ಶಾಲೆಯ ಸಾಮಾನ್ಯ ಶಿಕ್ಷಣ ಬಿಟ್ಟು ಕೊಳಲು ಶಿಕ್ಷಣವನ್ನೇ ಆರಿಸಿಕೊಂಡ ಶ್ರೀ ಮರಿಯಪ್ಪ ರೋಣ ೧೯೧೨ ನೇ ಇಸವಿಯಲ್ಲಿ ರೋಣ ಗ್ರಾಮದ ಹಿಂದೂಸ್ಥಾನಿ ಸಂಗೀತದ ಮನೆತನದಲ್ಲಿ ಜನಿಸಿದರು.

ಖ್ಯಾತ ಸಂಗೀತ ಕಲಾವಿದ ಸಿದ್ಧರಾಮ ಜಂಬಲದಿನ್ನಿ ಅವರ ಬಳಿ ತಮ್ಮ ಪ್ರಾರಂಭಿಕ ಸಂಗೀತಾಭ್ಯಾಸ ಮಾಡಿರುವ ಮರಿಯಪ್ಪನವರು ಹೆಚ್ಚಿನ ಸಂಗೀತ ಅಭ್ಯಾಸಕ್ಕಾಗಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಡಾ|| ಪುಟ್ಟರಾಜ ಗವಾಯಿಗಳ ಶಿಷ್ಯರಾದರು. ಈ ಗುರು ಶಿಷ್ಯರ ಬಳಿ ೨೫ ವರ್ಷಕಾಲ ಸತತವಾಗಿ ಸಂಗೀತಾಭ್ಯಾಸ ಮಾಡಿದ ನಂತರ ಮರಿಯಪ್ಪ ಸ್ವತಂತ್ರವಾಗಿ ಸಂಗೀತ ಕಛೇರಿ ನೀಡಲಾರಂಭಿಸಿದರು. ತಮ್ಮ ಸಂಗೀತಾರಾಧನೆಯ ಜೊತೆಜೊತೆಗೆ ಗದುಗಿನ ಪುಣ್ಯಾಶ್ರಮದಲ್ಲಿ ದಿನನಿತ್ಯ ಸಂಗೀತ ಪಾಠವನ್ನು ಮಾಡುತ್ತಾ ನೂರಾರು ಶಿಷ್ಯಂದಿರನ್ನು ತಯಾರಿಸಿದರು. ಅವರಲ್ಲಿ ಅನೇಕರು ಇಂದು ಗಣ್ಯರಾಗಿದ್ದಾರೆ. ಎಲ್ಲಪ್ಪ ಅಮರ ಗೋಳಕರ್, ಶರಣಪ್ಪ ಹಾಂಡಿನಾಳ, ಬಿ.ಡಿ. ಭಜಂತ್ರಿ, ಸಂಗಪ್ಪ ಹೊನ್ನಿಗನೂರ, ಮರಿಸ್ವಾಮಿ ಲಮದರಿ, ಬಸವಣ್ಣ ಶಾಸ್ತ್ರಿಗಳು ಹೀಗೆ ಇನ್ನೂ ಹಲವು ಹೆಸರುಗಳನ್ನು ಇವರ ಶಿಷ್ಯ ವೃಂದದಿಂದ ನಾವು ಆರಿಸಿಕೊಳ್ಳಬಹುದು.

ಎಲ್ಲಾ ರಾಗಗಳೂ ನನಗೆ ಇಷ್ಟ ಎಂದು ಹೇಳುವ ಮರಿಯಪ್ಪನವರ ಕಲಾ ಜೀವನದಲ್ಲಿ ಮೈಸೂರು ಮಹಾರಾಜರ ಸಮ್ಮುಖದಲ್ಲಿ ನಡೆದ ಸಂಗೀತ ಕಾರ್ಯಕ್ರಮ ಸ್ಮರಣೀಯ.

ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ತಮ್ಮ ಕೊಳಲಿನ ಮಾಧುರ್ಯದಿಂದ ಸಾವಿರಾರು ರಸಿಕರ ಮನವನ್ನು ಗೆದ್ದಿದ್ದಾರೆ. ಮರಿಯಪ್ಪನವರು ಪ್ರತಿನಿತ್ಯ ಮೂರು ಗಂಟೆಗಳ ಕಾಲ ಸಂಗೀತಾಭ್ಯಾಸ ಮಾಡುತ್ತಿದ್ದಾರೆ ಎಂದರೆ ಅಚ್ಚರಿಯಲ್ಲವಷ್ಟೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶ್ರೀ ಮರಿಯಪ್ಪ ರೋಣ ಅವರಿಗೆ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗೆ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾತಿಲಕ” ಬಿರುದನ್ನು ನೀಡಿ ಗೌರವಿಸಿದೆ.