ಅಂಗಳದಲ್ಲಿಹ ಮಲ್ಲಿಗೆಯಣ್ಣರು
ಎಲ್ಲಿಂದ ಬಂದರು ಹೇಳಮ್ಮಾ?
ಅಂಕೆಯೆ ಇಲ್ಲದ ಗೆಲವನು ತೋರುತ
ನಲಿನಲಿದೊಲಿಯುತಲಿಹರಮ್ಮಾ!

ಶಾಲೆಯನಗಲಿದ ಸೋದರರಂದದಿ
ಕೇಕೆಯ ಹಾಕುತಲಿಹರಮ್ಮಾ!
ಮಲ್ಲಿಗೆಯಣ್ಣರ ನೀರವ ಜಯ ಜಯ
ಘೋಷವೆ ಕೇಳುವೆ ನಾನಮ್ಮಾ!

ಹೂವಿನ ಹಸುರಿನ ತಿಂಗಳು ಚೈತ್ರವು
ಬಿಡುವಿನ ಕಾಲುವೆ ಏನಮ್ಮಾ?
ರಜದಲಿ ಆಡಲು ಇಲ್ಲಿಗೆ ಬರುವರೆ?
ನಮ್ಮನೆ ಅತಿಥಿಗಳೇನಮ್ಮಾ?

ಬಳ್ಳಿಯ ಒಳಗಿಹ ನಿದ್ದೆಯ ಊರಿನ
ಕನಸಿನ ಶಾಲೆಯೊಳೋದುವರೆ?
ಕನಸಿನಾನಂದವ ಸವಿಯುತ ನಲಿಯುತ
ಕನಸಿನ ಕತೆಗಳ ಕೇಳುವರೆ?

ಮಲ್ಲಿಗೆಯಣ್ಣರ ಶಾಲೆಗೆ ಹೋಗುವೆ
ಕನಸಿನ ಕತೆಗಳನಾಲಿಸಲು;
ಅಲ್ಲಿಯ ಕನಸುಗಳೆಲ್ಲವನಿಲ್ಲಿಗೆ
ಕದ್ದೊಯ್ದು ತರುವೆನು ನಿನಗಮ್ಮಾ!