ’ ಎಂದು ಕರೆದರೆ; ವಧುವನ್ನು ಉಪಚರಿಸುವವರಿಗೆ ’ಬುಡ್ಕ್ಲಿ ’ ಎಂದು ಕರೆಯುತ್ತಾರೆ.

ಈ ಎಲ್ಲಾ ಆಚರಣೆಗಳು ಮುಗಿದ ಮೇಲೆ ಮದುಮಕ್ಕಳ ಕೈಗಳಿಗೆ ಮದರಂಗಿ ಇಡುವ ಶಾಸ್ತ್ರ. ಈ ಶಾಸ್ತ್ರದ ನೆಪದಲ್ಲಿ ಹೆಂಗಳೆಯರ ದಂಡೇ ಅಲ್ಲಿ ಸೇರುತ್ತದೆ. ಇಲ್ಲಿ ಹಿರಿಯರ ಜೊತೆ ಹದಿಹರೆಯದವರ ನಗು ಬೊಬ್ಬೆ ಮುಗಿಲು ಮುಟ್ಟುತ್ತದೆ. ಇರುವ ಇಲ್ಲದ ನೆಪ ಮಾಡಿಕೊಂಡು ಬರುವ ಯುವಕರಿಗೇನು ಕಡಿಮೆಯಿಲ್ಲ. ಈ ಮದರಂಗಿಯ ಎಲೆಗಳನ್ನು ತರುವ ಹಕ್ಕು ಮುತ್ತೈದೆಯರದು. ವಧುವಿನ ಕೈಗಳಿಗೆ ಸೂರ್ಯ ಚಂದ್ರ ಬಿಡಿಸಿ ಮತ್ತೆ ಉಳಿದಂತೆ ಕಲಾತ್ಮಕವಾಗಿ ಚಿತ್ತಾರ ಬಿಡಿಸುವ ಕೆಲಸ ನಾದಿನಿಯದು. ಇದಿಷ್ಟೇ ಅಲ್ಲ ಮದರಂಗಿ ಸೊಪ್ಪನ್ನು ಅರೆದು ಅದಕ್ಕೆ ನಿಂಬೆ, ಅರಿಶಿಣ, ಸುಣ್ಣವನ್ನು ಹದವಾಗಿ ಬೆರೆಸಿ ಅದರ ಲೇಫವನ್ನು ಮಾಡುವಲ್ಲಿ ಅತ್ತಿಗೆ – ನಾದಿನಿಯರದೇ ಸಿಂಹಪಾಲು. ಹೆಚ್ಚು ಕೆಂಪಾದರೆ ಗಂಡನ ಮೇಲೆ / ಹೆಂಡತಿಯ ಮೇಲೆ ಎಂದು ತಮಾಷೆ ಮಾಡುತ್ತಾ… ನಡೆಯುವ ಆಚರಣೆ ಎಲ್ಲರಲ್ಲೂ ಸಂತಸದ ಹೊನಲನ್ನು ಹರಿಸಿ ಬಿಡುತ್ತದೆ. ಸಂಭ್ರಮ ಮುಗಿಲು ಮುಟ್ಟಿ ಬಿಡುತ್ತದೆ.

ಇದೇ ಸಂಭ್ರದಲ್ಲೇ ವಧುವಿನ ಅಕ್ಕ, ತಂಗಿಯನ್ನು ಹಸೆಮಣೆಗೆ ಕರೆ ತರುತ್ತಾಳೆ. ಮುಂದೆ ವಿವಾಹದ ಆಚರಣೆಗಳು ನಿರಂತರವಾಗಿ ಸಾಗುತ್ತಾ ಹೋದಂತೆ ಎಲ್ಲೆಡೆ ನಗು, ಮಾತು, ಅವಸರ, ಧಾವಂತ, ನವರಸಗಳ ಮಹಾಪೂರ. ಧಾರೆಯ ಸಮಯ ಸಮೀಪಿಸುತ್ತಿದೆ ಎನ್ನುವ ಅವರಸರದಲ್ಲಿಯೇ ವಧುವಿಗೆ ಧಾರೆ / ಮುಹೂರ್ತದ ಪಟ್ಟೆ ಸೀರೆ ಉಡಿಸಿ, ಅಡ್ಡ ಕುಂಕುಮ, ಇಲ್ಲವೆ ಚಂದ್ರಾಕೃತಿ ಕುಂಕುಮವನ್ನು ಇರಿಸಿ ಅಲಂಕರಿಸುತ್ತಾರೆ. ಮಹಿಳಾ ಲೋಕದ ಒಡೆತೆನ ಇಲ್ಲಿ ಕಾಣಬರುವುದು. ವಿವಾಹದ ಮುಖ್ಯ ಅಂಗವಾದ ಧಾರೆ, ಸೇಸೆ ಇಡುವುದು ಮುಂತಾದ ಕೆಲಸಗಳಲ್ಲಿ, ಆರತಿ ಮಾಡುವ ಸಂದರ್ಭದಲ್ಲಿ ಮಹಿಳಾ ಪಾತ್ರಧಾರಿಗಳೇ ಮುಖ್ಯರಾಗುವ ವೇದಿಕೆಯಾಗಿ ಬಿಡುತ್ತದೆ. ಮದುವೆಯ ದಿನ ಮಾತ್ರ ಸಸ್ಯಹಾರದ ಭೋಜನ, ಬೀಗರ ಊಟಕ್ಕೆ ಬಾಡಿನ / ಮಾಂಸಾಹಾರದ ಭೋಜನದ ವ್ಯವಸ್ಥೆ ಮರಾಠಿ ಜನಾಂಗದಲ್ಲಿ ಕಂಡು ಬರುತ್ತದೆ.

ಹೆಣ್ಣನ್ನು ಇಳಿಸಿಕೊಡುವ ಹೆಣ್ಣನ್ನು ಕಳಿಸಿ ಕೊಡುವ ಸಮಯದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಮಧುಮಕ್ಕಳಲ್ಲಿ ಸಲುಗೆ, ಸ್ನೇಹ ಅನುರಾಗ ಅರಳಲಿ ಎಂದೇ ಹಿರಿಯರು ಮಾಡಿರುವ ಭೂಮದ ಆಟಗಳು. ಇವರಲ್ಲಿರುವ ಸಂಕೋಚವನ್ನು ದೂರ ಮಾಡಲು ಸಹಾಯ ಮಾಡಿದರೆ, ಇದನ್ನು ನೋಡಲು ಸೇರುವ ಪ್ರೇಕ್ಷಕ ವರ್ಗಕ್ಕೆ ಮನೋರಂಜನೆಯನ್ನು ನೀಡುತ್ತದೆ. ಓಕುಳಿಯಾಟ, ಅಡಿಕೆಯಾಟ, ಉಂಗುರದಾಟ, ಮೀನು ಹಿಡಿಯುವುದು, ಗುಂಡಕಲ್ಲು ಇಟ್ಟು ಮಗುವೆಂದು ತೂಗುವುದು, ಬಣ್ಣದ ನೀರನ್ನು ಎರಚುವುದು ಮುಂತಾದಾಟಗಳು ಹಳಬರಲ್ಲಿ ಹಳೆಯ ನೆನಪುಗಳನ್ನು ತಂದರೆ ಹೊಸಬರಿಗೆ ನಿರೀಕ್ಷೆಯ, ಕನಸಿನ ಲೋಕವನ್ನು ತೆರೆದಿಡುತ್ತದೆ. ಮಧುಮಕ್ಕಳಲ್ಲಿ ಅನುರಾಗವನ್ನು ಮೂಡಿಸುತ್ತದೆ. ಕರಿಯರಿಗೆ ಮೋಜು.

ಹೊಸ ಮನೆಗೆ ಪ್ರವೇಶಿಸಿದ ಹೊಸ ಹೆಣ್ಣಿಗೆ ಹೊಸ ಹೆಸರು. ಅತ್ತೆ ಒಳಗಿನಿಂದ ಸೊಸೆಗೆ ಹೊಸ ಹೆಸರಿಟ್ಟು ಕರೆಯುತ್ತಾಳೆ. ಹೊರಗಿನಿಂದ ಸೊಸೆ ’ಓ ಗೊಡಬೇಕು. ಅಲ್ಲಿಗೆ ಅವಳ ಹಿಂದಿನ ವ್ಯಕ್ತಿತ್ವ ಹಳೆಯ ಹೆಸರಿನೊಂದಿಗೆ ಸಂಪೂರ್ಣ ಅಳಿಸಿ ಹೋಗುತ್ತದೆ. ಹೊಸ ವಾತಾವರಣ, ಹೊಸ ಜೀವನ, ಹೊಸ ವ್ಯಕ್ತಿತ್ವ, ಅವಳದಾಗಿ  ಮಾಡಿಕೊಳ್ಳುವ ವೇದಿಕೆ ಸಿದ್ಧವಾಘುತ್ತದೆ.

ಮಹಿಳೆಯ ಇರುವಿಕೆ ಮತ್ತೆ ಗೋಚರವಾಗುವುದು ಸೀಮಂತದ ಸಮಯದಲ್ಲಿ, ಕಳೆದ ವರ್ಷ ಮದುವೆಯಾದ ಹೆಣ್ಣು ಈಗ ಗರ್ಭವತಿಯಾಗಿದ್ದಾಳೆ. ಅವಳಿಗಾಗಿ ಸೀಮಂತದ ತಯಾರಿ ನಡೆಯುತ್ತದೆ. ಇದಕ್ಕೂ ಕೆಲವು ಆಚರಣೆಗಳಿವೆ. ಗಂಡಿನ ಕಡೆಯ ಗುರಿಕಾರನ ಮೂಲಕ ಫಲ ತಾಂಬೂಲಗಳನ್ನು ಮಂಗಲದ್ರವ್ಯವನ್ನು ಇಟ್ಟು ಹರಿವಾಣವನ್ನು ಹೆಣ್ಣಿನವರಿಗೆ ತಲುಪಿಸುವ ಕಾರ್ಯ ನಡೆದಾಗ ಈ ಮನೆಯವರಿಗೆ ತಮ್ಮ ಮಗಳು ಗರ್ಭಾವತಿಯಾಗಿರುವುದು ತಿಳಿಯುತ್ತದೆ. ಆ ಹರಿವಾಣವನ್ನು ಹೆಣ್ಣಿನ ಕಡೆಯ ಗುರಿಕಾರ ಪಡೆದುಕೊಂಡು ಹೆಣ್ಣಿನ ಮನೆಯ ಮುತ್ತೈದೆಯರಿಗೆ ತಲುಪಿಸುತ್ತಾನೆ. ಗರ್ಭಿಣಿಯಾದ ಸೊಸೆಯು ತನಗೆ ಅತ್ತೆ ಎಣ್ಣೆ ಹಚ್ಚುತ್ತಾಳೆ. ಅಕ್ಕ ಇಲ್ಲವೇ ಹಿರಿಯ ಮುತ್ತೈದೆ ತಲೆ ಬಾಚಿ ತುರುಬು ಕಟ್ಟಿ, ಇಲ್ಲವೇ ಜಡೆ ಹೆಣೆದು ಅಲಂಕರಿಸುತ್ತಾರೆ. ನಂತರ ಕುಳ್ಳರಿಸಿ ಮಡಿಲು ತುಂಬುತ್ತಾರೆ. ಸೀಮಂತಕ್ಕೆ ಬಂದ ಅತಿಥಿಗಳಲ್ಲಿ ಯಾರಾದರೂ ಗರ್ಭಿಣಿಯರಿದ್ದರೆ ಅವರನ್ನು ಕೂಡ ಕುಳ್ಳರಿಸಿ ಮಡಿಲು ತುಂಬುತ್ತಾರೆ. ಇದು ಮರಾಠಿಗರಲ್ಲಿ ಮಾತ್ರ ಕಂಡು ಬರುವ ಆಚರಣೆಯಾಗಿದೆ. ಇಲ್ಲಿ ಊಟ ಬಡಿಸುವ ಮೊದಲ ಅವಕಾಶ ಹಿರಿಯ ಮಹಿಳೆಯರಿಗೆ, ಇದು ಗೌರವದ ಸಂಕೇತವು ಹೌದು. ಆಮೇಲೆ ಹೆಣ್ಣು ತನ್ನ ತವರು ಮನೆಗೆ ಬರುತ್ತಾಳೆ. ನಂತರ ಸಮ್ಮಾನದ ಊಟ, ಸಾಮಾನ್ಯವಾಗಿ ಗರ್ಭಿಣಿಯನ್ನು ಎಲ್ಲಾ ನೆಂಟರಿಷ್ಟರು ಕರೆದು ಸತ್ಕರಿಸುತ್ತಾರೆ. ಆತಂಕ ನಿರೀಕ್ಷೆಗಳಲ್ಲಿ ಹೊಸ ಅತಿಥಿಯ ಆಗಮನಕ್ಕೆ ಸಿದ್ಧತೆಗಳಾಗುತ್ತವೆ.

ಮೊದಲ ಮಗುವಿನ ಜನನ : ಹೆಣ್ಣಿನ ತವರು ಮನೆಯಲ್ಲಿ ಹಿಂದೆ ಹೆರಿಗೆಗಳು ಮನೆಯಲ್ಲೇ ನಡೆಯುತ್ತಿದ್ದವು. ಹೆರಿಗೆ ಮಾಡಿಸುವುದಕ್ಕೆಂದೇ ಊರುಗಳಲ್ಲಿ ಹಳ್ಳಿಯ ಹೆಂಗಸರಿದ್ದರು. ಸೂಲಗಿತ್ತಿಯರಿದ್ದರು. ಹೆರಿಗೆ ನೋವು ಆರಂಭವಾದ ಕೂಡಲೇ ಬೂರಗದ ಮರದ ಕೆತ್ತೆಯ ಜೊತೆಯಲ್ಲಿ ಜೀರಿಗೆಯನ್ನು ಬೆರೆಸಿ ಕೆತ್ತೆಯನ್ನು ಜಜ್ಜಿ, ನೀರು ಹಾಕಿ ಹಿಂಡಿ ಅದರ ರಸವನ್ನು ಗರ್ಭಿಣಿಗೆ ಕುಡಿಸುತ್ತಿದ್ದರು. ಹೆರಿಗೆಯ ನೋವು ಕಡಿಮೆಯಾಗಲು ಎಳನೀರಿಗೆ / ಬೊಂಡಕ್ಕೆ ಪೊನ್ನಾಲಿ ಸೊಪ್ಪು ಮತ್ತು ಜೀರಿಗೆಯನ್ನು ಸೇರಿಸಿ ಆ ನೀರನ್ನು ಕುಡಿಯಲು ಕೊಡುತ್ತಿದ್ದರು.

ಹೆರಿಗೆಯ ನೋವು ಆರಂಭವಾದ ಕೂಡಲೇ ಗರ್ಭಿಣಿಗೆ ಬಿಸಿನೀರಿನಿಂದ ಸ್ನಾನ ಮಾಡಿಸಿ ಹೊಟ್ಟೆಗೆ ಎಣ್ಣೆ ಸವರುತ್ತಿದ್ದರು. ಆಮೇಲೆ ತಮ್ಮ ಎರಡು ಕೈಗಳಿಂದ ಹೊಟ್ಟೆಯನ್ನು ನೀವುತ್ತಾ ತಡವುತ್ತಾ ಮಗುವನ್ನು ಕೆಳಕ್ಕೆ ದೂಡುವ ಕೆಲಸವನ್ನು ಸೂಲಗಿತ್ತಿಯರು  ಮಾಡುತ್ತಿದ್ದರು. ಮಗುವಿನ ಜನನಕ್ಕಾಗಿ ಸೂಲಗಿತ್ತಿಯರು ತಮ್ಮದೇ ಆದ ವಿಧಾನಗಳನ್ನು ಅನುಸರಿಸುತ್ತಿದರು. ಅಕ್ಕಿಯ ಮುಡಿಯ ಮೇಲೆ ಗರ್ಭಿಣಿಯ ಗಂಡ ಅಥವಾ ಅಣ್ಣನನ್ನು ಕುಳ್ಳಿರಿಸಿ ಆತನ ಮಡಿಲಲ್ಲಿ ಗರ್ಭಿಣಿಯನ್ನು ಎದುರುಬದುರಾಗಿ ಕುಳ್ಳಿರಿಸುತ್ತಿದ್ದರು.  ನಂತರ ಆತನನ್ನು ಗಟ್ಟಿಯಾಗಿ ತಬ್ಬಿ ಹಿಡಿದು; ತನ್ನ ಎಲ್ಲಾ ಶಕ್ತಿಯನ್ನು ಬಿಟ್ಟು ಮಗುವು ಹೊರಬರುವಂತೆ ಮಾಡಲು ಈ ಸೂಲಗಿತ್ತಿಯರು ಪ್ರೇರೇಪಿಸುತ್ತಿದ್ದರು. ಮತ್ತೊಂದು ಹೆರಿಗೆಯ ವಿಧಾನ ಅಟ್ಟದಿಂದ ಹಗ್ಗವನ್ನು ಕೆಳಗೆ ಬಿಡುತ್ತಿದ್ದರು. ಹಾಗೆ ಇಳಿಸಿದ ಹಗ್ಗವನ್ನು ಹಿಡಿದುಕೊಂಡು ಗರ್ಭಿಣಿ ಮಗುವನ್ನು ಹೊರಹಾಕಲು ಸೂಲಗಿತ್ತಿಯರು ಪ್ರೇರೇಪಿಸುತ್ತಿದ್ದರು.

ಮಗು ಹೊರ ಬಂದ ಕೂಡಲೇ ಮಗುವಿನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ; ನೂಲು ಕಟ್ಟುತ್ತಿದ್ದರು. ಮಗುವಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಅಡಿಕೆ ಹಾಳೆಯಲ್ಲಿ  ಮಲಗಿಸುತ್ತಿದ್ದರು.  ಇಷ್ಟಾಗುವಾಗ ಹೊಕ್ಕಳಿಂದ ರಕ್ತ ಬರುತ್ತಿದ್ದರೆ ಸೆಗಣಿ ಅಥವಾ ಬೇವಿನ ಎಣ್ಣೆಯನ್ನು ಹಚ್ಚುತ್ತಿದ್ದರು. ಆಮೇಲೆ ಬಟ್ಟೆಯ ತುದಿಗೆ ಬೆಲ್ಲ ಅಥವಾ ಸಕ್ಕರೆಯ ನೀರು ಮಾಡಿ ಮೂರು ಬಾರಿ ನೆಕ್ಕಿಸುತ್ತಿದ್ದರು. ಕೆಲವು ಕಡೆ ಇದರ ಜೊತೆಗೆ ಈರುಳ್ಳಿ ರಸವನ್ನು ಮಿಶ್ರಮಾಡುವುದಿದೆ. ಇದರ ಜೊತೆ ಜೊತೆಗೆ ಮಾಡುವ ಕೆಲಸಗಳೆಂದರೆ ಹೆರಿಗೆಯ ’ಕಸ’ವನ್ನು ತೆಂಗು ಅಥವಾ ಹಲಸಿನ ಮರದ ಬುಡದಲ್ಲಿ ಹೂಳುತ್ತಿದ್ದರು. ಅಲ್ಲದೆ ಹೆರಿಗೆಯಾದ ಕೂಡಲೇ ಕಾಸರಕನ ಗಿಡದ ಗೆಲ್ಲುಗಳನ್ನು ತಂದು ಮನೆಯ ನಾಲ್ಕು ಮೂಲೆಗಳಲ್ಲಿ ಹಾಗೂ ಮಗು ಮತ್ತು ಬಾಣಂತಿಗೆ ಸ್ನಾನ ಮಾಡಿಸುವ ಬಚ್ಚಲು ಮನೆಯಲ್ಲಿ ಸಿಕ್ಕಿಸುತ್ತಿದ್ದರು.  ಇಷ್ಟಾದ ಮೇಲೆ ಹೆರಿಗೆಯಾದ ಸುದ್ದಿಯನ್ನು ಎಲ್ಲರಿಗೂ ತಿಳಿಸಲು ಬಟ್ಟಲು / ತಟ್ಟೆಯನ್ನು ಹೊರಗಡೆ ತಂದು ಬಡಿಯುತ್ತಿದ್ದರು. ಇಲ್ಲಿ ಗಮನಿಸಬೇಕಾದದ್ದು ಹೆರಿಗೆಯ ಮಾಸು ಬೀಳುವುದಕ್ಕಿಂತ ಮೊದಲು ಮಗು ಹೆಣ್ಣೊ ಅಥವಾ ಗಂಡೋ ಎಂದು ತಿಳಿಸದೆ ಪರೋಕ್ಷವಾಗಿ  ತಾಯಿ ತಂದೆ ಎಂಬು ಹೇಳುತ್ತಿದ್ದ ಜಾಣ್ಮೆ ಆ ಸೂಲಗಿತ್ತಿಯರಲ್ಲಿತ್ತು. ಇಷ್ಟು ಕಾರ್ಯ ಸುಗಮವಾಗಿ ನೆರವೇರಿದ ನಂತರ ಸೂಲಗಿತ್ತಿಯರಿಗೆ ಫಲ ತಾಂಬೂಲ ದಕ್ಷಿಣೆಯನ್ನು ಕೊಟ್ಟು ಗೌರವಿಸುತ್ತಿದ್ದರು.

ಹೆರಿಗೆ ಮಾಡಿಸುವಲ್ಲಿ ಸೂಲಗಿತ್ತಿಯರು ಪ್ರಮುಖ ಸ್ಥಾನ ಪಡೆದಂತೆ ನಂತರ ಮಗು ಮತ್ತು ಬಾಣಂತಿಯರ ಆರೋಗ್ಯದ ಆರೈಕೆಗಾಗಿಯೇ ಅನುಭವಶಾಲಿಗಳಾದ ಹಿರಿಯ ಮಹಿಳೆಯರಿದ್ದರು. ಬಾಣಂತನಕ್ಕಾಗಿಯ ಇವರು ವಿಶೇಷವಾದ ಪರಿಣತಿಯನ್ನು ಅನುಭವದಿಂದ ಗಳಿಸಿಕೊಂಡಿದ್ದರು. ಆರೈಕೆ ಆರಂಭ ಕೆಲವೆಡೆ ಚಿನ್ನವನ್ನು ಕಲ್ಲಿನಲ್ಲಿ  ತೇಯ್ದು ಅದರ ರಸವನ್ನು ಹುಟ್ಟಿದ ಮಗುವಿನ ನಾಲಿಗೆಗೆ ತಾಗಿಸುತ್ತಿದ್ದರು. ಇದಕ್ಕೆ ಕಾರಣ ಮಗು ಚೆನ್ನಾಗಿ ಮಾತನಾಡುತ್ತದೆಂಬುದಾಗಿತ್ತು. ಬಾಣಂತಿಗೆ ತಾಳೆಬಲ್ಲ ಮತ್ತು ಈರುಳ್ಳಿಯನ್ನು ಜಜ್ಜಿ ತಿನ್ನಿಸುತ್ತಿದ್ದರು. ಆಮೇಲೆ ಜೀರಿಗೆಯ ಕಷಾಯ ಕುಡಿಸುತ್ತಿದ್ದರು.

ಸಂತೋಷದ ಸುದ್ದಿಯನ್ನು ಅತ್ತೆ ಮನೆಗೆ ತಲುಪಿದ ಕೂಡಲೇ ಅಲ್ಲಿಂದಲೂ ಬಾಣಂತಿಯ ಉಪಚಾರಕ್ಕೆಂದು ಬಾಣಂತಿ – ಖಾರ ಇತ್ಯಾದಿ ಸಾಮಗ್ರಿಗಳು ಅಲ್ಲಿಂದ ಇಲ್ಲಿಗೆ ಕಳುಹಿಸಿಕೊಡುವ ಪದ್ಧತಿ ಮರಾಠಿಗರಲ್ಲಿದೆ. ಇದರ ಹೊಣೆ ಕೇವಲ ತವರು ಮನೆಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಇಲ್ಲಿ ಗುರುತಿಸಬಹುದು. ತಾಯಿ ಮಗುವನ್ನು ನೋಡಲು ಬಂದವರಿಗೆ ತಲೆಗೆ ಎಣ್ಣೆ ಹಚ್ಚಿ ತಿನ್ನಲು ಓಲೆಬೆಲ್ಲ ಮತ್ತು ಕೊಬ್ಬರಿಯನ್ನು ಕೊಡುವ ಪದ್ಧತಿ ಇಲ್ಲಿದೆ.

ನಾಮಕರಣ ಮಹೋತ್ಸವ ಇಲ್ಲಿ ಜನನದ ಸೂತಕ ಅಥವಾ ’ಆಮೆ’ ಇದು ಮುಗಿಯುವವರೆಗೂ ಬಾಣಂತಿಯ ಜೊತೆಯಲ್ಲಿ ಯಾರಾದರೂ ಮುಖ್ಯವಾಗಿ ತಾಯಿ ಇಲ್ಲವೇ ಬಾಣಂತಿಯನ್ನು ನೋಡಿಕೊಳ್ಳಲು ನೇಮಕವಾದ ಹೆಂಗಸು ಇರುತ್ತಾಳೆ. ಬಾಣಂತಿಯ ಹಾಸಿಗೆಯ ಹತ್ತಿರ ಕಬ್ಬಿಣದ ಕತ್ತಿ, ಪೊರಕೆ, ಹಿಡಿಸುಡಿಯನ್ನು ಇಟ್ಟು ಕಾವಲು ಕಾಯುತ್ತಾರೆ. ಅಲ್ಲದೇ ಬಾಣಂತಿ ಒಬ್ಬಳೇ ಎಲ್ಲಿಗೂ ಹೋಗುವಂತಿಲ್ಲ. ಅಷ್ಟು ಜೋಪಾನವಾಗಿ ಆಕೆಯನ್ನು ನೋಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಹನ್ನೆರಡರಿಂದ ಹದಿನಾರು ದಿನದಂದು ನಾಮಕರಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.  ಇದನ್ನು ಆಡುಭಾಷೆಯಲ್ಲಿ ಸೂತಕ ಕಳೆಯುವುದು ಆಮೆ ಕಳೆಯುವುದು ಎನ್ನುತ್ತಾರೆ. ನಾಮಕರಣ ದಿನ ಬೆಳಿಗ್ಗೆ ಮಡಿವಾಳ್ತಿಯನ್ನು ಕರೆಸುತ್ತಾರೆ.  ಬಂದಾಕೆ ಬಾಣಂತಿ ಮತ್ತು ಮಗುವಿಗೆ ಸ್ನಾನ ಮಾಡಿಸಿ ಮಡಿ ಮಾಡುತ್ತಾಳೆ. ಆಮೇಲೆ ಮಗುವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಮತ್ತೆ ಮಗುವನ್ನು ಅದರ ತಾಯಿಗೆ ಕೊಡುತ್ತಾಳೆ. ಇದು ಮಗುವಿನ ಅಶುದ್ಧವನ್ನು ಹುಟ್ಟಿನಿಂದ ಮಾಡುವ ಆಚರಣೆಯಾಗಿದೆ.  ಈ ಕ್ರಿಯೆಗೆ ಮಡಿವಾಳ್ತಿ ಬೇರೆ ಬೇಕು. ಅಶುದ್ಧವನ್ನು ಹುಟ್ಟಿನಿಂದ ದೂರ ಮಾಡಲು ಹೆಣ್ಣಿನ ಅವಶ್ಯಕತೆ ಎಷ್ಟಿದೆ ಎಂಬುದು ಇದರಿಂದ ತಿಳಿದುಬರುತ್ತದೆ. ಮಗ, ಗಂಡ, ಅಪ್ಪ, ಅಣ್ಣ, ತಮ್ಮ ಯಾರೇ ಆದರೂ ಅವರು ಶುದ್ಧರಾಗಿ ಜೀವನ ಸಾಗಿಸುವದರ ಸಂಕೇತ ಇದಾಗಿದೆ ಎನ್ನಬಹುದು. ಕೊನೆಗೂ ಸರಿದಾರಿಗೆ ತರುವವಳು ಹೆಣ್ಣೆ.

ಮಡಿವಾಳ್ತಿ ಎಲ್ಲೆಡೆ ತೀರ್ಥ ಚಿಮುಕಿಸಿ ಮನೆಗೆ ಬಂದ ಸೂತಕವನ್ನು ಕಳೆಯುತ್ತಾಳೆ. ಈ ಸಂದರ್ಭದಲ್ಲಿ ನಡೆಯುವ ಕ್ರಿಯೆ ವಿಶೇಷವಾದದ್ದು.  ಈ ಬಗ್ಗೆ ಕೆ. ಸುಂದರನಾಯಕ್ ರವರು ತಮ್ಮ ಸಂಶೋಧನಾ ಮಹಾಪ್ರಬಂಧದಲ್ಲಿ ಹೀಗೆಂದು ವಿವರಿಸಿದ್ದಾರೆ. ಒಂದು ಗೆರಸೆಯನ್ನು ತೆಗೆದುಕೊಂಡು ಅದರಲ್ಲಿ ಎರಡು ತುದಿ ಬಾಳೆ ಎಲೆಯನ್ನು ಇಟ್ಟು ಒಂದು ದೀಪವನ್ನು  ಹಚ್ಚಿಡುತ್ತಾರೆ. ಒಂದು ಎಲೆಗೆ ಬೊಗಸೆಯಷ್ಟು ಬತ್ತ ಹಾಕಿ ಅದರ ಮೇಲೆ ರೊಟ್ಟಿ, ಕೋಳಿ ಸಾರು, ಹುರುಳಿಸಾರು ಮತ್ತು ತರಕಾರಿಯನ್ನು ಬಡಿಸುತ್ತಾರೆ. ಮೇಲೆ ಪಾನಕ ತುಂಬಿದ ಮಣ್ಣಿನ ಕಳಸ ಇಡುತ್ತಾರೆ. ಎಲೆಯ ಮೇಲೆ ರೊಟ್ಟಿ, ಕೋಳಿಸಾರು, ಹುರುಳಿಸಾರು, ತರಕಾರಿ ಬಡಿಸುತ್ತಾರೆ. ಇನ್ನೊಂದು ಎಲೆಗೆ ಒಂದು ಸೇರು ಅಕ್ಕಿ ಹಾಕಿ ಅದರ ಮೇಲೆ ನೀರು ತುಂಬಿದ ತಂಬಿಗೆ ಇಡುತ್ತಾರೆ. ಅದರ ಮೇಲೆ ತಮ್ಮ ಕುಲದೇವತೆಯ ರೂಪವನ್ನು ಬಳೆಯ ಎಲೆಯಿಂದ ಮಾಡುತ್ತಾರೆ. ಅದಕ್ಕೆ ಬಾಣಂತಿಯ ಮೂಗುತಿ ಮತ್ತು ಕರಿಮಣಿಯನ್ನು ತೆಗೆದು ಸಿಕ್ಕಿಸುತ್ತಾರೆ. ಅಲ್ಲದೆ ಮತ್ತೆ ಹದಿನಾರು ಎಲೆಗಳನ್ನು ಇಟ್ಟು ಮನೆಯಲ್ಲಿ  ಮಾಡಿದ ಎಲ್ಲಾ ಅಡುಗೆಯನ್ನು ಬಡಿಸುತ್ತಾರೆ. ಆದರೆ ದೇವರಿಗೆಂದೇ ಇಟ್ಟ ಎಲೆಯಲ್ಲಿ ಮಾಂಸಾಹಾರವನ್ನು ಬಡಿಸುವುದಿಲ್ಲ. ಈ ಎಲೆಯ ಮುಂದೆ ದೀಪ ಹಚ್ಚಿ ಮಗುವಿನ ತಾಯಿ ತಂದೆ ವೀಳ್ಯ ಮತ್ತು ಅಡಿಕೆ ಇಟ್ಟು ನಮಸ್ಕರಿಸುತ್ತಾರೆ. ಇವರು ಹಚ್ಚಿದ ದೀಪ ಮಧ್ಯರಾತ್ರಿ ಅಂದರೆ ಕಾಲಮಾನದ ಪ್ರಕಾರ ಮರುದಿನದವರೆಗೆ ಉರಿಯುತ್ತಿರಬೇಕೆಂಬ ಸಂಪ್ರದಾಯವಿದೆ. ಅದರಿಂದ ಒಬ್ಬರು ಎಚ್ಚರವಾಗಿದ್ದು ದೀಪನಂದಿ ಹೋಗದಂತೆ ಎಣ್ಣೆ ಹಾಕುತ್ತಿರುತ್ತಾರೆ. ಮಿಕ್ಕ ಬಾಳೆ ಎಲೆಯಲ್ಲಿದ್ದ ಎಡೆಯನ್ನು ಮುತ್ತೈದೆಯರು ಬೆಳಗಿನ ಜಾವಕ್ಕೆ ಮನೆಯ ಹಿಂಭಾಗಕ್ಕೆ ತೆಗೆದುಕೊಂಡು ಹೋಗಿ ತಿನ್ನುವ ಸಂಪ್ರದಾಯವಿದೆ.

ನಾಮಕರಣ ಈ ವಿಶೇಷ ಸಂದರ್ಭದಲ್ಲಿ ಮಗುವಿಗೆ ಅಜ್ಜ – ಅಜ್ಜಿಯವರ ಹೆಸರನ್ನು ಇಡುತ್ತಾರೆ. ಆಮೇಲೆ ನಕ್ಷತ್ರದ ಬಲದ ಆಧಾರದ ಮೇಲೆ ಹೆಸರು ಇಡುತ್ತಾರೆ. ಮಗುವಿಗೆ ಹೆಸರನ್ನು ಇಟ್ಟ ಮೇಲೆ ಮಗುವನ್ನು ತೊಟ್ಟಿಲಲ್ಲಿ ಮಲಗಿಸುತ್ತಾರೆ. ತೊಟ್ಟಿಲನ್ನು ಅಲಂಕರಿಸುವ ಹೊಣೆ ಹೆಂಗಳೆಯರಿಗೆ, ಇದರ ಸುತ್ತಲು ಚೆನ್ನೇರಿ ಬಳ್ಳಿಯನ್ನು ಸುತ್ತಲು ಸುತ್ತುತ್ತಾರೆ. ದೋಷ ನಿವಾರಣೆಗಾಗಿ ಗರಿಕೆ ಹುಲ್ಲು, ಚರ್ಮದ ತುಂಡು, ಕಾಸರಕನ ಎಲೆ ಮತ್ತು ಸಗಣಿಯನ್ನು ತೊಟ್ಟಿಲಿಗೆ ಕಟ್ಟಿರುತ್ತಾರೆ. ತೊಟ್ಟಿಲ ಮುಂದೆ ದೀಪ ಹಚ್ಚಿ ಅದರ ಮುಂದೆ ಹರಿವಾಣದಲ್ಲಿ ಅಕ್ಕಿ ಹಾಕಿ ಬಿಳಿಯ ಮುಂಡು ಇಡುತ್ತಾರೆ. ಅದರ ಮುಂದೆ ತಾಯಿ ಮಗುವನ್ನು ಕೂಡಿಸಿ ಅಕ್ಷತೆ ಹಾಕಿ ಆಶೀರ್ವದಿಸಿ ಬಂದವರು ಉಡುಗೊರೆ ಕೊಡುತ್ತಾರೆ. ಇದಾದ ಮೇಲೆ ಗುಂಡುಕಲ್ಲನ್ನು ತೊಟ್ಟಿಲ ಕೆಳಭಾಗದಿಂದ ಬಾಣಂತಿಯ ತಾಯಿ – ಮಗಳ ಅತ್ತೆಗೆ ಮೂರು ಬಾರಿ ಕೊಡುತ್ತಾಳೆ. ಇದಾದ ಮೇಲೆ ಗುಂಡುಕಲ್ಲನ್ನು ತೊಟ್ಟಿಲಲ್ಲಿಡುತ್ತಾರೆ. ಗುಂಡುಕಲ್ಲನ್ನು ಹೇಗೆ ಮೂರು ಬಾರಿ ತೊಟ್ಟಿಲ ಕೆಳಗೆ ಕೈ ಕೈ ಬದಲಾಯಿಸಿಕೊಂಡರೋ ಹಾಗೆ ಬೀಗಿತ್ತಿಯರು ಮಗುವನ್ನು ಮೂರು ಬಾರಿ ಒಬ್ಬರಿಗೊಬ್ಬರು ಬದಲಾಯಿಸಿಕೊಳ್ಳುತ್ತಾರೆ. ನಂತರ ಗುಂಡುಕಲ್ಲನ್ನು ತೆಗೆದು ಮಗುವನ್ನು ತೊಟ್ಟಿಲಲ್ಲಿ ಮಲಗಿಸುತ್ತಾರೆ. ಅಂದು ಮಗುವಿಗೆ ಹಾಲು ಅಥವಾ ಜೇನನ್ನು ನೆಕ್ಕಿಸುತ್ತಾರೆ.

ಈ ಎಲ್ಲಾ ಸಂಭ್ರಮಗಳ ನಡುವೆ ಬಹು ಮುಖ್ಯವಾದದ್ದು ಮಗು ಬಾಣಂತಿಯರ ಆರೈಕೆ. ಇಲ್ಲಿ ಪ್ರಮುಖಲಾಗುವವಳು ಹೆಣ್ಣೆ. ಕುಟುಂಬ ಜೀವನ ಏರು ಪೇರಿಲ್ಲದೆ ಸಾಗಲು ಕಾರಣಳಾದ ಹೆಣ್ಣು ತನ್ನ ಜೀವನವನ್ನೇ ಪಣಕ್ಕಿಟ್ಟಂತೆ ಮತ್ತೊಂದು ಜೀವದ ಸೃಷ್ಟಿಗೆ ಕಾರಣಳಾಗಿದ್ದಾಳೆ. ಈ ಹೋರಾಟದಲ್ಲಿ ಗೆದ್ದು ಬರುವಾಗ ಪಟ್ಟ ಕಷ್ಟಗಳನ್ನು ಮರೆಸುವಂತೆ ಮತ್ತೆ ಜೀವನ ಹೋರಾಟಕ್ಕೆ ಸಿದ್ಧಳಾಗುವಂತೆ ಮಾಡಲು ಇದೇ ರೀತಿ ಬದುಕಿನ  ಮಾತೆಯ ಮಮತೆಯ ಆರೈಕೆ ಬೇಕಾಗುತ್ತದೆ. ಅದು ಅಪ್ಯಾಯಮಯವು ಹೌದು. ಆದ್ದರಿಂದಲೇ ಎಲ್ಲಾ ಮನೆಗಳಲ್ಲೂ ಮಗು ಬಾಣಂತಿಯರ ಆರೈಕೆ ಅತೀವ ಗಮನ ಕೊಡುವುದು.

ಈ ಆರೈಕೆಯ ಕಾರ್ಯ ಬೆಳಿಗ್ಗೆ ಇಬ್ಬರಿಗೂ ಸ್ನಾನ ಮಾಡಿಸುವುದರ ಮೂಲಕ ಆರಂಭವಾಗುತ್ತದೆ. ಸ್ನಾನ ಮೊದಲು ಇಬ್ಬರಿಗೂ ಎಣ್ಣೆ ಹಚ್ಚಿ ದೇಹದ ಅಂಗಾಂಗಗಳನ್ನು ನೀವುತ್ತಾರೆ. ಬಿಸಿನೀರಿಗೆ ಹತ್ತಿಮರದ ಕೆತ್ತೆ ಮತ್ತು ಮರುವ ಮರದ ಚೆಕ್ಕೆ ಹಾಕಿ ಸ್ನಾನ ಮಾಡಿಸುತ್ತಾರೆ. ಸ್ನಾನಕ್ಕೆ ಸೀಗೆಕಾಯಿ ಇಲ್ಲವೇ ಅಂಟುವಾಳದ ಕಾಯಿಯನ್ನು ಉಪಯೋಗಿಸುತ್ತಾರೆ. ಆಮೇಲೆ ಬೆಳ್ಳುಳ್ಳಿ, ಶ್ರೀಗಂಧ, ಲೋಭಾನ, ನೆಕ್ಕಿಸೊಪ್ಪು, ಸಾಂಬ್ರಾಣಿಯನ್ನು ಕೆಂಡದ ಮೇಲೆ ಹಾಕಿ ಧೂಪ ಮಾಡಿ ಅದರ ಹೊಗೆಯಿಂದ ಬಾಣಂತಿ ಮಗುವಿನ ಕೂದಲನ್ನು ಒಣಗಿಸುತ್ತಾರೆ. ಇದು ದೇಹಕ್ಕಾದ ಆಯಾಸವನ್ನು ದೂರ ಮಾಡುತ್ತದೆ. ತಾಯಿಗೆ ಹೆರಿಗೆಯ ಸಮಯದಲ್ಲಿ ಕೆಳ ಭಾಗಕ್ಕೆ ಜೋತು ಬಿದ್ದ ಹೊಟ್ಟೆ ಸರಿಯಾಗಲು ಹಳೆಯ ಸೀರೆಯನ್ನು ಬಿಗಿಯಾಗಿ ಹೊಟ್ಟೆಗೆ ಸುತ್ತುತ್ತಾರೆ.

ಈ ಸಂದರ್ಭದಲ್ಲಿ ಇಬ್ಬರಿಗೂ ಶೀತವಾಗದಂತೆ ಆರೈಕೆ ಮಾಡುವುದು ಬಹು ಪ್ರಮುಖವಾದದ್ದು. ಬಾಣಂತಿಯ ದೇಹ ಬಿಸಿಯಾಗಿರುವಂತೆ ಮಾಡಲು ಚೂರಿಮುಳ್ಳು, ನನ್ನಾರಿ ಬೇರು, ಚಿಕ್ಕಿಪತ್ತ್, ಕರಿಂಗಪತ್ತ್, ಬೇರಿಮುಳ್ಳು, ಎದುರೊಳ್ಳಿ, ಕೊಟ್ಟಮುಳ್ಳು, ಚಾರಂದೆ ಕೊಡಿ, ಗೇರು ಮರದ ಚಿಗುರು, ಸೀಬೆ ಮರದ ಚಿಗುರು ಇವೆಲ್ಲವನ್ನು ಸೇರಿಸಿ ರಸ ತೆಗೆದು ಇದಕ್ಕೆ ಜೀರಿಗೆ, ಮೆಣಸು, ಅರಿಶಿನ ಓಲೆಬೆಲ್ಲ, ಒಣ ಶುಂಠಿಯನ್ನು ಪುಡಿ ಮಾಡಿ ಸೇರಿಸಿ ಕಷಾಯ ಮಾಡಿ ಕುಡಿಸುತ್ತಾರೆ. ಹಾಗೆ ಓಮಕಾಳು, ಕೊತ್ತುಂಬರಿ, ಅರಶಿನ, ಮೆಣಸು, ಸಾಸಿವೆ, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ ಕೆಂಪು ಮೆಣಸಿನಕಾಯಿ ಇವೆಲ್ಲವನ್ನು ತಿನ್ನಿಸುತ್ತಾರೆ. ಬಾಣಂತಿಗೆ ಶಕ್ತಿ ಬರಲು ಕೋಳಿಮರಿ ಮತ್ತು ಆಡಿನ ಕಾಲಿನಿಂದ ತಯಾರಿಸಿದ ’ಸೂಪ್’ ರಸವನ್ನು ಕೊಡುತ್ತಾರೆ.

ತಾಯಿಗೆ ಆರೈಕೆ ಮಾಡಿದಂತೆ ಮಗುವಿಗೂ ವಿಶೇಷವಾದ ಉಪಚಾರ ನಡೆಯುತ್ತದೆ. ಪ್ರತಿದಿನ ಎಣ್ಣೆ ಹಚ್ಚಿ ಅಂಗಾಂಗಗಳನ್ನು ತಿದ್ದಿ ತೀಡಿ.. ಬಿಸಿ ನೀರಿನ ಸ್ನಾನ. ಆಮೇಲೆ ದೂಪದ ಹೊಗೆ, ಮಗುವಿನ ನಾಲಿಗೆಯ ಮೇಲಿರುವ ಆಗಿರ – ಅಗ್ರ-ಕೊಳೆ ತೆಗೆಯಲು ಗೇರು ಎಲೆಯನ್ನು ಜಜ್ಜಿ ರಸ ತೆಗೆದು ನಾಲಿಗೆಗೆ ನೆಕ್ಕಿಸುತ್ತಾರೆ. ಕೆಲವೆಡೆ ಸಾಂಬ್ರಾಣೀ ಸೊಪ್ಪಿನ ರಸವನ್ನು ಕುಡಿಸುತ್ತಾರೆ. ಇವರಿಬ್ಬರ ಆರೋಗ್ಯ ಮನೆ ಮಂದಿಗೆಲ್ಲಾ ಮುಖ್ಯವಾಗಿ ಬಿಡುತ್ತದೆ. ಇದರಿಂದ ನಲ್ವತ್ತು ದಿನ ಕಳೆದರೆ ’ಬಾಣಂತಿ ಮತ್ತು ಮಗು ಗೆದ್ದಂತೆ ’ ಎಂಬ ಹೇಳಿಕೆ ಚಾಲ್ತಿಯಲ್ಲಿದೆ. ಮಗುವಿಗೆ ೪ ತಿಂಗಳಾದ ಮೇಲೆ ತೊಟ್ಟಿಲ ಸಮೇತ ತನ್ನ ಮನೆಗೆ ಹೊರಡುತ್ತಾಳೆ. ಈ ದೃಶ್ಯವನ್ನು ನಮ್ಮ ಜನಪದ ಕಾವ್ಯಗಳಲ್ಲಿ ಬಹು ಮಾರ್ಮಿಕವಾಗಿ ಚಿತ್ರವಾಗಿದೆ. ನಿರ್ದಶನಕ್ಕಾಗಿ…

ತೊಟ್ಟಿಲ ಹೊತ್ಕೊಂಡು ತವರ್ ಬಣ್ಣ
ಉಟ್ಟೊಕೊಂಡು ಅಪ್ಪಕೊಟ್ಟೆಮ್ಮೆ, ಹೊಡ್ಕೊಂಡು
ತಿಟ್ಟತ್ತಿ ತಿರುಗಿ ನೋಡ್ಯಾಳಾ

ಮಗುವಿಗೆ ೬ ತಿಂಗಳಾದ ಮೇಲೆ ಅವರವರ ಮನೆಯ ಅನುಕೂಲಕ್ಕೆ ತಕ್ಕಂತೆ ಅವರವರ ಊರ ದೇವಸ್ಥಾನಗಳಲ್ಲಿ ಮಗುವಿಗೆ ಮೊದಲ ಬಾರಿಗೆ ಅನ್ನ ಕೊಡುವ / ತಿನ್ನಿಸುವ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ. ಆ ಆಚರಣೆಗೆ ’ಅನ್ನಪ್ರಾಶನ’ ಎಂದೇ ಹೆಸರು ಪಡೆದುಕೊಂಡಿದೆ. ಇದಾದ ನಂತರ ಹುಡುಗನಾದರೆ ತಲೆ ಕೂದಲು ಮುಡಿ ತೆಗೆಸುವ ಕಾರ್ಯಕ್ರಮ. ’ಚೌಲ’ ಎಂದು ಕರೆಸಿಕೊಳ್ಳುವ ಈ ಆಚರಣೆಯನ್ನು  ಕೆಲವರು ವಿಜೃಂಭಣೆಯಿಂದ ಮಾಡುತ್ತಾರೆ. ದೇವರ ಸನ್ನಿಧಿಯಲ್ಲಿ ಸಾಮಾನ್ಯವಾಗಿ ಹಿಂದೂಗಳಲ್ಲಿ ಮಗುವಿಗೆ ಒಂದು ಐದು ಏಳು ವರ್ಷಗಳಾದಾಗ ಕಿವಿ ಚುಚ್ಚಿಸುತ್ತಾರೆ. ಇದಕ್ಕೆ ಹೆಣ್ಣು ಗಂಡು ಎಂಬ ಭೇದವಿಲ್ಲ. ಹೆಣ್ಣಾದರೆ ಕಿವಿಯ ಜೊತೆಗೆ ಮೂಗನ್ನು ಚುಚ್ಚಿಸುತ್ತಾರೆ.

ಕುಟುಂಬದ ನಿರ್ವಹಣೆಗೆ ಹೆಣ್ಣು ನಂತರ ಹೆಣ್ಣಿಗೆ ವಿವಾಹ. ವಿವಾಹದ ನಂತರ ತಾಯ್ತನ. ಇದೇ ಹೆಣ್ಣಿಗೆ ಹೆಣ್ಣಾದರೆ ಮತ್ತು ಋತುಚಕ್ರದ ಸಂಭ್ರಮ. ಹೀಗೆ ಹೆಣ್ಣು ನಿರಂತರ ಪ್ರಕ್ರಿಯೆಗೆ  ಒಳಗಾಗುತ್ತಾ ಹೋಗುವುದನ್ನು ಈ ಸಂದರ್ಭದಲ್ಲಿ ದಾಖಲು ಮಾಡಬಹುದು.

ಎಲ್ಲರೊಂದಿಗೆ ಆಡುತ್ತಿದ್ದ ಬಾಲೆಗೆ ಒಂದು ದಿನ ತನಗೆ ಗೊತ್ತಿಲ್ಲದಂತೆ ದೇಹದಲ್ಲಾದ ಬದಲಾವಣೆ, ಆತಂಕ, ಹೆದರಿಕೆ, ಮುಜುಗರವನ್ನು ತಂದು ಬಿಡುತ್ತದೆ. ಆದರೆ ಮನೆಯಲ್ಲಿ ತಾಯಿಗೆ ಸಂಭ್ರಮದ ಘಳಿಗೆ, ಮೈ ನೆರೆಯುವುದು, ಋತುಮತಿಯಾಗುವುದು ದೊಡ್ಡವಳಾಗುವುದು ಮರಾಠಿಯಲ್ಲಿ ’ಚೆಡುನಾವ್ ಲಾಗ್ಲೆ’ ಎಷ್ಟೊಂದು ಹೆಸರುಗಳು. ಹುಡುಗಿಯನ್ನು ಸಾಮಾನ್ಯವಾಗಿ ಒಂಬತ್ತು, ಹನ್ನೊಂದು, ಹದಿಮೂರು ದಿನಗಳ ಕಾಲ ಹೊರ ಕೋಣೆಯಲ್ಲಿ ಕೂರಿಸುತ್ತಾರೆ. ಅವಳ ಜೊತೆಯಲ್ಲಿ ಯಾವಾಗಲೂ ಹಿರಿಯಾಕೆ ಇರುತ್ತಾಳೆ. ನಂತರ ತೆಂಗಿನಕಾಯಿ ಹಾಲಿಗೆ ಅರಿಶಿನ ಬೆರೆಸಿ ಮೈಗೆ ಹಚ್ಚಿ ಸ್ನಾನ ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಗುರಿಕಾರ‍್ತಿ ಸಂಬಂಧಿಕರು ಸೇರುತ್ತಾರೆ. ಜೊತೆಗೆ ಮಡಿವಾಳ್ತಿ ಬಂದು ಮನೆಯ ಅಂಗಳದಲ್ಲಿ ಚೌಕಾಕಾರದ ಮಂಡಲ ರಚಿಸುತ್ತಾಳೆ. ಅದರ ಮೇಲೆ ಮಂಗಳ ದ್ರವ್ಯಗಳನ್ನು ಹಾಕಿದ ಐದು ಕಳಶಗಳನ್ನು ಇಡುತ್ತಾಳೆ. ಈ ಕಳಶದ ನೀರಿನಿಂದ ಮೈನೆರೆದ ಹುಡುಗಿಗೆ ಸ್ನಾನ ಮಾಡಿಸಿ ಮಂಡಲದೊಳಗೆ ಇಟ್ಟ ಐದು ಕಳಸದ ಮುಂದೆ ಹುಡುಗಿಯನ್ನು ಕೂರಿಸಿ ಆರತಿ ಬೆಳಗಿ ಉಡುಗೊರೆ ಕೊಟ್ಟು ಶುಭ ಹಾರೈಸುತ್ತಾರೆ. ಇಲ್ಲಿ ಮಂಡಲದ ಒಳಗಿಟ್ಟ ಎಲ್ಲಾ ವಸ್ತುಗಳನ್ನು ಮಡಿವಾಳ್ತಿಗೆ ಕೊಡುತ್ತಾರೆ ಮುಡಿಯಿಂದ ತೆಗೆದ ಬತ್ತದಲ್ಲಿ ಅರ್ಧಭಾಗ ಮಡಿವಾಳ್ತಿಗೆ ಕೊಟ್ಟು ಮಿಕ್ಕ ಬತ್ತದಿಂದ ಅಕ್ಕಿ ಮಾಡಿ ಗಂಜಿ ಮಾಡಿ ಹುಡುಗಿಗೆ ಕುಡಿಸುತ್ತಾರೆ.

ಬಾವಿಯ ಪೂಜೆ ಮಾಡಿಸಿ ಬಾವಿಯಿಂದ ನೀರು ಸೇದಿ ತಂದು ಆ ನೀರನ್ನು ಒಲೆಯ ಮೇಲಿಟ್ಟು ಎಲ್ಲಾ ಪಾತ್ರೆಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಾರೆ. ಹಲವು, ತೆಂಗು ಅಡಿಕೆ ಮರಗಳಿಗೆ ನಮಸ್ಕಾರ ಮಾಡಿಸುತ್ತಾರೆ. ಈ ಎಲ್ಲಾ ಕ್ರಿಯೆಗಳು ನಡೆಯುವವರೆಗೂ ಈಕೆಗೆ ಅವಲಕ್ಕಿ ಬೆಲ್ಲ, ತೆಂಗಿನಕಾಯಿ ತುಪ್ಪ ಮತ್ತು ಸಾಂಬಾರ ಪದಾರ್ಥಗಳಿಂದ ತಯಾರಾದ ಪೌಷ್ಠಿಕ ಆಹಾರವನ್ನು ಕಳಸದ ನೀರಿನ ಸ್ನಾನದ ನಂತರವೂ ಕೊಡುತ್ತಿರುತ್ತಾರೆ. ಸುಮಾರು ಅರವತ್ತು ಅರವತ್ತೈದು ದಿನಗಳ ಕಾಲ ಬೆಲ್ಲ, ತುಪ್ಪ, ಅವಲಕ್ಕಿ ತಿನ್ನಲು ಕೊಡುತ್ತಿರುತ್ತಾರೆ.

ಕುಟುಂಬ, ವಿವಾಹ, ಜನನ, ಮೈನೆರೆಯುವುದು, ಮತ್ತೆ ಜೀವನಕ್ಕೆ ಕಾಲಿಡುವುದು, ಕೊನೆಗೆ ಮರಣ. ಆದರೆ ಶವಸಂಸ್ಕಾರದ ಸಮಯದಲ್ಲಿ ಹೆಣ್ಣಿಗೆ ಪ್ರವೇಶವಿಲ್ಲ. ಮನೆಯಲ್ಲಿಯೇ ಉಳಿದ ಸ್ತ್ರೀಯರು ಒಲೆಯಲ್ಲಿದ್ದ ಬೂದಿ ಕೆಂಡವನ್ನು ಗೆರಸೆಯಲ್ಲಿ ಹಾಕಿ ಹಳೆಯ ಕಸಬರಿಕೆಯನ್ನಿಟ್ಟು ಮನೆಯಿಂದ ದೂರಕ್ಕೆ ಇಟ್ಟು ಬರುತ್ತಾರೆ. ಅಂಗಳವನ್ನು ಸಾರಿಸಿ ಹೊಸ್ತಿಲಲ್ಲಿ ಕಾಲದೀಪವನ್ನು ಹೊತ್ತಿಸಿಡುತ್ತಾರೆ. ಹರಿವಾಣದಲ್ಲಿ ಅಕ್ಕಿ ಇನ್ನೊಂದರಲ್ಲಿ ಸೆಗಣಿ ನೀರಿನ ಮಿಶ್ರಣವನ್ನಿಟ್ಟು ಅದರಲ್ಲಿ ನೆಕ್ಕಿ ಗಿಡದ ಗೆಲ್ಲನ್ನು ಇಡುತ್ತಾರೆ. ಆ ಹೊತ್ತಿಗೆ ಶವಸಂಸ್ಕಾರಕ್ಕೆ ಹೋದ ಗಂಡಸರು ಸ್ನಾನ ಮಾಡಿ ಸೆಗಣಿ ನೀರನ್ನು ಮೈ ಮೇಲೆ ಮೂರು ಬಾರಿ ಹಾಕಿಕೊಂಡು, ಅಕ್ಕಿಯನ್ನು ದೀಪಕ್ಕೆ ಹಾಕಿ… ನಮಸ್ಕರಿಸಿ ಮನೆಯ ಒಳಗಡೆ ಬಂದು ನಂತರ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ಸ್ಮಶಾನಕ್ಕೆ ಹೋಗುವುದೊಂದನ್ನು ಬಿಟ್ಟು ಮಿಕ್ಕಂತೆ ಎಲ್ಲಾ ಕಾರ್ಯಗಳಲ್ಲೂ ಮಹಿಳೆಯ ಪಾಲಿದೆ.

ಆರ್ಥಿಕ ಬದುಕಿನ ಏರುಪೇರು

ಭೂಲೋಕದ ಸಕಲ ಜೀವರಾಶಿಗಳಿಗೆ ಮೊದಲು ಹೊಟ್ಟೆಯ ಚಿಂತೆ, ನಂತರ ಮಿಕ್ಕ ವಿಷಯಗಳತ್ತ ಗಮನ. ಅತಿ ಪ್ರಾಚೀನ ಕಾಲದಲ್ಲಿ ಒಡಲ ಹಸಿವನ್ನು ತಣಿಸಿಕೊಳ್ಳಲು ಪಶು-ಪಕ್ಷಿ ಮಾನವ ಎಲ್ಲರ ಬೇಟೆಯಾಡುತ್ತಿದ್ದರು. ಪ್ರಾಣಿಬೇಟೆ, ಗೆಡ್ಡೆ ಗೆಣಸುಗಳ ಭಕ್ಷಣೆ, ಸೊಪ್ಪು, ಸದೆಯ ತಿನ್ನುವಿಕೆ ಆಹಾರದ ಹಲವು ವಿಧಗಳು. ನಿಧಾನವಾಗಿ ತೊಗಟೆ / ಪ್ರಾಣಿ ಚರ್ಮಗಳಿಂದ ಮಾಡಿದ ಮೈ ಮುಚ್ಚನ್ನು ತಯಾರಿಸಿಕೊಂಡು ದೇಹವನ್ನು ರಕ್ಷಿಸಿಕೊಂಡ ಅವಿಷ್ಕಾರ ಈಗ ನಮಗೆ ಹಳೆಯದಾಗಿ ಕಾಣುತ್ತದೆ. ನಂತರ ಪ್ರಕೃತಿಯ ವೈಪರೀತ್ಯಗಳಿಂದ ಗವಿ  – ಗುಹೆಗಳಲ್ಲಿ ರಕ್ಷಣೆ ಕ್ರಮೇಣ ಅದರಲ್ಲಿಯೇ ವಾಸ. ಹೀಗಾದಾಗ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ನಿತ್ಯ ಕಾದಾಟ ನಡೆಯುತ್ತಿರಲೇಬೇಕು.

ಕಾಲ ಕಳೆದಂತೆ ಬೆಂಕಿ ಮತ್ತು ಚಕ್ರದ ಶೋಧನೆ ಮಾನವನ ಜೀವನದ ಬದಲಾವಣೆಗೆ ಚಾಲನೆ ನೀಡಿತೆನ್ನಬಹುದು. ಇಲ್ಲಿಂದ ಒಂದೆಡೆ ನಿಂತ. ವ್ಯವಸಾಯ ಮಾಡುವುದನ್ನು ಕಲಿತ. ಆಸ್ತಿಯನ್ನು ಕೂಡಿಸಿಡುವುದರಲ್ಲಿ ಗಮನ ಹರಿಸಿದಾಗ ಆರಂಭವಾಯಿತು ಮನುಜ ಲೋಕದ ಆರ್ಥಿಕ ಬದುಕಿನ ಏರುಪೇರು.

ಆರಂಭದಲ್ಲಿ ವ್ಯಕ್ತಿಗಳ ಶ್ರೀಮಂತಿಕೆಯನ್ನು ಗುರುತಿಸುತ್ತಿದ್ದುದು ಅವರಲ್ಲಿರುವ ಗೋಸಂಪತ್ತಿನ ಮೂಲಕ. ಮಹಾಭಾರತದಲ್ಲಿ ವಿರಾಟನ ಗೋಗ್ರಹಣ ಪ್ರಸಂಗ – ಬದುಕಿನ ಏರುಪೇರುಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಳ್ಳಬಹುದು. ಮುಂದೆ ಸಾಗಿದಂತೆ ಉಳ್ಳವರು ಇಲ್ಲದವರ ನಡುವಿನ ಅಂತರ ಕಂದಕವಾಗಿ ಬೆಳೆಯುತ್ತಲೇ ಹೋದ ವಿವರಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ. ಗುಲಾಮ, ಆಳು, ಸೇವಕ, ತೊತ್ತು, ಹೀಗೆ ಎಷ್ಟೊಂದು ಶಬ್ದಗಳು ಹೀನ ಜೀವಕ್ಕೆ ಅಡಿಪಾಯ ನಿರ್ಮಿಸಿತೆನ್ನಬಹುದು. ಒಂದು ಕಾಲದಲ್ಲಿ ಕಾಡಿನಲ್ಲೇ ಬದುಕುತ್ತಿದ್ದವರಿಗೆ ಉಳ್ಳವರ ಕಾಡಿನ ಒಡೆತನ ಇವರ ಮೇಲಿನ ದಬ್ಬಾಳಿಕೆಯಾಗಿ ಮಾರ್ಪಟಿದ್ದು. ಬದುಕು ದುಸ್ತರವಾಗಲು ಕಾರಣವಾಗಿದ್ದನ್ನು ಗಮನಿಸಬಹುದು.

ಈ ಹಿನ್ನೆಲೆಯಲ್ಲಿ ಮರಾಠಿಗಳ ಬದುಕಿನ ಏರು – ಪೇರು ಅವರ ವಲಸೆಯಿಂದ ಆರಂಭವಾಗುತ್ತದೆಂದು ಹೇಳಬಹುದಾಗಿದೆ. ಇಲ್ಲಿ ಅವರ ಮೂಲದಲ್ಲಿ ಜೀವಿಸುತ್ತಿದ್ದ ಕಾಲಕ್ಕಿಂತ ಯುದ್ಧ, ಮತಾಂತರ, ಬರಗಾಲ ಇವುಗಳಿಂದ ತಪ್ಪಿಸಿಕೊಂಡು ಹೇಗಾದರೂ ಬದುಕಿ ಉಳಿಯಬೇಕು ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಸಾರ ಸಮೇತ ಹೊರಟ ಇವರು ಕರ್ನಾಟಕದಲ್ಲಿ ನೆಲೆ ಕಂಡಾದ ಮೇಲೆ ಅವರುಗಳ ಆರ್ಥಿಕ ಬದುಕಿನ ಜಂಜಾಟವನ್ನು ಇಲ್ಲಿ ಮುಖ್ಯವಾಗಿ ಗಮನಿಸಲಾಗಿದೆ.

ಅತಂತ್ರ ಬದುಕಿಗೆ ನೆಲೆಯೊಂದನ್ನು ಅರಸುತ್ತಾ ಹೊರಟ ಮರಾಠಿ ಬುಡಕಟ್ಟಿನವರು ಪಶ್ಚಿಮ ಘಟ್ಟಗಳನ್ನು ಪ್ರವೇಶಿಸಿದಾಗ ಆಶ್ರಯ ಕೊಟ್ಟಿದ್ದು ಮಲೆ ಪ್ರದೇಶಗಳೇ. ನಾಡಿನವರು ಕಾಡಿನವರಾದರು. ಕಾಡಿನಲ್ಲಿ ಬದುಕುವಾಗ ಅಲ್ಲಿನ ಸಂಪತ್ತನ್ನೇ ಅಲಂಬಿಸಬೇಕಾದ ಅನಿವಾರ್ಯತೆ ಅವರ ಬದುಕಿನಲ್ಲಿ ತಲೆದೋರಿತೆನ್ನಬಹುದು. ಕಾಡಿನಲ್ಲಿ ದೊರೆಯುವ ಜೇನು, ಕಾಸರಕನ ಬೀಜ, ಧೂಪ, ಕಾಚು, ಅಂಬುವಾಳ, ಅರಗು, ಕಣಿಲೆ, ಸೀಗೆಕಾಯಿ, ಬಿದಿರು ಇವುಗಳನ್ನು ಅವಲಂಭಿಸಿದ ಮರಾಠಿಗರು ಕ್ರಮೇಣ ಇವುಗಳನ್ನು ಆಸುಪಾಸಿನ ಜನಕ್ಕೆ ವಿನಿಮಯ ಮಾಡಿಕೊಂಡಿರಬೇಕೆಂದು ಊಹಿಸಬಹುದಾಗಿದೆ. ಆ ಕಾಲದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಬಿದಿರು ಇವರಲ್ಲಿ ಬುಟ್ಟಿ ಇತ್ಯಾದಿಗಳನ್ನು ತಯಾರಿಸುವ ಮಾರುವ ಕೆಲಸಕ್ಕೆ ಪ್ರೇರೇಪಿಸಿರಲೇಬೇಕೆಂದು ಹೇಳಬಹುದು. ಇದರಲ್ಲಿ ಮುಖ್ಯವಾಗುವುದು ಬುಟ್ಟಿಗಳ ತಯಾರಿಕೆ ತೆಂಗಿನ ಗೆಂಟೆಯಿಂದ ತಯಾರಿಸುವ ವಿವಿಧ ರೀತಿಯ ಪರಿಕರಗಳು, ಹಾಗೆಯೇ ತೆಂಗಿನ ಗರಿಯಿಂದ ತಯಾರಾಗುವ ತಟ್ಟೆಗಳು, ಮಳೆಗಾಲಕ್ಕೆಂದೇ ತಯಾರಾದ ಗೊರಬುಗಳು, ಛತ್ರಿಗಳು ಹೀಗೇ ಮರಾಠಿಗರ ಆರ್ಥಿಕ ಜೀವನಕ್ಕೆ ಸ್ವಲ್ಪ ಮಟ್ಟಿಗೆ  ಸಹಾಯಕವಾಯಿತೆನ್ನಬಹುದು.

ಕಾಡಿನ ಉತ್ಪನ್ನಗಳ ಸಂಗ್ರಹ, ಕೂಲಿಕೆಲಸ, ಕುಮ್ರಿ ಬೇಸಾಯ, ನಾಟಿ ವೈದ್ಯ, ಬೇಟೆ, ಮೀನು ಹಿಡಿಯುವುದು ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಮಹಿಳೆಯ ಪಾತ್ರ ಬಹು ಗಮನಾರ್ಹವಾದದ್ದು. ಗಂಡು ಬೇಟೆಗೆ ಹೋದಾಗ ಹೆಣ್ಣು ಬೇಸಾಯ ಪದ್ಧತಿಯ ಆವಿಷ್ಕಾರಕ್ಕೆ ಕಾರಣಳಾಗಿರಬೇಕು. ಹಾಗೆಯೇ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಲ್ಲಿ ಹಾಗೂ ಅವುಗಳು ಕೆಡದಂತೆ ಸಂಗ್ರಹಿಸುವ ರಕ್ಷಿಸುವ ಹಂತದಲ್ಲಿ ಹೆಣ್ಣಿನಿಂದಲೇ ಮಡಿಕೆ ಕುಡಿಕೆಗಳ ತಯಾರಿಕಾ ಪ್ರಯತ್ನಗಳ ಆರಂಭವಾಗಿರಬೇಕು. ಇದರಿಂದ ಹೆಣ್ಣಿನ ಪಾತ್ರ ಎಷ್ಟು  ಪ್ರಮುಖವಾದದ್ದು ಎಂದು ತಿಳಿಯುತ್ತದೆ. ಈ ರೀತಿಯ ರಕ್ಷಣೆಯ ಸಂಗ್ರಹ ಇವಳಲ್ಲಿ ಜಾಗೃತಗೊಂಡು ಅನುಷ್ಠಾನಕ್ಕೆ ಬಂದಿದ್ದರಿಂದ ಮನುಜನ ಆರ್ಥಿಕ ಚಟುವಟಿಕೆಯ ಆರಂಭದ ಹಂತದ ಉದಯಕ್ಕೂ ಕಾರಣಳಾಗಿದ್ದಾಳೆ. ಆದರಿಂದಲೇ ಮರಾಠಿ ನಾಯ್ಕರಲ್ಲಿ ಮಾತೃದೇವತಾ ಆರಾಧನೆ ಮುಖ್ಯವಾಗಿದೆ. ’ಮಕ್ಕಳನ್ನು ಹೆರುವ ಮತ್ತು ಸಾಕುವ ಅವಳ ಶಕ್ತಿಗಾಗಿಯೇ ಅವಳನ್ನು  ಉತ್ತುಂಗ ಸ್ಥಾನದಲ್ಲಿಟ್ಟು ಗೌರವಿಸುತ್ತಾ ಬರಲಾಗಿದೆ. ಈ ಸಾಮರ್ಥ್ಯವೇ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೂ ಕಾರಣವಾಗಿದೆ’ ಎಂದು ಹೇಳಬಹುದು.

ಮರಾಠ ಮಹಿಳೆಯರು ಈಗ ಮನೆಯೊಳಗೆ ಕುಳಿತು ಬೀಡಿ ಕಟ್ಟುವ, ಬಟ್ಟೆ ಹೊಲೆಯುವ, ಕೂಲಿ ಕೆಲಸ ಮಾಡುತ್ತಾರೆ. ತಮ್ಮನ್ನು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲ ಬೇಟೆಯ ಬದುಕಿನ ವೃತ್ತಿಗಳನ್ನು ಮರೆತು ಆಧುನಿಕ ಬದುಕಿಗೆ ತೆರೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ನೆಲೆನಿಂತ ಪ್ರದೇಶದ ತುಳುಭಾಷೆಯ ಪ್ರಭಾವ, ಮರಾಠಿ ಭಾಷೆಯ ಹಿನ್ನೆಡೆ ತಮ್ಮೆಲ್ಲ ಮೂಲ ಕೆಲಸ ಕಾರ್ಯಗಳೆಲ್ಲ ಮರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.