“ಎಲ್ಲಿಗೆ ಹೋಗಿದ್ದೆ ಕಂದಯ್ಯ, ಮೂರುತಿ?
ಬಂದವರಾರೆಂದು ಹೇಳುವೆಯಾ?”
“ಕಳ್ಳನ ನೋಡಲು ಹೋಗಿದ್ದೆವಮ್ಮಾ;
ಬಲು ದೊಡ್ಡ ಕಳ್ಳನು ಅವನಮ್ಮಾ!

“ಕಳ್ಳನ ಹೆಸರದು ‘ರಾಜ’ ಎಂದಂತೆ,
ಪಹರೆಯ ಸೈನಿಕರೆಷ್ಟಮ್ಮ?
ಕತ್ತಿಯ ಕೋವಿಯ ಈಟಿಯ ದೊಣ್ಣೆಯ
ಸುತ್ತಲು ಹಿಡಿದಿದ್ದರವರಮ್ಮಾ!

“ಹಿಂಗಡೆ ಮುಂಗಡೆ ಬಲಗಡೆ ಎಡಗಡೆ
ಸುತ್ತಲು ಪೋಲೀಸಿನವರಮ್ಮಾ;
ಇಂಥಾ ಕಳ್ಳನು ಇರುವನು ಎಂದು
ನಾನೆಂದು ತಿಳಿದಿರಲಿಲ್ಲಮ್ಮಾ!

“ಕಳ್ಳಗೆ ಹೆದರಿಕೆ ಹುಟ್ಟಿಸಬೇಕೆಂದು
ಹಾರಿದುವಮ್ಮಾ ಗುಂಡುಗಳು.
ಒಂದಲ್ಲ, ಎರಡಲ್ಲ, ಲೆಕ್ಕವೆ ಇಲ್ಲಮ್ಮ!
ಕಳ್ಳನದೆಂಥಾ ಎದೆಯಮ್ಮಾ!

“ಕಳ್ಳನು ತಪ್ಪಿಸಿಕೊಂಡೋಡದಂತೆ
ಜನಗಳು ಸೇರಿದ್ದರಮ್ಮಾ!
ಹೆದರಿಸಲವನನು ಜೈ ಜೈ ಎನ್ನುತ
ಎಲ್ಲರು ಕೂಗಿದರಮ್ಮಾ!

“ಕೂಗಿದೆ ನಾನೂ ‘ಜೈ ಜೈ’! ಎಂದು;
ದುರು ದುರು ನನ್ನನೆ ನೋಡಿದನು.
ಅಣಕಿಸಿ ನಾನೂ ದುರು ದುರು ನೋಡಿದೆ!
ನಾನೇನು ಹೇಡಿಯೆ ಹೇಳಮ್ಮಾ?

“ನೀ ಬರದಿದ್ದುದು ಒಳ್ಳಯದಾಯ್ತಮ್ಮ!
ಕಳ್ಳನ ಕಣ್ಣದು ಕೆಡುಕ್ಕಮ್ಮಾ!
ಒಲುಮೆಯ ಕವಚವ ಪಡೆದಿಹ ನನಗದು
ಇನಿತೂ ಕೇಡಲ್ಲವಂತಮ್ಮ!”