ತೋಟದ ಬೇಲಿಯ ಹೂಮಯವಾಗಿದೆ
ಬಾರವ್ವ, ತಂಗಿಯೆ, ಹೂ ಕೊಯ್ಯಲು!
ಹೂವಿನ ಮಧುವನು ಹೇರಲು ಬಂದಿವೆ
ಬಗೆ ಬಗೆ ಬಣ್ಣದ ಹಕ್ಕಿಗಳು!

ಉದಯದ ಊರಿಂದ ಬಂದಿಹವವುಗಳು
ತಂದಿವೆ ವಿಧ ವಿಧ ಹಾಡುಗಳ;
ಹೂಗಳ ಕೊಯ್ಯುವ ನೆವದಿಂದ ಕದಿಯೋಣ
ಅವುಗಳ ಕೊರಲಿನ ಇಂಚರವ!

ಜಡೆ ಹೂವಿಗಮ್ಮನ ಹಾಡಿಗಾಗಕ್ಕನ
ಏತಕೆ ಸುಮ್ಮನೆ ಕಾಡಿಸುವೆ?
ಸೀರೆಗಾಗಪ್ಪನ ಪೀಡಿಪುದೇತಕೆ?
ಕೇಳೆನ್ನ ಕೊಡುವೆನು ಬೇಕಾದುದ!

ಮುಡಿಯಲು ಬೇಲಿಯ ಹೂಗಳ ಕೊಡುವೆನು;
ಹಾಡಲು ಹಕ್ಕಿಗಳಿನಿದನಿಯ!
ಹೊದೆಯಲು ಕೊಡುವೆನು ಕಾಮನಬಿಲ್ಲಿನ
ಹಕ್ಕಿಯ ಗರಿಗಳ ಮೋಹವನು!

ಬಾರೆನ್ನ ಜತೆಯಲ್ಲಿ, ತಂಗಿಯೆ, ತೋಟಕೆ;
ನೆಲವೆಲ್ಲ ಹಸುರಿಂದ ಮೆರೆಯುತಿದೆ!
ಅಮ್ಮನ ಸೆರಗನು ಬಿಡು ಬಿಡು ಬಾ ಬೇಗ,
ಹೂವಿನ ಬೇಲಿಯು ಕರೆಯುತಿದೆ!