ತಂಗಿಯು ಎಂಥಾ ದಡ್ಡಳೆ, ಅಮ್ಮಾ,
ಅತಿಶುದ್ಧ ಹೆಡ್ಡಳು ಕಾಣಮ್ಮಾ!

ಬೀದಿಯೊಳೆಸೆಯುವ ದೀಪಗಳಾಳಿಗು
ಗಗನದೊಳೆಸೆಯುವ ತಾರೆಗಳಾಳಿಗು
ಭೇದವೆ ತಿಳಿಯದು ಅವಳಿಗೆ, ಅಮ್ಮಾ!
ಅತಿಶುದ್ಧ ದಡ್ಡಳು ಅವಳಮ್ಮಾ!

ಅಡುಗೆಯ ಊಟದ ಆಟವನಾಡಲು,
ಕಲ್ಲನು ನಿಜವಾದ ಕಡುಬೆಂದು ಭಾವಿಸಿ
ಬಾಯಿಗೆ ಹಾಕಲು ಎಳಸುವಳಮ್ಮಾ!
ಅವಳೆಂಥ ದಡ್ಡಳು ನೋಡಮ್ಮಾ!

ಮಕ್ಕಳ ಪುಸ್ತಕವನು ತೆರೆದವಳಿಗೆ
“ಅ ಆ ಇ ಈ ಗಳ ಕಲಿ” ಎಂದರೆ
ಹಾಳೆಯ ಹರಿವಳು, ಸುಮ್ಮನೆ ನಗುವಳು;
ತಂಗಿಯ ಓದಿದೆಯೇನಮ್ಮಾ!

ಕೋಪದಿ ತಲೆಯಲ್ಲಾಡಿಸಿ ಅವಳನು
“ತುಂಟೀ” ಎನ್ನುತ ಬೈದರೆ ನಾನು,
ನಗುವಳು ದೊಡ್ಡ ವಿನೋದವು ಎಂದು.
ಅವಳೆಂಥ ಮೊಂಡಳು ನೋಡಮ್ಮಾ!

ಅಪ್ಪನು ಮನೆಯಲ್ಲಿಲ್ಲದ ಸುದ್ದಿಯ
ಎಲ್ಲರು ಬಲ್ಲರು; ಆದರೆ ನಾನು
“ಅಪ್ಪಾ” ಎನ್ನಲು ಸುತ್ತಲು ನೋಡುತ
ಹತ್ತಿರ ಇಹನೆಂದೆಣಿಸುವಳು!

ಬಟ್ಟೆಯ ಒಗೆಯಲು ಮನೆಗೈತರುವಾ
ಅಗಸನ ಕತ್ತೆಯ ಗುಂಪಿನ ಶಾಲೆಗೆ
ಐಗಳು ನಾನಾಗೆ, “ಮೇಷ್ಟರೆ” ಎನ್ನದೆ,
ಸುಮ್ಮನೆ “ಅಣ್ಣಯ್ಯ” ಎನ್ನುವಳು!

ತಂಗಿಯು ಚಂದ್ರನ ಹಿಡಿಯುವಳಂತಮ್ಮ!
ಹೆಡ್ಡಳು; ಬಿಸ್ಕತ್ತ ಬಿಕ್ಕತ್ತು ಎಂಬಳು.
ಅಯ್ಯಯ್ಯೋ, ಅವಳೆಂಥ ದಡ್ಡಳೆ, ಅಮ್ಮಾ,
ಅತಿಶುದ್ಧ ಹೆಡ್ಡಳು ಕಾಣಮ್ಮಾ!

(ರವೀಂದ್ರನಾಥ ಠಾಕೂರರಿಂದ)