ಬೆಳಗಾಗಿದ್ದಿತು; ಎಳೆಬಿಸಿಲೆಲ್ಲಿಯು
ಹಸುರಿನ ಕೆನ್ನೆಯ ಚುಂಬಿಸುತಿದ್ದಿತು!
ಆಡುತಲಿದ್ದಾ ಮುದ್ದಿನ ಮೂರ್ತಿಯು
ಓಡೋಡೈತಂದೆನಗಿಂತೆಂದ:

“ಕೈಯಲ್ಲಿರುವದು ಏನಣ್ಣಾ?
ಬೇಗನೆ! ಬೇಗನೆ ಹೇಳಣ್ಣಾ!”

ಮುಷ್ಟಿಯ ಹಿಡಿದಾ ಕೈಯನು ನೋಡಿದೆ;
ಪ್ರಶ್ನೆಯ ಕೇಳುವ ಕಂಗಳ ನೋಡಿದೆ;
ಮೂರ್ತಿಯ ಒಳಗಿನ ನಿಜವನು ನೋಡಿದೆ;
ನೀಲಾಕಾಶವ ನೋಡುತ ನಿಂತೆ:

ಹಕ್ಕಿಗಳಿಂಚರ ಬೀರಿತ್ತು
ತಳಿರೊಳು ತಂಬೆಲರಾಡಿತ್ತು!

ಮೂರ್ತಿಯು “ಬೇಗಾ ಬೇಗಾ!” ಎಂದ;
ನನಗಾದುದು ಒಂದತ್ಯಾನಂದ.
ಪ್ರಶ್ನೆಯಲಿದ್ದಾ ಉತ್ತರವರಿತು
ಇಂತೆಂದೆನು ನಾ ಮೂರ್ತಿಯ ಕುರಿತು:

“ಬಲ್ಲೇ! ಬಲ್ಲೇ! ಎಲ್ಲಾ ಇಷ್ಟೇ!
ಆದರೆ ಹೇಳಲು ಹೆದರುವೆ ಅಷ್ಟೇ!
ಅದು! ಅದು! ಹೇಳಲೊ ಬೇಡವೊ?” “ಹೇಳು”
“ಆದದ್ದಾಗಲಿ ಹೇಳಿಯೆ ಬಿಡುವೆನು:
ಕೈಯಲ್ಲಿರುವುದು ಬ್ರಹ್ಮಾಂಡ!”

ಮೂತಿಯು ನಕ್ಕನು; ಕೈ ಬಿಚ್ಚಿದನು;
“ಒಹೋ! ಅಣ್ಣಾ! ಸೋತೇ” ಎಂದನು.
ಕೈ ಕಡೆ ನೋಡಿದೆ; ತೃಣವೊಂದಲ್ಲಿ
ಕ್ಷೀರ ಸಮುದ್ರದ ವಿಷ್ಣುವಿನಂತೆ
ಪುಟ್ಟಂಗೈಯೊಳು ರಾಜಿಸಿತು!

ನಾನಾಗವನನು ಅಣಕಿಸುತೆಂದೆ:
“ಬಲ್ಲೇ, ಮೂರ್ತೀ, ಮಾಯೆ ಇದೆಲ್ಲ;
ಬ್ರಹ್ಮವನಡಗಿಸಿ, ಇಟ್ಟಿಹೆ ಹುಲ್ಲ!
ಬ್ರಹ್ಮವೆ ಹುಲ್ಲಾಗಿದೆ ಕಂಡ್ಯಾ?
ಕೈಯಲ್ಲಿರುವುದು ಬ್ರಹ್ಮಾಂಡ!”

೨-೧೨-೧೯೨೬