“ಮೂರ್ತಿಯೆ, ಬಲ್ಲೆಯ ನೀನಾರೆಂದು
ಬಲ್ಲೆಯ ಹೇಳಣ್ಣಾ!”
“ನಮ್ಮಮ್ಮನ ಮೂರ್ತಿಯು, ನಾನೆಂದು
ಬಲ್ಲೆಯ ಕಾಣಣ್ಣಾ!”
“ನೀನಾರೆಂಬುದನರಿಯೆಯೊ ಮೂರ್ತಿ
ವಿಶ್ವವ ತುಂಬಿದೆ ನಿನ್ನಯ ಕೀರ್ತಿ!”
“ಬಲ್ಲೆನು, ನಾ ನಮ್ಮಮ್ಮನ ಮೂರ್ತಿ:
ಅಮ್ಮನೆ ವಿಶ್ವವು, ಪ್ರೀತಿಯೆ ಕೀರ್ತಿ!”

“ನೀನಾರೆಂಬುದನರಿಯೆಯೊ ಮೂರ್ತಿ;
ನಿಜವನು ಹೇಳಲು ಬೆದರುವೆ ನಾನು!
ತಾಯಿಯು ನೀನಾರೆಂಬುದನರಿತರೆ
ನಿನ್ನನ್ನೆಂದಿಗು ಪೂಜಿಪಳು;
ನಿನ್ನನ್ನೆತ್ತುವ ತಂದೆಯು ತಿಳಿಯನು
ಬ್ರಹ್ಮವನೆತ್ತುವೆ ತಾನೆಂದು!”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”

“ನೀನಾರೆಂಬುದನರಿಯೆಯೊ ನೀನು.
ಕೇಳೈ ನಿಜವನು ತಿಳಿಸುವೆ ನಾನು:
ಕಾಲಾತೀತನು ನೀನಾಗಿರುವೆ,
ದೇಶಾತೀತನು ನೀನಾಗಿರುವೆ,
ಜನನ ಮರಣಗಳ ಮೀರಿಹೆ ನೀನು,
ಪಾಪಪುಣ್ಯಗಳ ದಾಂಟಿಹೆ ನೀನು;
ನಿನ್ನೊಳಗಡಗಿದೆ ಬ್ರಹ್ಮಾಂಡ,
ಮೂರ್ತಿ, ನೀನೇ ಬ್ರಹ್ಮಾಂಡ!”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”

“ಮೂರ್ತೀ, ನೀನಾರೆಂಬುದನರಿಯೆ
ಹೇಳಿದರದ ನೀನೆಂದಿಗು ಮರೆಯೆ.
ಬ್ರಹ್ಮವು ಜನಿಸಿತು ನಿನ್ನಿಂದ!
ಬ್ರಹ್ಮಕೆ ನೀನೇ ಆನಂದ!
ಆದಿಯ ಕಾಣದ ಪುರಷನು ನೀನು
ಅಂತವನರಿಯದ ಆತ್ಮನು ನೀನು”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”

“ಖಂಡಿತ ನಿಜವನು ಹೇಳುವೆ, ಮೂರ್ತಿ,
ವಿಶ್ವವ ತುಂಬಿದೆ ನಿನ್ನ ಜ್ಯೋತಿ!
ರವಿ ಉದಯಿಸುವುದು ನಿನಗಾಗಿ;
ಉಡುಗಣವೆಸೆವುದು ನಿನಗಾಗಿ;
ನಿಯಮಗಳೆಲ್ಲಾ ನಿನಗಾಗಿ
ಕೆಲಸದಿ ತೊಡಗಿವೆ ತಲೆಬಾಗಿ;
ಕೋಕಿಲೆಯುಲಿವುದು ನಿನಗಾಗಿ;
ಲೊಕವೆ ಜನಿಸಿದೆ ನಿನಗಾಗಿ!
ಸರ್ವವು ನಿನಗಾಗಿರುವುದೊ ಮೂರ್ತಿ,
ನೀನೆ ಅನಂತನು ಚಿನ್ಮಯ ಮೂರ್ತಿ!”
“ನೀನೇನಾದರು ಹೇಳಣ್ಣಾ, ನಾ
ನಮ್ಮಮ್ಮನ ಮೂರ್ತಿಯು ಕಾಣಣ್ಣಾ!”

೦೨-೧೨-೧೯೨೬