ತಿಂಡಿಯನು ಕೊಡು, ತಾಯೆ, ಹೇಳಿದುದ ಮಾಡುವೆನು;
ಬೇಕಾದುದೆಲ್ಲವನು ನೀಡುವೆನು ನಿನಗೆ!
ಮೂಡುತಿಹ ಚಂದಿರನ ಸೆರೆಹಿಡಿದು ತಂದು
ಕೂಡುವೆನು ನಿನ್ನ ಮಾಂಗಲ್ಯದಲ್ಲಿ ಇಂದು.
ಮಿಣುಕುತಿಹ ತಾರೆಗಳನೆಲ್ಲವನು ಕೊಯ್ದು.
ಮಣಿಮಾಲೆಗಳ ಮಾಡುವೆನು ನಿನಗೆ ನೆಯ್ದು.
ಮಳೆಬಿಲ್ಲುಗಳನೆಲ್ಲ ಹಿಡಿದೆಳೆದು ತಂದು
ನೆಯ್ಯುವೆನು ನಿನಗೊಂದು ಸೀರೆಯನು ಇಂದು.
ಏಳು ಕಡಲನು ದಾಟಿ, ಏಳು ಗಿರಿಗಳ ನೆಗೆದು,
ಕೂದಲಿಗೆ ತಹೆ ತೈಲದಂಬುಧಿಯ ಮೊಗೆದು.
ಏನು ಬೇಕದ ಹೇಳು! ವೈಕುಂಠ ಬೇಕೆ?
ತಳಿಪ ಬೆಳ್ಳಿಯ ಬೆಟ್ಟ ಕೈಲಾಸ ಬೇಕೆ?
ಚಲಿಸದಾ ಹಿಮಗಿರಿಯು ಬೇಕೇನು ಹೇಳು.
ಸುರನದಿಯ ತರಲೇನು? ಎಲೆ ತಾಯೆ, ಕೇಳು,
ಯಾರು ಮಾಡದ ಕಾರ್ಯಗಳ ಬೆಸಸು ನನಗೆ:
ಯಾರು ಪಡೆಯದ ವಸ್ತುಗಳ ತರುವೆ ನಿನಗೆ!
ತಿಂಡಿಯನು ಕೊಡು, ತಾಯೆ, ಹೇಳಿದುದ ಮಾಡುವೆನು;
ಬೇಕಾದುದೆಲ್ಲವನು ನೀಡುವೆನು ನಿನಗೆ!