ಆರಂಭದ ಹೆಜ್ಜೆಗಳು

’ನಾಗರೀಕ ಸಮಾಜಗಳಿಂದ ದೂರವಾಗಿ… ತಮ್ಮನ್ನು ಇರಿಸಿಕೊಂಡು, ಅವರಿಗಿಂತ ಭಿನ್ನವಾದ ಪ್ರತ್ಯೇಕವಾದ ಜೀವನ ಕ್ರಮವನ್ನು ರೂಢಿಸಿಕೊಂಡು ಬದುಕುತ್ತಾ.. ತಮ್ಮ ಅನನ್ಯವಾದ ವಿಶಿಷ್ಟವಾದ ಸಾಂಸ್ಕೃತಿಕ ಮೌಲ್ಯಗಳನ್ನು ಇಂದಿನವರೆಗೂ ಜೀವಂತವಾಗಿ ಉಳಿಸಿಕೊಂಡು ಬಂದಿರುವ ಒಂದು ಗುಂಪಿನ ಅಥವಾ ಒಂದು ಸಮುದಾಯದ ಜನರನ್ನು ’ಬುಡಕಟ್ಟು’ ಎಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ‘ಈ ರೀತಿಯಲ್ಲಿ ಮಾನವ ಜನಾಂಗವೊಂದು ಗುರುತಿಸಲ್ಪಡಬೇಕಾದರೆ, ಅದರದೇ ಆದ ಕೆಲವು ವಿಶಿಷ್ಟ ಜೀವನ ಕ್ರಮಗಳು ವಿಶಿಷ್ಟವಾದ ಆಚರಣೆ, ಸಂಪ್ರದಾಯ, ಆಹಾರ ಪದ್ಧತಿ’ ಎಲ್ಲವು ಅವರ ಬದುಕಿನಲ್ಲಿ ಮಿಳಿತವಾಗಿರುವುದನ್ನು ಗಮನಿಸಬೇಕಾಗುತ್ತದೆ.

ತಮ್ಮದೇ ಆದ ಭಾಷೆಯನ್ನು ಬಳಸುತ್ತಾ ಏಕರೂಪದ ಸಾಮಾಜಿಕ ಸಂಘಟನೆಯ ನಿಯಮಗಳನ್ನು ಪಾಲಿಸುತ್ತ ಸಮಾನ ಉದ್ದೇಶಕ್ಕಾಗಿ ಒಟ್ಟಿಗೆ ದುಡಿಯುತ್ತಾ ಇರುವ  ಜನ ಸಮುದಾಯವೇ ’ಬುಡಕಟ್ಟು’ ಒಂದೇ ರೀತಿಯ ಹೆಸರು, ಕಿರು ವ್ಯಾಪ್ತಿಯ ವಾಸ ಪ್ರದೇಶ, ಏಕರೂಪಿನ ಸಂಸ್ಕೃತಿ ಅಥವಾ ಜೀವನ ವಿಧಾನ, ಏಕವಾಂಶಿಕ ಪರಂಪರೆ ಇವು ಅವರ ಇತರ ಲಕ್ಷಣಗಳು.

ಒಂದೇ ವಾಸಪ್ರದೇಶವನ್ನು ಹೊಂದಿ, ಏಕರೂಪದ ಪದ್ಧತಿಗಳನ್ನು ಅನುಸರಿಸುತ್ತಾ ನಾಡಿನ ಸಮಾಜದ ಭಾಗವಾಗದೆ ಪ್ರತ್ಯೇಕವಾಗಿರುವ ಜನರ ಯಾವುದೇ ಗುಂಪಿಗೆ ಈ ಪದವನ್ನು ಅನ್ವಯಿಸಬಹುದು.

ಇಂತಹ ಬುಡಕಟ್ಟು ಸಂಸ್ಕೃತಿ ಆದಿಮ ಕಾಲದಲ್ಲಿ ಭೂ ಪ್ರದೇಶದ ಎಲ್ಲಾ ಭಾಗಗಳಲ್ಲೂ ಇದ್ದಿರಲೇಬೇಕು. ಈ ಬುಡಕಟ್ಟು ಜನಾಂಗದ ಅಥವಾ ವಿಸ್ತಾರವಾಗಿ ಹೇಳಬಹುದಾದರೆ, ಮನುಜನ ಬದುಕಿನ ಕಾಲಘಟ್ಟಗಳಲ್ಲಿ ಬಹು ಮುಖ್ಯವಾದ ಜೀವನಕ್ರಮವೆಂದರೆ, ತನಗೆ ಬೇಕಾದ ಆಹಾರವನ್ನು ಸಂಗ್ರಹಿಸುವ ಪ್ರವೃತ್ತಿ, ನಂತರ ತನಗೆ ಬೇಕಾದ ಆಹಾರವನ್ನು ತನಗೆ ಬೇಕಾದಂತೆ ತಯಾರಿಸಿ ಉತ್ಪಾದಿಸುವ ಕ್ರಿಯೆ.

ಮೊದಲ ಹಂತದಲ್ಲಿ ಅಂದರೆ ಆಹಾರದ ಸಂಚಯನದ ಕಾಲದಲ್ಲಿ ಮನುಜ ಇನ್ನು ಅಲೆಮಾರಿಯಾಗಿ ಕಾನಾಡಿಯಾಗಿದ್ದವನು. ಆ ಜೀವಿತದ ಅವಧಿಯಲ್ಲಿ  ಅಲೆದಾಟದಲ್ಲೇ ಬದುಕಿದ್ದವರನು. ಆದರೆ ಆಹಾರದ ತಯಾರಿಕೆ ಉತ್ಪಾದನೆಯ  ಹೊತ್ತಿಗೆ ಮನುಷ್ಯ ಒಂದು ಕಡೆ ನೆಲಯೂರಿದ್ದರು. ಇದರೊಂದಿಗೆ ನಿಧಾನವಾಗಿ ನಾಗರೀಕ ಬದುಕಿಗೆ ಮುಖ ಮಾಡುತ್ತಿದ್ದ ಆಳಘಟ್ಟ ಒಕ್ಕಲು ಹೂಡಿ, ಕುಲಗಳನ್ನು ಕಟ್ಟಿಕೊಂಡು ಊರನ್ನು ನಿರ್ಮಿಸಿ ನಾಡು ಮಾಡಿದ್ದು ಇಂತಹ ಸನ್ನಿವೇಶದಲ್ಲೇ ಈ ಬಗ್ಗೆ ಶಂಬಾ ಹೇಳುವಂತೆ ಜನಾಂಗವೆಂಬುದು ಜಾತಿಧರ್ಮಗಳಿಂದ ಭಿನ್ನವಾದುದು. ಜನಾಂಗವೆಂದರೆ ಸಾಮಾನ್ಯವಾಗಿ ತೀರ ಆರಂಭ ಕಾಲದಲ್ಲಿ ಒಟ್ಟಿಗೆ ಇದ್ದು ಬೆಳೆದ ಒಂದು ಮನುಷ್ಯ ಸಮಾಜ.

ಈ ಹಿನ್ನೆಲೆಯಲ್ಲಿ ದ್ರಾವಿಡ ಜನಾಂಗ ಎಂಬ ಪದವನ್ನು ’ಹಟ್ಟಿಕಾರ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶಂಬಾ ಗುರುತಿಸಿರುವುದನ್ನು ಗಮನಿಸಬಹುದು. ವೇದದಲ್ಲಿ ಬರುವ ’ಪತ್ತಿ ’ಎಂಬ ಪದವು ಮೂಲತಃ ಪಟ್ಟಿಯಿಂದ ಬಂದದ್ದು. ಪಟ್ಟಿ ಹಟ್ಟಿ ಪಟ್ಟಿಕಾರರು ಹಟ್ಟಿಕಾರರು ಈ ಸಾಮ್ಯತೆಯಿಂದ ಆಯಾಯ ಜನಾಂಗದ ಒಕ್ಕಲು ನೆಲೆಯನ್ನು ತಿಳಿಯಲು ನೆರವಾಗುವ ರೀತಿಯನ್ನು ಶಂಬಾ ತೋರಿಸಿಕೊಟ್ಟಿರುವುದನ್ನು ಗಮನಿಸಬಹುದಾಗಿದೆ.

ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾದ ವಿವರಗಳೆಂದರೆ ಶಂಬಾರವರ ವಿಚಾರ ಧಾರೆಗಳು. ಈ ಧಾರೆಯಲ್ಲಿ ಮಲೆಯ ಬೆಟ್ಟ ನಾಡು ಮೊಳವದಿಂದ ಮರಹಟ್ಟಿ ನಾಡು ಮರಹಾಟವು ಮಹಾರಾಷ್ಟ್ರವಾಯಿತೆಂಬುದು ಪ್ರಮುಖವಾದದ್ದು. ಇದಕ್ಕೆ ಪೂರಕವಾಗಿ ಶಂಬಾರವರು ಹೇಳುವಂತೆ… ’ಆರ್ಯರು ಇಲ್ಲಿ ಬರುವ ಮೊದಲು ಬಾಳುತ್ತಿದ್ದವರು ಕನ್ನಡರು ಮತ್ತು ತಮಿಳರು ಮಾತ್ರ. ಕ್ರಿ.ಶ. ೨ನೇ ಶತಮಾನದಲ್ಲಿ ’ಕೆಂಗುಟ್ಟವನ್’ ಎಂಬ ಚೇರರಾಜನು ಉತ್ತರ ದಿಕ್ಕಿಗೆ ಹೋಗುವಾಗ ನೀಲಗಿರಿಯಲ್ಲಿ ತಂಗಿ ಕನ್ನಡರು ಆಡಿದ ಕುಣಿತವನ್ನು ನೋಡಿ ಸಂತಸಪಟ್ಟನೆಂದು ’ಶಿಲಪ್ಪದಿಕಾರಂ’ ಎಂಬ ತಮಿಳು ಗ್ರಂಥದಲ್ಲಿದೆ ಎಂದು ಗುರುತಿಸಿದ್ದಾರೆ. ಹಾಗೆಯೇ ೨ನೇ ಶತಮಾನದಲ್ಲಿ ಕನ್ನಡರು ನೀಲಗಿರಿಯವರೆಗೆ ಹಬ್ಬಿದ್ದರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕರ್ಣಾಟ ಮಹಾಮಂಡಳದ ದಕ್ಷಿಣದ ತುದಿ ನೀಲಗಿರಿ. ಇನ್ನೊಂದು ದಾಖಲೆಯ ಪ್ರಕಾರ… ಪುಲಕೇಶಿಯ ಕಾಲಕ್ಕೆ ಬಾದಾಮಿಯು ಮಹಾರಾಷ್ಟ್ರದ ರಾಜಧಾನಿಯಾಗಿತ್ತು ! ಆ ಸಂದರ್ಭದಲ್ಲಿ ಕರ್ನಾಟಕದ ಮುಖ್ಯವಾಗಿ ಭಾರತಕ್ಕೆ ಬಂದಿದ್ದ ಹ್ಯೂಯೆನ್ ತ್ಸಾಂಗ.. ತನ್ನ ಪ್ರವಾಸ ಕಥನದಲ್ಲಿ… ಅತ್ಯಂತ ವಿಸ್ತಾರವಾದ ಮಹಾರಾಷ್ಟ್ರದ ವೈಭವಶಾಲಿಯಾದ ರಾಜಧಾನಿ ಬಾದಾಮಿ ಎಂದು ಉಲ್ಲೇಖಿಸಿದ್ದಾನೆ. ಇದಕ್ಕೆ ಮತ್ತೊಂದು ಸೇರ್ಪಡೆ ಜನ್ನನ ಅನಂತನಾಥ ಪುರಾಣ. ಈ ಕಾವ್ಯದಲ್ಲಿ ಜೈನಧರ್ಮ ಹೇಗೆ ಹರಡಿತು ಎಂಬುದಕ್ಕೆ ಜನ್ನ ಕಾಲ ಕ್ರಿ.ಶ. ೧೨೦೯ರ ಈ ಕೃತಿಯಲ್ಲಿರುವ ಅಂಶಗಳನ್ನು ಗಮನಿಸಬಹುದು.

’ಜೈನ ಸದ್ಧರ್ಮಷೀಯೂಷ ಪ್ರವಾಹಂ ವಂಗ ಮಂಡಳದೊಳ್ ತರಂಗಗೋಂಡು ಕಳಿಂಗ ಮಂಡಳದೊಳ್ ಮಡುಗಟ್ಟಿನಿಂದು ಮಹಾರಾಷ್ಟ್ರ ಮಂಡಳದೊಳ್ ಅಟ್ಟುಂಬರಿವರಿದು ಮಲಯ ಮಂಡಳದೊಳ್ ವೇಳೆಗೊಂಡು ನೆಲಸಿ ಗುಜ್ಜರ ಮಂಡಳದೊಳ್ ಜಜ್ಜರಂ ಬರಿದು ಮರು ಮಂಡಳದೊಳ್ ಮಾರವಾಡದೇಶ ಪರೆಪ್ಸವಡೆದು’ ಹಾಗಿದ್ದ ಮೇಲೆ ಕರ್ನಾಟಕವೇ ಮಹಾರಾಷ್ಟ್ರ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಕನ್ನಡ ಕುರುಂಬನ ಮರ‍್ಹಾಟಿಯಾದಾಗ ಕುಣಬಿಯಾಗುತ್ತಾನೆ. ಅಂದರೆ ’ಕುರಿಗಾರಿಕೆಯನ್ನು ಬಿಟ್ಟು ಕುಳನಾಗಿ, ಒಕ್ಕಲನಾಗಿ ನಿಂತು ಹೊಲಮನೆ ಮಾಡಿಕೊಂಡ ಮೇಲೆ ಕುರುಂಬನು ಮಹಾರಾ‌ಷ್ಟ್ರದಲ್ಲಿ ಕುಣಬಿಯಾದನು’ ಎಂಬುದನ್ನು ಶಂಬಾರವರು ಗುರುತಿಸಿದ್ದಾರೆ. ’ಕುಣಬಿ ಮಾಜಲ ಮರ‍್ಹಾಟಾ ಚಾಹಲಾ ಕುಣಬಿಯು ಮಲೆತು ಮರ‍್ಹಾಟನಾದ ’.

ಇದೇ ರೀತಿ  ಕನ್ನಡ ಕುರುಬನ ಮರ‍್ಹಾಟಿ ಹೆಸರು ಧನಗರ.  ಕುರಿಗಾರಿಕೆಯನ್ನು ಬಿಟ್ಟು ದನಕರುಗಳನ್ನು ಸಾಕಲಾರಂಭಿಸಿದ ಮೇಲೆ ಕುರುಬನು ತುರುಕಾರನಾದ. ಗೋಧನ ಉಳ್ಳವನು ಧನಕರನಾದನು. ಕನ್ನಡರಿಗೆ ದನಗಳೇ ಧನ. ಧನಗರ ಶಬ್ದಕ್ಕೆ ಮರ‍್ಹಾಟಿಯಲ್ಲಿ ಕುರುಬನೆಂಬ ಅರ್ಥವಿದೆ. ಇಲ್ಲಿನ ಗೊರವ ಮಹಾರಾಷ್ಟ್ರದಲ್ಲಿ ಗುರುವ. ಇಲ್ಲಿನ  ಕೊಮ್ಮಟಿಗ ಅಲ್ಲಿ ಕೋಮಟಿ. ’ಮರ‍್ಹಾಟರು ತಮ್ಮ ವರ್ಗದ ಹೊರತು ಹೊರಗಿನವರೊಡನೆ ಈಗಲೂ ಮದುವೆ ಮಾಡಿಕೊಳ್ಳುತ್ತಿರುವ ಸಂಪ್ರದಾಯವುಳ್ಳ ಜಾತಿಗಳು ಎಂದರೆ, ಕುಣಬಿ ಮತ್ತು ಧನಗರ’ ಈ ವಿಷಯವನ್ನು ಲೋಕ ಮಾನ್ಯ ತಿಲಕರು ಉಲ್ಲೇಖಿಸಿದ್ದಾರೆ. ’ಮಹಾರಾಷ್ಟ್ರ ಅಣಿ ಕರ್ನಾಟಕ ನಿರಾಳೇ ನನ್ಹೇತದೋಧಾಂಮ ಧೈಹೀ ಏಕಚರಕ್ತ/ಖೇಳತ ಅಹೇ ಧೋಆಂಚೀ ಭಾ ಏಕಚ ಮ್ಹಣಜೇ ಕಾನಡೀ ಹೀ ಹೊತಿ’.

ಇಂಥ ಉಲ್ಲೇಖಗಳನ್ನು ಹಲವಾರು ಕೃತಿಗಳಲ್ಲೂ ಗಮನಿಸಬಹುದು. ಕ್ರಿ.ಶ. ಆರಂಭದಲ್ಲಿದ್ದ ವರರುಚಿಯ ವ್ಯಾಕರಣ ಗ್ರಂಥದಲ್ಲಿ ’ಮಹಾರಾಷ್ಟ್ರ’ ಎಂಬ ಪದದ ಉಲ್ಲೇಖವಿದೆ. ೫ನೇ ಶತಮಾನದ ಬೌದ್ಧಗ್ರಂಥ ಮಹಾವಂಸೋ, ೬ನೇ ಶತಮಾನದಲ್ಲಿದ್ದ ವರಾಹಮಿಹಿರನ ಬೃಹತ್ ಸಂಹಿತೆಯಲ್ಲಿ ದಾಖಲೆಯಿದೆ. ಹಾಗೆಯೇ ಕೆಲವು ಶಾಸನಗಳಲೂ ಇದರ ಉಲ್ಲೇಖವಿದೆ. ಉದಾಹರಣೆಗೆ ೭ನೇ ಶತಮಾನದಲ್ಲಿದ್ದ ಬಾದಾಮಿ ಪುಲಿಕೇಶಿಯ ದಿಗ್ವಿಜಯವನ್ನು ಸಾರುವ ಐಹೊಳೆ ಶಿಲಾಶಾಸನದಲ್ಲಿ ಈ ಶಬ್ದ ಕಂಡು ಬರುತ್ತದೆ.

ಇನ್ನೊಂದು ಗಮನಾರ್ಹವಾದ ವಿಚಾರವೆಂದರೆ ಕನ್ನಡ ಅನೇಕ ಧಾತುಗಳು ಮರಾಟಿಯಲ್ಲಿವೆ. ಉದಾ.

ಒಪ್ ದೇಣೇ – ಒಪ್ಪಹಾಕು
ಗುದ್ದಾದೇಣೇ – ಗುದ್ದು ಆಕು
ಕೀಸಕಾಡಣೆ – ಸಣ್ಣಗೆ ಮಾಡು
ಧಂಡ ಹೋಣೆ – ತಣಿ
ಚವಸಾಹಣೆ – ಸವಿ
ಬಿಕಟಕರಣೆ – ಬಿಗಿಕಟ್ಟು

ಒಟ್ಟಿನಲ್ಲಿ ಕರ್ಣಾಟ ಮತ್ತು ಮಹಾರಾಷ್ಟ್ರದ ನಿರ್ಮಾಣಕ್ಕೆ ಕಾರಣರಾದವರು ಒಂದೇ ಜನಾಂಗಕ್ಕೆ ಸೇರಿದವರೆಂದು ಹೇಳಬಹುದಾಗಿದೆ.

ಸಾಗಿ ಬಂದ ದಾರಿ

ಯುದ್ಧ ಮತ್ತು ಅದರ ನೆರಳಿನಲ್ಲೇ ಬದುಕಬೇಕಾದ ಅನಿವಾರ್ಯತೆಯಿಂದ ಮರಾಠಿಗರ ಜೀವನದ ಎಲ್ಲವೂ ನಲುಗಿ ಹೋದ ಅಂಶವನ್ನು ಗುರುತಿಸಬಹುದಾಗಿದೆ. ಇದು ಕೂಡಾ ಮರಾಠಿಗರ ವಲಸೆಗೆ ಕಾರಣವಾಗಿದೆ  ಎನ್ನಬಹುದು. ಇವರು ರತ್ನಗಿರಿಯಿಂದ ಹೊರಟು ಕಾರವಾರ ಮತ್ತು ಗೋವಾ ಪ್ರದೇಶಗಳಿಗೆ ಬಂದವರು. ಅಲ್ಲೇ ತಮ್ಮ ಬದುಕನ್ನು ಕಂಡುಕೊಂಡರು. ಆದರೆ ಇವರಿಗೆ ಇಲ್ಲಿಯೂ ಉಳಿಗಾಲವಿಲ್ಲದ ಪರಿಸ್ಥಿತಿಯೊಂದು ನಿರ್ಮಾಣವಾದದ್ದು ಪೋರ್ಚುಗೀಸರಿಂದ ಹಾಗೂ ಡಚ್ಚರಿಂದ. ಇದರೊಂದಿಗೆ ಮತಾಂತರದ ಪಿಡುಗು. ಇವರಿಂದ ತಪ್ಪಿಸಿಕೊಳ್ಳಲು ಅನೇಕರು ಕರಾವಳಿ ತೀರದ ಮುಖಾಂತರ ಪ್ರಯಾಣ ಮಾಡಿ ತುಳುನಾಡನ್ನು ಪ್ರವೇಶಿಸಿದ ಅಂಶವನ್ನು ಗಮನಿಸಬಹುದು. ಇದರೊಂದಿಗೆ ಉಲ್ಲೇಖಿಸಬಹುದಾದ ಮತ್ತೊಂದು ವಿಷಯವೆಂದರೆ, ಪೇಶ್ವೆ ಬಾಜೀರಾಯನ ಕಾಲದಲ್ಲಿ ಅಂದರೆ ಸುಮಾರು ೧೭೨೬ರಲ್ಲ ಹೊತ್ತಿಗೆ ಶ್ರೀರಂಗಪಟ್ಣಣಕ್ಕೆ ಮುತ್ತಿಗೆ ಹಾಕಿದ ಘಟನಾವಳಿಗಳು. ಇಂತಹ ಸನ್ನಿವೇಶದಲ್ಲಿ ಮತ್ತೆ ಮರಾಠಿಗರು ಕಷ್ಟಗಳ ಪರಂಪರೆಗೆ ಸಿಕ್ಕಿಕೊಂಡರೆಂಬುದನ್ನು ಇಲ್ಲಿ ಗುರುತಿಸಹುದಾಗಿದೆ. ಜೀವನೋಪಾಯಕ್ಕಾಗಿ ಕರಾವಳಿಯ ಪ್ರದೇಶಗಳಿಗೆ ವಲಸೆ ಬಂದರು. ಒಟ್ಟಾರೆ ಹೇಳುವುದಾದರೆ ಶಿವಾಜಿ ಮಹಾರಾಜ ಮತ್ತು ಪೇಶ್ವೆಗಳ ಆಳ್ವಿಕೆಯಲ್ಲಿ ಮರಾಟಿಗರು ಗುಳೆ ಬರುವುದು ಅನಿವಾರ್ಯವಾಯಿತು. ವಲಸೆ ಬಂದವರೆಲ್ಲ ಕರಾವಳಿಯಲ್ಲಿ ನೆಲೆಸಿದರು. ಇದರಿಂದಾಗಿ ಮರಾಠಿಗರು ಇಲ್ಲಿ ಮೂಲ ನಿವಾಸಿಗಳಲ್ಲ, ವಲಸೆ ಬಂದು ವಲಸಿಗರು ಎಂದು ಗುರುತಿಸುವಂತಾಗಿದೆ.

ಈ ಅಂಶಗಳಿಗೆ ಇಂಬುಗೊಡುವ ಮತ್ತೊಂದು ಸಂಗತಿಯೆಂದರೆ, ತಮಿಳುನಾಡಿನ ಪಾಡ್ದನಗಳಲ್ಲಿ, ಪುರಾಣಗಳಲ್ಲಿ, ಕೊರಗ, ನಲ್ಕೆ, ಪರವ, ಪಂಬದ ಮುಂತಾದ ಜಾತಿಗಳು ಹಾಗೆಯೇ ಇತರ ಮೇಲು ಜಾತಿಗಳು, ಅವರ ವೃತ್ತಿ ಇತ್ಯಾದಿಗಳ ಉಲ್ಲೇಖವಿದೆಯೇ ಹೊರತು ಎಲ್ಲೂ ಮರಾಠಿಗಳ ಬಗ್ಗೆ ಉಲ್ಲೇಖವಿಲ್ಲ. ಇದು ಕೂಡಾ ಮರಾಠಿಗರು ವಲಸಿಗರು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಮಹಾರಾಷ್ಟ್ರದ ಪ್ರದೇಶಗಳಿಂದ ಗುಳೆ ಹೊರಟ ಮರಾಠಿಗರು ವಿಂದ್ಯಾ ಪರ್ವತ ಶ್ರೇಣಿಗಳ ಮೂಲಕ  ಪಶ್ಚಿಮ ಘಟ್ಟದ ಪ್ರದೇಶಗಳನ್ನು ತಲುಪಿದರೆನ್ನಬಹುದು. ಅಲ್ಲಿನ ಸಮೃದ್ಧಿ, ಪ್ರಶಾಂತತೆ ನೆಲೆಗಳು ಮರಾಠಿಗರಿಗೆ ಬದುಕುಕೊಟ್ಟಿತು. ಕೆಲವರಾದರು ಗುಡ್ಡ ಕಾಡುಗಳಲ್ಲಿ ನೆಲೆ ನಿಂತರು. ಬದುಕಿನ ನಿರ್ವಹಣೆಗಾಗಿ ’ಕುಮ್ರಿ’

ಬೇಸಾಯ ಮಾಡಲು ತೊಡಗಿದರು. ಇದರಿಂದ ಈ ಮರಾಠಿಗರಿಗೆ ’ಕುಮೇರಿ ಮರಾಠಿ’ ಗರೆಂದು ಹೆಸರು ಬರಲು ಕಾರಣವಾಯಿತೆನ್ನಬಹುದು. ಮುಂದೆ ಪಂಡರಾಪುರ, ಸತಾರ, ಬಿಜಾಪುರ, ಬೆಳಗಾವಿ, ಹಳಿಯಾಳ, ಸಿರ್ಸಿಯ ದಾರಿಯಾಗಿ ದಕ್ಷಿಣ ಕನ್ನಡಕ್ಕೆ ಬಂದು ನೆಲೆಸಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿರುವುದು ಸಮಂಜಸವಾಗಿದೆ.

ಈ ವಲಸಿಗರ ಭಾಷೆ ಕೊಂಕಣಿ ಮಿಶ್ರಿತ ಮರಾಠಿ. ಈ ಪ್ರದೇಶಗಳಲ್ಲಿ ತಮ್ಮ ಗುರುತನ್ನು ಹೇಳಿಕೊಳ್ಳುವಾಗ ತಾವು ಮೂಲತಃ ಕ್ಷತ್ರಿಯರೆಂದು ಹೇಳಿಕೊಳ್ಳುತ್ತಾರೆ. ಜೊತೆಗೆ ಗುರುತಿಸಬಹುದಾದ ಮತ್ತೊಂದು ವಿಚಾರವೆಂದರೆ ಇವರಲ್ಲಿಯೇ ಮತ್ತೆ ಎರಡು ಪಂಗಡಗಳಿರುವುದನ್ನು ಕಾಣಬಹುದು.

೧. ಮರಾಠಿ ಬ್ರಾಹ್ಮಣರು

೨. ಬ್ರಾಹ್ಮಣೇತರರು

ಇವರಲ್ಲಿ ಬ್ರಾಹ್ಮಣೇತರರು ಕುಮ್ರಿ ಬೇಸಾಯ ಮಾಡುತ್ತಾ ಉಪ ಕಸುಬುಗಳಾಗಿ ಮರದ ಕೆಲಸ, ಬೇಟೆಯಾಡುವುದು, ಜೇನು ಸಂಗ್ರಹಣೆ, ಬುಟ್ಟಿ ಹೆಣೆಯುವುದು, ನಾಟಿವೈದ್ಯ ಮುಂತಾದ ಉಪ ವೃತ್ತಿಗಳನ್ನು ಮಾಡುತ್ತಿರುವುದುನ್ನು ಕಾಣಬಹುದಾಗಿದೆ. ಮತ್ತೆ ಕೆಲವು ಕುಟುಂಬಗಳು ಉಡುಪಿ, ಕೊಡಗು ಜಿಲ್ಲೆ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡು, ಮೈಸೂರು, ಬೆಳಗಾಂ, ಗುಲ್ಬರ್ಗ ಮುಂತಾದ ಪ್ರದೇಶಗಳಲ್ಲಿ ನೆಲೆಸಿರುವುದು ಅಂಕಿಅಂಶಗಳಿಂದ ತಿಳಿದುಕೊಳ್ಳಬಹುದು.

ಈ ವಲಸೆಯ ಹಿನ್ನೆಲೆಯ ಗಮನಾರ್ಹವಾದದೆಂದರೆ, ವಲಸೆ ಬಂದ ಮರಾಠಿಗರು ತಾವು ಯಾವ ಯಾವ ಪ್ರದೇಶಗಳಲ್ಲಿ ನಿಂತರೋ ಆ ನೆಲೆಯ, ಮಣ್ಣಿನ ಸಂಸ್ಕೃತಿಯನ್ನು ತಮ್ಮದನ್ನಾಗಿಸಿಕೊಂಡರು. ಕೆಲವು ವಿಶಿಷ್ಟ ಸಂಪ್ರದಾಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಅಷ್ಟೇ ಗಮನಾರ್ಹವಾದದ್ದು. ಇವರು ಭಾಷೆ, ವೇಷಭೂಷಣ, ಅಲಂಕಾರದ ಚಿಹ್ನೆಗಳು, ಧಾರ್ಮಿಕತೆ, ಆಚಾರ – ವಿಚಾರ, ಸಂಪ್ರದಾಯ, ಹಾಡು, ಕುಣಿತ ಮುಂತಾದವುಗಳಲ್ಲಿ ವಿಶಿಷ್ಟರಾಗಿರುವುದನ್ನು ಗುರುತಿಸಬಹುದಾಗಿದೆ.

ಮರಾಠಿಗಳ ಜೀವನ ಚಕ್ರ ಮೂಲ ನೆಲೆಯಿಂದ ವಲಸೆ ಹೊರಟು, ಹೋದ ಕಡೆ ನೆಲೆ ನಿಂತು ಅಲ್ಲಿನ ಮೂಲರು ಎಂದು ಕರೆಸಿಕೊಕಂಡು ಮತ್ತೆ ವಲಸೆ ಹೊರಟು ಹಿಂದೊಂದು ದಿನ ಇದ್ದ ಜಾಗಕ್ಕೆ ತಲುಪಿದಾಗ, ಅಲ್ಲಿಗೆ ಅಪರಿಚಿತರಾಗಿ ಮಗದೊಮ್ಮೆ ಈ ನೆಲದಲ್ಲಿ ಒಂದಾಗುತ್ತಾ ಸಾಗುತ್ತಿರುವ ಬದುಕಿನ ಚಕ್ರಗತಿಯನ್ನು ಗುರುತಿಸಬಹುದು.

ಮಹಿಳೆ : ಜೀವನ ಚಕ್ರಗತಿ

ವಿಶ್ವದ ಎಲ್ಲಾ ದೇಶಗಳಲ್ಲಿ, ಇತಿಹಾಸದ ಎಲ್ಲಾ ಕಾಲಘಟ್ಟಗಳಲ್ಲಿ, ಮೊದಲ ಸ್ಥಾನದಲ್ಲಿ ನಿಲ್ಲುವ ಸಂಸ್ಥೇ ಕುಟುಂಬ. ಪಶು – ಪಕ್ಷಿಗಳ ಸಂತಾನಕ್ಕೆ ಹೆಚ್ಚು ಕಾಲ ಪೋಷಣೆಯಾಗಲಿ ಅಥವಾ ರಕ್ಷಣೆಯಾಗಲಿ ಬೇಕಾಗಿಲ್ಲ. ಆದರೆ ಮನುಜ ಶಿಶುವಿಗೆ ಇತರೆ ಎಲ್ಲಾ ಜೀವರಾಶಿಗಿಂತ ಹೆಚ್ಚು ಕಾಲ ಪೋಷಣೆ, ರಕ್ಷಣೆ, ಅವಲಂಬನೆ ಬೇಕೇ ಬೇಕು. ಈ ಕಾರಣದಿಂದಾಗಿಯೇ ತಂದೆ ತಾಯಿ, ಮಕ್ಕಳು ಒಟ್ಟಾಗಿರುವ ಜೀವನ ಕ್ರಮ ಆರಂಭವಾಯಿತು.

ಬದುಕಲು ನಾಗರೀಕತೆ ಬೆಳೆದಂತೆ ಕೆಲಸ / ದುಡಿತದ ಅನಿವಾರ್ಯತೆ ಈ ಲೋಕದಲ್ಲಿ ತಲೆದೋರಿದ್ದು ಅಷ್ಟೇ ಸತ್ಯ. ಇದರಿಂದ ಕೆಲಸ ಹಂಚಿಕೆ, ಸಾವಿರಾರು ವರ್ಷಗಳ ಹಿಂದೆ ಯಾವುದೇ ರೀತಿಯ ಅನುಕೂಲಗಳು ಇಲ್ಲದಿದ್ದಾಗ ಬೇಟೆಯಾಡುವುದು, ನೀರು ತರುವುದು, ಬೆಂಕಿಯನ್ನು ಹೊತ್ತಿಸುವುದು ಅದು ಆರದಂತೆ ನೋಡಿಕೊಳ್ಳುವುದು, ಅಡಿಗೆ ಮಾಡುವುದು, ಆಹಾರ ಸಂಗ್ರಹಿಸಿಡುವುದು, ಇದಿಷ್ಟೇ ಅಲ್ಲದೆ ಬಣಬಣಗಳ ನಡುವೆ ಕ್ಷುಲ್ಲಕ ಕಾರಣಗಳಿಂದಾಗಿಯೇ ಸಂಭವಿಸಬಹುದಾದ ಶತ್ರುಗಳ ಆಕ್ರಮಣದಿಂದ ರಕ್ಷಿಸಿಕೊಳ್ಳುವುದು ಹೀಗೆ ಪ್ರತಿಯೊಂದು ಕೆಲಸವನ್ನು ಕುಟುಂಬದ ಸದಸ್ಯರು ಹಂಚಿಕೊಂಡು ಒಬ್ಬರಿಗೊಬ್ಬರು ನೆರವಾಗುತ್ತಾ ಕೂಡಿ ಬಾಳಿದ ಬದುಕು ಮನುಜ ಲೋಕದಲ್ಲಿ ಅನಾವರಣವಾಗಿತ್ತೆನ್ನಬಹುದು.

ಕುಟುಂಬವು ವ್ಯಕ್ತಿಗಳಿಗೆ ಒಂದು ವಿಶಿಷ್ಟವಾದ ಅಂಕಿತವನ್ನು ನೀಡುತ್ತದೆ. ಇದು ಆಯಾಯ ಕುಟುಂಬಗಳ ವಂಶಾವಳಿಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಒಂದೆಡೆಯಲ್ಲಿ ವಾಸಿಸುತ್ತಾ ಮಾನವ ಸಹಜವಾದ ಭಾವನೆಗಳನ್ನು ವ್ಯಕ್ತ ಪಡಿಸಲು ದಾರಿ ಮಾಡಿಕೊಡುತ್ತದೆ. ದಾಂಪತ್ಯ ಪ್ರೇಮ ಸಂತಾನೋತ್ಪತ್ತಿ, ಮಾತೃ ಪಿತೃ ವಾತ್ಸಲ್ಯ, ಮಕ್ಕಳ ಲಾಲನೆ – ಪಾಲನೆ, ಭಾತೃಪ್ರೇಮ, ಸಹಕಾರ, ಸ್ನೇಹ, ಅನುಕಂಪ ತ್ಯಾಗ ಮುಂತಾದ ಗುಣಗಳು ಮೂಡಲು ಸಾಧ್ಯವಾಗುತ್ತದೆ. ಅಂದರೆ ಕುಟುಂಬದ ನೆಮ್ಮದಿ ಪ್ರತಿಷ್ಠೆಗಳಿಗೆ ಧಕ್ಕೆ ಬಾರದಂತೆ ಪರಸ್ಪರ ಸುಖ-ದುಃಖಗಳಲ್ಲಿ ಭಾಗಿಯಾಗುವ ವಿನ್ಯಾಸ ಇದರಲ್ಲಿದೆ ಎಂದು ಹೇಳಬಹುದು.

ಹೀಗೆ ರೂಪು ತಳೆದ ಕುಟುಂಬಗಳಲ್ಲಿ ಎರಡು ವಿಧಗಳಿವೆ. ಆರಂಭದ ದಿನಗಳಲ್ಲಿ ಅಸ್ತಿತ್ವದಲ್ಲಿ ಇದ್ದದ್ದು ಮಾತೃಪ್ರಧಾನ ವ್ಯವಸ್ಥೆ. ನಂತರದ್ದು ಪಿತೃಪ್ರಧಾನ ವ್ಯವಸ್ಥೆ. ಈ ರೀತಿಯ ರಚನೆಗಳು  ಯಾವುದೇ ಸಮಾಜದಲ್ಲಿ ಬರಬೇಕಾದರೆ ಅದಕ್ಕೆ ನಿಖರವಾದ ಕಾರಣಗಳಿವೆ.

ಮರಾಠಿಗರಲ್ಲೂ ಮೊದಲು ಅಸ್ತಿತ್ವದಲ್ಲಿ ಇದ್ದದು ಮಾತೃಪ್ರಧಾನ ವ್ಯವಸ್ಥೆ. ಆದರೆ ಮುಂದೆ ಪಿತೃಪ್ರಧಾನ ವ್ಯವಸ್ಥೆಯಾಗಿ ಬದಲಾಯಿತೆನ್ನಬಹುದು. ಏಕೆಂದರೆ, ತಮ್ಮ ನಾಡಿನಿಂದ ಬಂದ ಇವರು ಬೆಟ್ಟ ಗುಡ್ಡಗಳಲ್ಲಿ ’ಕುಮೇರಿ’ ಬೇಸಾಯ ಮಾಡುತ್ತಿದ್ದರು. ಬತ್ತ, ರಾಗಿ, ಜೋಳ, ಗೆಡ್ಡೆ, ಗೆಣಸುಗಳನ್ನು ಬೆಳೆಯುತ್ತಿದ್ದರು. ಬೇಸಾಯದ ಬಗ್ಗೆ ಶಂಬಾರವರು ’ಜಗತ್ತಿಗೆ ಈ ವಿದ್ಯೆಯನ್ನು ಮೊದಲು ತಂದ ಶ್ರೇಯಸ್ಸು ಗಂಡಸಿಗಿಲ್ಲ. ಮಾನವನ ಹೃದಯವನ್ನು ತಮ್ಮ ಆಕರ್ಷಣದಿಂದ ಕೃಷಿ ಮಾಡಿ ದಯಾ ಪ್ರೀತಿಗಳ ಬೀಜವನ್ನು ಮೊದಲು ಭಿತ್ತಿದವರು ಹೆಂಗಸರು. ಭಾವ ಲೋಕದಂತೆ ಭೂಲೋಕದ ಕೃಷಿಯ ಆರಂಭಗಾರರೂ ಹೆಂಗಸರೇ ಎಂದಿದ್ದಾರೆ. ಇದರೊಂದಿಗೆ ದಾಖಲಾಗಬಹುದಾದ ಅಂಶವೆಂದರೆ ಮಡಿಕೆಗಳ ತಯಾರಿಕೆಯಲ್ಲಿಯೂ ಮಹಿಳೆಯೇ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾಳೆಂದು ಹೇಳಬೇಕಾಗುತ್ತದೆ. ಏಕೆಂದರೆ ಪುರುಷ ಕದನ, ಬೇಟೆ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಮನೆಗೆ ತಂದುಕೊಟ್ಟಾಗ ತನ್ನನ್ನು ತಾನು ತೊಡಗಿಸಿಕೊಂಡಾಗ ಆಹಾರದ ಉತ್ಪಾದನೆ, ಆಹಾರ ಸಂಗ್ರಹಣೆ, ಆಹಾರ ಕೆಡದಂತೆ ಇಡಲು ಕಂಡುಕೊಂಡ ವಸ್ತುವೆಂದರೆ ಮಡಿಕೆ. ಈ ಹಂತಗಳು ಮಹಿಳೆಯನ್ನು ಮನೆಯೊಳಗೆ ಇರುವಂತೆ ಮಾಡಿದೆ ಎಂದು ಹೇಳಬಹುದು. ಮಹಿಳೆಯ ಒಳ ಜಗತ್ತಿನ ಬಸಿರು ಬಾಣಂತನ, ಮಕ್ಕಳ ಲಾಲನೆ ಪೋಷಣೆ ಇವುಗಳ ಜಗತ್ತಿನಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದು ಮಾತೃಪ್ರಧಾನ ಕುಟುಂಬ ರಚನೆಯಿಂದ ಪಿತೃಪ್ರಧಾನ ಕುಟುಂಬ ರಚನೆಗೆ ದಾರಿಮಾಡಿಕೊಟ್ಟಿತೆನ್ನಬಹುದು.

ವಿವಾಹ

ಒಬ್ಬ ಹೆಂಗಸು ಒಬ್ಬ ಗಂಡಸು ಒಟ್ಟಿಗೆ ಇದ್ದು ಮಕ್ಕಳನ್ನು  ಪಡೆದು ಸಂತೋಷವಾಗಿರಲೆಂದು ಸಮಾಜದ ವ್ಯವಸ್ಥೆಗೆ ಅನುಗುಣವಾದ ರೀತಿ ರಿವಾಜಿನಲ್ಲಿ ಸಹಬಾಳ್ವೆ ಆರಂಭಿಸುವ ಕಾಲಘಟ್ಟವಿದು.

ಈ ವಿವಾಹದ ಚೌಕಟ್ಟನ್ನು ಮರಾಠಿಗರಲ್ಲಿ ಹೀಗೆ ಗುರುತಿಸಬಹುದು. ಮರಾಠಿಗರಲ್ಲಿ ೧೨ ಮುಖ್ಯ ’ಬಳಿ’ ಗಳು. ಎಂಬತ್ತಕ್ಕೂ ಹೆಚ್ಚು ’ಉಪ ಬಳಿ’ಗಳಿವೆ. ಇವರಲ್ಲಿ ಮಾನ್ಯತೆ ಪಡೆದ ವಿವಾಹದ ಪ್ರಕಾರ ಸೋದರತ್ತೆಯ ಮಕ್ಕಳು ತಂದೆಯ ಅಕ್ಕ ಅಥವಾ ತಂಗಿ ಇಲ್ಲದಿದ್ದರೆ ಮಾವನ ಮಕ್ಕಳು ತಾಯಿಯ ಅಣ್ಣ ಅಥವಾ ತಮ್ಮನ ಜೊತೆ ನಡೆಯುವ ಪದ್ಧತಿಯಿದೆ, ಇವರಲ್ಲಿ ಸೋದರತ್ತೆ ಇಲ್ಲವೇ ಸೋದರ ಮಾವನ ಮಗಳು ’ಹಕ್ಕಿನ ಹೆಣ್ಣು’ ಎಂದು ಮರಾಠಿಗರ ಪದ್ಧತಿ ಏಳುತ್ತದೆ. ಮದುವೆಗೆ ಮೊದಲೇ ಹಕ್ಕು ಸ್ಥಾಪಿಸುವ ಕಾರ್ಯ ಇವರಲ್ಲಿತ್ತು. ಇದರೊಂದಿಗೆ ’ಬಳಿ’ ಅಥವಾ ಗೋತ್ರದ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾ… ನಂತರ ವಿವಾಹದ ಒಪ್ಪಿಗೆ ಕೆಲಸವನ್ನು ಮಾಡುತ್ತಿದ್ದರು. ಅಂದರೆ ಮದುವೆಗೆ ಮೊದಲು ’ಬಳಿ’ ನೋಡಿ ಗಂಡು ಹೆಣ್ಣಿನ ಕಡೆಯದು ಸರಿಯಾಗಿ ಕೂಡಿ ಬಂದರೆ ಮತ್ತೆ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿದ್ದರು. ಇದು ಎರಡು ಕಡೆಯ ಹಿರಿಯರಿಂದ ಜರುಗುವ ಕಾರ್ಯ.

ಇವರಲ್ಲಿ ಗಂಡಿನ ಕಡೆಯವರು ಹೆಣ್ಣು ನೋಡಲು ಹೋಗುತ್ತಾರೆ. ಹೆಣ್ಣಿನ ಕಡೆಯವರು ಗಂಡು ನೋಡಲು ಹೋಗುವುದಿಲ್ಲ. ಇದು ಹಿಂದೆ ಇದ್ದ ಸ್ವಯಂವರ ಪದ್ಧತಿಯ ಪಳಯುಳಿಕೆ ಎಂದು ಹೇಳಬಹುದು. ಹೆಣ್ಣು ನೋಡಲು ಗಂಡಿನವರು ಬರುವ ಸಂದರ್ಭದಲ್ಲಿ ಮನೆಯ ಎಲ್ಲಾ ಕೆಲಸಕಾರ್ಯಗಳಲ್ಲಿ ಮಹಿಳೆಯರೇ ಕಾರುಬಾರು. ಹುಡುಗಿಯನ್ನು ಸಿಂಗರಿಸುವುದು, ಬಂದವರಿಗೆ ಮಾಡಬೇಕಾದ ಊಟೋಪಚಾರ ಇತ್ಯಾದಿಗಳು. ಹೆಣ್ಣಿ ಒಪ್ಪಿಗೆಯಾದರೆ ’ಹೂ’ ನೋಡುವ ಶಾಸ್ತ್ರ ಜರುಗುತ್ತದೆ. ಈ ಕಾರ್ಯಕ್ರಮವನ್ನು ಮರಾಠಿಯಲ್ಲಿ ’ಸಲಾವೋಲ್ ಬಗುಂಚೆ’ ಎಂದು ಹೇಳುತ್ತಾರೆ. ನಂತರ ಮದುವೆಯಾಗುವ ಹುಡುಗ / ಹುಡುಗಿಯರ ಜಾತಕಗಳನ್ನು ಪರೀಕ್ಷಿಸುತ್ತಾರೆ. ಮುಖ್ಯವಾಗಿ ಜಾತಕಗಳಲ್ಲಿರುವ ’ಮೃಗ’ ಹೊಂದಾಣಿಕೆ ನೋಡುತ್ತಾರೆ. ಇವೆರಡು ಜಾತಕಗಳು ಕೂಡಿ ಬಂದರೆ ಮುಂದೆ ಮದುವೆಯ ನಿಶ್ಚಿತಾರ್ಥ ಕಾರ್ಯವನ್ನು ಗೊತ್ತುಪಡಿಸಿದ ದಿನದಂದು ಮಾಡುತ್ತಾರೆ.

ಇಲ್ಲಿ ಎರಡು ಕಡೆಯ ಗುರಿಕಾರರು ಪರಸ್ಪರ ಆಹ್ವಾನವನ್ನು ನೀಡುವುದು ನಿಶ್ಚಿತಾರ್ಥದ ಮುಖ್ಯ ಭಾಗ. ಈ ಕಾರ್ಯಕ್ರಮದಲ್ಲಿ ಅಡಿಕೆ ಮತ್ತು ವೀಳ್ಯದೆಲೆಯನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಮರಾಠಿಯಲ್ಲಿ ’ಪಾನ್ ವೋಡ್ ದೇವುಂಚೆ ಗೇವುಂಚೆ”ಎನ್ನುತ್ತಾರೆ. ಈ ಶಾಸ್ತ್ರಕ್ಕೆ ’ವೀಳ್ಯಶಾಸ್ತ್ರ’ ಎನ್ನುತ್ತಾರೆ. ಈ ಶಾಸ್ತ್ರ ಸಾಮಾನ್ಯವಾಗಿ ಎಲ್ಲಾ ವರ್ಗದವರಲ್ಲಿಯೂ ಕಂಡು ಬರುತ್ತದೆ.

ಚಾವಡಿಯ ಒಳಗೆ ಸಡಗರ ಆರಂಭವಾಗುತ್ತದೆ.  ಇಲ್ಲಿ ಸಡಗರದಿಂದ ಕೆಲಸ ನಿರ್ವಹಿಸುವವರು ಮಹಿಳೆಯರು. ಎಲ್ಲಾ ಸಿದ್ಧಪಡಿಸಿದ ಮೇಲೆ ಅಂದರೆ ಮಹಿಳೆಯರು ಸಿದ್ಧಪಡಿಸಿಕೊಟ್ಟ ವೇದಿಕೆಯ ಮೇಲೆ ವಿಜೃಂಭಿಸುವವರು ಪುರುಷರು. ಎಲ್ಲಾ ರೀತಿಯ ಕೊಡುವ / ಕೊಳ್ಳುವ ವ್ಯವಹಾರಗಳು ವೀಳ್ಯಶಾಸ್ತ್ರದ ಸಂದರ್ಭದಲ್ಲಿ ನಡೆಯುತ್ತದೆ. ಇದು ಸರಿಯಾದರೆ ಒಪ್ಪಿಗೆಯಾದರೇ ಹುಡುಗನ ಕಡೆ ಮತ್ತು ಹುಡುಗಿಯ ಕಡೆಯ ಸೋದರ ಮಾವಂದಿರು ಅಥವಾ ಇಬ್ಬರ ತಂದೆಯಂದಿರು ತಾವು ತಂದ ಅಡಿಕೆ / ವೀಳ್ಯದ ಹರಿವಾಣವನ್ನು ಹಿಡಿದು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ. ’ಹಮೀ ತುಮುಚೆ ಚೆಡ್ವಾಸ್ ಹಮುಚೆ ಜಿಲ್ಲೇಲೇ, ಹೋರಾಡ್ ಕರೂನ್ ಗರ ನೆವೆ ಪಟ್ಟಾಂಚೆ ಒಪ್ಪಿಗೆ ಹ’ – ಅಂದರೆ ನಾವು ನಿಮ್ಮ ಹುಡುಗಿಯನ್ನು ನಮ್ಮ ಹುಡುಗನಿಗೆ ಮದುವೆ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಲು ನಮ್ಮ ಎಲ್ಲರ ಸಂಪೂರ್ಣ ಒಪ್ಪಿಗೆ ಇದೆ ಎಂದು  ಹುಡುಗನ ಕಡೆಯವರು ಹೇಳಿ ಒಪ್ಪಿಗೆ ಕೊಟ್ಟ ಮೇಲೆ ಹುಡುಗಿಯ ಕಡೆಯವರು ’ಹಮೀ ತುಮುಚೆ ಜಿಲ್ಲೇಲೇ ಹಮುಚೆ ಚೆಡ್ವಾಸ್ ಹೋರಾಡ್ ಕರೂನ್ ದೆವೆ ಹಮುಚೆ ಪಟ್ಟಾಂಚೆ ಒಪ್ಪಿಗೆ ಹ’ ಅಂದರೆ ನಿಮ್ಮ ಹುಡುಗನಿಗೆ ನಮ್ಮ ಹುಡುಗಿಯನ್ನು ಮದುವೆ ಮಾಡಿಕೊಡಲು ನಮ್ಮೆಲ್ಲರ ಸಂಪೂರ್ಣ ಒಪ್ಪಿಗೆ ಇದೆ ಎಂದು ಹೇಳುತ್ತಾರೆ. ಮೊದಲ ಪ್ರಾಸಸ್ತ್ಯ ಹುಡುಗನ ಕಡೆಯವರಿಗೆ ಕೊಡುತ್ತಾರೆ. ಒಪ್ಪಿಗೆ ಸೂಚಿಸಿದ ಮೇಲೆ ಎರಡು ಕಡೆಯವರು ತಾವು ತಂದ ಹರಿವಾಣವನ್ನು ಬದಲಾಯಿಸಿಕೊಳ್ಳುತ್ತಾರೆ. ಈ ವೀಳ್ಯಶಾಸ್ತ್ರದ ಕಾರ್ಯಕ್ರಮದಲ್ಲಿ ಎರಡು ಕಡೆಯ ಗುರಿಕಾರರಿಗೆ ಎಲ್ಲಿಲ್ಲದ ಮನ್ನಣೆ ಪ್ರಾಶಸ್ತ್ಯ ಇರುತ್ತದೆ. ಇವರಿಬ್ಬರ ಮಾತು, ಜಾಣ್ಮೆಯಿಂದ ವಿವಾಹ ಕುದುರುತ್ತದೆ.

ಈ ಕಾರ್ಯಕ್ರಮದಲ್ಲಿ ಮದುವೆಯ ದಿನಾಂಕವನ್ನು ನಿಗದಿಪಡಿಸುತ್ತಾರೆ. ಮುಂದೆ ಎರಡೂ ಕಡೆಯವರೂ ಅವರವರ ಮನೆಯ ಮುಂದೆ ಚಪ್ಪರ ಹಾಕುವ ಮೊದಲು ಅಂಗಳ ಸಾರಿಸಿ ರಂಗೋಲಿ ಹಾಕುವ ಕೆಲಸ ಹೆಂಗಳೆಯರದು. ಅವರ ಕೈಚಳಕ, ಕಲಾವಂತಿಕೆಯ ಪ್ರದರ್ಶನವು ಅವರವರ ಮನೆಯ ಅಂಗಳದಲ್ಲಿ ! ಇದಾದ ಮೇಲೆ ಮನೆಯ ಮುಂದೆ ಚಪ್ಪರ ಹಾಕುವ ಕೆಲಸ. ಇಲ್ಲಿ ಪ್ರಧಾನ ಮಡಿವಾಳ, ಈತ ಧಾರೆಯ ಕಂಬ ನೆಟ್ಟು ನಂತರ ಚೌಕಾಕಾರದ ಚಪ್ಪರಕ್ಕೆ ಮಡಿ ಮಾಡಿದ ಬಿಳಿ ವಸ್ತ್ರವನ್ನು ಕಟ್ಟುತ್ತಾನೆ. ಜೊತೆಗೆ ತೆಂಗಿನಕಾಯಿ ತೂಗುದೀಪ ಇವುಗಳನ್ನು ನೇತು ಹಾಕುವನು. ಈ ಕೆಲಸಗಳಲ್ಲಿ ಮಡಿವಾಳ್ತಿ ಭಾಗಿಯಾಗುವಂತಿಲ್ಲ.

ಮದರಂಗಿ ಶಾಸ್ತ್ರ : ಇದು ಮದುಮಗ / ಮಗಳು ಮನೆಯಲ್ಲಿ ರಾತ್ರಿಯ ಹೊತ್ತಿನಲ್ಲಿ ನಡೆಯುವ ಶಾಸ್ತ್ರ. ಈ ಶಾಸ್ತ್ರಕ್ಕೆ ಹತ್ತಿರದ ಸಂಬಂಧಿಕರು ಮಾತ್ರ ಬರುತ್ತಾರೆ. ಅವರಿಗೆ ಮಾತ್ರ ಆಹ್ವಾನವಿರುತ್ತದೆ. ಮದುಮಗಳ ಮನೆಗೆ ಮದುಮಗನ ತಮ್ಮ ಹೂ ಸೀರೆಯನ್ನು ತರುವ ಸಂಪ್ರದಾಯ ಮರಾಠಿಗರಲ್ಲಿದೆ. ಇದರೊಂದಿಗೆ ಅರಿಶಿನ ಸೀರೆ, ನೂಲಿನ ಸೀರೆ, (ಇದನ್ನು ತುಳುನಾಡಿನಲ್ಲಿ ಅಜ್ಜಿ ಸೀರೆ ಎಂದು ಕರೆಯುತ್ತಾರೆ) ಕಾಲುಂಗರ, ಮೂಗುತಿ, ಬಳೆಗಳು ಮತ್ತು ಹಿಂಗಾರ, ಮಲ್ಲಿಗೆ, ಗುಲಾಬಿ, ಸೇವಂತಿಗೆ ಮತ್ತು ಕನಕಾಂಬರ ಈ ಐದು ರೀತಿಯ ಹೂಗಳನ್ನು ತರುತ್ತಾನೆ. ಕನಕಾಂಬರಕ್ಕೆ ಅಂಬಲಿಗೆ ಎಂದು ಇಲ್ಲಿನ ನಿವಾಸಿಗಳು ಕರೆಯುತ್ತಾರೆ. ಇದಿಷ್ಟೇ ಅಲ್ಲದೆ ಒಂದು ಸೇರು ಅಕ್ಕಿ, ತೆಂಗಿನ ಕಾಯಿ ವೀಳ್ಯ ಅಡಿಕೆ ತೆರವು ಹಣವನ್ನು ಹರಿವಾಣದಲ್ಲಿಟ್ಟು ತರುತ್ತಾನೆ. ಇವೆಲ್ಲವನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಡುವುದು ಐದು ಜನ ಮುತ್ತೈದೆಯರು. ಆದರೆ ಹರಿವಾಣ ಹಿಡಿದು ತರುವಾಗ ಭಂಗಬಾರದಂತೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿದ ಈ ಮುತ್ತೈದೆಯರ ಅಸ್ತಿತ್ವವೇ ಮುಂದೆ ಇರುವುದಿಲ್ಲ.

ಈ ಸಂದರ್ಭದಲ್ಲಿ ಜರುಗುವ ಎಲ್ಲಾ ಮಂಗಳ ಕಾರ್ಯಕ್ರಮದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿ ನಿಂತು ನಡೆಸುತ್ತಾರೆ. ಅಲ್ಲಿ ನಾಪತ್ತೆಯಾಗಿದ್ದ ಮಹಿಳೆಯರಿಗೆ ಇಲ್ಲಿ ಅವಕಾಶ. ದೇವರ ಕೋಣೆಯಲ್ಲಿ ಮದುಮಗಳು ದೀಪವನ್ನು ಹಚ್ಚಿ ಇಡುತ್ತಾಳೆ. ಈ ಕೆಲಸಕ್ಕೆ ಮರಾಠಿಗರಲ್ಲಿ ’ಗಣಪತಿ ದೇವರು’ ಇಡುವುದು ಎನ್ನುತ್ತಾರೆ. ಮುಂದೆ ಯಾವ ರೀತಿಯ ವಿಘ್ನಗಳು ಬಾರದಿರಲೆಂದು ವಿಘ್ನೇಶ್ವರ ದೇವರ ಅಸ್ತಿತ್ವ ಇಲ್ಲಿ ಬಂದಿರಬೇಕು. ಆಮೇಲೆ ಮುತ್ತೈದೆಯರು ಕರಿಯ ದಾರದಲ್ಲಿ ಮಣಿಗಳನ್ನು ಕಟ್ಟಿ ತೆಂಗಿನಕಾಯಿಯ ಮೇಲೆ ಇಡುತ್ತಾರೆ. ಎಲ್ಲರೂ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಲೆಂದು ಪ್ರಾರ್ಥನೆ ಮಾಡುತ್ತಾರೆ. ಇಲ್ಲಿ ನಡೆಯುವ ಬಹು ಮುಖ್ಯವಾದ ಕಾರ್ಯವೆಂದರೆ ಮನೆಯ ಮದುಮಗಳಿಗೆ ಸಾಂಕೇತಿಕವಾಗಿ ತೆರವು / ಕ್ರಮ ನಿಗದಿಪಡಿಸುವುದು. ಇಲ್ಲಿ ಮದುಮಗ ಮತ್ತು ಮದುಮಗಳ ಕಡೆಯ ಗುರಿಕಾರರು ಮತ್ತು ಹಿರಿಯರ ನಡುವೆ ಪ್ರಶ್ನೆ – ಉತ್ತರಗಳ ಸಂಭಾಷಣೆ ನಡೆಯುತ್ತದೆ. ಎಲ್ಲವೂ ಎರಡು ಕಡೆಯವರಿಗೆ ಒಪ್ಪಿಗೆಯಾದ ಮೇಲೆ ವಧುವಿನ ಕಡೆಯ ಗುರಿಕಾರ ಅಥವಾ ಹಿರಿಯರು ಅಥವಾ ಸೋದರ ಮಾವ ಅರಶಿಣ ಸೀರೆ ತೆಗೆದುಕೊಳ್ಳುತ್ತೇವೆ ಎಂದು ಮೂರು ಬಾರಿ ಹೇಳುತ್ತಾರೆ. ಇದನ್ನು ಮರಾಠಿ ಭಾಷೆಯಲ್ಲಿ ’ಲಿಂಬು ಸಂಡುಂಚೆ ಸಾದೋ ಗೆತೋ ಮಂತೆತ್ತ್’ ಎಂದು ಹೇಳುತ್ತಾರೆ.

ಮರಾಠಿ ಜನಾಂಗದಲ್ಲಿರುವ ವಿಶಿಷ್ಟ ಆಚರಣೆ ಕುಲದೇವರನ್ನು ತಂದು ಮನೆಯ ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸುವುದು. ಇವರ ಪಾಲಿಗೆ ಪ್ರಕೃತಿಯಲ್ಲಿರುವ ವಸ್ತುಗಳೇ ಕುಲದೇವರು. ಅದೆಂದರೆ ಹುತ್ತದ ಮಣ್ಣು, ಪಾದೆಮುಳ್ಳು, ಅಣುವುಮರ, ಈ ವಸ್ತುಗಳನ್ನು ಹಿಂದಿನ ದಿನವೇ ಮುತ್ತೈದೆಯರು ತಮ್ಮ ಮನೆಯ ಹತ್ತಿರ ಇರುವ ಬಾವಿ ಇಲ್ಲವೇ ಕೆರೆಯ ಬಳಿ ಇಟ್ಟು ಪೂಜೆ  ಸಲ್ಲಿಸಿರುತ್ತಾರೆ. ನಂತರ ಮದುಮಗಳನ್ನು ಐದು ಜನ ಸುಮಂಗಲಿಯರಲ್ಲಿ ನಾಲ್ವರು ಬಿಳಿ ವಸ್ತುವನ್ನು ಕೊಡೆ / ಚಪ್ಪರದಂತೆ ಹಿಡಿದುಕೊಂಡು ಮದುಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ಅವರಿಂದ ಪೂಜೆ ಮಾಡಿಸಿ ಬರುವಾಗ ಕುಲದೇವರ ಸಮೇತ ಬರುತ್ತಾರೆ. ಇದು ಅವರ ಪ್ರಕೃತಿಯೊಡನೆ ಇದ್ದ ಒಡನಾಟದ ಸಂಕೇತವಾಗಿರಬೇಕೆಂದು ಹೇಳಬಹುದಾಗಿದೆ.

ಇದಾದ ಮೇಲೆ ಪಿಲಿಸ್ನಾನ – ಅರಶಿನ ಎಣ್ಣೆ ಸ್ನಾನ ಕಳಶಸ್ನಾನ. ಇದರ ಸಿದ್ಧತೆಗಳನ್ನು ಮಾಡುವವರು ಐದು ಜನ ಸುಮಂಗಲಿಯರು. ದೇವರ ಮನೆ ಅಥವಾ ಜಗಲಿಯಲ್ಲಿ ಚಾಪೆ ಹಾಸಿ ಅದರ ಮೇಲೆ ಮಣೆ ಇಟ್ಟು ಎರಡು ಬದಿಗಳಲ್ಲಿ ದೀಪಗಳನ್ನು ಹಚ್ಚಿಡುತ್ತಾರೆ. ಅಲ್ಲಿ ಮದುಮಕ್ಕಳನ್ನು ಕುಳ್ಳರಿಸಿ ಎಣ್ಣೆ ಹಚ್ಚುತ್ತಾರೆ. ವಧುವಿನ ನಾದಿನಿ ಇಲ್ಲವೇ ಅತ್ತಿಗೆ ಇಲ್ಲವೇ ಗುರಿಕಾರನ ಪತ್ನಿ ಮುಹೂರ್ತದ ಮಣಿಯನ್ನು ಕಟ್ಟುತ್ತಾಳೆ. ದೇವರ ಪೂಜೆಯ ಸಂದರ್ಭದಲ್ಲಿಯೇ ಕರಿಯದಾರದಲ್ಲಿ ಮಣಿಯನ್ನು ಕಟ್ಟಿ ಇಟ್ಟಿರುತ್ತಾರೆ. ಇದಕ್ಕೆ ಮಹೂರ್ತದ ಮಣಿಯೆಂದೆ ಹೆಸರು. ಇದಾದ ನಂತರ ಮೊರದ ನಾಲ್ಕು ಮೂಲೆಗಳಲ್ಲಿ ಬತ್ತವನ್ನು ಇಡುತ್ತಾರೆ. ಹಾಗೆಯೇ ಮೊರದ ಮಧ್ಯದಲ್ಲಿಯೂ ಬತ್ತವನ್ನು ಇಡುತ್ತಾರೆ. ಇದರ ಮೇಲೆ ವೀಳ್ಯ ಮತ್ತು ಅಡಿಕೆ ಇಟ್ಟು ಒನಕೆಯಿಂದ ಬತ್ತ ಕುಟ್ಟುತ್ತಾರೆ. ಮದುಮಗಳು ಕೂಡಾ ಐದು ಸಲ ಬತ್ತವನ್ನು ಕುಟ್ಟಬೇಕು. ಆಗ ಹೆಂಗಳೆಯರ ಮಾತು ಹಾಡಾಗಿ ಹೊಮ್ಮುತ್ತದೆ.

ಸಯಿಲಾರೇ…. ಸಯಿಲಾ
ಸಯಿಲಾಚೋ ಕೊಡೇ…
ಸಯಿಲಾರೇ…. ಸಯಿಲಾ
ಕೂಲೇ ಲೀ ವಾಯಿನಾ… ದೆಂತ್
ಬರಿಯರ್ ಬತ್ತಿಸೆರೆಂಚ ಗಾನೆ
ಕಂಡೊತ್ತಿ ಕಾಂಡೋಪ ಈ ಪಾಂಚಾನಿ
ಲಿಯ್ಯೋನಿ ಬಾಯೋ
ಕೊಲೇ ನೀ ವಾಯಿನಾ… ವೆಂತ್
ಬರಿಯರ್ ಒತ್ತಿಸೆರಂಚ್ ಗಾನೆ
ಸಯಿಲಾರೇ… ಸಯಿಲಾ…

ಈ ಹಾಡಿಗೆ ಎಲ್ಲರೂ ಧ್ವನಿಗೂಡಿಸುತ್ತಾರೆ. ಇಡೀ ವಾತಾವರಣವೇ ನಾದಮಯವಾಗಿ ಬಿಡುವುದು. ಹೀಗೆ ಮದುಮಗಳು ಬತ್ತ ಕುಟ್ಟಿ ಮಾಡಿದ ಅಕ್ಕಿಯಿಂದ ಅನ್ನ ಅಥವಾ ದೋಸೆ ಮಾಡಿ ದೇವರಿಗೆ ಬಡಿಸುವ ನೈವೇದ್ಯ ಮಾಡುವ ಶಾಸ್ತ್ರ ಇವರಲ್ಲಿದೆ. ಹಿಂದೆ ಮದುವೆಯ ಸಮಾರಂಭಕ್ಕಾಗುವಷ್ಟು ಬತ್ತ ಕುಟ್ಟುವ ಕೆಲಸ ಹೆಂಗಳೆಯರಿಗೆ ಇದ್ದಿರಲೇಬೇಕು. ಈಗ ಅದರ ಸಾಂಕೇತಿಕತೆಗಾಗಿ ಮೊರದಲ್ಲಿ ಬತ್ತಕುಟ್ಟುವ ಶಾಸ್ತ್ರ. ಇದು ಮದುಮಗಳ ತೋಳ ಸಾಮರ್ಥ್ಯವನ್ನು ಪರೀಕ್ಷಿಸುವ ಸನ್ನಿವೇಶವಾಗಿದ್ದಿರಬೇಕು. ಈ ಸಂದರ್ಭದಲ್ಲಿ ’ಪಲ್ಲ ಜೋಳವ / ಬತ್ತವ ಎತ್ತಿ ತೋಳಬಂದಿಯ ಪಡೆದ’ ಲಂಕೇಶರ ’ಅವ್ವ ’ ನೆನಪಾಗುತ್ತಾಳೆ.