ಮಳೆಯೆಂದರೇನಮ್ಮ? ಗುಡುಗೆಂದರೇನಮ್ಮ?
ಮಿಂಚೆಂದರೇನಮ್ಮ? ಮುಗಿಲೆಂದರೇನಮ್ಮ?
ಹೇಳುವೆ ನಾನೆಲ್ಲ ಕೇಳಮ್ಮ!
ಚೆನ್ನಾಗಿ ಕಿವಿಗೊಟ್ಟು ಕೇಳಮ್ಮ!

ದೇವರ ಲೋಕದ ಬಾಲಕರಾಡುವ
ಉಕ್ಕಿನ ಚೆಂಡದು, ಕೇಳಮ್ಮಾ!
ಮೇಲಿನ ಲೋಕದ ನೆಲವದು, ಅಮ್ಮಾ,
ಚಿನ್ನದ ಉಕ್ಕಿನ ನೆಲವಮ್ಮಾ!

ಏನಮ್ಮ ನಿನಗಿನ್ನು ಗೊತ್ತಿಲ್ಲವೇನಮ್ಮ?
ನಾನೆಲ್ಲ ಹೇಳುವೆ ಕೇಳಮ್ಮಾ!
ಅಣ್ಣಯ್ಯ, ಅಕ್ಕಯ್ಯ, ತಮ್ಮಯ್ಯ ಸಭೆ ಸೇರಿ
ನನ್ನೀ ಯುಕ್ತಿಯ ಒಪ್ಪಿರಹರಮ್ಮಾ!

ಚೆಂಡಾಡಲುಕ್ಕಿನ ಚೆಂಡೆದ್ದು ಬೀಳೆ
ಗುಡುಗಾಗಿ ಕೇಳುವುದೆಮಗಮ್ಮಾ!
ಉಕ್ಕಿನ ಚೆಂಡೆದ್ದು ಬೀಳಲು ಕಿಡಿಯೆದ್ದು
ಮಿಂಚಾಗಿ ತೋರುವುದೆಮ್ಮಗಮ್ಮಾ!

ಬಾಲರ ಮೈಬೆವರಿ ನೀರಾಗಿ ಸೋರಲು
ಮಳೆಯಾಗಿ ಬೀಳುವುದೆಮಗಮ್ಮಾ!
ಉಕ್ಕಿನ ಧೂಳೆದ್ದು ಕಾರ್ಮುಗಿಲಂದದಿ
ತೇಲುತ್ತ ಬರುವುದು ಕೇಳಮ್ಮಾ!

ಹುಡುಗರ ಆಟ ಸಾಧಾರಣವೇನಮ್ಮ?
ಬರಗಾಲ ಬರದಂತೆ ಮಾಡುವುದಮ್ಮಾ!
ಹುಡುಗರು ಆಟವ ಬಿಟ್ಟಂದಿಗಮ್ಮಾ,
ಲೋಕವೆ ನಡೆಯದು ಕೇಳಮ್ಮಾ !